ವಾರ್ತಾ ಮತ್ತು ಪ್ರಸಾರ ಸಚಿವಾಲಯ

53ನೇ ಐಎಫ್ಎಫ್ಐಯ ಸಂಭಾಷಣೆ ಅಧಿವೇಶನದಲ್ಲಿ ಭಾಗವಹಿಸಿ ಅನಿಸಿಕೆ ಹಂಚಿಕೊಂಡ ದಾದಾಸಾಹೇಬ್ ಫಾಲ್ಕೆ ವಿಜೇತೆ ಆಶಾ ಪಾರೇಖ್ 

Posted On: 27 NOV 2022 5:41PM by PIB Bengaluru

ನವೆಂಬರ್ 27, ಪಿಐಬಿ ಮುಂಬೈ

2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಅನುಭವವನ್ನು ಬಾಲಿವುಡ್ ನ ಹಿರಿಯ ನಟಿ, ಜೀವಂತ ದಂತಕಥೆ ಶ್ರೀಮತಿ ಆಶಾ ಪಾರೇಖ್ ಹಂಚಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಮಹಿಳೆಯೊಬ್ಬರಿಗೆ ಈ ಪ್ರಶಸ್ತಿ ಬಂದಿರುವುದು ಖುಷಿಯ ವಿಚಾರ ಎಂದರು. ಪ್ರಶಸ್ತಿ ಸಿಕ್ಕಿದ ಬಗ್ಗೆ ಆಶ್ಚರ್ಯ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಅವರು, “ಈ ಪ್ರಶಸ್ತಿಯನ್ನು ಪಡೆದ ಮೊದಲ ಗುಜರಾತಿ ನಾನಾಗಿದ್ದೇನೆ. ಆದ್ದರಿಂದ, ಇದು ನನಗೆ ಮುಖ್ಯ ವಿಷಯವಾಗಿದೆ.  ಪ್ರಶಸ್ತಿ ಘೋಷಣೆಯಾದ ಎರಡು ದಿನಗಳವರೆಗೆ ನನ್ನ ಮನಸ್ಸಿನಲ್ಲಿ ಅದು ದಾಖಲಾಗಲಿಲ್ಲ. ಮೊದಲು ದೇವರಿಗೆ ಕೃತಜ್ಞತೆ ಹೇಳಿದೆ, ನನ್ನ ಪಾಲಿಗೆ ತುಂಬಾ ದೊಡ್ಡ ಅಚ್ಚರಿಯಾಗಿತ್ತು'' ಎಂದರು.  ಶ್ರೀಮತಿ ಆಶಾ ಪಾರೇಖ್ ಅವರು ಇಂದು, ಗೋವಾದಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದಲ್ಲಿ ಮಾತನಾಡುತ್ತಿದ್ದರು.

2020ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಶ್ರೀಮತಿ ಆಶಾ ಪಾರೇಖ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಆದರ್ಶಪ್ರಾಯ ಜೀವಮಾನದ ಕೊಡುಗೆಗಾಗಿ ನೀಡಲಾಯಿತು. ಕಳೆದ ಸೆಪ್ಟೆಂಬರ್ 30 ರಂದು ದೆಹಲಿಯಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಈ  ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಿದರು.

ತಮ್ಮ ಮಾತು ಮುಂದುವರಿಸಿದ ಶ್ರೀಮತಿ ಆಶಾ ಪಾರೇಖ್ ಅವರು, ಕಟಿ ಪತಂಗ್, ತೀಸ್ರಿ ಮಂಝಿಲ್, ದೋ ಬದನ್, ಮೈ ತುಲಸಿ ತೇರೆ ಆಂಗನ್ ಕಿ, ಬಹಾರೋನ್ ಕೆ ಸಪ್ನೆ ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.

ನಟನೆಯ ಹೊರತಾಗಿ, ತಾವು ಟಿವಿ ನಿರ್ದೇಶನ ಮತ್ತು ನಿರ್ಮಾಣದಲ್ಲಿ ವೃತ್ತಿಜೀವನವನ್ನು ಅನ್ವೇಷಿಸಿದ ಬಗ್ಗೆಯೂ ಮಾತನಾಡಿದರು. ಯಶಸ್ಸನ್ನು ಕಂಡ ಗುಜರಾತಿ ಧಾರಾವಾಹಿ-ಜ್ಯೋತಿ ತಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿಸಿತು. ಇದರಿಂದ ಇನ್ನಷ್ಟು ಧಾರಾವಾಹಿಗಳನ್ನು ಮಾಡಲು ಉತ್ತೇಜನ ಸಿಕ್ಕಿತು. ಗೋರಾ ಕಾಗಜ್ ಜನಪ್ರಿಯ ಧಾರಾವಾಹಿಯಾಯಿತು ಎಂದರು. ಪರೇಖ್ ಅವರ ಇತರ ಸಣ್ಣ ಪರದೆಯ ಕೊಡುಗೆಗಳು ಬಾಜೆ ಪಾಯಲ್, ದಾಲ್ ಮೇ ಕಾಲಾ ಮತ್ತು ಕುಚ್ ಪಲ್ ಸಾಥ್ ತುಮ್ಹಾರಾ ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುವಂಥವು.

ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿವಿಧ ಸಂಘ-ಸಂಸ್ಥೆಗಳೊಂದಿಗೆ ತಮ್ಮ ಒಡನಾಟದ ಬಗ್ಗೆ ಆಶಾ ಪಾರೇಖ್ ಮಾತನಾಡಿದರು. ಅವರು 1994ರಿಂದ 2000ದವರೆಗೆ ಸಿನಿ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದರು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆಯೂ ಆಗಿದ್ದರು, 1998- 2001 ರವರೆಗೆ ಗೌರವ ಹುದ್ದೆಯನ್ನು ಹೊಂದಿದ್ದರು. ಸಿನೆಮಾ ಮತ್ತು ಕಿರುತೆರೆ ಕಲಾವಿದರ ಸಂಘ (CINTAA)ದ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು. 

ಆಶಾ ಪಾರೇಖ್ ಅವರು ಒಬ್ಬ ಪ್ರಖ್ಯಾತ ಚಲನಚಿತ್ರ ನಟಿ ಮಾತ್ರವಲ್ಲದೆ ನಿರ್ದೇಶಕಿ, ನಿರ್ಮಾಪಕಿ ಹಾಗೂ ನೈಪುಣ್ಯ ಹೊಂದಿರುವ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಕೂಡ ಹೌದು. ಬಾಲನಟಿಯಾಗಿ ತಮ್ಮ ವೃತ್ತಿ ಆರಂಭಿಸಿ ದಿಲ್ ದೇಕೆ ದೇಖೋ ಚಿತ್ರದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. 95ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಾಯಕಿ ಎನಿಸಿಕೊಂಡರು. ಜನಪ್ರಿಯ ಚಿತ್ರಗಳಾದ ಕಟಿ ಪತಂಗ್, ತೀಸ್ರಿ ಮಂಝಿಲ್, ಲವ್ ಇನ್ ಟೋಕಿಯೋ, ಆಯಾ ಸಾವನ್ ಝೂಮ್ ಕೆ, ಆನ್ ಮಿಲೋ ಸಜ್ನಾ, ಮೇರಾ ಗಾಂವ್ ಮೇರಾ ದೇಶ್ ನಟಿಸಿರುವುದು ಹೆಗ್ಗಳಿಕೆ.

*****



(Release ID: 1879432) Visitor Counter : 131