ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಾನವ ಕಳ್ಳಸಾಗಣೆ ನಿಗ್ರಹ ಜಾಗೃತಿ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದಿಂದ ವಿಚಾರಸಂಕಿರಣ.

प्रविष्टि तिथि: 25 JUN 2022 7:09PM by PIB Bengaluru

ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ ಸಿ ಡಬ್ಲ್ಯು) ವು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್ ಮತ್ತು ಡಿ) ಸಹಯೋಗದೊಂದಿಗೆ ಮಾನವ ಕಳ್ಳಸಾಗಣೆ ನಿಗ್ರಹ ಜಾಗೃತಿ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿತು. ಒಂದು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಣೆಯ ಪರಿಚಯ, ಪರಿಕಲ್ಪನೆ, ಮಾದರಿಗಳು ಮತ್ತು ಅಸ್ತಿತ್ವದಲ್ಲಿರುವ ಪ್ರತಿಕ್ರಿಯೆ ವ್ಯವಸ್ಥೆಗಳು ಮತ್ತು ಕಳ್ಳಸಾಗಣೆಯಿಂದಾಗುವ ಮಾನಸಿಕ ಸಾಮಾಜಿಕ ಪರಿಣಾಮ ಮತ್ತು ಅದನ್ನು ತಡೆಗಟ್ಟುವಲ್ಲಿ ನಾಗರಿಕ ಸಮಾಜ ಸಂಸ್ಥೆಗಳ ಪಾತ್ರವನ್ನು ಕುರಿತು ಚರ್ಚಿಸಿತು.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ರೇಖಾ ಶರ್ಮಾ ಮತ್ತು ಬಿಪಿಆರ್ ಮತ್ತು ಡಿ ಮಹಾನಿರ್ದೇಶಕ ಶ್ರೀ ಬಾಲಾಜಿ ಶ್ರೀವಾಸ್ತವ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಎನ್ ಡಿ ಆರ್‌ ಎಫ್ ಮಾಜಿ ಮಹಾನಿರ್ದೇಶಕ ಮತ್ತು ಟಿಐಎಸ್ಎಸ್ ಮಾಜಿ ಅಧ್ಯಕ್ಷ ಪ್ರೊಫೆಸರ್ ಶ್ರೀ ಪಿಎಂ ನಾಯರ್, ಮಧ್ಯಪ್ರದೇಶ ಪೊಲೀಸ್ ಎಸ್ಐಎಸ್ಎಫ್ ನ ಎಐಜಿ ಶ್ರೀ ವೀರೇಂದ್ರ ಮಿಶ್ರಾ, ನಡವಳಿಕೆ ವಿಜ್ಞಾನ ವಿಭಾಗದ ಮಾಜಿ ಡೀನ್ ಮತ್ತು ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ. ಶೇಖರ್ ಪಿ. ಶೇಷಾದ್ರಿ ಮತ್ತು ಇಂಪಲ್ಸ್ ಎನ್ ಜಿ ಒ ನೆಟ್ವರ್ಕ್ ಸ್ಥಾಪಕಿ ಹಸೀನಾ ಕರ್ಬಿಹ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

 

ಅಧ್ಯಕ್ಷೆ ಶ್ರೀಮತಿ ರೇಖಾ ಶರ್ಮಾ ಮಾತನಾಡಿ, ಪರಿಣಾಮಕಾರಿ ಹೋರಾಟಕ್ಕಾಗಿ ಮೂಲದಲ್ಲಿಯೇ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು. "ನಾವು ಕಳ್ಳಸಾಗಣೆಯನ್ನು ತಡೆಗಟ್ಟುವತ್ತ ಗಮನ ಹರಿಸಬೇಕು. ಎನ್ ಸಿ ಡಬ್ಲ್ಯು ತನ್ನದೇ ಆದ ಮಾನವ ಕಳ್ಳಸಾಗಣೆ ನಿಗ್ರಹ ಕೋಶವನ್ನು ಸ್ಥಾಪಿಸಿದೆ ಮತ್ತು ಇದು ಕೇವಲ ಪ್ರಾರಂಭವಾಗಿದೆ. ಇಂದಿನ ವಿಚಾರ ಸಂಕಿರಣದ ಮೂಲಕ, ಮಾನವ ಕಳ್ಳಸಾಗಣೆ ಮತ್ತು ಅದರ ವಿರುದ್ಧ ಪರಿಣಾಮಕಾರಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಾವೆಲ್ಲರೂ ಮುಂದಿನ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ" ಎಂದು ಅವರು ಹೇಳಿದರು.

 

ಬಿಪಿಆರ್ ಮತ್ತು ಡಿ ಸೈಬರ್ ಅಪರಾಧ, ಮಹಿಳಾ ಭದ್ರತೆ ಮುಂತಾದ ವಿವಿಧ ವಿಷಯಗಳ ಬಗ್ಗೆ ಅನೇಕ ವಿಚಾರ ಸಂಕಿರಣಗಳು ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ ಮತ್ತು ಎನ್ ಸಿ ಡಬ್ಲ್ಯು ಜೊತೆಗಿನ ಈ ಸಹಯೋಗದ ಪ್ರಯತ್ನವು ಮಾನವ ಕಳ್ಳಸಾಗಣೆಯ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ಬಾಲಾಜಿ ಶ್ರೀವಾಸ್ತವ ಹೇಳಿದರು.

ವಿಚಾರ ಸಂಕಿರಣವನ್ನು 'ಪರಿಚಯ: ಮಾನವ ಕಳ್ಳಸಾಗಣೆಯ ಪರಿಕಲ್ಪನೆ, ಮಾದರಿಗಳು ಮತ್ತು ಅಸ್ತಿತ್ವದಲ್ಲಿರುವ ಪ್ರತಿಕ್ರಿಯೆ ವ್ಯವಸ್ಥೆಗಳು', 'ಮಾನವ ಕಳ್ಳಸಾಗಣೆಯ ವಿಭಿನ್ನ ಆಯಾಮಗಳು', 'ಕಳ್ಳಸಾಗಣೆಯ ಮಾನಸಿಕ ಸಾಮಾಜಿಕ ಪರಿಣಾಮ' ಮತ್ತು 'ರಕ್ಷಣೆ, ನಂತರದ ರಕ್ಷಣಾ ಆರೈಕೆ ಮತ್ತು ಪುನರ್ವಸತಿಯಲ್ಲಿ ಎನ್‌ ಜಿ ಒ ಗಳ ಪಾತ್ರ' ಎಂದು ನಾಲ್ಕು ತಾಂತ್ರಿಕ ಅಧಿವೇಶನಗಳಾಗಿ ವಿಂಗಡಿಸಲಾಗಿತ್ತು.

ಮಾನವ ಕಳ್ಳಸಾಗಣೆಯ ಪರಿಚಯ: ಪರಿಕಲ್ಪನೆ, ಮಾದರಿಗಳು ಮತ್ತು ಅಸ್ತಿತ್ವದಲ್ಲಿರುವ ಪ್ರತಿಕ್ರಿಯೆ ವ್ಯವಸ್ಥೆಗಳು' ಎಂಬ ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿದ ಶ್ರೀ ಪಿಎಂ ನಾಯರ್, ಮಾನವ ಕಳ್ಳಸಾಗಣೆಯನ್ನು ಎದುರಿಸಲು ಮತ್ತು ಪರಿಣಾಮಕಾರಿ ತಡೆಗಟ್ಟುವಿಕೆಗಾಗಿ ಯುವಕರು ಮತ್ತು ಪಂಚಾಯತ್‌ ಮಟ್ಟದವರೆಗೆ ಆಂದೋಲನವನ್ನು ಕೊಂಡೊಯ್ಯಲು ಜಾರಿ ಸಂಸ್ಥೆಗಳು, ಪೊಲೀಸ್ ಮತ್ತು ಎನ್‌ಜಿಒಗಳ ನಡುವೆ ಸಮನ್ವಯದ ಬಗ್ಗೆ ಒತ್ತಿ ಹೇಳಿದರು. “ಎ ಹೆಚ್‌ ಟಿ ಸಿ ಯನ್ನು ಸ್ಥಾಪಿಸುವುದು ಸುಲಭ, ಆದರೆ ಸಹಕಾರ ಅಗತ್ಯ. ಮಾನವ ಕಳ್ಳಸಾಗಣೆ ವಿರುದ್ಧ ಯುವಕರು, ಪಂಚಾಯತ್‌ಗಳು, ಎನ್‌ಜಿಒಗಳನ್ನು ಸಬಲಗೊಳಿಸುವುದು ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ. ಅದನ್ನು ಗುರುತಿಸಿ, ಅದರ ಬಗ್ಗೆ ಮಾತನಾಡಿ, ಕಾರ್ಯಪ್ರವೃತ್ತರಾಗಿ, ನಿಲ್ಲಿಸಿ” ಎಂದು ಶ್ರೀ ನಾಯರ್ ಹೇಳಿದರು.

‘ಮಾನವ ಕಳ್ಳಸಾಗಣೆಯ ವಿವಿಧ ಆಯಾಮಗಳು’ಕುರಿತ ಅಧಿವೇಶನದಲ್ಲಿ ಶ್ರೀ ವೀರೇಂದ್ರ ಮಿಶ್ರಾ ಅವರು, ಮಾನವ ಕಳ್ಳಸಾಗಣೆಯನ್ನು ಎದುರಿಸಲು ತಡೆಗಟ್ಟುವಿಕೆ, ರಕ್ಷಣೆ, ಕಾನೂನು ಕ್ರಮ ಮತ್ತು ಭಾಗವಹಿಸುವಿಕೆ ಮತ್ತು ಕಳ್ಳಸಾಗಣೆಯಲ್ಲಿ ಅಪರಾಧ ನ್ಯಾಯ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯ ವ್ಯವಸ್ಥೆಯ ಪಾತ್ರ ಎಂಬ 4P ಗಳ ಮೇಲೆ ಕೇಂದ್ರೀಕರಿಸಿದರು. ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ದುರ್ಬಲತೆಯ ಕಾರಣಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.

‘ಕಳ್ಳಸಾಗಾಣಿಕೆ ಮಾನಸಿಕ ಸಾಮಾಜಿಕ ಪರಿಣಾಮ’ಕುರಿತು ನಡೆದ ಅಧಿವೇಶನದಲ್ಲಿ ಮಾತನಾಡಿದ ಶ್ರೀ ಶೇಷಾದ್ರಿ, ಬಹಳಷ್ಟು ಬಾರಿ ಸಂತ್ರಸ್ತರಿಗೆ ಕುಟುಂಬವು ಉತ್ತಮ ಸ್ಥಳವಾಗಿರುವುದಿಲ್ಲ ಮತ್ತು ಒಬ್ಬ ವ್ಯಕ್ತಿಯನ್ನು ಅವಳನ್ನು ಕಳ್ಳಸಾಗಣೆ ಮಾಡಲಾದ ಸ್ಥಳಕ್ಕೆ ಮರಳಿ ಕಳುಹಿಸುವುದು ಅನ್ಯಾಯ ಮತ್ತು ಕ್ರೂರವಾದುದು ಎಂದರು. ಬದುಕುಳಿದವರಿಗೆ ಸೂಕ್ತ ಸಮಾಲೋಚನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, "ಸೂಚನೆ, ಸಲಹೆ, ಸಮಾಲೋಚನೆ ಮತ್ತು ಚಿಕಿತ್ಸೆ ಒಂದೇ ಅಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.

'ರಕ್ಷಣೆ, ನಂತರದ ರಕ್ಷಣಾ ಆರೈಕೆ ಮತ್ತು ಪುನರ್ವಸತಿಯಲ್ಲಿ ಎನ್‌ಜಿಒಗಳ ಪಾತ್ರ' ಕುರಿತು ಕೊನೆಯ ತಾಂತ್ರಿಕ ಅಧಿವೇಶನದಲ್ಲಿ ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟವರನ್ನು ಮತ್ತೆ ಸಮಾಜಕ್ಕೆ ಮರುಸೇರ್ಪಡೆಗೊಳಿಸುವ ಕುರಿತು ಶ್ರೀಮತಿ ಹಸೀನಾ ಕರ್ಬಿಹ್ ಮಾತನಾಡಿದರು. “ಎಲ್ಲರೂ ಹೊಲಿಗೆ ಅಥವಾ ನೇಯ್ಗೆ ಮಾಡಲು ಬಯಸುವುದಿಲ್ಲ. ಅದು ಪುನರ್ವಸತಿ ಅಲ್ಲ. ರಕ್ಷಿಸಲ್ಪಟ್ಟವರ ಆಕಾಂಕ್ಷೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಈ ಆಕಾಂಕ್ಷೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಸರ್ಕಾರ, ಎನ್‌ಜಿಒಗಳು ಮತ್ತು ಸಿಎಸ್‌ಆರ್ ಭಾಗವಹಿಸುವಿಕೆಯ ಸಹಯೋಗದೊಂದಿಗೆ ಪಿಪಿಪಿ ಮಾದರಿಯು ಈ ಮಹಿಳೆಯರ ಯಶಸ್ವಿ ಪುನರ್ವಸತಿ ಮತ್ತು ಸಬಲೀಕರಣಕ್ಕೆ ಸಹಾಯ ಮಾಡುತ್ತದೆ ”ಎಂದು ಅವರು ಹೇಳಿದರು.

ತಾಂತ್ರಿಕ ಅಧಿವೇಶನಗಳ ನಂತರ ವಿವರವಾದ ಮುಕ್ತ ಚರ್ಚೆಗಳು ನಡೆದವು ಮತ್ತು ಸಂಪನ್ಮೂಲ ವ್ಯಕ್ತಿಗಳು ಮಾನವ ಕಳ್ಳಸಾಗಣೆಯನ್ನು ಎದುರಿಸಲು ಮುಂದಿನ ಮಾರ್ಗಗಳ ಬಗ್ಗೆ ಸಲಹೆ ನೀಡಿದರು. ತಜ್ಞರು ನೀಡಿದ ಕೆಲವು ಪ್ರಮುಖ ಸಲಹೆಗಳೆಂದರೆ, ಪ್ರತಿ ರಾಜ್ಯ ಮಹಿಳಾ ಆಯೋಗವು ತನ್ನದೇ ಆದ ಮಾನವ ಕಳ್ಳಸಾಗಣೆ ನಿಗ್ರಹ ಕೋಶವನ್ನು ಹೊಂದಿರಬೇಕು, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಎಲ್ಲಾ ಸಂಸ್ಥೆಗಳು ಅನುಸರಿಸಲು ಟೆಂಪ್ಲೇಟ್/ಎಸ್‌ಒಪಿ ಇರಬೇಕು, ಎಲ್ಲಾ ಭಾಗೀದಾರರ ಜಂಟಿ ತರಬೇತಿ, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ಕೋಶಗಳನ್ನು ಸ್ಥಾಪಿಸುವುದು. ಯೋಜನೆಗಳು ಮತ್ತು ಪರಿಹಾರ ಸೇರಿದಂತೆ ಕಾನೂನು ವ್ಯವಸ್ಥೆಯಲ್ಲಿ ಲಭ್ಯವಿರುವ ನಿಬಂಧನೆಗಳು ಪಂಚಾಯತ್ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ತಿಳಿದಿರಬೇಕು ಎಂಬುವು ಇತರ ಸಲಹೆಗಳಾಗಿದ್ದವು.

ರಾಜ್ಯ ಮಹಿಳಾ ಆಯೋಗಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಅರೆಸೇನಾ ಪಡೆಗಳ ಹಿರಿಯ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಆಯೋಗಗಳು, ಆಡಳಿತಾತ್ಮಕ, ನ್ಯಾಯಾಂಗ ಮತ್ತು ಪೊಲೀಸ್ ತರಬೇತಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಮತ್ತು ವಿಶ್ವವಿದ್ಯಾಲಯಗಳು/ಕಾಲೇಜುಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದವು.

 

ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣಾಮಕಾರಿತ್ವವನ್ನು ಸುಧಾರಿಸಲು ರಾಷ್ಟ್ರೀಯ ಮಹಿಳಾ ಆಯೋಗವು 2ನೇ ಏಪ್ರಿಲ್, 2022 ರಂದು ಮಾನವ ಕಳ್ಳಸಾಗಣೆ ನಿಗ್ರಹ ಕೋಶವನ್ನು (ಎ ಹೆಚ್‌ ಟಿ ಸಿ) ಸ್ಥಾಪಿಸಿದೆ. ಇದು ಮಹಿಳೆಯರು ಮತ್ತು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತದೆ, ಸಾಮರ್ಥ್ಯ ವೃದ್ಧಿ ಮತ್ತು ಕಳ್ಳ ಸಾಗಣೆ ನಿಗ್ರಹ ಘಟಕಗಳ ತರಬೇತಿ ಮತ್ತು ಕಾನೂನು ಜಾರಿ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸಂವೇದನಾಶೀಲಗೊಳಿಸುತ್ತದೆ.

******

 

 

 

 


(रिलीज़ आईडी: 1837015) आगंतुक पटल : 263
इस विज्ञप्ति को इन भाषाओं में पढ़ें: English , Urdu , हिन्दी , Punjabi