ಇಂಧನ ಸಚಿವಾಲಯ
ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಜಿ 20 ಇಂಧನ ಪರಿವರ್ತನೆ ಕಾರ್ಯ ಗುಂಪಿನ (ಎನರ್ಜಿ ಟ್ರಾನ್ಸಿಷನ್ ವರ್ಕಿಂಗ್ ಗ್ರೂಪ್ ) (ಇಟಿಡಬ್ಲ್ಯೂಜಿ) ಸಭೆ ಫೆಬ್ರವರಿ 5 ರಿಂದ 7 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ
Posted On:
30 JAN 2023 10:46AM by PIB Bengaluru
ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಜಿ 20 ಇಂಧನ ಪರಿವರ್ತನೆ ಕಾರ್ಯ ಗುಂಪಿನ (ಎನರ್ಜಿ ಟ್ರಾನ್ಸಿಷನ್ ವರ್ಕಿಂಗ್ ಗ್ರೂಪ್ ) (ಇಟಿಡಬ್ಲ್ಯೂಜಿ) ಸಭೆ ಫೆಬ್ರವರಿ 5 ರಿಂದ 7 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಜಿ 20 ಸದಸ್ಯ ರಾಷ್ಟ್ರಗಳು, ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮಾನ್, ಸಿಂಗಾಪುರ್, ಯುಎಇ ಮತ್ತು ಸ್ಪೇನ್ ಸೇರಿದಂತೆ ಒಂಬತ್ತು ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳು ಸಹಿತ 150 ಕ್ಕೂ ಹೆಚ್ಚು ಪತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇದರ ಜೊತೆಗೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್, ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್ ಡಿಪಿ), ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ), ಕ್ಲೀನ್ ಎನರ್ಜಿ ಮಿನಿಸ್ಟೀರಿಯಲ್ (ಸಿಇಎಂ), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್ಇಪಿ), ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐಎಸ್ಎ), ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಯುನಿಡೋ), ಏಷ್ಯಾ ಮತ್ತು ಪೆಸಿಫಿಕ್ ಕ್ಕಾಗಿರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ಯುಎನ್ಇಎಸ್ ಸಿಎಪಿ), ಆರ್.ಡಿ. 20 ಮತ್ತು ಜ್ಞಾನಕ್ಕೆ ಸಂಬಂಧಿಸಿದ ಪಾಲುದಾರರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಬಂಧಿತ ಸಚಿವಾಲಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಕೂಡಾ ಇಟಿಡಬ್ಲ್ಯೂಜಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕವು ಸಭೆಗೆ ಬೆಂಬಲ ಮತ್ತು ಸಮನ್ವಯವನ್ನು ಒದಗಿಸುತ್ತಿದೆ.
ಮೊದಲ ಇಟಿಡಬ್ಲ್ಯೂಜಿ ಸಭೆ ಆರು ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಅವುಗಳೆಂದರೆ: (i) ತಂತ್ರಜ್ಞಾನದ ಅಂತರಗಳನ್ನು ಪರಿಹರಿಸುವ ಮೂಲಕ ಇಂಧನ ಪರಿವರ್ತನೆ (ii) ಇಂಧನ ಪರಿವರ್ತನೆಗೆ ಕಡಿಮೆ ವೆಚ್ಚದ ಹಣಕಾಸು (iii) ಇಂಧನ ಭದ್ರತೆ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳು (iv) ಇಂಧನ ದಕ್ಷತೆ, ಕೈಗಾರಿಕಾ ಕ್ಷೇತ್ರದಲ್ಲಿ ಕಡಿಮೆ ಇಂಗಾಲದ ಪರಿವರ್ತನೆಗಳು ಮತ್ತು ಜವಾಬ್ದಾರಿಯುತ ಬಳಕೆ, (v) ಭವಿಷ್ಯಕ್ಕಾಗಿ ಇಂಧನಗಳು (3F) ಮತ್ತು (vi) ಶುದ್ಧ ಇಂಧನ ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ನ್ಯಾಯಯುತ, ಕೈಗೆಟುಕುವ ಮತ್ತು ಅಂತರ್ಗತ ಇಂಧನ ಪರಿವರ್ತನೆ ಮಾರ್ಗ.
ಈ ಸಂದರ್ಭದಲ್ಲಿ ಇಟಿಡಬ್ಲ್ಯೂಜಿ ಸಭೆಗೆ ಪೂರಕವಾಗಿ ಅದರ ನೇಪಥ್ಯದಲ್ಲಿ 'ಇಂಗಾಲ ಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (ಸಿಸಿಯುಎಸ್) ಕುರಿತ ಉನ್ನತ ಮಟ್ಟದ ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ಪ್ರಮುಖವೆಂದು ಪರಿಗಣಿಸಲಾದ ಇಂಗಾಲದ ಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆಯ ಮಹತ್ವವನ್ನು ಎತ್ತಿ ತೋರಿಸುವ ಬಗ್ಗೆ ವಿಚಾರಸಂಕಿರಣ ಗಮನ ಹರಿಸುತ್ತದೆ. ಈ ಕಾರ್ಯಕ್ರಮವು ಶುದ್ಧ ಇಂಧನ ಪರಿವರ್ತನೆಯ ಸವಾಲಿನ ಅಂಶಗಳು ಮತ್ತು ಮೌಲ್ಯ ಸರಪಳಿಯ ವಿವಿಧ ತಾಂತ್ರಿಕ ಅಂಶಗಳನ್ನು ಪರಿಶೀಲಿಸುವಾಗ ಅವುಗಳನ್ನು ಪರಿಹರಿಸುವಲ್ಲಿ ಸಿಸಿಯುಎಸ್ ಪಾತ್ರದ ಬಗ್ಗೆ ಚರ್ಚಿಸುತ್ತದೆ. ಈ ಕಾರ್ಯಕ್ರಮವು ಉದಯೋನ್ಮುಖ ಆರ್ಥಿಕತೆಗಳಲ್ಲಿ ಪುನರಾವರ್ತಿಸಬಹುದಾದ ಯಶಸ್ವಿ ಉಪಕ್ರಮಗಳಿಂದ ಜ್ಞಾನವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಮೊದಲ ಇಟಿಡಬ್ಲ್ಯೂಜಿ ಸಭೆಯ ಅಂಗವಾಗಿ, ಪ್ರತಿನಿಧಿಗಳು ಇನ್ಫೋಸಿಸ್ ಗ್ರೀನ್ ಬಿಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡ ಸೋಲಾರ್ ಪಾರ್ಕ್ ಗೆ ಭೇಟಿ ನೀಡಲಿದ್ದು, ನವೀಕರಿಸಬಹುದಾದ ಇಂಧನ ವಲಯಕ್ಕೆ ಭಾರತದ ಉತ್ತೇಜನ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಅದರ ಪ್ರಯತ್ನಗಳನ್ನು ವೀಕ್ಷಿಸಲಿದ್ದಾರೆ.
ಪ್ರತಿನಿಧಿಗಳು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಲೆ, ಸಂಸ್ಕೃತಿ ಮತ್ತು ಪಾಕಪದ್ಧತಿಯ ಬಗ್ಗೆಯೂ ಅನುಭವ ಪಡೆಯಲಿದ್ದಾರೆ.
ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ಇಟಿಡಬ್ಲ್ಯೂಜಿಯ ನೋಡಲ್ ಸಚಿವಾಲಯವಾಗಿದೆ ಮತ್ತು ಕೇಂದ್ರೀಕೃತ ಆದ್ಯತೆಯ ಕ್ಷೇತ್ರಗಳ ಬಗ್ಗೆ ಚರ್ಚೆಗಳು ಮತ್ತು ಮಾತುಕತೆಗಳನ್ನು ಮುನ್ನಡೆಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ, ನಾಲ್ಕು ಇಟಿಡಬ್ಲ್ಯೂಜಿ ಸಭೆಗಳು, ವಿವಿಧ ನೇಪಥ್ಯ ಕಾರ್ಯಕ್ರಮಗಳು ಮತ್ತು ಸಚಿವರ ಸಭೆಯನ್ನು ಯೋಜಿಸಲಾಗಿದೆ.
ಶುದ್ಧ ಇಂಧನ ಪರಿವರ್ತನೆಯಲ್ಲಿ ಜಾಗತಿಕ ಸಹಕಾರದ ಉದ್ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಮತ್ತು ಅದನ್ನು ಸುಸ್ಥಿರ ಆರ್ಥಿಕ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಬಿಂದುವಾಗಿಸುವ ನಿಟ್ಟಿನಲ್ಲಿ ಹಿಂದಿನ ಅಧ್ಯಕ್ಷ ರಾಷ್ಟ್ರಗಳು ಕೈಗೊಂಡ ಪ್ರಯತ್ನಗಳು ಮತ್ತು ಫಲಿತಾಂಶಗಳನ್ನು ಆಧರಿಸಿ ಭಾರತದ ಜಿ 20 ಅಧ್ಯಕ್ಷತೆಯು ಮುಂದಿನ ಹೆಜ್ಜೆಯನ್ನು ಇಡಲಿದೆ.
ಬೆಂಗಳೂರಿನ ಪಿಐಬಿಯ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್ ಜಿ ರವೀಂದ್ರ ಸಹ ಉಪಸ್ಥಿತರಿದ್ದರು.
*****
(Release ID: 1894663)
Visitor Counter : 222