ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಂಸ್ಕೃತ ಕಲಿಕೆಯನ್ನು ಪುನಶ್ಚೇತನಗೊಳಿಸಲು ಜನಾಂದೋಲನಕ್ಕೆ ಉಪರಾಷ್ಟ್ರಪತಿ ಕರೆ


ಸಂಸ್ಕೃತ ನಮ್ಮ ಅಮೂರ್ತ ಪರಂಪರೆ; ಇದು ಭಾರತದ ಆತ್ಮವನ್ನು ಅರ್ಥೈಸಿಕೊಳ್ಳಲು ನಮಗೆ ನೆರವಾಗುತ್ತದೆ" ಎಂದು ಹೇಳಿದ ಶ್ರೀ ನಾಯ್ಡು

ಸಂಸ್ಕೃತವು ನಮ್ಮನ್ನು ಒಗ್ಗೂಡಿಸುವ ಭಾಷೆಯಾಗಿದೆ - ಉಪರಾಷ್ಟ್ರಪತಿ

ನಮ್ಮ ಶಾಸ್ತ್ರೀಯ ಭಾಷೆಗಳನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ತಂತ್ರಜ್ಞಾನವು ಹೊಸ ಅವಕಾಶಗಳನ್ನು ತೆರೆದಿದೆ - ಉಪರಾಷ್ಟ್ರಪತಿ

ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ದಶಮಾನೋತ್ಸವ ಮತ್ತು ಒಂಬತ್ತನೇ ಘಟಿಕೋತ್ಸವ ಉದ್ದೇಶಿಸಿ ಉಪ ರಾಷ್ಟ್ರಪತಿ ಭಾಷಣ

ಮೂವರು ಹೆಸರಾಂತ ವಿದ್ವಾಂಸರಾದ ಆಚಾರ್ಯ ಪ್ರದ್ಯುಮ್ನ, ಡಾ.ವಿ.ಎಸ್.ಇಂದಿರಮ್ಮ ಮತ್ತು ವಿದ್ವಾನ್ ಉಮಾ ಕಾಂತ ಭಟ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ಉಪರಾಷ್ಟ್ರಪತಿ

Posted On: 09 JUL 2022 6:09PM by PIB Bengaluru

ಸಂಸ್ಕೃತ ಕಲಿಕೆಯನ್ನು ಪುನಶ್ಚೇತನಗೊಳಿಸಲು ಜನಾಂದೋಲನಕ್ಕೆ ಇಂದು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದರು, ಅಲ್ಲಿ ಭಾರತದ ಶ್ರೀಮಂತ ಶಾಸ್ತ್ರೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಮರು-ಶೋಧಕ್ಕೆ ಎಲ್ಲಾ ಬಾಧ್ಯಸ್ಥರು ಕೊಡುಗೆ ನೀಡಬೇಕು ಎಂದು ತಿಳಿಸಿದ್ದಾರೆ. "ಸಾಂವಿಧಾನಿಕ ನಿಬಂಧನೆಗಳು ಅಥವಾ ಸರ್ಕಾರದ ನೆರವು ಅಥವಾ ರಕ್ಷಣೆಯಿಂದ ಮಾತ್ರ ಭಾಷೆಯನ್ನು ಸಂರಕ್ಷಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಮತ್ತು ದಶಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಕುಟುಂಬಗಳು, ಸಮುದಾಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಬೆಲೆ ನೀಡಿದರೆ, ಒಂದು ಭಾಷೆಯು ಜೀವಂತವಾಗಿರುತ್ತದೆ ಮತ್ತು ಪ್ರಚುರವಾಗುತ್ತದೆ ಎಂದು ಅವರು ಹೇಳಿದರು. ಕ್ಷಿಪ್ರಗತಿಯ ತಾಂತ್ರಿಕ ಬದಲಾವಣೆಗಳನ್ನು ಉಲ್ಲೇಖಿಸಿದ ಅವರು, ಸಂಸ್ಕೃತ ಸೇರಿದಂತೆ ನಮ್ಮ ಶಾಸ್ತ್ರೀಯ ಭಾಷೆಗಳನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ತಂತ್ರಜ್ಞಾನವು ಹೊಸ ಅವಕಾಶಗಳನ್ನು ತೆರೆದಿದೆ ಎಂದು ತಿಳಿಸಿದರು. "ಪ್ರಾಚೀನ ಹಸ್ತಪ್ರತಿಗಳು, ಶಿಲಾಲೇಖಗಳು ಮತ್ತು ಶಾಸನಗಳ ಡಿಜಿಟಲೀಕರಣ, ವೇದ ಪಠಣದ ಧ್ವನಿಮುದ್ರಣ, ಪ್ರಾಚೀನ ಸಂಸ್ಕೃತ ಗ್ರಂಥಗಳ ಅರ್ಥ ಮತ್ತು ಮಹತ್ವವನ್ನು ಒಳಗೊಂಡ ಪುಸ್ತಕಗಳ ಪ್ರಕಟಣೆ ಮೊದಲಾದವುಗಳು ಸಂಸ್ಕೃತ ಪಠ್ಯಗಳಲ್ಲಿ ಹುದುಗಿರುವ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲವು ಮಾರ್ಗಗಳಾಗಿವೆ ಎಂದರು.

ಸಂಸ್ಕೃತವನ್ನು ನಮ್ಮ ದೇಶದ ಅಮೂರ್ತ ಪರಂಪರೆ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಇದು ನಮ್ಮ ಜ್ಞಾನ ಮತ್ತು ಸಾಹಿತ್ಯಿಕ ಸಂಪ್ರದಾಯಗಳ ಬುಗ್ಗೆಯಾಗಿದೆ ಎಂದು ಹೇಳಿದರು. "ಸಂಸ್ಕೃತವು ಭಾರತದ ಆತ್ಮವನ್ನು ಅರ್ಥೈಸಿಕೊಳ್ಳಲು ನಮಗೆ ನೆರವಾಗುತ್ತದೆ. ಯಾರೇ ಭಾರತೀಯ ವಿಶ್ವದೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯಬೇಕು" ಎಂದು ಅವರು ಒತ್ತಿ ಹೇಳಿದರು. ಯಾರೇ ಆದರೂ ಭಾರತೀಯ ಕವಿಗಳ ಸಾಹಿತ್ಯಿಕ ಪ್ರತಿಭೆಯನ್ನು ಹೊಗಳಲು ಮತ್ತು ನಮ್ಮ ಮಹಾನ್ ದೇಶದ ನಾಗರಿಕತೆಯ ಶ್ರೀಮಂತಿಕೆಯ ಬಗ್ಗೆ ಸಂಶೋಧನೆ ನಡೆಸಲು, ಸಂಸ್ಕೃತದ ವಿದ್ಯಾರ್ಥಿಯಾಗಿರಬೇಕಾಗುತ್ತದೆ ಎಂದು ಶ್ರೀ ನಾಯ್ಡು ಅಭಿಪ್ರಾಯಪಟ್ಟರು.

ಸಂಸ್ಕೃತದ ಬಳಕೆಯು ಕೇವಲ ತಾತ್ವಿಕ ಮತ್ತು ಧಾರ್ಮಿಕ ವಿಷಯಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಆಯುರ್ವೇದ, ಯೋಗ, ಕೃಷಿ, ಲೋಹಶಾಸ್ತ್ರ, ಖಗೋಳಶಾಸ್ತ್ರ, ಕರಕುಶಲ ಮತ್ತು ನೀತಿಶಾಸ್ತ್ರದಂತಹ ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಸಂಸ್ಕೃತದಲ್ಲಿ ಹಲವಾರು ಗ್ರಂಥಗಳಿವೆ ಎಂದು ಉಪರಾಷ್ಟ್ರಪತಿ ಒತ್ತಿ ಹೇಳಿದರು. ಈ ಜ್ಞಾನದ ಕ್ಷೇತ್ರಗಳನ್ನು ಅನ್ವೇಷಿಸಲು ಮತ್ತು ನಮ್ಮ ಪ್ರಾಚೀನ ಪಠ್ಯಗಳಲ್ಲಿನ ಹೊಸ ಮುಖಗಳನ್ನು ಅನ್ವೇಷಿಸಲು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಭಾರತವು ಬಹು ಭಾಷೆಗಳನ್ನು ಹೊಂದಿರುವ ದೇಶವಾಗಿದೆ ಎಂದು ಉಲ್ಲೇಖಿಸಿದ ಶ್ರೀ ನಾಯ್ಡು ಅವರು, ಪ್ರಾಚೀನ ಕಾಲದಿಂದಲೂ ಈ ಶ್ರೀಮಂತ ಭಾಷಾ ವೈವಿಧ್ಯತೆಯನ್ನು ಹೊಂದಲು ನಾವು ಅದೃಷ್ಟಶಾಲಿಗಳು ಎಂದು ಹೇಳಿದರು. ನಮ್ಮ ಪ್ರಾಚೀನ ಭಾಷೆಗಳು ಮತ್ತು ಅವುಗಳ ಸಾಹಿತ್ಯವು ಭಾರತವು "ವಿಶ್ವಗುರು" ಎಂಬ ಪ್ರತಿಷ್ಠಿತ ಸ್ಥಾನಮಾನವನ್ನು ಪಡೆಯಲು ಅಪಾರ ಕೊಡುಗೆ ನೀಡಿದೆ ಎಂದು ಹೇಳಿದ ಅವರು, ಈ ಭಾಷಾ ಸಂಪತ್ತನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ನಮ್ಮ ಸಾಂಸ್ಕೃತಿಕ ಭೂರಮೆಯಲ್ಲಿ ಸಂಸ್ಕೃತಕ್ಕೆ ವಿಶೇಷ ಸ್ಥಾನವಿದೆ ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು, ಏಕೆಂದರೆ ಹೆಚ್ಚಿನ ಭಾರತೀಯ ಭಾಷೆಗಳು ಅದರಿಂದ ಹುಟ್ಟಿಕೊಂಡಿವೆ. "ನಾವು ಸಂಸ್ಕೃತವನ್ನು ಕಲಿತರೆ ಎಲ್ಲಾ ಭಾರತೀಯರನ್ನು ಒಗ್ಗೂಡಿಸುವ ಭಾರತೀಯ ನೈತಿಕತೆ ಮತ್ತು ಆಳವಾದ ಸಾಂಸ್ಕೃತಿಕ ಸಂಬಂಧವನ್ನು ನಾವು ಪ್ರಶಂಸಿಸಬಹುದು. ಇದು ನಮ್ಮನ್ನು ಒಗ್ಗೂಡಿಸುವ ಭಾಷೆಯಾಗಿದೆ" ಎಂದು ಅವರು ಒತ್ತಿ ಹೇಳಿದರು.

ಶಾಸ್ತ್ರೀಯ ಭಾಷೆಗಳ ಸಂರಕ್ಷಣೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಂತಹ ಸಂಸ್ಥೆಗಳ ನಿರ್ಣಾಯಕ ಪಾತ್ರವನ್ನು ಶ್ಲಾಘಿಸಿದ ಅವರು, ವಿಶ್ವವಿದ್ಯಾಲಯಗಳು ಪ್ರಾಚೀನ ಪಠ್ಯಗಳ ಬಗ್ಗೆ ಸಕ್ರಿಯ ಸಂಶೋಧನೆಯಲ್ಲಿ ತೊಡಗಬೇಕು ಮತ್ತು ಸಂಶೋಧನಾ ಫಲಿತಾಂಶಗಳನ್ನು ಸಮಕಾಲೀನ ಜಗತ್ತಿಗೆ ಪ್ರಸ್ತುತವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು. ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲೆಯಾಳಂ ಮತ್ತು ಒಡಿಯಾ ಎಂಬ ಆರು ಶಾಸ್ತ್ರೀಯ ಭಾರತೀಯ ಭಾಷೆಗಳ ಶ್ರೀಮಂತ ಸಾಹಿತ್ಯವನ್ನು ಸಂರಕ್ಷಿಸುವ ಪ್ರಯತ್ನಗಳಿಗೆ ಶ್ರೀ ನಾಯ್ಡು ಕರೆ ನೀಡಿದರು.

ಕರ್ನಾಟಕವನ್ನು ಆದಿ ಶಂಕರರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ಬಸವೇಶ್ವರರಂತಹ ಮಹಾನ್ ಸಂತರು ಮತ್ತು ಚಿಂತಕರ ನಾಡು ಎಂದು ಬಣ್ಣಿಸಿದ ಶ್ರೀ ನಾಯ್ಡು, ರಾಜ್ಯವು ತನ್ನ ಪ್ರಾಚೀನ ಜ್ಞಾನ ಮತ್ತು ಜ್ಞಾನ ಸಂಪತ್ತನ್ನು ಸಂರಕ್ಷಿಸಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಯವರು ಮೂವರು ಪ್ರಸಿದ್ಧ ವಿದ್ವಾಂಸರುಗಳಾದ ಆಚಾರ್ಯ ಪ್ರದ್ಯುಮ್ನ, ಡಾ. ವಿ.ಎಸ್. ಇಂದಿರಮ್ಮ ಮತ್ತು ವಿದ್ವಾನ್ ಉಮಾಕಾಂತ ಭಟ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು.

ಕರ್ನಾಟಕದ ರಾಜ್ಯಪಾಲ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಕೆ.ಇ.ದೇವನಾಥನ್, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾಷಣದ ಪೂರ್ಣಪಠ್ಯ ಈ ಕೆಳಗಿನಂತಿದೆ:

"ಸಹೋದರ ಮತ್ತು ಸಹೋದರಿಯರೇ,

ಒಂಬತ್ತನೇ ಘಟಿಕೋತ್ಸವದ ಈ ಮಹತ್ವದ ಸಂದರ್ಭದಲ್ಲಿ ಯುವ ಪದವೀಧರರು, ಬೋಧಕವರ್ಗದ ಸದಸ್ಯರು ಮತ್ತು ಸಂಸ್ಕೃತ ವಿದ್ವಾಂಸರೊಂದಿಗೆ ಇಲ್ಲಿರಲು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮವು ಈ ಪ್ರಮುಖ ಕಲಿಕಾ ಪೀಠದ ದಶಮಾನೋತ್ಸವದ ಆಚರಣೆಯೊಂದಿಗೆ ಸಮ್ಮಿಲಿತವಾಗಿರುವುದು ನನಗೆ ಸಂತಸ ತಂದಿದೆ. ತಮ್ಮ ಶೈಕ್ಷಣಿಕ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ದಾಟಿದ್ದಕ್ಕಾಗಿ ನಾನು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಅನುಕೂಲಕರವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಿದ್ದಕ್ಕಾಗಿ ಉಪಕುಲಪತಿಗಳು ಮತ್ತು ಬೋಧಕ ಸದಸ್ಯರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಪ್ರೀತಿಯ ವಿದ್ಯಾರ್ಥಿಗಳೇ,

ಶಿಕ್ಷಣಕ್ಕೆ ಹೆಸರುವಾಸಿಯಾದ ರಾಜ್ಯದಲ್ಲಿರುವ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿರುವುದು ನಿಮ್ಮ ಅದೃಷ್ಟ.

ನೀವು ಕರ್ನಾಟಕದ ತಪೋಭೂಮಿಯಲ್ಲಿ ಶಿಕ್ಷಣ ಪಡೆದಿದ್ದೀರಿ. ಇದು ಮಾನವಕುಲಕ್ಕೆ ಉದಾತ್ತ ತತ್ತ್ವಚಿಂತನೆಗಳನ್ನು ನೀಡಿದ ಸಂತರು ಮತ್ತು ಚಿಂತಕರ ನಾಡು. ಇದು ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ಬಸವೇಶ್ವರರ ನಾಡು. ಜ್ಞಾನ ಮತ್ತು ಬುದ್ಧಿವಂತಿಕೆಯ ಪ್ರಾಚೀನ ಸಂಪತ್ತನ್ನು ಸಂರಕ್ಷಿಸಿದ ಭೂಮಿ ಇದು.

ಆದಿ ಶಂಕರರು ಶೃಂಗೇರಿಯಲ್ಲಿ ವಿದ್ಯಾ ಶಾರದಾ ಪೀಠವನ್ನು ಸ್ಥಾಪಿಸಿದರೆ, ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯನ್ನು ತಮ್ಮ ಬೋಧನೆಗಳ ಕೇಂದ್ರವಾಗಿ ಅನೇಕ ವರ್ಷಗಳ ಕಾಲ ಆರಿಸಿಕೊಂಡಿದ್ದರು ಮತ್ತು ಹೊಯ್ಸಳ ವಂಶದ ರಾಜ ವಿಷ್ಣುವರ್ಧನನಿಗೆ ಮಾರ್ಗದರ್ಶನ ನೀಡಿದರು ಇನ್ನು, ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ತಮ್ಮ ತತ್ತ್ವಶಾಸ್ತ್ರವನ್ನು ಪ್ರಚಾರ ಮಾಡಿದರು. ಶ್ರೀ ಬಸವೇಶ್ವರರು ಕರ್ನಾಟಕದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತು ಇತರರೊಂದಿಗೆ ತಮ್ಮ ಸಿದ್ಧಾಂತ ಬೋಧಿಸಿದರು. ಈ ಮಹಾನ್ ಪೀಳಿಗೆಯ ಹೆಮ್ಮೆಯ ವಾರಸುದಾರರಾಗಲು ನೀವು ಅದೃಷ್ಟಶಾಲಿಗಳಾಗಿದ್ದೀರಿ.

ಮೈಸೂರು ಮಹಾರಾಜರುಗಳಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಇತರರ ಆಶ್ರಯದಲ್ಲಿ ಕರ್ನಾಟಕವು ಶಾಸ್ತ್ರೀಯ ಮತ್ತು ಸಂಸ್ಕೃತ ಕಲಿಕೆಯಲ್ಲಿ ಹೊಸ ಆಯಾಮವನ್ನು ಕಂಡಿತು. ಮೈಸೂರನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ ಏಕೆಂದರೆ ಅದು ಪ್ರಸಿದ್ಧ ಕಲಿಕೆಯ ಕೇಂದ್ರವಾಗಿತ್ತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತ ಕಲಿಕೆಯ ಈ ಮಹಾನ್ ಪರಂಪರೆಯನ್ನು ಮುಂದುವರಿಸುತ್ತಿರುವುದು ಸಂತಸದ ಸಂಗತಿಯಾಗಿದೆ.

ಆತ್ಮೀಯ ಯುವ ಸ್ನೇಹಿತರೇ,

ಸಂಸ್ಕೃತವು ನಮ್ಮ ದೇಶದ ಅಮೂರ್ತ ಪರಂಪರೆಯಾಗಿದೆ. ಯುಗಯುಗಗಳಿಂದ, ಇದು ನಮ್ಮ ಜ್ಞಾನ ಮತ್ತು ಸಾಹಿತ್ಯಿಕ ಸಂಪ್ರದಾಯಗಳ ಬುಗ್ಗೆಯಾಗಿದೆ. ಯುನೆಸ್ಕೋ ಕೂಡ ಸಂಸ್ಕೃತದಲ್ಲಿನ ವೇದ ಪಠಣಗಳನ್ನು ಅಮೂರ್ತ ಪರಂಪರೆ ಎಂದು ಗುರುತಿಸಿದೆ.

ಸಂಸ್ಕೃತವು ಭಾರತದ ಆತ್ಮವನ್ನು ಅರ್ಥೈಸಿಕೊಳ್ಳಲು ನಮಗೆ ನೆರವಾಗುತ್ತದೆ. ಯಾರೇ ಭಾರತೀಯ ವಿಶ್ವ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯಬೇಕು. ಭಾರತೀಯ ಕವಿಗಳ ಸಾಹಿತ್ಯಿಕ ಪ್ರತಿಭೆಯನ್ನು ಮೆಚ್ಚಲೇಬೇಕಾದರೆ, ಸಂಸ್ಕೃತದ ಪರಿಚಯವಿರಬೇಕು. ನಮ್ಮ ಮಹಾನ್ ದೇಶದ ನಾಗರಿಕತೆಯ ಶ್ರೀಮಂತಿಕೆಯ ಬಗ್ಗೆ ಸಂಶೋಧನೆ ಮಾಡಬೇಕಾದರೆ, ಸಂಸ್ಕೃತದ ವಿದ್ಯಾರ್ಥಿಯಾಗಿರಬೇಕು.

ನಮ್ಮ ಹೆಚ್ಚಿನ ಧರ್ಮಗ್ರಂಥಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದ್ದು, ಸಂಸ್ಕೃತವನ್ನು "ದೇವ ಭಾಷೆ" ಎಂದು ಕರೆಯಲಾಗುತ್ತದೆ. ಆರಂಭದಲ್ಲಿ ಬೌದ್ಧ ಮತ್ತು ಜೈನ ಧರ್ಮಗ್ರಂಥಗಳನ್ನು ಪ್ರಾಕೃತದಲ್ಲಿ ಬರೆಯಲಾಗಿತ್ತಾದ್ದರೂ, ನಂತರದ ಶತಮಾನಗಳಲ್ಲಿ ಹೆಚ್ಚಿನ ಬೌದ್ಧ ಮತ್ತು ಜೈನ ವ್ಯಾಖ್ಯಾನಗಳು ಮತ್ತು ಸಾಹಿತ್ಯವನ್ನು ಸಂಸ್ಕೃತದಲ್ಲಿ ಬರೆಯಲಾಯಿತು. ಸಂಸ್ಕೃತದ ಬಳಕೆಯು ಆಧ್ಯಾತ್ಮಿಕ ಮತ್ತು ತಾತ್ವಿಕ ವಿಷಯಗಳು ಮತ್ತು ಪುರಾಣಗಳು ಮತ್ತು ಮಹಾಕಾವ್ಯಗಳಂತಹ ಧಾರ್ಮಿಕ ಗ್ರಂಥಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಆಯುರ್ವೇದ, ಯೋಗ, ಕೃಷಿ, ಲೋಹಶಾಸ್ತ್ರ, ಖಗೋಳಶಾಸ್ತ್ರ, ಕರಕುಶಲ ಮತ್ತು ನೀತಿಶಾಸ್ತ್ರದಂತಹ ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಸಂಸ್ಕೃತದಲ್ಲಿ ಹಲವಾರು ಗ್ರಂಥಗಳಿವೆ, ಅವು ಸಮಕಾಲೀನ ಪ್ರಸ್ತುತತೆಯನ್ನು ಹೊಂದಿವೆ. ಯುವ ಪದವೀಧರರಾದ ನೀವು ಈ ಜ್ಞಾನದ ಕ್ಷೇತ್ರಗಳನ್ನು ಅನ್ವೇಷಿಸಬೇಕು ಮತ್ತು ನಮ್ಮ ಪ್ರಾಚೀನ ಪಠ್ಯಗಳಲ್ಲಿನ ಹೊಸ ಮುಖಗಳನ್ನು ಅನ್ವೇಷಿಸಲು ನೀವು ಖಂಡಿತವಾಗಿಯೂ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲಿದ್ದೀರಿ ಎಂದು ವಿಶ್ವಾಸ ನನಗಿದೆ.

ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ,

ಭಾಷೆ ವಿಚಾರ, ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿಗೆ ಒಂದು ಸಾಧನವಾಗಿದೆ. ಇದು ಸಮುದಾಯದ ಸಾಮೂಹಿಕ ಅನುಭವ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಗೆ ಆಕಾರ ನೀಡುವ ಧ್ವನಿಯಾಗಿದೆ.

ಸಂಸ್ಕೃತದಲ್ಲಿ ಅಸಾಧಾರಣ ಸೃಜನಶೀಲ ಕೃತಿಗಳನ್ನು ಬರೆಯಲಾಗಿರುವ ಕಾರಣ, ಒಂದು ಪ್ರಮುಖ ಭಾಷೆಯಾಗಿದೆ.

ನಾವು ಈ ಭಾಷಾ ಸಂಪತ್ತನ್ನು ಸಂರಕ್ಷಿಸಬೇಕು. ಅಂತಹ ಶ್ರೀಮಂತ ಇತಿಹಾಸವು ನಮ್ಮ ಅನ್ವೇಷಣೆಗಾಗಿ ಕಾಯುತ್ತಿದೆ.

ನಮ್ಮದು ಬಹು ಭಾಷೆಗಳನ್ನು ಹೊಂದಿರುವ ದೇಶವಾಗಿದ್ದು, ಪ್ರತಿಯೊಂದೂ ವಿಶಿಷ್ಟವಾದ ಶ್ರೀಮಂತಿಕೆಯನ್ನು ಹೊಂದಿದೆ.

ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಈ ಶ್ರೀಮಂತ ಭಾಷಾ ವೈವಿಧ್ಯತೆಯನ್ನು ಹೊಂದಲು ನಾವು ಅದೃಷ್ಟಶಾಲಿಗಳು. ಪ್ರತಿಯೊಂದು ಭಾಷೆಯೂ ತನ್ನದೇ ಆದ ವಿಶಿಷ್ಟ ರಚನೆ ಮತ್ತು ಸಾಹಿತ್ಯಿಕ ಸಂಪ್ರದಾಯವನ್ನು ಹೊಂದಿದೆ. ನಮ್ಮ ಪ್ರಾಚೀನ ಭಾಷೆಗಳು ಮತ್ತು ಅವುಗಳ ಸಾಹಿತ್ಯವು ಭಾರತಕ್ಕೆ "ವಿಶ್ವ ಗುರು" ಎಂಬ ಪ್ರತಿಷ್ಠಿತ ಸ್ಥಾನಮಾನವನ್ನು ಪಡೆಯಲು ಅಪಾರ ಕೊಡುಗೆ ನೀಡಿದೆ. ಹೆಚ್ಚಿನ ಭಾರತೀಯ ಭಾಷೆಗಳ ಉಗಮಕ್ಕೆ ಕಾರಣವಾದ ಶಾಸ್ತ್ರೀಯ ಭಾಷೆ ಸಂಸ್ಕೃತವು ನಮ್ಮ ಸಾಂಸ್ಕೃತಿಕ ಭೂರಮೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾವು ಸಂಸ್ಕೃತವನ್ನು ಕಲಿತರೆ ಭಾರತೀಯ ನೈತಿಕತೆ ಮತ್ತು ಎಲ್ಲಾ ಭಾರತೀಯರನ್ನು ಒಗ್ಗೂಡಿಸುವ ಆಳವಾದ ಸಾಂಸ್ಕೃತಿಕ ನಂಟನ್ನು ಪ್ರಶಂಸಿಸಬಹುದು. ಅದು ನಮ್ಮನ್ನು ಒಗ್ಗೂಡಿಸುವ ಭಾಷೆಯಾಗಿದೆ.

ನಮ್ಮ ಸಂವಿಧಾನವು ಸಂಸ್ಕೃತ ಸೇರಿದಂತೆ 22 ಭಾರತೀಯ ಭಾಷೆಗಳಿಗೆ ಮನ್ನಣೆ ನೀಡಿದೆ. ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲೆಯಾಳಂ ಮತ್ತು ಒಡಿಯಾ ಎಂಬ 6 ಶಾಸ್ತ್ರೀಯ ಭಾರತೀಯ ಭಾಷೆಗಳನ್ನು ಅವುಗಳ ಶಾಸ್ತ್ರೀಯ ಸಾಹಿತ್ಯವನ್ನು ಸಂರಕ್ಷಿಸುವ ವಿಶೇಷ ಪ್ರಯತ್ನಗಳಿಗಾಗಿ ನಾವು ಗುರುತಿಸಿದ್ದೇವೆ. ನಾವು ಸಂಸ್ಕೃತ ಮತ್ತು ನಮ್ಮ ಇತರ ಶಾಸ್ತ್ರೀಯ ಭಾಷೆಗಳನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವುದು ಅತ್ಯಗತ್ಯವಾಗಿದೆ.

ಒಂದು ಭಾಷೆಯನ್ನು ಕೇವಲ ಸಾಂವಿಧಾನಿಕ ನಿಬಂಧನೆಗಳು ಅಥವಾ ಸರ್ಕಾರದ ನೆರವು ಅಥವಾ ರಕ್ಷಣೆಯಿಂದ ಮಾತ್ರ ಸಂರಕ್ಷಿಸಲು ಸಾಧ್ಯವಿಲ್ಲ.

ಒಂದು ಭಾಷೆಯು ಕುಟುಂಬಗಳು, ಸಮುದಾಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಮೌಲ್ಯಯುತವಾಗಿದ್ದರೆ ಅದು ಜೀವಂತವಾಗಿರುತ್ತದೆ ಮತ್ತು ಪ್ರಚುರವಾಗುತ್ತದೆ. ಈ ಭಾಷೆಯಲ್ಲಿ ಪ್ರಸಾರವಾದ ಸಾಂಸ್ಕೃತಿಕ ಪರಂಪರೆಯನ್ನು ರಾಷ್ಟ್ರವು ಗೌರವಿಸಿದರೆ ಅದು ಪುನಶ್ಚೇತನಗೊಳ್ಳುತ್ತದೆ. ಶಿಕ್ಷಣ ಸಂಸ್ಥೆಗಳು ಬಲವಾದ ಸಂಶೋಧನಾ ನೆಲೆಯನ್ನು ನಿರ್ಮಿಸಿದರೆ ಮತ್ತು ಪ್ರಾಚೀನ ಪಠ್ಯಗಳ ಮೇಲೆ ಸಕ್ರಿಯ ಸಂಶೋಧನೆಯಲ್ಲಿ ತೊಡಗಿದರೆ ಮತ್ತು ಸಂಶೋಧನಾ ಫಲಿತಾಂಶಗಳನ್ನು ಸಮಕಾಲೀನ ಜಗತ್ತಿಗೆ ಪ್ರಸ್ತುತಗೊಳಿಸಿದರೆ ಅದು ಸಂರಕ್ಷಿತವಾಗುತ್ತದೆ.

ನಾವು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದೇವೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ, ಪ್ರತಿಯೊಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾಗ, ಸಂವಹನ ಕ್ರಾಂತಿಯ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ನಮ್ಮ ಬಿಡುವಿನ ವೇಳೆಯಲ್ಲಿ ಆನ್ ಲೈನ್ ನಲ್ಲಿ ಸಂಸ್ಕೃತದಂತಹ ಹೊಸ ಭಾಷೆಗಳನ್ನು ಕಲಿಯಲು ಇದೇ ತಂತ್ರಜ್ಞಾನವು ನಮಗೆ ಸಹಾಯ ಮಾಡುತ್ತದೆ.

ತಂತ್ರಜ್ಞಾನವು ಸಂಸ್ಕೃತವನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಹೊಸ ಅವಕಾಶಗಳನ್ನು ತೆರೆಯುತ್ತದೆ. ಪ್ರಾಚೀನ ಹಸ್ತಪ್ರತಿಗಳು, ಶಿಲಾಲೇಖಗಳು ಮತ್ತು ಶಾಸನಗಳ ಡಿಜಿಟಲೀಕರಣ, ವೇದಗಳ ಪಠಣದ ಧ್ವನಿಮುದ್ರಣ, ಪ್ರಾಚೀನ ಸಂಸ್ಕೃತ ಗ್ರಂಥಗಳ ಅರ್ಥ ಮತ್ತು ಮಹತ್ವವನ್ನು ಬಹಿರಂಗಪಡುವ ಪುಸ್ತಕಗಳ ಪ್ರಕಟಣೆ, ಸಂಸ್ಕೃತ ಪಠ್ಯಗಳಲ್ಲಿ ಹುದುಗಿರುವ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲವು ಮಾರ್ಗಗಳಾಗಿವೆ. ನಾವು ಸಂಸ್ಕೃತ ಕಲಿಕೆಯನ್ನು ಪುನಶ್ಚೇತನಗೊಳಿಸುವ ಒಂದು ಜನಾಂದೋಲನವನ್ನಾಗಿ ಮಾಡಬೇಕು, ಅಲ್ಲಿ ಎಲ್ಲಾ ಬಾಧ್ಯಸ್ಥರು ಭಾರತದ ಶ್ರೀಮಂತ ಶಾಸ್ತ್ರೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಮರು-ಆವಿಷ್ಕಾರಕ್ಕೆ ಕೊಡುಗೆ ನೀಡಬೇಕು.

ಈ ಪ್ರಯತ್ನದಲ್ಲಿ ನಿಮ್ಮಂತಹ ವಿಶ್ವವಿದ್ಯಾಲಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಜ್ಞಾನಾರ್ಜನೆಯ ಸಾಂಪ್ರದಾಯಿಕ ವಿಧಾನಗಳೊಂದಿಗೆ ನೀವು ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ನೀವು ಪ್ರಾಚೀನ ಪಠ್ಯಗಳಿಂದ ಸಾರವನ್ನು ಸೆಳೆಯಲು ಪ್ರಯತ್ನಿಸಬೇಕು ಮತ್ತು ಅದನ್ನು ಸಾಧ್ಯವಾದಷ್ಟು ಜನರಿಗೆ ಸುಲಭವಾಗಿ ತಲುಪುವಂತೆ ಮಾಡಬೇಕು. 'ಸ್ವಾಧ್ಯಾಯ' ಮತ್ತು 'ಪ್ರವಚನ' ಹೆಚ್ಚು ಸಮರ್ಪಣೆಯಿಂದ ಮುಂದುವರಿಯಬೇಕು.

ದಶಮಾನೋತ್ಸವದ ಸಂದರ್ಭದಲ್ಲಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಮೂವರು ಪ್ರಸಿದ್ಧ ವಿದ್ವಾಂಸರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವುದು ನನಗೆ ಸಂತಸ ತಂದಿದೆ. ಈ ಗೌರವಕ್ಕೆ ಪಾತ್ರರಾದ ಆಚಾರ್ಯ ಪ್ರದ್ಯುಮ್ನ, ಡಾ. ವಿ.ಎಸ್. ಇಂದಿರಮ್ಮ ಮತ್ತು ವಿದ್ವಾನ್ ಉಮಾಕಾಂತ ಭಟ್ ಅವರನ್ನು ನಾನು ಅಭಿನಂದಿಸುತ್ತೇನೆ. ತಮ್ಮ ವಿದ್ಯಾರ್ಥಿವೇತನವನ್ನು ಗೌರವಿಸಿದ್ದಕ್ಕಾಗಿ ವಿಶ್ವವಿದ್ಯಾಲಯವನ್ನು ಅಭಿನಂದಿಸುತ್ತೇನೆ. ಇಂದು ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು, ಅವರ ಆಚಾರ್ಯರು ಮತ್ತು ಅವರ ಪೋಷಕರು ಅವರ ಶೈಕ್ಷಣಿಕ ಸಾಧನೆಗಳಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ಭವಿಷ್ಯದ ಪ್ರಯತ್ನಗಳಲ್ಲಿ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.

ಜಯತು ಸಂಸ್ಕೃತಂ, ಜಯತು ಭಾರತಂ

ಜೈಹಿಂದ್ 

*******


(Release ID: 1840458) Visitor Counter : 397


Read this release in: English , Urdu , Hindi , Tamil