ಗೃಹ ವ್ಯವಹಾರಗಳ ಸಚಿವಾಲಯ

ಭಯೋತ್ಪಾದನೆಗೆ ಹಣಕಾಸು ನಿಗ್ರಹ  - ಭಯೋತ್ಪಾದನೆಗೆ ಹಣಕಾಸು ಬೇಡ - ಕುರಿತ ಸಚಿವರ 3 ನೇ ಸಮಾವೇಶ ನವೆಂಬರ್ 18 ಮತ್ತು 19 ರಂದು ನವದೆಹಲಿಯಲ್ಲಿ ನಡೆಯಲಿದೆ


ಈ ಸಮಾವೇಶಕ್ಕೆ ಆತಿಥ್ಯ ವಹಿಸಿರುವುದು ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ವಿಷಯಕ್ಕೆ ಮೋದಿ ಸರ್ಕಾರವು ನೀಡುತ್ತಿರುವ ಪ್ರಾಮುಖ್ಯವನ್ನು ಮತ್ತು ಈ ಬೆದರಿಕೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಪ್ರತಿಬಿಂಬಿಸುತ್ತದೆ

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟ ಕುರಿತ ಭಾರತದ ದೃಢಸಂಕಲ್ಪವನ್ನು ತಿಳಿಸಲಿದ್ದಾರೆ.

ಸಮಾವೇಶವು ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತ ಹೋರಾಟದ ಚರ್ಚೆಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ

ಭಯೋತ್ಪಾದನೆಗೆ ಹಣಕಾಸು ನಿಗ್ರಹ ಸಮಾವೇಶವು ರಾಷ್ಟ್ರಗಳ ನಡುವೆ ತಿಳಿವಳಿಕೆ ಮತ್ತು ಸಹಕಾರವನ್ನು ನಿರ್ಮಿಸಲು ಭಾರತದ ಪ್ರಯತ್ನಗಳನ್ನು ಮತ್ತಷ್ಟು ಮುಂದುವರಿಸುತ್ತದೆ

Posted On: 12 NOV 2022 10:57AM by PIB Bengaluru

ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು, ಭಯೋತ್ಪಾದನೆಗೆ ಹಣಕಾಸು ಬೇಡ (ನೋ ಮನಿ ಫಾರ್ ಟೆರರ್) ಕುರಿತ 3ನೇ ಸಚಿವರ ಸಮಾವೇಶವನ್ನು ನವೆಂಬರ್ 18 ಮತ್ತು 19 ರಂದು ನವದೆಹಲಿಯಲ್ಲಿ ಆಯೋಜಿಸುತ್ತಿದೆ.

 

ಈ ಸಮ್ಮೇಳನದ ಆತಿಥ್ಯ ವಹಿಸಿರುವುದು ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಮೋದಿ ಸರ್ಕಾರವು ನೀಡುತ್ತಿರುವ ಪ್ರಾಮುಖ್ಯವನ್ನು ಮತ್ತು ಈ ಬೆದರಿಕೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹಾಗೂ ಅಂತರರಾಷ್ಟ್ರೀಯ ಸಮುದಾಯದಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳನ್ನು ನಡೆಸುತ್ತಿರುವುದನ್ನು ತೋರಿಸುತ್ತದೆ.

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದ ದೃಢ ಸಂಕಲ್ಪವನ್ನು ಮತ್ತು ಅದರ ವಿರುದ್ಧ ಯಶಸ್ಸನ್ನು ಸಾಧಿಸಲು ದೇಶದ ಬೆಂಬಲ ವ್ಯವಸ್ಥೆಗಳನ್ನು ತಿಳಿಸಲಿದ್ದಾರೆ.

ಈ ಸಮಾವೇಶವು ಪ್ಯಾರಿಸ್ (2018) ಮತ್ತು ಮೆಲ್ಬೋರ್ನ್ (2019) ನಲ್ಲಿ ನಡೆದ ಹಿಂದಿನ ಎರಡು ಸಮ್ಮೇಳನಗಳಲ್ಲಿ ಅಂತರಾಷ್ಟ್ರೀಯ ಸಮುದಾಯದಿಂದ ನಡೆದ ಭಯೋತ್ಪಾದಕ ಹಣಕಾಸು ನಿಗ್ರಹ ಕುರಿತ ಚರ್ಚೆಗಳನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಎಲ್ಲ ಅಂಶಗಳ ತಾಂತ್ರಿಕ, ಕಾನೂನು, ನಿಯಂತ್ರಕ ಮತ್ತು ಸಹಕಾರ ಅಂಶಗಳ ಕುರಿತು ಚರ್ಚೆಗಳನ್ನು ಸೇರಿಸಲು ಇದು ಉದ್ದೇಶಿಸಿದೆ. ಇದು ಇತರ ಉನ್ನತ ಮಟ್ಟದ ಅಧಿಕೃತ ಮತ್ತು ರಾಜಕೀಯ ಚರ್ಚೆಗಳಿಗೆ ವೇಗವನ್ನು ನೀಡಲು, ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತು ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತದೆ.

ಜಾಗತಿಕವಾಗಿ, ದೇಶಗಳು ಹಲವಾರು ವರ್ಷಗಳಿಂದ ಭಯೋತ್ಪಾದನೆ ಮತ್ತು ಉಗ್ರವಾದದಿಂದ ಪರಿಣಾಮಕ್ಕೊಳಗಾಗಿವೆ. ಹಿಂಸಾಚಾರದ ಮಾದರಿಯು ಬಹುತೇಕ ಭಿನ್ನವಾಗಿರುತ್ತದೆ, ಆದರೆ ಇದು ಬಹುಮಟ್ಟಿಗೆ ಪ್ರಕ್ಷುಬ್ಧ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ ಉಂಟಾಗುತ್ತದೆ, ಜೊತೆಗೆ ಸುದೀರ್ಘವಾದ ಸಶಸ್ತ್ರ ಹೋರಾಟದ ಘರ್ಷಣೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಇಂತಹ ಸಂಘರ್ಷಗಳು ಸಾಮಾನ್ಯವಾಗಿ ಕಳಪೆ ಆಡಳಿತ, ರಾಜಕೀಯ ಅಸ್ಥಿರತೆ, ಆರ್ಥಿಕ ಕೊರತೆಗಳಿಂದ ಉಂಟಾಗುತ್ತವೆ. ಆಯಾ ದೇಶಗಳ ಒಳಗೊಳ್ಳುವಿಕೆಯು ಸಾಮಾನ್ಯವಾಗಿ ಭಯೋತ್ಪಾದನೆಯನ್ನು ವಿಶೇಷವಾಗಿ ಅದರ ಹಣಕಾಸು ನೆರವನ್ನು ಹೆಚ್ಚಿಸುತ್ತದೆ.

ಭಾರತವು ಮೂರು ದಶಕಗಳಿಗೂ ಹೆಚ್ಚು ಕಾಲ ಭಯೋತ್ಪಾದನೆಯ ಹಲವಾರು ರೂಪಗಳನ್ನು ಮತ್ತು ಅದಕ್ಕೆ ಸಿಗುತ್ತಿರುವ  ಹಣಕಾಸಿನ ನೆರವಿನ ಪರಿಣಾಮವನ್ನು ಅನುಭವಿಸಿದೆ, ಆದ್ದರಿಂದ ಅದೇ ರೀತಿಯ ಪರಿಣಾಮಕ್ಕೊಳಗಾದ ರಾಷ್ಟ್ರಗಳ ನೋವು ಮತ್ತು ಆಘಾತವನ್ನು ಅದು ಅರ್ಥಮಾಡಿಕೊಳ್ಳುತ್ತದೆ. ಶಾಂತಿ ಪ್ರಿಯ ರಾಷ್ಟ್ರಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ಭಯೋತ್ಪಾದನೆಗೆ ಹಣಕಾಸು ನಿಗ್ರಹದಲ್ಲಿ ನಿರಂತರ ಸಹಕಾರಕ್ಕಾಗಿ ಸೇತುವೆಯಾಗಲು ಭಾರತವು ಅಕ್ಟೋಬರ್‌ನಲ್ಲಿ ಎರಡು ಜಾಗತಿಕ ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸಿತ್ತು - ದೆಹಲಿಯಲ್ಲಿ ಇಂಟರ್‌ಪೋಲ್‌ನ ವಾರ್ಷಿಕ ಸಾಮಾನ್ಯ ಸಭೆ ಮತ್ತು ಮುಂಬೈ ಮತ್ತು ದೆಹಲಿಯಲ್ಲಿ ವಿಶ್ವಸಂಸ್ಥೆಯ  ಭಯೋತ್ಪಾದನಾ ನಿಗ್ರಹ ಸಮಿತಿಯ ವಿಶೇಷ ಅಧಿವೇಶನ. ಮುಂಬರುವ ಎನ್‌ ಎಂ ಎಫ್‌ ಟಿ  ಸಮ್ಮೇಳನವು ರಾಷ್ಟ್ರಗಳ ನಡುವೆ ತಿಳಿವಳಿಕೆ ಮತ್ತು ಸಹಕಾರವನ್ನು ನಿರ್ಮಿಸುವ ಭಾರತದ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು, ಭಯೋತ್ಪಾದನೆಗಾಗಿ ಔಪಚಾರಿಕ ಮತ್ತು ಅನೌಪಚಾರಿಕ ನಿಧಿಗಳ ಬಳಕೆ, ಹೊಸ ತಂತ್ರಜ್ಞಾನಗಳು ಮತ್ತು ಭಯೋತ್ಪಾದನೆಗೆ ಹಣಕಾಸು ಮತ್ತು ಸಂಬಂಧಿತ ಸವಾಲುಗಳನ್ನು ಎದುರಿಸಲು ಅಗತ್ಯವಾದ ಅಂತರರಾಷ್ಟ್ರೀಯ ಸಹಕಾರ ಕುರಿತು 3 ನೇ ‘ಭಯೋತ್ಪಾದನೆಗೆ ಹಣಕಾಸು ಬೇಡ’ ಸಮ್ಮೇಳನದಲ್ಲಿ ಚರ್ಚೆಗಳು ನಡೆಯುತ್ತವೆ. ಎರಡು ದಿನಗಳ ಕಾಲ ವಿಸ್ತೃತ ಚರ್ಚೆಗಾಗಿ 75 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

*****



(Release ID: 1875405) Visitor Counter : 289