ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಆಹಾರ ಸಂಸ್ಕರಣಾ ಉದ್ಯಮಗಳನ್ನು ಬೆಂಬಲಿಸಲು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ನಡುವಿನ ಸಮನ್ವಯ ಪೋರ್ಟಲ್ ಗೆ ಚಾಲನೆ 


ಸರ್ಕಾರದ ಎಲ್ಲ ಸಚಿವಾಲಯಗಳು / ಇಲಾಖೆಗಳು ಒಗ್ಗಟ್ಟಿನಿಂದ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೇಶದ ಜನರಿಗೆ ಸೇವೆ ಸಲ್ಲಿಸಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಚಿಂತನೆಯಾಗಿದೆ - ಶ್ರೀ ನರೇಂದ್ರ ಸಿಂಗ್ ತೋಮರ್

ಈ ಸಮನ್ವಯವು ದೇಶದ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬಹಳ ಪ್ರಮುಖವಾಗಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತದ ಕನಸನ್ನು ಸಾಧಿಸಲು ಇದೊಂದು ಮೆಟ್ಟಿಲಾಗಲಿದೆ ಹಾಗೂ ‘ಸ್ಥಳೀಯತೆಗೆ ಆದ್ಯತೆ’ ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ - ಶ್ರೀ ಪಶುಪತಿ ಕುಮಾರ್ ಪಾರಸ್

Posted On: 21 SEP 2022 5:59PM by PIB Bengaluru

ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (ಎಂಒಎಎಫ್‌ಡಬ್ಲ್ಯು) ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ (ಎಂಒಎಫ್‌ಪಿಐ) ಇಂದು ನವದೆಹಲಿಯ ಕೃಷಿ ಭವನದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಮೂಲಸೌಕರ್ಯ ನಿಧಿ (ಎಐಎಫ್‌), ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳು ಔಪಚಾರಿಕೀಕರಣ ಯೋಜನೆ (ಪಿಎಂಎಫ್‌ಎಂಇ) ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ (ಪಿಎಂಕೆಎಸ್‌ವೈ) ನಡುವಿನ ಸಮನ್ವಯ ಪೋರ್ಟಲ್ ಗೆ ಚಾಲನೆ ನೀಡಲಾಯಿತು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವ ಶ್ರೀ ಪಶುಪತಿ ಕುಮಾರ್ ಪಾರಸ್, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವ ಶ್ರೀ ಕೈಲಾಶ್ ಚೌಧರಿ, ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಅನಿತಾ ಪ್ರವೀಣ್ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಮತ್ತು ಎರಡೂ ಸಚಿವಾಲಯಗಳ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮನ್ವಯ ಪೋರ್ಟಲ್‌ಗೆ ಚಾಲನೆ ನೀಡಲಾಯಿತು.

ಸಚಿವಾಲಯದ ಅನೇಕ ಕ್ಷೇತ್ರ ಕಾರ್ಯಕರ್ತರು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಸಮಾರಂಭದಲ್ಲಿ ಭಾಗವಹಿಸಿದರು. ಈ ಉಪಕ್ರಮವು ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸಣ್ಣ ಘಟಕಗಳಿಗೆ ಹೊಸ ಹುರುಪು ತರಲಿದೆ ಎಂದು ಎರಡೂ ಸಚಿವಾಲಯಗಳ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
 

 

 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಪಶುಪತಿ ಕುಮಾರ್ ಪಾರಸ್, ಇಂದಿನ ಪೋರ್ಟಲ್‌ ಚಾಲನೆಯು ದೇಶದ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತದ ಕನಸನ್ನು ಸಾಧಿಸಲು ಒಂದು ಮೆಟ್ಟಿಲಾಗಿದೆ ಮತ್ತು ʼಸ್ಥಳೀಯತೆಗೆ ಆದ್ಯತೆʼ (ವೋಕಲ್ ಫಾರ್ ಲೋಕಲ್) ಪರಿಕಲ್ಪನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

 

ಸರ್ಕಾರದ ಎಲ್ಲ ಸಚಿವಾಲಯಗಳು/ಇಲಾಖೆಗಳು ಒಗ್ಗಟ್ಟಿನಿಂದ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೇಶದ ಜನರಿಗೆ ಸೇವೆ ಸಲ್ಲಿಸಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಚಿಂತನೆಯಾಗಿದೆ ಎಂದು ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕೊಯ್ಲಿನ ನಂತರದ ನಿರ್ವಹಣೆ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳ ನಿರ್ಮಾಣಕ್ಕಾಗಿ 08 ಜುಲೈ 2020 ರಂದು ಪ್ರಾರಂಭವಾದ ಮಧ್ಯಮ ಮತ್ತು ದೀರ್ಘಾವಧಿಯ ಸಾಲದ ಹಣಕಾಸು ಸೌಲಭ್ಯವಾದ ಕೃಷಿ ಮೂಲಸೌಕರ್ಯ ನಿಧಿಯನ್ನು (ಎಐಎಫ್‌) ಅನುಷ್ಠಾನಗೊಳಿಸುತ್ತಿದೆ. ಯೋಜನೆಯು ಶೇ.3 ರಷ್ಟು ಬಡ್ಡಿ ಸಹಾಯಧನ ಮತ್ತು ಸಾಲ ಖಾತ್ರಿ ಬೆಂಬಲದ ಪ್ರಯೋಜನಗಳನ್ನು ಒಳಗೊಂಡಿದೆ.

ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯವು  ಅಸಂಘಟಿತ ವಿಭಾಗದಲ್ಲಿ ವೈಯಕ್ತಿಕ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಈ ವಲಯದ ಔಪಚಾರಿಕತೆಯನ್ನು ಉತ್ತೇಜಿಸಲು “ಆತ್ಮನಿರ್ಭರ ಭಾರತ ಅಭಿಯಾನ” ದ ಭಾಗವಾಗಿ ಜೂನ್ 29, 2020 ರಂದು ಕೇಂದ್ರ ಪ್ರಾಯೋಜಿತ ಪಿಎಂಎಫ್‌ಎಂಇ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ದೇಶದಲ್ಲಿನ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಉನ್ನತೀಕರಣಕ್ಕೆ ಆರ್ಥಿಕ, ತಾಂತ್ರಿಕ ಮತ್ತು ವ್ಯವಹಾರ ಬೆಂಬಲವನ್ನು ಒದಗಿಸುತ್ತದೆ.

ಸಣ್ಣ ಆಹಾರ ಸಂಸ್ಕರಣಾ ಉದ್ಯಮದ ಸ್ಥಾಪನೆಗೆ 10 ಲಕ್ಷ ರೂ.ಗರಿಷ್ಠ ಮಿತಿಯೊಂದಿಗೆ ಶೇ. 35 ರಷ್ಟು ಸಾಲ ಆಧಾರಿತ ಸಹಾಯಧನ ಮತ್ತು ಸಾಮಾನ್ಯ ಮೂಲಸೌಕರ್ಯದೊಂದಿಗೆ ಘಟಕವನ್ನು ನವೀಕರಿಸಲು ಅಥವಾ ಹೊಸ ಘಟಕವನ್ನು ಸ್ಥಾಪಿಸಲು ಗರಿಷ್ಠ ಮಿತಿ 3 ಕೋಟಿ ರೂ. ಒದಗಿಸಲಾಗುತ್ತದೆ. ಈ ಯೋಜನೆಯು ಆಹಾರ ಸಂಸ್ಕರಣೆ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 62,000 ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡಿದೆ. ಯೋಜನಾ ವೆಚ್ಚದ ಶೇ.35 ರಷ್ಟು ಸಹಾಯಧನದೊಂದಿಗೆ ಹೊಸ ಸಣ್ಣ ಆಹಾರ ಸಂಸ್ಕರಣಾ ಉದ್ಯಮವನ್ನು ಸ್ಥಾಪಿಸಲು ಅಥವಾ ಹಾಲಿ ಇರುವ ಘಟಕಗಳನ್ನು ನವೀಕರಿಸಲು ಇದುವರೆಗೆ ಸುಮಾರು 7300 ಸಾಲಗಳನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ, ಪ್ರಾಥಮಿಕ ಕೃಷಿ ಉತ್ಪನ್ನಗಳಲ್ಲಿ ತೊಡಗಿರುವ ಸುಮಾರು ಶೇ.60 ರಷ್ಟು ಫಲಾನುಭವಿಗಳು ಅರ್ಹರಾಗಿದ್ದು, ಬ್ಯಾಂಕ್‌ಗಳು ವಿಧಿಸುವ ಬಡ್ಡಿದರದ ಮೇಲೆ ಹೆಚ್ಚುವರಿ ಶೇ.3 ರಷ್ಟು ಬಡ್ಡಿ ರಿಯಾಯಿತಿಯನ್ನು ಪಡೆಯುವ ಮೂಲಕ ಈ ಸಮನ್ವಯ ಪೋರ್ಟಲ್‌ನಿಂದ ನೇರವಾಗಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯದ ಕೇಂದ್ರ ವಲಯದ ಯೋಜನೆಯಾಗಿದ್ದು, ಜಮೀನಿನಿಂದ ಚಿಲ್ಲರೆ ಅಂಗಡಿಯವರೆಗೆ ಸಮರ್ಥ ಪೂರೈಕೆ ಸರಪಳಿ ನಿರ್ವಹಣೆಯೊಂದಿಗೆ ಆಧುನಿಕ ಮೂಲಸೌಕರ್ಯಗಳ ಸೃಷ್ಟಿಗೆ ಕಾರಣವಾಗುವ ಸಮಗ್ರ ಪ್ಯಾಕೇಜ್‌ ಆಗಿ ರೂಪಿಸಲಾಗಿದೆ. ಇದು ಒಂದು ಸಮೂಹ ಯೋಜನೆಯಾಗಿದ್ದು, (i) ಆಗ್ರೋ-ಪ್ರೊಸೆಸಿಂಗ್ ಕ್ಲಸ್ಟರ್‌ (ಎಪಿಸಿ) ಗಳಿಗೆ ಮೂಲಸೌಕರ್ಯ, (ii) ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ ಸಾಮರ್ಥ್ಯಗಳ ರಚನೆ/ವಿಸ್ತರಣೆ (ಸಿಇಎಫ್‌ಪಿಪಿಸಿ ಅಥವಾ ಯುಎನ್‌ಐಟಿ), (iii) ಸಂಯೋಜಿತ ಶೀತ ಸರಪಳಿ ಮತ್ತು ಮೌಲ್ಯ ಸೇರ್ಪಡೆ ಮೂಲಸೌಕರ್ಯ (ಸಿಸಿಐ), (iv) ಆಹಾರ ಪರೀಕ್ಷೆ ಪ್ರಯೋಗಾಲಯ (ಎಫ್‌ಟಿಎಲ್‌), (v) ಆಪರೇಷನ್ ಗ್ರೀನ್ಸ್ (ಒಜಿ) (vi) ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆ (ಆರ್‌ & ಡಿ) ಗಳನ್ನು ಒಳಗೊಂಡಿದೆ. ಯೋಜನೆಯಡಿಯಲ್ಲಿ, ಉಪ-ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಅರ್ಹ ಯೋಜನಾ ವೆಚ್ಚದ ಅನುದಾನವನ್ನು ಗರಿಷ್ಠ 5 ಕೋಟಿಗಳಿಂದ 15 ಕೋಟಿ ರೂ.ಗಳವರೆಗೆ ಸಾಮಾನ್ಯ ವರ್ಗಕ್ಕೆ ಶೇ. 35 ಮತ್ತು ಎಸ್‌ಸಿ/ಎಸ್‌ಟಿ/ದುರ್ಗಮ ಪ್ರದೇಶಗಳಿಗೆ ಶೇ.50 ರಷ್ಟು ನೀಡಲು ಅವಕಾಶವಿದೆ.

ಈ ಸಮನ್ವಯದ ಮೂಲಕ, ಪಿಎಂಎಫ್‌ಎಂಇ ಮತ್ತು ಪಿಎಂಕೆಎಸ್‌ವೈ ಯೋಜನೆಯಡಿ ಸಾಲ ಆಧಾರಿತ ಸಹಾಯಧನವನ್ನು ಪಡೆಯುವ ಅರ್ಹ ಫಲಾನುಭವಿಗಳು ಬ್ಯಾಂಕ್‌ಗಳು ಒದಗಿಸುವ ಶೇ.35 ಮತ್ತು ಅದಕ್ಕಿಂತ ಹೆಚ್ಚಿನ ಸಬ್ಸಿಡಿ ದರದ ಮೇಲೆ ಶೇ.3 ಹೆಚ್ಚುವರಿ ಬಡ್ಡಿ ಸಹಾಯಧನದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. 

ಎರಡೂ ಯೋಜನೆಗಳ ಅಡಿಯಲ್ಲಿ ಯೋಜನೆಗಳ ಅನುಮೋದನೆಯ ಸುಲಭಗೊಳಿಸಲು ಪಿಎಂಎಫ್‌ಎಂಇ ಮತ್ತು ಪಿಎಂಕೆಎಸ್‌ವೈ ಯೋಜನೆಯಡಿಯಲ್ಲಿ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಎಐಎಫ್‌ ಎಂಐಎಸ್ ಪೋರ್ಟಲ್ ಅನ್ನು ಮಾರ್ಪಡಿಸಲಾಗಿದೆ. ಪಿಎಂಎಫ್‌ಎಂಇ ಫಲಾನುಭವಿಗಳು ಈ ಕೆಳಗಿನ ಮಾಹಿತಿಯೊಂದಿಗೆ ಪಿಎಂಎಫ್‌ಎಂಇ ಅಡಿಯಲ್ಲಿ ಅನುಮೋದಿಸಲಾದ ವಿವರವಾದ ಯೋಜನಾ ವರದಿ (ಡಿಪಿಆರ್‌) ಯೊಂದಿಗೆ ಈ ಕೆಳಗಿನ ಮಾಹಿತಿಯೊಂದಿಗೆ ಎಐಎಫ್‌ ಪೋರ್ಟಲ್‌ನಲ್ಲಿ ಬಡ್ಡಿ ಸಹಾಯಧನ ಸೌಲಭ್ಯಕ್ಕಾಗಿ ನೇರವಾಗಿ ಅರ್ಜಿ ಸಲ್ಲಿಸಬಹುದು. 

•    ಪಿಎಂಎಫ್‌ಎಂಇ ಯೋಜನೆಯ ಅಡಿಯಲ್ಲಿ ಸೃಷ್ಟಿಸಲಾದ ಅಪ್ಲಿಕೇಶನ್ ಐಡಿ 
•    ಮಂಜೂರಾತಿ ಪತ್ರ 
•    ವೆಚ್ಚದೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಸ್ಕರಣಾ ಚಟುವಟಿಕೆಗಳ ಮಾಹಿತಿ

ಅದೇ ರೀತಿ, ಪಿಎಂಎಫ್‌ಎಂಇ ಯೋಜನೆಯಡಿಯಲ್ಲಿ ಅರ್ಹರಾಗಿರುವ ಎಐಎಫ್‌ ಫಲಾನುಭವಿಗಳು ಎಐಎಫ್‌ ಅಡಿಯಲ್ಲಿ ಮಂಜೂರಾತಿ ಪತ್ರ ಮತ್ತು ಡಿಪಿಆರ್‌ನೊಂದಿಗೆ ಪಿಎಂಎಫ್‌ಎಂಇ ಎಂಐಎಸ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಹಾಯಧನದ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

*******


(Release ID: 1861352) Visitor Counter : 224


Read this release in: English , Urdu , Hindi