ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತೀಯ ನವೋದ್ಯಮಗಳ ತಂತ್ರಜ್ಞಾನ, ನಾವೀನ್ಯತೆ ಮತ್ತು ಸಮಸ್ಯೆ ಪರಿಹರಿಸುವ ವಿಧಾನವು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಜಾಗತಿಕ ಪ್ರಾಬಲ್ಯವನ್ನು ಪಡೆಯಲು ನೆರವಾಗುತ್ತಿದೆ -ಶ್ರೀ ಪಿಯೂಷ್ ಗೋಯಲ್
ಒಎನ್ ಡಿಸಿಯು ಸಣ್ಣ ಉದ್ಯಮಗಳು ಮತ್ತು ಕೌಟುಂಬಿಕ ವ್ಯಾಪಾರಗಳಿಗೆ ದೊಡ್ಡ ಇ-ವಾಣಿಜ್ಯ ಕಂಪನಿಗಳೊಂದಿಗೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುತ್ತದೆ: ಶ್ರೀ ಪಿಯೂಷ್ ಗೋಯಲ್
ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಯಾತ್ರೆಗೆ ಬೆಂಗಳೂರು ಹೊಸ ಯುಗವನ್ನು ತೆರೆದಿದೆ- ಶ್ರೀ ಪೀಯೂಷ್ ಗೋಯಲ್
100 ಯುನಿಕಾರ್ನ್ ಗಳ ಪೈಕಿ 40 ಯುನಿಕಾರ್ನ್ ಗಳು ಬೆಂಗಳೂರಿನಲ್ಲಿವೆ ಮತ್ತು ಖಾಸಗಿ ಈಕ್ವಿಟಿ ಹೂಡಿಕೆದಾರರು, ಹಣ ಹೂಡಿಕೆದಾರರು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಇಂಕ್ಯುಬೇಷನ್ ಕೇಂದ್ರಗಳು ಮತ್ತು ಅತ್ಯುತ್ತಮ ಗುಣಮಟ್ಟದ ಪ್ರತಿಭೆಯ ರೂಪದಲ್ಲಿ ಇಲ್ಲಿ ಬೃಹತ್ ಪರಿಸರ ವ್ಯವಸ್ಥೆಯನ್ನು ರೂಪಿಸಲಾಗಿದೆ : ಶ್ರೀ ಪಿಯೂಷ್ ಗೋಯಲ್
Posted On:
18 NOV 2022 8:02PM by PIB Bengaluru
ನವೋದ್ಯಮಗಳ ತಂತ್ರಜ್ಞಾನ, ನಾವಿನ್ಯತೆ ಮತ್ತು ಸಮಸ್ಯೆ-ಪರಿಹರಿಸುವ ವಿಧಾನವು ತಂತ್ರಜ್ಞಾನ ಮತ್ತು ನಾವಿನ್ಯತೆಯ ಕ್ಷೇತ್ರದಲ್ಲಿ ಜಾಗತಿಕ ಪ್ರಾಬಲ್ಯವನ್ನು ಪಡೆಯಲು ಭಾರತಕ್ಕೆ ಸಹಾಯ ಮಾಡುವ ಒಂದು ಶಕ್ತಿಯ ಗುಣಕವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಮತ್ತು ಜವಳಿ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಹೇಳಿದ್ದಾರೆ. ಅವರಿಂದು ಬೆಂಗಳೂರಿನಲ್ಲಿ ನಡೆದ 25ನೇ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗೋಯಲ್, ಸಾಂಕ್ರಾಮಿಕ ರೋಗದ ನಂತರದ ಚೇತರಿಕೆಯಲ್ಲಿ ಭಾರತೀಯ ನವೋದ್ಯಮಗಳು ಬೂಸ್ಟರ್ ಡೋಸ್ ಪಾತ್ರವನ್ನು ಬಹುತೇಕ ನಿರ್ವಹಿಸುತ್ತಿವೆ, ಇದನ್ನು ಭಾರತವು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದೆ ಎಂದು ಹೇಳಿದರು. ಭೌಗೋಳಿಕ-ರಾಜಕೀಯ ಸವಾಲುಗಳು ವಿಶ್ವ ವ್ಯಾಪಾರವನ್ನು ಹಿಂದಕ್ಕೆ ತಳ್ಳಿದ್ದು, ದೇಶಗಳು ಆರ್ಥಿಕ ಹಿಂಜರಿತದ ಪ್ರವೃತ್ತಿಗೆ ಕುಸಿಯುತ್ತಿರುವಾಗ, ನಮ್ಮ ಪ್ರತಿಭಾನ್ವಿತ ಯುವಕ-ಯುವತಿಯರು ಭಾರತವನ್ನು ಜಾಗತಿಕ ಚೇತರಿಕೆಯ ಮುನ್ನಡೆಗೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಶ್ರೀ ಗೋಯಲ್ ಅವರು ಭಾರತೀಯ ತಂತ್ರಜ್ಞಾನ ಉದ್ಯಮದ ಇತ್ತೀಚಿನ ದೊಡ್ಡ ಆವಿಷ್ಕಾರಗಳ ಉದಾಹರಣೆಗಳನ್ನು ನೀಡಿದರು, ಅವು ವಿಶ್ವದಲ್ಲಿ ಗಮನ ಸೆಳೆದಿವೆ. ಏಕೀಕೃತ ಪಾವತಿ ಗೇಟ್ ವೇ, ಯುಪಿಐ, ಕೋವಿಡ್ ಲಸಿಕೆ ನಿರ್ವಹಣೆ ಮತ್ತು ಆಧಾರ್ ಕಾರ್ಡ್ ರೂಪದಲ್ಲಿ ಒಂದು ಶತಕೋಟಿಗಿಂತಲೂ ಹೆಚ್ಚು ಜನರಿಗೆ ಸಾಮಾನ್ಯ ಗುರುತಿನ ಚೀಟಿ, ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ರಕ್ಷಣೆ ಮತ್ತು ಒಂದು ದೇಶ ಒಂದು ಪಡಿತರ ಚೀಟಿಯೊಂದಿಗೆ ಕಡುಬಡವರಿಗೆ ತಡೆರಹಿತ ಪಡಿತರ ಪೂರೈಕೆಯಂತಹ ಉಪಕ್ರಮಗಳು - ಇವೆಲ್ಲವೂ ನಮ್ಮ ಯುವ ನಾವೀನ್ಯದಾರರು ಅಭಿವೃದ್ಧಿಪಡಿಸಿದ ವೇದಿಕೆಗಳಿಗೆ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.
ಭಾರತೀಯ ಆರ್ಥಿಕತೆಯ ಚೇತರಿಕೆಯ ಬಗ್ಗೆ ಮಾತನಾಡಿದ ಸಚಿವರು, ನಮ್ಮ ಹಣದುಬ್ಬರವು ವಾಸ್ತವವಾಗಿ ಕುಸಿಯುತ್ತಿದೆ ಮತ್ತು ಇಂದಿಗೂ ಸಹ ಇದು ಹತ್ತು ವರ್ಷಗಳ ಹಿಂದೆ ಇದ್ದ ಮಟ್ಟಕ್ಕಿಂತ ಅರ್ಧದಷ್ಟು ಇದೆ ಎಂದು ಹೇಳಿದರು. ಭಾರತೀಯ ಆರ್ಥಿಕತೆಯ ಮೂಲಭೂತ ರಚನೆಯನ್ನು ಬಲಪಡಿಸಲು ಎಂಟು ವರ್ಷಗಳ ನಿರಂತರ ಪ್ರಯತ್ನಗಳ ಮೂಲಕ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು 2014-15 ರಲ್ಲಿ ಕೇಂದ್ರೀಯ ಬ್ಯಾಂಕ್ ಕಡ್ಡಾಯಗೊಳಿಸಿದ ನಂತರ ನಾವು ಈ ಅವಧಿಯಲ್ಲಿ ಸರಾಸರಿ 4.5 ಪ್ರತಿಶತದಷ್ಟು ಹಣದುಬ್ಬರ ದರವನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು. ನಾವು ಇನ್ನೂ ಹಣದುಬ್ಬರವನ್ನು ಶೇಕಡಾ 6.5ರಲ್ಲಿ ನಿಯಂತ್ರಣದಲ್ಲಿಟ್ಟಿದ್ದೇವೆ ಎಂದು ಅವರು ಹೇಳಿದರು. ನಾವು ವಿಶ್ವದ ಆರ್ಥಿಕ ಚೇತರಿಕೆಗೆ ಶಕ್ತಿ ನೀಡುವುದನ್ನು ಮುಂದುವರಿಸುತ್ತೇವೆ ಮತ್ತು 2047 ರಲ್ಲಿ ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ತಲುಪಿದಾಗ ನಾವು ಖಂಡಿತವಾಗಿಯೂ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿರುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬೆಂಗಳೂರಿನ ಬಗ್ಗೆ ಮಾತನಾಡಿದ ಶ್ರೀ ಗೋಯಲ್ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿ ಸಾಗುತ್ತಿರುವ ಭಾರತಕ್ಕೆ ಈ ನಗರವು ನಿಜವಾಗಿಯೂ ಒಂದು ಹೊಸ ಶಕೆಯನ್ನು ಬಿಚ್ಚಿಟ್ಟಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರು ಸಾಧಿಸಿದ ಕೀರ್ತಿಯನ್ನು ನಾವು ಹಿಂತಿರುಗಿ ನೋಡಬಹುದು ಎಂದು ಅವರು ಹೇಳಿದರು. 100 ಯುನಿಕಾರ್ನ್ ಗಳಲ್ಲಿ 40 ಕ್ಕೂ ಹೆಚ್ಚು ಯುನಿಕಾರ್ನ್ ಗಳು ಬೆಂಗಳೂರಿನಲ್ಲಿವೆ ಮತ್ತು ಖಾಸಗಿ ಈಕ್ವಿಟಿ ಹೂಡಿಕೆದಾರರು, ಸಾಹಸೋದ್ಯಮ ಬಂಡವಾಳಗಾರರು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಇನ್ ಕ್ಯುಬೇಶನ್ ಕೇಂದ್ರಗಳು, ಪ್ರತಿಭೆಯ ಉನ್ನತ ಗುಣಮಟ್ಟ ಮತ್ತು ಮಾನವ ಸಂಪನ್ಮೂಲ ಕೌಶಲ್ಯಗಳ ರೂಪದಲ್ಲಿ ಇಲ್ಲಿ ಬೃಹತ್ ಪರಿಸರ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅವರು ಗಮನಸೆಳೆದರು. ಕರ್ನಾಟಕ ಮತ್ತು ಬೆಂಗಳೂರು ನಾಳೆಯ ಭಾರತದ ಧ್ವಜಧಾರಿಗಳು ಎಂದರು.
ಒಎನ್ ಡಿಸಿ ಉಪಕ್ರಮದ ಬಗ್ಗೆ ಮಾತನಾಡಿದ ಶ್ರೀ ಗೋಯಲ್, ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸರ್ಕಾರವು ಇ-ವಾಣಿಜ್ಯವನ್ನು ಪ್ರಜಾಸತ್ತಾತ್ಮಕಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ರೋಮಾಂಚಕ ಇ-ವಾಣಿಜ್ಯ ನೆಟ್ವರ್ಕ ನಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ಸಣ್ಣ ಕೌಟುಂಬಿಕ ವ್ಯಾಪಾರ ಉಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಈ ಅಭಿವೃದ್ಧಿಯಲ್ಲಿ ಬೆಂಗಳೂರು ದೊಡ್ಡ ಪಾತ್ರವನ್ನು ವಹಿಸಲಿದೆ ಮತ್ತು ಈ ಉಪಕ್ರಮವು ಯಶಸ್ವಿಯಾದಾಗ ಮತ್ತು ಜಾಗತಿಕವಾಗಿ ಹೆಸರುವಾಸಿಯಾದಾಗ, ಈ ನಗರದಲ್ಲಿ ಆರಂಭಿಕ ಪರೀಕ್ಷೆಯನ್ನು ನಡೆಸುವುದರೊಂದಿಗೆ ಬೆಂಗಳೂರಿನಲ್ಲಿ ಪ್ರಾರಂಭವಾಯಿತು ಎಂದು ಸ್ಮರಿಸಲಾಗುವುದು ಎಂದು ಅವರು ಹೇಳಿದರು.
ಭಾರತವು ಈ ವರ್ಷ ಡಿಸೆಂಬರ್ 1 ರಿಂದ ಜಿ 20 ರ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ ಎಂದು ಶ್ರೀ ಗೋಯಲ್ ಗಮನಸೆಳೆದರು. ಭಾರತದ ಸಾಧನೆಗಳು ಮತ್ತು ಅವಕಾಶಗಳನ್ನು ವಿಶ್ವದ ಇತರ ಭಾಗಗಳಿಗೆ ತೋರಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು. ನಮ್ಮ ನವೋದ್ಯಮಗಳು ಮತ್ತು ನವೋದ್ಯಮಿಗಳು ವಿಶ್ವ ವೇದಿಕೆಯಲ್ಲಿ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳುವ ಅವಕಾಶವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಶ್ರಮಿಸಲಿದ್ದೇವೆ ಎಂದು ಅವರು ಹೇಳಿದರು.
*****
(Release ID: 1877372)
Visitor Counter : 145