ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಏಪ್ರಿಲ್ 25 ರಿಂದ 27 ರವರೆಗೆ ನಿಗದಿಪಡಿಸಲಾಗಿರುವ ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನಗಳ ಶೃಂಗಸಭೆ 2022ರ 7ನೇ ಆವೃತ್ತಿಗೂ ಮುನ್ನ, ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು
“ಮುಂದಿನ 25 ವರ್ಷಗಳವರೆಗಿನ ಔಷಧ ಮತ್ತು ವೈದ್ಯಕೀಯ ಸಾಧನಗಳ ಮಾರ್ಗಸೂಚಿಗಾಗಿ ನಾವು ಉದ್ಯಮ ಮತ್ತು ಅಕಾಡೆಮಿಗಳೊಂದಿಗೆ ತೊಡಗಿಸಿಕೊಳ್ಳುತ್ತೇವೆ” - ಡಾ. ಮನ್ಸುಖ್ ಮಾಂಡವಿಯಾ
“ತನ್ನ ದುಬಾರಿಯಲ್ಲದ ಮತ್ತು ಉತ್ತಮ ಗುಣಮಟ್ಟದ ಔಷಧಿಗಳಿಗೆ ಭಾರತೀಯ ಔಷಧಿ ಉದ್ಯಮವು ಜಾಗತಿಕವಾಗಿ ಪ್ರಸಿದ್ಧಿಯಾಗಿದೆ” - ಡಾ. ಮನ್ಸುಖ್ ಮಾಂಡವಿಯಾ
Posted On:
22 APR 2022 5:59PM by PIB Bengaluru
ರಾಸಾಯನಿಕ ಮತ್ತು ರಸಗೊಬ್ಬರಗಳ ಸಹಾಯಕ ಸಚಿವ ಶ್ರೀ ಭಗವಂತ್ ಖೂಬಾ ಮತ್ತು ಔಷಧೀಯ ಇಲಾಖೆಯ ಕಾರ್ಯದರ್ಶಿ, ಶ್ರೀಮತಿ ಎಸ್ ಅಪರ್ಣಾ ಅವರ ಉಪಸ್ಥಿತಿಯಲ್ಲಿ, ಏಪ್ರಿಲ್ 25 ರಿಂದ 27 ರವರೆಗೆ ನಿಗದಿಪಡಿಸಲಾಗಿರುವ ಭಾರತೀಯ ಔಷಧ ಮತ್ತು ವೈದ್ಯಕೀಯ ಸಾಧನಗಳ ಶೃಂಗಸಭೆ 2022ರ 7ನೇ ಆವೃತ್ತಿಗೂ ಮುನ್ನ, ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಈ ವಾರ್ಷಿಕ ಮೂರು ದಿನಗಳ ಪ್ರಮುಖ ಶೃಂಗಸಭೆಯು ಆಯೋಜಿತವಾಗಿದೆ.
ಈ ವರ್ಷ, ಔಷಧೀಯ ಉದ್ಯಮವು ‘ಇಂಡಿಯಾ ಫಾರ್ಮಾ-ವಿಷನ್ 2047: ಭವಿಷ್ಯಕ್ಕಾಗಿ ಪರಿವರ್ತಕ ಕಾರ್ಯಸೂಚಿ’ ಎಂಬ ವಿಷಯವಸ್ತುವಿನ ಮೇಲೆ ಆಧರಿತವಾಗಿದೆ. ಭಾರತೀಯ ವೈದ್ಯಕೀಯ ಸಾಧನಗಳ ಉದ್ಯಮವು ‘ಸಂಶೋಧನೆ ಮತ್ತು ಸಂಘಟಿತ ಸೇವೆಗಳ ಮೂಲಕ ಆರೋಗ್ಯ ರಕ್ಷಣೆಯ ಪರಿವರ್ತನೆ’ ಎಂಬ ವಿಷಯವಸ್ತುವನ್ನು ಆಧರಿಸಿದೆ. 3 ದಿನ ನಡೆಯಲಿರುವ ಈ ಚರ್ಚೆಗಳು, ಗುಣಮಟ್ಟದ ಔಷಧಿಗಳಲ್ಲಿ ಭಾರತವನ್ನು ಜಾಗತಿಕವಾಗಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಮತ್ತು ನಮ್ಮ ದೇಶದಲ್ಲಿ ಔಷಧಗಳು ಹಾಗು ವೈದ್ಯಕೀಯ ಸಾಧನಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವದನ್ನು ಖಚಿತಪಡಿಸಿಕೊಳ್ಳಲು ಹೊಸ ಅವಕಾಶಗಳು ಮತ್ತು ವಿಚಾರಗಳಿಗೆ ಅವಕಾಶ ಕಲ್ಪಿಸಲಿದೆ.
“ಪ್ರತಿ ವರ್ಷ ಈ ಸಭೆಯು, ನಿರಂತರ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು, ಔಷಧ ಮತ್ತು ವೈದ್ಯಕೀಯ ಸಾಧನಗಳ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯತೆ, ವೈದ್ಯಕೀಯ ಸಾಧನಗಳ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯ ಮತ್ತು ಇನ್ನೂ ಹಲವಾರು ವಿಷಯಗಳ ಮೇಲೆ ಕೇಂದ್ರೀಕೃತವಾದ ಸಮಸ್ಯೆಗಳ ಬಗೆಗಿನ ಚರ್ಚೆಗಳನ್ನು ಒಳಗೊಂಡಿರುತ್ತದೆ. ಹಿಂದಿನ ಸಭೆಗಳು ಅಪಾರವಾಗಿ ಸಹಾಯ ಮಾಡಿವೆ ಹಾಗು ಇಂದು ಭಾರತೀಯ ಔಷಧ ಕ್ಷೇತ್ರವು ಕ್ಷಿಪ್ರ ಬೆಳವಣಿಗೆಯ ಹೊಸ್ತಿಲಲ್ಲಿದೆ. ನಾವು ಭಾರತವನ್ನು ಈಗಾಗಲೇ ಒಂದು ಜಗತ್ತಿನ ಔಷಧಾಲಯವಾಗಿ ಕಂಡಿದ್ದೇವೆ ಮತ್ತು ನಮ್ಮ ತತ್ವಶಾಸ್ತ್ರದಿಂದ ನಾವು ಔಷಧೀಯ ಕ್ಷೇತ್ರವನ್ನು ವ್ಯಾಪಾರವಾಗಿ ಮಾತ್ರವಲ್ಲದೆ "ಸೇವೆ"ಯಾಗಿ ಪರಿಗಣಿಸುತ್ತೇವೆ ಎಂದು ಕಾರ್ಯಕ್ರಮದಲ್ಲಿ ಡಾ. ಮನ್ಸುಖ್ ಮಾಂಡವಿಯಾ ಹೇಳಿದರು. ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಆಶಯದಂತೆ, ಉದ್ಯಮ, ಇಲಾಖೆ ಮತ್ತು ಸರ್ಕಾರದ ನಡುವಿನ ವರ್ಧಿತ ಸಹಯೋಗದೊಂದಿಗೆ, “ಮೇಕಿಂಗ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್” ನ ನಿಜವಾದ ಉದ್ದೇಶದೊಂದಿಗೆ, ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಲು ಇದು ಸಹಾಯವಾಗುತ್ತದೆ” ಎಂದು ಕೇಂದ್ರ ಸಚಿವರು ಹೇಳಿದರು.
“ಇತ್ತೀಚಿನ ಸಾಂಕ್ರಾಮಿಕ ರೋಗದ ಬಿಕ್ಕಟ್ಟು, ಈ ವಲಯದ ಕ್ಷಮತೆಯನ್ನು ತೋರಿಸಿದೆ ಮತ್ತು ಇದನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕು. ಮುಂದಿನ 25 ವರ್ಷಗಳವರೆಗಿನ ಔಷಧ ಮತ್ತು ವೈದ್ಯಕೀಯ ಸಾಧನಗಳ ಮಾರ್ಗಸೂಚಿಗಾಗಿ ನಾವು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುತ್ತೇವೆ. ತನ್ನ ದುಬಾರಿಯಲ್ಲದ ಮತ್ತು ಉತ್ತಮ ಗುಣಮಟ್ಟದ ಔಷಧಿಗಳಿಗಾಗಿ ಭಾರತೀಯ ಔಷಧಿ ಕ್ಷೇತ್ರವು ಜಾಗತಿಕ ಪ್ರಸಿದ್ಧಿ ಹೊಂದಿದೆ. ಸಂಶೋಧನೆ ಮತ್ತು ನಾವೀನ್ಯತೆಯೊಂದಿಗೆ, ನಾವು ಶೀಘ್ರದಲ್ಲೇ ವೈದ್ಯಕೀಯ ಸಾಧನಗಳಲ್ಲೂ ಸ್ಪರ್ಧಾತ್ಮಕವಾಗಿ ಅಗ್ರಸ್ಥಾನ ಪಡೆಯುತ್ತೇವೆ” ಎಂದೂ ಅವರು ಹೇಳಿದರು.
ಸಾಮಾನ್ಯ ಔಷಧದ ಹೊರತಾಗಿ, ಪೇಟೆಂಟ್ ಪಡೆದ ಔಷಧ ತಯಾರಿಕೆಯನ್ನು ಹೆಚ್ಚಿಸುವತ್ತಲೂ ಅವರು ಗಮನಹರಿಸಿದರು. ನೀತಿ, ಆರ್ಥಿಕತೆ, ಸಂಶೋಧನೆ ಮತ್ತು ನಾವೀನ್ಯತೆ – ಮಂತಾದ ವಿವಿಧ ವಿಭಾಗಗಳ ಬಗ್ಗೆಯೂ ಹೊಸ ವಿಚಾರಗಳನ್ನು ಯೋಚಿಸುವಂತೆ, ಕೇಂದ್ರ ಸಚಿವರು ಭಾಗವಹಿಸಿದವರನ್ನು ಒತ್ತಾಯಿಸಿದರು.
ಪ್ರಮುಖ ವಸ್ತುಗಳು ಮತ್ತು ಉತ್ಪನ್ನಗಳ ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಇತರ ರಾಷ್ಟ್ರಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು, ನಾವು ಹಲವಾರು ಎಪಿಐಗಳನ್ನು ಗುರುತಿಸಿದ್ದೇವೆ ಮತ್ತು ನಮ್ಮ ದೇಶದಲ್ಲಿಯೇ ಅವುಗಳನ್ನು ತಯಾರಿಸಲು ಪ್ರಾರಂಭಿಸಿದ್ದೇವೆ ಎಂದು ಡಾ. ಮನ್ಸುಖ್ ಮಾಂಡವಿಯಾ ಹೇಳಿದರು. “ಈಗ ನಾವು ಜಾಗತಿಕ ಸ್ಪರ್ಧೆಯ ವಿರುದ್ಧ ಚುರುಕಾಗಿರಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಅಂತಾರಾಷ್ಟ್ರೀಯ ಪಾಲುದಾರರು, ಜಾಗತಿಕ ಪೂರೈಕೆ ಸರಪಳಿಗಳು, ಡಿಜಿಟಲ್ ಪರಿಣತಿ ಅನುಷ್ಠಾನದಂತಹ ಇತರ ಅಂಶಗಳ ಮೇಲೆ ನಾವು ಗಮನಹರಿಸಬೇಕು. ಆರೋಗ್ಯದ ಲಭ್ಯತೆ ಹೆಚ್ಚುತ್ತಿರುವಂತೆ ನಮ್ಮ ಅವಶ್ಯಕತೆಯೂ ಹೆಚ್ಚುತ್ತಿದೆ. ಆದ್ದರಿಂದ, ಇಂತಹ ಶೃಂಗಸಭೆಗಳು, ಎಲ್ಲಾ ಪಾಲುದಾರರನ್ನು ಒಗ್ಗೂಡಿಸಲು ಮತ್ತು ಭವಿಷ್ಯದ ನೀಲನಕ್ಷೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ” ಎಂದು ಅವರು ಒತ್ತಿ ಹೇಳಿದರು.
“ಭಾರತವು ಅನಿರೀಕ್ಷಿತ ಸಾಂಕ್ರಾಮಿಕ ಬಿಕ್ಕಟ್ಟನ್ನು ಕಂಡಾಗ, ನಾವು ಲಸಿಕೆಗಳು, ಚಿಕಿತ್ಸೆಗಳು, ಪಿಪಿಇ ಕಿಟ್ ಗಳು ಮತ್ತು ರೋಗನಿರ್ಣಯ ಪರೀಕ್ಷೆಗಳು, ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್ ಗಳು ಇತ್ಯಾದಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ದಾಖಲೆ ಸಮಯದಲ್ಲಿ ಸಾಧಿಸಿದ್ದೇವೆ. ಭಾರತವು, ಈಗ ಔಷಧ ಮತ್ತು ವೈದ್ಯಕೀಯ ಸಾಧನಗಳ ಕ್ಷೇತ್ರಗಳಲ್ಲಿ ಅಗ್ರ ಸ್ಥಾನವನ್ನು ಪಡೆಯಲು ಸಿದ್ಧವಾಗಿದೆ. ಈ ಕ್ಷೇತ್ರದಲ್ಲಿನ ಪೂರೈಕೆಯ ವೇಗಕ್ಕೆ ಉತ್ತೇಜನ ನೀಡಲು, ಔಷಧಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಉತ್ಪಾದನಾ ಸಂಬಂಧಿತ ಯೋಜನೆಯ ರೂಪದಲ್ಲಿ ಪ್ರೋತ್ಸಾಹವನ್ನು ನೀಡಿ, ಉದ್ಯಮಕ್ಕೆ ಬೆಂಬಲ ಮತ್ತು ಸಕ್ರಿಯಗೊಳಿಸುವ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಶ್ಲಾಘನೀಯ ಕ್ರಮಗಳನ್ನು ತೆಗೆದುಕೊಂಡಿದೆ. ಸಾಮಾನ್ಯ ಔಷಧಿಗಳ ತಯಾರಕರಿಂದ, ಹೆಚ್ಚಿನ ಮೌಲ್ಯದ ಪೇಟೆಂಟ್ ಪಡೆದ ಔಷಧಗಳು, ಕೋಶ ಮತ್ತು ಜೀನ್ ಥೆರಪಿ, ನಿಖರವಾದ ಔಷಧ ಮುಂತಾದ ಹೊಸ ತಂತ್ರಜ್ಞಾನಗಳಿಗೆ ಮೌಲ್ಯ ಸರಪಳಿಯನ್ನು ಹೆಚ್ಚಿಸಲು, ಇದು ನಮಗೆ ಅನುವು ಮಾಡಿಕೊಡುತ್ತದೆ. ಇಲಾಖೆಯಿಂದ ಜಾರಿಗೊಳಿಸಲಾದ ವಿವಿಧ ಉಪಕ್ರಮಗಳು, ಅಂದರೆ ಉದಾಹರಣೆಗೆ, 'ಬೃಹತ್ ಔಷಧ ಪಾರ್ಕ್ ಗಳ ಪ್ರಚಾರ' ಮತ್ತು 'ಮೆಡ್-ಟೆಕ್ ಪಾರ್ಕ್ ಗಳ ಪ್ರಚಾರ' ಮುಂತಾದವು, ವಿಶ್ವದರ್ಜೆಯ ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳ ರಚನೆಯನ್ನು ಕಲ್ಪಿಸುತ್ತದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ನಮ್ಮ ದೇಶದ ಬಳಿಯಿರುವ ಸ್ಪರ್ಧಾತ್ಮಕ ಅಸ್ತ್ರವೆಂದರೆ, ಅದು ಕಡಿಮೆ ಬೆಲೆ ಮತ್ತು ಗುಣಮಟ್ಟ” ಎಂಬ ವಿಷಯವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಹಾಯಕ ಸಚಿವ, ಶ್ರೀ ಭಗವಂತ್ ಖೂಬಾ ಉಲ್ಲೇಖಿಸಿದರು.
ವೈದ್ಯಕೀಯ ಸಾಧನಗಳ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ವಿಷಯದಲ್ಲಿ, ಸರ್ಕಾರದ ಪಾತ್ರ ಬಗ್ಗೆ ಎತ್ತಿ ತೋರಿಸಿದ ಔಷಧ ಇಲಾಖೆ ಕಾರ್ಯದರ್ಶಿ ಶ್ರೀಮತಿ. ಎಸ್.ಅಪರ್ಣಾ ಅವರು, ಇದಕ್ಕಾಗಿ ಸಾಕಷ್ಟು ಉತ್ತೇಜನವನ್ನು ನೀಡಲಾಗುತ್ತಿದೆ ಮತ್ತು ಭಾರತದ ಕೌಶಲ್ಯ ಕೇಂದ್ರದ ಬುನಾದಿಯಾಗಿರುವ ಈ ಶಕ್ತಿಯೊಂದಿಗೆ, 2025 ರ ವೇಳೆಗೆ ಇದು 50 ಶತಕೋಟಿ ಅಮೆರಿಕ ಡಾಲರ್ ಗಳಷ್ಟು ಮೌಲ್ಯವನ್ನು ತಲುಪುವ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿದರು. ಉತ್ಪಾದನೆ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ, ಎರಡಕ್ಕೂ ಸ್ಥಿರವಾದ ದೀರ್ಘಕಾಲೀನ ನೀತಿ ಪರಿಸರವನ್ನು ಖಚಿತಪಡಿಸುವತ್ತ ಮತ್ತು ಇತರ ಸಚಿವಾಲಯಗಳು ಹಾಗು ಕೇಂದ್ರ ಸರ್ಕಾರದ ಇಲಾಖೆಗಳ ಸಹಾಯದ ಆಧಾರದ ಮೇಲೆ ನಡೆಯುತ್ತಿರುವ ಉದ್ಯಮದ ಮೇಲಿನ ಅನುಸರಣೆ ಹೊರೆಯನ್ನು ಕಡಿಮೆ ಮಾಡುವತ್ತ, ಇಲಾಖೆಯು ಕಾರ್ಯ ನಿರ್ವಹಿಸುತ್ತಿದೆ ಎಂದೂ ಅವರು ಹೇಳಿದರು.
***
(Release ID: 1819158)
Visitor Counter : 184