ಆಯುಷ್
azadi ka amrit mahotsav

ಇನ್ನೆರಡು  ಆಯುಷ್ ಸಂಸ್ಥೆಗಳಿಗೆ ಎನ್ಎಬಿಎಚ್ ಮತ್ತು ಎನ್ಎಬಿಎಲ್ ಮಾನ್ಯತೆ


ಇನ್ನೆರಡು ಆಯುಷ್ ಸಂಸ್ಥೆಗಳು ಎನ್ಎಬಿಎಚ್ ಮತ್ತು ಎನ್ಎಬಿಎಲ್ ಮಾನ್ಯತೆ ಪಡೆದ ಸಂಸ್ಥೆಗಳ ಪ್ರತಿಷ್ಠಿತ ತಂಡಕ್ಕೆ (ಲೀಗ್) ಸೇರ್ಪಡೆ

ಹೊಸದಿಲ್ಲಿಯ ಕೇಂದ್ರೀಯ ಆಯುರ್ವೇದ ರಿಸರ್ಚ್ ಇನ್ಸ್ಟಿಟ್ಯೂಟ್ , ಎನ್ಎಬಿಎಚ್ ಮಾನ್ಯತೆ ಪಡೆದ, ಸಿ.ಸಿ.ಆರ್.ಎ. ಎಸ್. ಅಡಿಯಲ್ಲಿರುವ  ಮೊದಲ ಸಂಸ್ಥೆ

Posted On: 22 DEC 2022 6:53PM by PIB Bengaluru

ಆಯುಷ್ ಗಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯ ನಡುವೆ, ಭಾರತೀಯ ವೈದ್ಯಪದ್ಧತಿಗಳ ಕ್ಷೇತ್ರದಲ್ಲಿನ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ವೈದ್ಯಕೀಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಮೇಲ್ದರ್ಜೆಗೇರಿಸುವುದನ್ನು ಮುಂದುವರಿಸಿವೆ. ಆಯುಷ್ ಸಚಿವಾಲಯದ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (ಸಿ.ಸಿ.ಆರ್.ಎ.ಎಸ್) ಅಡಿಯಲ್ಲಿ ಎರಡು ಪ್ರಮುಖ ಸಂಸ್ಥೆಗಳಾದ ಹೊಸದಿಲ್ಲಿಯ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (ಸಿ.ಎ.ಆರ್.ಐ.) ಮತ್ತು ಝಾನ್ಸಿಯ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗಳು ಕ್ರಮವಾಗಿ ಎನ್ಎಬಿಎಚ್ ಮತ್ತು ಎನ್ಎಬಿಎಲ್ ಮಾನ್ಯತೆ ಪಡೆದಿವೆ.

ಎನ್.ಎ.ಬಿ.ಎಚ್. ಸಂಸ್ಥೆಯು ಆರೋಗ್ಯ ಸಂಸ್ಥೆಗಳಿಗೆ ಮಾನ್ಯತೆ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ನಿರ್ವಹಿಸಲು ಸ್ಥಾಪಿಸಲಾದ ಭಾರತೀಯ ಗುಣಮಟ್ಟ ಮಂಡಳಿಯ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಒಂದು ಘಟಕ ಸಂಸ್ಥೆಯಾಗಿದೆ ಎಂಬುದು ಗಮನಾರ್ಹ. ಮಾನ್ಯತೆಯು ರೋಗಿಯ ಸುರಕ್ಷತೆ ಮತ್ತು ರಾಷ್ಟ್ರೀಯ / ಅಂತರರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು  ಆಧರಿಸಿರುತ್ತದೆ. 

ಈ ಸಾಧನೆಯ ಹಿನ್ನೆಲೆಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ಅವರು ಎರಡೂ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅವರ ಸಮರ್ಪಣಾ ಭಾವ ಮತ್ತು ನಿರಂತರ ಪ್ರಯತ್ನಗಳಿಗಾಗಿ ಅಭಿನಂದಿಸಿದ್ದಾರೆ. ಹೊಸದಿಲ್ಲಿಯ ಆಯುಷ್ ಭವನದಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ಆಯುಷ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ಶ್ರೀ ಪ್ರಮೋದ್ ಕುಮಾರ್ ಪಾಠಕ್, ಮತ್ತು ಉಭಯ  ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.  

ಹೊಸದಿಲ್ಲಿಯ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಯು 1979 ರಲ್ಲಿ ಆಯುಷ್ ಸಚಿವಾಲಯದ ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಮಂಡಳಿ (ಸಿ.ಸಿ.ಆರ್.ಎ.ಎಸ್) ಅಡಿಯಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು ಅದು ಆಯುರ್ವೇದದಲ್ಲಿ ಕ್ಲಿನಿಕಲ್ ಸಂಶೋಧನೆಗೆ ಸಮರ್ಪಿತವಾಗಿದೆ ಹಾಗು ಆಯುರ್ವೇದದಲ್ಲಿ ವಿಶೇಷ ಒಪಿಡಿ, ಸಾಮಾನ್ಯ ಒಪಿಡಿ, ಹೃದಯ ರೋಗ ತಡೆಗಟ್ಟುವಿಕೆ (ಪ್ರಿವೆಂಟಿವ್ ಕಾರ್ಡಿಯಾಲಜಿ) ಮತ್ತು ಜೀವನಶೈಲಿ ಬದಲಾವಣೆಗಳು, ಕಿವಿ, ಮೂಗು ಮತ್ತು ಗಂಟಲು  ಒಪಿಡಿ, ವೃದ್ಧರ ಆರೋಗ್ಯ ಆರೈಕೆ (ಜೆರಿಯಾಟ್ರಿಕ್) ಒಪಿಡಿ, ಬಾಲರೋಗ, ಸಂಧಿರೋಗ,  ಕ್ಲಿನಿಕಲ್ ಮನೋ ವೈದ್ಯಕೀಯ ಚಿಕಿತ್ಸೆ, ಮತ್ತು ಮರ್ಮ ಚಿಕಿತ್ಸಾ ಒಪಿಡಿಗಳ ಮೂಲಕ ಆರೋಗ್ಯ ರಕ್ಷಣಾ ಸೇವೆಯನ್ನು ಒದಗಿಸುತ್ತಿದೆ. ಇಂತಹ ನಿರ್ಣಾಯಕ ಆರೋಗ್ಯ ಸೇವೆಗಳೊಂದಿಗೆ, ಎನ್ಎಬಿಎಚ್ ಮಾನ್ಯತೆಯು ವ್ಯಾಪಕ ಶ್ರೇಣಿಯ ಆರೋಗ್ಯ ಆರೈಕೆ ಉದ್ದೇಶಗಳಿಗಾಗಿ ಸಂಸ್ಥೆಗೆ ಭೇಟಿ ನೀಡುವ ಸಾವಿರಾರು ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ.  

ಸಿ.ಸಿ.ಆರ್.ಎ.ಎಸ್- ಸಿ.ಎ.ಆರ್.ಐ., ಝಾನ್ಸಿ (ಯು.ಪಿ.)ಗೆ

ಎನ್ಎಬಿಎಲ್ ಮಾನ್ಯತೆ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ, ಝಾನ್ಸಿ (ಯು.ಪಿ.) ಆಯುಷ್ ಸಚಿವಾಲಯದ ಸಿ.ಸಿ.ಆರ್.ಎ.ಎಸ್. ನ ಪ್ರಮುಖ (ಪ್ರೀಮಿಯಂ) ಸಂಸ್ಥೆಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು (ರಸಾಯನಶಾಸ್ತ್ರ, ಸೂಕ್ಷ್ಮಜೀವಾಣು ಶಾಸ್ತ್ರ, ಫಾರ್ಮಾಕೊಗ್ನೋಸಿ), ಆಯುರ್ವೇದಿಕ್ ಫಾರ್ಮಸಿ, ಕೇಂದ್ರೀಯ ಹರ್ಬೇರಿಯಂ ಮತ್ತು ಮ್ಯೂಸಿಯಂ ಹಾಗು ನ್ಯಾಷನಲ್ ರಾ ಡ್ರಗ್ಸ್ ರೆಪೊಸಿಟರಿ (ಎನ್.ಆರ್.ಡಿ.ಆರ್.) ಗಳನ್ನು ಅದು ಹೊಂದಿದೆ. 

ಈ ಎರಡು ಸಿ.ಸಿ.ಆರ್.ಎ.ಎಸ್.  ಸಂಸ್ಥೆಗಳಲ್ಲದೆ, ಕೇರಳದ ತ್ರಿಶೂರಿನ  ಚೆರುತುರುತಿಯಲ್ಲಿರುವ ಪಂಚಕರ್ಮ ರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (ಎನ್.ಎ.ಆರ್.ಐ.ಪಿ) ತನ್ನ ಕ್ಲಿನಿಕಲ್ ಪ್ರಯೋಗಾಲಯ ಸೇವೆಗಳಿಗಾಗಿ ಎನ್ಎಬಿಎಲ್ ಎಂ (ಇಎಲ್) ಟಿ ಮಾನ್ಯತೆಯನ್ನು ಪಡೆದಿದೆ. ಕೇರಳದ ಎನ್.ಎ.ಆರ್.ಐ.ಪಿ.ಯು ಆಯುಷ್ ಸಚಿವಾಲಯದ ಆಯುರ್ವೇದ ವಿಜ್ಞಾನಗಳ ಕೇಂದ್ರೀಯ ಸಂಶೋಧನಾ ಮಂಡಳಿಯ ಅಡಿಯಲ್ಲಿನ ಪ್ರಮುಖ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ.

****

 


(Release ID: 1885929) Visitor Counter : 159


Read this release in: English , Urdu , Hindi , Punjabi