ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಇಪಿಎಫ್ಒ ವೇತನ ಪಟ್ಟಿ ದತ್ತಾಂಶ: ಇಪಿಎಫ್ಒ 2022 ರ ಸೆಪ್ಟೆಂಬರ್ ತಿಂಗಳಲ್ಲಿ 16.82 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸಿದೆ

Posted On: 20 NOV 2022 5:18PM by PIB Bengaluru

2022 ರ ನವೆಂಬರ್ 20 ರಂದು ಬಿಡುಗಡೆಯಾದ ಇಪಿಎಫ್ಒನ ತಾತ್ಕಾಲಿಕ ವೇತನಪಟ್ಟಿ ದತ್ತಾಂಶವು 2022 ರ ಸೆಪ್ಟೆಂಬರ್ ತಿಂಗಳಲ್ಲಿ ಇಪಿಎಫ್ಒ 16.82 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸಿದೆ ಎಂಬುದನ್ನು  ಎತ್ತಿ ತೋರಿಸುತ್ತದೆ. ವೇತನ ಪಟ್ಟಿ ದತ್ತಾಂಶವನ್ನು ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ 2021 ರಲ್ಲಿ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ, 2022 ರ ಸೆಪ್ಟೆಂಬರ್ ತಿಂಗಳಲ್ಲಿ  ನಿವ್ವಳ ಸದಸ್ಯತ್ವ ಸೇರ್ಪಡೆಯಲ್ಲಿ 9.14% ಹೆಚ್ಚಳವನ್ನು ದಾಖಲಿಸಲಾಗಿದೆ. ಈ ತಿಂಗಳಲ್ಲಿ ನಿವ್ವಳ ದಾಖಲಾತಿಯು ಕಳೆದ ಹಣಕಾಸು ವರ್ಷದಲ್ಲಿ ದಾಖಲಾದ ಮಾಸಿಕ ಸರಾಸರಿಗಿಂತ 21.85% ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ, ಸುಮಾರು 2861 ಹೊಸ ಸಂಸ್ಥೆಗಳು ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952 ರ ಅಡಿಯಲ್ಲಿ ತಮ್ಮ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಯಮಗಳನ್ನು ಅನುಸರಣೆ ಮಾಡಲು ಪ್ರಾರಂಭಿಸಿವೆ.

ಈ ತಿಂಗಳಲ್ಲಿ ಸೇರ್ಪಡೆಯಾದ ಒಟ್ಟು 16.82 ಲಕ್ಷ ಸದಸ್ಯರ ಪೈಕಿ, ಸುಮಾರು 9.34 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್ಒ ವ್ಯಾಪ್ತಿಗೆ ಬಂದಿದ್ದಾರೆ. ಹೊಸ ಸದಸ್ಯರಲ್ಲಿ, 2.94ಲಕ್ಷ ಸದಸ್ಯರೊಂದಿಗೆ 18-21 ವರ್ಷ ವಯಸ್ಸಿನವರು ಅತ್ಯಧಿಕ ಸಂಖ್ಯೆಯಲ್ಲಿ  ನೋಂದಣಿಗೊಂಡಿದ್ದಾರೆ. ಇದರ ನಂತರ 21-25 ವರ್ಷ ವಯಸ್ಸಿನ ಗುಂಪಿನಲ್ಲಿ  2.54 ಲಕ್ಷ ಸದಸ್ಯರಿದ್ದಾರೆ. ಸುಮಾರು 58.75% ಜನರು 18-25 ವರ್ಷ ವಯಸ್ಸಿನ ಗುಂಪಿನವರಾಗಿದ್ದಾರೆ. ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳು ತಮ್ಮ ಶಿಕ್ಷಣವನ್ನು ಅನುಸರಿಸಿ ಸಂಘಟಿತ ವಲಯದ ಕಾರ್ಯಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಮತ್ತು ಸಂಘಟಿತ ವಲಯದಲ್ಲಿನ ಹೊಸ ಉದ್ಯೋಗಗಳು ಹೆಚ್ಚಾಗಿ ದೇಶದ ಯುವಕರಿಗೆ ಹೋಗುತ್ತಿವೆ ಎಂಬುದನ್ನು ಇದು ತೋರಿಸುತ್ತದೆ.

ಈ ತಿಂಗಳಲ್ಲಿ, ಸುಮಾರು 7.49 ಲಕ್ಷ ನಿವ್ವಳ ಸದಸ್ಯರು ಇಪಿಎಫ್ಒ ವ್ಯಾಪ್ತಿಗೆ ಬರುವ ಸಂಸ್ಥೆಗಳಲ್ಲಿ ತಮ್ಮ ಉದ್ಯೋಗಗಳನ್ನು ಬದಲಾಯಿಸುವ ಮೂಲಕ ಇಪಿಎಫ್ಒಗೆ ಮರಳಿದರು ಮತ್ತು ಅಂತಿಮ ಇತ್ಯರ್ಥವನ್ನು ಆಯ್ಕೆ ಮಾಡುವ ಬದಲು ಹಿಂದಿನ ಪಿಎಫ್ ಖಾತೆಯಿಂದ ಹಾಲಿ ಖಾತೆಗೆ ತಮ್ಮ ಹಣವನ್ನು ವರ್ಗಾಯಿಸುವುದನ್ನು ಆಯ್ಕೆ ಮಾಡಿಕೊಂಡರು. ಕಳೆದ ಮೂರು ತಿಂಗಳುಗಳಲ್ಲಿ ಇಪಿಎಫ್ಒ ವ್ಯಾಪ್ತಿಯಿಂದ ನಿರ್ಗಮಿಸುವ ಸದಸ್ಯರ ಸಂಖ್ಯೆ ನಿರಂತರವಾಗಿ ಇಳಿಮುಖವಾಗಿದೆ ಎಂದು ವೇತನ ಪಟ್ಟಿ ದತ್ತಾಂಶವು ಸೂಚಿಸುತ್ತದೆ. ಕಳೆದ ತಿಂಗಳಿಗೆ ಹೋಲಿಸಿದರೆ 2022 ರ ಸೆಪ್ಟೆಂಬರ್ ತಿಂಗಳಲ್ಲಿ ಇಪಿಎಫ್ಒದಿಂದ ನಿರ್ಗಮಿಸುವ ಸದಸ್ಯರ ಸಂಖ್ಯೆ  ಸುಮಾರು 9.65% ದಷ್ಟು ಕಡಿಮೆಯಾಗಿದೆ ಎಂಬುದನ್ನು  ತಿಂಗಳವಾರು ಹೋಲಿಕೆ ತೋರಿಸುತ್ತದೆ.

ವೇತನ ಪಟ್ಟಿಯ  ದತ್ತಾಂಶದ ಲಿಂಗತ್ವವಾರು ವಿಶ್ಲೇಷಣೆಯು 2022 ರ ಸೆಪ್ಟೆಂಬರ್ ತಿಂಗಳಲ್ಲಿ ನಿವ್ವಳ ಮಹಿಳಾ ಸದಸ್ಯರ ನೋಂದಣಿ 3.50 ಲಕ್ಷ ಎಂಬುದಾಗಿ ಹೇಳುತ್ತದೆ. ವರ್ಷದಿಂದ ವರ್ಷಕ್ಕೆ ನೋಂದಣಿ/ದಾಖಲಾತಿ ದತ್ತಾಂಶದ ಹೋಲಿಕೆಯು ಸಂಘಟಿತ ಕಾರ್ಯಪಡೆಯಲ್ಲಿ ಮಹಿಳೆಯರ ನಿವ್ವಳ ಸದಸ್ಯತ್ವವು 2021 ರ ಸೆಪ್ಟೆಂಬರ್ ತಿಂಗಳ  ನಿವ್ವಳ ಮಹಿಳಾ ಸದಸ್ಯತ್ವಕ್ಕೆ ಹೋಲಿಸಿದರೆ 2022 ರ ಸೆಪ್ಟೆಂಬರ್ ತಿಂಗಳಲ್ಲಿ 6.98% ಬೆಳವಣಿಗೆಯ ದರದೊಂದಿಗೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ. ಈ ತಿಂಗಳಲ್ಲಿ ಇಪಿಎಫ್ಒಗೆ ಸೇರುವ ಒಟ್ಟು ಹೊಸ ಸದಸ್ಯರಲ್ಲಿ, ಮಹಿಳಾ ಉದ್ಯೋಗಿಗಳ ನೋಂದಣಿಯು  26.36% ಎಂದು ದಾಖಲಾಗಿದೆ.

ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನಿವ್ವಳ ಸದಸ್ಯ ಸೇರ್ಪಡೆಯಲ್ಲಿ ತಿಂಗಳುವಾರು ಬೆಳವಣಿಗೆ ಪ್ರವೃತ್ತಿ ಕಂಡುಬಂದಿದೆ ಎಂಬುದನ್ನು ರಾಜ್ಯವಾರು ವೇತನ ಪಟ್ಟಿಯ ಅಂಕಿಅಂಶಗಳು ಎತ್ತಿ ತೋರಿಸುತ್ತವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ, ಗುಜರಾತ್ ಮತ್ತು ದೆಹಲಿ ರಾಜ್ಯಗಳು ಈ ತಿಂಗಳಲ್ಲಿ ಸುಮಾರು 11.41 ಲಕ್ಷ ನಿವ್ವಳ ಸದಸ್ಯರನ್ನು ಸೇರಿಸುವ ಮೂಲಕ ಮುಂಚೂಣಿಯಲ್ಲಿವೆ, ಇದು ಎಲ್ಲಾ ವಯೋಮಾನದವರು ಒಳಗೊಂಡಂತೆ  ಒಟ್ಟು ನಿವ್ವಳ ವೇತನಪಟ್ಟಿ ಸೇರ್ಪಡೆಯ 67.85% ಆಗಿದೆ.

ಒಟ್ಟು ಸದಸ್ಯ ಸೇರ್ಪಡೆಯಲ್ಲಿ  ಉದ್ಯಮವಾರು ವೇತನಪಟ್ಟಿ ದತ್ತಾಂಶದ ವರ್ಗೀಕರಣದಲ್ಲಿ ಮುಖ್ಯವಾಗಿ ಎರಡು ವಿಭಾಗಗಳಾದ 'ಪರಿಣಿತ/ತಜ್ಞ  ಸೇವೆಗಳು' (ಮಾನವಶಕ್ತಿ ಏಜೆನ್ಸಿಗಳು, ಖಾಸಗಿ ಭದ್ರತಾ ಏಜೆನ್ಸಿಗಳು ಮತ್ತು ಸಣ್ಣ ಗುತ್ತಿಗೆದಾರರು ಇತ್ಯಾದಿಗಳನ್ನು ಒಳಗೊಂಡಿರುತ್ತದೆ) ಮತ್ತು 'ವ್ಯಾಪಾರ-ವಾಣಿಜ್ಯ ಸಂಸ್ಥೆಗಳ' ಪಾಲು ಒಟ್ಟು ಸದಸ್ಯ ಸೇರ್ಪಡೆಯಲ್ಲಿ 48.52% ರಷ್ಟಿದೆ. ಉದ್ಯಮವಾರು ದತ್ತಾಂಶಗಳನ್ನು ಹಿಂದಿನ ತಿಂಗಳ ಅಂಕಿಅಂಶಗಳೊಂದಿಗೆ ಹೋಲಿಸಿ ನೋಡಿದಾಗ, 'ರಾಷ್ಟ್ರೀಕೃತ ಬ್ಯಾಂಕುಗಳನ್ನು ಹೊರತುಪಡಿಸಿದ ಬ್ಯಾಂಕುಗಳು', 'ಜವಳಿ', 'ಸಾಮಾನ್ಯ ವಿಮೆ', 'ಹೋಟೆಲ್ ಗಳು', 'ಆಸ್ಪತ್ರೆಗಳು' ಇತ್ಯಾದಿ ಕೈಗಾರಿಕೆಗಳಲ್ಲಿ ಹೆಚ್ಚಿನ ದಾಖಲಾತಿಗಳು/ನೋಂದಣೆಗಳು  ಕಂಡುಬಂದಿವೆ.

ಉದ್ಯೋಗಿಗಳ ದಾಖಲೆಯನ್ನು ನವೀಕರಿಸುವುದು ಮತ್ತು ಸಕಾಲಿಕಗೊಳಿಸುವುದು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ದತ್ತಾಂಶ ಉತ್ಪಾದನೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ವೇತನಪಟ್ಟಿ ದತ್ತಾಂಶವು ತಾತ್ಕಾಲಿಕವಾಗಿರುತ್ತದೆ. ಆದ್ದರಿಂದ ಹಿಂದಿನ ದತ್ತಾಂಶವು ಪ್ರತಿ ತಿಂಗಳು ನವೀಕರಿಸಲ್ಪಡುತ್ತದೆ. 2018ರ ಏಪ್ರಿಲ್-ತಿಂಗಳಿಂದ  ಇಪಿಎಫ್ಒ 2017ರ ಸೆಪ್ಟೆಂಬರ್ ಬಳಿಕದ ವೇತನ ದತ್ತಾಂಶವನ್ನು ಬಿಡುಗಡೆ ಮಾಡುತ್ತಿದೆ. ಮಾಸಿಕ ವೇತನ ಪಟ್ಟಿ  ದತ್ತಾಂಶದಲ್ಲಿ, ಆಧಾರ್ ಮೌಲ್ಯೀಕರಿಸಿದ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಮೂಲಕ ಮೊದಲ ಬಾರಿಗೆ ಇಪಿಎಫ್ಒಗೆ ಸೇರುವ ಸದಸ್ಯರ ಎಣಿಕೆ, ಇಪಿಎಫ್ಒ ವ್ಯಾಪ್ತಿಯಿಂದ ನಿರ್ಗಮಿಸುವ ಹಾಲಿ ಸದಸ್ಯರು ಮತ್ತು ನಿರ್ಗಮಿಸಿದ ಬಳಿಕ ಮತ್ತೆ  ಸದಸ್ಯರಾಗಿ ಸೇರುವವರ ಸಂಖ್ಯೆಯನ್ನು ನಿವ್ವಳ ಮಾಸಿಕ ವೇತನಪಟ್ಟಿಯನ್ನು ತಯಾರಿಸುವಾಗ ಗಣನೆಗೆ  ತೆಗೆದುಕೊಳ್ಳಲಾಗುತ್ತದೆ.

ಇಪಿಎಫ್ಒ ಭಾರತದ ಪ್ರಮುಖ ಸಂಸ್ಥೆಯಾಗಿದ್ದು, ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952 ರ ಅಡಿಯಲ್ಲಿ ಸಂಘಟಿತ ವಲಯದ ಕಾರ್ಯಪಡೆಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಭವಿಷ್ಯ ನಿಧಿ, ಸದಸ್ಯರ ನಿವೃತ್ತಿಯ ಮೇಲೆ ಪಿಂಚಣಿ ಪ್ರಯೋಜನಗಳು ಮತ್ತು ಸದಸ್ಯರ ಅಕಾಲಿಕ ಮರಣದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಕುಟುಂಬ ಪಿಂಚಣಿ ಹಾಗು ವಿಮಾ ಪ್ರಯೋಜನಗಳು ಸೇರಿದಂತೆ ಇದು ತನ್ನ ಸದಸ್ಯರಿಗೆ ಹಲವಾರು ಸೇವೆಗಳನ್ನು ಒದಗಿಸುತ್ತದೆ.

******


(Release ID: 1877602) Visitor Counter : 163


Read this release in: English , Urdu , Hindi