ಗೃಹ ವ್ಯವಹಾರಗಳ ಸಚಿವಾಲಯ

2027ರ ವೇಳೆಗೆ ಭಾರತದ ಆರ್ಥಿಕತೆಯು ವಿಶ್ವದಲ್ಲಿ 3 ನೇ ಸ್ಥಾನ ಪಡೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ - ಅಮಿತ್ ಶಾ


2025ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲಿದೆ: ಅಮಿತ್ ಶಾ 

ಮೋದಿ ಸರ್ಕಾರದ ಬಡತನ ನಿವಾರಣಾ ಕಾರ್ಯಕ್ರಮಗಳಿಂದಾಗಿ ಭಾರತದಲ್ಲಿ 6೦ ಕೋಟಿಗೂ ಹೆಚ್ಚು ಜನರು ಆರ್ಥಿಕತೆಗೆ ಕೊಡುಗೆ ನೀಡಲು ಪ್ರಾರಂಭಿಸಿದ್ದಾರೆ

ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ ರಾಜಕೀಯ ಸ್ಥಿರತೆ ಮತ್ತು ಪಾರದರ್ಶಕ ಆಡಳಿತವಿದ್ದು, ಭಾರತವು ತ್ವರಿತ ಗತಿಯ ಆರ್ಥಿಕ ರಾಷ್ಟ್ರವಾಗಿ ಮಾರ್ಪಟ್ಟಿದೆ

ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ತಮಿಳು ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಪರಿಚಯಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ ಗೃಹ ಸಚಿವ ಶ್ರೀ ಅಮಿತ್ ಶಾ 

ಹೂಡಿಕೆಯನ್ನು ಆಕರ್ಷಿಸಲು ಪ್ರಧಾನಮಂತ್ರಿ ಮೋದಿ ಅವರು ತಮಿಳುನಾಡಿಗೆ ಅತಿದೊಡ್ಡ ಅವಕಾಶವನ್ನು ನೀಡಿದ್ದಾರೆ

Posted On: 12 NOV 2022 7:13PM by PIB Bengaluru

ರಾಜ್ಯದಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ತಮಿಳು ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಪರಿಚಯಿಸುವಂತೆ ಮಾನ್ಯ ಗೃಹ ಸಚಿವ ಅಮಿತ್ ಶಾ ಅವರಿಂದು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

https://static.pib.gov.in/WriteReadData/userfiles/image/image0012S3H.jpg

ತಮಿಳುನಾಡಿನಲ್ಲಿ ಇಂಡಿಯಾ ಸಿಮೆಂಟ್ಸ್ ನ ಅಮೃತ ಮೋಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ತಮಿಳು ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಪರಿಚಯಿಸುವಂತೆ ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಹಲವಾರು ರಾಜ್ಯ ಸರ್ಕಾರಗಳು ಈ ಪ್ರಯತ್ನವನ್ನು ಮಾಡಿವೆ ಮತ್ತು ವಿದ್ಯಾರ್ಥಿಗಳು ಅದರಿಂದ ಶೈಕ್ಷಣಿಕ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದರು.

ಮಾತೃಭಾಷೆಯಾಗಿ ತಮಿಳು ಭಾಷೆಯನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳು ತಮಿಳು ಮಾಧ್ಯಮದಲ್ಲಿ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ ಹಾಗೂ ಬೋಧನಾ ಮಾಧ್ಯಮವಾಗಿ ತಮ್ಮ ಮಾತೃಭಾಷೆಯೊಂದಿಗೆ ತಮ್ಮ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಸಲೂ ನೆರವಾಗುತ್ತದೆ ಎಂದು ಮಾನ್ಯ ಸಚಿವರು ಹೇಳಿದರು.

https://static.pib.gov.in/WriteReadData/userfiles/image/image002ZGD6.jpg

ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ತಮಿಳು ಭಾಷೆಯನ್ನು ಉಳಿಸಿ ಬೆಳೆಸುವುದು ಮತ್ತು ಉತ್ತೇಜಿಸುವುದು ಇಡೀ ರಾಷ್ಟ್ರದ ಜವಾಬ್ದಾರಿಯಾಗಿದೆ. 1350 ಸ್ಥಾನಗಳಿಗೆ ತಮಿಳನ್ನು ಬೋಧನಾ ಮಾಧ್ಯಮವಾಗಿ ಪರಿಚಯಿಸಲು ಸೂಚಿಸಲಾಗಿದೆ ಎಂದು ಅವರು ಬಹಿರಂಗಪಡಿಸಿದರು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಕೇವಲ 50 ಸ್ಥಾನಗಳಲ್ಲಿ ಮಾತ್ರ ತಮಿಳು ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

"ತಮಿಳುನಾಡು ಸರ್ಕಾರವು ತಮಿಳು ಭಾಷೆಯಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಒದಗಿಸಲು ಕ್ರಮ ಕೈಗೊಂಡರೆ, ಅದನ್ನು ಭಾಷೆಯ ಪ್ರಚಾರಕ್ಕೆ ದೊಡ್ಡ ಸೇವೆ ಎಂದು ಪರಿಗಣಿಸಲಾಗುತ್ತದೆ" ಎಂದು ಅವರು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಅವರು 2025ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಘೋಷಿಸಿದರು. "ಕಳೆದ ಎಂಟು ವರ್ಷಗಳಲ್ಲಿ, ಭಾರತವು 11ನೇ ಶ್ರೇಯಾಂಕದಿಂದ 5 ನೇ ಸ್ಥಾನಕ್ಕೆ ಬಂದು, ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ಸಾಧನೆ ಮಾಡಿದ್ದು, ಬ್ರಿಟನ್ ಅನ್ನು ಹಿಂದೆ ತಳ್ಳಿದೆ. ಮೋರ್ಗನ್ ಸ್ಟಾನ್ಲಿ ನಡೆಸಿದ ಇತ್ತೀಚಿನ ಅಧ್ಯಯನವು 2027ರ ವೇಳೆಗೆ ಭಾರತದ ಆರ್ಥಿಕತೆಯು ವಿಶ್ವದಲ್ಲಿ 3ನೇ ಸ್ಥಾನ ಪಡೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದೆ" ಎಂದು ಗೃಹ ಸಚಿವರು ಸಭೆಗೆ ತಿಳಿಸಿದರು.

ಈ ಯಶಸ್ಸನ್ನು ಸಾಧಿಸುವಲ್ಲಿ ಮೂಲಸೌಕರ್ಯ ವಲಯವು ವಹಿಸಬೇಕಾದ ಪ್ರಮುಖ ಪಾತ್ರವನ್ನು ಪುನರುಚ್ಚರಿಸಿದ ಅವರು, ಇದನ್ನು ಕಾರ್ಯಸಾಧ್ಯವಾಗಿಸಲು ಭಾರತ ಸರ್ಕಾರವು ಹಲವಾರು ಪರಿಣಾಮಕಾರಿ ನೀತಿಗಳನ್ನು ಪರಿಚಯಿಸಿದೆ ಎಂದು ಹೇಳಿದರು.

ಬಾಹ್ಯಾಕಾಶ ಕ್ಷೇತ್ರವಾಗಿರಲಿ, ಡ್ರೋನ್ ಕ್ಷೇತ್ರವಾಗಿರಲಿ ಅಥವಾ ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿಸುವುದೇ ಆಗಿರಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಸ್ತಿತ್ವದಲ್ಲಿರುವ ನೀತಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದ್ದಾರೆ ಎಂದು ಅವರು ಹೇಳಿದರು.

ಚೆನ್ನೈ, ತಿರುಚಿರಾಪಳ್ಳಿ, ಕೊಯಮತ್ತೂರು, ಸೇಲಂ ಮತ್ತು ಹೊಸೂರುಗಳನ್ನು ಸಂಪರ್ಕಿಸುವ ತಮಿಳುನಾಡು ರಕ್ಷಣಾ ಕೈಗಾರಿಕಾ ಕಾರಿಡಾರ್ ಅನ್ನು ಪರಿಚಯಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಪ್ರಧಾನಮಂತ್ರಿಯವರು ತಮಿಳುನಾಡಿಗೆ ಅತಿದೊಡ್ಡ ಅವಕಾಶವನ್ನು ನೀಡಿದ್ದಾರೆ ಎಂದು ಮಾನ್ಯ ಗೃಹ ಸಚಿವರು ಪ್ರತಿಪಾದಿಸಿದರು.

"ಕಲ್ಲಿದ್ದಲು ವಲಯ, ವಾಣಿಜ್ಯ ಗಣಿಗಾರಿಕೆ ವಲಯ, ನವೋದ್ಯಮ ಅಥವಾ ಬ್ಯಾಂಕಿಂಗ್ ವಲಯಕ್ಕೆ  ಚೈತನ್ಯ ತುಂಬಲು ನೀತಿಗಳನ್ನು ರೂಪಿಸುವುದಾಗಿರಲಿ- ನರೇಂದ್ರ ಮೋದಿ ಸರ್ಕಾರವು ಹಲವಾರು ಪರಿಣಾಮಕಾರಿ ಮತ್ತು ಪಾರದರ್ಶಕ ನೀತಿಗಳನ್ನು ಪರಿಚಯಿಸಿದೆ" ಎಂದು ಅವರು ಹೇಳಿದರು.

ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಮೋದಿ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಹೊಸ ನೀತಿಗಳನ್ನು ಪರಿಚಯಿಸಿದೆ ಎಂದು ಪುನರುಚ್ಚರಿಸಿದ ಅವರು, "ನಾನು ಇಲ್ಲಿ ಒಂದೇ ಒಂದು ಉದಾಹರಣೆಯನ್ನು ನೀಡುತ್ತೇನೆ- ಇಡೀ ವಿಶ್ವವು ಶತಮಾನದ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ, ಭಾರತವು ತನ್ನದೇ ಆದ ಲಸಿಕೆಯನ್ನು ಉತ್ಪಾದಿಸಿದ ಕೆಲವೇ ದೇಶಗಳಲ್ಲಿ ಒಂದಾಗಿತ್ತು. ಅಷ್ಟೇ ಅಲ್ಲ, ಇಲ್ಲಿಯವರೆಗೆ ಭಾರತವು 225 ಕೋಟಿ ಡೋಸ್ ಗಳನ್ನು ನೀಡಿದೆ ಮತ್ತು 85 ದೇಶಗಳಿಗೆ ಲಸಿಕೆಗಳನ್ನು ಕಳುಹಿಸುವ ಮೂಲಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡಿದೆ ಎಂದರು.

ಮೋದಿ ಸರ್ಕಾರದ ಬಡತನ ನಿವಾರಣಾ ಕಾರ್ಯಕ್ರಮಗಳಿಂದಾಗಿ ಭಾರತದಲ್ಲಿ 60 ಕೋಟಿಗೂ ಹೆಚ್ಚು ಜನರು ಆರ್ಥಿಕತೆಗೆ ಕೊಡುಗೆ ನೀಡಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

"ಈ ಹಿಂದೆ ಅವರು ತಮ್ಮ ದಿನನಿತ್ಯದ ಬಡತನದ ವಿರುದ್ಧ ಹೋರಾಡುವುದರಲ್ಲಿ ಎಷ್ಟು ಸಿಕ್ಕಿಹಾಕಿಕೊಂಡಿದ್ದರು ಎಂದರೆ, ಆರ್ಥಿಕತೆಗೆ ಕೊಡುಗೆ ನೀಡುವ ಬಗ್ಗೆ ಯೋಚಿಸಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರವು ಅಂತಹ ಪ್ರತಿಯೊಂದು ಮನೆಗೆ ಶೌಚಾಲಯ ಸೌಲಭ್ಯ, ವಿದ್ಯುತ್ ಸಂಪರ್ಕ, ಸ್ವಂತ ಸೂರು, ಅನಿಲ ಸಂಪರ್ಕ ಮತ್ತು 5 ಲಕ್ಷದವರೆಗೆ ಆರೋಗ್ಯ ವೆಚ್ಚವನ್ನು ಸಹ ಇಂದು ಒದಗಿಸಿದೆ" ಎಂದು ಅವರು ಹೇಳಿದರು.
ಈ ಸೌಲಭ್ಯಗಳಿಂದಾಗಿ 6೦ ಕೋಟಿ ಜನರ ಜೀವನ ಮಟ್ಟವು ಮೇಲ್ಮುಖವಾಗಿ ಸಾಗಿದೆ ಎಂದು ಅವರು ಹೇಳಿದರು. ಈಗ ಅವರು ಹೊಸ ಆಕಾಂಕ್ಷೆಗಳೊಂದಿಗೆ ಆರ್ಥಿಕತೆಗೆ ಕೊಡುಗೆ ನೀಡಲು ಪ್ರಾರಂಭಿಸಿದ್ದಾರೆ ಎಂದರು.

"ಈ 60 ಕೋಟಿ ಜನರಲ್ಲಿ ಭರವಸೆಗಳನ್ನು ಹುಟ್ಟುಹಾಕುವ ಮೂಲಕ ಈ ಕ್ರಮಗಳು ಸ್ವತಃ ಆರ್ಥಿಕತೆಗೆ ದೊಡ್ಡ ಉತ್ತೇಜನವನ್ನು ನೀಡಿವೆ ಎಂದು ನಾನು ಭಾವಿಸುತ್ತೇನೆ.

ರಾಜಕೀಯ ಸ್ಥಿರತೆ ಮತ್ತು ಪಾರದರ್ಶಕ ಆಡಳಿತದಿಂದಾಗಿ, ಭಾರತವು ಇಂದು ತ್ವರಿತ ಗತಿಯ ಆರ್ಥಿಕತೆಯ ರಾಷ್ಟ್ರವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.
ಭಾರತದ ಸಾಧನೆಗಳನ್ನು ಇಂದು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಐಎಂಎಫ್ ಭಾರತವನ್ನು ಕತ್ತಲ ವಲಯದಲ್ಲಿ ಪ್ರಕಾಶಮಾನವಾದ ತಾಣ ಎಂದು ಬಣ್ಣಿಸಿದೆ" ಎಂದು ಅವರು ಹೇಳಿದರು.

ಐಎಂಎಫ್ ಅಂದಾಜಿನ ಪ್ರಕಾರ, 2022-23ನೇ ಸಾಲಿನಲ್ಲಿ ಜಿಡಿಪಿಯಲ್ಲಿ ಶೇ.6.8ರಷ್ಟು ವೃದ್ಧಿ ಸಾಧಿಸುವ ಮೂಲಕ ಭಾರತ ಜಿ20 ರಾಷ್ಟ್ರಗಳ ಪೈಕಿ 2ನೇ ಸ್ಥಾನದಲ್ಲಿರಲಿದೆ.

"2023-24 ರಲ್ಲಿ ಭಾರತವು ಜಿಡಿಪಿಯಲ್ಲಿ ಶೇ.6.1ರ ವೃದ್ಧಿಯೊಂದಿಗೆ ಜಿ 20 ರಲ್ಲಿ ಮೊದಲ ಸ್ಥಾನದಲ್ಲಿರುತ್ತದೆ ಎಂದು ಅದು ಅಂದಾಜಿಸಿದೆ" ಎಂದು ಅವರು ಹೇಳಿದರು.

ಭಾರತದ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಭಾರತ ಸರ್ಕಾರವು ವೆಚ್ಚದ ಮೇಲೆ ಗಮನ ಹರಿಸಿದೆ ಮತ್ತು 2022-23 ರಲ್ಲಿ ಅದು ಕಳೆದ ವರ್ಷಕ್ಕಿಂತ ಶೇ.46.8 ರಷ್ಟು ಬಂಡವಾಳ ವೆಚ್ಚವನ್ನು ಹೆಚ್ಚಿಸಿದೆ ಮತ್ತು ಅಕ್ಟೋಬರ್ 2022 ರಲ್ಲಿ ಜಿಎಸ್ಟಿ ಸಂಗ್ರಹವು 1,51,718 ಕೋಟಿಯಾಗಿದೆ, ಇದು ಇಲ್ಲಿಯವರೆಗೆ ಎರಡನೇ ಅತಿದೊಡ್ಡ ಸಂಗ್ರಹವಾಗಿದೆ ಎಂದು ಹೇಳಿದರು.

ಅದೇ ತಿಂಗಳಲ್ಲಿ ಭಾರತದಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ 12.11 ಲಕ್ಷ ಕೋಟಿಯಷ್ಟಿದೆ ಮತ್ತು 21 ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ 7 ಲಕ್ಷ ವಾಹನ ಹೆಚ್ಚಾಗಿದೆ ಎಂದು ಅವರು ಹೇಳಿದರು.

ತಮಿಳುನಾಡಿನ ಬಗ್ಗೆ ಸರ್ಕಾರದ ವಿಶೇಷ ಗಮನವನ್ನು ವಿವರಿಸಿದ ಅವರು, "ನರೇಂದ್ರ ಮೋದಿ ಸರ್ಕಾರವು ತಮಿಳುನಾಡಿನ ಆದ್ಯತಾ ವಲಯದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ. 2009 ರಿಂದ 2014 ರವರೆಗೆ ದೇಶದಲ್ಲಿ ಯುಪಿಎ ಸರ್ಕಾರವಿದ್ದಾಗ, ತಮಿಳುನಾಡು 62,000 ಕೋಟಿ ರೂ.ಗಳನ್ನು ತೆರಿಗೆ ಪಾಲಾಗಿ ಪಡೆದಿತ್ತು. ಆದರೆ ಈಗ ಅದು 1,19,455 ಕೋಟಿ ರೂ. ಆಗಿದೆ, ಇದು ಶೇ.91ರಷ್ಟು ಹೆಚ್ಚಳವಾಗಿದೆ. ಯುಪಿಎ ಅವಧಿಯಲ್ಲಿ ದಕ್ಷಿಣ ರಾಜ್ಯಕ್ಕೆ 35,000 ಕೋಟಿ ರೂ.ಗಳ ಅನುದಾನ ನೀಡಲಾಗಿತ್ತು, ಇಂದು ನರೇಂದ್ರ ಮೋದಿ ಆಡಳಿತಾವಧಿಯಲ್ಲಿ 95734 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಇದು ಶೇ.171 ವೃದ್ಧಿಯಾಗಿದೆ ಎಂದು ವಿವರಿಸಿದರು.
 

******



(Release ID: 1875527) Visitor Counter : 226


Read this release in: Marathi , Tamil , English , Urdu