ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯ ಪ್ರದೇಶದ ನವೋದ್ಯಮ ನೀತಿ ಕಾರ್ಯಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.

Posted On: 13 MAY 2022 10:38PM by PIB Bengaluru

ನಮಸ್ಕಾರ!
ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜೀ, ಮಧ್ಯ ಪ್ರದೇಶ ಸರಕಾರದ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ, ನವೋದ್ಯಮ ಲೋಕದ ನನ್ನ ಮಿತ್ರರೇ, ಮಹಿಳೆಯರೇ ಮತ್ತು ಮಹನೀಯರೇ!
ನವೋದ್ಯಮಗಳಿಗೆ ಸಂಬಂಧಿಸಿದ ಯುವ ಪ್ರತಿಭೆಗಳ ಜೊತೆ ನಾನು ಸಂವಾದ ನಡೆಸಿದ್ದನ್ನು ನೀವೆಲ್ಲ ನೋಡಿರಬಹುದು ಮತ್ತು ಹೃದಯದಲ್ಲಿ ಉತ್ಸಾಹ ಇದ್ದರೆ, ಹೊಸ ಭರವಸೆಗಳಿದ್ದರೆ ಮತ್ತು ಅನ್ವೇಷಣೆಯ ಸ್ಫೂರ್ತಿ, ಉತ್ಸಾಹ ಇದ್ದರೆ ಅದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬ ಬಗ್ಗೆ ನನಗಂತೂ ಸ್ಪಷ್ಟವಾಗಿದೆ ಮತ್ತು ನಿಮಗೂ ಇದರ ಮನವರಿಕೆಯಾಗಿರಬಹುದು. ನನಗೆ ನಿಮ್ಮೆಲ್ಲರೊಡನೆ ಮಾತನಾಡುವ ಅವಕಾಶ ಲಭ್ಯವಾಗಿದೆ. ಮತ್ತು ಈ ಸಂವಾದವನ್ನು ಕೇಳಿದವರು ನಮ್ಮ ದೇಶದಲ್ಲಿ ಪರಿಣಾಮಕಾರಿಯಾದಂಥ ನವೋದ್ಯಮ ನೀತಿ ಇರುವುದನ್ನು ಮತ್ತು ನವೋದ್ಯಮ ನಾಯಕತ್ವ ಕೂಡಾ ಶ್ರದ್ಧೆಯುಳ್ಳದ್ದೂ,  ದೃಢವೂ ಅಗಿರುವುದರ ಬಗ್ಗೆ ಪೂರ್ಣ ವಿಶ್ವಾಸದಿಂದ ಹೇಳಬಹುದಾಗಿದೆ. ಆದುದರಿಂದ ದೇಶದ ಅಭಿವೃದ್ಧಿ ಹೊಸ ಯುವಶಕ್ತಿಯೊಂದಿಗೆ ವೇಗವನ್ನು ಪಡೆದುಕೊಳ್ಳುತ್ತಿದೆ. ಮಧ್ಯಪ್ರದೇಶದಲ್ಲಿಂದು ನವೋದ್ಯಮ ಪೋರ್ಟಲ್ ಮತ್ತು ಐ-ಹಬ್ ಇಂದೋರ್ ಗಳನ್ನು ಆರಂಭ ಮಾಡಲಾಗಿದೆ. ನವೋದ್ಯಮಗಳಿಗೆ ಮತ್ತು ಇನ್ಕ್ಯುಬೇಟರುಗಳಿಗೆ ಮಧ್ಯಪ್ರದೇಶದ ನವೋದ್ಯಮ ನೀತಿಯಡಿ ಹಣಕಾಸು ನೆರವನ್ನು ನೀಡಲಾಗುತ್ತಿದೆ. ಈ ಪ್ರಯತ್ನಗಳಿಗಾಗಿ ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದುದಕ್ಕಾಗಿ ನಾನು ಮಧ್ಯ ಪ್ರದೇಶ ಸರಕಾರವನ್ನು, ದೇಶದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಮತ್ತು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.   
 
ಸ್ನೇಹಿತರೇ,
ನಿಮಗೆ ನೆನಪಿರಬಹುದು, 2014ರಲ್ಲಿ ನಮ್ಮ ಸರಕಾರ ರಚನೆಯಾದಾಗ ದೇಶದಲ್ಲಿ ಸುಮಾರು 300-400 ನವೋದ್ಯಮಗಳಿದ್ದವು. ಮತ್ತು ನವೋದ್ಯಮ ಎಂಬ ಶಬ್ದ, ಪದ ಕೇಳಿ ಬರುತ್ತಿರಲಿಲ್ಲ ಮತ್ತು ಆ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಆದರೆ ಇಂದು ಎಂಟು ವರ್ಷಗಳ  ಬಹಳ ಕಡಿಮೆ ಅವಧಿಯಲ್ಲಿ ಭಾರತದ ನವೋದ್ಯಮಗಳ ಜಗತ್ತಿನಲ್ಲಿ  ಸಂಪೂರ್ಣ ಪರಿವರ್ತನೆ ಆಗಿದೆ. ಇಂದು ನಮ್ಮ ದೇಶದಲ್ಲಿ ಸುಮಾರು 70 ಸಾವಿರ ಮಾನ್ಯತೆ ಪಡೆದ,ಗುರುತಿಸಲ್ಪಟ್ಟ ನವೋದ್ಯಮಗಳಿವೆ. ಇಂದು ಭಾರತವು ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದ ದೇಶವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಯುನಿಕಾರ್ನ್ ಹಬ್ ಗಳಲ್ಲಿ ನಾವು  ಪರಿಗಣಿಸಬೇಕಾದ ಶಕ್ತಿಯಾಗಿ ಮೂಡಿ ಬರುತ್ತಿದ್ದೇವೆ. ಭಾರತದಲ್ಲಿಂದು ನವೋದ್ಯಮವೊಂದು ಸರಾಸರಿ 8-10 ದಿನಗಳಲ್ಲಿ ಯೂನಿಕಾರ್ನ್ ಆಗಿ ಬದಲಾಗುತ್ತಿದೆ. ಸುಮ್ಮನೆ ಕಲ್ಪಿಸಿಕೊಳ್ಳಿ!. ಯೂನಿಕಾರ್ನ್ ಆಗಿ ಪರಿವರ್ತನೆ ಎಂದರೆ ಇಷ್ಟೊಂದು ಕಿರು ಅವಧಿಯಲ್ಲಿ ಶೂನ್ಯದಿಂದ ಆರಂಭ ಮಾಡಿ 7000 ಕೋ.ರೂ.ಗಳವರೆಗಿನ ಮೌಲ್ಯವನ್ನು ಗಳಿಸಿಕೊಳ್ಳುವುದು. ಮತ್ತು ಇಂದು ಪ್ರತೀ 8-10 ದಿನಗಳಲ್ಲಿ ಈ ದೇಶದಲ್ಲಿ ಹೊಸ ಯೂನಿಕಾರ್ನ್ ನ್ನು ನಮ್ಮ ಯುವ ಜನತೆ ಹುಟ್ಟು ಹಾಕುತ್ತಿದ್ದಾರೆ.  
 
 ಸ್ನೇಹಿತರೇ,
ಇದು ಭಾರತದ ಯುವಜನತೆಯ ಶಕ್ತಿ, ಯಶಸ್ಸಿನ ಹೊಸ ಎತ್ತರಗಳನ್ನು ಸಾಧಿಸುವ ಇಚ್ಛಾಶಕ್ತಿಗೆ ಒಂದು  ಉದಾಹರಣೆ. ಮತ್ತು ನಾನು ಆರ್ಥಿಕ ಜಗತ್ತಿನ ನೀತಿಗಳನ್ನು ಅಭ್ಯಸಿಸುತ್ತಿರುವ ತಜ್ಞರಿಗೆ ಒಂದು ಅಂಶವನ್ನು ಗಮನಿಸುವಂತೆ ಹೇಳುತ್ತೇನೆ. ಭಾರತದಲ್ಲಿ ನಮ್ಮ ನವೋದ್ಯಮಗಳ ಮೊತ್ತ, ಗಾತ್ರ ಬಹಳ ದೊಡ್ಡದಾಗಿದೆ ಮತ್ತು ಅದರ ವೈವಿಧ್ಯತೆಯೂ ಅಷ್ಟೇ ವಿಸ್ತಾರವಾಗಿದೆ. ನವೋದ್ಯಮಗಳು ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ ಅಥವಾ ಕೆಲವೇ ಮೆಟ್ರೋ ನಗರಗಳಿಗೆ ಸೀಮಿತವಾಗಿರುವುದಲ್ಲ. ಈ ನವೋದ್ಯಮಗಳು ಭಾರತದ ಹಲವಾರು ರಾಜ್ಯಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿ ಹರಡಿವೆ. ಇವೆಲ್ಲಕ್ಕಿಂತ ಮಿಗಿಲಾಗಿ ಸುಮಾರು 50ಕ್ಕೂ ಅಧಿಕ ವಿವಿಧ ಮಾದರಿಯ ನವೋದ್ಯಮಗಳು ವಿವಿಧ ಕೈಗಾರಿಕೋದ್ಯಮಗಳಿಗೆ ಸಂಬಂಧಿಸಿದವಾಗಿವೆ. ಇವುಗಳು ಪ್ರತೀ ರಾಜ್ಯ ಮತ್ತು ದೇಶದ 650ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹರಡಿವೆ. ಸುಮಾರು 50 ಪ್ರತಿಶತದಷ್ಟು ನವೋದ್ಯಮಗಳು ಟಯರ್ 2 ಮತ್ತು ಟಯರ್ 3 ನಗರಗಳಲ್ಲಿವೆ. ಕೆಲವೊಮ್ಮೆ ಜನರಲ್ಲಿ ಒಂದು ನಂಬಿಕೆ ಇರುತ್ತದೆ, ನವೋದ್ಯಮಗಳೆಂದರೆ ಕಂಪ್ಯೂಟರಿಗೆ ಸಂಬಂಧಿಸಿದವು ಅಥವಾ ಯುವ ಜನತೆಯ ವ್ಯಾಪಾರೋದ್ಯಮ ಎಂಬ ಭಾವನೆ ಇರುತ್ತದೆ. ಇದು ಬರೇ ಭ್ರಮೆ. ವಾಸ್ತವ ಏನೆಂದರೆ ನವೋದ್ಯಮಗಳ ವ್ಯಾಪ್ತಿ ಬಹಳ ವಿಸ್ತಾರ. ನವೋದ್ಯಮಗಳು ನಮಗೆ ಕಠಿಣ ಸವಾಲುಗಳಿಗೆ ಸರಳ ಪರಿಹಾರಗಳನ್ನು ಒದಗಿಸುತ್ತವೆ. ಮತ್ತು ನಿನ್ನೆಯ ನವೋದ್ಯಮಗಳು ಇಂದು ಬಹುರಾಷ್ಟ್ರೀಯವಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಂದು ಕೃಷಿ, ರಿಟೈಲ್ ವ್ಯಾಪಾರ ಹಾಗು ಆರೋಗ್ಯ ವಲಯಗಳಲ್ಲಿ ಹೊಸ ನವೋದ್ಯಮಗಳು ಉದಯಿಸುತ್ತಿರುವುದು ನನಗೆ ಸಂತಸ ತಂದಿದೆ.
ಸ್ನೇಹಿತರೇ,
ಇಂದು ಜಗತ್ತು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಕೊಂಡಾಡುವುದನ್ನು ನಾವು ಕೇಳುವಾಗ,  ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುತ್ತಾರೆ. ಆದರೆ ಸ್ನೇಹಿತರೇ, ಅಲ್ಲೊಂದು ಪ್ರಶ್ನೆ ಇದೆ. ನವೋದ್ಯಮ ಶಬ್ದ 8 ವರ್ಷಗಳ ಹಿಂದೆ ತಾಂತ್ರಿಕ ಜಗತ್ತಿನ ಕೆಲವು ಕೋನಗಳಲ್ಲಿ ಚರ್ಚೆಯ ಭಾಗವಾಗಿತ್ತು. ಅದೀಗ ಸಾಮಾನ್ಯ ಭಾರತೀಯ ಯುವಜನತೆಯ ಕನಸುಗಳನ್ನು ಈಡೇರಿಸುವ ಶಕ್ತಿ ಶಾಲಿ ಮಾಧ್ಯಮವಾಗಿದೆ. ಅದು ಹೇಗೆ ಈ ಸಂಗತಿಯು ಅವರ ಪ್ರತಿನಿತ್ಯದ ಸಂಭಾಷಣೆಯ ಭಾಗವಾಯಿತು?. ಇಂತಹ ಒಂದು ಗಮನಾರ್ಹವಾದ ಬದಲಾವಣೆ ಹೇಗಾಯಿತು? ಅದು ಇದ್ದಕ್ಕಿದ್ದಂತೆ ಆದುದಲ್ಲ. ಸ್ಪಷ್ಟವಾದ ಗುರಿಗಳು, ಅತ್ಯಂತ ಚಿಂತನಾಶೀಲವಾಗಿ ರೂಪಿಸಲ್ಪಟ್ಟ ವ್ಯೂಹದ ಅಡಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾದ ದಿಕ್ಕುಗಳಿಂದಾಗಿ ಈ ಬದಲಾವಣೆಗಳಾದವು ಮತ್ತು ನಾನು ಇಂದು  ಇಂದೋರಿನ ನೆಲದೆದುರು ನವೋದ್ಯಮಗಳ ಜಗತ್ತಿನ ಯುವಜನತೆಯನ್ನು ಭೇಟಿ ಮಾಡಿದ್ದೇನೆ. ಇಂದು ನಿಮಗೆ ಕೆಲವು ಸಂಗತಿಗಳನ್ನು ತಿಳಿಸಬೇಕು ಎಂಬ ಭಾವನೆ ನನ್ನದಾಗಿದೆ. ನವೋದ್ಯಮ ಕ್ರಾಂತಿ ಇಂದಿನ ಸ್ವರೂಪವನ್ನು ಹೇಗೆ ಪಡೆದುಕೊಂಡಿತು?. ಇದನ್ನು ಪ್ರತಿಯೊಬ್ಬ ಯುವಜನತೆಯೂ  ತಿಳಿದುಕೊಳ್ಳುವುದು ಬಹಳ ಅವಶ್ಯ ಎಂಬುದು ನನ್ನ ಭಾವನೆ. ಇದರಲ್ಲಿ ಪ್ರೇರಣೆಯೂ ಅಡಕವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು “ಅಜಾದಿ ಕಾ ಅಮೃತಕಾಲ”ಕ್ಕೆ ಬಹಳ ದೊಡ್ಡ ವೇಗವರ್ಧಕವಾಗಲಿದೆ.   
ಸ್ನೇಹಿತರೇ,
ಭಾರತದಲ್ಲಿ ಸದಾ ಕಾಲವೂ ಅನ್ವೇಷಣೆಗಾಗಿ ಮತ್ತು ಸಮಸ್ಯೆಗಳನ್ನು ಹೊಸ ಚಿಂತನೆಯಿಂದ ಪರಿಹರಿಸುವ ನಿಟ್ಟಿನಲ್ಲಿ ಒತ್ತಡ, ಆಸಕ್ತಿ  ಇತ್ತು. ಮಾಹಿತಿ ತಂತ್ರಜ್ಞಾನ ಕ್ರಾಂತಿ ಕಾಲದಲ್ಲಿ ಇದು  ಬಹಳ ಚೆನ್ನಾಗಿ ನಮ್ಮ ಅನುಭವಕ್ಕೆ ಬಂದಿದೆ. ಆದರೆ ದುರದೃಷ್ಟವಶಾತ್,  ಆ ಕಾಲದಲ್ಲಿ ಸಿಗಬೇಕಾಗಿದ್ದಂತಹ ಪ್ರೋತ್ಸಾಹ ಮತ್ತು ಬೆಂಬಲ ನಮ್ಮ ಯುವ ಜನತೆಗೆ ದೊರೆಯಲಿಲ್ಲ. ಐ.ಟಿ. ಕ್ರಾಂತಿಯಿಂದ ಅಭಿವೃದ್ಧಿಗೊಂಡ ಪರಿಸರವನ್ನು ಸೂಕ್ತ ರೀತಿಯಲ್ಲಿ ಮತ್ತು ಸೂಕ್ತ ದಿಕ್ಕಿನಲ್ಲಿ  ಬಳಸಿಕೊಳಬೇಕಾಗಿತ್ತು. ಆದರೆ ಅದಾಗಲಿಲ್ಲ. ನಾವು ಇಡೀ ದಶಕವು ಹಗರಣಗಳಲ್ಲಿ, ನೀತಿ ಏರು ಪೇರುಗಳಲ್ಲಿ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗೇಳುತ್ತಿದ್ದುದನ್ನು ನೋಡಿದ್ದೇವೆ. ಈ ದೇಶದ ಒಂದು ತಲೆಮಾರಿನ ಕನಸುಗಳು ಕಮರಿ ಹೋದವು. ನಮ್ಮ ಯುವಜನತೆಯಲ್ಲಿ ಚಿಂತನೆಗಳಿದ್ದವು, ಅನ್ವೇಷಣೆಯತ್ತ ಆಸಕ್ತಿಯೂ, ತುಡಿತವೂ ಇತ್ತು ಆದರೆ ಪ್ರತಿಯೊಂದೂ ಹಿಂದಿನ ಸರಕಾರಗಳ ನೀತಿಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು ಇಲ್ಲವೇ ನೀತಿಗಳಿಲ್ಲದೆ ಬಸವಳಿಯಿತು. 
 ಸ್ನೇಹಿತರೇ,
2014ರ ಬಳಿಕ ಚಿಂತನೆಗಳ ಈ ಶಕ್ತಿಯನ್ನು ಮತ್ತು ಯುವಜನತೆಯಲ್ಲಿರುವ ಅನ್ವೇಷಣೆಯ ಈ ಸ್ಫೂರ್ತಿ, ಉತ್ಸಾಹವನ್ನು  ನಾವು ಪರಿಷ್ಕರಿಸಿದೆವು. ನಾವು ಭಾರತದ ಯುವಜನತೆಯ ಶಕ್ತಿಯಲ್ಲಿ ನಂಬಿಕೆ ಇಟ್ಟೆವು. ನಾವು “ಚಿಂತನೆಯಿಂದ ಅನ್ವೇಷಣೆಯಿಂದ ಕೈಗಾರಿಕೋದ್ಯಮ”ಕ್ಕಾಗಿ ಸಂಪೂರ್ಣ ಹಾದಿಯನ್ನು ತಯಾರಿಸಿದೆವು ಮತ್ತು ಮೂರು ಸಂಗತಿಗಳ ಬಗ್ಗೆ ಗಮನ ಕೇಂದ್ರೀಕರಿಸಿದೆವು.
ಮೊದಲನೆಯದ್ದು-“ಚಿಂತನೆ,ಅನ್ವೇಷಣೆ, ಇನ್ಕ್ಯುಬೇಟ್ ಮತ್ತು ಕೈಗಾರಿಕೋದ್ಯಮ” ಕ್ಕೆ ಸಂಯೋಜಿಸಲ್ಪಟ್ಟ ಸಂಸ್ಥೆಗಳಲ್ಲಿ ಮೂಲಸೌಕರ್ಯ ನಿರ್ಮಾಣ.
ಎರಡನೆಯದ್ದು-ಸರಕಾರಿ ಪ್ರಕ್ರಿಯೆಗಳ ಸರಳೀಕರಣ.
ಮೂರನೆಯದ್ದು-ಅನ್ವೇಷಣೆಗಾಗಿ ಮನಸ್ಥಿತಿಯ ಪರಿವರ್ತನೆ; ಹೊಸ ಪರಿಸರ ವ್ಯವಸ್ಥೆಯ ನಿರ್ಮಾಣ.
 ಸ್ನೇಹಿತರೇ,
ಈ ಎಲ್ಲಾ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ವಿವಿಧ ರಂಗಗಳಲ್ಲಿ ಒಗ್ಗೂಡಿ ಕಾರ್ಯತತ್ಪರರಾದೆವು. ಇವುಗಳಲ್ಲಿ ಒಂದು ಹ್ಯಾಕಥಾನ್ ಗಳು. ಏಳು-ಎಂಟು ವರ್ಷಗಳಿಗೆ ಹಿಂದೆ, ದೇಶದಲ್ಲಿ ಹ್ಯಾಕಥಾನ್ ಗಳು ನಡೆಯಲಾರಂಭಿಸಿದಾಗ ಅವುಗಳು ನವೋದ್ಯಮಗಳಿಗೆ ಬಲಿಷ್ಠ ನೆಲೆಗಟ್ಟು ಹಾಕಬಲ್ಲವು ಎಂಬ ಚಿಂತನೆ, ಭಾವನೆ ಯಾರಿಗೂ ಇರಲಿಲ್ಲ. ನಾವು ದೇಶದ ಯುವಜನತೆಯ ಎದುರು ಸವಾಲನ್ನು ಎಸೆದೆವು. ಮತ್ತು ಯುವಜನತೆ ಸವಾಲನ್ನು ಅಂಗೀಕರಿಸಿತು ಮತ್ತು ಪರಿಹಾರಗಳನ್ನು ಮುಂದಿಟ್ಟಿತು. ದೇಶದ ಲಕ್ಷಾಂತರ ಯುವಜನತೆ ಜೀವನದಲ್ಲಿ ಒಂದು ಉದ್ದೇಶ ಕಂಡರು ಮತ್ತು ಹ್ಯಾಕಥಾನ್ ನಿಂದಾಗಿ ಅವರಲ್ಲಿ ಜವಾಬ್ದಾರಿಯ ಭಾವನೆ ಹೆಚ್ಚಿತು. ದೇಶವು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ತಾವೂ ಕಾಣಿಕೆ ಕೊಡಬಹುದು ಎಂಬ ಭಾವನೆಯನ್ನು ಉದ್ದೀಪಿಸಿತು. ಈ ಉತ್ಸಾಹ ನವೋದ್ಯಮಗಳ ಉಗಮಕ್ಕೆ ವೇದಿಕೆಯನ್ನು ಒದಗಿಸಿತು. ನಾವು ಸರಕಾರದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಬಗ್ಗೆಯೇ ಮಾತನಾಡುವುದಾದರೆ ಸುಮಾರು 15 ಲಕ್ಷ ಇಂತಹ ಪ್ರತಿಭಾಸಂಪನ್ನ ಯುವಜನರು ಕಳೆದ ವರ್ಷಗಳಲ್ಲಿ ಇದರ ಜೊತೆ ಸಂಯೋಜಿಸಲ್ಪಟ್ಟಿದ್ದಾರೆ. ಬಹುಷಃ ಇಲ್ಲಿ ಕುಳಿತಿರುವ ನಿಮ್ಮಲ್ಲಿಯೂ ಕೆಲವರು ಇದರ ಅಂಗವಾಗಿರಬಹುದು. ಅಂತಹ ಹ್ಯಾಕಥಾನ್ ಗಳಲ್ಲಿ ಕಲಿಯುವುದಕ್ಕೆ ಮತ್ತು ಅರ್ಥಮಾಡಿಕೊಳ್ಳುವುದಕ್ಕೆ ಹಲವಾರು ಹೊಸ ಸಂಗತಿಗಳು ಇದ್ದುದನ್ನು ನಾನು ನೆನಪಿಟ್ಟುಕೊಂಡಿದ್ದೇನೆ, ಯಾಕೆಂದರೆ ನಾನದನ್ನು ಆನಂದಿಸಿದ್ದೇನೆ!. ಎರಡು ದಿನಗಳ ಕಾಲ ಯುವಜನತೆಯ ಹ್ಯಾಕಥಾನ್ ಕಾರ್ಯಚಟುವಟಿಕೆಯ ಮೇಲೆ ನಾನೂ ನಿಕಟ ನಿಗಾ ಇಡುತ್ತಿದ್ದೆ. ನಾನೂ ರಾತ್ರಿ 12,1,2 ಗಂಟೆಯವರೆಗೂ ಅವರೊಂದಿಗೆ ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ನಾನವರ ಹವ್ಯಾಸಗಳನ್ನು, ಬದ್ಧತೆಯನ್ನು ಗಮನಿಸುತ್ತಿದ್ದೆ. ನಾನವರ ಕಾರ್ಯಚಟುವಟಿಕೆಗಳನ್ನು,ಅವರು ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ರೀತಿಯನ್ನು ಮತ್ತು ಯಶಸ್ಸು ದೊರೆತಾಗ ಕಾಂತಿಯಿಂದ  ಕೂಡಿದ  ಅವರ ಮುಖಗಳನ್ನು ನೋಡುತ್ತಿದ್ದೆ. ನಾನು ಈ ಎಲ್ಲ ಸಂಗತಿಗಳನ್ನು ನಿಕಟವಾಗಿ ಗಮನಿಸುತ್ತಿದ್ದೆ. ಮತ್ತು ಈಗ ಕೂಡಾ ದೇಶದ ಯಾವುದಾದರೊಂದು ಭಾಗದಲ್ಲಿ ಹ್ಯಾಕಥಾನ್ ನಡೆಯುತ್ತಿರುವುದು ತಿಳಿದು ನನಗೆ ಸಂತೋಷವಾಗುತ್ತಿದೆ. ಅಂದರೆ ದೇಶವು ನವೋದ್ಯಮಗಳನ್ನು ನಿರ್ಮಾಣ ಮಾಡುವ ಪ್ರಾರಂಭಿಕ ಪ್ರಕ್ರಿಯೆಯ ಮೇಲೆ ನಿರಂತರವಾಗಿ ಕಾರ್ಯನಿರತವಾಗಿದೆ.
 
ಸ್ನೇಹಿತರೇ,
7 ವರ್ಷಗಳ ಹಿಂದೆ ನವೋದ್ಯಮ ಭಾರತ ಆಂದೋಲನವು “ಚಿಂತನೆಯಿಂದ ಕೈಗಾರಿಕೋದ್ಯಮಕ್ಕೆ” ಕಲ್ಪನೆಯನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಇಂದು ಅದು ಚಿಂತನೆಗಳನ್ನು ಕೈಗಾರಿಕೋದ್ಯಮವಾಗಿ ಮಾರ್ಪಡಿಸುವ ಪ್ರಮುಖ ಮಾಧ್ಯಮವಾಗಿದೆ. ಇದರ ಮುಂದಿನ ವರ್ಷ ನಾವು ದೇಶದಲ್ಲಿ ಅನ್ವೇಷಣಾ ಮನೋಭಾವವನ್ನು ಮೂಡಿಸಲು ಅಟಲ್ ಅನ್ವೇಷಣಾ ಮಿಶನ್ ಆರಂಭ ಮಾಡಿದೆವು. ಇದರಡಿ, ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ನಿಂದ ಹಿಡಿದು ಇನ್ಕ್ಯುಬೇಶನ್ ಸೆಂಟರ್ ಗಳನ್ನು ಆರಂಭಿಸಿ  ಮತ್ತು ವಿಶ್ವವಿದ್ಯಾಲಯಗಳಲ್ಲಿ ಹ್ಯಾಕಥಾನ್ ಗಳವರೆಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಯಿತು. ಇಂದು ದೇಶಾದ್ಯಂತ 10 ಸಾವಿರಕ್ಕೂ ಅಧಿಕ  ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 75 ಲಕ್ಷಕ್ಕೂ ಅಧಿಕ ಮಕ್ಕಳು ಆಧುನಿಕ ತಂತ್ರಜ್ಞಾನದ ಅರಿವು ಪಡೆಯುತ್ತಿದ್ದಾರೆ ಮತ್ತು ಅನ್ವೇಷಣೆಯ ಆ, ಆ, ಇ, ಈ ..ಕಲಿಯುತ್ತಿದ್ದಾರೆ. ದೇಶಾದ್ಯಂತ ನಿರ್ಮಿಸಲಾದ ಈ ಅಟಲ್ ಟಿಂಕರಿಂಗ್ ಲ್ಯಾಬ್ ಗಳು ನವೋದ್ಯಮಗಳಿಗೆ ಶಿಶುವಿಹಾರದ ತರಗತಿಗಳಂತಾಗಿವೆ. ವಿದ್ಯಾರ್ಥಿ ಕಾಲೇಜು ತಲುಪಿದಾಗ ಆತ ಹೊಂದಿರುವ ಚಿಂತನೆಯನ್ನು ಪೋಷಿಸಲು 700ಕ್ಕೂ ಅಧಿಕ ಅಟಲ್ ಇನ್ಕ್ಯುಬೇಶನ್  ಪ್ರಯೋಗಾಲಯಗಳು ಸ್ಥಾಪನೆಯಾಗಿರುತ್ತವೆ. ರಾಷ್ತ್ರದಲ್ಲಿ ಜಾರಿಯಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.
 
ಸ್ನೇಹಿತರೇ,
 ಪೋಷಣೆಯ (ಇನ್ಕ್ಯುಬೇಶನ್ ) ಜೊತೆ ನವೋದ್ಯಮಗಳಿಗೆ ಹಣಕಾಸು ಕೂಡಾ ಬಹಳ ಮುಖ್ಯ. ಸರಕಾರದ ದೃಢ ನಿರ್ಧಾರಗಳಿಂದಾಗಿ ಅವುಗಳಿಗೆ ಸಹಾಯ ಲಭಿಸುತ್ತಿದೆ. ಅದರ ಪರವಾಗಿ ಸರಕಾರ ಹಣಕಾಸು ನಿಧಿಗಳ ನಿಧಿಯನ್ನು ರೂಪಿಸಿದೆ ಮಾತ್ರವಲ್ಲದೆ ನವೋದ್ಯಮಗಳು ಖಾಸಗಿ ವಲಯದೊಂದಿಗೆ ಕೈಜೋಡಿಸುವಂತೆ ಮಾಡಲು ವಿವಿಧ ವೇದಿಕೆಗಳನ್ನೂ ನಿರ್ಮಾಣ ಮಾಡಿದೆ. ಇಂತಹದೇ ಕ್ರಮಗಳ ಮೂಲಕ ಇಂದು ಕೋಟ್ಯಂತರ ರೂಪಾಯಿಗಳ ಖಾಸಗಿ ಹೂಡಿಕೆ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಿದೆ. ಮತ್ತು ಅದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
 ಸ್ನೇಹಿತರೇ,
ದೇಶದಲ್ಲಿ ವರ್ಷಗಳಿಂದ ತೆರಿಗೆ ವಿನಾಯತಿಗಳು ಮತ್ತು ಇತರ ಪ್ರೋತ್ಸಾಹಗಳನ್ನು ನೀಡುವಂತಹ ಹಲವಾರು ಸುಧಾರಣೆಗಳನ್ನು ನಿರಂತರವಾಗಿ ಮಾಡುತ್ತಲೇ ಬರಲಾಗಿದೆ. ಬಾಹ್ಯಾಕಾಶ ವಲಯದಲ್ಲಿ ಮ್ಯಾಪಿಂಗ್, ಡ್ರೋನ್ ಗಳು ಇತ್ಯಾದಿ ತಾಂತ್ರಿಕ ಅಂಶಗಳ ಸಹಿತ ವಿವಿಧ ಸುಧಾರಣೆಗಳನ್ನು ಮಾಡುವ ಮೂಲಕ ನವೋದ್ಯಮಗಳಿಗಾಗಿ ಹೊಸ ಕ್ಷೇತ್ರಗಳ ಬಾಗಿಲನ್ನು ತೆರೆಯಲಾಗಿದೆ.
  ಸ್ನೇಹಿತರೇ,
ನಾವು ನವೋದ್ಯಮಗಳ ಇನ್ನೊಂದು ಆವಶ್ಯಕತೆಯ ಬಗ್ಗೆಯೂ ಆದ್ಯ ಗಮನ ನೀಡಿದ್ದೇವೆ. ನವೋದ್ಯಮ ಸ್ಥಾಪನೆಯಾದ ಬಳಿಕ ಮತ್ತು ಅದರ ಸೇವೆಗಳು ಹಾಗು ಉತ್ಪನ್ನಗಳು ಸುಲಭದಲ್ಲಿ ಮಾರುಕಟ್ಟೆಗೆ ತಲುಪಿದಾಗ ಅವುಗಳಿಗೆ ಸರಕಾರದ ರೂಪದಲ್ಲಿ ಪ್ರಮುಖ ಖರೀದಿದಾರರು ಲಭಿಸುತ್ತಾರೆ. ಇದಕ್ಕಾಗಿ ಭಾರತ ಸರಕಾರ  ಜಿ.ಇ.ಎಂ. ಪೋರ್ಟಲಿನಲ್ಲಿ ವಿಶೇಷ ಪ್ರಸ್ತಾವನೆಯನ್ನು ಮಾಡಿಕೊಟ್ಟಿದೆ. ಇಂದು ಜಿ.ಇ.ಎಂ. ಪೋರ್ಟಲಿನಲ್ಲಿ 13 ಸಾವಿರಕ್ಕೂ ಅಧಿಕ ನವೋದ್ಯಮಗಳು ನೊಂದಾಯಿಸಲ್ಪಟ್ಟಿವೆ.ಮತ್ತು ಈ ಪೋರ್ಟಲ್ ಮೂಲಕ ನವೋದ್ಯಮಗಳು 6500 ಕೋ.ರೂ.ಗಳಿಗೂ ಅಧಿಕ ಮೊತ್ತದ ವಹಿವಾಟು ನಡೆಸಿವೆ ಎಂಬುದನ್ನು ತಿಳಿದುಕೊಂಡರೆ ನೀವು ಸಂತೋಷಪಡುತ್ತೀರಿ.
 ಸ್ನೇಹಿತರೇ,
 ಇನ್ನೊಂದು ಪ್ರಮುಖ ಕೆಲಸ ಮಾಡಲಾಗಿರುವುದು ಆಧುನಿಕ ಮೂಲಸೌಕರ್ಯ ವಲಯದಲ್ಲಿ. ಡಿಜಿಟಲ್ ಇಂಡಿಯಾವು ನವೋದ್ಯಮ ಪರಿಸರ ವ್ಯವಸ್ಥೆಯ ವಿಸ್ತರಣೆಯಲ್ಲಿ ಬಹಳ ದೊಡ್ದ ಒತ್ತನ್ನು ನೀಡಿದೆ. ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಮತ್ತು ಕಡಿಮೆ ದರದಲ್ಲಿ ದತ್ತಾಂಶಗಳು ಮಧ್ಯಮ ವರ್ಗದವರನ್ನು ಮತ್ತು ಗ್ರಾಮೀಣ ಬಡವರನ್ನು ಜೋಡಿಸಿವೆ. ಇದರಿಂದ ನವೋದ್ಯಮಗಳಿಗೆ ಹೊಸ ಮಾರುಕಟ್ಟೆ ಮತ್ತು ಹೊಸ ಅವಕಾಶಗಳು ತೆರೆಯಲ್ಪಟ್ಟಿವೆ. ಇಂತಹ “ಚಿಂತನೆಯಿಂದ ಕೈಗಾರಿಕೋದ್ಯಮದತ್ತ” ಪ್ರಯತ್ನಗಳ ಫಲವಾಗಿ ಇಂದು ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳು  ದೇಶದ ಲಕ್ಷಾಂತರ ಯುವಜನತೆಗೆ ಉದ್ಯೋಗವನ್ನು ಒದಗಿಸುತ್ತಿವೆ.
ಸ್ನೇಹಿತರೇ,
 ನವೋದ್ಯಮವೇ ನಿರಂತರವಾಗಿ ಅನ್ವೇಷಣೆಗೆ ಒಳಪಡುತ್ತಿರುತ್ತದೆ. ಅದು ಭೂತಕಾಲದ ಬಗ್ಗೆ ಮಾತನಾಡುವುದಿಲ್ಲ. ನವೋದ್ಯಮದ ಮೂಲ ಗುಣ ಇದು. ಅದು ಸದಾ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಇಂದು, ಸ್ವಚ್ಛ ಇಂಧನದಿಂದ ಹಿಡಿದು, ವಾತಾವರಣ ಬದಲಾವಣೆ, ಆರೋಗ್ಯ ರಕ್ಷಣೆವರೆಗೆ ಇಂತಹ ಕ್ಷೇತ್ರಗಳಲ್ಲಿ ಅನ್ವೇಷಣೆ ಮಾಡಲು ನವೋದ್ಯಮಗಳಿಗೆ ಅಪರಿಮಿತವಾದಂತಹ ಅವಕಾಶಗಳಿವೆ. ನವೋದ್ಯಮಗಳು ನಮ್ಮ ದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲವು. ಅದೇ ರೀತಿ ನವೋದ್ಯಮಗಳು ವೋಕಲ್ ಫಾರ್ ಲೋಕಲ್ ಗಾಗಿ ಜನಾಂದೋಲನವನ್ನು ಬಲಪಡಿಸಲು ಬಹಳಷ್ಟನ್ನು ಮಾಡಬಲ್ಲವು. ನಮ್ಮ ದೇಶದ ಗುಡಿ ಕೈಗಾರಿಕೆ ಮತ್ತು ಕೈಮಗ್ಗಗಳು ಹಾಗು ನೇಕಾರರು ಮಾಡಿದ ಶ್ಲಾಘನೀಯ ಕಾರ್ಯವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಒಯ್ಯಲು ಮತ್ತು ಅವುಗಳಿಗೆ ಬ್ರ್ಯಾಂಡಿಂಗ್ ಒದಗಿಸಲು ಬಹಳ ದೊಡ್ಡ ಜಾಲ ಮತ್ತು ವೇದಿಕೆಯನ್ನು ಒದಗಿಸಬಲ್ಲವು. ಭಾರತದ ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು , ಅರಣ್ಯವಾಸಿಗಳು ಬಹಳಷ್ಟು ಸುಂದರ ಉತ್ಪನ್ನಗಳನ್ನು ತಯಾರಿಸಬಲ್ಲರು. ಇವುಗಳು ಕೂಡಾ ನವೋದ್ಯಮಗಳಿಗೆ ಕೆಲಸ ಮಾಡಲು ಹೊಸ ಕ್ಷೇತ್ರಗಳಾಗಬಲ್ಲವು. ಅದೇ ರೀತಿ ಮೊಬೈಲ್ ಗೇಮಿಂಗ್ ನಲ್ಲಿ ಭಾರತ ಜಗತ್ತಿನಲ್ಲಿಯೇ ಉನ್ನತ 5 ನೇ ಸ್ಥಾನದಲ್ಲಿದೆ. ಭಾರತದ ಆಟದ ಉದ್ಯಮದ (ಗೇಮಿಂಗ್ ಇಂಡಸ್ಟ್ರಿ) ಬೆಳವಣಿಗೆ ದರ ಪ್ರತಿಶತ 40ಕ್ಕೂ ಅಧಿಕವಿದೆ. ಈ ಬಜೆಟಿನಲ್ಲಿ ನಾವು  ಎ.ವಿ.ಜಿ.ಸಿ.ಅಂದರೆ ಆನಿಮೇಶನ್, ವಿಶುವಲ್ ಪರಿಣಾಮ,ಆಟಗಳು ಮತ್ತು ಕಾಮಿಕ್ ವಲಯಕ್ಕೆ ಹೆಚ್ಚಿನ ಬೆಂಬಲ ನೀಡಲು ಒತ್ತು ಕೊಟ್ಟಿದ್ದೇವೆ. ಭಾರತದ ನವೋದ್ಯಮಗಳಿಗೆ ಇದು ಕೂಡಾ ಒಂದು ಬಹಳ ದೊಡ್ಡ ವಲಯ. ಇದರಲ್ಲಿ ಅವು ಮುಂಚೂಣಿ ಪಾತ್ರವನ್ನು ವಹಿಸಬಹುದು.  ಇಂತಹದರಲ್ಲಿ ಒಂದು ಕ್ಷೇತ್ರವೆಂದರೆ ಆಟಿಕೆಗಳದ್ದು. ಗೊಂಬೆಗಳ ಉದ್ಯಮದ್ದು. ಆಟಿಕೆಗಳು, ಗೊಂಬೆಗಳಿಗೆ ಸಂಬಂಧಿಸಿ ಭಾರತವು ಬಹಳ ಶ್ರೀಮಂತವಾದ ಪರಂಪರೆಯನ್ನು ಹೊಂದಿದೆ. ಭಾರತದ ನವೋದ್ಯಮಗಳು ಇದನ್ನು ಇಡೀ ಜಗತ್ತಿಗೆ ಆಕರ್ಷಣೆಯ ಕೇಂದ್ರವಾಗಿಸಲು ಸಾಧ್ಯವಿದೆ. ಪ್ರಸ್ತುತ ಆಟಿಕೆಗಳ ಕ್ಷೇತ್ರದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ ಒಂದಕ್ಕಿಂತಲೂ ಕಡಿಮೆ ಇದೆ. ನನ್ನ ದೇಶದ ಯುವ ಜನರು, ಚಿಂತನೆಗಳೊಂದಿಗೆ ಬದುಕುತ್ತಿರುವ ಯುವಜನರು ಈ ಪಾಲನ್ನು ಹೆಚ್ಚಿಸಲು ಏನಾದರೂ ಮಾಡಬಹುದು. ನೀವು ಈ ನವೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಮತ್ತು ಬಹಳ ದೊಡ್ಡ ಕೊಡುಗೆ ನೀಡಬಹುದು. ಭಾರತದ 800 ಕ್ಕೂ ಅಧಿಕ ನವೋದ್ಯಮಗಳು ಕ್ರೀಡಾ ಕ್ಷೇತ್ರದೊಂದಿಗೆ ಸಂಪರ್ಕಿಸಲ್ಪಟ್ಟಿವೆ ಎಂಬುದನ್ನು ಹೇಳಲು ನಾನು ಸಂತೋಷಪಡುತ್ತೇನೆ. ಇದನ್ನು ಕೇಳಿ ನಿಮಗೂ  ಸಂತೋಷವಾಗುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಇದೂ ಒಂದು ಕ್ಷೇತ್ರವಾಗಬಹುದು ಎಂಬುದನ್ನು ಯಾರೂ ಕಲ್ಪಿಸಿರಲಿಲ್ಲ. ಇದರಲ್ಲಿ ಕೂಡಾ ಕ್ರೀಡಾಳು  ಸಂಸ್ಕೃತಿ, ಕ್ರೀಡಾ ಸ್ಫೂರ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿಯೂ ನವೋದ್ಯಮಗಳಿಗೆ  ಹಲವಾರು ಸಾಧ್ಯತೆಗಳು, ಅವಕಾಶಗಳು ಇವೆ. 
 

ಸ್ನೇಹಿತರೇ,
ದೇಶದ ಯಶಸ್ಸಿಗೆ ನಾವು ಹೊಸ ಚಲನೆಯನ್ನು ನೀಡಬೇಕಾಗಿದೆ. ನಾವದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಇಂದು ಭಾರತವು ಜಿ-20 ರಾಷ್ಟ್ರಗಳಲ್ಲಿ ಅತ್ಯಂತ ತ್ವರಿತಗತಿಯಿಂದ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು ಜಗತ್ತಿನಲ್ಲಿಯೇ ಮೂರನೇಯ ಬೃಹತ್ ಆರ್ಥಿಕತೆಯಾಗಿದೆ. ಸ್ಮಾರ್ಟ್ ಫೋನ್ ದತ್ತಾಂಶ ಬಳಕೆಯಲ್ಲಿ ಇಂದು ಭಾರತವು ಜಗತ್ತಿಗೇ ಮೊದಲ ಸ್ಥಾನದಲ್ಲಿದೆ. ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲಿಯೇ ಎರಡನೇಯ ಸ್ಥಾನದಲ್ಲಿದೆ. ಜಾಗತಿಕ ರಿಟೈಲ್ ಸೂಚ್ಯಂಕದಲ್ಲಿ ಭಾರತವು ಎರಡನೇಯ ಸ್ಥಾನದಲ್ಲಿದೆ. ಇಂಧನ ಬಳಕೆಯಲ್ಲಿ ಭಾರತವು ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಜಗತ್ತಿನ ಮೂರನೇಯ ಅತಿ ದೊಡ್ಡ ಬಳಕೆದಾರ ಮಾರುಕಟ್ಟೆ ಎಂದರೆ ಭಾರತ. ಭಾರತವು ಕಳೆದ ಹಣಕಾಸು ವರ್ಷದಲ್ಲಿ ಡಾಲರ್ 417 ಬಿಲಿಯನ್ನಿಗೂ ಅಧಿಕ ಮೌಲ್ಯದ ಅಂದರೆ ರೂ. 30 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಭಾರತವು ತನ್ನ ಮೂಲ ಸೌಕರ್ಯವನ್ನು ಆಧುನೀಕರಿಸಲು ಇಂದು ಹಿಂದೆಂದೂ ಮಾಡದಿರುವಷ್ಟು ಹಣಕಾಸನ್ನು ಹೂಡಿಕೆ ಮಾಡುತ್ತಿದೆ. ಜೀವಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭಾರತ ಅಭೂತಪೂರ್ವ ಒತ್ತು ನೀಡುತ್ತಿದೆ. ಇವೆಲ್ಲವೂ ಯಾವುದೇ ಭಾರತೀಯನನ್ನು ಹೆಮ್ಮೆ ಪಡುವಂತೆ ಮಾಡುತ್ತವೆ. ಈ ಎಲ್ಲಾ ಪ್ರಯತ್ನಗಳು ಭರವಸೆ, ವಿಶ್ವಾಸದ ಭಾವನೆಯನ್ನು ಮೂಡಿಸುತ್ತವೆ. ಭಾರತದ ಬೆಳವಣಿಗೆಯ ಕಥೆ, ಭಾರತದ ಯಶೋಗಾಥೆ ಈ ದಶಕದಲ್ಲಿ ಹೊಸ ಹುರುಪಿನೊಂದಿಗೆ ಮುಂದೆ ಸಾಗಲಿದೆ. ಇದು ಭಾರತದ “ಅಜಾದಿ ಕಾ ಅಮೃತ ಮಹೋತ್ಸವ”ದ ಕಾಲಘಟ್ಟ. ನಾವು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುತ್ತಿದ್ದೇವೆ. ನಾವು ಇಂದು ಏನನ್ನು ಮಾಡುತ್ತಿದ್ದೇವೆಯೋ ಅದರಿಂದ ನವ ಭಾರತದ ಭವಿಷ್ಯ ಮತ್ತು ದೇಶದ ದಿಕ್ಕು ನಿರ್ಧರಿಸಲ್ಪಡಲಿದೆ. ಈ ದೃಢ ಪ್ರಯತ್ನಗಳ ಮೂಲಕ ನಾವು 135 ಕೋಟಿ ಆಶೋತ್ತರಗಳನ್ನು ಈಡೇರಿಸಲು ಸಮರ್ಥರಾಗಲಿದ್ದೇವೆ. ಭಾರತದ ನವೋದ್ಯಮ ಕ್ರಾಂತಿ ಈ “ಅಮೃತ ಕಾಲ”ದ ಪ್ರಮುಖ ಹೆಗ್ಗುರುತಾಗಲಿದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಎಲ್ಲಾ ಯುವಜನತೆಗೆ ನನ್ನ ಶುಭ ಹಾರೈಕೆಗಳು.
 
ಮಧ್ಯಪ್ರದೇಶ ಸರಕಾರಕ್ಕೆ ಕೂಡಾ ಹೃದಯಪೂರ್ವಕ ಅಭಿನಂದನೆಗಳು!
ಬಹಳ ಧನ್ಯವಾದಗಳು
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***
 (Release ID: 1825502) Visitor Counter : 21