ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿನ್ಯಾಸದ ಮೂಲಸೌಕರ್ಯವನ್ನು ಮನೆ ಬಾಗಿಲಿಗೆ ತರುತ್ತಿರುವುದರಿಂದ, ಈಗ ಎಲ್ಲಿಂದಲಾದರೂ ಯಾರಾದರೂ ಚಿಪ್‌ಗಳನ್ನು ವಿನ್ಯಾಸಗೊಳಿಸಬಹುದು ಮತ್ತು ಆವಿಷ್ಕಾರ ಮಾಡಬಹುದು


ದೂರದ ಸ್ಥಳಗಳಲ್ಲಿರುವ ವಿದ್ಯಾರ್ಥಿಗಳಿಗೆ ಚಿಪ್ ಗಳನ್ನುವಿನ್ಯಾಸಗೊಳಿಸಲು ಲೈಸೆನ್ಸ್‌ಗಳನ್ನು ಲಭ್ಯವಾಗುವಂತೆ ಮಾಡಲು ʻಡಿ-ಡಾಕ್‌ʼನಲ್ಲಿರುವ ʻಇಂಡಿಯಾ ಚಿಪ್ ಸೆಂಟರ್ʼ ವಿನ್ಯಾಸ ಪರವಾನಗಿಗಳನ್ನು ಕೇಂದ್ರೀಯವಾಗಿ ಸಂಗ್ರಹಿಸಲಿದೆ

Posted On: 04 MAY 2022 5:33PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿವೈ) ತನ್ನ ವಿವಿಧ ಹಂತಗಳ ಮತ್ತು ಸಕ್ರಿಯ ಕ್ರಮಗಳ ಸರಣಿಯ ಮೂಲಕ, ದೇಶಾದ್ಯಂತ 120 ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೆಮಿಕಂಡಕ್ಟರ್ ವಿನ್ಯಾಸ ವಿಧಾನದ ವ್ಯವಸ್ಥಿತ ಸುಧಾರಣೆಯಲ್ಲಿ ತೊಡಗಿದೆ. ಇದರಿಂದ ಈ ಶಿಕ್ಷಣ ಸಂಸ್ಥೆಗಳಲ್ಲಿರುವ, ನೈಸರ್ಗಿಕ ಕೌಶಲ್ಯಗಳನ್ನು ಹೊಂದಿರುವ ಯಾರಾದರೂ, ದೇಶದಲ್ಲಿ ಯಾವ ಮೂಲೆಯಲ್ಲಿ ಬೇಕಾದರೂ ಸೆಮಿಕಂಡಕ್ಟರ್‌ ಚಿಪ್‌ಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗಲಿದೆ. ಈ ಪ್ರಕ್ರಿಯೆಯಲ್ಲಿ, ಚಿಪ್ ವಿನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಜಾಸತ್ತಾತ್ಮಕಗೊಳಿಸಲಾಗುವುದು - ಭಾರತದಲ್ಲಿ ವಿನ್ಯಾಸವು ʻಮೇಕ್ ಇನ್ ಇಂಡಿಯಾʼದಷ್ಟೇ ಮುಖ್ಯವಾಗಿದೆ. 
 
ಚಿಪ್ ವಿನ್ಯಾಸವನ್ನು ಕಾರ್ಯತಂತ್ರದ ಅತ್ಯವಶ್ಯ ಭಾಗವೆಂದು ಅರಿತುಕೊಂಡು, 2021ರಲ್ಲಿ ಸಚಿವಾಲಯವು ʻಚಿಪ್ಸ್ನಿಂದ ಸಿಸ್ಟಮ್ ವಿನ್ಯಾಸದವರೆಗೆ ವಿಶೇಷ ಮಾನವಶಕ್ತಿ ಅಭಿವೃದ್ಧಿ ಕಾರ್ಯಕ್ರಮʼದ (ಎಸ್ಎಂಡಿಪಿ-ಸಿ 2ಎಸ್‌ಡಿ) ಅಡಿಯಲ್ಲಿ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿತು. ಇದರ ಭಾಗವಾಗಿ ಚಿಪ್‌ಗಳ ವಿನ್ಯಾಸಕ್ಕಾಗಿ ʻಸಿ-ಡಾಕ್‌ʼನ ʻಕೇಂದ್ರೀಕೃತ ವಿನ್ಯಾಸ ಘಟಕʼವನ್ನು ದೂರದಿಂದಲೇ ಪ್ರವೇಶಿಸಲು (ರಿಮೋಟ್‌ ಆಕ್ಸೆಸ್‌) 60 ಶೈಕ್ಷಣಿಕ ಸಂಸ್ಥೆಗಳಲ್ಲಿನ 50,000ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಯಿತು. ಈ ನಿಟ್ಟಿನಲ್ಲಿ ಸಚಿವಾಲಯವು ಮತ್ತಷ್ಟು ಮುಂದುವರಿದು, ʻಸಿ-ಡಾಕ್‌ʼನ ʻಇಂಡಿಯಾ ಚಿಪ್ ಸೆಂಟರ್‌ʼನಲ್ಲಿ ಸ್ಥಾಪಿಸಲಾಗಿರುವ ʻಕೇಂದ್ರೀಕೃತ ಚಿಪ್ ವಿನ್ಯಾಸʼ ಮೂಲಸೌಕರ್ಯವನ್ನು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ದೂರದಿಂದಲೇ ಪ್ರವೇಶಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಿದೆ.  ಇದರಿಂದ ಮುಂದಿನ 5 ವರ್ಷಗಳವರೆಗೆ ಚಿಪ್ ವಿನ್ಯಾಸ ಕ್ಷೇತ್ರದಲ್ಲಿ ದೇಶಾದ್ಯಂತ 120 ಶೈಕ್ಷಣಿಕ ಸಂಸ್ಥೆಗಳಲ್ಲಿ 85000ಕ್ಕೂ ಹೆಚ್ಚು ಬಿ.ಟೆಕ್‌, ಎಂ.ಟೆಕ್‌ ಮತ್ತು ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ತರಬೇತಿ ದೊರೆಯಲಿದೆ. 
 
ʻಸಿ-ಡಾಕ್‌ʼನ ʻಇಂಡಿಯಾ ಚಿಪ್ ಸೆಂಟರ್ʼನಲ್ಲಿರುವ  ಚಿಪ್ ವಿನ್ಯಾಸ ಮೂಲಸೌಕರ್ಯವನ್ನು ಲಭ್ಯವಾಗುವಂತೆ ಮಾಡಲು, ʻಇಡಿಎʼ (ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್), ʻಎಲೆಕ್ಟ್ರಾನಿಕ್ ಕಂಪ್ಯೂಟರ್-ಏಯ್ಡೆಡ್ ಡಿಸೈನ್ʼ(ಇಸಿಎಡಿ), ʻಐಪಿ ಕೋರ್ʼ ಮತ್ತು ʻಡಿಸೈನ್ ಸೊಲ್ಯೂಷನ್ಸ್ʼ ಉದ್ಯಮದ ಪ್ರಮುಖ ಮಾರಾಟಗಾರರನ್ನು ಪಾಲುದಾರರನ್ನಾಗಿ ಮಾಡಲಾಗುತ್ತಿದೆ. ನಿರ್ದಿಷ್ಟವಾಗಿ ʻಸಿನಾಪ್ಸಿಸ್ʼ, ʻಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್ʼ, ʻಸೀಮೆನ್ಸ್ ಇಡಿಎʼ, ʻಸಿಲ್ವಾಕೊʼ ಮತ್ತು ಇತರ ಪ್ರಮುಖ ಸಲಕರಣೆ ಪೂರೈಕೆದಾರರು, ʻಐಪಿʼ ಮತ್ತು ವಿನ್ಯಾಸ ಪರಿಹಾರ ಪೂರೈಕೆದಾರರು ಮತ್ತು ಫ್ಯಾಬ್ ಅಗ್ರಿಗೇಟರ್‌ಗಳೊಂದಿಗೆ ಸಹಯೋಗದ ವ್ಯವಸ್ಥೆಗಳನ್ನು ಮಾಡಲಾಗಿದೆ. 
 
ʻಸಿ-ಡಾಕ್‌ʼನ ʻಇಂಡಿಯಾ ಚಿಪ್ ಸೆಂಟರ್ʼನಲ್ಲಿ ಸ್ಥಾಪಿಸಲಾದ ಕೇಂದ್ರೀಕೃತ ವಿನ್ಯಾಸ ಸೌಲಭ್ಯದಲ್ಲಿ ಸಂಪೂರ್ಣ ಚಿಪ್ ವಿನ್ಯಾಸ ಪ್ರಕ್ರಿಯೆಯ (ಅಂದರೆ ಡಿಜಿಟಲ್, ಅನಲಾಗ್, ಆರ್‌ಎಫ್‌ಮತ್ತು ಮಿಶ್ರ ಸಿಗ್ನಲ್ ವಿನ್ಯಾಸಗಳಿಗೆ ಫ್ರಂಟ್-ಎಂಡ್ ವಿನ್ಯಾಸ, ಪಿಸಿಬಿ ವಿನ್ಯಾಸ ಮತ್ತು ವಿಶ್ಲೇಷಣೆ ಇತ್ಯಾದಿ) ಅತ್ಯಂತ ಸುಧಾರಿತ ಸಾಧನಗಳು ಲಭ್ಯವಿವೆ. ಇವು 7ಎನ್ಎಂ ಅಥವಾ ಸುಧಾರಿತ ʻನೋಡ್‌ʼವರೆಗೆ ಲಭ್ಯವಿವೆ. ಇದಿಷ್ಟೇ ಅಲ್ಲದೆ, ಮುಂದಿನ 5 ವರ್ಷಗಳವರೆಗೆ ಉದ್ಯಮ ವೃತ್ತಿಪರರಿಂದ ವಿನ್ಯಾಸ ಹರಿವಿನ ಬಗ್ಗೆ ಬೋಧಕ-ನೇತೃತ್ವದ / ಆನ್ಲೈನ್ ತರಬೇತಿಗಳ ವ್ಯವಸ್ಥೆಯೂ ಲಭ್ಯವಿದೆ. 
ಅಸ್ತಿತ್ವದಲ್ಲಿರುವ ಅತಿದೊಡ್ಡ ಸೌಲಭ್ಯಗಳಲ್ಲಿ ಒಂದಾದ ಸಿ-ಡಾಕ್‌ನ ʻಇಂಡಿಯಾ ಚಿಪ್ ಸೆಂಟರ್ʼನಲ್ಲಿರುವ  ಈ ಕೇಂದ್ರೀಕೃತ ಘಟಕವು, ವಿನ್ಯಾಸದ ಹರಿವುಗಳ ಸಮೃದ್ಧತೆಯನ್ನು ಕಾಯ್ದುಕೊಳ್ಳುತ್ತದೆ. 120 ಶೈಕ್ಷಣಿಕ ಸಂಸ್ಥೆಗಳಲ್ಲಿನ 85,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಚಿಪ್ ವಿನ್ಯಾಸದ ಮೂಲಸೌಕರ್ಯವನ್ನು ತರುವ ಗುರಿಯನ್ನು ಹೊಂದಿದೆ. ಇದರ ಲಾಭವನ್ನು ಪಡೆದುಕೊಂಡು, ಹಲವಾರು ಶೈಕ್ಷಣಿಕ ನವೋದ್ಯಮಗಳು ದೇಶಾದ್ಯಂತ ತಲೆ ಎತ್ತಲು, ಆರಂಭಿಕ ಪ್ರವೇಶ ಅಡೆತಡೆಗಳನ್ನು ದಾಟಲು ಅನುವಾಗಲಿದೆ. ಜೊತೆಗೆ ದೇಶೀಯ ಐಪಿ ಕೋರ್‌ಗಳು, ಚಿಪ್‌ಗಳು, ʻಸಿಸ್ಟಮ್ ಆನ್ ಚಿಪ್ʼ (ಎಸ್ಒಸಿಗಳು), 5ಜಿ / ಐಒಟಿ, ಎಐ / ಎಂಎಲ್, ಆಟೋಮೋಟಿವ್ ಮತ್ತು ಮೊಬಿಲಿಟಿ ವಲಯ ಮುಂತಾದ ವಿಭಿನ್ನ ಅನ್ವಯಿಕ ಕ್ಷೇತ್ರಗಳಿಗೆ ಸಿಸ್ಟಮ್‌ಗಳನ್ನು ತಯಾರಿಸುವ ನಿಟ್ಟಿನಲ್ಲಿ ದೇಶದಲ್ಲಿ ಉದ್ಯಮಶೀಲತೆ / ನವೋದ್ಯಮ -ನೇತೃತ್ವದ ವಿನ್ಯಾಸ ಮತ್ತು ಆವಿಷ್ಕಾರಗಳ ಪರಿಸರ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತವೆ. 
 
ʻಸೆಮಿಕಾನ್ ಇಂಡಿಯಾ- 2022ʼ ಕಳೆದ ವಾರ ಯಶಸ್ವಿಯಾಗಿ ಮುಕ್ತಾಯಗೊಂಡಾಗ, ಹೆಚ್ಚಿನ ಜಾಗತಿಕ ಸೆಮಿ ಕಂಡಕ್ಟರ್‌ ದಿಗ್ಗಜರು (ಇಂಟೆಲ್, ಮೈಕ್ರಾನ್, ಕ್ವಾಲ್ಕಂ, ಎಲ್ಎಎಂ ರಿಸರ್ಚ್ ಇತ್ಯಾದಿ) ತಮ್ಮ ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಕೊಡುಗೆಯನ್ನು ಒತ್ತಿ ಹೇಳಿದರು. ಅವು ಈಗ ತಮ್ಮ ಪ್ರಧಾನ ಕಚೇರಿ ಬಳಿಕ ಅತಿದೊಡ್ಡ ಕೇಂದ್ರಗಳಾಗಿ ಬೆಳೆದಿವೆ. ಅಲ್ಲದೆ, ನಮ್ಮ ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸದ ಸಾಮರ್ಥ್ಯವನ್ನು ಒಪ್ಪಿಕೊಂಡಿವೆ, ಇದು ಈಗ ವಿಶ್ವದ 20% ಎಂಜಿನಿಯರ್‌ಗಳನ್ನು ಒಳಗೊಂಡಿದೆ. 
 
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ʻಚಿಪ್ಸ್ ಟು ಸ್ಟಾರ್ಟ್ ಅಪ್ (ಸಿ 2 ಎಸ್) ಕಾರ್ಯಕ್ರಮ ಮತ್ತು ಸೆಮಿಕಂಡಕ್ಟರ್ ನೀತಿಯ ಇತರ ಉಪಕ್ರಮಗಳ ಮೂಲಕ ಭಾರತವನ್ನು ಸೆಮಿಕಂಡಕ್ಟರ್‌ ಕೇಂದ್ರವನ್ನಾಗಿ ಪರಿವರ್ತಿಸಲು ಅತ್ಯಂತ ನುರಿತ ವಿನ್ಯಾಸ ಎಂಜಿನಿಯರ್‌ಗಳ ಪ್ರತಿಭಾ ಭಂಡಾರವನ್ನು ಲಭ್ಯವಾಗುವಂತೆ ಮಾಡುವ ಕನಸನ್ನು ಬಿಚ್ಚಿಟ್ಟರು. ಇದು ಸೆಮಿಕಂಡಕ್ಟರ್ ದಿಗ್ಗಜ ಸಂಸ್ಥೆಗಳಿಗೆ ಅತ್ಯಾಧುನಿಕ ಚಿಪ್‌ಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಭಾರತೀಯ ಪ್ರತಿಭೆಗಳ ಭಂಡಾರವು ಪೂರಕ ಬೆಂಬಲ ನೀಡುತ್ತದೆ. ಜೊತೆಗೆ ದೇಶದಲ್ಲಿನ ಕೆಲವು ಚಿಪ್‌ಗಳ ಸಂಪೂರ್ಣ ಮಾಲೀಕತ್ವವನ್ನು ಹೊಂದಲು ನೆರವಾಗಲಿದೆ. ʻಸೆಮಿಕಾನ್ ಇಂಡಿಯಾ-2022ʼ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವ ಮತ್ತು ಪ್ರತಿಭಾ ಭಂಡಾರವು ಚಿಪ್ ಸಾರ್ವಭೌಮತ್ವಕ್ಕಾಗಿ ಹೋರಾಡುತ್ತಿರುವ ಇತರ ದೇಶಗಳಿಗಿಂತ ಭಾರತವನ್ನು ವಿಶೇಷವೆನಿಸುವಂತೆ ಮಾಡಿದೆ ಎಂದು ಅವರು ಒತ್ತಿ ಹೇಳಿದರು. 
 
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಕಳೆದ ವಾರ ʻಸೆಮಿಕಾನ್ ಇಂಡಿಯ- 2022ʼ ʻಡಿಜಿಟಲ್ ಇಂಡಿಯಾ ಆರ್‌ಐಎಸ್ಸಿ-ವಿ (ಡಿಐಆರ್-ವಿ) ಕಾರ್ಯಕ್ರಮದ ಸೇರಿದಂತೆ ಅನೇಕ ಸಹ-ಅಭಿವೃದ್ಧಿ ಒಪ್ಪಂದಗಳನ್ನು ಘೋಷಿಸಿದರು. ಇದು ಭಾರತದ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆಗೊಳಿಸುವ ಗುಯನ್ನು ಹೊಂದಿದೆ. ಈ ಘೋಷಣೆಗಳು ಹಾಗೂ ಇದರ ಜೊತೆಗೆ ಈ ವಾರ ಶತಕ ಮುಟ್ಟಿದ ಭಾರತದ ʻಯೂನಿಕಾರ್ನ್ʼಗಳ ಸಂಖ್ಯೆ ಹಾಗೂ  ದೇಶಾದ್ಯಂತ ಚಿಪ್ ವಿನ್ಯಾಸವನ್ನು ಪ್ರಜಾಸತ್ತಾತ್ಮಕಗೊಳಿಸಲು ಕೈಗೊಂಡ ಕ್ರಮಗಳು, ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಕ್ಷೇತ್ರದಲ್ಲಿ ನವೋದ್ಯಮಗಳು ಮತ್ತು ʻಯೂನಿಕಾರ್ನ್ʼಗಳ ಮುಂದಿನ ಅಲೆಯನ್ನು ಉತ್ತೇಜಿಸಲಿದೆ. 

***



(Release ID: 1822928) Visitor Counter : 135