ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಐಐಟಿ ಹೈದರಾಬಾದ್‌ಗೆ ಭೇಟಿ ನೀಡಿ ಸಂಶೋಧನೆ, ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಬಲಪಡಿಸುವ ಹಲವಾರು ಸೌಲಭ್ಯಗಳನ್ನು ಉದ್ಘಾಟಿಸಿದರು.


ಜಾಗತಿಕವಾಗಿ ʻಬ್ರಾಂಡ್ ಇಂಡಿಯಾʼವನ್ನು ನಿರ್ಮಿಸುವಲ್ಲಿ ಐಐಟಿ ಹೈದರಾಬಾದ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ ಶ್ರೀ ಧರ್ಮೇಂದ್ರ ಪ್ರಧಾನ್, ʻಐಆರ್ 4.0ʼ ಮತ್ತು 21ನೇ ಶತಮಾನದ ಉದ್ಯೋಗ ಮಾರುಕಟ್ಟೆಯನ್ನು ಬಳಸಿಕೊಳ್ಳಲು ವಿಶ್ವದರ್ಜೆಯ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ʻಐಐಟಿಎಚ್‌ʼಗೆ ಕರೆ ನೀಡಿದರು.

Posted On: 02 JUL 2022 4:31PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಅತ್ಯಾಧುನಿಕ ಸೌಲಭ್ಯಗಳನ್ನು ಉದ್ಘಾಟಿಸಿದರು. ʻಬಿವಿಆರ್‌ಎಸ್‌ಸಿಐಎನ್ʼ(BVRSCIENT)ಗೆ ಶಂಕುಸ್ಥಾಪನೆ ನೆರವೇರಿಸಿದರು ಹಾಗೂ ಐಐಟಿ ಹೈದರಾಬಾದ್‌ನಲ್ಲಿ ಮೊಟ್ಟಮೊದಲ ಬಾರಿಗೆ ʻಗ್ರೀನ್ಕೊ ಸ್ಕೂಲ್ ಆಫ್ ಸಸ್ಟೈನಬಲ್ ಸೈನ್ಸ್ ಅಂಡ್ ಟೆಕ್ನಾಲಜಿʼಯ ಮಹತ್ವಾಕಾಂಕ್ಷೆಯ ಒಡಂಬಡಿಕೆಗೆ ಸಾಕ್ಷಿಯಾದರು.

ಜಪಾನ್‌ನ ಪ್ರತಿನಿಧಿಗಳು, ʻಬಿ.ಒ.ಜಿʼ ಅಧ್ಯಕ್ಷ ಡಾ.ಬಿ.ವಿ.ಆರ್.ಮೋಹನ್ ರೆಡ್ಡಿ; ʻಜಿಐಸಿಎʼದ ಮುಖ್ಯ ಪ್ರತಿನಿಧಿ ಶ್ರೀ ಸೈಟೋ ಮಿಟ್ಸುನೋರಿ, ʻಗ್ರೀನ್ಕೋ ಗ್ರೂಪ್‌ʼನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅನಿಲ್ ಕುಮಾರ್ ಚಲಮಲಶೆಟ್ಟಿ; ʻಗ್ರೀನ್‌ಕೋʼದ ಸ್ವತಂತ್ರ ನಿರ್ದೇಶಕ ಮತ್ತು ಗ್ರೀನ್ಕೊದ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಶ್ರೀ ಒ.ಪಿ.ಭಟ್; ನಿರ್ದೇಶಕ ಪ್ರೊ.ಬಿ.ಎಸ್.ಮೂರ್ತಿ, ಡೀನ್‌ಗಳು, ಎಚ್ಒಡಿಗಳು, ಬೋಧಕರು, ಸಿಬ್ಬಂದಿ ಮತ್ತು ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 

2022-07-02 16:22:13.7170002022-07-02 16:22:13.7830002022-07-02 16:22:13.8430002022-07-02 16:22:13.881000

 

ಇಂದು ಉದ್ಘಾಟನೆಗೊಂಡ ಮೂಲಸೌಕರ್ಯವು, ಭಾರತ-ಜಪಾನ್‌ ಸಹಯೋಗದ ಅಡಿಯಲ್ಲಿ ʻಜೆಐಸಿಎʼ ಮೂಲಕ ಕ್ಯಾಂಪಸ್ ಅಭಿವೃದ್ಧಿ ಯೋಜನೆಯ ಒಂದು ಭಾಗವಾಗಿದೆ. ಈ ಸಂದರ್ಭದಲ್ಲಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ(ಇಎಫ್‌ಎಲ್‌ಯು)ಜೊತೆ ಒಡಂಬಡಿಕೆಗೂ ʻಐಐಟಿಎಚ್ʼ ಸಹಿ ಹಾಕಿದೆ. ʻಐಐಐಎಚ್ʼನಲ್ಲಿ ವಿವಿಧ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಮುಗಿಸುವ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳನ್ನು ಪರಿಚಯಿಸಿ, ಅವರನ್ನು ಜಾಗತಿಕ ಮಟ್ಟದ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ. ಪ್ರಮುಖ ಜಾಗತಿಕ ಶೈಕ್ಷಣಿಕ ಮತ್ತು ಕೈಗಾರಿಕಾ ಪಾಲುದಾರರ ಮೂಲಕ ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುವುದು.

 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್ ಅವರು, ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಐಐಟಿ ಹೈದರಾಬಾದ್ ಜಾಗತಿಕವಾಗಿ ʻಬ್ರಾಂಡ್ ಇಂಡಿಯಾʼವನ್ನು ನಿರ್ಮಿಸುವಲ್ಲಿ ಮತ್ತು ವಿಶೇಷವಾಗಿ ಸ್ವಾತಂತ್ರ್ಯದ ಅಮೃತ ಕಾಲದ ಸಮಯದಲ್ಲಿ ಉತ್ತಮ ಮತ್ತು ಸಮೃದ್ಧ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಕನಸನ್ನು ನಾವು ಈಡೇರಿಸಬೇಕಾಗಿದೆ ಎಂದು ಅವರು ಹೇಳಿದರು.

 

ಭಾರತವು ಕೇವಲ ಅನುಭೋಗಿ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು. ಸ್ವಾವಲಂಬನೆ ಸಾಧಿಸಲು ಮತ್ತು ಜಾಗತಿಕ ಕಲ್ಯಾಣವನ್ನು ಮುಂದುವರಿಸಲು ನಾವು ನಮ್ಮದೇ ಆದ ಮಾದರಿಗಳನ್ನು ಆವಿಷ್ಕರಿಸಬೇಕು ಮತ್ತು ಸ್ಥಾಪಿಸಬೇಕು. ಸಾಮಾಜಿಕ ಅಗತ್ಯಗಳನ್ನು ಪೂರೈಸಲು ಮತ್ತು ಕೈಗೆಟುಕುವ ಜಾಗತಿಕ ಪರಿಹಾರಗಳನ್ನು ಒದಗಿಸಲು ಐಐಟಿ ಹೈದರಾಬಾದ್ ತನ್ನ ಪಾತ್ರವನ್ನು ಮರುವ್ಯಾಖ್ಯಾನಿಸಬೇಕು ಎಂದು ಅವರು ಒತ್ತಾಯಿಸಿದರು.

 

ವಿಶ್ವದ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿರಿಸಲು ನೂತನ ಶಿಕ್ಷಣ ನೀತಿಯು (ಎನ್ಇಪಿ-2020) ಹೊಸ ಮಾರ್ಗಸೂಚಿಯಾಗಿದೆ ಎಂದು ಸಚಿವರು ಹೇಳಿದರು. ಐಐಟಿ ಹೈದರಾಬಾದ್ ಸಂಸ್ಥೆಯು ಅಂಚಿನಲ್ಲಿರುವ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಒದಗಿಸಲು ಪ್ರಯತ್ನಿಸಬೇಕು, ಧೈರ್ಯಶಾಲಿ ಮನಸ್ಥಿತಿಯನ್ನು ಪ್ರೋತ್ಸಾಹಿಸಬೇಕು, ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗ ಸೃಷ್ಟಿಕರ್ತರಾಗಿ ಪರಿವರ್ತಿಸಲು ಹಾಗೂ ಉತ್ಕೃಷ್ಟತೆಯ ಹೊಸ ಮಾನದಂಡಗಳನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.

 

ಕೌಶಲ್ಯ ಎಂಬುದು ಜೀವಮಾನದ ಪ್ರಕ್ರಿಯೆಯಾಗಿದೆ. ಹಾಗಾಗಿಯೇ, ʻಎನ್ಇಪಿ-2020ʼ ಕೌಶಲ್ಯ ಅಭಿವೃದ್ಧಿಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸಲು ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ʻಐಆರ್ 4.0ʼ ಮತ್ತು 21ನೇ ಶತಮಾನದ ಉದ್ಯೋಗ ಮಾರುಕಟ್ಟೆಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ʻಐಐಟಿಎಚ್ʼನಲ್ಲಿ ವಿಶ್ವದರ್ಜೆಯ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಂತೆ ಐಐಟಿ ಹೈದರಾಬಾದ್ ಮತ್ತು ಉದ್ಯಮದ ತಜ್ಞರಿಗೆ ಅವರು ಸಲಹೆ ನೀಡಿದರು. ಸಂಶೋಧನೆ ಮತ್ತು ನಾವಿನ್ಯತೆಗೆ ಒತ್ತು ನೀಡುವ ಮೂಲಕ ಉದಯೋನ್ಮುಖ ಹಾಗೂ ಜಾಗತಿಕ ಆರ್ಥಿಕತೆಗಳಿಗೆ ʻಐಐಟಿಎಚ್ʼ ಮಾದರಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಉದಾರವಾಗಿ ದೇಣಿಗೆ ನೀಡಿದ್ದಕ್ಕಾಗಿ, ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕಾಗಿ ಹಾಗೂ ʻಐಐಟಿಎಚ್ʼನಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಬಲಪಡಿಸಲು ಹಾಗೂ ಆವಿಷ್ಕಾರ ಮತ್ತು ಉದ್ಯಮಶೀಲತೆಯಲ್ಲಿ ಸಂಸ್ಥೆ ಮುಂಚೂಣಿಯಲ್ಲಿರಲು ಬೆಂಬಲಿಸಿದ್ದಕ್ಕಾಗಿ ʻಸೈಯಂಟ್ʼನ ಶ್ರೀ ಬಿವಿಆರ್ ಮೋಹನ್ ರೆಡ್ಡಿ ಹಾಗು ʻಗ್ರೀನ್ಕೊʼದ ಶ್ರೀ ಅನಿಲ್ ಚಲಮಶೆಟ್ಟಿ ಅವರಿಗೆ ಸಚಿವರು ಧನ್ಯವಾದ ಅರ್ಪಿಸಿದರು.

 

ಡಾ. ಬಿ.ವಿ.ಆರ್. ಮೋಹನ್ ರೆಡ್ಡಿ ಅವರು ಮಾತನಾಡಿ, “ಉದ್ಯಮಶೀಲತೆ ಮತ್ತು ಹವಾಮಾನ ಬದಲಾವಣೆ ಎರಡೂ ಶಿಕ್ಷಣ ಸಚಿವರಿಗೆ ಪ್ರಿಯವಾದ ವಿಷಯಗಳಾಗಿವೆ. ಇಂದು ಈ ಸಂದರ್ಭದಲ್ಲಿ ಅವರು ಉಪಸ್ಥಿತರಿರುವುದು ಸಂತೋಷ ತಂದಿದೆ,ʼʼಎಂದು ಹೇಳಿದರು. ʻಎನ್ಇಪಿ-2020ʼ ಅನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯ ಕೈಗೊಂಡಿರುವ ಕ್ರಮಗಳನ್ನು ಅವರು ಶ್ಲಾಘಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ʻಆತ್ಮ ನಿರ್ಭರ ಭಾರತʼದ ಕನಸನ್ನು ನನಸು ಮಾಡಲು ʻಐಐಟಿಎಚ್ʼನಲ್ಲಿ ವಿಶ್ವದರ್ಜೆಯ ಸೌಲಭ್ಯಗಳು ಸಹಾಯ ಮಾಡಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

 

ಈ ಸಂದರ್ಭದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರೊ. ಬಿ.ಎಸ್.ಮೂರ್ತಿ, ಇಂದು ನಾವು ʻಐಐಟಿಎಚ್ʼನ ಅನನ್ಯತೆಗೆ ಸಾಕ್ಷಿಯಾಗುತ್ತಿದ್ದೇವೆ. ʻನಾವಿನ್ಯತೆಯ ಪಾರ್ಕ್ʼನಿಂದ ಹಿಡಿದು, ಸಂಶೋಧನಾ ಕೇಂದ್ರ, ಮುಂಬರುವ ಆವಿಷ್ಕಾರ ಮತ್ತು ಉದ್ಯಮಶೀಲ ಕುರಿತ ಶಿಕ್ಷಣ ಸಂಸ್ಥೆಗಳು ಹಾಗೂ  ಸುಸ್ಥಿರ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಶಿಕ್ಷಣ ಸಂಸ್ಥೆಗಳಿಗೆ ಅಡಿಪಾಯದವರೆಗೆ ಹತ್ತು ಹಲವು ಇಂತಹ ಅನನತ್ಯೆಯ ಭಾಗವಾಗಿವೆ. ನಾವೀನ್ಯತೆ ಕ್ಷೇತ್ರದಲ್ಲಿ ʻಐಐಐಎಚ್ʼ ತನ್ನ ಅತ್ಯುತ್ತಮ ಸಾಧನೆಯನ್ನು ಖಾತರಿಪಡಿಸಿಕೊಳ್ಳಲು ಸಚಿವಾಲಯದಿಂದ ನಿರಂತರ ಮಾರ್ಗದರ್ಶನ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯಾಂಶಗಳ ಬಗ್ಗೆ ಸಂಕ್ಷಿಪ್ತ ವಿವರಣೆ:

1. ʻಗ್ರೀನ್ಕೋ ಸ್ಕೂಲ್ ಆಫ್ ಸಸ್ಟೈನಬಲ್ ಸೈನ್ಸ್ ಅಂಡ್ ಟೆಕ್ನಾಲಜಿʼ (ಜಿಎಸ್ಎಸ್ಎಸ್‌ಟಿ) ಸ್ಥಾಪನೆಗಾಗಿ ಐಐಟಿಎಚ್ ಮತ್ತು ಗ್ರೀನ್ಕೊ ನಡುವೆ ಒಡಂಬಡಿಕೆಗೆ ಅಂಕಿತ.

ಸುಸ್ಥಿರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಭಾರತದ ಮೊದಲ ವಿಶೇಷ ಶಾಲೆಯನ್ನು ಪ್ರಾರಂಭಿಸಲು ಭಾರತದ ಪ್ರಮುಖ ಇಂಧನ ಪರಿವರ್ತನೆ ಮತ್ತು ಕೈಗಾರಿಕಾ ಮಾಲಿನ್ಯ ತಡೆ ಸಂಸ್ಥೆ ʻಗ್ರೀನ್ಕೊʼ ಮತ್ತು ʻಐಐಟಿ ಹೈದರಾಬಾದ್ʼ ಒಡಂಬಡಿಕೆಗೆ ಸಹಿ ಹಾಕಿದವು. ಸುಸ್ಥಿರ ಅಭಿವೃದ್ಧಿಯ ಅನಿವಾರ್ಯತೆಗಳಿಂದಾಗಿ ಹೆಚ್ಚುತ್ತಿರುವ ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯಗಳ ಅಂತರವನ್ನು ಸರಿದೂಗಿಸುವ ಗುರಿಯನ್ನು ʻಗ್ರೀನ್ಕೊ ಸ್ಕೂಲ್ ಆಫ್ ಸಸ್ಟೈನಬಲ್ ಸೈನ್ಸ್ ಅಂಡ್ ಟೆಕ್ನಾಲಜಿʼ(ಜಿಎಸ್ಎಸ್ಎಸ್‌ಟಿ) ಹೊಂದಿದೆ. ಶಾಲೆಯು ಈ ಕೆಳಕಂಡ ಪ್ರಮುಖ ವಿಷಯಗಳಲ್ಲಿ ಜ್ಞಾನ ಭಂಡಾರವನ್ನು ವೃದ್ಧಿಸಲಿದೆ:

• ಹವಾಮಾನ ಬದಲಾವಣೆ ತಗ್ಗಿಸುವುದು

• ಎಐ ಮತ್ತು ಬಾಹ್ಯಾಕಾಶ ತಂತ್ರಜ್ಞಾನ

• ಇಂಧನ ಪರಿವರ್ತನೆ ಮತ್ತು ಕೈಗಾರಿಕಾ ಪರಿವರ್ತನೆ

• ವರ್ತುಲ ಮತ್ತು ಪುನರುತ್ಪಾದಕ ಆರ್ಥಿಕತೆ

• ʻZeroCʼ ಪ್ರಕ್ರಿಯೆಗಳು, ಇಂಧನಗಳು, ಪದಾರ್ಥಗಳು ಮತ್ತು ಉತ್ಪನ್ನಗಳು

• ಕೈಗಾರಿಕಾ ಪರಿಸರ ವಿಜ್ಞಾನ ಮತ್ತು ನಿವ್ವಳ ಶೂನ್ಯ ಕ್ಲಸ್ಟರ್‌ಗಳು

ಈ ವರ್ಷದ ಕೊನೆಯಲ್ಲಿ ʻಜಿಎಸ್ಎಸ್ಎಸ್‌ಟಿʼ ಆರಂಭವಾಗಲಿದೆ ಮತ್ತು ಜೂನ್ 2023ರ ವೇಳೆಗೆ, ಸುಸ್ಥಿರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಂಟೆಕ್ ಮತ್ತು ಪಿಎಚ್‌.ಡಿ  ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಿದೆ. ನಂತರ ʻಬಿ.ಟೆಕ್ʼ ಕಾರ್ಯಕ್ರಮಗಳು ಆರಂಭವಾಗಲಿವೆ. ʻಜಿಎಸ್ಎಸ್ಎಸ್‌ಟಿʼಯಲ್ಲಿ ಪಡೆದ ಅನುಭವವನ್ನು ಇತರ ಐಐಟಿಗಳು, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಬಳಿಕ ಪಾಲಿಟೆಕ್ನಿಕ್‌ಗಳು ಮತ್ತು ಶಾಲೆಗಳಲ್ಲಿ ಪುನರಾವರ್ತಿಸಲಾಗುವುದು. ಈ ಸಂಶೋಧನೆ ಮತ್ತು ಅಭಿವೃದ್ಧಿಗೆ ವೇಗ ನೀಡಲು, ಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ಕೌಶಲ್ಯಗಳನ್ನು ಸಂದರ್ಭೋಚಿತಗೊಳಿಸಲು ʻಗ್ರೀನ್ಕೊʼ ಮುಂದಾಗಿದೆ. ಐಐಟಿಎಚ್‌ ಜತೆಗಿನ ಈ ಜಂಟಿ ಉಪಕ್ರಮವು ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅನುಮೋದನೆಯನ್ನು ಸೂಚಿಸುತ್ತದೆ. ಸುಸ್ಥಿರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕಲಿಕೆಯ ಮುಂದುವರಿಕೆ ಮತ್ತು ಮುನ್ನಡೆಯನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯ, ಎಐಸಿಟಿಇ, ಎನ್‌ಸಿಇಆರ್‌ಟಿ ಮತ್ತು ʻಎನ್‌ಸಿವಿಇಟಿ ಜೊತೆ ಸಮಾಲೋಚನೆಯಲ್ಲಿ ಗ್ರೀನ್ಕೊ ಕೆಲಸ ಮಾಡುತ್ತದೆ. 

 2. ʻಬಿವಿಆರ್ ಮೋಹನ್ ರೆಡ್ಡಿ ಆವಿಷ್ಕಾರ ಮತ್ತು ಉದ್ಯಮಶೀಲತೆ ಶಾಲೆಗೆ ಶಂಕುಸ್ಥಾಪನೆ ಸಮಾರಂಭ:

ಈ ಶಾಲೆಯು ಐಐಟಿ ಹೈದರಾಬಾದ್ (ಐಐಟಿಎಚ್) ಸಹಯೋಗದೊಂದಿಗೆ ʻಸೈಯಂಟ್ ಪ್ರತಿಷ್ಠಾನʼ (ಸಿಯೆಂಟ್ ಲಿಮಿಟೆಡ್ನ ಸಿಎಸ್ಆರ್ ವಿಭಾಗ) ಮತ್ತು ʻಶಿಬೋಧಿ ಪ್ರತಿಷ್ಠಾನʼದ (ಡಾ. ಬಿವಿಆರ್ ಮೋಹನ್ ರೆಡ್ಡಿ ಅವರ ಕುಟುಂಬ ಪ್ರತಿಷ್ಠಾನ) ಇಂತಹ ಮೊದಲ ಉಪಕ್ರಮವಾಗಿದೆ. ʻಆತ್ಮ ನಿರ್ಭರ ಭಾರತʼವಾಗುವ ದೇಶದ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ ಭಾರತದಿಂದ ವಿಶ್ವದರ್ಜೆಯ ನಾವಿನ್ಯತೆ ಮತ್ತು ಉದ್ಯಮಶೀಲ ಪ್ರತಿಭೆಗಳನ್ನು ಪೋಷಿಸುವುದು ಮತ್ತು ಅಭಿವೃದ್ಧಿಪಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಈ ಶಾಲೆಯು ಪದವಿ, ಸ್ನಾತಕೋತ್ತರ, ಎಕ್ಸಿಕ್ಯೂಟಿವ್ ಎಜುಕೇಷನ್, ಪಿಎಚ್‌.ಡಿ ಕಾರ್ಯಕ್ರಮಗಳು ಮತ್ತು ʻಎನ್ಇಪಿ-2020ʼಕ್ಕೆ ಅನುಗುಣವಾಗಿ ಸರ್ಟಿಫಿಕೇಶನ್ ಕೋರ್ಸ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ತಂತ್ರಜ್ಞಾನ-ಉದ್ಯಮಶೀಲತೆಯ ಪ್ರಯತ್ನಗಳನ್ನು ಪೋಷಿಸಲು ಉತ್ತಮ ದರ್ಜೆಯ ಶೈಕ್ಷಣಿಕ ತರಬೇತಿಯನ್ನು ಒದಗಿಸುತ್ತದೆ ಮತ್ತು ಸಕ್ರಿಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. 

 

3. ಟೆಕ್ನಾಲಜಿ ಇನ್ನೋವೇಶನ್ ಪಾರ್ಕ್ (ಟಿಐಪಿ) ಉದ್ಘಾಟನೆ:

ಒಟ್ಟು 14313 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಟಿಐಪಿ ಕಟ್ಟಡವು, ʻಜಿ+5ʼ ರಚನೆಯೊಂದಿಗೆ 11 ಬ್ಲಾಕ್‌ಗಳನ್ನು ಒಳಗೊಂಡಿದೆ. ʻಐಐಟಿಎಚ್‌ʼನಲ್ಲಿ ಇನ್ಕ್ಯುಬೇಶನ್ ಚಟುವಟಿಕೆಯನ್ನು ಬೆಂಬಲಿಸಲು ಇದು ಸಿದ್ಧವಾಗಿದೆ. ʻಮಾನವೀಯತೆಗಾಗಿ ಆವಿಷ್ಕಾರ ಮತ್ತು ನಾವಿನ್ಯತೆʼ ಎಂಬುದು ಐಐಟಿ ಹೈದರಾಬಾದ್‌ನ ಧ್ಯೇಯವಾಕ್ಯವಾಗಿದೆ. ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಕಾರ್ಯಸಾಧ್ಯವಾದ ತಾಂತ್ರಿಕ ಹಾಗೂ ವ್ಯಾಪಾರ ಉದ್ಯಮಗಳಾಗಿ ಪರಿವರ್ತಿಸುವ ಗುರಿಯನ್ನು ʻಐಐಟಿಎಚ್ʼನ ಇನ್‌ಕ್ಯುಬೇಶನ್ ಪರಿಸರ ವ್ಯವಸ್ಥೆಯು ಹೊಂದಿದೆ. ʻಟಿಐಪಿʼ ಸ್ಥಾಪನೆಯು ʻಐಐಟಿಎಚ್ʼನ ʻಇನ್‌ಕ್ಯುಬೇಶನ್ ಪರಿಸರ ವ್ಯವಸ್ಥೆʼಯನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇಲ್ಲಿಯವರೆಗೆ, ʻಐಐಟಿಎಚ್ʼ 100ಕ್ಕೂ ಹೆಚ್ಚು ನವೋದ್ಯಮಗಳನ್ನು ಪೋಷಿಸಿದೆ ಮತ್ತು ನವೋದ್ಯಮಗಳಿಗೆ ನೇರವಾಗಿ 5 ಕೋಟಿ ರೂ.ಗಳಿಗೂ ಹೆಚ್ಚು ಆರ್ಥಿಕ ನೆರವು ಮಂಜೂರು ಮಾಡಿದೆ. ಜೊತೆಗೆ, ಬಾಹ್ಯ ಮೂಲಗಳಿಂದ 50 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಲು ನವೋದ್ಯಮಗಳಿಗೆ ಬೆಂಬಲಿಸುತ್ತದೆ. ಇಲ್ಲಿಯವರೆಗೆ, ʻಐಐಟಿಎಚ್ʼ ನವೋದ್ಯಮಗಳು 100 ಕೋಟಿ ರೂ.ಗಳಿಗೂ ಹೆಚ್ಚು ಆದಾಯವನ್ನು ಸೃಷ್ಟಿಸಿವೆ ಮತ್ತು 800+ ಉದ್ಯೋಗಗಳನ್ನು ಸೃಷ್ಟಿಸಿವೆ.

 

4. ಸಂಶೋಧನಾ ಕೇಂದ್ರ ಸಂಕೀರ್ಣ (ಆರ್‌ಸಿಸಿ) ಉದ್ಘಾಟನೆ:

 ರಿಸರ್ಚ್ ಸೆಂಟರ್ ಕಾಂಪ್ಲೆಕ್ಸ್(ಆರ್‌ಸಿಸಿ) – ಇದು ಐದು ಅಂತಸ್ತಿನ (ಜಿ+4) ಕಟ್ಟಡವಾಗಿದ್ದು, ಆಕರ್ಷಕ ಅಂಡಾಕಾರದ ವಿನ್ಯಾಸವನ್ನು ಹೊಂದಿದೆ. ಕಟ್ಟಡದ ಒಟ್ಟು ವಿಸ್ತೀರ್ಣ 12,325 ಚದರ ಮೀಟರ್ ಆಗಿದೆ. ಉನ್ನತ ಮಟ್ಟದ ಸಂಶೋಧನಾ ಉಪಕರಣಗಳೊಂದಿಗೆ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಈ ಕೇಂದ್ರದ ಉದ್ದೇಶವಾಗಿದೆ. ಈ ಕಟ್ಟಡವು ʻಜೆಐಸಿಎʼ ಸಹಯೋಗದ ಯೋಜನೆಯ ಒಂದು ಭಾಗವಾಗಿದೆ, ಇದು ನಿರ್ಮಾಣ ಮತ್ತು ಕೆಲವು ಸಂಶೋಧನಾ ಸಲಕರಣೆಗಳು ಎರಡಕ್ಕೂ ಧನಸಹಾಯ ಮಾಡಿದೆ. ʻಆರ್‌ಸಿಸಿʼಒಟ್ಟು 48 ಪ್ರಯೋಗಾಲಯಗಳನ್ನು ಒಳಗೊಂಡಿದೆ, ಅವುಗಳಲ್ಲಿ 16 ದ್ರವ ಪ್ರಯೋಗಾಲಯಗಳು, 20 ಶುಷ್ಕ ಪ್ರಯೋಗಾಲಯಗಳು. ನೆಲಮಹಡಿಯಲ್ಲಿ 2 ಮೆಗಾ ಪ್ರಯೋಗಾಲಯಗಳಿದ್ದು, ಅವು ಎರಡು ಅಂತಸ್ತಿನ ಎತ್ತರವನ್ನು ಹೊಂದಿವೆ. ಬಯೋಟೆಕ್ /ಬಯೋಮೆಡಿಕಲ್ ಕ್ಷೇತ್ರಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳಲು ಈ ಕಟ್ಟದಲ್ಲಿ ಪ್ರಾಣಿಗಳ ವಿಭಾಗ ಸ್ಥಾಪಿಸಲು ಸಹ ಯೋಜಿಸಲಾಗಿದೆ.

 

********


(Release ID: 1838963) Visitor Counter : 146