ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ವೀಕ್ಷಕರು ನನ್ನ ಸಿನಿಮೀಯ ಲೋಕದ ಭಾಗವಾಗಬೇಕೆಂದು ಬಯಸುತ್ತೇನೆ: ಫಿಲಿಪಿನೋ ನಿರ್ದೇಶಕ ಲವ್ ಡಯಾಜ್

 
'2  -  2-1/2 ಗಂಟೆಗಳಲ್ಲಿ ಮುಗಿಯುವ ಚಲನಚಿತ್ರಗಳ ಪರಿಕಲ್ಪನೆಯು ಬಂಡವಾಳಶಾಹಿಯ ಪ್ರೇರಣೆಯಾಗಿದೆ'
 
'ಚಲನಚಿತ್ರ ಸಂಪಾದಕ ಕ್ರಿಯೆಯು ಒಂದು ಲಯಬದ್ಧ ಪ್ರಕ್ರಿಯೆಯಾಗಿದೆ'

 
#ಐಎಫ್ಎಫ್ಐವುಡ್, 26 ನವೆಂಬರ್ 2022

ಫಿಲಿಪಿನೋ ಲೇಖಕರಾದ ಲವ್ ಡಯಾಜ್ ಅವರ  'ವೆನ್ ದಿ ವೇವ್ಸ್ ಆರ್ ಗಾನ್' ಚಿತ್ರವು ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಯ ವಿಭಾಗದಲ್ಲಿ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಸ್ಪರ್ಧಿಸುತ್ತಿದೆ. ಸೇಡು ಮತ್ತು ಹಿಂಸೆಯ ಕರಾಳ, ಸುದೀರ್ಘ ಕಥೆಯನ್ನು ಹೊಂದಿರುವ 'ವೆನ್ ದಿ ವೇವ್ಸ್ ಆರ್ ಗಾನ್' ವೆನಿಸ್ ಫಿಲ್ಮ್ ಫೆಸ್ಟಿವಲ್ 2022 ರಲ್ಲಿ ತನ್ನ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಕಪ್ಪು - ಬಿಳುಪಿನ ಈ ಚಿತ್ರವನ್ನು 16 ಎಂಎಂನಲ್ಲಿ ಚಿತ್ರೀಕರಿಸಲಾಗಿದ್ದು, ಸಮಾಜವನ್ನು 'ಶುದ್ಧೀಕರಿಸುವ' ಹೆಸರಿನಲ್ಲಿ ಪೊಲೀಸರು ಬಿಚ್ಚಿಟ್ಟ 'ಭೂಗತ ಯುದ್ಧ'ಗಳನ್ನು ಇದು ದಾಖಲಿಸುತ್ತದೆ. ಇದು ಅನೇಕ ಕಾನೂನುಬಾಹಿರ  ಹತ್ಯೆಗಳಿಗೆ ಕಾರಣವಾಯಿತು. ಚಲನಚಿತ್ರೋತ್ಸವದ ಸಂದರ್ಭದಲ್ಲಿ ಪಿಐಬಿ ಆಯೋಜಿಸಿದ್ದ ಐಎಫ್ಎಫ್ಐ ಮಾತುಕತೆಯಲ್ಲಿ 'ನಿಧಾನಗತಿ ಸಿನೆಮಾದ ಫಿಲಿಪಿನೋ ಮಾಸ್ಟರ್' ಎಂದೇ ಜನಪ್ರಿಯರಾದ ಲವ್ ಡಯಾಜ್ ಮಾಧ್ಯಮ ಮತ್ತು ಪ್ರತಿನಿಧಿಗಳೊಂದಿಗೆ ಮಾತನಾಡಿ 'ವೀಕ್ಷಕರು ನನ್ನ ಸಿನಿಮೀಯ ಲೋಕದ ಭಾಗವಾಗಬೇಕೆಂದು ಬಯಸುತ್ತೇನೆ' ಎಂದು ತಿಳಿಸಿದರು ಅವರು ಪ್ರೇಕ್ಷಕರ ಕುರಿತು ಹೀಗೆ ಹಂಚಿಕೊಂಡರು ನಾನು ಮ್ಯಾನಿಪುಲೇಟ್ ಮಾಡುವುದಿಲ್ಲ. ನಾನು ಕೇವಲ ವೀಕ್ಷಕನಾಗಲು ಬಯಸುತ್ತೇನೆ ಎಂದು ಹೇಳಿದರು. "ನನ್ನ ಸಿನೆಮಾದ ಕಲಾವಿದರು ಪರದೆ ಮತ್ತು ವೀಕ್ಷಕರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾರೆ. ಅವರು ಸಿನಿಮಾದ ಒಂದು ಭಾಗವಾಗಿದ್ದಾರೆ. ದೀರ್ಘ ಚಿತ್ರೀಕರಣ ಮತ್ತು ಚಿತ್ರದ ದೀರ್ಘಾವಧಿಯು ವೀಕ್ಷಕರ ಮಗ್ನಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ" ಎಂದು ಅವರು ಹೇಳಿದರು.

ಲವ್ ಡಯಾಜ್ ಹಾಲಿವುಡ್ ಚಲನಚಿತ್ರಗಳ ನಾಯಕ ಕೇಂದ್ರಿತ ಚಲನಚಿತ್ರ ವಿಧಾನವನ್ನು ಟೀಕಿಸಿದರು. ಅಲ್ಲಿ ಎಲ್ಲವೂ ನಾಯಕನ ಅಧೀನವಾಗಿರುತ್ತದೆ. "ಆ ಚಲನಚಿತ್ರಗಳು ನಾಯಕನ ಸುತ್ತಲೇ ಕೊನೆಯವರೆಗೂ ಸುತ್ತುತ್ತವೆ. ಅದರಲ್ಲಿ ಜೀವನವಿಲ್ಲ. ನನ್ನ ಚಿತ್ರಗಳಲ್ಲಿ, ಮರಗಳು, ಪಕ್ಷಿಗಳು, ಜನರ ಜೀವಂತಿಕೆಯನ್ನು, ಅವರ ಎಲ್ಲ ಅಭಿವ್ಯಕ್ತಿಗಳಲ್ಲಿ ಲವಲವಿಕೆಯನ್ನು ನೀವು ಗಮನಿಸುತ್ತೀರಿ" ಎಂದು ಅವರು ಹೇಳಿದರು.
 
ಲವ್ ಡಯಾಜ್ ಅವರ ಚಲನಚಿತ್ರಗಳು ತಮ್ಮ ದೀರ್ಘಾವಧಿಗೆ ಪ್ರಸಿದ್ದವಾಗಿವೆ.  ಅವರ 'ಎವಲ್ಯೂಷನ್ ಆಫ್ ಎ ಫಿಲಿಪಿನೋ ಫ್ಯಾಮಿಲಿ' ಸುಮಾರು 11 ಗಂಟೆಗಳ ಚಿತ್ರವಾದರೆ, 'ದ ವುಮೆನ್ ಹೂ ಲೆಫ್ಟ್' 3 ಗಂಟೆ 48 ನಿಮಿಷಗಳ ಚಿತ್ರವಾಗಿದೆ. ಐಎಫ್ಎಫ್ಐನಲ್ಲಿ ನಿನ್ನೆ ಪ್ರದರ್ಶಿಸಲ್ಪಟ್ಟ 'ವೆನ್ ದ ವೇವ್ಸ್ ಆರ್ ಗಾನ್' ಕೂಡ 3 ಗಂಟೆ 7 ನಿಮಿಷಗಳ ಚಿತ್ರವಾಗಿದೆ. ಲವ್ ಡಯಾಜ್ ಅವರು ತಮ್ಮ ದೀರ್ಘಾವಧಿಯ ಚಲನಚಿತ್ರಗಳನ್ನು ಸಮರ್ಥಿಸುತ್ತಾ, 2 ಅಥವಾ 2-1/2 ಗಂಟೆಗಳ ಚಲನಚಿತ್ರಗಳ ಪರಿಕಲ್ಪನೆಯು ಬಂಡವಾಳಶಾಹಿ ಮತ್ತು ವ್ಯಾವಹಾರಿಕವಾಗಿದೆ ಎಂದು ಹೇಳಿದರು. ಚಲನಚಿತ್ರವು ತಮ್ಮ ಅಭಿವ್ಯಕ್ತಿಯ ಮುಕ್ತ ರೂಪವಾಗಿದೆ ಎಂದು ಅವರು ಹೇಳಿದರು.
 
"ನನಗೆ ಸಿನೆಮಾ ಒಂದು ಸಾಂಸ್ಕೃತಿಕ ಮತ್ತು ಕಲಾ ಪ್ರಕಾರವಾಗಿದೆ. ನಾನು ನನ್ನನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಾನು ನನ್ನ ಸಂಸ್ಕೃತಿಯನ್ನು ಪ್ರತಿನಿಧಿಸಲು ಬಯಸುತ್ತೇನೆ. ನಾನು ನನ್ನ ಸಿನೆಮಾದ ಮೂಲಕ ಜೀವನವನ್ನು ಬಿಚ್ಚಿಡಲು ಬಯಸುತ್ತೇನೆ. ನಾನು ಬಯಸಿದ ರೀತಿಯಲ್ಲಿ ಸಿನಿಮಾ ಮಾಡಲು ಇಚ್ಛಿಸುತ್ತೇನೆ" ಎಂದು ಅವರು ವಿವರಿಸಿದರು.

ಈ ಚಿತ್ರದ ಪ್ರಾರಂಭದ ಬಗ್ಗೆ ಮಾತನಾಡಿದ ಲವ್ ಡಯಾಜ್, ಗ್ಯಾಂಗ್ ಸ್ಟರ್ ಚಿತ್ರವಾಗಿ 'ವೆನ್ ದಿ ವೇವ್ಸ್ ಆರ್ ಗಾನ್' ಏಳು ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಹೇಳಿದರು. "ಕಲಾವಿದರು ಮತ್ತು ಬಜೆಟ್ ಅನ್ನು ಹೊಂದಿಸಲು ಈ ಚಿತ್ರದ ಬಿಡುಗಡೆಯ ವಿಳಂಬಕ್ಕೆ ಕಾರಣ". ಅವರು ಮೂರು ವರ್ಷಗಳ ಹಿಂದೆ ಈ ಚಿತ್ರವನ್ನು ಮತ್ತೊಂದು ರೀತಿಯಲ್ಲಿ ನಿರ್ಮಾಪಕರ ಮುಂದಿಟ್ಟಿದ್ದರು. ಡ್ರಗ್ಸ್ ವಿರುದ್ಧದ ಯುದ್ಧದ ಹೆಸರಿನಲ್ಲಿ ಫಿಲಿಪೈನ್ಸ್ ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಇದು ಒಂದು ರೀತಿಯ ಪ್ರತಿಕ್ರಿಯೆ ಎಂದು ಅವರು ಹೇಳಿದರು.
 
ಈ ಚಿತ್ರದ ದೀರ್ಘಾವಧಿಯನ್ನು ಪರಿಗಣಿಸಿದರೆ, ಲವ್ ಡಯಾಜ್ ರ ಚಲನಚಿತ್ರಗಳಿಗೆ ನಿಜವಾಗಿಯೂ ಸಂಪಾದಕರಿದ್ದಾರೆಯೇ ಎಂದು ಯಾರಾದರೂ ಆಶ್ಚರ್ಯ ಪಡಬಹುದು. ಈ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ರವನ್ನು ತಾವೇ ಎಡಿಟ್ ಮಾಡುತ್ತೇನೆ ಎಂದು ಹೇಳಿದರು. "ನನ್ನ ಚಿತ್ರೀಕರಣ ಉದ್ದವಾಗಿವೆ. ನಾನೇ ಅದನ್ನು ಸಂಕಲನ ಮಾಡುತ್ತೇನೆ. ವಾಸ್ತವವಾಗಿ ಹೀಗೆ ಕೆಲಸ ಮಾಡುವುದು ಕಷ್ಟ. ಇದರಲ್ಲಿ ನೀವು ಲಯವನ್ನು ಕಾಣಬಹುದು, ಅವುಗಳನ್ನು ಬೀಟ್ ಗಳ ಮೂಲಕ ಅಳೆಯಬೇಕು. ಸಂಪಾದನೆಗೆ ಲಯಬದ್ಧವಾದ ಪ್ರಕ್ರಿಯೆ ಇದೆ. ಒಬ್ಬ ಸಂಗೀತಗಾರನಾಗಿ, ನಾನು ಅದನ್ನು ಮಾಡಬಲ್ಲೆ" ಎಂದು ತಿಳಿಸಿದರು.
 
ಚಲನಚಿತ್ರ ನಿರ್ಮಾಣದಲ್ಲಿ ಸಂಗೀತದ ಪಾತ್ರವೇನು? ಲವ್ ಡಯಾಜ್ ಅವರು ತಮ್ಮ ಚಿತ್ರದಲ್ಲಿ ಸಂಗೀತವು ಪ್ರಮುಖ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಕಾವ್ಯ, ಸಂಗೀತ, ಚಲನೆ, ನೃತ್ಯ ಮತ್ತು ಇಡೀ ಲೋಕವನ್ನು ಚಲನಚಿತ್ರಗಳಲ್ಲಿ ಸೇರಿಸಬಹುದು. ಅದನ್ನು ಜೀವಂತವಾಗಿಸುವ ಶಕ್ತಿ ಚಿತ್ರರಂಗಕ್ಕಿದೆ' ಎಂದು ಅವರು ಸೂಚಿಸಿದರು.
 
ಒಂದು ಮಾಧ್ಯಮವಾಗಿ ಸಿನೆಮಾ, ಜೀವನದ ಘಟನೆಗಳು ಮತ್ತು ಸತ್ಯವನ್ನು ನಿರೂಪಿಸುವಲ್ಲಿ ಕೆಲವೊಮ್ಮೆ ತಡವಾದರೂ, ಬದಲಾವಣೆಯನ್ನು ತರುವ ಶಕ್ತಿಯ ಬಗ್ಗೆ ಲವ್ ಡಯಾಜ್ ವಿಶ್ವಾಸವನ್ನು ವ್ಯಕ್ತಪಡಿಸಿದರು. ಭಾರತೀಯ ನಿರ್ದೇಶಕರಾದ ಮಣಿ ಕೌಲ್, ಸತ್ಯಜಿತ್ ರೇ ಮತ್ತು ಋತ್ವಿಕ್ ಘಾತಕ್ ಅವರ ಚಿತ್ರಗಳ ಬಗ್ಗೆ ನಿರ್ದೇಶಕರು ತಮ್ಮ ಒಲವನ್ನು ವ್ಯಕ್ತಪಡಿಸಿದರು.
 
'ವೆನ್ ದಿ ವೇವ್ಸ್ ಆರ್ ಗಾನ್' ಕುರಿತಾದ ವಿಮರ್ಶೆಗಳು ಈ ಚಲನಚಿತ್ರವನ್ನು ಅಲೆಕ್ಸಾಂಡ್ರೆ ಡುಮಾಸ್ ಅವರ 'ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋ' ದ ಹತ್ತಿರದ ರೂಪಾಂತರವೆಂದು ವರ್ಣಿಸಿವೆ. ಆದರೆ ಲವ್ ಡಯಾಜ್ ತಾವು ಲಿಯೋ ಟಾಲ್ ಸ್ಟಾಯ್ ಮತ್ತು ಫ್ಯೋಡೋರ್ ಡೊಸ್ಟೋವ್ಸ್ಕಿ ಯಂತಹ ರಷ್ಯನ್ ಲೇಖಕರ ಕೃತಿಗಳಿಂದ ಈ ಚಿತ್ರಕ್ಕೆ ಸಾಹಿತ್ಯಕ ಪ್ರಭಾವವನ್ನು ಪಡೆದಿದ್ದರೂ, ಈ ಚಲನಚಿತ್ರವನ್ನು ನಿರ್ಮಿಸುವಾಗ ತಾನು 'ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋ' ದ ಬಗ್ಗೆ ಯೋಚಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
 
ಸಾರಾಂಶ
ಫಿಲಿಪೈನ್ಸ್ ನ ಅತ್ಯುತ್ತಮ ತನಿಖಾಧಿಕಾರಿಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಹರ್ಮೆಸ್ ಪಪೌರನ್ ಅವರು ನೈತಿಕ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಪೊಲೀಸ್ ಪಡೆಯ ಸದಸ್ಯರಾಗಿ, ಅವರು ತಮ್ಮ ಸಂಸ್ಥೆಯು ಸಮರ್ಪಣಾ ಭಾವದಿಂದ ಅನುಷ್ಠಾನಗೊಳಿಸುತ್ತಿರುವ ಮಾದಕದ್ರವ್ಯ ವಿರೋಧಿ ಅಭಿಯಾನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ದೌರ್ಜನ್ಯಗಳು ಹರ್ಮೆಸ್ ರನ್ನು ದೈಹಿಕ ಮತ್ತು ಆಧ್ಯಾತ್ಮಿಕವಾಗಿ ಕುಗ್ಗಿಸುತ್ತಿವೆ. ಆತಂಕ ಮತ್ತು ತಪ್ಪಿತಸ್ಥತೆಯ ಪರಿಣಾಮವಾಗಿ ಅವರು ತೀವ್ರವಾದ ಚರ್ಮದ ರೋಗದಿಂದ ಬಳಲುತ್ತಿದ್ದಾರೆ. ಅವರು ಅದನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಅವರನ್ನು ಕಾಡುವ ಕರಾಳ ಭೂತಕಾಲವು ಅಂತಿಮವಾಗಿ ಹಗೆ ತೀರಿಸಿಕೊಳ್ಳುಲು ಹಾತೊರೆಯುತ್ತಿದೆ.
  
ನಿರ್ದೇಶಕರ ಬಗ್ಗೆ ವಿವರ:
ಫಿಲಿಪಿನೋ ನಿರ್ದೇಶಕ ಲವ್ ಡಯಾಜ್ ಅವರು ತಮ್ಮ ಚಲನಚಿತ್ರಗಳ ಧೀರ್ಘಾವಧಿಗೆ ಪ್ರಸಿದ್ದರಾಗಿದ್ದಾರೆ. ಡಯಾಜ್ ಅವರ ಚಲನಚಿತ್ರಗಳು ಸಮಯದಿಂದ ನಿಯಂತ್ರಿಸಲ್ಪಡುವುದಿಲ್ಲ, ಅವು 3 ರಿಂದ 10 ಗಂಟೆಗಳವರೆಗೆ ನಡೆಯುತ್ತವೆ. ಆದರೆ ಕಾಲಾವಕಾಶದಿಂದ ನಿಯಂತ್ರಿಸಲ್ಪಡುತ್ತವೆ. ಅವರು 18 ಚಲನಚಿತ್ರಗಳನ್ನು ನಿರ್ದೇಶಿಸಿದ್ದು, 2014 ರಲ್ಲಿ ದ ಲೊಕಾರ್ನೊ ಗೋಲ್ಡನ್ ಲೆಪರ್ಡ್ ('ಫ್ರಮ್ ವಾಟ್ ಈಸ್ ಬಿಫೋರ್'),  2016 ರಲ್ಲಿ ದ ಬರ್ಲಿನಾಲೆ ಸಿಲ್ವರ್ ಬೇರ್ ('ಎ ಲುಲಬಿ ಟು ದಿ ಸಾರೋಫುಲ್ ಮಿಸ್ಟರಿ') ಮತ್ತು ಅದೇ ವರ್ಷ ದ ವೆನಿಸ್ ಗೋಲ್ಡನ್ ಲಯನ್ ('ದಿ ವುಮನ್ ಹೂ ಲೆಫ್ಟ್') ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

*****

iffi reel

(Release ID: 1879300) Visitor Counter : 169