ಚುನಾವಣಾ ಆಯೋಗ
ಬಿಬಿಎಂಪಿ ಪ್ರದೇಶದಲ್ಲಿ ಖಾಸಗಿ ಸಂಸ್ಥೆ ಮತದಾರರ ದತ್ತಾಂಶ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಚುನಾವಣಾಧಿಕಾರಿಯವರಿಗೆ ನಿರ್ದೇಶನ ನೀಡಿದ ಭಾರತ ಚುನಾವಣಾ ಆಯೋಗ
162 ಶಿವಾಜಿನಗರ, 169 ಚಿಕ್ಕಪೇಟೆ ಮತ್ತು 174 ಮಹದೇವಪುರ ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿನ ಸೇರ್ಪಡೆ ಮತ್ತು ತೆಗೆದುಹಾಕಿರುವ ಬಗ್ಗೆ ಶೇ. 100ರಷ್ಟು ಪರಿಶೀಲಿಸಲು ಚುನಾವಣಾ ಆಯೋಗದ ನಿರ್ದೇಶನ
ವಿಶೇಷ ಸಾರಾಂಶ ಪರಿಷ್ಕರಣೆಯ ಅಡಿಯಲ್ಲಿ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಅವಧಿಯನ್ನು 2022ರ ಡಿಸೆಂಬರ್ 24, ರವರೆಗೆ 15 ದಿನಗಳವರೆಗೆ ವಿಸ್ತರಣೆ
ಮೂರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿದ್ದ ಬಿಬಿಎಂಪಿ (ಕೇಂದ್ರ) ಮತ್ತು ಬೆಂಗಳೂರು ನಗರ ಹೆಚ್ಚುವರಿ ಡಿಇಒಗಳ ಅಮಾನತು; ಇಬ್ಬರ ವಿರುದ್ಧವೂ ಇಲಾಖಾ ತನಿಖೆ ನಡೆಸಲು ಆದೇಶ
ಮತದಾರರ ಪಟ್ಟಿಯ ಪಾವಿತ್ರ್ಯತೆಯ ಮೇಲ್ವಿಚಾರಣೆಗಾಗಿ ಬಿಬಿಎಂಪಿಯ ಹೊರಗಿನಿಂದ ವಿಶೇಷ ಅಧಿಕಾರಿಗಳನ್ನು ನೇಮಿಸಬೇಕು
ಕಾನೂನುಬಾಹಿರವಾಗಿ ಸಂಗ್ರಹಿಸಿದ ದಾಖಲೆಗಳು ಅಥವಾ ದತ್ತಾಂಶವನ್ನು ನೇರ ಅಥವಾ ಪರೋಕ್ಷ ಬಳಕೆ ಮಾಡಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನ
ಎಸ್ಎಸ್ಆರ್ ಚಟುವಟಿಕೆಗಳ ಪ್ರತಿ ಹಂತದಲ್ಲೂ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಿಇಒ ನಿರ್ದೇಶನ
Posted On:
25 NOV 2022 8:42PM by PIB Bengaluru
17-11-2022 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದೇಶದಲ್ಲಿ ಮನೆ ಮನೆ ಸಮೀಕ್ಷೆಯ ಮೂಲಕ ಮತದಾರರ ಜಾಗೃತಿ ಚಟುವಟಿಕೆಗಳ ಸೋಗಿನಲ್ಲಿ ಎನ್.ಜಿ.ಒ.ವೊಂದು ಬೆಂಗಳೂರು ನಗರದಲ್ಲಿ ಮತದಾರರ ದತ್ತಾಂಶವನ್ನು ಸಂಗ್ರಹಿಸುತ್ತಿರುವ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ಮಾಧ್ಯಮ ವರದಿಗಳು ತಲುಪಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಂದ ದೂರುಗಳನ್ನೂ ಆಯೋಗವು ಸ್ವೀಕರಿಸಿದೆ. ದಿನಾಂಕ 17.11.22 ರಂದು ಎರಡು ಎಫ್ಐಆರ್.ಗಳು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ 0217/2022 ರ ಮೂಲಕ ಒಂದು ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಂಖ್ಯೆ 0276/2022 ರ ಮೂಲಕ ಮತ್ತೊಂದು ಎಫ್ಐಆರ್.ದಾಖಲಾಗಿರುವುದನ್ನು ಆಧರಿಸಿ ಪೊಲೀಸ್ ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ಬಂಧನ ಸೇರಿದಂತೆ ನಂತರದ ಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಶ್ರೀ ಅಮ್ಲನ್ ಬಿಸ್ವಾಸ್ ಅವರ ಆಡಳಿತಾತ್ಮಕ ತನಿಖೆಗೆ ಆದೇಶಿಸಲಾಗಿದೆ. ಬಂದಿರುವ ವರದಿಗಳ ಪ್ರಕಾರ 162 ಶಿವಾಜಿನಗರ, 169 ಚಿಕ್ಕಪೇಟೆ ಮತ್ತು 174 ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಖಾಸಗಿ ವ್ಯಕ್ತಿಗಳನ್ನು ಬಿಎಲ್ಒಗಳು/ ಬಿಎಲ್ಸಿಗಳೆಂದು ಗುರುತಿಸುವ ತಪ್ಪು ಗುರುತಿನ ಚೀಟಿಗಳು ಪತ್ತೆಯಾಗಿವೆ. ಈ ಮೂರು ಕ್ಷೇತ್ರಗಳ ಬಿಬಿಎಂಪಿಯ ಮೂವರು ಚುನಾವಣಾ ನೋಂದಣಿ ಅಧಿಕಾರಿಗಳನ್ನು ಸಹ ಅಮಾನತುಗೊಳಿಸಲಾಗಿದೆ.
ವರದಿಗಳ ಆಧಾರದಲ್ಲಿ, ಲಭ್ಯವಿರುವ ಇತರ ಸಾಮಗ್ರಿಗಳು ಮತ್ತು ಆಧಾನಗಳ ಆಧಾರದ ಮೇಲೆ, ಆಯೋಗವು ತಕ್ಷಣದ ಅನುಸರಣೆಗಾಗಿ ಈ ಕೆಳಗಿನ ನಿರ್ದೇಶನ ನೀಡಿದೆ:
1. 162 ಶಿವಾಜಿನಗರ, 169 ಚಿಕ್ಕಪೇಟೆ ಮತ್ತು 174 ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ದಿನಾಂಕ 01.01.2022 ರ ನಂತರ ಮತದಾರರ ಪಟ್ಟಿಯಲ್ಲಿನ ಸೇರ್ಪಡೆ ಮತ್ತು ತೆಗೆದುಹಾಕಿರುವ ಬಗ್ಗೆ ಶೇ. 100ರಷ್ಟು ಪರಿಶೀಲನೆ ಮಾಡಬೇಕು.
2. ಎಸ್ಎಸ್ಆರ್ ಅಡಿಯಲ್ಲಿ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಅವಧಿಯನ್ನು 9.12.22 ರಿಂದ 2022ರ ಡಿಸೆಂಬರ್ 24ರವರೆಗೆ ವಿಸ್ತರಿಸಬೇಕು, ಅಂದರೆ ತೀವ್ರ ಪರಿಶೀಲನೆಗೆ ಅನುವು ಮಾಡಿಕೊಡಲು ಮತ್ತು 162 ಶಿವಾಜಿನಗರ, 169 ಚಿಕ್ಕಪೇಟೆ ಮತ್ತು 174 ಮಹದೇವಪುರದ ಮೂರು ಕ್ಷೇತ್ರಗಳಲ್ಲಿ ಯಾವುದಾದರೂ ಕ್ಲೇಮ್ ಗಳು ಇದ್ದಲ್ಲಿ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಹೆಚ್ಚಿನ ಅವಕಾಶವನ್ನು ಒದಗಿಸಲು 15 ದಿನಗಳವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
3. 1.1.2022 ರ ನಂತರ 162 ಶಿವಾಜಿನಗರ, 169 ಚಿಕ್ಕಪೇಟೆ ಮತ್ತು 174 ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಮಾಡಲಾದ ಎಲ್ಲಾ ಸೇರ್ಪಡೆ ಮತ್ತು ತೆಗೆದುಹಾಕಿರುವ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಂಡು ಅವರಿಗೆ ಕ್ಲೇಮ್ ಮತ್ತು ಆಕ್ಷೇಪಣೆ ಸಲ್ಲಿಸಲು ಅನುವು ಮಾಡಿಕೊಡುವುದು.
4. ಎಫ್ಐಆರ್.ಗಳ (0217/2022 & 0276/2022) ಅನುಸಾರ 17.11.22 ರ ದಿನಾಂಕದ ಕ್ರಿಮಿನಲ್ ತನಿಖೆ ಈಗಾಗಲೇ ಪ್ರಗತಿಯಲ್ಲಿದೆ. ಕಾನೂನು ಬಾಹಿರವಾಗಿ ಸಂಗ್ರಹಿಸಿದ ದಾಖಲೆಗಳು ಅಥವಾ ದತ್ತಾಂಶಗಳ ನೇರ ಅಥವಾ ಪರೋಕ್ಷ ಬಳಕೆ ನಡೆಯದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
5. 162 ಶಿವಾಜಿನಗರ ಮತ್ತು 169 ಚಿಕ್ಕಪೇಟೆ ಕ್ಷೇತ್ರಗಳ ಉಸ್ತುವಾರಿ ಹೊಂದಿದ್ದ ಬಿಬಿಎಂಪಿಯ (ಕೇಂದ್ರ) ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿ (ಎಡಿಇಒ) ಶ್ರೀ ಎಸ್. ರಂಗಪ್ಪ ಮತ್ತು 174 ಮಹದೇವಪುರ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ ಕೆ. ಶ್ರೀನಿವಾಸ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ನಿರ್ದೇಶಿಸಲಾಗಿದೆ.
6. ಆಯೋಗದ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳ ಪ್ರಕಾರ ಮತದಾರರ ಪಟ್ಟಿಯ ಮೇಲ್ವಿಚಾರಣೆ ಮತ್ತು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿಯ ಹೊರಗಿನಿಂದ ಈ ಕೆಳಗಿನ ಅಧಿಕಾರಿಗಳನ್ನು ಮೂರು ಕ್ಷೇತ್ರಗಳಿಗೆ ವಿಶೇಷ ಅಧಿಕಾರಿಗಳಾಗಿ ನೇಮಿಸಬೇಕು -
a. ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಐಎಎಸ್ - 162, ಶಿವಾಜಿನಗರ
ವಿಧಾನಸಭಾ ಕ್ಷೇತ್ರ
b. ಡಾ.ಆರ್.ವಿಶಾಲ್, ಐಎಎಸ್- 169ಕ್ಕೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ
c. ಶ್ರೀ. ಅಜಯ್ ನಾಗಭೂಷಣ್, ಐಎಎಸ್- 174ಕ್ಕೆ, ಮಹದೇವಪುರ ವಿ.ಸ.ಕ್ಷೇ.
7. ಬಿಬಿಎಂಪಿ ಪ್ರದೇಶದ ಮತದಾರರ ಪಟ್ಟಿಯ ವೀಕ್ಷಕರುಗಳು
a. ಶ್ರೀ ಉಜ್ವಲ್ ಘೋಷ್ (ಬಿಬಿಎಂಪಿ ಕೇಂದ್ರ),
b. ಶ್ರೀ ರಾಮಚಂದ್ರನ್ ಆರ್. (ಬಿಬಿಎಂಪಿ ಉತ್ತರ)
ಸಿ. ಶ್ರೀ. ಪಿ.ರಾಜೇಂದ್ರ ಚೋಳನ್ (ಬಿಬಿಎಂಪಿ ದಕ್ಷಿಣ)
ಡಿ. ಡಾ. ಎನ್.ಮಂಜುಳಾ (ಬೆಂಗಳೂರು ನಗರ)
162 ಶಿವಾಜಿನಗರ, 169 ಚಿಕ್ಕಪೇಟೆ ಮತ್ತು 174 ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ತಮಗೆ ಗೊತ್ತುಪಡಿಸಿದ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುತ್ತಿರುವ ಎಸ್ ಎಸ್ ಆರ್ ಕಾರ್ಯಗಳ ಮೇಲ್ವಿಚಾರಣೆಗೆ ನಿರ್ದೇಶಿಸಲಾಗಿದೆ.
8. ಬೆಂಗಳೂರಿನ ಪ್ರಾದೇಶಿಕ ಆಯುಕ್ತರಾದ ಶ್ರೀ ಅಮ್ಲನ್ ಬಿಸ್ವಾಸ್ ಅವರು ಬಿಬಿಎಂಪಿ ಪ್ರದೇಶದಲ್ಲಿನ ಎಸ್.ಎಸ್.ಆರ್. ಕಾರ್ಯದ ಪರಾಮರ್ಶೆಯನ್ನು ಸಮನ್ವಯಗೊಳಿಸಿ ಮೇಲ್ವಿಚಾರಣೆ ನಡೆಸಲಿದ್ದಾರೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನುಮೋದನೆಯೊಂದಿಗೆ ಸದರಿ ಕಾರ್ಯದಲ್ಲಿ ಸಹಾಯ ಮಾಡಲು ಯಾವುದೇ ಅಧಿಕಾರಿಯನ್ನು ನಿಯೋಜಿಸಲು ಅವರಿಗೆ ಮತ್ತಷ್ಟು ಅಧಿಕಾರ ನೀಡಲಾಗಿದೆ.
9. ಬೆಂಗಳೂರು ಪ್ರಾದೇಶಿಕ ಆಯುಕ್ತ ಶ್ರೀ ಅಮ್ಲಾನ್ ಬಿಸ್ವಾಸ್ ಅವರು, ಬಿಬಿಎಂಪಿ ಪ್ರದೇಶದಲ್ಲಿನ ಖಾಸಗಿ ಸಂಸ್ಥೆಯಿಂದ ಮತದಾರರ ನೋಂದಣಿ ಜಾಗೃತಿ ಚಟುವಟಿಕೆಗಳ ದುರುಪಯೋಗ ಮತ್ತು ಖಾಸಗಿ ಸಂಸ್ಥೆಯಿಂದ ದತ್ತಾಂಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರಿನ ಬಗ್ಗೆ ತಮಗೆ ವಹಿಸಲಾದ ಆಡಳಿತಾತ್ಮಕ ವಿಚಾರಣೆಯನ್ನು ತ್ವರಿತಗೊಳಿಸಬೇಕು.
10. ಎಸ್ಎಸ್ಆರ್ ಚಟುವಟಿಕೆಗಳ ಪ್ರತಿ ಹಂತದಲ್ಲೂ ಮಾನ್ಯತೆ ಪಡೆದ ರಾಜಕೀಯ ಪಕ್ಷವನ್ನು ಒಳಗೊಳ್ಳುವಂತೆ ಮತ್ತು ಮತದಾರರ ಪಟ್ಟಿಯ ಕೊನೆಯ ಅಂತಿಮ ಪ್ರಕಟಣೆಯಿಂದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಇರಿಸಲಾದ ಎಲ್ಲಾ ವಿವರಗಳ ವಿಧಾಸಭಾ ಕ್ಷೇತ್ರವಾರು ಪಟ್ಟಿಯನ್ನು ಒದಗಿಸುವಂತೆ ಸಿಇಓ ಕರ್ನಾಟಕ ಇವರಿಗೆ ನಿರ್ದೇಶಿಸಲಾಗಿದೆ.
11. ಈ ಮೇಲಿನ ಕ್ರಮಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಸಮನ್ವಯಗೊಳಿಸಲು ಸಿಇಓ ಕರ್ನಾಟಕ ಇವರಿಗೆ ನಿರ್ದೇಶಿಸಲಾಗಿದೆ.
1950ರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ ನಿಬಂಧನೆಗಳಿಗೆ ಅನುಸಾರವಾಗಿ ಸಂವಿಧಾನದ 324ನೇ ಅನುಚ್ಛೇದದ ಅಡಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಒಟ್ಟಾರೆ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಪರಿಷ್ಕರಿಸಲಾಗುತ್ತದೆ. ಭಾರತದ ಚುನಾವಣಾ ಆಯೋಗವು ಸದಾ ಮುಕ್ತ, ನ್ಯಾಯಸಮ್ಮತ ಮತ್ತು ಸಮಗ್ರ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆ, ಇದಕ್ಕಾಗಿ ದೋಷ ಮುಕ್ತ ಮತ್ತು ನವೀಕರಿಸಿದ ಮತದಾರರ ಪಟ್ಟಿಯು ಪೂರ್ವಾಪೇಕ್ಷಿತವಾಗಿದೆ. ಮತದಾರರ ಪಟ್ಟಿಯನ್ನು ಸಂಪೂರ್ಣ ಪಾರದರ್ಶಕ ಮತ್ತು ನಿಯಮ ಆಧಾರಿತ ರೀತಿಯಲ್ಲಿ ಸಾರಾಂಶ ಮತ್ತು ನಿರಂತರ ಪರಿಷ್ಕರಣೆಯ ಮೂಲಕ ನವೀಕರಿಸಲಾಗುತ್ತದೆ, ಇದರಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲಾ ಬಾಧ್ಯಸ್ಥರಿಗೆ ಪರಿಷ್ಕರಣೆಯ ಸ್ಥಿತಿ ಮತ್ತು ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸೇರ್ಪಡೆ, ತೆಗೆದುಹಾಕುವುದು ಮತ್ತು ವಿಳಾಸದಲ್ಲಿನ ಬದಲಾವಣೆ ಇತ್ಯಾದಿಗಳನ್ನು ಒಳಗೊಂಡಂತೆ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರತಿಯೊಂದು ಹಂತದಲ್ಲೂ ಕಡ್ಡಾಯ ಬಹಿರಂಗಪಡಿಸುವಿಕೆ ಮತ್ತು ಕ್ಲೇಮುಗಳು ಮತ್ತು ಆಕ್ಷೇಪಣೆಗಳ ನಿಬಂಧನೆ ಇದೆ. ಚುನಾವಣಾ ಆಯೋಗವು ಎಲ್ಲಾ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಬೂತ್ ಮಟ್ಟದ ಚಟುವಟಿಕೆಗಳನ್ನು ಬೂತ್ ಮಟ್ಟದ ಅಧಿಕಾರಿಗಳು ಮಾತ್ರ ಕಾಲಕಾಲಕ್ಕೆ ಆಯೋಗದ ಸೂಚನೆಗಳಿಗೆ ಅನುಸಾರವಾಗಿ ತೆಗೆದುಕೊಳ್ಳಬೇಕಾಗುತ್ತದೆ (ದಿನಾಂಕ 04-10-2022 ರ ಸೂಚನೆ ಸಂಖ್ಯೆ 23/ಬಿಎಲ್ಒ/2022-ಇಆರ್.ಎಸ್, ದಿನಾಂಕ 04-10-2022 ರಿಂದ ಕೊನೆಯದಾಗಿ ನವೀಕರಿಸಲಾಗಿದೆ). ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ಈ ಪ್ರಮುಖ ನಿಬಂಧನೆಯಿಂದ ವಿಮುಖವಾಗುವ ಬಗ್ಗೆ ಆಯೋಗವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ.
*****
(Release ID: 1878991)
Visitor Counter : 266