ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ ಇದರ ಫಲಾನುಭವಿಗಳ “ಗೃಹ ಪ್ರವೇಶ”ದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ.

ಪ್ರಕಟಣಾ ದಿನಾಂಕ: 29 MAR 2022 4:04PM by PIB Bengaluru

ನಮಸ್ಕಾರ್ ಜೀ!

ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಜೀ ಚೌಹಾಣ್, ಕೇಂದ್ರ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳೇ, ಮಧ್ಯ ಪ್ರದೇಶ ಸರಕಾರದ ಸಚಿವರೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಮಧ್ಯ ಪ್ರದೇಶದ ಶಾಸಕರೇ, ಇತರ ಗಣ್ಯರೇ ಮತ್ತು ಮಧ್ಯ ಪ್ರದೇಶದ ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ!.

ಇಂದು, ಮಧ್ಯ ಪ್ರದೇಶದ ಸುಮಾರು 5.25 ಲಕ್ಷ ಬಡ ಕುಟುಂಬಗಳು ತಮ್ಮ ಕನಸಿನ ಪಕ್ಕಾ ಮನೆಗಳನ್ನು ಪಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ವಿಕ್ರಮ ಸಂವತ್ಸರ 2079 ಆರಂಭಗೊಳ್ಳಲಿದೆ. ಹೊಸ ವರ್ಷದ ಸಂದರ್ಭದಲ್ಲಿ “ಗೃಹ ಪ್ರವೇಶ” (ಹೊಸ ಮನೆಗಳ ಒಕ್ಕಲು) ಜೀವನದ ಅಮೂಲ್ಯ ಘಟನೆ. ನಿಮಗೆಲ್ಲ ನಾನು ಶುಭವನ್ನು ಹಾರೈಸುತ್ತೇನೆ. 

ಸ್ನೇಹಿತರೇ,

ನಮ್ಮ ದೇಶದಲ್ಲಿ ಬಡತನವನ್ನು ನಿವಾರಣೆ ಮಾಡಲು ಕೆಲವು ಪಕ್ಷಗಳು ಹಲವು ಘೋಷಣೆಗಳನ್ನು ಹಾಕಿದವು, ಆದರೆ ಬಡವರನ್ನು ಸಶಕ್ತೀಕರಣ ಮಾಡಲು ಬಹಳ ಕೆಲಸಗಳೇನನ್ನೂ ಮಾಡಲಾಗಿಲ್ಲ. ಒಮ್ಮೆ ಬಡವರನ್ನು ಸಶಕ್ತೀಕರಣಗೊಳಿಸಿದರೆ ಆಗ ಅವರಿಗೆ ಬಡತನದ ವಿರುದ್ಧ ಹೋರಾಡುವ ಧೈರ್ಯ ಬರುತ್ತದೆ ಎಂಬುದು ನನ್ನ ನಂಬಿಕೆಯಾಗಿದೆ. ಪ್ರಾಮಾಣಿಕ ಸರಕಾರದ ಪ್ರಯತ್ನಗಳು ಮತ್ತು ಸಶಕ್ತ ಬಡವರು ಪರಸ್ಪರ ಜೊತೆಗೂಡಿದರೆ, ಬಡತನ ಸೋಲಿಸಲ್ಪಡುತ್ತದೆ. ಆದುದರಿಂದ, ಅದು ಕೇಂದ್ರದಲ್ಲಿ ಬಿ.ಜೆ.ಪಿ. ಸರಕಾರವಿರಲಿ ಅಥವಾ ರಾಜ್ಯಗಳಲಿ ಬಿ.ಜೆ.ಪಿ. ಸರಕಾರಗಳಿರಲಿ, ಅವುಗಳು “ಸಬ್ ಕಾ ಸಾಥ್-ಸಬ್ ಕಾ ವಿಕಾಸ್” ಎಂಬ ಮಂತ್ರದೊಂದಿಗೆ ಬಡವರನ್ನು ಸಶಕ್ತೀಕರಣಗೊಳಿಸುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಇಂದಿನ ಈ ಕಾರ್ಯಕ್ರಮ ಈ ಆಂದೋಲನದ ಭಾಗ.  ಈ 5.25 ಲಕ್ಷ ಮನೆಗಳನ್ನು ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಬರೇ ಆಂಕೆ ಸಂಖ್ಯೆಗಳು ಮಾತ್ರವಷ್ಟೇ ಅಲ್ಲ. ಈ 5.25 ಲಕ್ಷ ಮನೆಗಳು ದೇಶದಲ್ಲಿಯ ಸಶಕ್ತ ಬಡವರ ಪ್ರಮಾಣಕ ಮುದ್ರೆಗಳು. ಈ 5.25 ಲಕ್ಷ ಮನೆಗಳು ಬಿ.ಜೆ.ಪಿ. ಸರಕಾರದ ಸೇವಾ ಮನೋಭಾವದ ಪ್ರತೀಕಗಳು. ಈ 5.25 ಲಕ್ಷ ಮನೆಗಳು ಗ್ರಾಮಗಳ ಮಹಿಳೆಯರನ್ನು “ಲಾಕ್ಪತಿ” (ಲಕ್ಷಾಧಿಪತಿ) ಗಳನ್ನಾಗಿಸುವ ಆಂದೋಲನದ ಪ್ರತಿಬಿಂಬಗಳು. ಈ ಮನೆಗಳನ್ನು ಮಧ್ಯಪ್ರದೇಶದ ಅತ್ಯಂತ ದೂರದ, ದುರ್ಗಮ ಪ್ರದೇಶಗಳ ಮತ್ತು ಬುಡಕಟ್ಟು ಪ್ರದೇಶಗಳ ಬಡವರಿಗೆ ನೀಡಲಾಗಿದೆ. ಈ 5.25ಲಕ್ಷ ಮನೆಗಳಿಗಾಗಿ ನಾನು ಮಧ್ಯ ಪ್ರದೇಶದ ಜನರನ್ನು ಅಭಿನಂದಿಸುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ಬಡವರಿಗೆ ಪಕ್ಕಾ ಮನೆಗಳನ್ನು ಕೊಡುವ ಈ ಪ್ರಚಾರಾಂದೋಲನ ಬರೇ ಸರಕಾರಿ ಯೋಜನೆ ಮಾತ್ರವಲ್ಲ. ಇದು ಗ್ರಾಮಸ್ಥರು ಮತ್ತು ಬಡವರಿಗೆ ನೀಡಲಾದ ಬದ್ಧತೆ. ಬಡವರನ್ನು ಬಡತನದಿಂದ ಮೇಲೆತ್ತುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಮತ್ತು ಅವರಿಗೆ ಬಡತನದ ವಿರುದ್ಧ  ಹೋರಾಡುವ ನಿಟ್ಟಿನಲ್ಲಿ ಪ್ರೋತ್ಸಾಹ. ಬಡವರು ತಮ್ಮ ತಲೆಯ ಮೇಲೆ ಬಲಿಷ್ಟ ಸೂರನ್ನು ಹೊಂದಿದಾಗ ಅವರಿಗೆ ತಮ್ಮ ಮಕ್ಕಳ ಶಿಕ್ಷಣ ಮತ್ತು ಇತರ ಕೆಲಸಗಳತ್ತ ತಮ್ಮ ಪೂರ್ಣ ಗಮನವನ್ನು ನೀಡಲು ಸಾಧ್ಯವಾಗುತ್ತದೆ. ಬಡವರಿಗೆ ಮನೆಗಳು ದೊರೆತಾಗ ಅವರ ಜೀವನದಲ್ಲೊಂದು ಸ್ಥಿರತೆ ಲಭಿಸುತ್ತದೆ. ಈ ಚಿಂತನೆಯೊಂದಿಗೆ ನಮ್ಮ ಸರಕಾರ ಪಿ.ಎಂ. ಆವಾಸ್ ಯೋಜನಾಕ್ಕೆ ಗರಿಷ್ಟ ಆದ್ಯತೆಯನ್ನು ನೀಡುತ್ತಿದೆ. ನಾನು ಅಧಿಕಾರ ಕೈಗೆ ತೆಗೆದುಕೊಳ್ಳುವುದಕ್ಕೆ ಮೊದಲು ಈ ಹಿಂದಿನ ಸರಕಾರಗಳಲ್ಲಿ ಇದ್ದವರು ಅವರ ಅವಧಿಯಲ್ಲಿ ಕೆಲವೇ ಕೆಲವು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿದ್ದರು. ಆದರೆ ನಮ್ಮ ಸರಕಾರ ಬಡವರಿಗೆ 2.5 ಕೋಟಿ ಮನೆಗಳನ್ನು ನೀಡಿದೆ ಮತ್ತು ಅವುಗಳಲ್ಲಿ ಎರಡು ಕೋಟಿ ಮನೆಗಳು ನಿರ್ಮಾಣವಾಗಿರುವುದು ಗ್ರಾಮಗಳಲ್ಲಿ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಸವಾಲು ಇದ್ದಾಗಲೂ ಈ ಕೆಲಸದ ವೇಗವನ್ನು ಕಡಿಮೆ ಮಾಡಲಾಗಿಲ್ಲ. ಮಧ್ಯ ಪ್ರದೇಶದಲ್ಲಿ ಕೂಡಾ ಮಂಜೂರಾದ 30.5 ಲಕ್ಷ ಮನೆಗಳಲ್ಲಿ 24 ಲಕ್ಷಕ್ಕೂ ಅಧಿಕ ಮನೆಗಳು ಪೂರ್ಣಗೊಂಡಿವೆ. ಇದರಿಂದ ಪಕ್ಕಾ ಮನೆಯ ಕನಸನ್ನೂ ಕಾಣುವುದು ದುಸ್ತರವಾಗಿದ್ದ ಬೈಗಾ, ಸಹಾರಿಯಾ ಮತ್ತು ಭಾರಿಯಾದಂತಹ ಸಮಾಜದ ವರ್ಗಗಳಿಗೆ ಪ್ರಯೋಜನವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಬಿ.ಜೆ.ಪಿ. ಸರಕಾರಗಳು ಇರುವಲ್ಲೆಲ್ಲ ಅವುಗಳ ವಿಶೇಷತೆ ಏನೆಂದರೆ ಅವುಗಳು ತಳಮಟ್ಟದಲ್ಲಿ ಇದ್ದುಕೊಂಡು ಬಡವರ ಆವಶ್ಯಕತೆಗಳು ಮತ್ತು ಹಿತಾಸಕ್ತಿಗಳನ್ನು ಈಡೇರಿಸಲು ನಿರಂತರ ಕೆಲಸ ಮಾಡುವುದು. ಪಿ.ಎಂ. ಆವಾಸ್ ಯೋಜನಾದಲ್ಲಿಯೂ ಕೂಡಾ ನಾವು ಬಡವರಿಗೆ ಒದಗಿಸುವ ಮನೆಗಳು ಅವರ ಇತರ ಆವಶ್ಯಕತೆಗಳನ್ನು ಪೂರೈಸುವಂತಿರಬೇಕು ಎಂಬ ಬಗ್ಗೆ ಕಾಳಜಿ ವಹಿಸಿದೆವು. ಪ್ರತೀ ಮನೆಯೂ ಶೌಚಾಲಯವನ್ನು ಹೊಂದಿದೆ. ಸೌಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕವನ್ನು, ಉಜಾಲಾ ಯೋಜನೆ ಅಡಿಯಲ್ಲಿ ಎಲ್.ಇ.ಡಿ. ಬಲ್ಬುಗಳನ್ನೂ, ಉಜ್ವಲಾ ಯೋಜನೆ ಅಡಿಯಲ್ಲಿ ಅನಿಲ ಸಂಪರ್ಕವನ್ನೂ, ಮತ್ತು ಹರ್ ಘರ್ ಜಲ್ ಯೋಜನಾ ಅಡಿಯಲ್ಲಿ ನೀರಿನ ಸಂಪರ್ಕವನ್ನೂ ಹೊಂದಿದೆ. ಅಂದರೆ ಬಡ ಫಲಾನುಭವಿಗಳು ಈ ಸೌಲಭ್ಯಗಳಿಗಾಗಿ ಮತ್ತೆ ಮತ್ತೆ ಸರಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾದ ಅವಶ್ಯಕತೆ ಇರುವುದಿಲ್ಲ. ಬಡಜನತೆಗೆ ಈ ರೀತಿ ಸೇವೆ ಮಾಡುವ ಚಿಂತನೆಯಿಂದಾಗಿ ದೇಶದ ಪ್ರತಿಯೊಬ್ಬ ದೇಶವಾಸಿಯ ಜೀವನ ಇಂದು ಸುಲಭವಾಗಿದೆ. 

ಸ್ನೇಹಿತರೇ,

ಭಾರತವು ಶಕ್ತಿಯನ್ನು ಆರಾಧಿಸುವ ದೇಶ. ನವರಾತ್ರಿ ಇನ್ನು ಕೆಲವು ದಿನಗಳಲ್ಲಿ ಆರಂಭವಾಗುತದೆ. ನಮ್ಮ ದೇವತೆಗಳು ವೈರಿಗಳನ್ನು ನಾಶಮಾಡುತ್ತಾರೆ. ನಮ್ಮ ದೇವತೆಗಳು ಜ್ಞಾನಕ್ಕೆ, ಕಲೆಗೆ ಮತ್ತು ಸಂಸ್ಕೃತಿಗೆ  ಪ್ರೇರಣೆ. ಅವರಿಂದ ಪ್ರೇರಣೆ ಪಡೆದು, 21 ನೇ ಶತಮಾನದ ಭಾರತ ತನ್ನನ್ನು ತಾನು ಸಶಕ್ತೀಕರಣಗೊಳಿಸಿಕೊಳ್ಳುವಲ್ಲಿ ಮತ್ತು ಅದರ ಮಹಿಳಾ ಶಕ್ತಿಯನ್ನು ಸಶಕ್ತೀಕರಣಗೊಳಿಸಿಕೊಳ್ಳುವಲ್ಲಿ ನಿರತವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಈ ಆಂದೋಲನದ ಪ್ರಮುಖ ಭಾಗ. ಪಿ.ಎಂ. ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣ ಮಾಡಲಾದ ಸುಮಾರು 2 ಕೋಟಿ ಮನೆಗಳ ಮಾಲಕತ್ವದ ಹಕ್ಕು ಮಹಿಳೆಯರಲ್ಲಿದೆ. ಈ ಮಾಲಕತ್ವದ ಹಕ್ಕು ಕೂಡಾ ಮನೆಗೆ ಸಂಬಂಧಿಸಿದ ಇತರ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾಲುದಾರಿಕೆಯನ್ನು ಬಲಪಡಿಸಿದೆ. ಇದು ಜಗತ್ತಿನ ವಿಶ್ವವಿದ್ಯಾಲಯಗಳಿಗೆ ಅಧ್ಯಯನ ವಿಷಯವಾಗುವಂತಹದು ಮತ್ತು ಮತ್ತು ಮಧ್ಯಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ಇದರ ಅಧ್ಯಯನ ಆಗಬೇಕಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಮಹಿಳೆಯರನ್ನು ಸಮಸ್ಯೆಗಳಿಂದ ಮುಕ್ತ ಮಾಡುವುದಕ್ಕಾಗಿ ಪ್ರತೀ ಮನೆಗೂ ನೀರು ಒದಗಿಸುವ ನಿಟ್ಟಿನಲ್ಲಿ ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಕಳೆದ ಎರಡೂವರೆ ವರ್ಷಗಳಲ್ಲಿ ದೇಶಾದ್ಯಂತ ಆರು ಕೋಟಿ ಕುಟುಂಬಗಳು ಈ ಯೋಜನೆ ಅಡಿಯಲಿ ಶುದ್ಧ ಕುಡಿಯುವ ನೀರು ಸಂಪರ್ಕವನ್ನು ಪಡೆದಿವೆ. ಯೋಜನೆ ಆರಂಭ ಮಾಡುವಾಗ ಮಧ್ಯ ಪ್ರದೇಶದಲ್ಲಿ ಬರೇ 13 ಲಕ್ಷ ಗ್ರಾಮೀಣ ಮನೆಗಳಲ್ಲಿ ನಳ್ಳಿ ನೀರಿನ ಸೌಲಭ್ಯವಿತ್ತು. ಇಂದು ನಾವು 50 ಲಕ್ಷ ಕುಟುಂಬಗಳಿಗೆ ನಳ್ಳಿ ನೀರು ಒದಗಿಸುವ ಮೈಲಿಗಲ್ಲು ಸ್ಥಾಪನೆಯ ಸನಿಹದಲ್ಲಿ ಇದ್ದೇವೆ. ಮಧ್ಯ ಪ್ರದೇಶದ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ನಳ್ಳಿ ನೀರು ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.

ಸ್ನೇಹಿತರೇ,

ಇಂದು ನಾನು ದೇಶದ ಎಲ್ಲಾ ಬಡ ಜನರಿಗೆ ಭರವಸೆ ನೀಡಲು ಬಯಸುತ್ತೇನೆ ಏನೆಂದರೆ, ಮಧ್ಯ ಪ್ರದೇಶ ಸಹಿತ ಮನೆಗಳನ್ನು ನಿರ್ಮಾಣ ಮಾಡುವ ಆಂದೋಲನ ಬಹಳ ತ್ವರಿತಗತಿಯಿಂದ ಸಾಗುತ್ತಿದೆ. ಆದಾಗ್ಯೂ ಕೆಲವು ಜನರಿಗೆ ಪಕ್ಕಾ ಮನೆ ಇನ್ನೂ ದೊರಕಿಲ್ಲ. ನನಗೆ ಇದು ಸ್ಪಷ್ಟವಾಗಿ ತಿಳಿದಿದೆ. ಈ ವರ್ಷದ ಮುಂಗಡ ಪತ್ರದಲ್ಲಿ ದೇಶಾದ್ಯಂತ 80 ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಹಣ ತೆಗೆದಿಡುವ ಪ್ರಸ್ತಾವನೆಯನ್ನು ಮಾಡಲಾಗಿದೆ ಎಂಬುದನ್ನು ನಾನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ. ಮತ್ತು ಮಧ್ಯ ಪ್ರದೇಶದ ಲಕ್ಷಾಂತರ ಕುಟುಂಬಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಇದುವರೆಗೆ 2.25 ಲಕ್ಷ ಕೋ.ರೂ. ಗಳನ್ನು ಈ ಯೋಜನೆಯಲ್ಲಿ ವಿನಿಯೋಗಿಸಲಾಗಿದೆ.  ಈ ಹಣವನ್ನು ಗ್ರಾಮಗಳಲ್ಲಿ ವಿನಿಯೋಗಿಸಲಾಗಿದ್ದು ಮತ್ತು ಇದು ಗ್ರಾಮೀಣ ಆರ್ಥಿಕತೆಗೆ ಬಲವನ್ನು ನೀಡಿದೆ. ಮನೆಯೊಂದನ್ನು ಕಟ್ಟುವಾಗ ಇಟ್ಟಿಗೆ, ಮರಳು, ಕಬ್ಬಿಣದ ಸರಳು, ಸಿಮೆಂಟ್ ಗಳ ವ್ಯಾಪಾರ ಇರುತ್ತದೆ ಮತ್ತು ಸ್ಥಳಿಯ ಕಾರ್ಮಿಕರು ಇದರಲ್ಲಿ ಒಳಗೊಂಡಿರುತ್ತಾರೆ. ಆದುದರಿಂದ ಪಿ.ಎಂ. ಆವಾಸ್ ಯೋಜನಾವು ಗ್ರಾಮಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ನಮ್ಮ ದೇಶವು ಹಲವು ಸರಕಾರಗಳನ್ನು ನೋಡಿದೆ. ಆದರೆ ಇದೇ ಮೊದಲ ಬಾರಿಗೆ ದೇಶದ ಜನರು ತಮ್ಮ ಸಂತೋಷ ಮತ್ತು ಸಂಕಷ್ಟಗಳಲ್ಲಿ ಅವರ ಸಂಗಾತಿಗಳಂತೆ ಹೆಗಲಿಗೆ ಹೆಗಲು ಕೊಟ್ಟು ಇರುವಂತಹ ಸರಕಾರಗಳನ್ನು ನೋಡುತ್ತಿದ್ದಾರೆ. ಕೊರೊನಾ ಬಿಕ್ಕಟ್ಟಿನಲ್ಲಿ ಬಿ.ಜೆ.ಪಿ. ಸರಕಾರ ತಾನು ಬಡವರ ವಿಷಯದಲ್ಲಿ ಯಾವ ಸೂಕ್ಷ್ಮತ್ವದಿಂದ ಕಾರ್ಯವೆಸಗುತ್ತಿರುವೆನೆಂಬುದನ್ನು ತೋರಿಸಿಕೊಟ್ಟಿದೆ. ಬಡವರಿಗೆ ಉಚಿತ ಲಸಿಕೆ ನೀಡುವುದರಲ್ಲಿ, ಉಚಿತ ಪಡಿತರ ಒದಗಿಸುವಲ್ಲಿ ಅದು ಸೂಕ್ಷ್ಮತ್ವದಿಂದ ವರ್ತಿಸಿದೆ. ಈಗಷ್ಟೇ ಶಿವರಾಜ್ ಜೀ ಅವರು ಬಹಳ ವಿವರವಾಗಿ ತಿಳಿಸಿದ್ದಾರೆ. ಬರೇ ಎರಡು ದಿನಗಳ ಹಿಂದೆ ನಾವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾವನ್ನು ಮುಂದಿನ ಆರು ತಿಂಗಳ ಕಾಲ ಮುಂದುವರೆಸುವುದಕ್ಕೆ ನಿರ್ಧಾರ ಕೈಗೊಂಡೆವು. ಇದರಿಂದ ಬಡವರ ಮನೆಯ ಸ್ಟೌವ್ ಉರಿಯುತ್ತಿರುತ್ತದೆ. ಈ ಮೊದಲು ಜಗತ್ತು ಕೊರೊನಾದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿತ್ತು ಮತ್ತು ಈಗ ಇಡೀ ಜಗತ್ತು ಯುದ್ಧ ಭೂಮಿಯಲ್ಲಿದೆ.. ಇದರ ಪರಿಣಾಮವಾಗಿ ವಿವಿಧ ಆರ್ಥಿಕ ವ್ಯವಸ್ಥೆಗಳಲ್ಲಿ ಹೊಸ ಬಿಕ್ಕಟ್ಟು ಉದ್ಭವಿಸಿದೆ. ಹೊರೆಯನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಲು ಮತ್ತು ಭಾರತದ ನಾಗರಿಕರಿಗೆ ಸಾಧ್ಯ ಇರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸಲು ಪ್ರಯತ್ನಗಳು ನಡೆದಿವೆ.

ಸಹೋದರರೇ ಮತ್ತು ಸಹೋದರಿಯರೇ,

ನೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಈ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ನಮ್ಮ ಸರಕಾರ ಬಡವರಿಗೆ ಉಚಿತ ಪಡಿತರಕ್ಕಾಗಿ  2.60 ಲಕ್ಷ ಕೋ.ರೂ.ಗಳನ್ನು ಖರ್ಚು ಮಾಡಿದೆ. ಮುಂದಿನ ಆರು ತಿಂಗಳ ಕಾಲ ಇದಕ್ಕಾಗಿ 80,000 ಕೋ.ರೂ.ಗಳನ್ನು ಖರ್ಚು ಮಾಡಲಾಗುವುದು. ಈ ಮೊದಲು ಜನರ ಗಳಿಕೆಯನ್ನು ದರೋಡೆ ಮಾಡುತ್ತಿದ್ದವರು ಮತ್ತು ಅದರಿಂದಾಗಿ ತಮ್ಮ ಕಿಸೆ ತುಂಬಿಸಿಕೊಳ್ಳುತ್ತಿದ್ದವರು ಈ ಯೋಜನೆಯನ್ನು ಅಪಹಾಸ್ಯ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ಸುಳ್ಳುಗಳನ್ನು ಹರಡುತ್ತಿದ್ದಾರೆ ಹಾಗು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಇಂದು ದೇಶದ ಜೊತೆ ನಾನು ಕೆಲವನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ತಾವು ಇದನ್ನು ಎಚ್ಚರಿಕೆಯಿಂದ ಕೇಳಿರಿ. 

ಸ್ನೇಹಿತರೇ,

ಹಿಂದಿನ ಸರಕಾರಗಳಲ್ಲಿದ್ದ ಜನರು ಎಂದೆಂದೂ ಜನಿಸಿರದ ನಾಲ್ಕು ಕೋಟಿ ಫಲಾನುಭವಿಗಳ ನಕಲಿ ಹೆಸರುಗಳನ್ನು ಬಡವರ ಪಡಿತರವನ್ನು ಲೂಟಿ ಮಾಡುವುದಕ್ಕಾಗಿ ತಯಾರಿಸಿದ್ದರು. ನಾಲ್ಕು ಕೋಟಿ ಬಹಳ ದೊಡ್ಡ ಸಂಖ್ಯೆ. ಈ ನಾಲ್ಕು ಕೋಟಿ ನಕಲಿ ಹೆಸರುಗಳನ್ನು ಕಾಗದದಲ್ಲಿ ಸೃಷ್ಟಿ ಮಾಡಲಾಯಿತು. ಮತ್ತು ಉಚಿತ ಪಡಿತರವನ್ನು ಈ ನಾಲ್ಕು ಕೋಟಿ ನಕಲಿ ಜನರ ಹೆಸರಿನಲ್ಲಿ ಪಡೆದು ಹಿಂಬಾಗಿಲಿನ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು. ಅಕ್ರಮ ಮೂಲಗಳ ಈ ಹಣವು ಕಪ್ಪು ಖಾತೆಗಳಿಗೆ ಜಮೆಯಾಗುತ್ತಿತ್ತು. 2014ರಲ್ಲಿ ನಾವು ಈ ಸರಕಾರ ರಚಿಸಿದ ಬಳಿಕ ನಾವು ಈ ನಕಲಿ ಹೆಸರುಗಳಿಗಾಗಿ ಹುಡುಕಾಟ ಆರಂಭ ಮಾಡಿದೆವು. ಮತ್ತು ಅವುಗಳನ್ನು ಪಡಿತರ ಕಾರ್ಡುಗಳಿಂದ ತೆಗೆದು ಹಾಕಿದೆವು, ಇದರಿಂದ ಬಡವರಿಗೆ ಅವರ ಹಕ್ಕಿನದನ್ನು ಲಭಿಸುವಂತೆ ಮಾಡಲಾಯಿತು. ಸುಮ್ಮನೆ ಕಲ್ಪಿಸಿಕೊಳ್ಳಿ ಅವರು ಪ್ರತೀ ತಿಂಗಳೂ ಬಡವರ ಬಾಯಿಯಿಂದ ರೊಟ್ಟಿಯನ್ನು ಕಸಿದುಕೊಂಡು ಕೋಟ್ಯಾಂತರ ರೂಪಾಯಿಗಳನ್ನು ಲೂಟುತ್ತಿದ್ದರು. ನಾವು ಬಡವರ ಪಡಿತರ ಕಳವಾಗಬಾರದು ಎಂದು ಪಡಿತರ ಅಂಗಡಿಗಳಲ್ಲಿ ಆಧುನಿಕ ಯಂತ್ರಗಳನ್ನು ಸ್ಥಾಪಿಸಿದ್ದೆವು. ನಿಮಗೆ ಗೊತ್ತಿರುವಂತೆ ಪಡಿತರ ಅಂಗಡಿಗಳಲ್ಲಿ ಈ ಯಂತ್ರಗಳನ್ನು ಅಳವಡಿಸುವ ಆಂದೋಲನವನ್ನು ನಾವು ಆರಂಭ ಮಾಡಿದಾಗ ಅವರಿದನ್ನೂ ವಿನೋದದ ಸಂಗತಿಯನ್ನಾಗಿ ಮಾಡಿದರು. ಈ ಯಂತ್ರಗಳ ಮೇಲೆ ಜನರು ತಮ್ಮ ಹೆಬ್ಬೆಟ್ಟು ನೀಡಿದಾಗ ಸತ್ಯ ಹೊರಗೆ ಬರುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಇದನ್ನು ತಡೆಯಲು, ಅವರು ಜನರು ಜನರು ಹೆಬ್ಬೆಟ್ಟು ನೀಡಿದರೆ ಅವರಿಗೆ ಕೊರೊನಾ ಬರುತ್ತದೆ ಎಂಬ ಸುಳ್ಳನ್ನು ಹರಡಿದರು. ನಮ್ಮ ಸರಕಾರ ಈ ಎಲ್ಲಾ ಸುಳ್ಳಿನಾಟಗಳಿಗೆ ತಡೆ ಹಾಕಿತು ಮತ್ತು ಅದರಿಂದಾಗಿ ಈ ಜನರು ಈಗ ಸಿಟ್ಟಿಗೆದ್ದಿದ್ದಾರೆ. ಪಡಿತರ ಅಂಗಡಿಗಳಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರದಿದ್ದರೆ ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಬಡವರಿಗೆ ಏನಾಗುತ್ತಿತ್ತು ಮತ್ತು ಈ ನಾಲ್ಕು ಕೋಟಿ ನಕಲಿ ಹೆಸರುಗಳನ್ನು ತೆಗೆದು ಹಾಕದಿದ್ದರೆ ಏನಾಗುತ್ತಿತ್ತು ಎಂಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ?. ಬಿ.ಜೆ.ಪಿ. ಸರಕಾರ ಬಡವರಿಗಾಗಿ ಇದೆ ಮತ್ತು ಅದು ಹಗಲು ರಾತ್ರಿ ಬಡವರಿಗಾಗಿ ಕೆಲಸ ಮಾಡುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಸ್ವಾತಂತ್ರ್ಯದ ಈ “ಅಮೃತ ಕಾಲ”ದಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ಮೂಲ ಸೌಕರ್ಯಗಳು ತ್ವರಿತವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಇರಾದೆ. ಇಂತಹ ಪ್ರಯತ್ನಗಳ ಬಲದಲ್ಲಿ ಪ್ರತೀ ಯೋಜನೆಗಳೂ ಶೇಖಡಾ ನೂರರಷ್ಟು ಫಲಾನುಭವಿಗಳಿಗೆ ಪರಿಪೂರ್ಣವಾಗಿ ತಲುಪುವಂತೆ ನೋಡಿ ಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದೇವೆ. ಯಾವುದೇ ಯೋಜನೆಯ ಯಾವುದೇ ಫಲಾನುಭವಿ ಪ್ರಯೋಜನಗಳನ್ನು ಮನೆ ಬಾಗಿಲಲ್ಲಿ ಪಡೆಯಬೇಕು ಎಂಬುದಕ್ಕೆ ನಾವು ಬದ್ಧರಾಗಿದ್ದೇವೆ. ಈ ಪರಿಪೂರ್ಣತೆ ಸಾಧನೆಯ ಗುರಿಯ ಅತ್ಯಂತ ದೊಡ್ಡ ಹೆಚ್ಚುಗಾರಿಕೆ ಎಂದರೆ ಯೋಜನೆಗಳ ಪ್ರಯೋಜನಗಳಿಂದ ಯಾರೊಬ್ಬ ಬಡವರೂ ವಂಚಿತರಾಗುವುದಿಲ್ಲ ಮತ್ತು ಸರಕಾರ ಪ್ರತಿಯೊಬ್ಬರನ್ನೂ ತಲುಪುತ್ತದೆ. ಇದರಲ್ಲಿ  ಯಾವುದೇ ಪಕ್ಷಪಾತಕ್ಕಾಗಲೀ, ಅಥವಾ ಭ್ರಷ್ಟಾಚಾರಕ್ಕಾಗಲೀ ಅವಕಾಶ ಇರುವುದಿಲ್ಲ. ಸಮಾಜದ ಕೊನೆಯ ಸಾಲಿನಲ್ಲಿರುವ ಬಡವರಿಗೆ ಸೌಲಭ್ಯಗಳನ್ನು ಒದಗಿಸುವ ಆಶಯ ಇದ್ದಾಗ ಮತ್ತು ಅಲ್ಲಿ ನೀತಿ ಇದ್ದಾಗ  “ಸಭ್ ಕಾ ಸಾಥ್ ಮತ್ತು ಸಬ್ ಕಾ ವಿಕಾಸ್” ಸಾಧ್ಯವಾಗುತ್ತದೆ. 

ಸ್ನೇಹಿತರೇ,

ನಾವು ಗ್ರಾಮಗಳ  ಪಾತ್ರವನ್ನು ನಿರಂತರವಾಗಿ ವಿಸ್ತರಿಸುತ್ತಲೇ ಬಂದಿದ್ದೇವೆ. ಬಹಳ ದೀರ್ಘ ಕಾಲದಿಂದ ಗ್ರಾಮಗಳ ಆರ್ಥಿಕತೆ ಕೃಷಿಗಷ್ಟೇ ಸೀಮಿತವಾಗಿತ್ತು. ನಾವು ಕೃಷಿ, ಕೃಷಿಕರು, ಪಶುಪಾಲಕರನ್ನು ಆಧುನಿಕ ತಂತ್ರಜ್ಞಾನಗಳಾದ ಡ್ರೋನ್ ಗಳತ್ತ ಸಾಗುವಂತೆ ಪ್ರೇರೇಪಿಸುತ್ತಿದ್ದೇವೆ ಮತ್ತು ಪ್ರಾಚೀನ ವ್ಯವಸ್ಥೆಗಳಾದಂತಹ ಸಹಜ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದೇವೆ ಹಾಗು ಗ್ರಾಮಗಳ ಇತರ ಸಾಮರ್ಥ್ಯವನ್ನು ಸುಧಾರಿಸುತ್ತಿದ್ದೇವೆ. ಬಹಳ ಕಾಲದಿಂದ ಗ್ರಾಮಗಳ ಮನೆಗಳಲ್ಲಿ ಮತ್ತು ಅಲ್ಲಿಯ ಭೂಮಿಯಲ್ಲಿ ಆರ್ಥಿಕ ಚಟುವಟಿಕೆ ಬಹಳ ಸೀಮಿತವಾಗಿದೆ. ಇದಕ್ಕೆ ಕಾರಣ ಗ್ರಾಮದ ಆಸ್ತಿ ದಾಖಲೆಗಳು ಸಂಘಟಿತವಾದುದಾಗಿರಲಿಲ್ಲ. ಆದುದರಿಂದ ವ್ಯಾಪಾರೋದ್ಯಮಗಳಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಬಹಳ ಕಷ್ಟವಾಗಿತ್ತು ಮತ್ತು ಗ್ರಾಮಗಳಲ್ಲಿ ಕೈಗಾರಿಕೆಗಳನ್ನು ಮತ್ತು ಉದ್ಯಮಗಳನ್ನು ಸ್ಥಾಪಿಸುವುದು ಸುಲಭಸಾಧ್ಯವಾಗಿರಲಿಲ್ಲ.  ಈಗ ಸ್ವಾಮಿತ್ವ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿರುವ ಮನೆಗಳ ಕಾನೂನು ಬದ್ಧ ದಾಖಲೆಗಳನ್ನು ತಯಾರಿಸಲಾಗುತ್ತಿದೆ. ಮಧ್ಯ ಪ್ರದೇಶದ ಎಲ್ಲಾ ಜಿಲ್ಲೆಗಳ  50,000 ಕ್ಕೂ ಅಧಿಕ  ಗ್ರಾಮಗಳಲ್ಲಿ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಸುಮಾರು 3 ಲಕ್ಷ ಆಸ್ತಿ ಕಾರ್ಡ್ ಗಳನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಗಿದೆ. ಇಂತಹ ಕ್ರಮಗಳು ಭೂಮಿಗೆ ಮತ್ತು ಮನೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಕಡಿಮೆ ಮಾಡುತ್ತವೆ ಮತ್ತು ಅವಶ್ಯ ಇದ್ದಾಗ ಬ್ಯಾಂಕುಗಳಿಂದ ನೆರವು ಪಡೆಯುವುದಕ್ಕೂ ಇದರಿಂದ ಸುಲಭವಾಗುತ್ತದೆ.

ಸ್ನೇಹಿತರೇ,

ಇಂದು ನಾನು ಶಿವರಾಜ್ ಜೀ ಅವರ ಸರಕಾರಕ್ಕೆ ಇನ್ನೊಂದು ಮೈಲಿಗಲ್ಲು ಸ್ಥಾಪನೆಗಾಗಿ ಅಭಿನಂದಿಸಲು ಬಯಸುತ್ತೇನೆ. ಮಧ್ಯ ಪ್ರದೇಶವು ಆಹಾರ ಧಾನ್ಯಗಳ ಸರಕಾರಿ ಖರೀದಿಯಲ್ಲಿ ದೇಶದ ಅನೇಕ ರಾಜ್ಯಗಳನ್ನು ಹಿಂದಿಕ್ಕಿದೆ ಮತ್ತು ಆ ಮೂಲಕ ದಾಖಲೆ ಸ್ಥಾಪಿಸಿ ಅದ್ಭುತ ಕೆಲಸ ಮಾಡಿದೆ. ಇಂದು ಹಿಂದೆಂದಿಗಿಂತ ಹೆಚ್ಚು ಮೊತ್ತವನ್ನು ಮಧ್ಯ ಪ್ರದೇಶದ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಮತ್ತು ಸರಕಾರಿ ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಕೂಡಾ ಸಣ್ಣ ರೈತರಿಗೆ ಬಹಳ ಸಹಾಯ ಮಾಡುತ್ತಿದೆ. ಮಧ್ಯ ಪ್ರದೇಶದ ಸುಮಾರು 90 ಲಕ್ಷದಷ್ಟು ಸಣ್ಣ ರೈತರಿಗೆ ಅವರ ಸಣ್ಣ ಖರ್ಚಿಗಾಗಿ 13,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ನೀಡಲಾಗಿದೆ.

ಸ್ನೇಹಿತರೇ,

ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಮಿಲಿಯಾಂತರ ವೀರ ಪುರುಷರು ಮತ್ತು ತಾಯಿ ಭಾರತಿಯ ಪುತ್ರಿಯರು ನಮಗೆ ಸ್ವಾತಂತ್ರ್ಯವನ್ನು ಖಾತ್ರಿಗೊಳಿಸಲು ತಮ್ಮ ಪ್ರಾಣಗಳನ್ನು, ಸುಖವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗದಿಂದ ನಮಗೆ ಸ್ವತಂತ್ರ ಜೀವನ ಲಭಿಸಿದೆ. ಈ ಅಮೃತ ಮಹೋತ್ಸವ ಕಾಲದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಏನನ್ನಾದರೂ ಕೊಡುವ ಬಗ್ಗೆ ನಾವು ನಿರ್ಧಾರ ಕೈಗೊಳ್ಳಬೇಕು. ಈ ಅವಧಿಯಲ್ಲಿ ನಮ್ಮ ಪ್ರಯತ್ನಗಳು ಭವಿಷ್ಯದ ಜನರಿಗೆ ಪ್ರೇರಣೆ ನೀಡುವಂತಿರಬೇಕು ಮತ್ತು ಅವರಿಗೆ ಕರ್ತವ್ಯಗಳನ್ನು ನೆನಪಿಸುವಂತಿರಬೇಕಾದುದು ಬಹಳ ಮುಖ್ಯ. ಉದಾಹರಣೆಗೆ ನಾವೆಲ್ಲ ಒಟ್ಟುಗೂಡಿ ಒಂದು ಸಂಗತಿಯನ್ನು ಮಾಡಬಹುದು. ಮಧ್ಯ ಪ್ರದೇಶದ ಲಕ್ಷಾಂತರ ಕುಟುಂಬಗಳ ಜೊತೆ ನಾನು ಮಾತನಾಡುವಾಗ ಖಂಡಿತವಾಗಿಯೂ ನಾನು ಒಂದು ದೃಢ ನಿರ್ಧಾರವನ್ನು ಕೇಳುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲಿ ಭವಿಷ್ಯದ ತಲೆಮಾರಿಗಾಗಿ ಇನ್ನು ಮೂರು-ನಾಲ್ಕು ದಿನಗಳಲ್ಲಿ ಆರಂಭಗೊಳ್ಳಲಿರುವ ಹೊಸ ವರ್ಷದಿಂದ ಮುಂದಿನ ಹೊಸ ವರ್ಷದವರೆಗಿನ ಅವಧಿಯಲ್ಲಿ ಪ್ರತೀ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ಅಭಿವೃದ್ಧಿ ಮಾಡುವ ಬಗ್ಗೆ ನಾವು ನಿರ್ಧಾರ ಕೈಗೊಳ್ಳೋಣ. ನಮಗೆ 12 ತಿಂಗಳುಗಳಿವೆ, 365 ದಿನಗಳಿವೆ. ಸಾಧ್ಯವಿದ್ದರೆ ಅಮೃತ ಸರೋವರ ಹೊಸದಾಗಿರಬೇಕು ಮತ್ತು ಪ್ರತೀ ಜಿಲ್ಲೆಯಲ್ಲಿಯೂ ಅದು ದೊಡ್ಡದಾಗಿರಬೇಕು ಹಾಗು ಇವುಗಳ ನಿರ್ಮಾಣಕ್ಕಾಗಿ ಸರಕಾರದಿಂದ ಬರುವ ಎಂ.ನರೇಗಾ ಹಣವನ್ನು ಬಳಸಿಕೊಳ್ಳಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರತೀ ಜಿಲ್ಲೆಗಳಲ್ಲಿಯೂ 75 ಅಮೃತ ಸರೋವರಗಳ ನಿರ್ಮಾಣ ಬರಲಿರುವ ತಲೆಮಾರಿಗೆ ಬಹಳ ಉಪಯುಕ್ತವಾಗಿರಲಿದೆ. ಇದು ನಮ್ಮ ಭೂಮಾತೆಗೂ ಬಹಳ ಪ್ರಯೋಜನಕಾರಿ. ನಮ್ಮ ಭೂಮಾತೆಯ ಬಾಯಾರಿದೆ. ನಾವು ಬಹಳಷ್ತು ನೀರನ್ನು ಮೇಲೆತ್ತಿದ್ದೇವೆ, ಈ ಭೂ ಮಾತೆಯ ಮಕ್ಕಳಾಗಿ ಆಕೆಯ ಬಾಯಾರಿಕೆಯನ್ನು ತಣಿಸುವುದು ನಮ್ಮ ಕರ್ತವ್ಯ. ಇದರಿಂದ ಪ್ರಕೃತಿಯ ಜೀವದಲ್ಲಿ ಹೊಸ ಶಕ್ತಿ ಸೇರ್ಪಡೆಯಾಗುತ್ತದೆ. ಇದರಿಂದ ಸಣ್ಣ ರೈತರಿಗೆ ಮತ್ತು ಮಹಿಳೆಯರಿಗೆ ಪ್ರಯೋಜನವಾಗುತ್ತದೆ ಹಾಗು ಪ್ರಾಣಿಗಳಿಗೆ ಹಾಗು ಹಕ್ಕಿಗಳಿಗೆ ಇದು ದಯೆ ತೋರುವ ಕೃತ್ಯವೂ ಆಗುತ್ತದೆ. ಪ್ರತೀ ಜಿಲ್ಲೆಯಲ್ಲಿಯೂ 75 ಅಮೃತ ಸರೋವರಗಳನ್ನು ನಿರ್ಮಾಣ ಮಾಡುವುದು ಮಾನವತೆಯ ಬಹಳ ದೊಡ್ಡ ಕೆಲಸ, ಅದನ್ನು ನಾವು ಮಾಡಬೇಕು. ಎಲ್ಲಾ ರಾಜ್ಯ ಸರಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪಂಚಾಯತ್ ಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರೇ,

ಭಾರತಕ್ಕೆ ಭವ್ಯ ಭವಿತವ್ಯವನ್ನು ನಿರ್ಮಾಣ ಮಾಡಲು ಇದು ಸಕಾಲ. ಬಡ ಕುಟುಂಬಕ್ಕೆ ಉತ್ತಮ ಭವಿಷ್ಯ   ಸಾಧ್ಯವಿದ್ದಾಗ ಮಾತ್ರ ಭಾರತದ ಭವ್ಯ ಭವಿಷ್ಯ ಸಾಧ್ಯವಾಗುತ್ತದೆ. ಈ ಹೊಸ ಮನೆ ನಿಮ್ಮ ಕುಟುಂಬಕ್ಕೆ ಹೊಸ ದಿಕ್ಕುದಿಸೆಗಳನ್ನು  ನೀಡಲಿ, ಹೊಸ ಗುರಿಯತ್ತ ಸಾಗಲು ನಿಮಗೆ ಶಕ್ತಿಯನ್ನು ನೀಡಲಿ, ಜ್ಞಾನವನ್ನು, ಕೌಶಲ್ಯವನ್ನು ಮತ್ತು ನಿಮ್ಮ ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು  ತುಂಬಲಿ!. ಈ ಆಶಯದೊಂದಿಗೆ, “ಗೃಹ ಪ್ರವೇಶಂ” ಗಾಗಿ ಎಲ್ಲಾ ಫಲಾನುಭವಿಗಳಿಗೆ ನನ್ನ ಅಭಿನಂದನೆಗಳು.

ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.


(ಪ್ರಕಟಣೆ ಐ.ಡಿ.: 1811813) ವಿಸಿಟರ್ ಕೌಂಟರ್ : 248
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam