ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಪರಸ್ಪರ ನಂಬಿಕೆ ಮತ್ತು ಪ್ರಯೋಜನದ ತತ್ವಗಳ ಆಧಾರದ ಮೇಲೆ ಎಸ್.ಸಿ.ಓ ತನ್ನ ಆಂತರಿಕ ನೀತಿಯನ್ನು ಅನುಸರಿಸುತ್ತದೆ ಎಂದು ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ನ್ಯಾಯಾಂಗ ಸಚಿವರ ಒಂಬತ್ತನೇ ಸಭೆಯಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್ ರಿಜಿಜು ಹೇಳಿದರು.

Posted On: 09 DEC 2022 7:24PM by PIB Bengaluru

ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಓ.) ಸದಸ್ಯ ರಾಷ್ಟ್ರಗಳ ನ್ಯಾಯ ಸಚಿವರ ಒಂಬತ್ತನೇ ಸಭೆಯಲ್ಲಿ ಇಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್ ರಿಜಿಜು ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಅವರು ಭಾಗವಹಿಸಿದರು.

ಇದಕ್ಕೂ ಮುನ್ನ, ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಜ್ವೀರ್ ಸಿಂಗ್ ವರ್ಮಾ ಅವರು 2022 ರ ಡಿಸೆಂಬರ್ 7 ರಂದು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ತಜ್ಞರ ಕಾರ್ಯಕಾರಿ ತಂಡದ ಮೂರನೇ ಸಭೆಯನ್ನು ಪ್ರತಿನಿಧಿಸಿದರು.
 
ವೀಡಿಯೊ ಕಾನ್ಫರೆನ್ಸಿಂಗ್ ಮೋಡ್ (ದೃಶ್ಯ ಸಮಾಲೋಚನಾ ವಿಧಾನದ) ಮೂಲಕ ಈ ಸಭೆಗಳನ್ನು ನಡೆಸಲಾಯಿತು.
 
ಈ ಸಭೆಯಲ್ಲಿ ಭಾರತ ಗಣರಾಜ್ಯದ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಕಜಾಕಿಸ್ತಾನ ಗಣರಾಜ್ಯದ ಉಪ ನ್ಯಾಯಮಂತ್ರಿ ಮುಕನೋವಾ ಅಲ್ಮಾ ಕೈರಾಟೋವ್ನಾ, ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ನ್ಯಾಯ ಸಚಿವ ತಾನ್ ಯಿಜುನ್, ಕಿರ್ಗಿಜ್ ಗಣರಾಜ್ಯದ ನ್ಯಾಯಾಂಗ ಉಪಮಂತ್ರಿ ಬಕ್ತಿಯಾರ್ ಸೈಪಿಡಿನೋವಿಚ್ ಒರೊಜೊವ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಕಾನೂನು ಮತ್ತು ನ್ಯಾಯ ಸಚಿವ, ಸೆನೇಟರ್ ಅಜಂ ನಜೀರ್ ತರಾರ್, ರಷ್ಯನ್ ಒಕ್ಕೂಟದ ಮೊದಲ ಡೆಪ್ಯುಟಿ ಮಿನಿಸ್ಟರ್ ಆಫ್ ಜಸ್ಟೀಸ್ ಎವ್ಗೆನಿ ಲಿಯೊನಿಡೋವಿಚ್ ಜಬರ್ಚುಕ್, ತಜಾಕಿಸ್ತಾನ ಗಣರಾಜ್ಯದ ನ್ಯಾಯ ಸಚಿವ ಅಷುರಿಯಾನ್ ಮುಜಾಫರ್ ಖುರ್ಬೊನ್ಮುಖಮ್ಮದ್ ಮತ್ತು ಉಜ್ಬೇಕಿಸ್ತಾನ ಗಣರಾಜ್ಯದ ನ್ಯಾಯ ಸಚಿವ ತಾಷ್ಕೆಂಟ್ ಅಕ್ಬರ್ ಝುರಾಬಾಯೆವಿಚ್ ಭಾಗವಹಿಸಿದ್ದರು. ಸಭೆಯಲ್ಲಿ ಎಸ್.ಸಿ.ಓ.ದ ಉಪ ಪ್ರಧಾನ ಕಾರ್ಯದರ್ಶಿ ಆಶಿಮೊವ್ ಎರಿಕ್ ಸರ್ಸೆಬೆಕೊವಿಚ್ ಕೂಡ ಭಾಗವಹಿಸಿದ್ದರು. 
 
ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ನ್ಯಾಯ ಮಂತ್ರಿಗಳ ಪ್ರಮುಖ ಸಭೆಯನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಕಿರಣ್ ರಿಜಿಜು, ಈ ಅಧಿವೇಶನವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ 2001 ರ ಜೂನ್ 15 ರಂದು ರಚನೆಯಾದ ಎಸ್.ಸಿ.ಓ. 21 ವರ್ಷಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿ, ಭಾರತೀಯ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳನ್ನು ಸ್ಮರಿಸಲು ಭಾರತ ಸರ್ಕಾರದ ಉಪಕ್ರಮವಾದ "ಸ್ವಾತಂತ್ರ್ಯದ ಅಮೃತ ಮಹೋತ್ಸವ"ವನ್ನು ಆಚರಿಸುತ್ತಿದೆ. ಈ ಆಚರಣೆಯು ಎಸ್.ಸಿ.ಓ.ವನ್ನು ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆ ಮತ್ತು ಗೌರವವನ್ನು ಬಲಪಡಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿದ್ದರಿಂದ, ಅದರ ಮನೋಭಾವಕ್ಕೆ ಅನುಗುಣವಾಗಿದೆ ಎಂದು ಒತ್ತಿಹೇಳಿದರು. ಪರಸ್ಪರ ನಂಬಿಕೆ ಮತ್ತು ಪ್ರಯೋಜನ, ಸಮಾನ ಹಕ್ಕುಗಳು, ಸಮಾಲೋಚನೆಗಳು, ಸಂಸ್ಕೃತಿಗಳ ವೈವಿಧ್ಯತೆಗೆ ಗೌರವ ಮತ್ತು ಸಾಮಾನ್ಯ ಅಭಿವೃದ್ಧಿಯೆಡೆಗಿನ ಆಕಾಂಕ್ಷೆಯ ತತ್ವಗಳನ್ನು ಆಧರಿಸಿ ಎಸ್.ಸಿ.ಓ. ತನ್ನ ಆಂತರಿಕ ನೀತಿಯನ್ನು ಅನುಸರಿಸುತ್ತದೆ ಎಂದು ಹೇಳಿದರು. 
 
ಕೋವಿಡ್-19ರ ಸಾಂಕ್ರಾಮಿಕ ಕಾಲದ ಕಠಿಣ ಸಮಯದಲ್ಲಿ ನಮ್ಮ ಸರ್ಕಾರದ ಮೇಲೆ ದೀರ್ಘಕಾಲದ ಪ್ರಯತ್ನಗಳ ನಂತರ ಸ್ಥಾಪಿಸಲಾದ "ಭಾರತೀಯ ನ್ಯಾಯಾಂಗದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಅನುಷ್ಠಾನಕ್ಕಾಗಿ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯ" ಆಧಾರಿತ ರಾಷ್ಟ್ರೀಯ ಇ-ಆಡಳಿತ ಯೋಜನೆಯ ಅಂಗವಾಗಿ ಭಾರತ ಸರ್ಕಾರದ ನಿಯೋಗದ ಯೋಜನೆಯಾಗಿ ಪರಿಕಲ್ಪನೆಗೊಂಡ ಇ-ಕೋರ್ಟ್ಸ್ ಯೋಜನೆಯನ್ನು ಅವರು ಉಲ್ಲೇಖಿಸಿ, ಈ ತಂತ್ರಜ್ಞಾನವು ನ್ಯಾಯ ವಿತರಣೆಯ ಎಲ್ಲಾ ಕಾರ್ಯಗಳನ್ನು ಸಾರಸ್ವರೂಪವಾಗಿ (ವರ್ಚುವಲ್ ನಲ್ಲಿ) ನಿರ್ವಹಿಸಲು ನ್ಯಾಯಾಲಯಗಳಿಗೆ ಸಹಾಯ ಮಾಡಿದೆ. ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯಾಂಗ ಇಲಾಖೆ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ 2007 ರಿಂದ ಜಾರಿಯಲ್ಲಿದೆ. ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದ್ದು, ನ್ಯಾಯ ವಿತರಣಾ ವ್ಯವಸ್ಥೆಯನ್ನು ಸುಗಮವಾಗಿ ಬಳಸಲು, ಕಡಿಮೆ ವೆಚ್ಚದ ಪರಿಣಾಮಕಾರಿ, ಪಾರದರ್ಶಕ, ಉತ್ತರದಾಯಿತ್ವ, ದಕ್ಷ ಮತ್ತು ನಿರ್ದಿಷ್ಟ ಕಾಲಮಿತಿಯನ್ನು ತಲುಪಲು ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ನ್ಯಾಯಾಂಗ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಅಡಿಯಲ್ಲಿನ ಸೇವೆಗಳು ನ್ಯಾಯಾಂಗ, ಉಚ್ಚ ನ್ಯಾಯಾಲಯಗಳು, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳು ಮತ್ತು ನಾಗರಿಕರು / ಕಕ್ಷಿದಾರರು / ವಕೀಲರು / ನ್ಯಾಯವಾದಿಗಳು ಸೇರಿದಂತೆ ಎಲ್ಲಾ ಪ್ರಮುಖ ಸಹಯೋಗಿಗಳ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂದು ತಿಳಿಸಿದರು.
 
ದೇಶದ ನಾಗರಿಕರಿಗೆ ತ್ವರಿತ, ಪಾರದರ್ಶಕ ಮತ್ತು ಸುಲಭಪ್ರದ ಆಯ್ಕೆಯನ್ನು ಒದಗಿಸುವ ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನವನ್ನು ಅವರು ಎತ್ತಿ ತೋರಿಸಿದರು. ವಾಸ್ತವವಾಗಿ, ರಾಷ್ಟ್ರೀಯ ಅಥವಾ ಜಾಗತಿಕ ಸಹಯೋಗಿಗಳ ನಡುವೆ ಒಪ್ಪಂದ ಜಾರಿಯ ಬಗ್ಗೆ ವಿವಾದ ಪರಿಹಾರವನ್ನು ಸುಧಾರಿಸುವ ಮೂಲಕ "ಸುಗಮ ವ್ಯಾಪಾರವನ್ನು" ಸಾಧಿಸಲು ಅವು ಪ್ರಮುಖ ಅಂಶಗಳಾಗಿವೆ. ಮತ್ತೊಂದು ಪ್ರಮುಖ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವೆಂದರೆ ಮಧ್ಯಸ್ಥಿಕೆ. ಮಧ್ಯಸ್ಥಿಕೆಯು ಸ್ವಯಂಪ್ರೇರಿತ ವಿವಾದ ಪರಿಹಾರ ಪ್ರಕ್ರಿಯೆಯಾಗಿದೆ. ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಏಕೀಕೃತ ಕಾನೂನನ್ನು ಹೊಂದಲು, ಭಾರತ ಸರ್ಕಾರವು ಮಧ್ಯಸ್ಥಿಕೆ ಮಸೂದೆ, 2021 ಅನ್ನು ಸಂಸತ್ತಿನಲ್ಲಿ ಮಂಡಿಸಿದೆ ಎಂದು ತಿಳಿಸಿದರು. ಪರ್ಯಾಯ ವಿವಾದ ಪರಿಹಾರಗಳ ಮೂಲಕ ವಿವಾದಗಳನ್ನು ಪರಿಹರಿಸಲು ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಅವರು ಸಭಿಕರಿಗೆ ತಿಳಿಸಿದರು; ಭಾರತವನ್ನು ಹೂಡಿಕೆ ಮತ್ತು ವ್ಯವಹಾರಗಳಿಗೆ ಆದ್ಯತೆಯ ತಾಣವನ್ನಾಗಿ ಮಾಡುವ ಉದ್ದೇಶದಿಂದ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ ಮತ್ತು ಮಧ್ಯಸ್ಥಿಕೆ ಕಾನೂನುಗಳು ಸೇರಿದಂತೆ ಹಲವಾರು ಕಾನೂನುಗಳು ಮತ್ತು ನಿಯಮಗಳನ್ನು ಸುಗಮಗೊಳಿಸಲಾಗುವುದು ಎಂದು ತಿಳಿಸಿದರು.
 
ನ್ಯಾಯಮೂರ್ತಿಗಳ ವೇದಿಕೆಯ ಚಟುವಟಿಕೆಗಳ ಭಾಗವಾಗಿ, ಎಸ್.ಸಿ.ಓ.ನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಎಲ್ಲ ಸಚಿವರನ್ನು ಗೌರವಾನ್ವಿತ ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಕಿರಣ್ ರಿಜಿಜು ಅಭಿನಂದಿಸಿ, ಭವಿಷ್ಯದಲ್ಲಿಯೂ ಭಾರತದ ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದರು. ಅಲ್ಲದೆ, ಡಿಜಿಟಲೀಕರಣ ಮತ್ತು ಹೊಸ ಸಾಧ್ಯತೆಗಳ ಈ ಉದಯೋನ್ಮುಖ ಯುಗದಲ್ಲಿ, ಎಲ್ಲಾ ಎಸ್.ಸಿ.ಓ. ಪಾಲುದಾರರು ಎಲ್ಲಾ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸಲು ಬದ್ಧರಾಗಿರಬೇಕು ಮತ್ತು ಎಲ್ಲಾ ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ವ್ಯವಸ್ಥೆಯಲ್ಲಿ ಪರ್ಯಾಯ ವಿವಾದ ಪರಿಹಾರಗಳಂತಹ ಹೊಸ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಬದ್ಧರಾಗಿರಬೇಕು ಎಂದು ಅವರು ಕರೆ ನೀಡಿದರು. ಇದಕ್ಕೂ ಮೊದಲು, ತಜ್ಞರ ಕಾರ್ಯಕಾರಿ ತಂಡವು ವ್ಯಕ್ತಿಗಳಿಗೆ ಮತ್ತು / ಅಥವಾ ಕಾನೂನು ಘಟಕಗಳಿಗೆ ಕಾನೂನು ಸೇವೆಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿ, ಸೇವೆಗಳನ್ನು ಒದಗಿಸುವಲ್ಲಿ ಮಾಹಿತಿ ತಂತ್ರಜ್ಞಾನಗಳ ಅಭಿವೃದ್ಧಿಯ ಅಗತ್ಯವನ್ನು ಒತ್ತಿಹೇಳಿತು. 
 
ಎಸ್.ಸಿ.ಓ.ನ ಅಭಿವೃದ್ಧಿ ಕಾರ್ಯತಂತ್ರದಲ್ಲಿ 2025 ರವರೆಗೆ ತೀರ್ಮಾನಿಸಲಾದ ಒಪ್ಪಂದಗಳು ಮತ್ತು ಕಾರ್ಯಗಳನ್ನು ಗಣನೆಗೆ ತೆಗೆದುಕೊಂಡು, ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ವ್ಯವಸ್ಥೆಗಳ ಅಭಿವೃದ್ಧಿಗಾಗಿ ಪರಸ್ಪರ ಹೊಂದಾಣಿಕೆಯನ್ನು ಒತ್ತಿಹೇಳುತ್ತಾ, ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ಮತ್ತು ನ್ಯಾಯ ಸಚಿವರು ಈ ಕೆಳಗಿನ ಅಂಶಗಳನ್ನು ಘೋಷಿಸಿದರು:

1. ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ಮತ್ತು ನ್ಯಾಯ ಸಚಿವಾಲಯಗಳ ನಡುವೆ ಸಂವಾದ ನಡೆಸಿ, ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ವಿಶ್ವಾಸ, ಉತ್ತಮ ನೆರೆಹೊರೆ ಮತ್ತು ಸ್ನೇಹ ಪಾಲನೆ ಮತ್ತು ವಿಸ್ತರಣೆಗೆ ಕೊಡುಗೆ ನೀಡುವುದು.

2. 2015ರ ಆಗಸ್ಟ್ 18ರಂದು ದುಶಾಂಬೆಯಲ್ಲಿ ಸಹಿ ಹಾಕಲಾದ ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ಮತ್ತು ನ್ಯಾಯ ಸಚಿವಾಲಯಗಳ ನಡುವಿನ ಸಹಕಾರ ಒಪ್ಪಂದದ ಅನುಷ್ಠಾನ ಕಾರ್ಯವನ್ನು ಮುಂದುವರಿಸುವುದು.

3. ಕಾನೂನು ವ್ಯವಸ್ಥೆಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ಮತ್ತು ನ್ಯಾಯ ಸಚಿವಾಲಯಗಳ ನಡುವೆ ಸಹಕಾರ ಬಲಪಡಿಸುವಿಕೆಯನ್ನು ಮುಂದುವರಿಸುವುದು.

4. ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ಕಾನೂನು ಮತ್ತು ನ್ಯಾಯ ಸಚಿವಾಲಯಗಳ ಪ್ರತಿನಿಧಿಗಳ ಪರಸ್ಪರ ಭೇಟಿಯನ್ನು ಆಯೋಜಿಸಿ, ಎಸ್.ಸಿ.ಓ. ಪ್ರಾದೇಶಿಕ ಸಮ್ಮೇಳನಗಳು, ದ್ವಿಪಕ್ಷೀಯ ವಿಚಾರ ಗೋಷ್ಠಿಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ಸಾಮಯಿಕ ಕಾನೂನು ವಿಷಯಗಳ ಬಗ್ಗೆ ಜಂಟಿ ಕೋರ್ಸ್ ಗಳನ್ನು ನಡೆಸಿ ಈ ಕ್ಷೇತ್ರದಲ್ಲಿ ಅನುಭವ ವಿನಿಮಯ ಮಾಡಿಕೊಳ್ಳುವುದು.

5. ವಿಧಿವಿಜ್ಞಾನ ಪರಿಣತಿ ಮತ್ತು ಕಾನೂನು ಸೇವೆಗಳ ಬಗ್ಗೆ ತಜ್ಞರ ಕಾರ್ಯಕಾರಿ ತಂಡಗಳ ಚಟುವಟಿಕೆಗಳನ್ನು ಮುಂದುವರಿಸುವುದು.

ಭಾರತ, ಕಜಾಕಿಸ್ತಾನ್, ಚೀನಾ, ಕಿರ್ಗಿಸ್ತಾನ್ ಗಣರಾಜ್ಯ, ಪಾಕಿಸ್ತಾನ, ರಷ್ಯಾ ಒಕ್ಕೂಟ, ತಜಾಕಿಸ್ತಾನ್ ಮತ್ತು ಉಜ್ಬೇಕಿಸ್ತಾನದ ಕಾನೂನು ಮತ್ತು ನ್ಯಾಯ ಸಚಿವರು ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಮೂರು ದಿನಗಳ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಎಸ್.ಸಿ.ಓ. ಸದಸ್ಯ ರಾಷ್ಟ್ರಗಳ ನ್ಯಾಯಾಂಗ ಸಚಿವರ ಮುಂದಿನ ಸಭೆಯು 2023 ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ನಡೆಯಲಿದೆ.

*****


(Release ID: 1882357) Visitor Counter : 205


Read this release in: English , Urdu , Hindi