ಪ್ರಧಾನ ಮಂತ್ರಿಯವರ ಕಛೇರಿ
LIFE ಆಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ
Posted On:
05 JUN 2022 8:10PM by PIB Bengaluru
ನಮಸ್ಕಾರ!
ನಾವು ಈಗಷ್ಟೇ ಒಳನೋಟಗಳಿಂದ ಕೂಡಿದ ಅಭಿಪ್ರಾಯವನ್ನು ಕೇಳಿದ್ದೇವೆ:
ಯುಎನ್ಇಪಿ ಜಾಗತಿಕ ಮುಖ್ಯಸ್ಥ ಮಾನ್ಯ ಇಂಗರ್ ಆಂಡರ್ಸನ್, ಯುಎನ್.ಡಿ.ಪಿ ಜಾಗತಿಕ ಮುಖ್ಯಸ್ಥ ಮಾನ್ಯ ಅಚಿಮ್ ಸ್ಟೈನರ್, ನನ್ನ ಸ್ನೇಹಿತರಾದ ವಿಶ್ವಬ್ಯಾಂಕ್ ಅಧ್ಯಕ್ಷ ಶ್ರೀ ಡೇವಿಡ್ ಮಲ್ಪಾಸ್, ಲಾರ್ಡ್ ನಿಕೋಲಸ್ ಸ್ಟರ್ನ್, ಶ್ರೀ ಕ್ಯಾಸ್ ಸನ್ ಸ್ಟೈನ್, ನನ್ನ ಸ್ನೇಹಿತರಾದ ಶ್ರೀ ಬಿಲ್ ಗೇಟ್ಸ್, ಶ್ರೀ ಅನಿಲ್ ದಾಸ್ ಗುಪ್ತಾ, ಭಾರತದ ಪರಿಸರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರೇ,
ನಾನು ಅವರೆಲ್ಲರ ಅಭಿಪ್ರಾಯಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಮಹಿಳೆಯರೇ ಮತ್ತು ಮಹನೀಯರೇ,
ಆತ್ಮೀಯ ಸ್ನೇಹಿತರೆ,
ನಮಸ್ತೆ.
ಇಂದಿನ ಈ ಸಂದರ್ಭ ಮತ್ತು ಈ ಸಂದರ್ಭದ ದಿನಾಂಕ, ಎರಡೂ ಬಹಳ ಪ್ರಸ್ತುತವಾಗಿವೆ. ನಾವು ಪರಿಸರ ಆಂದೋಲನಕ್ಕಾಗಿ ಲೈಫ್ ಜೀವನ-ಜೀವನಶೈಲಿಯನ್ನು ಪ್ರಾರಂಭಿಸಿದ್ದೇವೆ. ಈ ವರ್ಷದ ವಿಶ್ವ ಪರಿಸರ ದಿನದ ಅಭಿಯಾನದ ಘೋಷವಾಕ್ಯವೆಂದರೆ -'ಒಂದೇ ಒಂದು ಭೂಮಿ'. ಮತ್ತು ಗಮನ ಕೇಂದ್ರೀಕರಿಸುವ ಕ್ಷೇತ್ರವೆಂದರೆ - "ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕುವುದು" ಎಂಬುದಾಗಿದೆ. ಗಂಭೀರತೆ ಮತ್ತು ಪರಿಹಾರವನ್ನು ಈ ನುಡಿಗಟ್ಟುಗಳಲ್ಲಿ ಸುಂದರವಾಗಿ ಆವರಿಸಲಾಗಿದೆ.
ಸ್ನೇಹಿತರೇ,
ನಮ್ಮ ಗ್ರಹದ ಸವಾಲುಗಳು ನಮಗೆಲ್ಲರಿಗೂ ತಿಳಿದಿವೆ. ಮಾನವ-ಕೇಂದ್ರಿತ, ಸಾಮೂಹಿಕ ಪ್ರಯತ್ನಗಳು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ದೃಢವಾದ ಕ್ರಮಗಳು ಈ ಸಮಯದ ಅಗತ್ಯವಾಗಿದೆ. ಗ್ಲ್ಯಾಸ್ಗೋದಲ್ಲಿ ಕಳೆದ ವರ್ಷ ನಡೆದ ಕಾಪ್-26 ಶೃಂಗಸಭೆಯಲ್ಲಿ. ನಾನು LiFE ಅಭಿಯಾನ- ಪರಿಸರಕ್ಕಾಗಿ ಜೀವನಶೈಲಿ (ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಗಾಗಿ ಪ್ರಸ್ತಾಪಿಸಿದೆ. ಅಂತಹ ಅಭಿಯಾನದ ಪ್ರಯತ್ನಗಳಿಗೆ ಪ್ರಪಂಚದಾದ್ಯಂತದಿಂದಲೂ ಬೆಂಬಲ ದೊರೆಯಿತು. LIFE ಆಂದೋಲನದ ಈ ಸಂಕಲ್ಪವು ಇಂದು ಸಾಕಾರಗೊಳ್ಳುತ್ತಿರುವುದು ನನಗೆ ಸಂತೋಷವಾಗಿದೆ. ಅಂತಹ ದಾಖಲೆಯ ಬೆಂಬಲಕ್ಕಾಗಿ ನನ್ನ ಕೃತಜ್ಞತೆಗಳು. ಹೆಸರೇ ಸೂಚಿಸುವಂತೆ, ಲೈಫ್ ಅಭಿಯಾನ ಒಂದು ಉತ್ತಮ ಗ್ರಹಕ್ಕಾಗಿ ನಾವು ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ನಮ್ಮೆಲ್ಲರ ಮೇಲೆ ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ವಿಧಿಸುತ್ತದೆ. ನಮ್ಮ ಗ್ರಹಕ್ಕೆ ಹೊಂದಿಕೆಯಾಗುವ ಮತ್ತು ಅದಕ್ಕೆ ಹಾನಿಯಾಗದ ಜೀವನಶೈಲಿಯೊಂದಿಗೆ ಬದುಕುವುದು ಲೈಫ್ ದೃಷ್ಟಿಕೋನವಾಗಿದೆ. ಮತ್ತು ಅಂತಹ ಜೀವನಶೈಲಿಯೊಂದಿಗೆ ಬದುಕುವವರನ್ನು 'ಗ್ರಹದ-ಪರವಾದ ಜನರು' ಎಂದು ಕರೆಯಲಾಗುತ್ತದೆ. ಲೈಫ್ ಅಭಿಯಾನ ಭೂತಕಾಲದಿಂದ ಎರವಲು ಪಡೆದು, ವರ್ತಮಾನದಲ್ಲಿ ಕಾರ್ಯನಿರ್ವಹಿಸಿ, ಭವಿಷ್ಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ಸ್ನೇಹಿತರೆ
ಭೂಮಿಯ ದೀರ್ಘಾಯುಷ್ಯದ ಹಿಂದಿನ ರಹಸ್ಯವೆಂದರೆ ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಹೊಂದಿದ್ದ ಸಾಮರಸ್ಯ. ಸಂಪ್ರದಾಯದ ವಿಷಯಕ್ಕೆ ಬಂದಾಗ, ಪ್ರಪಂಚದ ಬಹುತೇಕ ಎಲ್ಲಾ ಭಾಗಗಳು, ಪರಿಸರ ಸಮಸ್ಯೆಗಳಿಗೆ ಸರಳ ಮತ್ತು ಸುಸ್ಥಿರ ಪರಿಹಾರವನ್ನು ತೋರಿಸುವ ಸಂಪ್ರದಾಯಗಳನ್ನು ಹೊಂದಿವೆ.
ಘಾನಾದಲ್ಲಿ, ಸಾಂಪ್ರದಾಯಿಕ ನಿಯಮಗಳು ಆಮೆ ಸಂರಕ್ಷಣೆಗೆ ನೆರವಾಗಿವೆ. ತಾಂಜೇನಿಯಾದ ಸೆರೆಂಗೆಟಿ ಪ್ರದೇಶದಲ್ಲಿ, ಆನೆಗಳು ಮತ್ತು ಬುಷ್ ಬಕ್ಸ್ (ಜಿಂಕೆ ಜಾತಿಯ ಪ್ರಾಣಿ) ಪವಿತ್ರವಾಗಿವೆ.
ಹೀಗಾಗಿ, ಅವು ಅಕ್ರಮ ಬೇಟೆಯಿಂದ ಕಡಿಮೆ ಸಂಕಷ್ಟ ಎದುರಿಸಿವೆ. ಒಕ್ಪಾಗಾ ಮತ್ತು ಒಗ್ರಿಕಿ ಮರಗಳು ಇಥಿಯೋಪಿಯಾದಲ್ಲಿ ವಿಶೇಷವಾಗಿವೆ. ಜಪಾನ್ ನಲ್ಲಿ ಫ್ಯೂರೋಶಿಕಿ ಇದೆ, ಅದು ಪ್ಲಾಸ್ಟಿಕ್ ಗೆ ಸುಸ್ಥಿರ ಪರ್ಯಾಯವಾಗಬಹುದು. ಸ್ವೀಡನ್ ನ ಲಗೋಮ್ ತತ್ವಶಾಸ್ತ್ರವು ಸಮತೋಲಿತ ಜೀವನವನ್ನು ಉತ್ತೇಜಿಸುತ್ತದೆ. ಭಾರತದಲ್ಲಿ ನಾವು ಪ್ರಕೃತಿಯನ್ನು ದೈವತ್ವದೊಂದಿಗೆ ಸಮೀಕರಿಸಿದ್ದೇವೆ. ನಮ್ಮ ದೇವರುಗಳು ಮತ್ತು ದೇವತೆಗಳು ಅವುಗಳಿಗೆ ಸಂಬಂಧಿಸಿದ ಸಸ್ಯಗಳು ಮತ್ತು ಪ್ರಾಣಿಗಳನ್ನು ಹೊಂದಿದ್ದಾರೆ. ನಾನು ಕೆಲವು ಉದಾಹರಣೆಗಳನ್ನು ಮಾತ್ರ ನೀಡಿದ್ದೇನೆ. ಅಂತಹ ಇನ್ನೂ ಅನೇಕ ರೂಢಿಗಳಿವೆ. ಕಡಿಮೆ ಬಳಸಿ (ರೆಡ್ಯೂಸ್), ಮರುಬಳಕೆ ಮಾಡಿ (ರಿ ಯೂಸ್) ಮತ್ತು ಪುನರ್ಬಳಕೆ (ರಿಸೈಕಲ್) ಮಾಡುವ ಪರಿಕಲ್ಪನೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ವೃತ್ತಾಕಾರದ ಆರ್ಥಿಕತೆಯು ನಮ್ಮ ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ.
ಸ್ನೇಹಿತರೇ,
ನಮ್ಮ 1.3 ಶತಕೋಟಿ ಭಾರತೀಯರ ಕಾರಣದಿಂದಾಗಿ, ನಾವು ನಮ್ಮ ದೇಶದ ಪರಿಸರಕ್ಕಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ, ಅವರಿಗೆ ಧನ್ಯವಾದಗಳು. ನಮ್ಮ ಅರಣ್ಯ ಪ್ರದೇಶವು ಹೆಚ್ಚಾಗುತ್ತಿದೆ ಮತ್ತು ಸಿಂಹಗಳು, ಹುಲಿಗಳು, ಚಿರತೆಗಳು, ಆನೆಗಳು ಮತ್ತು ಘೇಂಡಾಮೃಗಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇ.40ರಷ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ ರೂಪಿಸುವ ಗುರಿಯನ್ನು ಗಡುವಿಗಿಂತ 9 ವರ್ಷ ಮೊದಲೇ ಸಾಧಿಸಲಾಗಿದ್ದು, ಇದು ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 370 ದಶಲಕ್ಷ ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಇದು ವರ್ಷಕ್ಕೆ ಸುಮಾರು 5೦ಶತಕೋಟಿ ಯೂನಿಟ್ ವಿದ್ಯುತ್ ಉಳಿತಾಯಕ್ಕೆ ಕೊಡುಗೆ ನೀಡಿದೆ. ಇದು ವರ್ಷಕ್ಕೆ ಸುಮಾರು 4೦ ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಿದೆ. ನಾವು ನವೆಂಬರ್ 2022ಕ್ಕೆ 5 ತಿಂಗಳ ಮೊದಲೇ ಪೆಟ್ರೋಲ್ ನಲ್ಲಿ ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿ ಸಾಧಿಸಿದ್ದೇವೆ.
2013-14ರಲ್ಲಿ ಶೇ.1.5ರಷ್ಟಿದ್ದ ಎಥೆನಾಲ್ ಮಿಶ್ರಣ, 2019-20 ರಲ್ಲಿ ಶೇ.5ರಷ್ಟಾಯಿತು. ಇದು ಭಾರತದ ಇಂಧನ ದಕ್ಷತೆಯನ್ನು ಹೆಚ್ಚಿಸಿದ್ದು, ಕಚ್ಚಾತೈಲ ಆಮದನ್ನು 5.5 ಶತಕೋಟಿ ಡಾಲರ್ ನಷ್ಟು ಕಡಿಮೆ ಮಾಡಿದೆ. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು 2.7ದಶಲಕ್ಷ ಟನ್ ಗಳಷ್ಟು ತಗ್ಗಿಸಿದೆ. ಇದು ರೈತರ ಆದಾಯವನ್ನು ಸುಮಾರು 5.5 ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸಿದೆ. ನವೀಕರಿಸಬಹುದಾದ ಇಂಧನವು ವ್ಯಾಪಕವಾಗಿ ಜನಪ್ರಿಯವಾಗುತ್ತಿದೆ ಮತ್ತು ನಮ್ಮ ಸರ್ಕಾರವು ಈ ವಲಯದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದೆ.
ಸ್ನೇಹಿತರೇ,
ಮುಂದಿನ ಮಾರ್ಗವು ನಾವೀನ್ಯತೆ ಮತ್ತು ಮುಕ್ತತೆಯ ಕುರಿತದ್ದಾಗಿದೆ. ಪ್ರತಿಯೊಂದು ಹಂತದಲ್ಲೂ, ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸುವ ನಾವೀನ್ಯದಾರರನ್ನು ನಾವು ಪ್ರೋತ್ಸಾಹಿಸೋಣ. ಇದನ್ನು ಸಾಧಿಸಲು ತಂತ್ರಜ್ಞಾನವು ಉತ್ತಮ ಬೆಂಬಲ ನೀಡುತ್ತದೆ. ಸಂಪ್ರದಾಯ ಮತ್ತು ತಂತ್ರಜ್ಞಾನವು ಜೊತೆಯಾದಾಗ, ಲೈಫ್ ದೃಷ್ಟಿಕೋನವನ್ನು ಮುಂದೆ ತೆಗೆದುಕೊಂಡು ಹೋಗಲಾಗುತ್ತದೆ. ಶೈಕ್ಷಣಿಕ ಜಗತ್ತಿನಲ್ಲಿ ಇರುವವರು, ಸಂಶೋಧಕರು ಮತ್ತು ನಮ್ಮ ಕ್ರಿಯಾತ್ಮಕ ನವೋದ್ಯಮಿಗಳು ಈ ಬಗ್ಗೆ ಚಿಂತಿಸಬೇಕೆಂದು ನಾನು ವಿಶೇಷವಾಗಿ ಒತ್ತಾಯಿಸುತ್ತೇನೆ. ಈ ನಿರ್ಣಾಯಕ ಸಮಯದಲ್ಲಿ ಅವರ ಯುವ ಶಕ್ತಿಯು ಜಗತ್ತಿಗೆ ನಿಖರವಾಗಿ ಅಗತ್ಯವಾಗಿದೆ. ನಮ್ಮ ಅತ್ಯುತ್ತಮ ರೂಢಿಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಇತರರ ಯಶಸ್ವಿ ರೂಢಿಗಳಿಂದ ಕಲಿಯಲು ನಾವು ಮುಕ್ತವಾಗಿರಬೇಕು.
ಮಹಾತ್ಮಾ ಗಾಂಧಿಯವರು ಶೂನ್ಯ ಇಂಗಾಲದ ಜೀವನಶೈಲಿಯ ಬಗ್ಗೆ ಮಾತನಾಡಿದ್ದರು. ನಮ್ಮ ದೈನಂದಿನ ಜೀವನದಲ್ಲಿ ನಾವು ಸುಸ್ಥಿರ ಆಯ್ಕೆಗಳನ್ನು ನಾವು ಆರಿಸಿಕೊಳ್ಳೋಣ. ನಾವು ಮರು-ಬಳಕೆ, ಕಡಿಮೆ ಬಳಕೆ ಮತ್ತು ಪುನರ್ ಬಳಕೆ ಎಂಬ ತತ್ವವನ್ನು ಅನುಸರಿಸೋಣ. ನಮ್ಮ ಗ್ರಹವು ಒಂದೇ ಆದರೆ ನಮ್ಮ ಪ್ರಯತ್ನಗಳು ಅನೇಕವಾಗಿರಬೇಕು. ಒಂದು ಭೂಮಿ, ಅನೇಕ ಪ್ರಯತ್ನಗಳು.
ಸ್ನೇಹಿತರೇ,
ಉತ್ತಮ ಪರಿಸರಕ್ಕಾಗಿ ಮತ್ತು ಜಾಗತಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಯಾವುದೇ ಪ್ರಯತ್ನವನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ. ನಮ್ಮ ಹಿಂದಿನ ಸಾಧನೆಗಳು ಸ್ವತಃ ಮಾತನಾಡುತ್ತದೆ. ಯೋಗವನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಮುಂದಾಳತ್ವ ವಹಿಸಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಅಂತಾರರಾಷ್ಟ್ರೀಯ ಸೌರ ಸಹಯೋಗ, ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್, ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯಕ್ಕಾಗಿ ಒಕ್ಕೂಟದಂತಹ ಉಪಕ್ರಮಗಳು ಪ್ರಮುಖ ಕೊಡುಗೆಗಳನ್ನು ನೀಡುತ್ತಿವೆ. ಈ ಪ್ರಯತ್ನಗಳನ್ನು ಜಗತ್ತು ಬೆಂಬಲಿಸುತ್ತಿದೆ ಎಂಬುದು ನಮಗೆ ಸಂತಸ ತಂದಿದೆ. ಲೈಫ್ ಆಂದೋಲನವು ನಮ್ಮನ್ನು ಮತ್ತಷ್ಟು ಒಗ್ಗೂಡಿಸುತ್ತದೆ ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂಬ ವಿಶ್ವಾನ ನನಗಿದೆ. ಈ ಪಯಣದ ಭಾಗವಾಗಲು ನಾನು ಮತ್ತೊಮ್ಮೆ ಜಗತ್ತನ್ನು ಆಹ್ವಾನಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಮ್ಮ ಗ್ರಹವನ್ನು ಉತ್ತಮಪಡಿಸೋಣ. ನಾವು ಒಟ್ಟಾಗಿ ಕಾರ್ಯಪ್ರವೃತ್ತರಾಗೋಣ. ಇದು ಕ್ರಮ ಕೈಗೊಳ್ಳುವ ಸಮಯ. ಲೈಫ್ ಗಾಗಿ ಕ್ರಮ, ಪರಿಸರಕ್ಕಾಗಿ ಜೀವನಶೈಲಿಗಾಗಿ ಕ್ರಮ ಕೈಗೊಳ್ಳೋಣ.
ಧನ್ಯವಾದಗಳು.
ತುಂಬಾ ಧನ್ಯವಾದಗಳು.
*****
(Release ID: 1831477)
Visitor Counter : 167
Read this release in:
Odia
,
Telugu
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Malayalam