ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಸರಕಾರಿ ವ್ಯವಸ್ಥೆಗಳು ಮತ್ತು ವಿವಿಧ ಪ್ರಕ್ರಿಯೆಗಳ ದಕ್ಷತೆ, ಸಮಗ್ರತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಮತ್ತು ಉತ್ತಮ ಆಲೋಚನೆಗಳ ಮೇಲೆ ನಿರಂತರವಾಗಿ ಗಮನ ಕೇಂದ್ರೀಕರಿಸುವ ಮೂಲಕ ಸರಕಾರ ಸಹ ಇಂದು ನವೋದ್ಯಮದಂತೆ ಯೋಚಿಸುತ್ತಿದೆ: ಶ್ರೀ ಪಿಯೂಷ್ ಗೋಯಲ್
ʻಡಿಜಿಟಲ್ ಇಂಡಿಯಾʼ, ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕದಂತಹ ಉಪಕ್ರಮಗಳು ವಿಶೇಷವಾಗಿ ದೇಶದ ದೂರದ ಭಾಗಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಚಾಲಕ ಶಕ್ತಿಯಾಗಿವೆ: ಶ್ರೀ ಗೋಯಲ್
ನಿರ್ಣಾಯಕ ಅವಕಾಶಗಳು ಮತ್ತು ಸಹಾಯಧನ ಪರಿಸರ ವ್ಯವಸ್ಥೆಗೆ ಪ್ರವೇಶ ಪಡೆಯಲು ದೂರದ ಪ್ರದೇಶಗಳ ಆವಿಷ್ಕಾರಕರು ಮತ್ತು ನವೋದ್ಯಮಗಳಿಗೆ 'ಮಾರ್ಗ್ʼ (MAARG) ಪೋರ್ಟಲ್ ಸಹಾಯ ಮಾಡುತ್ತದೆ:
ಶ್ರೀ ಗೋಯಲ್
ನವೋದ್ಯಮಗಳನ್ನು ಸರಕಾರ, ಉದ್ಯಮ ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಸಂಪರ್ಕಿಸಲು ಹೆಚ್ಚು ದೃಢವಾದ ಡೇಟಾಬೇಸ್‌ನ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು
2022ನೇ ಸಾಲಿನ ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼಗಳ ವಿಜೇತರಿಗೆ ಸಚಿವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು; 41 ನವೋದ್ಯಮಗಳು, 2 ʻಇನ್ಕ್ಯುಬೇಟರ್’ಗಳು, ಮತ್ತು 1 ʻಆಕ್ಸಿಲರೇಟರ್ʼ ಗಳನ್ನು ವಿಜೇತರೆಂದು ಗುರುತಿಸಲಾಗಿದೆ
Posted On:
16 JAN 2023 4:40PM by PIB Bengaluru
ಸರಕಾರವು ಇಂದು ನವೋದ್ಯಮದಂತೆ ಯೋಚಿಸುತ್ತಿದೆ. ದೇಶಾದ್ಯಂತ ಸರಕಾರಿ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳ ದಕ್ಷತೆ, ಪರಿಣಾಮಕಾರಿತ್ವ, ಉತ್ಪಾದಕತೆ, ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಹೊಸ ಮತ್ತು ಉತ್ತಮ ಆಲೋಚನೆಗಳ ಮೇಲೆ ನಿರಂತರ ಗಮನ ಹರಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಹೇಳಿದರು. ಇಂದು ನವದೆಹಲಿಯಲ್ಲಿ 2022ನೇ ಸಾಲಿನ ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼಗಳನ್ನು ವಿತರಿಸಿದ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಸಚಿವರು, ಈ ಪ್ರಶಸ್ತಿಯು ನವೋದ್ಯಮಗಳಿಗೆ ಅವುಗಳ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಮತ್ತಷ್ಟು ಪ್ರೇರೇಪಣೆ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ರಾಷ್ಟ್ರವಾಗಿ ನಾವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಅದ್ಭುತ ಆವಿಷ್ಕಾರಗಳ ಸೃಷ್ಟಿಕರ್ತರಾಗಿ ಹಾಗೂ ಅವುಗಳ ಬೆಂಬಲಿಗರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ ಗೋಯಲ್ ಶ್ಲಾಘಿಸಿದರು. ಪ್ರಧಾನ ಮಂತ್ರಿಗಳ ದೂರದೃಷ್ಟಿಯ ನಾಯಕತ್ವದಲ್ಲಿ ʻಸ್ಟಾರ್ಟಪ್ ಇಂಡಿಯಾʼ ಕಲ್ಪನೆಯು ರಾಷ್ಟ್ರದ ಉದ್ದಗಲಕ್ಕೂ ಬೇರೂರಿದೆ ಎಂದರು.
ಸ್ವಾತಂತ್ರ್ಯದ ʻಅಮೃತ ಕಾಲʼದಲ್ಲಿ ರಾಷ್ಟ್ರವು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುವುದನ್ನು ಖಾತರಿಪಡಿಸಿಕೊಳ್ಳಲು ಹಾಗೂ ಯುವ ಭಾರತದ ಆಕಾಂಕ್ಷೆಗಳನ್ನು ಪೂರೈಸಲು ಇನ್ನೂ ಅನೇಕ ನವೀನ ಆಲೋಚನೆಗಳು ಮತ್ತು ಉಪಕ್ರಮಗಳನ್ನು ಬೆಂಬಲಿಸಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ಸರಕಾರ ಕೈಗೊಂಡ ಉಪಕ್ರಮಗಳು ಸಮಯೋಚಿತವಾಗಿವೆ. ಜೊತೆಗೆ ಬಲಿಷ್ಠ, ಪುನರುಜ್ಜೀವಗೊಂಡ ಭಾರತಕ್ಕೆ ಅಡಿಪಾಯವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿವೆ. ಉದಯೋನ್ಮುಖ ಬೆಳವಣಿಗೆಯ ಯಶೋಗಾಥೆಯಾಗಿ ಗುರುತಿಸಲ್ಪಟ್ಟ ಭಾರತವು, ಜಾಗತಿಕ ಬೆಳವಣಿಗೆಗೆ ಚಾಲಕ ಶಕ್ತಿಯಾಗಲು ಸಜ್ಜಾಗಿದೆ ಎಂದು ಅವರು ವಿವರಿಸಿದರು.
ಯೋಜನೆಗಳ ಅನುಷ್ಠಾನದಲ್ಲಿ ವೇಗ, ಕೌಶಲ್ಯ ಮತ್ತು ಪ್ರಮಾಣಕ್ಕೆ ಪ್ರಧಾನಮಂತ್ರಿಯವರು ಹೆಚ್ಚಿನ ಗಮನ ನೀಡಿದ್ದಾರೆ ಎಂದು ಶ್ರೀ ಗೋಯಲ್ ತಿಳಿಸಿದರು. 2015ರಲ್ಲಿ ಪ್ರಾರಂಭಿಸಲಾದ ʻಡಿಜಿಟಲ್ ಇಂಡಿಯಾʼ ಯೋಜನೆಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ʻಡಿಜಿಟಲ್ ಇಂಡಿಯಾʼವನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯದ ಹೊರತು, ಸಮಾನ ಅಭಿವೃದ್ಧಿಯ ದೃಷ್ಟಿಕೋನವು ನನಸಾಗುವುದಿಲ್ಲ ಎಂದು ಪ್ರಧಾನಿ ಮೊದಲೇ ಗುರುತಿಸಿದ್ದರು ಎಂದು ಹೇಳಿದರು. ʻಡಿಜಿಟಲ್ ಇಂಡಿಯಾʼ, ಆಗ ʻ4ಜಿʼ ಮತ್ತು ಈಗ ʻ5ಜಿʼ ಸೇವೆಗೆ ಚಾಲನೆ, ಹಳ್ಳಿಗಳಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕದಂತಹ ಉಪಕ್ರಮಗಳಿಂದಾಗಿ ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ದೇಶದ ದೂರದ ಭಾಗಗಳಲ್ಲಿ ತಂತ್ರಜ್ಞಾನ ಅವಲಂಬಿತ ನೋವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ನೆರವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ʻಕೋವಿನ್ ಆ್ಯಪ್ʼ, ʻಒನ್ ನೇಷನ್, ಒನ್ ರೇಷನ್ ಕಾರ್ಡ್ʼ (ಒಎನ್ಒಆರ್ಸಿ), ʻಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ, ʻಯುಪಿಐʼನಂತಹ ಅನೇಕ ಪರಿಣಾಮಕಾರಿ ಆವಿಷ್ಕಾರಗಳೊಂದಿಗೆ ಸರಕಾರ ಮುಂದೆ ಬಂದಿತು. ಈ ಆವಿಷ್ಕಾರಗಳು ಅನೇಕ ನವೋದ್ಯಮಗಳು ಮತ್ತು ʻಯುನಿಕಾರ್ನ್ʼಗಳ ಬಲವರ್ಧನೆಗೆ ಆಧಾರವಾಗಿವೆ. ಇ-ಕಾಮರ್ಸ್ ಅನ್ನು ಪ್ರಜಾಸತ್ತಾತ್ಮಕಗೊಳಿಸುವ ಮತ್ತು ದೇಶಾದ್ಯಂತ ಲಕ್ಷಾಂತರ ಸಣ್ಣ ಅಂಗಡಿಗಳನ್ನು ಉಳಿಸುವ ʻಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ʼ (ಒಎನ್ಡಿಸಿ) ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ. ನೈಜ ಅರ್ಹ ಫಲಾನುಭವಿಗಳು ಸರಕಾರದಿಂದ ನೇರವಾಗಿ ಸಹಾಯ ಪಡೆಯುವುದನ್ನು ಖಾತರಿಪಡಿಸಲು ಸರಕಾರ ಜಾರಿಗೊಳಿಸಿದ ʻಜಾಮ್ ಟ್ರಿನಿಟಿʼ(ಜನ್ಧನ್-ಆಧಾರ್-ಮೊಬೈಲ್) ಉಪಕ್ರಮವು ಇಡೀ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಸಮಗ್ರತೆ ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶವನ್ನು ಹೊಂದಿದೆ ಎಂದು ಸಚಿವರು ಹೇಳಿದರು.
ʻಮಾರ್ಗ್’(MAARG) ಪೋರ್ಟಲ್ ಅನ್ನು ಶ್ಲಾಘಿಸಿದ ಸಚಿವರು, ಇದು ಆಲೋಚನೆಗಳನ್ನು ಕೇಂದ್ರೀಕರಿಸಲು, ಪರಿಷ್ಕರಿಸಲು ಮತ್ತು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ʻಹೂಡಿಕೆದಾರರ ಸಂಪರ್ಕ ಪೋರ್ಟಲ್ ಬಗ್ಗೆ ಉಲ್ಲೇಖಿಸಿದ ಸಚಿವರು, ಇದು ಮಹತ್ವದ ಅವಕಾಶಗಳಿಗೆ ಪ್ರವೇಶವನ್ನು ಪಡೆಯಲು ದೂರದ ಭಾಗಗಳ ಆವಿಷ್ಕಾರಕರಿಗೆ ಸಹಾಯ ಮಾಡುತ್ತದೆ. ಜೊತೆಗೆ, ಅನೇಕ ಅರ್ಹ ನವೋದ್ಯಮಗಳಿಗೆ ಸಹಾಯಧನ ಪರಿಸರ ವ್ಯವಸ್ಥೆಗೆ ಪ್ರವೇಶವನ್ನು ಕಲ್ಪಿಸುತ್ತದೆ ಎಂದು ಹೇಳಿದರು. ಅಭಿವೃದ್ಧಿಯ ಫಲಗಳನ್ನು ಕಟ್ಟಕಡೆಯ ನಾಗರಿಕನಿಗೂ ತಲುಪಿಸುವ, ಉತ್ತಮ ಗುಣಮಟ್ಟದ ಜೀವನವನ್ನು ಸಾಧಿಸಲು ಸಹಾಯ ಮಾಡುವ ಹೊಸ ಯುಗಕ್ಕೆ ಜಿಗಿಯಲು ತಂತ್ರಜ್ಞಾನವು ಅನುವು ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ʻಮಾರ್ಗ್’(MAARG) ಪೋರ್ಟಲ್ ಬಗ್ಗೆ ಉಲ್ಲೇಖಿಸಿದ ಸಚಿವರು, ಸರಕಾರದೊಂದಿಗೆ ನಾಗರಿಕರ ಸಂವಹನವನ್ನು ಸರಳಗೊಳಿಸುವತ್ತ ಸರಕಾರ ಗಮನಹರಿಸಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ದಾಖಲೆಗಳನ್ನು ನೋಟರಿ ಮಾಡುವ ಅಗತ್ಯವನ್ನು ತೊಡೆದುಹಾಕಿದ್ದಾರೆ. ಶ್ರೀಸಾಮಾನ್ಯನ ಮೇಲೆ ನಂಬಿಕೆಯೊಂದಿಗೆ ಅವರು ಈ ಕ್ರಮ ಕೈಗೊಂಡಿದ್ದಾರೆ. ಆದರೆ, ಇದುವರೆಗೂ ಯಾರೂ ಇದನ್ನು ದುರುಪಯೋಗಪಡಿಸಿಕೊಳ್ಳದೆ ಪ್ರಧಾನಿಗಳ ವಿಶ್ವಾಸವನ್ನು ಉಳಿಸಿದ್ದಾರೆ ಎಂದು ಅವರು ಹೇಳಿದರು. ವಿವಿಧ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಲು, ಆರ್ಥಿಕವಾಗಿ ಅನುಕೂಲಕರವಾಗಿಸಲು ಸಲಹೆಗಳನ್ನು ನೀಡುವಂತೆ ಅವರು ನವೋದ್ಯಮಗಳನ್ನು ಒತ್ತಾಯಿಸಿದರು. ಉದ್ಯಮ ಆರಂಭಕ್ಕೆ ಅಡಚಣೆಯಾಗಿದ್ದ 39,000ಕ್ಕೂ ಹೆಚ್ಚು ನಿಯಮಗಳ ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಅನುಸರಣೆ ಹೊರೆಯನ್ನು ಕಡಿಮೆ ಮಾಡಲು ಇನ್ನೂ ಏನು ಮಾಡಬಹುದು ಎಂಬುದರ ಕುರಿತು ಸಲಹೆಗಳನ್ನು ಕೇಳಿದರು.
ನವೋದ್ಯಮಗಳನ್ನು ಸರಕಾರ, ಉದ್ಯಮ ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸಂಪರ್ಕಿಸುವುದರ ಜೊತೆಗೆ, ನಮ್ಮ ಆವಿಷ್ಕಾರಕರಿಂದ ಹೊಸ ಆಲೋಚನೆಗಳನ್ನು ಸೆರೆಹಿಡಿಯಲು ನವೋದ್ಯಮಗಳ ಕುರಿತು ಮತ್ತಷ್ಟು ದೃಢವಾದ ದತ್ತಾಂಶ ಅಗತ್ಯ ಎಂದು ಸಚಿವರು ಒತ್ತಿ ಹೇಳಿದರು. ಹಾಲಿ ಸರಕಾರವು ಭಾರತದ ಭವಿಷ್ಯವನ್ನು ನಿರ್ಮಿಸಲು ಎಲ್ಲರೊಂದಿಗೂ ಹೆಚ್ಚು ತೊಡಗಿಸಿಕೊಳ್ಳಲು ಬಯಸುತ್ತದೆ ಎಂದು ಪುನರುಚ್ಚರಿಸುವ ಮೂಲಕ ಶ್ರೀ ಗೋಯಲ್ ಅವರು ತಮ್ಮ ಮಾತು ಮುಗಿಸಿದರು.
ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಹಾಯಕ ಸಚಿವ ಶ್ರೀ ಸೋಮ್ ಪ್ರಕಾಶ್ ಅವರು ಮಾತನಾಡಿ, ದೇಶದ ನವೋದ್ಯಮಗಳಿಗೆ ಧನಸಹಾಯ, ಮಾರ್ಗದರ್ಶನ ಮುಂತಾದ ವಿಷಯದಲ್ಲಿ ಸರಕಾರವು ಹೇಗೆ ಸಹಾಯ ಹಸ್ತ ಚಾಚುತ್ತಿದೆ, ಹೇಗೆ ಬೆಂಬಲ ನೀಡುತ್ತಿದೆ ಎಂಬುದರ ಬಗ್ಗೆ ಮಾತನಾಡಿದರು. ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼಗಳ ತೀರ್ಪುಗಾರರಾದ ಶ್ರೀ ಸಂಜೀವ್ ಬಿಖ್ಚಂದಾನಿ ಅವರು ಮಾತನಾಡಿ, ʻಸ್ಟಾರ್ಟಪ್ ಇಂಡಿಯಾʼ, ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಕೊಡುಗೆಯನ್ನು ಅಭಿನಂದಿಸಿದರು. ನವೋದ್ಯಮಗಳನ್ನು ಉತ್ತೇಜಿಸುವಲ್ಲಿ ಸರಕಾರದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ 'ರಾಷ್ಟ್ರೀಯ ನವೋದ್ಯಮ ಪ್ರಶಸ್ತಿ- 2022 ವರದಿ'ಯನ್ನು ಬಿಡುಗಡೆ ಮಾಡಲಾಯಿತು. ಈ ವರದಿಯು ಈ ಹಿಂದೆ ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼಯಿಂದ ಮಾನ್ಯತೆ ಪಡೆದ ನವೋದ್ಯಮಗಳಿಗೆ ಹಾಗೂ ಹಾಲಿ ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳು-2022ʼ ವಿಜೇತರಿಗೆ ನೀಡಿದ ಬೆಂಬಲದ ಬಗ್ಗೆ ವಿವರವಾದ ಒಳನೋಟವನ್ನು ಒದಗಿಸುತ್ತದೆ. ಮಾರ್ಗದರ್ಶನ, ಸಲಹೆ, ನೆರವು, ಸ್ಥಿತಿಸ್ಥಾಪಕತ್ವ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುವ ʻಮಾರ್ಗ್ʼ(MAARG) ವೇದಿಕೆಯನ್ನು ಇಂದು ಅಭಿನಂದನಾ ಸಮಾರಂಭದಲ್ಲಿ ಉದ್ಘಾಟಿಸಲಾಯಿತು. ಎಲ್ಲ ವಲಯಗಳು, ಹಂತಗಳು ಮತ್ತು ಕಾರ್ಯಗಳಲ್ಲಿ ನವೋದ್ಯಮಗಳು ಮತ್ತು ಉದ್ಯಮಿಗಳ ನಡುವೆ ಮಾರ್ಗದರ್ಶನವನ್ನು ಸುಲಭಗೊಳಿಸಲು ಈ ವೇದಿಕೆಯನ್ನು ರೂಪಿಸಲಾಗಿದೆ. ಪ್ರಸ್ತುತ 600ಕ್ಕೂ ಹೆಚ್ಚು ಮಾರ್ಗದರ್ಶಕರು ಮತ್ತು 800ಕ್ಕೂ ಹೆಚ್ಚು ನವೋದ್ಯಮಗಳೂ ಈ ವೇದಿಕೆಯಲ್ಲಿ ನೋಂದಾಯಿಸಲ್ಪಟ್ಟಿವೆ. ಈ ಪೋರ್ಟಲ್ ಈಗ ನವೋದ್ಯಮಗಳೊಂದಿಗೆ ಮಾರ್ಗದರ್ಶಕರ ನೇರ ಸಂಪರ್ಕಕ್ಕೆ ಅವಕಾಶ ನೀಡುತ್ತದೆ. ನವೋದ್ಯಮಗಳಿಗೆ ಮಾರ್ಗದರ್ಶನದ ಅವಕಾಶ ಪಡೆಯಲು ಸಹಾಯ ಮಾಡುತ್ತದೆ, ಅದರ ಮೂಲಕ ದೇಶದಿಳಗೆ ಮತ್ತು ಜಾಗತಿಕವಾಗಿ ನವೋದ್ಯಮಗಳು ಬೆಳೆಯಲು ಮತ್ತು ಅವುಗಳ ಪ್ರಭಾವವನ್ನು ಹೆಚ್ಚಿಸಲು ನೆರವಾಗುತ್ತದೆ.
ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಅತ್ಯುತ್ತಮ ನವೋದ್ಯಮಗಳನ್ನು ಗುರುತಿಸಲು ಮತ್ತು ಬಹುಮಾನ ನೀಡಲು ʻರಾಷ್ಟ್ರೀಯ ನವೋದ್ಯಮʼ ಪ್ರಶಸ್ತಿʼಗಳನ್ನು ರೂಪಿಸಿದೆ. ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುವ, ನವೀನ ಪರಿಹಾರಗಳನ್ನು ಒದಗಿಸುವ ಅಸಾಧಾರಣ ನವೋದ್ಯಮಗಳನ್ನು ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿಗಾಗಿ ಗುರುತಿಸಲಾಗುತ್ತದೆ. ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳ ಮೊದಲ ಆವೃತ್ತಿಯು 2020ರ ಅಕ್ಟೋಬರ್ನಲ್ಲಿ ಸಂಪನ್ನಗೊಂಡಿತು. 36 ನವೋದ್ಯಮಗಳು, 1 ʻಇನ್ಕ್ಯುಬೇಟರ್ʼ ಮತ್ತು 1 ʻಆಕ್ಸಿಲರೇಟರ್ʼ ಅನ್ನು ಆಯಾ ವಿಭಾಗಗಳಲ್ಲಿ ವಿಜೇತರೆಂದು ಗುರುತಿಸಲಾಗಿತ್ತು.
ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳ ಮೂರನೇ ಆವೃತ್ತಿಯನ್ನು 2022ರ ಫೆಬ್ರವರಿ 1ರಂದು ಪ್ರಾರಂಭಿಸಲಾಯಿತು. ʻಆಜಾದಿ ಕಾ ಅಮೃತ ಮಹೋತ್ಸವʼಕ್ಕೆ ಅನುಗುಣವಾಗಿ ಭಾರತದ ಅಭಿವೃದ್ಧಿ ಕಥಾನಕದಲ್ಲಿ ಕ್ರಾಂತಿಗೆ ಕಾರಣವಾದ ನವೋದ್ಯಮಗಳು, ಕೇವಲ ಆರ್ಥಿಕ ಲಾಭದ ದೃಷ್ಟಿಯಿಂದಲ್ಲದೆ ಸಮಾಜದ ಮೇಲೆ ಪರಿಣಾಮಕ್ಕಾಗಿ ಅಸಾಧಾರಣ ಸಾಮರ್ಥ್ಯಗಳನ್ನು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನವೋದ್ಯಮಗಳನ್ನು ʻ2022ನೇ ಸಾಲಿನ ರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼ ಗೆ ಗುರುತಿಸಲಾಗಿದೆ.
ʻ2022ನೇ ಸಾಲಿನ ರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼಗೆ ವಿಜೇತರ ಆಯ್ಕೆಯಲ್ಲಿ ವೈವಿಧ್ಯ, ಒಳಗೊಳ್ಳುವಿಕೆ ಮತ್ತು ನಾವೀನ್ಯದ ಮೇಲೆ ವ್ಯಾಪಕವಾಗಿ ಗಮನ ಕೇಂದ್ರೀಕರಿಸಲಾಗಿದೆ. ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳು-2022ʼರ ಅಡಿಯಲ್ಲಿ ಬರುವ ವಲಯಗಳನ್ನು 17ಕ್ಕೆ ಮತ್ತು ಉಪ-ವಲಯಗಳನ್ನು 50ಕ್ಕೆ ಹೆಚ್ಚಿಸಲಾಗಿದೆ, ಆ ಮೂಲಕ ನವೋದ್ಯಮ ಪರಿಸರ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಈ ಆವೃತ್ತಿಗೆ 2 ವಲಯಗಳು, 5 ಉಪ-ವಲಯಗಳು ಮತ್ತು 2 ವಿಶೇಷ ವಿಭಾಗಗಳನ್ನು ಸೇರಿಸಲಾಗಿದೆ. ʻಉತ್ಪಾದನಾ ಉತ್ಕೃಷ್ಟತೆʼ ಹಾಗೂ ʻಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನವೋದ್ಯಮಗಳು- ಇವು ನವೋದ್ಯಮಗಳನ್ನು ಮತ್ತಷ್ಟು ಉತ್ತೇಜಿಸಲು ಸೇರಿಸಲಾದ ಎರಡು ಹೊಸ ವಿಶೇಷ ವಿಭಾಗಗಳಾಗಿವೆ.
ದೇಶಾದ್ಯಂತ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನವೋದ್ಯಮಗಳು, ʻಇನ್ಕ್ಯುಬೇಟರ್ʼ
ಗಳು ಮತ್ತು ʻಆಕ್ಸಲರೇಟರ್ʼಗಳಿಂದ ಒಟ್ಟು 2,667 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಅರ್ಜಿಗಳನ್ನು 50ಕ್ಕೂ ಹೆಚ್ಚು ತೀರ್ಪುಗಾರರ ಸದಸ್ಯರು ಪರಿಶೀಲಿಸಿ ಮೌಲ್ಯಮಾಪನ ಮಾಡಿದರು. ಈ ತೀರ್ಪುಗಾರರ ಸದಸ್ಯರಲ್ಲಿ ಹಿರಿಯ ಸರಕಾರಿ ಅಧಿಕಾರಿಗಳು, ಸಾಹಸೋದ್ಯಮ ಬಂಡವಾಳಗಾರರು (ವಿಸಿಗಳು), ನವೋದ್ಯಮ ಸಿಇಒಗಳು, ಉದ್ಯಮದ ದಿಗ್ಗಜರು ಮತ್ತು ಪ್ರಸಿದ್ಧ ಶಿಕ್ಷಣ ತಜ್ಞರು ಸೇರಿದ್ದಾರೆ.
ಈ ಮೂರನೇ ಆವೃತ್ತಿಯಲ್ಲಿ, 41 ನವೋದ್ಯಮಗಳು, 2 ʻಇನ್ಕ್ಯುಬೇಟರ್ʼಗಳು ಮತ್ತು 1 ʻಆಕ್ಸಿಲರೇಟರ್ʼ ಅನ್ನು ಆಯಾ ವಿಭಾಗಗಳಲ್ಲಿ ವಿಜೇತರಾಗಿ ಗುರುತಿಸಲಾಯಿತು. ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಿಂದಲೂ ವಿಜೇತರು ಹೊರಹೊಮ್ಮಿದ್ದಾರೆ. ಇದು ದೇಶದ ಮೂಲೆ ಮೂಲೆಯಲ್ಲೂ ಉದ್ಯಮಶೀಲತೆ ಮತ್ತು ಆವಿಷ್ಕಾರದ ಉತ್ಸಾಹ ವ್ಯಾಪಿಸಿರುವುದನ್ನು ಸೂಚಿಸುತ್ತದೆ.
ವಿಜೇತ ನವೋದ್ಯಮಗಳು ತಲಾ 5 ಲಕ್ಷ ರೂ., ವಿಜೇತ ʻಇನ್ಕ್ಯುಬೇಟರ್ʼ ಮತ್ತು ʻಆಕ್ಸಿಲರೇಟರ್ʼ ಕ್ರಮವಾಗಿ ತಲಾ 15 ಲಕ್ಷ ರೂ. ಪಡೆಯಲಿವೆ. ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿ – 2022ʼರ ಫಲಿತಾಂಶಗಳನ್ನು ʻಸ್ಟಾರ್ಟ್ಅಪ್ ಇಂಡಿಯಾʼ ಜಾಲತಾಣದಲ್ಲೂ ನೋಡಬಹುದು (https://www.startupindia.gov.in/nsa2022results/).
ʻರಾಷ್ಟ್ರೀಯ ನವೋದ್ಯಮ ಪ್ರಶಸ್ತಿʼಯು ಸುದೀರ್ಘ ಹಾಗೂ ನಿರಂತರ ಪ್ರಯಾಣವಾಗಿದೆ. 2023ನೇ ಸಾಲಿನ ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ. ವಿವರಗಳಿಗಾಗಿ, https://www.startupindia.gov.in/ ನೋಡಬಹುದು.
ಪ್ರಶಸ್ತಿ ವಿಜೇತರ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.
*****
(Release ID: 1891695)
Visitor Counter : 169