ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿಯವರಿಂದ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಐಕಾನಿಕ್ ವೀಕ್ ಉದ್ಘಾಟನೆ


ಸಾಲಾಧಾರಿತ ಸರ್ಕಾರಿ ಯೋಜನೆಗಳ ರಾಷ್ಟ್ರೀಯ ಪೋರ್ಟಲ್ -ಜನ ಸಮರ್ಥ್ ಪೋರ್ಟಲ್ - ಗೆ ಚಾಲನೆ ನೀಡಿದ ಪ್ರಧಾನಿ

ಸಾರ್ವಜನಿಕ ಸಹಭಾಗಿತ್ವದ ಹೆಚ್ಚಳವು ದೇಶದ ಅಭಿವೃದ್ಧಿಗೆ ಉತ್ತೇಜನ ನೀಡಿದೆ ಮತ್ತು ಬಡವರನ್ನು ಸಬಲೀಕರಣಗೊಳಿಸಿದೆ: ಪ್ರಧಾನಿ

Posted On: 06 JUN 2022 3:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಐಕಾನಿಕ್‌ ವೀಕ್ ಆಚರಣೆಯನ್ನು ಉದ್ಘಾಟಿಸಿದರು. ಈ ಸಪ್ತಾಹವನ್ನು ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು 'ಆಜಾದಿ ಕಾ ಅಮೃತ ಮಹೋತ್ಸವ' (ಎಕೆಎಎಂ) ದ ಭಾಗವಾಗಿ ಜೂನ್ 6 ರಿಂದ 12, 2022 ರವರೆಗೆ ಆಚರಿಸುತ್ತಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಹಾಯಕ ಸಚಿವ ಶ್ರೀ ರಾವ್ ಇಂದರ್‌ಜಿತ್ ಸಿಂಗ್, ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಪಂಕಜ್ ಚೌಧರಿ ಮತ್ತು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಡಾ. ಭಾಗವತ್ ಕಿಸನ್‌ರಾವ್ ಕರಾಡ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನ ಮಂತ್ರಿಯವರು ಸಾಲಾಧಾರಿತ ಸರ್ಕಾರಿ ಯೋಜನೆಗಳ ರಾಷ್ಟ್ರೀಯ ಪೋರ್ಟಲ್ -ಜನ್ ಸಮರ್ಥ ಪೋರ್ಟಲ್- ಗೆ ಚಾಲನೆ ನೀಡಿದರು. 

 

ಕಳೆದ ಎಂಟು ವರ್ಷಗಳಲ್ಲಿ ಎರಡು ಸಚಿವಾಲಯಗಳ ಸಾಧನೆಗಳನ್ನು ಹೇಳುವ ಡಿಜಿಟಲ್ ಪ್ರದರ್ಶನವನ್ನು ಪ್ರಧಾನಿ ಉದ್ಘಾಟಿಸಿದರು.

 

₹1, ₹2, ₹5, ₹10 ಮತ್ತು ₹20 ನಾಣ್ಯಗಳ ವಿಶೇಷ ಸರಣಿಯನ್ನು ಪ್ರಧಾನಿಯವರು ಬಿಡುಗಡೆ ಮಾಡಿದರು. ಈ ವಿಶೇಷ ಸರಣಿಯ ನಾಣ್ಯಗಳು ಆಜಾದಿ ಕಾ ಅಮೃತ ಮಹೋತ್ಸವದ ಲಾಂಛನ ಹೊಂದಿರುತ್ತವೆ ಮತ್ತು ದೃಷ್ಟಿಹೀನ ವ್ಯಕ್ತಿಗಳು ಸಹ ಸುಲಭವಾಗಿ ಗುರುತಿಸಬಹುದಾಗಿದೆ.

 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಹೋರಾಟದಲ್ಲಿ ಭಾಗವಹಿಸಿದವರು ಯಾರೇ ಆಗಿರಲಿ, ಅವರು ಈ ಆಂದೋಲನಕ್ಕೆ ವಿಭಿನ್ನ ಆಯಾಮವನ್ನು ಸೇರಿಸಿದರು ಮತ್ತು ಅದರ ಶಕ್ತಿಯನ್ನು ಹೆಚ್ಚಿಸಿದರು. ಕೆಲವರು ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಂಡರು, ಕೆಲವರು ಆಯುಧಗಳ ಹಾದಿ ಹಿಡಿದರು, ಕೆಲವರು ನಂಬಿಕೆ ಮತ್ತು ಆಧ್ಯಾತ್ಮಿಕತೆ ಮತ್ತೆ ಕೆಲವರು ಬೌದ್ಧಿಕವಾಗಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು ಸಹಾಯ ಮಾಡಿದರು, ಇಂದು ನಾವು ಅವರೆಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.
ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡುವುದು ಪ್ರತಿಯೊಬ್ಬ ದೇಶವಾಸಿಗಳ ಕರ್ತವ್ಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳಿಗೆ ಹೊಸ ಶಕ್ತಿ ತುಂಬುವ ಮತ್ತು ಹೊಸ ಸಂಕಲ್ಪಗಳಿಗೆ ನಮ್ಮನ್ನು ಅರ್ಪಿಸಿಕೊಳ್ಳುವ ಕ್ಷಣ ಇದಾಗಿದೆ ಎಂದರು.
ಕಳೆದ ಎಂಟು ವರ್ಷಗಳಲ್ಲಿ ಭಾರತವೂ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿದೆ ಎಂದು ಪ್ರಧಾನಿ ಹೇಳಿದರು. ಈ ಅವಧಿಯಲ್ಲಿ ಹೆಚ್ಚಿರುವ ಸಾರ್ವಜನಿಕ ಸಹಭಾಗಿತ್ವವು ದೇಶದ ಅಭಿವೃದ್ಧಿಗೆ ವೇಗವನ್ನು ನೀಡಿದೆ ಮತ್ತು ದೇಶದ ಬಡ ನಾಗರಿಕರನ್ನು ಸಬಲರನ್ನಾಗಿ ಮಾಡಿದೆ. ಸ್ವಚ್ಛ ಭಾರತ ಅಭಿಯಾನವು ಬಡವರಿಗೆ ಗೌರವದಿಂದ ಬದುಕುವ ಅವಕಾಶವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು. ಪಕ್ಕಾ ಮನೆ, ವಿದ್ಯುತ್, ಅಡುಗೆ ಅನಿಲ, ನೀರು ಮತ್ತು ಉಚಿತ ಚಿಕಿತ್ಸೆ ಮುಂತಾದ ಸೌಲಭ್ಯಗಳು ಬಡವರ ಘನತೆಯನ್ನು ಹೆಚ್ಚಿಸಿವೆ ಮತ್ತು ಸುಧಾರಿತ ಸೌಲಭ್ಯಗಳನ್ನು ಹೆಚ್ಚಿಸಿವೆ. ಕೊರೊನಾ ಅವಧಿಯಲ್ಲಿ ಉಚಿತ ಪಡಿತರ ಯೋಜನೆಯು 80 ಕೋಟಿಗೂ ಹೆಚ್ಚು ದೇಶವಾಸಿಗಳನ್ನು ಹಸಿವಿನ ಭಯದಿಂದ ಮುಕ್ತಗೊಳಿಸಿತು. ನಾಗರಿಕರು ಕೊರತೆಯ ಮನಸ್ಥಿತಿಯಿಂದ ಹೊರಬರಲು ಮತ್ತು ದೊಡ್ಡ ಕನಸು ಕಾಣಲು ಹೊಸ ಆತ್ಮವಿಶ್ವಾಸವನ್ನು ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ದೇಶವು ಈ ಹಿಂದೆ ಸರ್ಕಾರ ಕೇಂದ್ರಿತ ಆಡಳಿತದ ಭಾರವನ್ನು ಹೊತ್ತುಕೊಂಡಿತ್ತು ಎಂದು ಪ್ರಧಾನಿ ಹೇಳಿದರು. ಆದರೆ ಇಂದು 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುನ್ನಡೆಯುತ್ತಿದೆ. ಈ ಹಿಂದೆ ಯೋಜನೆಗಳ ಲಾಭ ಪಡೆಯಲು ಸರ್ಕಾರದ ಮೊರೆ ಹೋಗುವುದು ಜನರ ಜವಾಬ್ದಾರಿಯಾಗಿತ್ತು. ಈಗ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು ಮತ್ತು ವಿವಿಧ ಸಚಿವಾಲಯಗಳು ಮತ್ತು ವೆಬ್‌ಸೈಟ್‌ಗಳಿಗೆ ಸುತ್ತುವುದರಿಂದ ಅವರನ್ನು ಮುಕ್ತಗೊಳಿಸುವುದಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಸಾಲಾಧಾರಿತ ಸರ್ಕಾರಿ ಯೋಜನೆಗಳಿಗಾಗಿ ರಾಷ್ಟ್ರೀಯ ಪೋರ್ಟಲ್ - ಜನ್ ಸಮರ್ಥ ಪೋರ್ಟಲ್- ಆರಂಭವು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಪೋರ್ಟಲ್ ವಿದ್ಯಾರ್ಥಿಗಳು, ರೈತರು, ಉದ್ಯಮಿಗಳು, ಎಂಎಸ್‌ಎಂಇ ಉದ್ಯಮಿಗಳ ಜೀವನವನ್ನು ಸುಧಾರಿಸುತ್ತದೆ ಮತ್ತು ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
ಯಾವುದೇ ಸುಧಾರಣೆ, ಅದರ ಉದ್ದೇಶ ಮತ್ತು ಗುರಿಗಳು ಸ್ಪಷ್ಟವಾಗಿದ್ದರೆ ಮತ್ತು ಅದರ ಅನುಷ್ಠಾನದಲ್ಲಿ ಗಂಭೀರತೆ ಇದ್ದರೆ ಉತ್ತಮ ಫಲಿತಾಂಶಗಳು ಖಚಿತ ಎಂದು ಪ್ರಧಾನಿ ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ದೇಶವು ಕೈಗೊಂಡ ಸುಧಾರಣೆಗಳಲ್ಲಿ ನಮ್ಮ ಯುವಜನರು ಕೇಂದ್ರಭಾಗದಲ್ಲಿದ್ದಾರೆ ಇರಿಸಲಾಗಿದೆ. ಇದು ಅವರ ಸಾಮರ್ಥ್ಯವನ್ನು ತೋರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನಮ್ಮ ಯುವಕರು ತಮಗೆ ಬೇಕಾದ ಕಂಪನಿಯನ್ನು ಸುಲಭವಾಗಿ ತೆರೆಯಬಹುದು, ಅವರು ತಮ್ಮ ಉದ್ಯಮಗಳನ್ನು ಸುಲಭವಾಗಿ ಪ್ರಾರಂಭಿಸಬಹುದು ಮತ್ತು ಅವುಗಳನ್ನು ಸುಲಭವಾಗಿ ನಡೆಸಬಹುದು. ಆದ್ದರಿಂದ 30 ಸಾವಿರಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡುವ ಮೂಲಕ, 1500 ಕ್ಕೂ ಹೆಚ್ಚು ಕಾನೂನುಗಳನ್ನು ರದ್ದುಪಡಿಸುವ ಮೂಲಕ ಮತ್ತು ಕಂಪನಿಗಳ ಕಾಯಿದೆಯ ಹಲವಾರು ನಿಬಂಧನೆಗಳನ್ನು ಸರಳೀಕರಿಸುವ ಮೂಲಕ, ನಾವು ಭಾರತೀಯ ಕಂಪನಿಗಳು ಮುಂದುವರಿಯುವುದನ್ನು ಮಾತ್ರವಲ್ಲದೆ, ಅವುಗಳು ಹೊಸ ಎತ್ತರ ಸಾಧಿಸುವುದನ್ನು ಖಚಿತಪಡಿಸಿದ್ದೇವೆ ಎಂದು ಅವರು ಹೇಳಿದರು.
ಸುಧಾರಣೆಗಳಲ್ಲಿ ಸರ್ಕಾರವು ಸರಳೀಕರಣದತ್ತ ಗಮನಹರಿಸಿದೆ ಎಂದು ಪ್ರಧಾನಿ ಹೇಳಿದರು.  ಜಿಎಸ್‌ಟಿ ಈಗ ಕೇಂದ್ರ ಮತ್ತು ರಾಜ್ಯದಲ್ಲಿದ್ದ ಹಲವು ತೆರಿಗೆಗಳ ಜಾಲವನ್ನು ಬದಲಿಸಿದೆ. ಈ ಸರಳೀಕರಣದ ಫಲಿತಾಂಶವನ್ನು ದೇಶವೂ ನೋಡುತ್ತಿದೆ. ಈಗ ಪ್ರತಿ ತಿಂಗಳು ಜಿಎಸ್‌ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ. ದಾಟುವುದು ಸಾಮಾನ್ಯವಾಗಿದೆ ಎಂದರು. ಜಿಇಎಂ ಪೋರ್ಟಲ್ ಸರ್ಕಾರದಲ್ಲಿ ಖರೀದಿಯನ್ನು  ಸುಲಭ ಮಾಡಿದೆ ಮತ್ತು ಸರ್ಕಾರಕ್ಕೆ ಮಾರಾಟವನ್ನು ಬಹಳ ಸುಲಭಗೊಳಿಸಿದೆ ಎಂದು ಅವರು ಹೇಳಿದರು. ಪೋರ್ಟಲ್‌ನ ಖರೀದಿ 1 ಲಕ್ಷ ಕೋಟಿ ದಾಟಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ವ್ಯವಹಾರವನ್ನು ಸುಲಭಗೊಳಿಸುವ ಪೋರ್ಟಲ್‌ಗಳ ಬಗ್ಗೆಯೂ ಅವರು ಮಾತನಾಡಿದರು. ಹೂಡಿಕೆ ಅವಕಾಶಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಇನ್ವೆಸ್ಟ್ ಇಂಡಿಯಾ ಪೋರ್ಟಲ್, ವ್ಯಾಪಾರದ ಔಪಚಾರಿಕತೆಗಳಿಗಾಗಿ ಏಕ ಗವಾಕ್ಷಿ ಅನುಮತಿ ಪೋರ್ಟಲ್ ಕುರಿತು ಅವರು ಮಾತನಾಡಿದರು. ಈ ಸರಣಿಯ ಜನ ಸಮರ್ಥ ಪೋರ್ಟಲ್ ರಾಷ್ಟ್ರದ ಯುವಜನತೆ ಮತ್ತು ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಸಹಾಯ ಮಾಡಲಿದೆ ಎಂದು ಪ್ರಧಾನಿ ತಿಳಿಸಿದರು.
ಇಂದು ನಾವು ಸುಧಾರಣೆ, ಸರಳೀಕರಣ ಮತ್ತು ಸುಲಭದ ಶಕ್ತಿಯೊಂದಿಗೆ ಮುಂದುವರಿದಾಗ, ನಾವು ಹೊಸ ಎತ್ತರದ ಅನುಕೂಲಗಳನ್ನು ಪಡೆಯುತ್ತೇವೆ. ಭಾರತವು ಒಟ್ಟಾಗಿ ಏನನ್ನಾದರೂ ಮಾಡಲು ನಿರ್ಧರಿಸಿದರೆ ಭಾರತವು ಜಗತ್ತಿಗೆ ಹೊಸ ಭರವಸೆಯಾಗುತ್ತದೆ ಎಂದು ನಾವು ಕಳೆದ 8 ವರ್ಷಗಳಲ್ಲಿ ತೋರಿಸಿದ್ದೇವೆ. ಇಂದು ಜಗತ್ತು ನಮ್ಮನ್ನು ಕೇವಲ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ನೋಡುತ್ತಿಲ್ಲ, ಬದಲಿಗೆ ನಮ್ಮನ್ನು ಸಮರ್ಥ, ಬದಲಾವಣೆಯ, ಸೃಜನಶೀಲ, ನವೀನ ಪರಿಸರ ವ್ಯವಸ್ಥೆಯಾಗಿ ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಪಂಚದ ಬಹುಪಾಲು ಭಾಗವು ಭಾರತವು ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ನಿರೀಕ್ಷಿಸುತ್ತದೆ ಎಂದು ಪ್ರಧಾನಿ ಹೇಳಿದರು. ಕಳೆದ 8 ವರ್ಷಗಳಲ್ಲಿ ನಾವು ಸಾಮಾನ್ಯ ಭಾರತೀಯನ ಬುದ್ಧಿವಂತಿಕೆಯನ್ನು ನಂಬಿದ್ದರಿಂದ ಇದು ಸಾಧ್ಯವಾಗಿದೆ. ನಾವು ಬೆಳವಣಿಗೆಯಲ್ಲಿ ಬೌದ್ಧಿಕ ಭಾಗೀದಾರರಾಗಿ ಸಾರ್ವಜನಿಕರನ್ನು ಪ್ರೋತ್ಸಾಹಿಸಿದ್ದೇವೆ. ಉತ್ತಮ ಆಡಳಿತಕ್ಕಾಗಿ ಯಾವುದೇ ತಂತ್ರಜ್ಞಾನವನ್ನು ಅಳವಡಿಸಿದರೂ, ಅದನ್ನು ಜನರು ಅಳವಡಿಸಿಕೊಳ್ಳುವುದು ಮಾತ್ರವಲ್ಲ, ಅವರ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ಯುಪಿಐ ಸಾಧನೆಯನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಐಕಾನಿಕ್ ವೀಕ್ ಆಚರಣೆಗೆ ಚಾಲನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಈ ಸಪ್ತಾಹದಲ್ಲಿ, ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿನ ಪ್ರತಿಯೊಂದು ಇಲಾಖೆಯು ರಾಷ್ಟ್ರಕ್ಕೆ ಹೇಗೆ ಸೇವೆ ಸಲ್ಲಿಸಿದೆ ಎಂಬುದನ್ನು ನಾವು ನೆನಪಿಸಿಕೊಳ್ಳುತ್ತೇವೆ. 1947 ರಿಂದ ಭಾರತದ ಆರ್ಥಿಕತೆಯ ಪ್ರಗತಿಯನ್ನು ವಿವಿಧ ಚಟುವಟಿಕೆಗಳ ಮೂಲಕ ಸೆರೆಹಿಡಿಯಲಾಗುತ್ತಿದೆ ಎಂದರು.
ಜನರ ನಡುವೆ ಪರಸ್ಪರ ಸಂಪರ್ಕವನ್ನು ಹೊಂದಲು ಒತ್ತು ನೀಡುವುದು, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ 75 ವರ್ಷಗಳಲ್ಲಿ ಏನು ಮಾಡಿದೆ ಮತ್ತು ವಿಶೇಷವಾಗಿ ನಮ್ಮ ಪ್ರಧಾನಿಯವರ ನೇತೃತ್ವದಲ್ಲಿ ಕಳೆದ 8 ವರ್ಷಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದರ ಕುರಿತು ಜಾಗೃತಿ ಮೂಡಿಸುವುದು ಹಾಗೂ ಹಣಕಾಸು ಸೇರ್ಪಡೆಯ ಕಥೆಯನ್ನು ಈ ವೀಡಿಯೋ (ರುಪಯ್ಯಾ ಕಾ ರೋಚಕ್ ಸಫರ್) ದಲ್ಲಿ ಸೆರೆಹಿಡಿಯಲಾಗಿದೆ. ಅಂತಹ ಹಣಕಾಸು ಸೇರ್ಪಡೆಯ ಪರಿಣಾಮವು ಸಾಮಾನ್ಯ ನಾಗರಿಕರಿಗೆ ಸಾಲದ ವ್ಯಾಪ್ತಿಯನ್ನು ಹೆಚ್ಚಿಸಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಕಳೆದ 8 ವರ್ಷಗಳಲ್ಲಿ ಪ್ರಧಾನಿಯವರೇ ಸ್ವತಃ ಮೇಲ್ವಿಚಾರಣೆ ಮಾಡಿದ ಹಲವಾರು ಉತ್ತಮ ವಿನ್ಯಾಸದ ಜನಸಾಮಾನ್ಯರ ಪರವಾದ ಕಾರ್ಯಕ್ರಮಗಳಿವೆ. ಸಾಮಾನ್ಯ ನಾಗರಿಕರನ್ನು ಸಕ್ರಿಯಗೊಳಿಸಲು ಮತ್ತು ಅವರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿಯವರ ಸೇವೆಯ ಭಾಗ ಜನ ಸಮರ್ಥ್ ಪೋರ್ಟಲ್‌ ಆಗಿದೆ ಎಂದು ಹಣಕಾಸು ಸಚಿವರು ಹೇಳಿದರು. 
ಕಳೆದ ಎರಡು ವರ್ಷಗಳಲ್ಲಿ ಇಂತಹ ಉದ್ದೇಶಿತ ವಿಧಾನವು ನಮಗೆ ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಆಹಾರ ಭದ್ರತೆಯ ಅವಶ್ಯಕತೆಯಾಗಿರಲಿ, ಭಾರತದ ಆರ್ಥಿಕತೆಯು ಎದುರಿಸಬೇಕಾದ ಅಸಾಧಾರಣ ಸಂದರ್ಭಗಳನ್ನು ಎದುರಿಸಲು ಹಣದ ಅವಶ್ಯಕತೆಯಾಗಿರಲಿ ಅಂತಹ ಪ್ರತಿ ಸಂದರ್ಭದಲ್ಲಿಯೂ ಸಾಮಾನ್ಯ ನಾಗರಿಕರ ಬಗ್ಗೆ ಗಮನಹರಿಸಲಾಗಿದೆ ಎಂದು ಅವರು ಹೇಳಿದರು.
ಸ್ವಾಗತ ಭಾಷಣ ಮಾಡಿದ ಹಣಕಾಸು ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಅವರು ಕಳೆದ 8 ವರ್ಷಗಳಲ್ಲಿ ಹಣಕಾಸು ನೀತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಚಿವಾಲಯಕ್ಕೆ ಸ್ಫೂರ್ತಿ ನೀಡಿದ ಮತ್ತು ಮಾರ್ಗದರ್ಶನ ಮಾಡಿದ ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮುಂಬರುವ ಐಕಾನಿಕ್ ವೀಕ್ ನಲ್ಲಿ, ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರದರ್ಶಿಸಲು ಪ್ರಯತ್ನಿಸುವುದಲ್ಲದೆ, ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಕೇಳಲು ಸಹ ಪ್ರಯತ್ನಿಸುತ್ತದೆ ಎಂದರು. 2047 ರ ಭಾರತಕ್ಕಾಗಿ ಹೊಸ ಆಲೋಚನೆಗಳ ಮೂಲಕ ಉತ್ತಮ ಆಡಳಿತದ ಕನಸನ್ನು ನನಸಾಗಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಜನ ಸಮರ್ಥ ಪೋರ್ಟಲ್ ಕುರಿತು
:ಜನ ಸಮರ್ಥ್" 13 ಸರ್ಕಾರಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಮತ್ತು 125ಕ್ಕು ಹೆಚ್ಚು ಎಂ ಎಲ್‌ ಐಗಳಿಗೆ (ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಒಳಗೊಂಡಂತೆ) ಆಯ್ಕೆಗೆ ಏಕ ಗವಾಕ್ಷಿ ಸೌಲಭ್ಯವನ್ನು ಒದಗಿಸುತ್ತದೆ. ಸಿಬಿಡಿಟಿ, ಜಿ ಎಸ್‌ ಟಿ, ಯುಡಿವೈಎಎಂ, ಎನ್‌ ಇ ಎಸ್‌ ಎಲ್, ಯುಐಡಿಎಐ, ಸಿಐಬಿಐಎಲ್‌ ಇತ್ಯಾದಿಗಳೊಂದಿಗೆ ನೈಜ ಸಮಯದ ಪರಿಶೀಲನೆಗಳು ವೇಗವಾಗಿ ಸಾಲದ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ. ಜನ ಸಮರ್ಥ ಪೋರ್ಟಲ್ ಕೃಷಿ, ಜೀವನೋಪಾಯ ಮತ್ತು ಶಿಕ್ಷಣ ವಿಭಾಗಗಳ ಅಡಿಯಲ್ಲಿ ಸರ್ಕಾರಿ ಯೋಜನೆಗಳ ಸಾಲವನ್ನು ಸುಗಮಗೊಳಿಸುತ್ತದೆ. 13 ಸರ್ಕಾರಿ ಯೋಜನೆಗಳು ಈಗಾಗಲೇ ಜನ ಸಮರ್ಥ ಪೋರ್ಟಲ್‌ನಲ್ಲಿವೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಸೇರಿಸಲಾಗುತ್ತದೆ. ಜನ್ ಸಮರ್ಥ್ ಪೋರ್ಟಲ್ ಅರ್ಹತೆಯನ್ನು ಪರಿಶೀಲಿಸುತ್ತದೆ, ತಾತ್ವಿಕ ಮಂಜೂರಾತಿ ನೀಡುತ್ತದೆ ಮತ್ತು ಆಯ್ಕೆ ಮಾಡಿದ ಬ್ಯಾಂಕ್‌ಗೆ ಅರ್ಜಿಯನ್ನು ಕಳುಹಿಸುತ್ತದೆ. ಇದು ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಫಲಾನುಭವಿಗಳಿಗೆ ಮಾಗಿತಿ ನೀಡುತ್ತದೆ. ಬ್ಯಾಂಕ್ ಶಾಖೆಗಳಿಗೆ ಅನೇಕ ಬಾರಿ ಭೇಟಿ ನೀಡುವ ಅಗತ್ಯವಿರುವುದಿಲ್ಲ.

 

Jan Samarth Portal:

Digital Exhibition of Ministry of Finance & Corporate Affairs:

*****


(Release ID: 1831642) Visitor Counter : 418