ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಆತ್ಮನಿರ್ಭರ ಭಾರತದ ಸಾಕಾರದಲ್ಲಿ ರಫ್ತು ನಿರ್ಣಾಯಕ ಪಾತ್ರ ವಹಿಸುತ್ತದೆ: ಶ್ರೀ ಪ್ರಹ್ಲಾದ್ ಜೋಶಿ.


ಬೆಂಗಳೂರಿನಲ್ಲಿ ಭಾರತ-ಯುಎಇ ಸಿಇಪಿಎ ಮತ್ತು ಭಾರತ-ಆಸ್ಟ್ರೇಲಿಯಾ ಇಸಿಟಿಎ ಕುರಿತ ಸಂಪರ್ಕ ಕಾರ್ಯಕ್ರಮ ಆಯೋಜಿಸಿದ ವಾಣಿಜ್ಯ ಇಲಾಖೆ.

ಕೈಗಾರಿಕಾ ವಿಭಾಗಗಳು ಮತ್ತು ವಲಯಗಳ ವ್ಯಾಪಕ ಭಾಗವಹಿಸುವಿಕೆ ಕಂಡ ಕಾರ್ಯಕ್ರಮ

Posted On: 12 MAY 2022 7:39PM by PIB Bengaluru

ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸುವಲ್ಲಿ ರಫ್ತು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ವಾಣಿಜ್ಯ ಇಲಾಖೆ ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಭಾರತ-ಯುಎಇ ಸಿಇಪಿಎ ಮತ್ತು ಭಾರತ-ಆಸ್ಟ್ರೇಲಿಯಾ ಇಸಿಟಿಎ ಕುರಿತ ಸಂಪರ್ಕ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಜೋಶಿಯವರು, ಸುಗಮ ವ್ಯಾಪಾರವನ್ನು ಮತ್ತಷ್ಟು ಉತ್ತಮಪಡಿಸಲು ಭಾರತ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಒತ್ತಿಹೇಳಿದರು; ಪ್ರಸಕ್ತ ವರ್ಷದಲ್ಲಿ ಸರಕು ಮತ್ತು ಸೇವೆಗಳ ವಾರ್ಷಿಕ ರಫ್ತು ರೂಪದಲ್ಲಿ ದಾಖಲೆಯ ಹೆಚ್ಚಳದೊಂದಿಗೆ ಸುಮಾರು 674 ಶತಕೋಟಿ ಅಮೆರಿಕನ್ ಡಾಲರ್ ಗಳ ಗಮನಾರ್ಹ ಮೈಲಿಗಲ್ಲು ಸಾಧಿಸಲಾಗಿದೆ; ಎಂದ ಅವರು, ಅಂತಿಮವಾಗಿ ಕರ್ನಾಟಕ ರಾಜ್ಯದ ಅಗಾಧ ಪ್ರಯೋಜನಗಳ ಕುರಿತು ವಿವರಿಸಿದರು.

ಭಾರತ ಸರ್ಕಾರದ ವಾಣಿಜ್ಯ ಇಲಾಖೆಯು, ಕರ್ನಾಟಕ ರಾಜ್ಯ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಸೇವೆಗಳ ರಫ್ತು ಉತ್ತೇಜನ ಮಂಡಳಿ (ಎಸ್.ಇ.ಪಿ.ಸಿ.) ಮತ್ತು ಇತರ ಸರ್ವೋಚ್ಚ ಕೈಗಾರಿಕಾ ಸಂಸ್ಥೆಗಳು, ರಫ್ತು ಉತ್ತೇಜನ ಮಂಡಳಿಗಳು, ಸ್ಥಳೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಹಯೋಗದೊಂದಿಗೆ ಇಂದು ಕರ್ನಾಟಕದ, ಬೆಂಗಳೂರಿನ ವಸಂತನಗರದ  ಅರಮನೆ ರಸ್ತೆಯ ಶಾಂಗ್ರೀಲಾ ಹೋಟೆಲ್ ನಲ್ಲಿ ಭಾರತ-ಸಂಯುಕ್ತ ಅರಬ್ ಎಮಿರೇಟ್ಸ್ ನ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಸಿಇಪಿಎ) ಮತ್ತು ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ಕುರಿತು ಭಾಗಿದಾರರ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ರಾಜ್ಯಗಳ ಸಂಪರ್ಕ ಕಾರ್ಯಕ್ರಮಗಳು ಭಾರತ ಸರ್ಕಾರದ ವಾಣಿಜ್ಯ ಇಲಾಖೆಯು ಅನುಕೂಲಕರ ವೇದಿಕೆಯಲ್ಲಿ ದೇಶದಾದ್ಯಂತದ ರಫ್ತುದಾರರಲ್ಲಿ ಸಂವೇದನಾಶೀಲತೆ ಮತ್ತು ಜಾಗೃತಿ ಮೂಡಿಸಲು ಮಾಡುತ್ತಿರುವ ಸಂಯೋಜಿತ ಮತ್ತು ಸಂಘಟಿತ ಪ್ರಯತ್ನಗಳ ಸರಣಿಯ ಭಾಗವಾಗಿದೆ. ಹಾಗೆಯೇ ಭಾರತದೊಂದಿಗೆ ಕೈಗೊಳ್ಳಲಾಗುವ ವ್ಯಾಪಾರ ಹಾಗು ಅದಕ್ಕಾಗಿ ಸೃಷ್ಟಿಸಲಾಗುತ್ತಿರುವ ಅನುಕೂಲಕರ ವ್ಯಾಪಾರ ಪರಿಸರ ವ್ಯವಸ್ಥೆಯಾಗಿದೆ. ಈ ನಿರ್ದಿಷ್ಟ ಸಂಪರ್ಕ ಕಾರ್ಯಕ್ರಮ ಕೇವಲ ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುದಾರರಿಗೆ ಅದರಲ್ಲೂ, ವಿಶೇಷವಾಗಿ ಕರ್ನಾಟಕ ರಾಜ್ಯದ ಎಂಎಸ್ಎಂಇ ವಲಯಕ್ಕೆ ಮಾತ್ರ ಮೀಸಲಾಗಿತ್ತು. ಈ ಕಾರ್ಯಕ್ರಮದ ಪ್ರಾಮುಖ್ಯತೆ ಮತ್ತು ಉದ್ಯಮದಲ್ಲಿ ಭಾಗವಹಿಸುವವರಿಗೆ ಅಪಾರ ಪ್ರಯೋಜನಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದ ಕೈಗಾರಿಕಾ ವಿಭಾಗಗಳು ಮತ್ತು ವಲಯಗಳ 200ಕ್ಕೂ ಹೆಚ್ಚು ಉದ್ಯಮಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿತ್ತು.

ಕಾರ್ಯಕ್ರಮದ ಭಾಗವಾಗಿ, ಕೈಗಾರಿಕಾ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಎರಡು ಗುಂಪು ಚರ್ಚೆಗಳನ್ನು ಸಹ ನಡೆಸಲಾಯಿತು. ಪ್ರಮುಖ ರಫ್ತು ಕೇಂದ್ರವಾಗಿ ಕರ್ನಾಟಕದ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮಾರ್ಗಗಳು ಮತ್ತು ವಿಧಾನಗಳ ಕುರಿತಂತೆ ಪಾಲ್ಗೊಂಡಿದ್ದವರು ಚರ್ಚಿಸಿದರು ಮತ್ತು ಸರಕು ಮತ್ತು ಸೇವೆಗಳ ರಫ್ತಿನಲ್ಲಿ ವ್ಯಾಪಾರ ಒಪ್ಪಂದಗಳಿಂದ ಲಾಭಗಳನ್ನು ಗರಿಷ್ಠಗೊಳಿಸುವ ಬಗ್ಗೆ ಸಮಾಲೋಚಿಸಿದರು. ಇದಲ್ಲದೆ, ಎಂಜಿನಿಯರಿಂಗ್, ಔಷಧ, ರತ್ನಗಳು ಮತ್ತು ಆಭರಣಗಳು, ಜವಳಿ, ಮಾಹಿತಿ ತಂತ್ರಜ್ಞಾನ ಮತ್ತು ಐಟಿಇಎಸ್, ಗಣಿಗಾರಿಕೆ ಮತ್ತು ಖನಿಜಗಳು, ಶಿಕ್ಷಣ ಸೇವೆಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ ವಿವಿಧ ಉದ್ಯಮ ವಲಯಗಳೂ ಪಾಲ್ಗೊಂಡಿದ್ದವು.

ಸ್ವಾಗತ ಭಾಷಣ ಮಾಡಿದ ಎಸ್.ಇ.ಪಿ.ಸಿ.ಯ ಮಹಾನಿರ್ದೇಶಕ ಡಾ. ಅಭಯ್ ಸಿನ್ಹಾ, ಇತ್ತೀಚೆಗೆ ಮುಕ್ತಾಯಗೊಂಡ ಎರಡು ಮಹತ್ವದ ವ್ಯಾಪಾರ ಒಪ್ಪಂದಗಳಾದ ಭಾರತ-ಯುಎಇ ಸಿಇಪಿಎ ಮತ್ತು ಭಾರತ-ಆಸ್ಟ್ರೇಲಿಯಾ ಇಸಿಟಿಎಗಳ ಸ್ಥೂಲ ಪರಿಚಯ ನೀಡಿ, ಕರ್ನಾಟಕ ರಾಜ್ಯದಿಂದ ರಫ್ತುದಾರರು ಪಡೆಯಬಹುದಾದ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ದರ್ಪಣ್ ಜೈನ್, ಒಂದು ಸಮಗ್ರ ಪ್ರಾತ್ಯಕ್ಷಿಕೆಯನ್ನು ನೀಡಿ, ವ್ಯಾಪಾರ ಒಪ್ಪಂದಗಳ ವಿವಿಧ ಅಂಶಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು ಮತ್ತು ಯುಎಇ ಹಾಗು ಆಸ್ಟ್ರೇಲಿಯಾದೊಂದಿಗೆ ಭಾರತವು ವಿನಿಮಯ ಮಾಡಿಕೊಂಡಿರುವ ಸರಕು ಮತ್ತು ಸೇವೆಗಳ ಮೇಲಿನ ರಿಯಾಯಿತಿಗಳು, ದ್ವಿಪಕ್ಷೀಯ ವ್ಯಾಪಾರದ ಅನುಕೂಲಕ್ಕಾಗಿ ಅಳವಡಿಸಲಾದ ಕ್ರಮಗಳು, ಉದ್ಯಮವನ್ನು ರಕ್ಷಿಸಲು ಇರಿಸಲಾಗಿರುವ ಸುರಕ್ಷತಾ ಕ್ರಮಗಳ ವಿವರ ನೀಡಿದರು. ರಫ್ತು, ಜಿಡಿಪಿ ಮತ್ತು ವಿವಿಧ ವಲಯಗಳಲ್ಲಿ, ವಿಶೇಷವಾಗಿ ಕಾರ್ಮಿಕ ಕೇಂದ್ರಿತ ವಲಯಗಳಲ್ಲಿನ ಉದ್ಯೋಗದಲ್ಲಿ ನಿರೀಕ್ಷಿತ ಪ್ರಯೋಜನಗಳನ್ನು ನಿರೀಕ್ಷಿಸಲಾಗಿದೆ ಎಂದರು. ಪ್ರಸ್ತುತ ಐಟಿ/ಐಟಿಇಎಸ್ ಪ್ರಾಬಲ್ಯ ಹೊಂದಿರುವ ಭಾರತದ ಸೇವೆಗಳ ರಫ್ತಿನಲ್ಲಿ ವೈವಿಧ್ಯಗೊಳಿಸುವ ಅಗತ್ಯವನ್ನು ಒತ್ತಿಹೇಳಲಾಯಿತು ಮತ್ತು ಈ ಎಫ್.ಟಿ.ಎಗಳಿಂದ ಉದ್ಭವಿಸುವ ವಿವಿಧ ಸೇವಾ ವಲಯಗಳಲ್ಲಿನ ಸಂಭಾವ್ಯ ಪ್ರಯೋಜನಗಳನ್ನು ಒತ್ತಿ ಹೇಳಲಾಯಿತು. ಇವುಗಳಲ್ಲಿ ವೃತ್ತಿಪರ ಸೇವೆಗಳು, ವ್ಯವಹಾರ ಸೇವೆಗಳು, ಆಡಿಯೊ ವಿಷುವಲ್ ಸೇವೆಗಳು, ಶಿಕ್ಷಣ ಸೇವೆಗಳು, ಆರೋಗ್ಯ ಸೇವೆಗಳು, ಫಿನ್ಟೆಕ್ ಇತ್ಯಾದಿಗಳೂ ಸೇರಿವೆ.

ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಡಾ. ಇ.ವಿ.ರಮಣ ರೆಡ್ಡಿ ಅವರು ಕರ್ನಾಟಕದ ಕೈಗಾರಿಕಾ ಸ್ವರೂಪದ ಅವಲೋಕನವನ್ನು ಒದಗಿಸಿದರು ಮತ್ತು ಈಗಾಗಲೇ ಐಟಿ/ಐಟಿಇಎಸ್ ನ ಶಕ್ತಿ ಕೇಂದ್ರವಾಗಿರುವ ರಾಜ್ಯದ ಅಗಾಧ ಸುಪ್ತ ಸಾಮರ್ಥ್ಯದ ಬಗ್ಗೆ ವಿವರಿಸಿದರು, ಇದು ಐಟಿ/ಐಟಿಇಎಸ್ ರಫ್ತಿನಲ್ಲಿ ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯವು ತನ್ನದೇ ಆದ ಅಗಾಧ ಅನುಕೂಲಗಳ ಹಿನ್ನೆಲೆಯಲ್ಲಿ ಈ ವ್ಯಾಪಾರ ಒಪ್ಪಂದಗಳಿಂದ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯ ಬಗ್ಗೆಯೂ ಅವರು ಆಶಾವಾದವನ್ನು ವ್ಯಕ್ತಪಡಿಸಿದರು. ಸ್ಥೂಲ ಆರ್ಥಿಕ ಸೂಚಕಗಳ ಅವಲೋಕನ, ಬಾಹ್ಯ ವಲಯದ ಕಾರ್ಯಕ್ಷಮತೆ ಮತ್ತು ರಾಜ್ಯದಿಂದ ರಫ್ತಾಗುವ ಉನ್ನತ ಸರಕುಗಳು ಮತ್ತು ಸೇವೆಗಳ ಸಂಕ್ಷಿಪ್ತ ಸಂಗ್ರಹ ಸೇರಿದಂತೆ ಕರ್ನಾಟಕದ ಅಂಕಿ-ಅಂಶದ ಚಿತ್ರಣವನ್ನು ಅವರು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ವ್ಯಾಪಾರ ಒಪ್ಪಂದಗಳಿಂದ ಅಪಾರ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಗಳ ಬಗ್ಗೆ ಉತ್ಸಾಹ ಪ್ರದರ್ಶಿಸಿದರು ಮತ್ತು ವಲಯಗಳು ಹಾಗು ಕೈಗಾರಿಕೆಗಳಾದ್ಯಂತ ತಮ್ಮ ಮಾರುಕಟ್ಟೆ ಷೇರುಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಪಾಲುದಾರ ದೇಶಗಳಲ್ಲಿ ಆಮದುದಾರರೊಂದಿಗೆ ಹೊಸ ವ್ಯಾಪಾರ ಸಂಬಂಧಗಳನ್ನು ರೂಪಿಸಲು ಬದ್ಧರಾಗಿದ್ದರು. ಒಪ್ಪಂದಗಳ ಹೆಚ್ಚಿನ ವಿವರಗಳಿಗಾಗಿ, ಈ ಕೆಳಗಿನ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ.

ಭಾರತ-ಯುಎಇ ಸಿಇಪಿಎ:

https://commerce.gov.in/international-trade/trade-agreements/comprehensive-economic-partnership-agreement-between-the-government-of-the-republic-of-india-and-the-government-of-the-united-arab-emirates-uae/

ಭಾರತ-ಆಸ್ಟ್ರೇಲಿಯಾ ಇಸಿಟಿಎ:

https://www.dfat.gov.au/trade/agreements/negotiations/aifta/australia-india-ecta-official-text

 

***


(Release ID: 1824957) Visitor Counter : 285


Read this release in: English , Urdu , Hindi