ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಉನ್ನತ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು

Posted On: 07 NOV 2022 9:54PM by PIB Bengaluru


 ಮುಖ್ಯಾಂಶಗಳು:
·   ಎಲ್ಲಾ ಕಾರ್ಯಕಾರಿ ಕ್ರಿಯಾ ಯೋಜನೆಗೆ ಮುನ್ನೆಚ್ಚರಿಕೆಗಳನ್ನು ದುಂಡುಮೇಜಿನ ಸಭೆಯು ಆರಂಭಿಸುತ್ತದೆ.
·   ಎಲ್ಲರಿಗೂ ಮುನ್ನೆಚ್ಚರಿಕೆ ಗುರಿಯನ್ನು ಸಾಧಿಸುವ ಪ್ರಧಾನ ಕಾರ್ಯದರ್ಶಿಯವರ ಕಾರ್ಯಸೂಚಿಯನ್ನು ಭಾರತವು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಇದು ಅಪಾಯಗಳನ್ನು ಕಡಿಮೆ ಮಾಡಲು, ಸನ್ನದ್ಧತೆ ಮತ್ತು ನೈಸರ್ಗಿಕ ಅಪಾಯಗಳಿಗೆ ತ್ವರಿತ ಮತ್ತು ಸಮಯೋಚಿತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಮೂಹಿಕವಾಗಿ ಸಹಾಯ ಮಾಡುತ್ತದೆ.
·  ಭಾರತದ ವೆಬ್-ಡಿ ಸಿ ಆರ್‌ ಎ (ಡೈನಾಮಿಕ್ ಕಾಂಪೋಸಿಟ್ ರಿಸ್ಕ್ ಅಟ್ಲಾಸ್) ಮುನ್ನೆಚ್ಚರಿಕೆಗಳ ಮೇಲೆ ತ್ವರಿತ ಮತ್ತು ಸುಧಾರಿತ ಕ್ರಮವನ್ನು ಸಕ್ರಿಯಗೊಳಿಸುತ್ತದೆ.
·  ಭಾರತವು ವಿಪತ್ತು ತಾಳಿಕೆ ಮೂಲಸೌಕರ್ಯಗಳ ಒಕ್ಕೂಟದ (ಸಿಡಿಆರ್ಐ) ನೇತೃತ್ವವನ್ನು ವಹಿಸಿದೆ, ಇದು ಹವಾಮಾನ ಮುನ್ಸೂಚನೆಯ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಮೂಲಸೌಕರ್ಯ ನಷ್ಟಗಳು ಮತ್ತು ಮೂಲಭೂತ ಸೇವೆಗಳಲ್ಲಿ ಅಡಚಣೆಯನ್ನು ಕಡಿಮೆ ಮಾಡುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
 
7ನೇ ನವೆಂಬರ್ 2022, ಶರ್ಮ್ ಎಲ್-ಶೇಖ್
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಶರ್ಮ್ ಎಲ್-ಶೇಖ್‌ನಲ್ಲಿ ನಡೆದ ಸಿಒಪಿ 27 ವಿಶ್ವ ನಾಯಕರ ಶೃಂಗಸಭೆಯಲ್ಲಿ ಎಲ್ಲಾ ಕಾರ್ಯಕಾರಿ ಕ್ರಿಯಾ ಯೋಜನೆಗಳಿಗೆ ಮುನ್ನೆಚ್ಚರಿಕೆಗಳನ್ನು ಆರಂಭಿಸುವ ಕುರಿತ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ಉನ್ನತ ಮಟ್ಟದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಯಾದವ್ ಹೇಳಿದ್ದು;

“ಎಲ್ಲರಿಗೂ ಮುನ್ನೆಚ್ಚರಿಕೆಗಳ ಗುರಿಯನ್ನು ಸಾಧಿಸುವ ಪ್ರಧಾನ ಕಾರ್ಯದರ್ಶಿಯವರ ಕಾರ್ಯಸೂಚಿಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಹವಾಮಾನ ಬದಲಾವಣೆಯನ್ನು ತಡೆಯಲು  ಹವಾಮಾನ ತಗ್ಗಿಸುವಿಕೆಯ ಜಾಗತಿಕ ವೇಗವು ಸಾಕಾಗುವುದಿಲ್ಲ. ಪ್ರಪಂಚದಾದ್ಯಂತ ಗಣನೀಯ ನಷ್ಟವನ್ನು ಉಂಟುಮಾಡುವ ಸರಣಿ ನೈಸರ್ಗಿಕ ಅಪಾಯಗಳನ್ನು ಜಗತ್ತು ಒಪ್ಪಿಕೊಳ್ಳಬೇಕಾದ ತುರ್ತು ಅವಶ್ಯಕತೆಯಿದೆ.

ಆದರೆ ಈ ಸಮಸ್ಯೆಗಳು ಆ ಕ್ಷಣದಲ್ಲಿ ಮಾತ್ರ ನಮ್ಮ ಗಮನವನ್ನು ಸೆಳೆಯುತ್ತವೆ. ನಂತರ ಸಾಕಷ್ಟು ಬೇಗನೇ ಗಮನವನ್ನು ಕಳೆದುಕೊಳ್ಳುತ್ತವೆ. ಏಕೆಂದರೆ ಇದರ ಬಗ್ಗೆ ಏನಾದರೂ ಮಾಡಲು ಸಮರ್ಥವಾಗಿರುವ ದೇಶಗಳಲ್ಲಿ ಇದರ ಪರಿಣಾಮ ಕಡಿಮೆ ಇರುತ್ತದೆ. ಆದರೆ, ಹವಾಮಾನ ಬದಲಾವಣೆಗೆ ಅವುಗಳು ದೊಡ್ಡ ಕೊಡುಗೆದಾರರಾಗಿರುತ್ತವೆ.

ಅತ್ಯಂತ ದುರ್ಬಲ ಪ್ರದೇಶಗಳು ಕರ್ಕಾಟಕ ಮತ್ತು ಮಕರ ವೃತ್ತಗಳ ಉಷ್ಣವಲಯದ ನಡುವೆ ನೆಲೆಗೊಂಡಿವೆ. ಭಾರತವನ್ನು ಒಳಗೊಂಡಂತೆ ಪ್ರಪಂಚದ ಬಹುತೇಕ ಅಭಿವೃದ್ಧಿಶೀಲ ಭಾಗವು ಈ ಉಷ್ಣವಲಯದ ನಡುವೆ ಇದೆ. ಈ ಪ್ರದೇಶದಲ್ಲಿ ಕನಿಷ್ಠ ನಿಭಾವಣೆಯ ಸಾಮರ್ಥ್ಯದಿಂದಾಗಿ ಈಗಾಗಲೇ ಆರಂಭವಾಗಿರುವ ಬಾಹ್ಯ ವಿಪತ್ತುಗಳಿಂದ ಸಾರ್ವಜನಿಕ ವೆಚ್ಚಗಳು ಮತ್ತು ಆದಾಯದ ನಷ್ಟವು ಹೆಚ್ಚಲು ಪ್ರಾರಂಭಿಸಿದೆ.

ಪೆಸಿಫಿಕ್ ಮತ್ತು ಕೆರಿಬಿಯನ್‌ನಲ್ಲಿ ಉಷ್ಣವಲಯದ ಚಂಡಮಾರುತಗಳ ತೀವ್ರತೆಯಿಂದಾಗಿ ಕೆಲವು ಸಣ್ಣ ಉಷ್ಣವಲಯದ ರಾಷ್ಟ್ರಗಳು ಕೆಲವೇ ಗಂಟೆಗಳಲ್ಲಿ ತಮ್ಮ ರಾಷ್ಟ್ರೀಯ ಆದಾಯದ ಶೇ.200 ರಷ್ಟನ್ನು ಕಳೆದುಕೊಂಡಿವೆ. ಈ ರೀತಿಯ ನಿದರ್ಶನಗಳು ಅವುಗಳನ್ನು ನಿಭಾಯಿಸಲು ಸಾಕಷ್ಟು ವಿಧಾನಗಳನ್ನು ಹೊಂದಿರದ ದೇಶಗಳಲ್ಲಿ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಬಹುದು.

ಹವಾಮಾನ ಹಣಕಾಸು ಇನ್ನೂ ವಿರಳವಾಗಿರುವುದರಿಂದ, ಮುನ್ನೆಚ್ಚರಿಕೆಯ ರೂಪದ ಹವಾಮಾನ ಅಳವಡಿಕೆಯು ಜೀವ ಮತ್ತು ಜೀವನೋಪಾಯಗಳನ್ನು ರಕ್ಷಿಸುವಲ್ಲಿ ಪ್ರಮುಖವಾಗಿದೆ. ಎಲ್ಲರಿಗೂ ಆರಂಭಿಕ ಎಚ್ಚರಿಕೆಗಳನ್ನು ನೀಡುವುದು ತಕ್ಷಣದ ಭೌತಿಕ ಪರಿಣಾಮಗಳನ್ನು ನಿಗ್ರಹಿಸುವುದು ಮಾತ್ರವಲ್ಲದೆ, ದೀರ್ಘಾವಧಿಯ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ತಗ್ಗಿಸುವಲ್ಲಿ ಪಾತ್ರವನ್ನು ವಹಿಸುತ್ತವೆ.

ಭಾರತವು ಎಲ್ಲಾ ಜಲ-ಹವಾಮಾನ ಅಪಾಯಗಳಿಗೆ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಇದು ಸ್ಪಷ್ಟ ಫಲಿತಾಂಶಗಳಿಗೆ ಕಾರಣವಾಗಿದೆ. ಕಳೆದ 15 ವರ್ಷಗಳಲ್ಲಿ ನಾವು ಚಂಡಮಾರುತಗಳಿಂದ ಸಂಭವಿಸುವ ಮರಣಗಳನ್ನು ಶೇ.90 ರಷ್ಟು ಕಡಿಮೆ ಮಾಡಿದ್ದೇವೆ. ನಾವು ಪೂರ್ವ ಮತ್ತು ಪಶ್ಚಿಮದ ಎರಡೂ ಕರಾವಳಿಯಲ್ಲಿ, ಚಂಡಮಾರುತಗಳಿಗೆ ಮುನ್ನೆಚ್ಚರಿಕೆ ವ್ಯವಸ್ಥೆಗಳ ಸುಮಾರು ಶೇ.100 ರಷ್ಟು ವ್ಯಾಪ್ತಿಯನ್ನು ಹೊಂದಿದ್ದೇವೆ. ಅಂತೆಯೇ ನಾವು ಉಷ್ಣ ಅಲೆಗಳಂತಹ ಇತರ ಅಪಾಯಗಳಿಗೆ ಸಂಬಂಧಿಸಿದಂತೆ ತ್ವರಿತ ಪ್ರಗತಿಯನ್ನು ಸಾಧಿಸುತ್ತಿದ್ದೇವೆ, ಇದು ನಮ್ಮ ಸಮುದಾಯಗಳಲ್ಲಿ ಹೆಚ್ಚಿನ ತಾಳಿಕೆಗೆ ಕಾರಣವಾಗಿದೆ. 

ಕಳೆದ ಕೆಲವು ವರ್ಷಗಳಿಂದ, ನಾವು ಮುನ್ನೆಚ್ಚರಿಕೆ ಪರಿಣಾಮ ಆಧರಿತವಾದ ಹಾಗೂ ಹೆಚ್ಚು ಸುಲಭವಾಗಿ ಅರ್ಥವಾಗುವ ಮತ್ತು ಸಮುದಾಯಗಳಿಂದ ಕಾರ್ಯಸಾಧ್ಯವಾಗುವ ಸಂಘಟಿತ ಪ್ರಯತ್ನಗಳನ್ನು ಮಾಡಿದ್ದೇವೆ. ಮುನ್ನೆಚ್ಚರಿಕೆಗಳ ಮೇಲೆ ತ್ವರಿತ ಮತ್ತು ಸುಧಾರಿತ ಕ್ರಮವನ್ನು ಸಕ್ರಿಯಗೊಳಿಸಲು ವೆಬ್ – ಡಿ ಸಿ ಇ ಆರ್‌ ಎ (ಡೈನಾಮಿಕ್ ಕಾಂಪೊಸಿಟ್ ರಿಸ್ಕ್ ಅಟ್ಲಾಸ್) ಅನ್ನು ಅಭಿವೃದ್ಧಿಪಡಿಸಲು ನಾವು ಅಪಾಯ, ದುರ್ಬಲತೆ ಮತ್ತು ಮಾಹಿತಿಯನ್ನು ಸಂಯೋಜಿಸಿದ್ದೇವೆ.

ನವದೆಹಲಿಯಲ್ಲಿರುವ ಭಾರತ ಹವಾಮಾನ ಇಲಾಖೆಯ ಚಂಡಮಾರುತ ಎಚ್ಚರಿಕೆ ವಿಭಾಗವು (ಸಿ ಡಬ್ಲ್ಯು ಡಿ) ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಪ್ರದೇಶದ 13 ದೇಶಗಳೊಂದಿಗೆ ಉತ್ತರ ಹಿಂದೂ ಮಹಾಸಾಗರದಲ್ಲಿ (ವಿಶ್ವದ ಆರು ಕೇಂದ್ರಗಳಲ್ಲಿ ಒಂದು) ಅಭಿವೃದ್ಧಿ ಹೊಂದುತ್ತಿರುವ ಉಷ್ಣವಲಯದ ಚಂಡಮಾರುತಗಳ ಮೇಲ್ವಿಚಾರಣೆ, ಮುನ್ಸೂಚನೆ ಮತ್ತು ಎಚ್ಚರಿಕೆ ಸೇವೆಗಳನ್ನು ನೀಡುವ ಬಹುಪಕ್ಷೀಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಹಯೋಗವು ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಪ್ರದೇಶದ ರಾಷ್ಟ್ರಗಳಿಂದ ಭಾರತ ಹವಾಮಾನ ಇಲಾಖೆಗೆ ಹವಾಮಾನ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸುಧಾರಿತ ಮೇಲ್ವಿಚಾರಣೆ ಮತ್ತು ಮುನ್ಸೂಚನೆ ನೀಡಲು ಸಹಾಯ ಮಾಡಿವೆ. 

ಇದಲ್ಲದೆ, ಉಪಗ್ರಹ ಮತ್ತು ರಾಡಾರ್‌ನ ಹವಾಮಾನ ದತ್ತಾಂಶ ಮತ್ತು ಭಾರತ ಹವಾಮಾನ ಇಲಾಖೆಯ ಮಾದರಿ ಮಾರ್ಗದರ್ಶನ ಮತ್ತು ಉಷ್ಣವಲಯದ ಚಂಡಮಾರುತ ಸಲಹಾ ಸೂಚನೆಗಳು ದೇಶಗಳಿಗೆ ಜೀವಹಾನಿಗಳನ್ನು ಕಡಿಮೆ ಮಾಡಲು ಸಹಾಯ ಮಾಡಿವೆ. ಉದಾಹರಣೆಗೆ, ಕಳೆದ 10 ವರ್ಷಗಳಲ್ಲಿ ಉಷ್ಣವಲಯದ ಚಂಡಮಾರುತಗಳಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು 100 ಕ್ಕೆ ಸೀಮಿತಗೊಳಿಸಲಾಗಿದೆ, ಭಾರತದಲ್ಲಿ ಮಾತ್ರವಲ್ಲದೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಪ್ರದೇಶದ ಎಲ್ಲಾ ದೇಶಗಳಲ್ಲಿ ಉಷ್ಣವಲಯದ ಚಂಡಮಾರುತದ ಮುನ್ಸೂಚನೆ ಮತ್ತು ಸಲಹೆಗಳನ್ನು ಭಾರತ ಹವಾಮಾನ ಇಲಾಖೆ ಒದಗಿಸುತ್ತಿದೆ.

ನಾವು ಈಗ ಜೀವಹಾನಿಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಜೀವನೋಪಾಯಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಸೌಲಭ್ಯಗಳ ನಷ್ಟವನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆ ವ್ಯವಸ್ಥೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸಲು ಬಯಸಿದ್ದೇವೆ. ಭಾರತವು ವಿಪತ್ತು ತಾಳಿಕೆ ಮೂಲಸೌಕರ್ಯ ಒಕ್ಕೂಟ (ಸಿ ಡಿ ಆರ್‌ ಐ) ದ ನೇತೃತ್ವವನ್ನು ವಹಿಸಿದೆ, ಇದು ಹವಾಮಾನ ಮುನ್ಸೂಚನೆಯ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಮೂಲಸೌಕರ್ಯ ನಷ್ಟಗಳು ಮತ್ತು ಮೂಲಭೂತ ಸೇವೆಗಳಲ್ಲಿ ಅಡಚಣೆಯನ್ನು ಕಡಿಮೆ ಮಾಡುವ ಮುನ್ನೆಚ್ಚರಿಕೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ಲಾಸ್ಗೋ ಸಿಒಪಿ 26 ರಲ್ಲಿ ಐ ಆರ್‌ ಐ ಎಸ್‌ (ಇನ್ಫ್ರಾಸ್ಟ್ರಕ್ಚರ್ ಫಾರ್ ರೆಸಿಲಿಯೆಂಟ್ ಐಲ್ಯಾಂಡ್ ಸ್ಟೇಟ್ಸ್) ಚಾಲನೆಯಲ್ಲಿ ಭಾಗವಹಿಸಿ ಮಾನವ ಕಲ್ಯಾಣಕ್ಕಾಗಿ ಐ ಆರ್‌ ಐ ಎಸ್‌ ನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.  
ಅಂದು ಪ್ರಧಾನಿಯವರು ಹೇಳಿದ್ದನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ.

"ಐ ಆರ್‌ ಐ ಎಸ್‌ ಅತ್ಯಂತ ದುರ್ಬಲ ರಾಷ್ಟ್ರಗಳಿಗೆ ಭರವಸೆ, ನಂಬಿಕೆ ಮತ್ತು ಸಾರ್ಥಕತೆಯ ಭಾವವನ್ನು ಅರ್ಥವನ್ನು ನೀಡುತ್ತದೆ. ಇದಕ್ಕಾಗಿ ನಾನು ಸಿ ಡಿ ಆರ್‌ ಐ ಅನ್ನು ಅಭಿನಂದಿಸುತ್ತೇನೆ. ಐ ಆರ್‌ ಐ ಎಸ್‌ ಮತ್ತು ಸಿ ಡಿ ಆರ್‌ ಐ ಗಳು ಮೂಲಸೌಕರ್ಯದ ಬಗ್ಗೆ ಮಾತ್ರವಲ್ಲ, ಮಾನವ ಕಲ್ಯಾಣದ ಜವಾಬ್ದಾರಿ ಅವುಗಳ ಮೇಲಿದೆ. ಇದು ಮನುಕುಲದ ಕಡೆಗೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಐ ಆರ್‌ ಐ ಎಸ್‌ ನ ಆರಂಭವನ್ನು ನಾನು ಬಹಳ ಮುಖ್ಯವೆಂದು ಪರಿಗಣಿಸುತ್ತೇನೆ. ಐ ಆರ್‌ ಐ ಎಸ್‌ ಮೂಲಕ, ತಂತ್ರಜ್ಞಾನ, ಹಣಕಾಸು ಮತ್ತು ಅಗತ್ಯ ಮಾಹಿತಿಯನ್ನು ತ್ವರಿತವಾಗಿ ಸಜ್ಜುಗೊಳಿಸಲು ಎಸ್‌ ಐ ಡಿ ಎಸ್‌  ಗೆ ಸುಲಭವಾಗುತ್ತದೆ. ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಗುಣಮಟ್ಟದ ಮೂಲಸೌಕರ್ಯಗಳ ಉತ್ತೇಜನವು ಅಲ್ಲಿನ ಜೀವ ಮತ್ತು ಜೀವನೋಪಾಯ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ.” 

ಭಾರತವು ಸಿ ಡಿ ಆರ್‌ ಐ ಅನ್ನು ರಚಿಸಿದೆ ಮತ್ತು ಅದನ್ನು ಬಲಗೊಳಿಸುತ್ತಿದೆ. ಮೂಲಸೌಕರ್ಯದಲ್ಲಿ ನಾವೀನ್ಯತೆ ಮತ್ತು ತಾಳಿಕೆಯನ್ನು ಉತ್ತೇಜಿಸಲು ವಿವಿಧ ಭಾಗೀದಾರ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ತೊಡಗಿಸಿಕೊಳ್ಳಲು ಇದು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಹ ಒಂದು ಉಪಕ್ರಮವೆಂದರೆ "ಡಿ ಆರ್‌ ಐ ಕನೆಕ್ಟ್" ಇದು ಮೂಲಸೌಕರ್ಯ ವಲಯಗಳಲ್ಲಿ ತೊಡಗಿರುವ ಮಧ್ಯಸ್ಥಗಾರರಿಗೆ ವೆಬ್ ಆಧರಿತ ವೇದಿಕೆಯಾಗಿದೆ. ತಾಳಿಕೆಯ ಮೂಲಸೌಕರ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ವಿಪತ್ತು ತಾಳಿಕೆ ಮೂಲಸೌಕರ್ಯದಲ್ಲಿ ಕ್ರಿಯೆ ಆಧಾರಿತ ಕಲಿಕೆ ಮತ್ತು ನಾವೀನ್ಯತೆಯ ವಾತಾವರಣವನ್ನು ಉತ್ತೇಜಿಸಲು ಹೊಸ ಜ್ಞಾನ ಮತ್ತು ಕಾರ್ಯಸಾಧ್ಯವಾದ ಪರಿಹಾರಗಳ ಸೃಷ್ಟಿಗೆ ಒಕ್ಕೂಟ ಸದಸ್ಯರ ಸಾಮೂಹಿಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಈ ವೇದಿಕೆಯನ್ನು ರೂಪಿಸಲಾಗಿದೆ.

ಪ್ರಸ್ತುತ, ಸಿ ಡಿ ಆರ್‌ ಐ ಸದಸ್ಯತ್ವವು 31 ದೇಶಗಳು ಮತ್ತು ಎಂಟು ಸದಸ್ಯ ಸಂಸ್ಥೆಗಳನ್ನು ಒಳಗೊಂಡಿದೆ. ಆಫ್ರಿಕಾ ಪ್ರದೇಶದಲ್ಲಿ ಇದರ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣ ಸುಡಾನ್ ಮತ್ತು ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಇತ್ತೀಚಿನ ಸದಸ್ಯರಾಗಿವೆ. ಸಿ ಡಿ ಆರ್‌ ಐ ನ ಕಾರ್ಯತಂತ್ರದ ಉಪಕ್ರಮಗಳು, ವಿಸ್ತರಣಾ ಕಾರ್ಯಕ್ರಮ ಮತ್ತು ಸದಸ್ಯರ ತೊಡಗಿಸಿಕೊಳ್ಳುವಿಕೆಯು ತನ್ನ ಗುರಿಯ ಸಾಧನೆಯತ್ತ ಮುನ್ನಡೆಯಲು ಅನುವು ಮಾಡಿಕೊಡುತ್ತದೆ.

ಹವಾಮಾನ ಹಣಕಾಸು ಇನ್ನೂ ಮರೀಚಿಕೆಯಾಗಿದೆ ಮತ್ತು ಎಲ್ಲರಿಗೂ ಆರಂಭಿಕ ಎಚ್ಚರಿಕೆಗಳಂತಹ ಪರಿಣಾಮಕಾರಿ ಹವಾಮಾನ ಅಳವಡಿಕೆಯು ನಮ್ಮ ಪ್ರದೇಶದಲ್ಲಿ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನೈಸರ್ಗಿಕ ಅಪಾಯಗಳಿಗೆ ತ್ವರಿತ ಮತ್ತು ಸಮಯೋಚಿತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

******


(Release ID: 1874387) Visitor Counter : 158


Read this release in: English , Urdu , Hindi