ಕೃಷಿ ಸಚಿವಾಲಯ
azadi ka amrit mahotsav

ಸಿರಿಧಾನ್ಯ ಮತ್ತು ಸಾವಯವ -2023: ಬೆಂಗಳೂರಿನ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ ಅಂತರಾಷ್ಟ್ರೀಯ ವ್ಯಾಪಾರ ಪ್ರದರ್ಶನಕ್ಕೆ ಚಾಲನೆ


ಹೆಚ್ಚಿನ ಸಂಖ್ಯೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಸಿರಿಧಾನ್ಯದೊಂದಿಗೆ ವೈವಿಧ್ಯಗೊಳಿಸಬೇಕು ಎಂದು ಕೇಂದ್ರ ರಾಜ್ಯ, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರು ಹೇಳಿದರು

ಸಿರಿಧಾನ್ಯ ಸೇವನೆಯೇ ಅಪೌಷ್ಟಿಕತೆಗೆ ಸೂಕ್ತ ಪರಿಹಾರ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಅವರು ಹೇಳಿದರು.

Posted On: 20 JAN 2023 3:42PM by PIB Bengaluru

ಸಿರಿಧಾನ್ಯ ಮತ್ತು ಸಾವಯವ 2023 - ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ(ಮೇಳ)ವು  ಜನವರಿ 20, ಶುಕ್ರವಾರದಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಪ್ರಾರಂಭವಾಗಿದೆ. ಮೂರು ದಿನಗಳ ಕಾರ್ಯಕ್ರಮ(ಈವೆಂಟ್)ವನ್ನು ಪ್ರದರ್ಶನ, ಪೆವಿಲಿಯನ್, ಬಿ2ಬಿ ಸಂಪರ್ಕ(ನೆಟ್‌ವರ್ಕಿಂಗ್) ಮತ್ತು ಇತ್ಯಾದಿ ಹೆಚ್ಚಿನ ಅವಕಾಶಗಳನ್ನು ಒಳಗೊಂಡಂತೆ ಬಹು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ಸಿರಿಧಾನ್ಯ ಮತ್ತು ಸಾವಯವ ಕುರಿತ ಮೂರುದಿನಗಳ ಕಾರ್ಯಕ್ರಮದ ಪ್ರದರ್ಶನ ವಿಭಾಗವನ್ನು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ನಂತರ, ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿಗಳ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಕರ್ನಾಟಕ ಪೆವಿಲಿಯನ್ ಅನ್ನು ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಅವರು ಬಿ2ಬಿ ಸಂಪರ್ಕ(ನೆಟ್‌ವರ್ಕಿಂಗ್) ವಿಭಾಗವನ್ನು ಉದ್ಘಾಟಿಸಿದರು .  

ರೈತರು, ರೈತ ಸಂಘಟನೆಗಳು, ದೇಶೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು, ಸಾವಯವ ಮತ್ತು ಸಿರಿಧಾನ್ಯವಲಯದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಗೆ ಕೃಷಿ, ತೋಟಗಾರಿಕೆ, ಸಂಸ್ಕರಣೆ, ಯಂತ್ರೋಪಕರಣಗಳು ಮತ್ತು ಕೃಷಿ-ತಂತ್ರಜ್ಞಾನದ ಅವಕಾಶಗಳ ಪ್ರಯೋಜನ ಪಡೆಯಲು, ಸಂಪರ್ಕಿಸಲು ಮತ್ತು ಅನ್ವೇಷಿಸಲು ಈ ವ್ಯಾಪಾರ ಪ್ರದರ್ಶನವು ಒಂದು ಉತ್ತಮ ವೇದಿಕೆಯಾಗಿದೆ. ಕರ್ನಾಟಕ ಸರ್ಕಾರವು ಸಿರಿಧಾನ್ಯಪ್ರಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ - ಮೊದಲ ಸಾವಯವ ಮತ್ತು ಸಿರಿಧಾನ್ಯಮೇಳವನ್ನು 2017 ರಲ್ಲಿ, ಎರಡನೇ ಮತ್ತು ಮೂರನೇ ಆವೃತ್ತಿಗಳನ್ನು ಕ್ರಮವಾಗಿ 2018 ಮತ್ತು 2019 ರಲ್ಲಿ ಬೆಂಗಳೂರಿನಲ್ಲಿ ನಡೆಸಲಾಯಿತು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರು ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಸಮ್ಮೇಳನವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ರೈತರು ಮತ್ತು ಭಾಗವಹಿಸಿದ ಸಭಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, “ಅತಿಕಡಿಮೆ ಕೀಟನಾಶಕಗಳ ಬಳಕೆಯೊಂದಿಗೆ ಅತ್ಯುತ್ತಮ ಗುಣಮಟ್ಟದ ಸಿರಿಧಾನ್ಯ ಬೆಳೆಯಬೇಕು, ತಮ್ಮ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯಲು ಸಹಾಯ ಮಾಡುವ ಅಂತರರಾಷ್ಟ್ರೀಯ ವೇದಿಕೆಗಳಿಗೆ ಉತ್ಪನ್ನಗಳನ್ನು ಕೊಂಡೊಯ್ಯಬಹುದಾದಂತಹ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಕೃಷಿ ರಫ್ತುಗಳಲ್ಲಿ ಗಮನಾರ್ಹ ಏರಿಕೆಯ ಮೂಲಕ ಕಾಣಬಹುದು” ಎಂದು ಹೇಳಿದರು.  

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿಯವರ ಸ್ವಾಗತ ಭಾಷಣದೊಂದಿಗೆ ಅಧಿವೇಶನ ಪ್ರಾರಂಭವಾಯಿತು, ನಂತರ ಕರ್ನಾಟಕ ಸರ್ಕಾರ ಮಾನ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಅಶ್ವಥ ನಾರಾಯಣ ಸಿ.ಎನ್. ಅವರು ಸಹಜ ಸಮೃದ್ಧ ಸಂಸ್ಥೆಯು ಅಭಿವೃದ್ಧಿಪಡಿಸಿದ ಸೀಮಿ ಬ್ರಾಂಡ್ ಉತ್ಪನ್ನಗಳು ಮತ್ತು ಸಿರಿಧಾನ್ಯಕ್ಯಾಲೆಂಡರ್ 2023 ಅನ್ನು ಬಿಡುಗಡೆ ಮಾಡಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಅವರು ತಮ್ಮ ಭಾಷಣದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈತರಿಗೆ ವಿಶೇಷ ಸ್ಥಾನಮಾನವಿದೆ ಹಾಗೂ ಬಜೆಟ್ ಹಂಚಿಕೆಯು 6 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಹೆಚ್ಚುವರಿಯಾಗಿ, ದೇಶವು 10,000 ಎಫ್‌.ಪಿ.ಒ.ಗಳನ್ನು ಅಭಿವೃದ್ಧಿಪಡಿಸಲು ಮತ್ತು ರಫ್ತು ಸಿದ್ಧವಾಗಿರುವ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯೊಂದಿಗೆ ವಿಂಗಡಣೆ ಮತ್ತು ಗ್ರೇಡಿಂಗ್ ಘಟಕಗಳನ್ನು ಸ್ಥಾಪಿಸಲು ರೈತರಿಗೆ ಸಹಾಯ ಮಾಡುವತ್ತ ಗಮನಹರಿಸಿದೆ. ಸಿರಿಧಾನ್ಯಸೇವನೆಯು ಅಪೌಷ್ಟಿಕತೆಗೆ ಪರಿಹಾರವಾಗಿದೆ. ಇದು ಉತ್ತಮ ಜೀವನೋಪಾಯ ಮತ್ತು ಆದಾಯವನ್ನು ಹೆಚ್ಚಿಸಲು ರೈತರಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು.

ಸಿರಿಧಾನ್ಯ ಪ್ರಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮಾದರಿಯನ್ನು ಶ್ಲಾಘಿಸಿದರು. ಅವರು, “ಕರ್ನಾಟಕವು ಪಿಡಿಎಸ್ ವ್ಯವಸ್ಥೆಯ ಮೂಲಕ ಸಿರಿಧಾನ್ಯಧಾನ್ಯಗಳನ್ನು ವಿತರಿಸುತ್ತಿದೆ, ಜಿಲ್ಲಾವಾರು ರೈತರ ಉತ್ಪನ್ನಗಳ ಪ್ರದರ್ಶನ(ಕಿಸಾನ್ ಮೇಳ)ಗಳನ್ನು ಆಯೋಜಿಸುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಸಿರಿಧಾನ್ಯ ಬೆಳೆಯುವ ಮೂಲಕ ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಕರ್ನಾಟಕದ ರೈತರು ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಿದ್ದಾರೆ. ಮುಂಬರುವ ವರ್ಷದಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಕಾರ್ಯಕ್ರಮವನ್ನು ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕಾಂಶ ಭದ್ರತಾ ಮಿಷನ್‌ ಗೆ ಪುನರ್‌ ರಚಿಸಲಾಗುವುದು, ಇದು ಸಿರಿಧಾನ್ಯಗಳಿಗೆ ಜಾಗತಿಕ ವೇದಿಕೆಯನ್ನು ತಲುಪಲು ದಾರಿ ಮಾಡಿಕೊಡಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ(ಬೆಳೆಗಳು) ಶ್ರೀಮತಿ ಶುಭಾ ಠಾಕೂರ್ ಅವರು ಹೇಳಿದರು.

250 ಕ್ಕೂ ಹೆಚ್ಚು ಮಳಿಗೆಗಳು, ಸಿರಿಧಾನ್ಯ ಮತ್ತು ಸಾವಯವ ಆಹಾರ ಮಳಿಗೆಗಳು, ಖರೀದಿದಾರರ ಮಾರಾಟಗಾರರ ಸಭೆಗಳು, ಅಂತರರಾಷ್ಟ್ರೀಯ ಎಕ್ಸ್‌ಪೋ ಮತ್ತು ಸಮ್ಮೇಳನ, ಗ್ರಾಹಕರ ಸಂಪರ್ಕ, ರೈತರ ಕಾರ್ಯಾಗಾರ, ಅಡುಗೆ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು, ಸಿರಿಧಾನ್ಯ ಪಾಕವಿಧಾನಗಳ ಪ್ರಾತ್ಯಕ್ಷಿಕೆಗಳು ಇತ್ಯಾದಿ ಸೇರಿದಂತೆ ಸಿರಿಧಾನ್ಯ ಮೇಳದಲ್ಲಿ ಹಲವು ಪ್ರಮುಖ ಮುಖ್ಯಾಂಶಗಳನ್ನು ಏರ್ಪಡಿಸಲಾಗಿದೆ. ಮೇಳದಲ್ಲಿನ ಇನ್ನಿತರ ಪ್ರಮುಖ ಉತ್ಪನ್ನಗಳೆಂದರೆ ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಶ್ರೇಣಿ, ಪ್ರಮಾಣೀಕೃತ ಕಾಡು (ಅರಣ್ಯ) ಕೊಯ್ಲು ಉತ್ಪನ್ನಗಳು, ಸಿರಿಧಾನ್ಯಸಂಸ್ಕರಣಾ ಯಂತ್ರಗಳು, ಸಾವಯವ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಜೈವಿಕ ವಿಘಟನೀಯ ಪ್ಯಾಕೇಜಿಂಗ್, ಪರಿಸರ ಸ್ನೇಹಿ ಉತ್ಪನ್ನಗಳು ಇತ್ಯಾದಿ ಹಲವು ಪ್ರಕಾರಗಳನ್ನು ಕಾಣಬಹುದು.

ಮೇಳದ ಕೊನೆಯ ದಿನವಾದ 22 ನೇ ಜನವರಿ, 2023 ರಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ ಮತ್ತು ಸಭೆಯನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ಅವರ ಭಾಷಣದೊಂದಿಗೆ ಕಾರ್ಯಕ್ರಮವು ಸಮಾರೋಪಗೊಳ್ಳಲಿದೆ.  ಕೊನೆಯ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಕೂಡಾ ಆಯೋಜಿಸಲಾಗಿದೆ.

ಸಿರಿಧಾನ್ಯ ಕುರಿತು ಜನಜಾಗೃತಿ ಮೂಡಿಸುವ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸುವ ಮತ್ತು ಆಹಾರ ಮತ್ತು ಪೌಷ್ಠಿಕ ಭದ್ರತೆಯ ಮಾರ್ಗವಾಗಿ 'ಚಿನ್ನದ ಧಾನ್ಯ' ಸಿರಿಧಾನ್ಯಗಳನ್ನು ಉತ್ತೇಜಿಸಲು ಮೌಲ್ಯ ಸರಪಳಿಯನ್ನು ಬಲಪಡಿಸುವ ಗುರಿಯೊಂದಿಗೆ, ಭಾರತ ಸರ್ಕಾರದ ಪ್ರಸ್ತಾವನೆಯನ್ನು ಅಂಗೀಕರಿಸಿ, ವಿಶ್ವಸಂಸ್ಥೆಯು ತನ್ನ ಮಹಾಧಿವೇಶನದಲ್ಲಿ 2023 ರನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಘೋಷಿಸಿದೆ . ಭಾರತ ಸರ್ಕಾರವು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ರನ್ನು ಅದ್ಧೂರಿಯಾಗಿ ದೇಶದಾದ್ಯಂತ ಆಚರಿಸುತ್ತಿದೆ. ಭಾರತವನ್ನು 'ಸಿರಿಧಾನ್ಯದ ಜಾಗತಿಕ ಕೇಂದ್ರ(ಗ್ಲೋಬಲ್ ಹಬ್ ಫಾರ್ ಮಿಲ್ಲೆಟ್ಸ್)'ವಾಗಿ ಮಾಡುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ2023ರನ್ನು 'ಜನರ ಸಿರಿಧಾನ್ಯ ಆಂದೋಲನ'ವನ್ನಾಗಿ ಮಾಡುವ ತಮ್ಮ ದೃಷ್ಟಿಕೋನವನ್ನು ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಿಂಧೂ ಕಣಿವೆಯ ನಾಗರೀಕತೆಯ ಅವಧಿಯಲ್ಲಿ ಸಿರಿಧಾನ್ಯ ಬಳಕೆಯಾಗುತ್ತಿದ್ದ ಕುರಿತು ಹಲವಾರು ಪುರಾವೆಗಳು ಲಭ್ಯವಾಗಿದ್ದು, ಇದರಿಂದಾಗಿ ಭಾರತದ ಮೊದಲ ಬೆಳೆಗಳಲ್ಲಿ 'ಸಿರಿಧಾನ್ಯ(ರಾಗಿ)' ಸೇರಿದೆ ಎಂದು ಸ್ಪಷ್ಟವಾಗುತ್ತದೆ. ಪ್ರಸ್ತುತ ಪ್ರಪಂಚದಾದ್ಯಂತ ಬೆಳೆಯುತ್ತಿರುವ ವಿವಿಧ ರೀತಿಯ ಸಿರಿಧಾನ್ಯಗಳನ್ನು ಮೊದಲು ಭಾರತದಲ್ಲಿ ಬೆಳೆಸಲಾಯಿತು. ಪ್ರಸ್ತುತ 130 ಕ್ಕೂ ಹೆಚ್ಚು ದೇಶಗಳಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಹಲವು ದೇಶಗಳ ಅರ್ಧ ಶತಕೋಟಿಗೂ ಹೆಚ್ಚು ಜನರು 'ಸಿರಿಧಾನ್ಯ(ರಾಗಿ)' ಸಾಂಪ್ರದಾಯಿಕ ಆಹಾರವೆಂದು ಪರಿಗಣಿಸಿದ್ದಾರೆ. ಭಾರತದಲ್ಲಿ, ಸಿರಿಧಾನ್ಯಗಳು ಪ್ರಾಥಮಿಕವಾಗಿ ಖಾರಿಫ್ ಬೆಳೆಯಾಗಿದ್ದು, ಇವುಗಳಿಗೆ ಇತರ ರೀತಿಯ ಪ್ರಧಾನ ಆಹಾರಗಳಿಗಿಂತ ಕಡಿಮೆ ನೀರು ಮತ್ತು ಕೃಷಿ ಒಳಹರಿವಿನ ಅಗತ್ಯವಿರುತ್ತದೆ. ಜೀವನೋಪಾಯವನ್ನು ಸೃಷ್ಟಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಪಂಚದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಿರಿಧಾನ್ಯಗಳು ಜನಪ್ರಿಯವಾಗಿವೆ.   

ಈ ರೀತಿಯ ಹಲವಾರು ಪ್ರಯತ್ನಗಳ ಜೊತೆಗೆ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ - 2023ರ ಭವ್ಯ ಆಚರಣೆ- ಪ್ರಚಾರಗಳ ಮೂಲಕ ಮರೆತುಹೋಗಿರುವ ಗತಕಾಲದ 'ಅದ್ಭುತ ಸಿರಿಧಾನ್ಯ(ಮಿರಾಕಲ್ ಮಿಲೆಟ್ಸ್)'ಗಳ ವೈಭವವನ್ನು ಪುನರುಜ್ಜೀವನಗೊಳಿಸಲು ಮತ್ತು ಸಹಕಾರಿ ವಿಧಾನದ ಮೂಲಕ ಕೈ ಜೋಡಿಸಲು - ಭಾರತ ಸರ್ಕಾರವು ಭಾರತೀಯ ರಾಯಭಾರ ಕಚೇರಿಗಳು, ಅಂತರಾಷ್ಟ್ರೀಯ ಸಂಸ್ಥೆಗಳು, ಅಕಾಡೆಮಿಗಳು, ಅಡುಗೆಯವರು(ಬಾಣಸಿಗರು), ಮಾಧ್ಯಮಗಳು, ಭಾರತೀಯ ವಲಸೆಗಾರರು, ಸ್ಟಾರ್ಟ್-ಅಪ್ ಸಮುದಾಯಗಳು, ನಾಗರಿಕ ಸಮಾಜ ಮತ್ತು ಸಿರಿಧಾನ್ಯ ಮೌಲ್ಯ-ಸರಪಳಿಯಲ್ಲಿರುವ ಎಲ್ಲರನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನು ಸಿರಿಧಾನ್ಯವನ್ನು ಪ್ರೋತ್ಸಾಹಿಸಲು ಒತ್ತಾಯಿಸುತ್ತಿದೆ.

 

*****


(Release ID: 1892609) Visitor Counter : 340


Read this release in: English , Urdu , Tamil , Telugu