ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ದೇಶೀಯ ಪ್ರವಾಸೋದ್ಯಮವು ರೂಪಾಂತರಗೊಳ್ಳುತ್ತಿರುವಾಗ ಸ್ವಾಸ್ಥ್ಯ ಮತ್ತು ಇತರ ಚಟುವಟಿಕೆಗಳನ್ನು ನೂತನ ಆದ್ಯತಾಕೇಂದ್ರಗಳಾಗಿ ಪರಿವರ್ತಿಸಲು ಹೊಸ ಕೌಶಲ್ಯಗಳು ಅಗತ್ಯ: ಸಚಿವ ರಾಜೀವ್ ಚಂದ್ರಶೇಖರ್
ಪ್ರಮುಖ ಪ್ರವಾಸಿ ತಾಣವಾಗಿ ಪಟ್ನಿಟಾಪ್ ಅಭಿವೃದ್ಧಿ ಮಾಡಲು ಮಾರ್ಗಸೂಚಿಯನ್ನು ರೂಪಿಸಲು ಹೋಟೆಲ್ ಉದ್ಯಮದ ನಾಯಕರಿಗೆ ಮನವಿ ಮಾಡಿದ ಸಹಾಯಕ ಸಚಿವ ಚಂದ್ರಶೇಖರ್
ಸ್ವಚ್ಛ ಮಿಷನ್ ಆಂದೋಲನವನ್ನು ಇನ್ನಷ್ಟು ವಿಸ್ತರಿಸಿ, ಪಟ್ನಿಟಾಪ್ ನಲ್ಲಿ ನೈರ್ಮಲ್ಯ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಹಾಯಕ ಸಚಿವರು
Posted On:
08 NOV 2022 7:45PM by PIB Bengaluru
ದೇಶೀಯ ಪ್ರವಾಸೋದ್ಯಮ ವಲಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ, ಇಂದು ಸ್ವಾಸ್ಥ್ಯ, ಆರೋಗ್ಯ ರಕ್ಷಣೆ ಮತ್ತು ಸಾಹಸ ಅಥವಾ ಕ್ರೀಡೆಗಳಂತಹ ಇತರ ಚಟುವಟಿಕೆಗಳತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ, ಪಟ್ನಿಟಾಪ್ ನಲ್ಲಿ ಹೋಟೆಲ್ ಉದ್ಯಮದ ಮುಖಂಡರೊಂದಿಗೆ ಸಭೆ ನಡೆಸುವಾಗ ವೈವಿಧ್ಯಮಯ ಕೌಶಲ್ಯಗಳಿಗೆ ಬೇಡಿಕೆ ಇರುವುದು ಮತ್ತು ಅವಕಾಶಗಳು ಇರುವುದು ಗಮನಕ್ಕೆ ಬಂದಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಪಟ್ನಿಟಾಪ್ ನ ಸ್ಥಳೀಯ ಅನುಕೂಲಗಳು ಮತ್ತು ಸಂಪನ್ಮೂಲಗಳನ್ನು ಗಣನೆಗೆ ತೆಗೆದುಕೊಂಡು. ಅದನ್ನು ರೋಮಾಂಚಕ ಪ್ರವಾಸಿ ತಾಣವನ್ನಾಗಿ ಮಾಡಲು ನೀಲನಕ್ಷೆಯನ್ನು ರಚಿಸುವಂತೆಯೂ ಸಚಿವರು ಹೊಟೇಲ್ ಉದ್ಯಮಿಗಳನ್ನು ಆಗ್ರಹಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾರದೇ ಇರುವ ಸ್ಥಳಗಳಿಗೆ ರಸ್ತೆ ಮೂಲಕ ಕೈಗೊಳ್ಳುವ ಪ್ರವಾಸಗಳು,ಅಲ್ಪಾವಧಿಯ ಬಾಡಿಗೆ ವಸತಿ ಅಥವಾ ಮನೆಯಲ್ಲಿಯೇ ಉಳಿದುಕೊಳ್ಳುವ ಸೌಲಭ್ಯಗಳು ಹೆಚ್ಚು ಪ್ರಚಲಿತದಲ್ಲಿವೆ ಮತ್ತು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೋಟೆಲ್ ಉದ್ಯಮವು ಗಮ್ಯಸ್ಥಾನದ ನಿರೂಪಣೆಯನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು. ಪ್ರವಾಸೋದ್ಯಮವು ಮಾನವನ ಸಂಪರ್ಕಕ್ಕೆ ಸಂಬಂಧಿಸಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿರುವವರು ಪಟ್ನಿಟಾಪ್ ಅನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಲಭ್ಯವಿರುವ ಸಂಪನ್ಮೂಲಗಳು ಮತ್ತು ಲಭ್ಯ ಇರುವ ಅಥವಾ ಅಗತ್ಯವಿರುವ ಕೌಶಲ್ಯಗಳನ್ನು ಗಮನಿಸಿ ಅಧ್ಯಯನ, ಮೌಲ್ಯಮಾಪನ ನಡೆಸಬೇಕು ಮತ್ತು ಆ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಒತ್ತು ನೀಡಿರುವುದನ್ನು ಪುನರುಚ್ಚರಿಸಿದ ಶ್ರೀ ರಾಜೀವ್ ಚಂದ್ರಶೇಖರ್, ಸ್ಥಳೀಯ ಕುಶಲಕರ್ಮಿಗಳನ್ನು ಮಾರುಕಟ್ಟೆಯೊಂದಿಗೆ ಸಂಪರ್ಕಿಸುವಲ್ಲಿ ಸ್ವಸಹಾಯ ಗುಂಪುಗಳು ದೊಡ್ಡ ಪಾತ್ರ ವಹಿಸಬಹುದು ಎಂದು ಹೇಳಿದರು.
ಕಳೆದ ವರ್ಷ ನಮ್ಮ ಕರಕುಶಲ ವಸ್ತುಗಳ ರಫ್ತು ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು ಮತ್ತು ಇದನ್ನು ಹೆಚ್ಚಾಗಿ ಇ-ಕಾಮರ್ಸ್ ವೇದಿಕೆಗಳ ಮೂಲಕ ಮಾಡಲಾಗುತ್ತಿತ್ತು. ಆದ್ದರಿಂದ ವೈಯಕ್ತಿಕವಾಗಿ ಕುಶಲಕರ್ಮಿಗಳಿಗೆ ಸಹಾಯ ಮಾಡಲು, ಸ್ವಸಹಾಯ ಸಂಘಗಳು ಮಾರುಕಟ್ಟೆ ಪ್ರವೇಶಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.
ಸಚಿವರು ವಿದ್ಯಾರ್ಥಿಗಳು ಮತ್ತು ಪ್ರವಾಸೋದ್ಯಮ ಕ್ಲಬ್ ಗಳ ಸದಸ್ಯರನ್ನು ಭೇಟಿಯಾದರು, ಅವರು ಪಟ್ನಿಟಾಪ್ ಅಭಿವೃದ್ಧಿಪಡಿಸುವ ತಮ್ಮ ಚಿಂತನೆಗಳನ್ನು ಅವರೊಂದಿಗೆ ಹಂಚಿಕೊಂಡರು. ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗಿನ ಮತ್ತೊಂದು ಸಭೆಯಲ್ಲಿ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನದ ಬಗ್ಗೆ ಮತ್ತು ಎಲೆಕ್ಟ್ರಾನಿಕ್ಸ್ / ಸೆಮಿಕಾನ್ ತಯಾರಿಕೆ ಮತ್ತು ವಿನ್ಯಾಸ ವಿಭಾಗಗಳಲ್ಲಿ ಅವರಿಗೆ ಹೇಗೆ ಅದ್ಭುತ ಅವಕಾಶಗಳು ಲಭ್ಯವಿವೆ ಎಂಬುದರ ಬಗ್ಗೆ ಮಾತನಾಡಿದರು.


ಇದಕ್ಕೂ ಮುನ್ನ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಪಟ್ನಿಟಾಪ್ ನಲ್ಲಿ ನೈರ್ಮಲ್ಯ ಅಭಿಯಾನಕ್ಕೆ ಚಾಲನೆ ನೀಡಿದರು ಮತ್ತು ಈ ಸುಂದರವಾದ ಪ್ರವಾಸಿ ಪಟ್ಟಣವನ್ನು ಸ್ವಚ್ಛ ಮತ್ತು ಪ್ಲಾಸ್ಟಿಕ್ ಮುಕ್ತವಾಗಿಡುವಂತೆ ಜನರಿಗೆ ಮನವಿ ಮಾಡಿದರು.

ಸ್ವಸಹಾಯ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಸಂಘಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಮಾರುಕಟ್ಟೆ ಸಂಪರ್ಕಗಳು ಹಾಗು ಸಾಮರ್ಥ್ಯ ವರ್ಧನೆಯ ನಿಟ್ಟಿನಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಅವರೊಂದಿಗೆ ಚರ್ಚಿಸಿದರು. ಅವರು ಪಿ.ಆರ್.ಐ.ಗಳ ಪ್ರತಿನಿಧಿಗಳನ್ನು ಭೇಟಿಯಾದರು ಮತ್ತು ಅವರ ಸಮಸ್ಯೆಗಳು ಹಾಗು ಸವಾಲುಗಳ ಬಗ್ಗೆ ಮಾಹಿತಿಯನ್ನು ಪಡೆದರು.
ನಂತರ ಜಮ್ಮುವಿನಲ್ಲಿ, ಸಚಿವರು ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ ಮತ್ತು ಜಮ್ಮುವಿನ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಪ್ರಾದೇಶಿಕ ನಿರ್ದೇಶನಾಲಯಕ್ಕೆ ಭೇಟಿ ನೀಡಿದರು. ಕಂಪ್ಯೂಟರ್ ಸಾಫ್ಟ್ ವೇರ್ ಅಪ್ಲಿಕೇಶನ್ ಟ್ರೇಡ್ ನ ಪ್ರಯೋಗಾಲಯ ಸೇರಿದಂತೆ ಸಂಕೀರ್ಣದ ವಿವಿಧ ವಿಭಾಗಗಳಿಗೆ ಅವರು ಭೇಟಿ ನೀಡಿದರು. ಮತ್ತು ಪ್ರಶಿಕ್ಷಣಾರ್ಥಿಗಳು ಹಾಗು ಸಿಬ್ಬಂದಿ ಸದಸ್ಯರೊಂದಿಗೆ ಸಂವಾದ ನಡೆಸಿದರು.

ಜಮ್ಮು ಕಾಶ್ಮೀರದ ಕೌಶಲ್ಯ ಅಭಿವೃದ್ಧಿ ನಿರ್ದೇಶಕರಾದ ಶ್ರೀ ಸುದರ್ಶನ್ ಕುಮಾರ್, ಪ್ರಾದೇಶಿಕ ನಿರ್ದೇಶಕರಾದ ಶ್ರೀ. ಎಸ್. ಶಾಂತಿಮಾನಲನ್, ಎನ್.ಎಸ್.ಐ.ಟಿ.ಶ್ರೀನಗರದ ಪ್ರಾಂಶುಪಾಲ ಶ್ರೀ.ವಿ.ಕೆ.ಸಕ್ಸೇನಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 1874599)
Visitor Counter : 170