ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತನ್ನ 18 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ


ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಯುವ ದಿನದ ಅಂಗವಾಗಿ ಇಂದು ಆಯೋಗದಿಂದ ರಸಪ್ರಶ್ನೆಯನ್ನು ಪ್ರಾರಂಭಿಸಲಾಯಿತು

ಎನ್ಸಿಪಿಸಿಆರ್ ಜಾಲತಾಣದಲ್ಲಿ  ರಸಪ್ರಶ್ನೆಗಾಗಿ ಒದಗಿಸಲಾಗಿರುವ ಕೊಂಡಿ https://ncpcr.gov.in/champions

Posted On: 12 JAN 2023 7:20PM by PIB Bengaluru

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತನ್ನ 18 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭವನ್ನು ಸಂಪೂರ್ಣವಾಗಿ ಮಕ್ಕಳಿಗೆ ಸಮರ್ಪಿಸಲು, 2023 ರ ಜನವರಿ 12 ರಂದು ರಾಷ್ಟ್ರೀಯ ಯುವ ದಿನ (ಸ್ವಾಮಿ ವಿವೇಕಾನಂದ ಜಯಂತಿ) ಸಂದರ್ಭದಲ್ಲಿ ಆಯೋಗವು ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮತ್ತು ಈ ರಸಪ್ರಶ್ನೆಯ ಮೂಲಕ ಮಕ್ಕಳ ಹಕ್ಕುಗಳ ಪ್ರತಿಪಾದಕ ಚಾಂಪಿಯನ್ ಗಳನ್ನು ರೂಪಿಸಲು ರಸಪ್ರಶ್ನೆಯನ್ನು ಪ್ರಾರಂಭಿಸಿದೆ. ಶಾಲಾ ವಿದ್ಯಾರ್ಥಿಗಳು, ವಸತಿ ನಿಲಯಗಳಲ್ಲಿ ವಾಸಿಸುವ ಮಕ್ಕಳು, ಮಕ್ಕಳ ಆರೈಕೆ ಸಂಸ್ಥೆಗಳಲ್ಲಿ (ಸಿಸಿಐ) ವಾಸಿಸುವ ಮಕ್ಕಳು ಮತ್ತು ದೇಶಾದ್ಯಂತ ಬೀದಿ ಮಕ್ಕಳು ಆನ್ಲೈನ್ ಮತ್ತು ಆಫ್ ಲೈನ್  ಮೂಲಕ ವ್ಯಾಪಕವಾಗಿ  ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.   ಇದು ಅವರ ಹಕ್ಕುಗಳಿಗಾಗಿ ಮಕ್ಕಳನ್ನು ಸಶಕ್ತಗೊಳಿಸಲು ಒಂದು ವೇದಿಕೆಯಾಗಿದೆ, ರಸಪ್ರಶ್ನೆಯು ಮಕ್ಕಳು  ತಿಳಿದಿರಬೇಕಾದ ಬಹಳ ಮುಖ್ಯವಾದ ಎಲ್ಲಾ ವಿಷಯಗಳನ್ನು ಒಳಗೊಂಡಿದೆ.

ರಸಪ್ರಶ್ನೆಗೆ  ಚಾಲನೆ ನೀಡಿದ  ಎನ್.ಸಿ.ಪಿ.ಸಿ.ಆರ್. ಅಧ್ಯಕ್ಷರಾದ ಶ್ರೀ ಪ್ರಿಯಾಂಕ್ ಕನೂಂಗೊ ಅವರು ಈ ರಸಪ್ರಶ್ನೆಯ ಕಾರ್ಯಕ್ರಮವನ್ನು  ಪ್ರಾರಂಭಿಸಲು ರಾಷ್ಟ್ರೀಯ ಯುವ ದಿನಕ್ಕಿಂತ ಉತ್ತಮ ದಿನ ಇನ್ನೊಂದಿಲ್ಲ ಎಂದು ಹೇಳಿದರು. ನಮಗೆಲ್ಲರಿಗೂ ತಿಳಿದಿರುವಂತೆ, ಸ್ವಾಮಿ ವಿವೇಕಾನಂದರು ಜ್ಞಾನ ಮತ್ತು ಸಕಾಲಿಕ ಮಾಹಿತಿಯ ಮೂಲಕ ನಮ್ಮನ್ನು ನಾವು ಅರಿತುಕೊಳ್ಳುವ ಮತ್ತು ಸಶಕ್ತಗೊಳಿಸುವ ಮೂಲಕ ಆದರ್ಶ ಸಮಾಜವನ್ನು ಹೇಗೆ ನಿರ್ಮಿಸಬಹುದು ಎಂಬ ಸಂದೇಶವನ್ನು ನೀಡಿದರು. ಇದರಿಂದ ಸ್ಫೂರ್ತಿ ಪಡೆದು, ನಾವು ದೇಶದ ಮಕ್ಕಳಲ್ಲಿ ಮಕ್ಕಳ ಹಕ್ಕುಗಳ ಪ್ರತಿಪಾದಕರಾದ ಚಾಂಪಿಯನ್ ಗಳನ್ನು ರೂಪಿಸಲು ನಿರ್ಧರಿಸಿದ್ದೇವೆ, ಅವರು ಮಕ್ಕಳ ಹಕ್ಕುಗಳ ಜಾಗೃತಿಯ ಈ ಅಭಿಯಾನವನ್ನು ಮುನ್ನಡೆಸುತ್ತ ಮತ್ತು ಸಶಕ್ತರಾಗುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಹಾದಿ ನಿರ್ಮಾಣ ಮಾಡುತ್ತಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ ಭಾರತ ನಿರ್ಮಾಣಕ್ಕಾಗಿ ಮಾಡುತ್ತಿರುವ ಪ್ರಯತ್ನಗಳಿಗೆ ಇದು ಆಯೋಗದ ಸಣ್ಣ ಕೊಡುಗೆಯಾಗಿದೆ, ಇದರಿಂದ ದೇಶದಲ್ಲಿ ಸಂಪೂರ್ಣವಾಗಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಬಹುದು ಎಂದವರು ಹೇಳಿದರು. 

ರಸಪ್ರಶ್ನೆಯಲ್ಲಿ ಕೇಳುವ ಪ್ರಶ್ನೆಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಈ ರೀತಿಯ ಮೊದಲ ಬೃಹತ್  ಕಾರ್ಯಕ್ರಮವಾಗಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸಲಿದ್ದಾರೆ. ಭಾಗವಹಿಸುವವರು ತಮ್ಮ ಸ್ವಂತ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ, ಈ ಮೂಲಕ, ದೇಶಾದ್ಯಂತದ ಮಕ್ಕಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸಲು ಒಂದು ವಾತಾವರಣ ನಿರ್ಮಾಣವಾಗಲಿದೆ. 

ರಸಪ್ರಶ್ನೆಯನ್ನು ನಿಗದಿತ ವಯಸ್ಸಿನ ಗುಂಪುಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ವಯೋಮಾನದನ್ವಯ  ರಸಪ್ರಶ್ನೆಯಲ್ಲಿ ಭಾಗವಹಿಸುತ್ತಾರೆ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ಎನ್.ಸಿ.ಪಿ.ಸಿ.ಆರ್.ನ ಜಾಲತಾಣ www.ncpcr.gov.in ನಲ್ಲಿ ವಿವಿಧ ಶೀರ್ಷಿಕೆಗಳ  ಅಡಿಯಲ್ಲಿ ರಸಪ್ರಶ್ನೆಗಾಗಿ ಕೊಂಡಿಯನ್ನು (ಲಿಂಕ್; https://ncpcr.sov.in/champions) ಒದಗಿಸಲಾಗಿದೆ, ಅಲ್ಲಿ ಮಕ್ಕಳು ತಮ್ಮ ವಯಸ್ಸಿನ ಗುಂಪಿಗೆ ಅನುಗುಣವಾಗಿ ಆನ್ಲೈನ್ ಅಥವಾ ಆಫ್ ಲೈನಿನಲ್ಲಿ ಭಾಗವಹಿಸಬಹುದು.  ರಸಪ್ರಶ್ನೆಯಲ್ಲಿ ಜೆ.ಜೆ. ಕಾಯ್ದೆ, ಪೋಕ್ಸೊ ಕಾಯ್ದೆ, ಆರ್.ಟಿ.ಇ. ಕಾಯ್ದೆ ಮತ್ತು ಬಾಲಕಾರ್ಮಿಕ ಕಾಯ್ದೆ, ಶಾಲಾ ಸುರಕ್ಷತೆ, ವಿಪತ್ತು ನಿರ್ವಹಣೆ, ಸೈಬರ್ ಸುರಕ್ಷತೆ, ಲೈಂಗಿಕ ಹಿಂಸಾಚಾರ ಮತ್ತು ಇತರ ಹಿಂಸಾಚಾರ, ಬಾಲ್ಯವಿವಾಹ, ಆರೋಗ್ಯ ಮತ್ತು ಪೋಷಣೆ ಸೇರಿದಂತೆ ಮಕ್ಕಳ ಹಕ್ಕುಗಳ ಕುರಿತಂತೆ ಮೂಲಭೂತ ಪ್ರಶ್ನೆಗಳನ್ನು ಒಳಗೊಂಡ ನೂರಾರು ಪ್ರಶ್ನೆಗಳ “ಪ್ರಶ್ನೆ ಬ್ಯಾಂಕ್” ಇದ್ದು, ಭಾಗವಹಿಸುವ ಮಕ್ಕಳಿಗೆ ಎಲ್ಲಾ ವಿಷಯಗಳ ಬಗ್ಗೆ 10 ಪ್ರಶ್ನೆಗಳ ಪ್ರಶ್ನೆಪತ್ರಿಕೆಯನ್ನು ನೀಡಲಾಗುವುದು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ಒದಗಿಸಲಾಗುತ್ತದೆ, ಅದರಲ್ಲಿ ಸ್ಪರ್ಧಿಗಳು ಸರಿಯಾದ ಉತ್ತರವನ್ನು ಆಯ್ಕೆ ಮಾಡಬೇಕಾಗುತ್ತದೆ.

ಈ ರಸಪ್ರಶ್ನೆಯನ್ನು ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರದ ಅಥವಾ ಆನ್ ಲೈನ್  ರಸಪ್ರಶ್ನೆ ಪತ್ರಿಕೆಯನ್ನು ಯನ್ನು ಪ್ರವೇಶಿಸಲು ಅವಶ್ಯವಾದ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಹೊಂದಿರದ ಮಕ್ಕಳಿಗೆ ಲಭ್ಯವಾಗುವಂತೆ ಮಾಡಲು, ಆಫ್ ಲೈನ್  ಸೌಲಭ್ಯವನ್ನು ಒದಗಿಸಲಾಗಿದೆ. ಡಿಜಿಟಲ್ ಅಂತರಕ್ಕಾಗಿ ಲಿಂಕ್ ನಲ್ಲಿ (ಕೊಂಡಿಯಲ್ಲಿ) ಪ್ರತ್ಯೇಕ ಕಿಟಕಿಯನ್ನು ತೆರೆಯಲಾಗುವುದು ಮತ್ತು ಶಾಲಾ ಪ್ರಾಂಶುಪಾಲರು, ಸಿಸಿಐಗಳ ಅಧೀಕ್ಷಕರು ಮತ್ತು ಡಿಸಿಪಿಒಗಳು ಮಕ್ಕಳಿಗೆ ವಿತರಿಸಲು ನಿಗದಿಪಡಿಸಿದ ರಸಪ್ರಶ್ನೆಯನ್ನು ಡೌನ್ಲೋಡ್ ಮಾಡಬಹುದು. ವಿದ್ಯಾರ್ಥಿಗಳು ಈ ರಸಪ್ರಶ್ನೆಯನ್ನು ಭರ್ತಿ ಮಾಡಿದ ನಂತರ, ಅದನ್ನು ಸ್ಕ್ಯಾನ್ ಮಾಡಬಹುದು ಮತ್ತು ಲಿಂಕ್ ನಲ್ಲಿ ಅಪ್ ಲೋಡ್ ಮಾಡಬಹುದು. ಆಯೋಗದ ವೆಬ್ ಸೈಟಿನಲ್ಲಿ  ಲಭ್ಯವಿರುವ ರಸಪ್ರಶ್ನೆಯ ಕೊಂಡಿಯು ರಾಷ್ಟ್ರೀಯ ಯುವ ದಿನದಿಂದ (ಸ್ವಾಮಿ ವಿವೇಕಾನಂದ ಜಯಂತಿ) ಆರಂಭಗೊಂಡು  ಫೆಬ್ರವರಿ 28 ರವರೆಗೆ ಆನ್ ಲೈನಿನಲ್ಲಿ ಇರುತ್ತದೆ. ಆಫ್ ಲೈನ್  ಮಾಧ್ಯಮದ ಮೂಲಕ ರಸಪ್ರಶ್ನೆಯಲ್ಲಿ ಭಾಗವಹಿಸುವ ಮಕ್ಕಳ ಪಟ್ಟಿಯನ್ನು 2023ರ ಫೆಬ್ರವರಿ 20, ರೊಳಗೆ ಆಯೋಗಕ್ಕೆ ಸಲ್ಲಿಸಬೇಕು.

ಆನ್ ಲೈನ್ ಅಥವಾ ಆಫ್ ಲೈನ್ ಮೋಡ್ ಮೂಲಕ ರಸಪ್ರಶ್ನೆಯಲ್ಲಿ ಭಾಗವಹಿಸುವ ಮಗುವಿಗೆ ರಸಪ್ರಶ್ನೆಯನ್ನು ಪೂರ್ಣಗೊಳಿಸಿದ ನಂತರ, ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಆಫ್ ಲೈನ್  ಮೋಡ್ ಮೂಲಕ ರಸಪ್ರಶ್ನೆಯಲ್ಲಿ ಭಾಗವಹಿಸುವ ಮಕ್ಕಳ ಪಟ್ಟಿಯನ್ನು ಆಯಾ ಅಧಿಕಾರಿಗಳಿಂದ ಪಡೆಯಲಾಗುತ್ತದೆ ಮತ್ತು ಅವರಿಗೆ ಮಕ್ಕಳ ಹಕ್ಕುಗಳ ಪತಿಪಾದಕ ಚಾಂಪಿಯನ್ ನಲ್ಲಿ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು. ಇದರೊಂದಿಗೆ, ಈ ರಸಪ್ರಶ್ನೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಭಾಗವಹಿಸಿದ  ರಾಜ್ಯಗಳನ್ನು ಆಯೋಗವು ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಗೌರವಿಸುತ್ತದೆ.

ರಸಪ್ರಶ್ನೆಯಲ್ಲಿ ಮಕ್ಕಳ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರಕಾರದ ಸಂಸ್ಥೆಗಳಾದ ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ, ಸಿಬಿಎಸ್ಇ ಮತ್ತು ರಾಜ್ಯ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳಿಗೆ ಪತ್ರಗಳನ್ನು ಬರೆಯಲಾಗಿದೆ.

ಆಯೋಗದ ಬಗ್ಗೆ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಇನ್ನು ಮುಂದೆ ಆಯೋಗ ಎಂದು ಉಲ್ಲೇಖಿಸಲಾಗುತ್ತದೆ) ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು  ಮತ್ತು ಆ ಸಂಬಂಧಿತ ಇತರ ವಿಷಯಗಳಿಗಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಸಿಪಿಸಿಆರ್) ಕಾಯ್ದೆ, 2005 ರ ಸೆಕ್ಷನ್ 3 ರ ಅಡಿಯಲ್ಲಿ ರಚಿಸಲಾದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012 ರ ಸರಿಯಾದ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಕಡ್ಡಾಯ ಕರ್ತವ್ಯವನ್ನು  ಆಯೋಗಕ್ಕೆ ನಿಗದಿ ಮಾಡಲಾಗಿದೆ.  ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್ ಟಿಇ) ಕಾಯ್ದೆ, 2009ರ ಅನುಷ್ಟಾನವೂ ಇದರಲ್ಲಿ ಸೇರಿದೆ. . ಸಿಪಿಸಿಆರ್ ಕಾಯ್ದೆ, 2005 ರ ಸೆಕ್ಷನ್ 13 ರ ಅಡಿಯಲ್ಲಿ ಹೇಳಲಾದ  ಕಾರ್ಯಗಳಲ್ಲಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಅನ್ವಯ ಅಥವಾ ಅದರ ಅಡಿಯಲ್ಲಿ ಒದಗಿಸಲಾದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಹಾಗು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮಗಳನ್ನು ಶಿಫಾರಸು ಮಾಡುವ ಕಾರ್ಯವನ್ನು ಆಯೋಗಕ್ಕೆ ವಹಿಸಲಾಗಿದೆ. ಸಿಪಿಸಿಆರ್ ಕಾಯ್ದೆ, 2005ರ ಸೆಕ್ಷನ್ 14 ಮತ್ತು ಸಿವಿಲ್ ಪ್ರಕ್ರಿಯಾ ಸಂಹಿತೆ, 1908ರ ಅಡಿಯಲ್ಲಿ ದಾವೆ ವಿಚಾರಣೆ ಮಾಡುವ  ಸಿವಿಲ್ ನ್ಯಾಯಾಲಯದ ಅಧಿಕಾರವನ್ನೂ ಆಯೋಗವು ಹೊಂದಿದೆ.

*****



(Release ID: 1890955) Visitor Counter : 415


Read this release in: Bengali , English , Urdu , Hindi