ಪ್ರವಾಸೋದ್ಯಮ ಸಚಿವಾಲಯ

ಇಂದು ಹೊಸದಿಲ್ಲಿಯಲ್ಲಿ ನಡೆದ ಪ್ರವಾಸಿ ಪೊಲೀಸ್ ಯೋಜನೆ ಕುರಿತ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಭಾಷಣ 


ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಪ್ರವಾಸಿಗರ ಒಳಹರಿವನ್ನು ಹೆಚ್ಚಿಸುತ್ತದೆ. ಲೋಕಸಭಾ ಸ್ಪೀಕರ್

ಭಾರತ ಪ್ರವಾಸೋದ್ಯಮ ಉತ್ಪನ್ನಗಳನ್ನು ಉತ್ತೇಜಿಸಲು ಜಿ 20 ರ ಅಧ್ಯಕ್ಷ ಸ್ಥಾನವನ್ನು  ಒಂದು ಉತ್ತಮ ಅವಕಾಶವಾಗಿ ಪರಿಗಣಿಸಬಹುದು: ಶ್ರೀ ಜಿ. ಕಿಶನ್ ರೆಡ್ಡಿ

ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಬೆದರಿಕೆಯೊಡ್ಡುವ ಘಟನೆಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿರಬೇಕು: ಶ್ರೀ ಜಿ. ಕಿಶನ್ ರೆಡ್ಡಿ

Posted On: 19 OCT 2022 5:50PM by PIB Bengaluru

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಹೊಸದಿಲ್ಲಿಯಲ್ಲಿ ಪ್ರವಾಸಿ ಪೊಲೀಸ್ ಯೋಜನೆ ಕುರಿತ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ, ಪ್ರವಾಸೋದ್ಯಮ ಸಹಾಯಕ ಸಚಿವ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಸಚಿವಾಲಯವು ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಬಿಪಿಆರ್ & ಡಿ) ಸಹಯೋಗದೊಂದಿಗೆ ಈ ಸಮಾವೇಶವನ್ನು ಆಯೋಜಿಸಿದೆ. ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀ ಅರವಿಂದ್ ಸಿಂಗ್, ಬಿಪಿಆರ್ ಮತ್ತು ಡಿ, ಎಂಎಚ್ಎ, ಮಹಾನಿರ್ದೇಶಕ ಶ್ರೀ ಬಾಲಾಜಿ ಶ್ರೀವಾಸ್ತವ, ವಿದೇಶಿಯರ ವಿಭಾಗ, ಎಂಎಚ್ಎ ಜಂಟಿ ಕಾರ್ಯದರ್ಶಿ, ರಾಜಸ್ಥಾನ, ಕೇರಳ, ಗೋವಾ ಮತ್ತು ಮೇಘಾಲಯ ರಾಜ್ಯಗಳ ಪ್ರವಾಸೋದ್ಯಮ ಕಾರ್ಯದರ್ಶಿಗಳು, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು / ಐಜಿಪಿಗಳು ಮತ್ತು ಎಂಎಚ್ಎಯ ಹಿರಿಯ ಅಧಿಕಾರಿಗಳು, ಎಂಓಟಿ, ಬಿಪಿಆರ್ ಮತ್ತು ಡಿ ಯ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಬಿಪಿಆರ್ ಮತ್ತು ಡಿ ಸಿದ್ಧಪಡಿಸಿದ 'ಪ್ರವಾಸಿ ಪೊಲೀಸ್ ಯೋಜನೆ'ಯ ವರದಿಯನ್ನು ಚರ್ಚಿಸಲಾಯಿತು ಮತ್ತು ಬಿಪಿಆರ್ ಮತ್ತು ಡಿಯು ವರದಿಯ ಶೋಧನೆ ಮತ್ತು ಶಿಫಾರಸುಗಳನ್ನು ಹಂಚಿಕೊಂಡಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಡಿಜಿಟಲೀಕರಣವನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಮಾಹಿತಿ ಯುಗದಲ್ಲಿ, ಪ್ರವಾಸಿಗರು ಸಾಮಾನ್ಯವಾಗಿ ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯುತ್ತಾರೆ ಎಂದು ಹೇಳಿದರು. ಈ ನಿಟ್ಟಿನಲ್ಲಿ, ಅನೇಕ ಭಾಷೆಗಳಲ್ಲಿ ಪ್ರವಾಸಿಗರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒದಗಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಒತ್ತು ನೀಡಬೇಕು ಎಂದೂ ಶ್ರೀ ಬಿರ್ಲಾ ಹೇಳಿದರು. ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ಈ ಅಪ್ಲಿಕೇಶನ್ ಹೋಟೆಲ್ ಗಳು, ಟ್ಯಾಕ್ಸಿಗಳು, ಮಾರ್ಗದರ್ಶಿಗಳು ಇತ್ಯಾದಿಗಳ ಬಗ್ಗೆ ನವೀಕರಿಸಿದ ಮತ್ತು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಮತ್ತು ಅಗತ್ಯವಿದ್ದಾಗಲೆಲ್ಲಾ ಪೊಲೀಸ್ ಸಹಾಯವನ್ನು ಸುಗಮಗೊಳಿಸುವಂತಿರಬೇಕು ಎಂದು ಅವರು ಹೇಳಿದರು. ಪ್ರವಾಸಿಗರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ತ್ವರಿತ ಪೊಲೀಸ್ ಕ್ರಮದ ಅಗತ್ಯವನ್ನೂ ಶ್ರೀ ಬಿರ್ಲಾ ಒತ್ತಿ ಹೇಳಿದರು, ಅಂತಹ ಕ್ರಮಗಳು ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಉತ್ತಮ ವಾತಾವರಣವನ್ನು ಸೃಷ್ಟಿಸುತ್ತವೆ ಎಂದವರು ಅಭಿಪ್ರಾಯಪಟ್ಟರು. ಪ್ರವಾಸೋದ್ಯಮ ಭದ್ರತೆಯ ದೃಷ್ಟಿಯಿಂದ ಹಲವಾರು ರಾಜ್ಯ ಸರ್ಕಾರಗಳು ಪ್ರವಾಸೋದ್ಯಮ ಪೊಲೀಸ್ ವ್ಯವಸ್ಥೆಯನ್ನು ಸ್ಥಾಪಿಸಿರುವುದನ್ನು ಶ್ರೀ ಬಿರ್ಲಾ ಸ್ವಾಗತಿಸಿದರು ಮತ್ತು ಎಲ್ಲಾ ರಾಜ್ಯಗಳು ಹಾಗು ಕೇಂದ್ರ ಸರ್ಕಾರವು ಪರಸ್ಪರ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವಂತೆಯೂ  ಸಲಹೆ ನೀಡಿದರು.

ಪ್ರವಾಸಿಗರಿಗೆ ಉತ್ತಮ ಭದ್ರತೆ ನೀಡುವ ಬಗ್ಗೆ ಮಾತನಾಡಿದ ಶ್ರೀ ಬಿರ್ಲಾ, ಪರಿಣಾಮಕಾರಿ ಭದ್ರತೆಗಾಗಿ ಪ್ರವಾಸಿ ಪೊಲೀಸರಿಗೆ ಸಾಕಷ್ಟು ತರಬೇತಿ ನೀಡುವುದು ಅಗತ್ಯವಾಗಿದೆ ಮತ್ತು ಈ ಪೊಲೀಸ್ ಸಿಬ್ಬಂದಿ ಅನೇಕ ಭಾಷೆಗಳ ಜ್ಞಾನವನ್ನು ಹೊಂದಿರಬೇಕು  ಮತ್ತು ಹೊಸ ತಂತ್ರಜ್ಞಾನದ ಬಳಕೆಯನ್ನು ತಿಳಿದಿರಬೇಕು ಎಂದೂ ಹೇಳಿದರು. ಭಾರತವು ಮುಂಬರುವ ಜಿ 20 ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿರುವುದನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಜಿ 20 ರಾಷ್ಟ್ರಗಳ ಮುಖ್ಯಸ್ಥರು, ನಾಯಕರು ಮತ್ತು ಅಧಿಕಾರಿಗಳು ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮವು ಜನಪ್ರಿಯ ಪ್ರವಾಸಿ ಪ್ರದೇಶಗಳಲ್ಲಿ ಭದ್ರತೆ ಮತ್ತು ಪೊಲೀಸ್ ಗಿರಿಯನ್ನು ಸುಧಾರಿಸಲು ನಮಗೆ ಅವಕಾಶವನ್ನು ನೀಡುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿರುವ ದೇಶದಲ್ಲಿ ಪ್ರವಾಸಿಗರ ಒಳಹರಿವು ಸುಧಾರಿಸುತ್ತದೆ ಎಂದೂ ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ಆದ್ದರಿಂದ, ಈ ನಿಟ್ಟಿನಲ್ಲಿ ಪೊಲೀಸರಿಗೆ ತರಬೇತಿ ನೀಡುವುದು ಅಗತ್ಯವಾಗಿದೆ. ಪ್ರವಾಸಿ ಪೊಲೀಸರು ಭಾಷೆಗಳನ್ನು ಕಲಿಯುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಬಿರ್ಲಾ, ಭಾಷೆ ನಮ್ಮನ್ನು ಸಂಸ್ಕೃತಿ ಮತ್ತು ದೇಶದೊಂದಿಗೆ ಬೆಸೆಯುವ ಮಾಧ್ಯಮವಾಗಿದೆ ಮತ್ತು ಆದ್ದರಿಂದ ಎಲ್ಲಾ ಪ್ರವಾಸಿ ಸ್ಥಳಗಳು ಬಹುಭಾಷಾ ಪ್ರವಾಸಿ ಸಹಾಯವಾಣಿ ಸೌಲಭ್ಯವನ್ನು ಹೊಂದಿರಬೇಕು, ಇದು ಪ್ರವಾಸಿಗರಿಗೆ ಅವರ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸುವಂತಿರಬೇಕು ಎಂದು ಹೇಳಿದರು. ಅದೇ ಸಮಯದಲ್ಲಿ, ಪ್ರವಾಸಿ ಮಾರ್ಗದರ್ಶಿಗಳು, ವಿಶೇಷವಾಗಿ ಮಹಿಳಾ ಮಾರ್ಗದರ್ಶಿಗಳು  ಬಹುಭಾಷೆಯನ್ನರಿತವರಾಗಿರಬೇಕು ಎಂದರು. 

ಶ್ರೀ ಜಿ.ಕಿಶನ್ ರೆಡ್ಡಿಯವರು ತಮ್ಮ ಭಾಷಣದಲ್ಲಿ, ಭಾರತವು ಎತ್ತರದ ಪರ್ವತಗಳಿಂದ ಹಿಡಿದು ವೇಗವಾಗಿ ಹರಿಯುವ ನದಿಗಳು, ಕಣಿವೆಗಳು ಮತ್ತು ಮರಳಿನ ದಿಬ್ಬಗಳವರೆಗೆ ಎಲ್ಲಾ ರೀತಿಯ ಪ್ರವಾಸಿಗರಿಗೆ ಸದಾ ಏನಾದರೊಂದನ್ನು ಒದಗಿಸುವಂತಹ ಅಂಶಗಳನ್ನು ಹೊಂದಿದೆ ಎಂದು ಹೇಳಿದರು. ಭಾರತವು ಜಾಗತಿಕವಾಗಿ ಸಾಟಿಯಿಲ್ಲದ ಅಸಂಖ್ಯಾತ ಆಸಕ್ತಿದಾಯಕ ಸ್ಥಳಗಳು, ನೈಸರ್ಗಿಕ ಸೌಂದರ್ಯ ಮತ್ತು ರೋಮಾಂಚಕ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಒದಗಿಸುತ್ತದೆ.  ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ, ಕಳೆದ 75 ವರ್ಷಗಳಲ್ಲಿ ಭಾರತವು ಪ್ರವಾಸೋದ್ಯಮ, ಆಧ್ಯಾತ್ಮಿಕತೆ, ಪರಿವರ್ತನೆ, ಸಂಸ್ಕೃತಿ ಮತ್ತು ವೈವಿಧ್ಯಕ್ಕೆ ಸಮಾನಾರ್ಥಕವಾಗಿದೆ. ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಲು ಕಾರಣವಾದ ದಾಖಲೆಯ ವಿಸ್ತರಣೆಯನ್ನು ಆಚರಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದವರು ಅಭಿಪ್ರಾಯಪಟ್ಟರು. 

ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸಲು ಸರ್ಕಾರವು 360 ಡಿಗ್ರಿ ಧೋರಣೆಯ ವಿಧಾನವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು. ಮುಂಬರುವ ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022 ರ ಪ್ರಮುಖ ಕ್ಷೇತ್ರಗಳಾದ ಸುರಕ್ಷಿತ, ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರವಾಸೋದ್ಯಮದ ಮೇಲೆ ನಮ್ಮ ಗಮನ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಹೋಟೆಲುಗಳಲ್ಲಿ, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್ ಗಳ ಪ್ರವೇಶ- ನಿರ್ಗಮನ ಸ್ಥಳಗಳಲ್ಲಿ ಯಾವುದಕ್ಕೂ ಹೇಸದ, ನೀತಿ ನಿಷ್ಟೆರಹಿತ  ನಿರ್ಲಜ್ಜ ಶಕ್ತಿಗಳು ಹೆಚ್ಚಾಗಿ ಸಕ್ರಿಯವಾಗಿವೆ ಎಂದು ಕೇಂದ್ರ ಸಚಿವರು ಹೇಳಿದರು. ಕೆಲವು ಪ್ರವಾಸಿ ಸ್ಥಳಗಳಲ್ಲಿ ನಡೆದ ಕಳ್ಳತನದ ಘಟನೆಗಳನ್ನು ಅವರು ಬಲವಾಗಿ ಖಂಡಿಸಿದರು ಮತ್ತು ಅವುಗಳನ್ನು ಕಠಿಣ ದಂಡನಾಕ್ರಮದ ಮೂಲಕ ನಿಭಾಯಿಸುವಂತೆ ಪೊಲೀಸ್ ಆಡಳಿತಕ್ಕೆ  ಸೂಚಿಸಿದರು. ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುವ ಘಟನೆಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಇಂತಹ ಘಟನೆಗಳು ನಮ್ಮ ದೇಶದ ವರ್ಚಸ್ಸಿಗೆ ಮಸಿ ಬಳಿಯುತ್ತವೆ ಎಂದೂ ಶ್ರೀ ರೆಡ್ಡಿ ಹೇಳಿದರು. ಆದ್ದರಿಂದ, ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು, ಸರಿಯಾದ ವ್ಯವಸ್ಥೆಗಳನ್ನು ಜಾರಿಗೆ ತರುವ ತುರ್ತು ಅಗತ್ಯವಿದೆ. ಪ್ರವಾಸಿ ಸ್ಥಳಗಳಲ್ಲಿ ನಾಗರಿಕ ಸಮಾಜಗಳು, ಸರಕಾರೇತರ ಸಂಘಸಂಸ್ಥೆಗಳ  ಸಕ್ರಿಯ ಭಾಗವಹಿಸುವಿಕೆಯ ನೆರವನ್ನು  ಪಡೆಯಲು ಪೊಲೀಸರಿಗೆ ತರಬೇತಿ ನೀಡಬೇಕು ಎಂದೂ  ಅವರು ಹೇಳಿದರು.

ಈಗ ಜಿ 20 ರ ಅಧ್ಯಕ್ಷ ಸ್ಥಾನವು 2022 ರ ಡಿಸೆಂಬರ್ ನಿಂದ ಒಂದು ವರ್ಷದ ಅವಧಿಗೆ ಭಾರತಕ್ಕೆ ಲಭಿಸಿರುವುದರಿಂದ, ಇದನ್ನು ಭಾರತ ಪ್ರವಾಸೋದ್ಯಮ ಉತ್ಪನ್ನಗಳನ್ನು ಉತ್ತೇಜಿಸಲು ಉತ್ತಮ ಅವಕಾಶವೆಂದು ಪರಿಗಣಿಸಬಹುದು ಎಂದು ಶ್ರೀ ರೆಡ್ಡಿ ಹೇಳಿದರು. ನಾವು ಅವರಿಗೆ ಭಾರತವನ್ನು ತೋರಿಸಬಹುದು ಮತ್ತು ಅವರಿಗೆ ಉತ್ತಮ ಅನುಭವಗಳನ್ನು ನೀಡಬಹುದು, ಇದರಿಂದ ಅವರು ತಮ್ಮ ತಮ್ಮ ದೇಶಗಳಲ್ಲಿ ಭಾರತೀಯ ಪ್ರವಾಸೋದ್ಯಮ ಉತ್ಪನ್ನಗಳಿಗೆ ರಾಯಭಾರಿಗಳಾಗಿ ಕೆಲಸ ಮಾಡಬಹುದು ಎಂದೂ ಸಚಿವರು ಅಭಿಪ್ರಾಯಪಟ್ಟರು. 

ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು, ಪ್ರವಾಸೋದ್ಯಮ ವಲಯವು ಭಾರತದ ಜಿಡಿಪಿಯ ಸುಮಾರು 5.02% ರಷ್ಟು ಕೊಡುಗೆ ನೀಡುತ್ತದೆ ಮತ್ತು 2018-19 ರ ಆರ್ಥಿಕ ವರ್ಷದಲ್ಲಿ ಒಟ್ಟು ನೇರ ಮತ್ತು ಪರೋಕ್ಷ  ಉದ್ಯೋಗಗಳಲ್ಲಿ  ಸುಮಾರು 14.87% ದಷ್ಟು ಉದ್ಯೋಗಗಳನ್ನು ಬೆಂಬಲಿಸಿದೆ ಮತ್ತು 2019 ರಲ್ಲಿ ಭಾರತೀಯ ಆರ್ಥಿಕತೆಯಲ್ಲಿ 2.12 ಲಕ್ಷ ಕೋಟಿ ರೂ.ಗಳ (30 ಬಿಲಿಯನ್  ಅಮೆರಿಕನ್ ಡಾಲರ್) ವಿದೇಶಿ ವಿನಿಮಯ ಗಳಿಕೆಗೆ ಕೊಡುಗೆ ನೀಡಿದೆ ಎಂದು ಹೇಳಿದರು. ಭಾರತದಲ್ಲಿ ಪ್ರವಾಸೋದ್ಯಮವು ಭಾರತವನ್ನು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಗಮನಾರ್ಹ ಕೊಡುಗೆ ನೀಡಿದೆ, ಆದರೂ ನಾವು ಅದರ ಪೂರ್ಣ ಸಾಮರ್ಥ್ಯವನ್ನು ಇನ್ನೂ ಉತ್ತಮವಾಗಿ ಬಳಸಿಕೊಳ್ಳಬೇಕಾಗಿದೆ. ಅಂತರರಾಷ್ಟ್ರೀಯ ಅಥವಾ ದೇಶೀಯ ಪ್ರವಾಸಿಗರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದು ಮೊದಲ ಮತ್ತು ಪ್ರಮುಖ ಕಾಳಜಿಯಾಗಿದೆ ಎಂದೂ ಶ್ರೀ ನಾಯಕ್ ಹೇಳಿದರು. ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತವೆ. ಯಾವುದೇ ಜಾಗತಿಕ ಪ್ರವಾಸಿಗರಿಗೆ, ಭಾರತವು ಬರೇ ನೋಡಲು ಅಥವಾ ಭೇಟಿ ನೀಡಲು ಇರುವ ಒಂದು ಸ್ಥಳವಲ್ಲ, ಅದು  ಜನರು, ಸಂಸ್ಕೃತಿ, ಪಾಕಪದ್ಧತಿ ಮತ್ತು ಇನ್ನೂ ಹಲವು ವಿಷಯಗಳ  ಅನುಭವ ಪಡೆಯಲು ಮತ್ತು ಸಂಪರ್ಕವನ್ನು ಹೊಂದಲು ಒಂದು ತಾಣವಾಗಿದೆ. ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಭವವನ್ನು ಶ್ರೀಮಂತಗೊಳಿಸಲು, ನಾವು ನಿರ್ದಿಷ್ಟವಾಗಿ ಪ್ರವಾಸಿ ತಾಣಗಳಲ್ಲಿ ಮತ್ತು ಸಾಮಾನ್ಯವಾಗಿ ಭಾರತದಾದ್ಯಂತದ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದವರು ಹೇಳಿದರು. 

ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀ ಅರವಿಂದ್ ಸಿಂಗ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ, ಪ್ರವಾಸೋದ್ಯಮದ ಸುರಕ್ಷತೆ ಮತ್ತು ಭದ್ರತಾ ಅಂಶಗಳನ್ನು ಸುಧಾರಿಸುವ ಮೂಲಕ ಭಾರತದ ಜಾಗತಿಕ ಪ್ರವಾಸೋದ್ಯಮ ಸೂಚ್ಯಂಕಗಳು ಸುಧಾರಿಸಲಿವೆ ಮತ್ತು ಭಾರತವನ್ನು ಬಹಳ ಅಚ್ಚುಮೆಚ್ಚಿನ ಹಾಗು ಅನುಕೂಲಕರ ತಾಣಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ನಮ್ಮನ್ನು ಬಹುದೂರ ಕೊಂಡೊಯ್ಯುತ್ತವೆ ಎಂದು ಹೇಳಿದರು. ಈ ಸಮಾವೇಶವು ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮತ್ತೊಂದು ಹೆಜ್ಜೆಯಾಗಿದೆ ಮತ್ತು ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ರೀತಿಯ ಏಕರೂಪದ ಪ್ರವಾಸಿ ಪೊಲೀಸ್ ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ಸುರಕ್ಷಿತ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ಮತ್ತು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಒಂದೇ ವೇದಿಕೆಯಲ್ಲಿ ತರುವುದು ಪ್ರವಾಸಿ ಪೊಲೀಸ್ ಯೋಜನೆಯ ರಾಷ್ಟ್ರೀಯ ಸಮಾವೇಶದ ಉದ್ದೇಶವಾಗಿತ್ತು, ಇದರಿಂದ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಮನ್ವಯದೊಂದಿಗೆ ಒಗ್ಗೂಡಿ ಕೆಲಸ ಮಾಡಬಹುದು ಮತ್ತು ದೇಶಾದ್ಯಂತ ಏಕರೂಪದ ಪ್ರವಾಸಿ ಪೊಲೀಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು, ಜೊತೆಗೆ ವಿದೇಶಿ ಮತ್ತು ದೇಶೀಯ ಪ್ರವಾಸಿಗರ ನಿರ್ದಿಷ್ಟ ಅವಶ್ಯಕತೆಗಳ ಬಗ್ಗೆ ಸಂವೇದನಾಶೀಲತೆಯನ್ನು ಬೆಳೆಸುವುದು ಸಾಧ್ಯವಾಗಲಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಗ್ರಹಿಕೆಯನ್ನು ಬದಲಾಯಿಸುತ್ತದೆ ಮತ್ತು ಭಾರತವನ್ನು ವಿಶ್ವದಾದ್ಯಂತ ಭೇಟಿ ನೀಡಲೇಬೇಕಾದ ತಾಣವನ್ನಾಗಿ ಮಾಡಲು ಸಹಾಯ ಮಾಡುತ್ತದೆ.

******



(Release ID: 1869430) Visitor Counter : 118


Read this release in: English , Urdu , Telugu