ಕೃಷಿ ಸಚಿವಾಲಯ
ಇಟಲಿಯ ರೋಮ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ರ ಎಫ್ಎಒ ಉದ್ಘಾಟನಾ ಸಮಾರಂಭ
ಪ್ರಧಾನಮಂತ್ರಿ ಮೋದಿ ಅವರ ಭಾರತದ ವಿಧ್ಯುಕ್ತ ಸಂದೇಶವನ್ನು ವಾಚಿಸಿದ ಕೃಷಿ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ
ಭಾರತವು ವಿಶ್ವಾದ್ಯಂತ ಐವೈಎಂ 2023 ಆಚರಣೆಗಳನ್ನು ಮುನ್ನಡೆಸುತ್ತದೆ ಮತ್ತು ಸಿರಿಧಾನ್ಯಗಳ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸಲು ಅಭಿಯಾನಗಳನ್ನು ಆಯೋಜಿಸುತ್ತದೆ - ಪ್ರಧಾನಮಂತ್ರಿ ಮೋದಿ
ಐವೈಎಂ 2023 ಜಾಗತಿಕ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಹಾರ ಕಣಜದ ಪ್ರಮುಖ ಘಟಕವಾಗಿ ಸಿರಿಧಾನ್ಯಗಳ ಉತ್ತೇಜನಕ್ಕೆ ಒಂದು ಅವಕಾಶವನ್ನು ಒದಗಿಸುತ್ತದೆ - ಶ್ರೀ ನರೇಂದ್ರ ಸಿಂಗ್ ತೋಮರ್
Posted On:
06 DEC 2022 8:31PM by PIB Bengaluru
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಇಟಲಿಯ ರೋಮ್ ನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ - 2023 (ಐವೈಎಂ 2023) ರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರ ನೇತೃತ್ವದ ಭಾರತೀಯ ನಿಯೋಗ ಪಾಲ್ಗೊಂಡಿತ್ತು. ಈ ನಿಯೋಗದಲ್ಲಿ ಡಿ.ಎ. ಮತ್ತು ಎಫ್.ಡಬ್ಲ್ಯೂ ಜಂಟಿ ಕಾರ್ಯದರ್ಶಿ (ಬೆಳೆಗಳು) ಶ್ರೀಮತಿ ಶುಭಾ ಠಾಕೂರ್ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾರತದ ವಿಧ್ಯುಕ್ತ ಸಂದೇಶವನ್ನು ಕುಮಾರಿ ಶೋಭಾ ಕರಂದ್ಲಾಜೆ ವಾಚಿಸಿದರು.
2023ರ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಘೋಷಿಸಿದ್ದಕ್ಕಾಗಿ ವಿಶ್ವಸಂಸ್ಥೆಗೆ ಪ್ರಧಾನಮಂತ್ರಿ ಮೋದಿ ಅವರ ಅಭಿನಂದನೆಗಳನ್ನು ಕುಮಾರಿ ಶೋಭಾ ಕರಂದ್ಲಾಜೆ ತಿಳಿಸಿದರು. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು (ಐವೈಎಂ) ಆಚರಿಸುವ ಭಾರತದ ಪ್ರಸ್ತಾಪವನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ತಮ್ಮ ಸಂದೇಶದ ಮೂಲಕ ಜಾಗತಿಕ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದ್ದರು. ಸಿರಿಧಾನ್ಯಗಳು ಗ್ರಾಹಕ, ಕೃಷಿಕ ಮತ್ತು ಹವಾಮಾನಕ್ಕೆ ಒಳ್ಳೆಯದು ಎಂದು ಉಲ್ಲೇಖಿಸಿದ್ದರು. ಸಿರಿಧಾನ್ಯಗಳು ಪೌಷ್ಟಿಕವಾಗಿದ್ದು, ನೀರಾವರಿಯಲ್ಲಿ ಕಡಿಮೆ ನೀರನ್ನು ಬಳಸಿ ಅರೆ ಶುಷ್ಕ ವಲಯದಲ್ಲಿ ಬೆಳೆಯಬಹುದು. ನಮ್ಮ ಭೂಮಿ ಮತ್ತು ನಮ್ಮ ಊಟದ ಮೇಜುಗಳಲ್ಲಿ ವೈವಿಧ್ಯತೆಯ ಅಗತ್ಯವಿದೆ. 'ಮಿಲೆಟ್ ಮೈಂಡ್ ಫುಲ್ ನೆಸ್' ಅನ್ನು ರೂಪಿಸಲು ಜಾಗೃತಿ ಮೂಡಿಸುವುದು ಈ ಆಂದೋಲನದ ಒಂದು ಪ್ರಮುಖ ಭಾಗವಾಗಿದೆ.
ಕುಮಾರಿ ಶೋಭಾ ಕರಂದ್ಲಾಜೆ ತಮ್ಮ ಭಾಷಣದಲ್ಲಿ, ಸುಸ್ಥಿರ ಭವಿಷ್ಯವನ್ನು ಅಭಿವೃದ್ಧಿಪಡಿಸಲು ರಾಷ್ಟ್ರಗಳು ಸಹಕರಿಸುವ ಅಗತ್ಯವಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಐವೈಎಂ ಮೂಲಕ ಪ್ರಾಚೀನ ಆಹಾರ ಧಾನ್ಯಗಳನ್ನು ಮರಳಿ ತರುವ ಮೂಲಕ ಮಾನವಕುಲದ ಭವಿಷ್ಯದ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಅವಕಾಶವಿದೆ. ಭಾರತವು ಐವೈಎಂ 2023 ಆಚರಣೆಗಳನ್ನು ವಿಶ್ವದಾದ್ಯಂತ ಆಯೋಜಿಸುತ್ತದೆ ಮತ್ತು ಮುಂದಿನ ವರ್ಷದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಸಿರಿಧಾನ್ಯಗಳ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸಲು ಅಭಿಯಾನಗಳನ್ನು ಆಯೋಜಿಸುತ್ತದೆ ಎಂದರು.
ಐವೈಎಂ 2023 ಭಾರತವನ್ನು ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯತ್ತ ಕೊಂಡೊಯ್ಯುತ್ತದೆ ಎಂದು ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಸಿರಿಧಾನ್ಯಗಳನ್ನು 'ಸ್ಮಾರ್ಟ್ ಫುಡ್' ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವುಗಳನ್ನು ಬೆಳೆಯುವುದು ಸುಲಭ, ಹೆಚ್ಚಾಗಿ ಸಾವಯವ ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು. "ವಸುದೈವ ಕುಟುಂಬಕಂ" (ಜಗತ್ತೇ ಒಂದು ಕುಟುಂಬ) ಎಂಬ ಪ್ರಧಾನಮಂತ್ರಿ ಮೋದಿಯವರ ದೃಷ್ಟಿಕೋನದೊಂದಿಗೆ, ಐವೈಎಂ 2023 ಆಚರಣೆಯು ಜಾಗತಿಕವಾಗಿ ನ್ಯೂಟ್ರಿ-ಏಕದಳ ಧಾನ್ಯಗಳ ಸಿರಿಧಾನ್ಯಗಳನ್ನು ಉತ್ತೇಜಿಸಲು ಮತ್ತು ಅವುಗಳನ್ನು ವಿಶ್ವದ 'ಆಹಾರ ನಕ್ಷೆ'ಯಲ್ಲಿ ಸೇರಿಸಲು ಭಾರತಕ್ಕೆ ಒಂದು ಅವಕಾಶ ಲಭಿಸಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಫ್ಎಒ ಮಹಾನಿರ್ದೇಶಕ ಶ್ರೀ ಕ್ಯೂ ಡೊಂಗ್ಯು, ಐವೈಎಂ 2023 ಜಾಗತಿಕ ಪೌಷ್ಟಿಕತೆ, ಆಹಾರ ಭದ್ರತೆ, ಸಭ್ಯ ಉದ್ಯೋಗಗಳು ಮತ್ತು ಆರ್ಥಿಕತೆಗಳನ್ನು ಬಲಪಡಿಸುವ ಉತ್ತಮ ಸಾಮರ್ಥ್ಯವನ್ನು ಹೊಂದಿರುವ ಬೆಳೆಗಳಿಗೆ ಸ್ಪಷ್ಟ ನೋಟವನ್ನು ನೀಡಲು ನಮಗೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ, ಅದೇ ವೇಳೆ ಹವಾಮಾನ ಕ್ರಿಯೆಯನ್ನು ವೇಗಗೊಳಿಸುತ್ತದೆ. ಸಿರಿಧಾನ್ಯಗಳು ಮೂಲತಃ ಏಷ್ಯಾದ ಬೆಳೆಗಳು, ಹವಾಮಾನ ತಾಳಿಕೊಳ್ಳುವ, ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತವೆ ಮತ್ತು ಎಲ್ಲರಿಗೂ ಆಹಾರ ಭದ್ರತೆ ಮತ್ತು ಪೋಷಣೆಯನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ತಮ್ಮ ಸಂದೇಶದಲ್ಲಿ, ಐವೈಎಂ 2023 ಜಾಗತಿಕ ಉತ್ಪಾದನೆಯನ್ನು ಹೆಚ್ಚಿಸಲು, ದಕ್ಷ ಸಂಸ್ಕರಣೆಗೆ ಮತ್ತು ಬೆಳೆ ಆವರ್ತನದ ಉತ್ತಮ ಬಳಕೆಗೆ ಮತ್ತು ಆಹಾರ ಕಣಜ ಪ್ರಮುಖ ಅಂಶವಾಗಿ ಸಿರಿಧಾನ್ಯಗಳನ್ನು ಉತ್ತೇಜಿಸಲು ಒಂದು ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ, ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಅವರು ವರ್ಚುವಲ್ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಸಚಿವಾಲಯದ ಹಿರಿಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಶ್ರೀ ಕೈಲಾಶ್ ಚೌಧರಿ ಅವರು ಸಿರಿಧಾನ್ಯಗಳನ್ನು ದೈನಂದಿನ ಆಹಾರದ ಭಾಗವಾಗಿ ಅಳವಡಿಸಿಕೊಳ್ಳಲು ಮತ್ತು ಸಿರಿಧಾನ್ಯಗಳ ಪ್ರಯೋಜನಗಳನ್ನು ಎತ್ತಿ ತೋರಿಸುವ ಮೂಲಕ ದೇಶಾದ್ಯಂತ ಜಾಗೃತಿ ಮೂಡಿಸುವಂತೆ ಪ್ರತಿಪಾದಿಸಿದರು. ತಮ್ಮ ಅಡುಗೆಮನೆಯಿಂದಲೇ ಪ್ರಾರಂಭಿಸಿ, ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವಂತೆ ಅವರು ಎಲ್ಲರಿಗೂ ಕರೆ ನೀಡಿದರು. ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಸೇರಿಸುವ ಪ್ರತಿಜ್ಞೆಯನ್ನು ಸಹ ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು.
ಭಾರತದಲ್ಲಿ ಈ ದಿನದ ಮಹತ್ವವನ್ನು ಗುರುತಿಸಲು, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎ ಮತ್ತು ಎಫ್.ಡಬ್ಲ್ಯೂ) ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಭಾರತೀಯ ಸನ್ನಿವೇಶದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆಯ ಬಗ್ಗೆ ವ್ಯಾಪಕವಾದ ಸಾಮಾಜಿಕ ಮಾಧ್ಯಮ ಅಭಿಯಾನ, ಆವೇಗವನ್ನು ಉಳಿಸಿಕೊಳ್ಳಲು ಸರ್ಕಾರದ ಸಾಮೂಹಿಕ ಪ್ರಯತ್ನವನ್ನು ಪ್ರದರ್ಶಿಸುವುದು, ಇತರ ಎಲ್ಲಾ ಸಚಿವಾಲಯಗಳನ್ನು ಒಳಗೊಂಡ ನಾಗರಿಕ ಸಹಭಾಗಿತ್ವದ ಅಭಿಯಾನಗಳು ಮತ್ತು ಐವೈಎಂ ಅನ್ನು ಆಚರಿಸಲು ಹಲವಾರು ಇತರ ಸಂಪರ್ಕ ಚಟುವಟಿಕೆಗಳು ಸೇರಿವೆ.
ಪ್ರಧಾನಮಂತ್ರಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು 2023ರ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ (ಐವೈಎಂ) ದ ಪ್ರಸ್ತಾಪವನ್ನು ಪ್ರಾಯೋಜಿಸಿತು, ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್.ಜಿಎ) ಅಂಗೀಕರಿಸಿತು. ಈ ಘೋಷಣೆಯು ಭಾರತ ಸರ್ಕಾರವು ಐವೈಎಂ ಅನ್ನು ಆಚರಿಸುವಲ್ಲಿ ಮುಂಚೂಣಿಯಲ್ಲಿರಲು ಪ್ರಮುಖ ಪಾತ್ರ ವಹಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತವನ್ನು 'ಸಿರಿಧಾನ್ಯಗಳ ಜಾಗತಿಕ ಕೇಂದ್ರ'ವಾಗಿ ಬಿಂಬಿಸುವುದರ ಜೊತೆಗೆ ಐವೈಎಂ 2023 ಅನ್ನು 'ಜನಾಂದೋಲನ'ವನ್ನಾಗಿ ಮಾಡುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.
ಭಾರತ ಮುಂದಿಟ್ಟ ನಿರ್ಣಯವಾದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ - 2023 ನ್ನು ಯುಎನ್.ಜಿಎ ಅಂಗೀಕರಿಸಿರುವ ಹಿನ್ನೆಲೆಯಲ್ಲಿ, ಡಿಎ ಮತ್ತು ಎಫ್.ಡಬ್ಲ್ಯೂ ದೊಡ್ಡ ಪ್ರಮಾಣದಲ್ಲಿ ಸಿರಿಧಾನ್ಯಗಳ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸುವ ಮತ್ತು ಅದನ್ನು ಇಡೀ ವಿಶ್ವಕ್ಕೆ ತಲುಪಿಸುವ ಗುರಿಯನ್ನು ಹೊಂದಿದೆ.
ಸಿರಿಧಾನ್ಯಗಳ ಅಗಾಧ ಸಾಮರ್ಥ್ಯವನ್ನು ಗುರುತಿಸಿ, ಇದು ವಿಶ್ವಸಂಸ್ಥೆಯ ಹಲವಾರು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (ಎಸ್.ಡಿ.ಜಿಗಳು) ಹೊಂದಿಕೊಳ್ಳುತ್ತವೆ, ಭಾರತ ಸರ್ಕಾರ ಸಿರಿಧಾನ್ಯಗಳಿಗೆ ಆದ್ಯತೆ ನೀಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ - ಪೌಷ್ಟಿಕ ಸಿರಿಧಾನ್ಯಗಳ ಉಪ-ಅಭಿಯಾನವನ್ನು ಹೆಚ್ಚಿನ ಪೌಷ್ಟಿಕ ಮೌಲ್ಯ, ಸಣ್ಣ ಮತ್ತು ಅತಿಸಣ್ಣ ರೈತರ ಆರ್ಥಿಕ ಸಬಲೀಕರಣದ ಸಾಮರ್ಥ್ಯ ಮತ್ತು ಭೂಮಿಯ ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಕೊಡುಗೆಯನ್ನು ಪರಿಗಣಿಸಿ ಜಾರಿಗೆ ತರಲಾಯಿತು; ಏಪ್ರಿಲ್ 2018 ರಲ್ಲಿ, ಸಿರಿಧಾನ್ಯಗಳನ್ನು "ಪೌಷ್ಟಿಕ ಏಕದಳ ಧಾನ್ಯಗಳು" ಎಂದು ಮರುಬ್ರಾಂಡ್ ಮಾಡಲಾಯಿತು, ಮತ್ತು 2018 ರ ವರ್ಷವನ್ನು ಸಿರಿಧಾನ್ಯಗಳ ರಾಷ್ಟ್ರೀಯ ವರ್ಷವೆಂದು ಘೋಷಿಸಲಾಯಿತು, ಇದು ಹೆಚ್ಚಿನ ಉತ್ತೇಜನ ಮತ್ತು ಬೇಡಿಕೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಈ ಪ್ರಯತ್ನದ ಕಡೆಗೆ, ಸಹಯೋಗದ ವಿಧಾನದ ಮೂಲಕ, ಭಾರತ ಸರ್ಕಾರವು ಭಾರತೀಯ ರಾಯಭಾರ ಕಚೇರಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್ ಗಳು, ಮಾಧ್ಯಮಗಳು, ಭಾರತೀಯ ವಲಸಿಗರು, ನವೋದ್ಯಮ ಸಮುದಾಯಗಳು, ನಾಗರಿಕ ಸಮಾಜ ಮತ್ತು ಸಿರಿಧಾನ್ಯಗಳ ಮೌಲ್ಯ-ಸರಪಳಿಯ ಇತರ ಎಲ್ಲರೂ ಸೇರಿದಂತೆ ಪ್ರತಿಯೊಬ್ಬರೂ ಮುಂದೆ ಬಂದು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ - 2023 ರ ಭವ್ಯ ಆಚರಣೆಯ ಮೂಲಕ 'ಪವಾಡ ಮಾಡುವ ಸಿರಿಧಾನ್ಯಗಳ' ಗತವೈಭವವನ್ನು ಪುನರುಜ್ಜೀವಗೊಳಿಸಲು ಕೈಜೋಡಿಸುವಂತೆ ಒತ್ತಾಯಿಸುತ್ತದೆ.
‘ಸಿಂಧೂ ಕಣಿವೆ ನಾಗರಿಕತೆಯ ಸಮಯದಲ್ಲಿ 'ಸಿರಿಧಾನ್ಯಗಳು' ಭಾರತದಲ್ಲಿ ಪಳಗಿದ ಮೊದಲ ಬೆಳೆಗಳಲ್ಲಿ ಒಂದಾಗಿತ್ತು, ಸಿಂಧೂ ಕಣಿವೆಯ ನಾಗರಿಕತೆಯ ಸಮಯದಲ್ಲಿ ಅದರ ಬಳಕೆಯ ಹಲವಾರು ಪುರಾವೆಗಳಿವೆ. ಪ್ರಸ್ತುತ 130ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳನ್ನು ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಅರ್ಧ ಶತಕೋಟಿಗಿಂತಲೂ ಹೆಚ್ಚು ಜನರಿಗೆ ಸಾಂಪ್ರದಾಯಿಕ ಆಹಾರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಸಿರಿಧಾನ್ಯಗಳು ಪ್ರಾಥಮಿಕವಾಗಿ ಮುಂಗಾರು ಬೆಳೆಯಾಗಿದ್ದು, ಇದಕ್ಕೆ ಇದೇ ರೀತಿಯ ಇತರ ಆಹಾರಧಾನ್ಯಗಳಿಗಿಂತ ಕಡಿಮೆ ನೀರು ಮತ್ತು ಕೃಷಿ ಆಧಾನದ ಅಗತ್ಯವಿದೆ. ಜೀವನೋಪಾಯವನ್ನು ಸೃಷ್ಟಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಪ್ರಪಂಚದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಿರಿಧಾನ್ಯಗಳು ಅದರ ಬೃಹತ್ ಸಾಮರ್ಥ್ಯದ ಕಾರಣದಿಂದಾಗಿ ಪ್ರಮುಖವಾಗಿವೆ.
*****
(Release ID: 1881278)
Visitor Counter : 254