ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜಮ್ಮುವಿನಲ್ಲಿಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಕುರಿತಂತೆ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿದ್ದು, ಎಲ್ಲಾ ಭದ್ರತಾ ಸಂಸ್ಥೆಗಳು ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ  ಸಮರ ಸಾರಿ, ಹೋರಾಡುತ್ತಿವೆ

"ರಜೌರಿ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳ ದುಃಖವನ್ನು ಹಂಚಿಕೊಳ್ಳುವುದು ನನ್ನ ಉದ್ದೇಶವಾಗಿತ್ತು, ಆದರೆ ಪ್ರತೀಕೂಲ ಹವಾಮಾನದಿಂದಾಗಿ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ, ನಾನು ಎಲ್ಲಾ ಕುಟುಂಬಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರ ದುಃಖದಲ್ಲಿ ಭಾಗಿಯಾಗುವ ಪ್ರಯತ್ನ ಮಾಡಿದ್ದೇನೆ"

ಆ ಎಲ್ಲಾ ಕುಟುಂಬಗಳ ಧೈರ್ಯವು ಇಡೀ ದೇಶಕ್ಕೆ ಮಾದರಿಯಾಗಿದೆ, ಅಂತಹ ದೊಡ್ಡ ಘಟನೆಯ ನಂತರವೂ ಹೋರಾಡುವ ನೈತಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ವಿಷಯವಾಗಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂತ್ರಸ್ತರ ಕುಟುಂಬಗಳೊಂದಿಗೆ ದೃಢವಾಗಿ ನಿಂತಿದ್ದು, ಅವರಿಗೆ ಸಹಾಯ ಮಾಡಲು ದೃಢ ನಿಶ್ಚಯ ಹೊಂದಿದೆ.

ಸಂಪೂರ್ಣ ಸಹಾನುಭೂತಿಯೊಂದಿಗೆ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಅನೇಕ ಯೋಜನೆಗಳ ಮೂಲಕ ಪ್ರಯೋಜನಗಳನ್ನು ನೀಡಲಾಗುವುದು, ಇದರೊಂದಿಗೆ ಉಪ ರಾಜ್ಯಪಾಲರು ತಮ್ಮ ಅಧಿಕಾರದ ಅಡಿಯಲ್ಲಿ ಪರಿಹಾರಕ್ಕಾಗಿ ಎಲ್ಲ ಸಾಧ್ಯ ನೆರವು ಒದಗಿಸುತ್ತಾರೆ

ಮೂರು ತಿಂಗಳೊಳಗಾಗಿ ಜಮ್ಮುವಿನ ಪ್ರತಿಯೊಂದು ಪ್ರದೇಶದಲ್ಲಿ ಭದ್ರತಾ ಗ್ರಿಡ್ ಅನ್ನು ಬಲಪಡಿಸುವ ಮೂಲಕ ಅದನ್ನು ಅಭೇದ್ಯಗೊಳಿಸಲಾಗುವುದು.

ಎನ್ಐಎ ಮತ್ತು ಜಮ್ಮು ಪೊಲೀಸರು ಇತ್ತೀಚೆಗೆ ನಡೆದ ಘಟನೆಗಳನ್ನು ಜೊತೆಯಾಗಿ ತನಿಖೆ ನಡೆಸಲಿದ್ದು, ಕಳೆದ ಒಂದೂವರೆ ವರ್ಷದಲ್ಲಿ ನಡೆದ ಎಲ್ಲಾ ಘಟನೆಗಳ ತನಿಖೆಯನ್ನು ಒಟ್ಟಿಗೆ ನಡೆಸಲಾಗುವುದು.

ಈ ಭಯೋತ್ಪಾದಕ ಘಟನೆಗಳಿಗೆ ಕಾರಣರಾದವರನ್ನು ಆದಷ್ಟು ಬೇಗ ಶಿಕ್ಷಿಸಲಾಗುವುದು.

ಜಮ್ಮು ಮತ್ತು ಕಾಶ್ಮೀರದ ಭದ್ರತೆಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳೊಂದಿಗೆ ಭದ್ರತೆಯ ಎಲ್ಲಾ ಅಂಶಗಳ ಬಗ್ಗೆ ವಿವರವಾದ ಸಭೆಯನ್ನು ನಡೆಸಲಾಯಿತು, ಮುಂಬರುವ ದಿನಗಳಲ್ಲಿ ಅತ್ಯಂತ ಸುರಕ್ಷಿತ ಗ್ರಿಡ್ ಅನ್ನು ರಚಿಸುವ ಬಗ್ಗೆಯೂ ಚರ್ಚೆಗಳು ನಡೆದವು.

ಭಯೋತ್ಪಾದಕರಿಗೆ ಬೆಂಬಲ ಮತ್ತು ಮಾಹಿತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು 360 ಡಿಗ್ರಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಪಿಡುಗು ಪ್ರಾರಂಭವಾದ ಕಾಲಕ್ಕೆ ಹೋಲಿಸಿದರೆ, ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಘಟನೆಗಳು ಮತ್ತು ಸಾವುಗಳು ಸಂಭವಿಸಿವೆ.

ಭಯೋತ್ಪಾದಕ ಸಂಘಟನೆಗಳ ಉದ್ದೇಶ ಏನೇ ಆಗಿರಲಿ, ನಮ್ಮ ಭದ್ರತಾ ಸಂಸ್ಥೆಗಳು ಜಮ್ಮುವನ್ನು ರಕ್ಷಿಸಲು ಸನ್ನದ್ಧವಾಗಿರುತ್ತವೆ ಎಂದು ನಾನು ಜಮ್ಮುವಿನ ನಾಗರಿಕರಿಗೆ ಭರವಸೆ ನೀಡುತ್ತೇನೆ.

Posted On: 13 JAN 2023 7:25PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಕುರಿತಂತೆ ಜಮ್ಮುವಿನಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ, ಹಣಕಾಸು ಆಯುಕ್ತರು (ಎಸಿಎಸ್) ಗೃಹ, ಜಮ್ಮು ಮತ್ತು ಕಾಶ್ಮೀರದ ಡಿಜಿಪಿ, ಉತ್ತರ ಕಮಾಂಡ್ ನ ಕಮಾಂಡರ್,  ಸೇನೆ ಮತ್ತು ಗುಪ್ತಚರ ಹಾಗೂ ಬಿಎಸ್ಎಫ್ ಮತ್ತು ಸಿಆರ್.ಪಿ.ಎಫ್.ನ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ನಂತರ ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, "ರಜೌರಿ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರ ಕುಟುಂಬಗಳ ದುಃಖವನ್ನು ಹಂಚಿಕೊಳ್ಳುವುದು ನನ್ನ ಉದ್ದೇಶವಾಗಿತ್ತು, ಆದರೆ ಪ್ರತೀಕೂಲ ಹವಾಮಾನದಿಂದಾಗಿ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ, ನಾನು ಎಲ್ಲಾ ಕುಟುಂಬಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರ ದುಃಖದಲ್ಲಿ ಭಾಗಿಯಾಗುವ ಪ್ರಯತ್ನ ಮಾಡಿದೆ" ಎಂದು ಹೇಳಿದರು. ಆ ಎಲ್ಲಾ ಸಂತ್ರಸ್ತ ಕುಟುಂಬಗಳ ಧೈರ್ಯ ಇಡೀ ದೇಶಕ್ಕೆ ಮಾದರಿಯಾಗಿದೆ, ಅಂತಹ ದೊಡ್ಡ ಘಟನೆಯ ನಂತರವೂ ಕಠಿಣ ಹೋರಾಟದ ನೈತಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ವಿಷಯವಾಗಿದೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿ, ಎಲ್ಲಾ ಭದ್ರತಾ ಸಂಸ್ಥೆಗಳು ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಸಮರ ಸಾರಿ ಹೋರಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂತ್ರಸ್ತರ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ಅವರು ಹೇಳಿದರು. ಸಂಪೂರ್ಣ ಸಹಾನುಭೂತಿಯೊಂದಿಗೆ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪ್ರಯೋಜನಗಳನ್ನು ನೀಡಲಾಗುವುದು, ಇದರೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಅವರು ತಮ್ಮ ಅಧಿಕಾರದ ಅಡಿಯಲ್ಲಿ ಪರಿಹಾರ ಕ್ರಮ ಕೈಗೊಂಡು ಎಲ್ಲ ಸಾಧ್ಯ ನೆರವು ಒದಗಿಸುತ್ತಾರೆ ಎಂದು ಶ್ರೀ ಶಾ ಹೇಳಿದರು.

ಭದ್ರತೆಯ ಎಲ್ಲಾ ಆಯಾಮಗಳ ಬಗ್ಗೆ ಜಮ್ಮುವಿನ ಭದ್ರತಾ ಸಂಸ್ಥೆಗಳೊಂದಿಗೆ ವಿವರವಾದ ಸಭೆ ನಡೆಸಲಾಗಿದೆ, ಮುಂಬರುವ ದಿನಗಳಲ್ಲಿ ಅತ್ಯಂತ ಸುರಕ್ಷಿತ ಗ್ರಿಡ್ ಅನ್ನು ರಚಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಎಲ್ಲಾ ಭದ್ರತಾ ಸಂಸ್ಥೆಗಳು ಸಂಪೂರ್ಣವಾಗಿ ಸನ್ನದ್ಧವಾಗಿವೆ ಮತ್ತು ಅಂತಹ ಘಟನೆಗಳನ್ನು ತಡೆಗಟ್ಟಲು ಅವರ ನೈತಿಕ ಸ್ಥೈರ್ಯವು ಆತ್ಮವಿಶ್ವಾಸದಿಂದ ವರ್ಧಿಸಿದೆ ಎಂದು ಅವರು ಹೇಳಿದರು. ಈ ಎರಡು ದಿನಗಳಲ್ಲಿ ನಡೆದ ಭಯೋತ್ಪಾದಕ ಘಟನೆಗಳ ಬಗ್ಗೆ ಎನ್ಐಎ ಮತ್ತು ಜಮ್ಮು ಪೊಲೀಸರು ಜಂಟಿಯಾಗಿ ತನಿಖೆ ನಡೆಸಲಿದ್ದಾರೆ ಮತ್ತು ಕಳೆದ ಒಂದೂವರೆ ವರ್ಷಗಳಲ್ಲಿ ನಡೆದ ಎಲ್ಲಾ ಘಟನೆಗಳ ಬಗ್ಗೆ ತನಿಖೆಯನ್ನು ಒಟ್ಟಿಗೆ ನಡೆಸಲಿವೆ ಎಂದು ಅವರು ಹೇಳಿದರು.

ಭಯೋತ್ಪಾದಕ ಗುಂಪುಗಳಿಗೆ ಲಭಿಸುತ್ತಿರುವ ಬೆಂಬಲ ಮತ್ತು ಮಾಹಿತಿ ವ್ಯವಸ್ಥೆಗಳ ಬಗ್ಗೆಯೂ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿದ್ದು, ಎಲ್ಲಾ ಸಂಸ್ಥೆಗಳು ಸಂಪೂರ್ಣ 360 ಡಿಗ್ರಿ ಭದ್ರತಾ ವ್ಯವಸ್ಥೆಯನ್ನು ರಚಿಸುವ ಭರವಸೆ ನೀಡಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಭಯೋತ್ಪಾದಕ ದಾಳಿಗಳಿಗೆ ಕಾರಣರಾದವರನ್ನು ಆದಷ್ಟು ಬೇಗ ಶಿಕ್ಷೆಗೆ ಗುರಿಪಡಿಸಲಾಗುವುದು ಮತ್ತು ಕಠಿಣ ಶಿಕ್ಷೆ ಕೊಡಿಸಲಾಗುವುದು ಎಂದು ಶ್ರೀ ಶಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಪಿಡುಗು ಪ್ರಾರಂಭವಾದ ಕಾಲಕ್ಕೆ ಹೋಲಿಸಿದರೆ, ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಘಟನೆಗಳು ಮತ್ತು ಸಾವುಗಳು ಸಂಭವಿಸಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೂರು ತಿಂಗಳೊಳಗೆ ಜಮ್ಮುವಿನ ಪ್ರತಿಯೊಂದು ಪ್ರದೇಶದ ಭದ್ರತಾ ಗ್ರಿಡ್ ಅನ್ನು ಮತ್ತಷ್ಟು ಬಲಪಡಿಸುವ ಮೂಲಕ ಅಭೇದ್ಯಗೊಳಿಸಲಾಗುವುದು ಎಂದು ಅವರು ಹೇಳಿದರು. ಭಯೋತ್ಪಾದಕ ಸಂಘಟನೆಗಳ ಉದ್ದೇಶ ಏನೇ ಆಗಿರಲಿ, ನಮ್ಮ ಭದ್ರತಾ ಸಂಸ್ಥೆಗಳು ಜಮ್ಮುವನ್ನು ರಕ್ಷಿಸಲು ಸಜ್ಜಾಗಿರುತ್ತವೆ ಎಂದು ನಾನು ಜಮ್ಮುವಿನ ನಾಗರಿಕರಿಗೆ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.

****


(Release ID: 1891143) Visitor Counter : 177


Read this release in: English , Urdu , Assamese , Gujarati