ಸಂಸ್ಕೃತಿ ಸಚಿವಾಲಯ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕರ್ನಾಟಕದ ಹಂಪಿಯಲ್ಲಿ ಆಯೋಜಿಸಿದ ಭಾರತೀಯ ದೇವಾಲಯಗಳ ವಾಸ್ತುಶಿಲ್ಪ ಕುರಿತ "ದೇವಾಯತನಂ” ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ


ಕೇಂದ್ರ ಸರ್ಕಾರವು ಬೇಲೂರು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಪ್ರಸ್ತಾಪ ಸಲ್ಲಿಸಿದೆ: ಶ್ರೀ ಜಿ ಕಿಶನ್ ರೆಡ್ಡಿ

ದೇವಾಲಯಗಳು ಭಾರತೀಯ ಕಲೆ, ಜ್ಞಾನ, ಸಂಸ್ಕೃತಿ, ಆಧ್ಯಾತ್ಮ, ನಾವೀನ್ಯತೆ ಮತ್ತು ಶಿಕ್ಷಣದ ಕೇಂದ್ರಗಳಾಗಿವೆ: ಶ್ರೀ ಅರ್ಜುನ್ ರಾಮ್ ಮೇಘವಾಲ್

Posted On: 25 FEB 2022 5:50PM by PIB Bengaluru

ಕೇಂದ್ರ ಸಂಸ್ಕೃತಿ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ ಎಸ್ ಐ) ಯು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ  ಅಂಗವಾಗಿ  2022 ರ ಫೆಬ್ರವರಿ 25 ಮತ್ತು 26 ರಂದು ಕರ್ನಾಟಕದ ಹಂಪಿಯಲ್ಲಿ ಆಯೋಜಿಸಿರುವ ಎರಡು ದಿನಗಳ ಭಾರತೀಯ ದೇವಾಲಯಗಳ ವಾಸ್ತುಶಿಲ್ಪ ಕುರಿತ 'ದೇವಾಯತನಂ’’ ಅಂತರರಾಷ್ಟ್ರೀಯ ಸಮ್ಮೇಳನ  ಇಂದು ಪ್ರಾರಂಭವಾಯಿತು.

ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ವರ್ಚುವಲ್  ಮೋಡ್ ನಲ್ಲಿ ಮುದ್ರಿತ ಸಂದೇಶದ ಮೂಲಕ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಸಚಿವ ಶ್ರೀ ಆನಂದ್ ಸಿಂಗ್, ಕರ್ನಾಟಕ ಸಾರಿಗೆ ಸಚಿವ ಶ್ರೀ ಬಿ. ಶ್ರೀರಾಮುಲು, ಬಳ್ಳಾರಿ ಶಾಸಕ ಶ್ರೀ ಜಿ ಸೋಮಶೇಖರ ರೆಡ್ಡಿ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರಾದ ಶ್ರೀಮತಿ ವಿ.ವಿದ್ಯಾವತಿ ಮತ್ತಿತರರು ಉಪಸ್ಥಿತರಿದ್ದರು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಅವರು ಪೂರ್ವ ಮುದ್ರಿತ ಭಾಷಣ ಮಾಡಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಶ್ರೀ ಜಿ ಕೆ ರೆಡ್ಡಿ ಅವರು, ದೇವಾಲಯಗಳು ಭಾರತದ ಸಂಸ್ಕೃತಿ ಮತ್ತು ಜೀವನ ವಿಧಾನದ ಪ್ರತೀಕವಾಗಿವೆ. ದೇಶದ ಶ್ರೀಮಂತವಾದ ಮೂರ್ತ ಮತ್ತು ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಮತ್ತು ರಕ್ಷಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಈ ಸಮ್ಮೇಳನವು ಭಾರತೀಯ ದೇವಾಲಯಗಳು, ಕಲೆ ಮತ್ತು ವಾಸ್ತುಶಿಲ್ಪದ ಭವ್ಯತೆಯನ್ನು ಜಗತ್ತಿಗೆ ತಿಳಿಸಲು ಮತ್ತು ಪ್ರಸಾರ ಮಾಡಲು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 5 ‘ವಿ’ ಗಳ ಒಟ್ಟಾರೆ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಸಚಿವರು ಹೇಳಿದರು. ಅವುಗಳೆಂದರೆ, ವಿಕಾಸ್ (ಅಭಿವೃದ್ಧಿ), ವಿರಾಸತ್ (ಪರಂಪರೆ), ವಿಶ್ವಾಸ್ (ನಂಬಿಕೆ), ವಿಜ್ಞಾನ್ (ವಿಜ್ಞಾನ). ಇವು ನಮ್ಮನ್ನು ವಿಶ್ವಗುರುವಾಗುವಂತೆ ಮಾಡುತ್ತವೆ, ಇದರಿಂದ ಭಾರತವು ಜಗತ್ತಿಗೆ ದಾರಿ ತೋರಿಸುತ್ತದೆ ಎಂದು ಅವರು ಹೇಳಿದರು.

5 ‘ವಿ’ ಗಳನ್ನು ವಿವರಿಸಿದ ಸಚಿವರು, ಕೇಂದ್ರ ಸರ್ಕಾರದ ಅಭಿವೃದ್ಧಿ ಪ್ರಯತ್ನ (ವಿಕಾಸ್) ಪ್ರಯೋಜನಗಳು ಬಡವರನ್ನು ತಲುಪುವುದನ್ನು ಖಾತ್ರಿಪಡಿಸುತ್ತಿದೆ ಎಂದು ಹೇಳಿದರು. ನಮ್ಮ ಅದ್ಭುತ ಪರಂಪರೆಯ (ವಿರಾಸತ್) ರಕ್ಷಣೆ, ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಸರ್ಕಾರವು ಶ್ರಮಿಸುತ್ತಿದೆ. ಇದರಿಂದ ಭವಿಷ್ಯದ ಪೀಳಿಗೆಗಳೂ ಇದನ್ನು ಪಡೆಯುತ್ತವೆ. ಕೇಂದ್ರ ಸರ್ಕಾರವು ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತದೆ ಮತ್ತು ತನ್ನ ನಾಗರಿಕರು ಮತ್ತು ಪ್ರಪಂಚದ ವಿಶ್ವಾಸವನ್ನು (ವಿಶ್ವಾಸ) ಗೆಲ್ಲುತ್ತದೆ. ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು (ವಿಜ್ಞಾನ) ಬಳಸಿಕೊಳ್ಳುವ ಮೂಲಕ ದೇಶವು ಸ್ವಾವಲಂಬಿ ಆತ್ಮ ನಿರ್ಭರ ಭಾರತವನ್ನು ನಿರ್ಮಿಸುತ್ತಿದೆ ಎಂದು ಹೇಳಿದರು. ಪ್ರಾಚೀನ ಮತ್ತು ಸಾಂಪ್ರದಾಯಿಕ ಪರಂಪರೆಯ ಭಂಡಾರ, ಜ್ಞಾನ, ಆತ್ಮವಿಶ್ವಾಸ ಹೊಂದಿರುವ ದೇಶದ ಸಮೃದ್ಧ ನಾಗರಿಕ ಸಮುದಾಯವು ಭಾರತವು ವಿಶ್ವಗುರುವಾಗಲು ಸಮರ್ಪಿತವಾಗಿದೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.

ಈ ನೆಲದ ದೇವಾಲಯಗಳನ್ನು ಬಹು ಆಯಾಮಗಳಿಂದ ನೋಡಬೇಕು ಎಂದ ಸಚಿವರು, ಇವು ಏಕಕಾಲದಲ್ಲಿ ಆತ್ಮಕ್ಕೆ ಆಧ್ಯಾತ್ಮಿಕ ಯೋಗಕ್ಷೇಮ, ಶಿಕ್ಷಣದಿಂದ ಜ್ಞಾನೋದಯ, ಸ್ಥಳೀಯ ಸಮುದಾಯಕ್ಕೆ ಆರ್ಥಿಕ ಅವಕಾಶಗಳು, ಕುಶಲಕರ್ಮಿಗಳು, ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ಸೃಜನಶೀಲ ಅವಕಾಶಗಳನ್ನು ಒದಗಿಸುತ್ತಿವೆ. ಇವು ನಮ್ಮ ಸಂಸ್ಕೃತಿಯ ಭಂಡಾರವಾಗಿವೆ ಮತ್ತು ನಮ್ಮ ಗತಕಾಲದ ವೈಭವವನ್ನು ಸಾರುತ್ತಿವೆ ಎಂದು ಹೇಳಿದರು. ಹಿಂದೂ ದೇವಾಲಯಗಳು ಶಿಲ್ಪಶಾಸ್ತ್ರ, ವಾಸ್ತು ಶಾಸ್ತ್ರ, ಜ್ಯಾಮಿತಿ ಮತ್ತು ಸಮ್ಮಿತಿಗಳನ್ನು ಒಳಗೊಂಡಿರುವ ಕಲೆ ಮತ್ತು ವಿಜ್ಞಾನದ ಸಂಯೋಜನೆಗಳಾಗಿವೆ ಎಂದು ಅವರು ಹೇಳಿದರು. ದೇವಾಲಯಗಳು ಏಕತೆ, ಸಮಗ್ರತೆ ಮತ್ತು ನಾಗರಿಕತೆಯನ್ನು ಉತ್ತೇಜಿಸುತ್ತವೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕಲ್ಪಗಳು ದೇವಾಲಯದ ಅಗ್ನಿಯ ಬಳಿಯೇ ಆಗುತ್ತಿದ್ದವು ಎಂದು ಅವರು ಹೇಳಿದರು.

ಹಂಪಿಯ ದೇವಾಲಯಗಳು ತಮ್ಮ ತೇಜಸ್ಸು, ಕಲ್ಪನೆ ಮತ್ತು ಅದ್ಭುತ ವಾಸ್ತುಶಿಲ್ಪದಿಂದಾಗಿ ಈಗಾಗಲೇ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿವೆ ಎಂದು ಅವರು ಹೇಳಿದರು. ಭಾರತದ 40 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಸುಮಾರು 10 ವಿವಿಧ ವಾಸ್ತುಶಿಲ್ಪ ಶೈಲಿಗಳು, ಮಾದರಿಗಳ ಹಿಂದೂ ದೇವಾಲಯಗಳಾಗಿವೆ ಎಂದು ಅವರು ಹೇಳಿದರು.

ಈ ವರ್ಷ ಕೇಂದ್ರ ಸರ್ಕಾರವು ಬೇಲೂರು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಲ್ಲದೆ ಭಾರತವು ಅನೇಕ ಭವ್ಯವಾದ ದೇವಾಲಯಗಳನ್ನು ಪುನರ್ನಿರ್ಮಿಸುತ್ತಿದೆ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರದ ಕುರಿತು ಸಚಿವರು ಮಾತನಾಡಿದರು. ಸುಮಾರು 250 ವರ್ಷಗಳ ನಂತರ, ಭಾರತದ ಆಧ್ಯಾತ್ಮಿಕ ರಾಜಧಾನಿ - ಕಾಶಿಯು ಪುನರುಜ್ಜೀವಗೊಂಡಿದೆ ಮತ್ತು ಭಕ್ತರಿಗೆ ಸೌಲಭ್ಯಗಳು ಮತ್ತು ಉತ್ತಮ ಮೂಲಸೌಕರ್ಯಗಳೊಂದಿಗೆ ಹೆಚ್ಚಿನ ಪ್ರವೇಶವನ್ನು ನೀಡುತ್ತಿದೆ ಎಂದರು. ತೆಲಂಗಾಣ ರಾಜ್ಯವು 1,000 ಕೋಟಿ ರೂ. ಮೌಲ್ಯದ 2 ಬೃಹತ್ ಶಿಲಾ ದೇವಾಲಯಗಳನ್ನು ನಿರ್ಮಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕೇಂದ್ರ ಸರ್ಕಾರದ ಗಮನವು ಅಸ್ತಿತ್ವದಲ್ಲಿರುವ ಆಧ್ಯಾತ್ಮಿಕ ಸ್ಥಳಗಳನ್ನು ಉತ್ತಮ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ಸೌಕರ್ಯಗಳ ಮೂಲಕ ಭಕ್ತರಿಗೆ ಲಭ್ಯವಾಗುವಂತೆ ಮಾಡುವುದಾಗಿದೆ ಎಂದರು.

ಪ್ರವಾಸೋದ್ಯಮ ಮೂಲಸೌಕರ್ಯವನ್ನು ಸುಗಮಗೊಳಿಸಲು ಮತ್ತು ಆಧ್ಯಾತ್ಮಿಕ ಸ್ಥಳಗಳಲ್ಲಿ ಉತ್ತಮ ಪ್ರವೇಶ ಮತ್ತು ಅನುಭವವನ್ನು ಒದಗಿಸಲು ಪ್ರವಾಸೋದ್ಯಮ ಸಚಿವಾಲಯವು 7,000 ಕೋಟಿ ರೂ. ಅಂದರೆ ಸರಿಸುಮಾರು 1 ಬಿಲಿಯನ್ ಡಾಲರ್.ವೆಚ್ಚದಲ್ಲಿ ಪ್ರಸಾದ್ ಮತ್ತು ಸ್ವದೇಶ ದರ್ಶನ್ ಯೋಜನೆಯನ್ನು ರೂಪಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರು ಕರ್ನಾಟಕದ ಸಚಿವರು, ಎಎಸ್‌ಐ ಅಧಿಕಾರಿಗಳು ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಭಾರತದ ದೇವಾಲಯಗಳ ಮಾಹಿತಿ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು.

ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಅವರು ಮುದ್ರಿತ ಸಂದೇಶದ ಮೂಲಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಸಮ್ಮೇಳನವು ಸ್ವತಃ ಒಂದು ಮೈಲಿಗಲ್ಲಾಗಿದೆ ಎಂದರು. ದೇವಾಲಯಗಳು ಭಾರತೀಯ ಕಲೆ, ಜ್ಞಾನ, ಸಂಸ್ಕೃತಿ, ಆಧ್ಯಾತ್ಮಿಕತೆ, ನಾವೀನ್ಯತೆ ಮತ್ತು ಶಿಕ್ಷಣದ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು. ಭಾರತದಲ್ಲಿ ನಾಗರ, ದ್ರಾವಿಡ ಮತ್ತು ವೇಸರ ಎಂದು ಕರೆಯಲಾಗುವ ಮೂರು ಪ್ರಮುಖ ಶೈಲಿಗಳಲ್ಲಿ  ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ದೇವಗಢದಲ್ಲಿರುವ ದಶಾವತಾರ ದೇವಾಲಯವು ನಾಗರ ಶೈಲಿಯಲ್ಲಿದ್ದು, ಇದು ಹಿಮಾಲಯ ಮತ್ತು ವಿಂಧ್ಯ ಪರ್ವತಗಳ ನಡುವೆ ಪ್ರಚಲಿತದಲ್ಲಿದೆ. ಕಂಚಿಯಲ್ಲಿರುವ ಕೈಲಾಸನಾಥ ದೇವಾಲಯವು ದ್ರಾವಿಡ ಶೈಲಿಯ ದೇವಾಲಯವಾಗಿದ್ದು, ಕೃಷ್ಣ ಮತ್ತು ಕಾವೇರಿ ನದಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ವೇಸರವು ನಾಗರ ಮತ್ತು ದ್ರಾವಿಡ ಶೈಲಿಯ ಹೈಬ್ರಿಡ್ ರೂಪವಾಗಿದೆ, ಪಾಪನಾಥ ದೇವಾಲಯವು ವೇಸರ ಶೈಲಿಗೆ ಉದಾಹರಣೆಯಾಗಿದೆ ಎಂದು ಹೇಳಿದರು. ಸಂಸ್ಕೃತಿ ಸಚಿವಾಲಯ ಕಾರ್ಯದರ್ಶಿ ಶ್ರೀ ಗೋವಿಂದ ಮೋಹನ್ ಮಾತನಾಡಿ, ದೇವಾಯತನಂ ಅಂದರೆ ದೇವಾಲಯವು ಕೇವಲ ಪೂಜೆ ಮತ್ತು ಆಚರಣೆಗಳ ಸ್ಥಳವಲ್ಲ, ಬದಲಿಗೆ ಶಿಕ್ಷಣ, ಲಲಿತಕಲೆ, ಸಂಗೀತ, ವಿಜ್ಞಾನ ಮತ್ತು ತಂತ್ರಜ್ಞಾನ, ಆಚರಣೆಗಳು ಮತ್ತು ಸಂಪ್ರದಾಯಗಳು ಅಥವಾ ಸಮಾಜವನ್ನು ರೂಪಿಸುವ ಪ್ರತಿಯೊಂದು ಚಟುವಟಿಕೆಯ ಕೇಂದ್ರವಾಗಿದೆ ಎಂದರು. ದೇವಾಲಯಗಳ ನಿರ್ಮಾಣವು ಮಾನವ ನೆಲೆಗಳ ಪ್ರಾರಂಭದೊಂದಿಗೆ ಆರಂಭವಾಯಿತು ಮತ್ತು ಯುಗಯುಗಗಳಲ್ಲಿ ವಿಕಸನಗೊಂಡಿತು ಎಂದರು. ಭಾರತದಲ್ಲಿ ವಾಸ್ತುಶಿಲ್ಪದ ಪ್ರಕಾರ ನಾಗರ, ವೇಸರ ಮತ್ತು ದ್ರಾವಿಡ ಎಂಬ ಮೂರು ಪ್ರಮುಖ ಶೈಲಿಗಳಿವೆ. ಆದರೆ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಪ್ರಾದೇಶಿಕ ಶೈಲಿಗಳನ್ನು ವಿವಿಧ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಇಂತಹ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಎಎಸ್ಐಯನ್ನು ಅಭಿನಂದಿಸಿದ ಅವರು, ಸುಂದರ ಕೆತ್ತನೆಯ ಪ್ರಾಚೀನ ದೇವಾಲಯಗಳು ನಮ್ಮ ಭವ್ಯ ಇತಿಹಾಸ, ಕಲೆ, ಸಂಪ್ರದಾಯ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವಿವಿಧ ಅಂಶಗಳಿಗೆ ಸಾಕ್ಷಿಯಾಗಿವೆ ಮತ್ತು ಅವುಗಳ ಅಧ್ಯಯನವು ವರ್ತಮಾನವನ್ನು ಭೂತಕಾಲದೊಂದಿಗೆ ಜೋಡಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಸಮ್ಮೇಳನದ ಬಗ್ಗೆ ಮಾತನಾಡಿದ ಎಎಸ್‌ಐ ಮಹಾನಿರ್ದೆಶಕಿ ಶ್ರೀಮತಿ ವಿ. ವಿದ್ಯಾವತಿ, ಭಾರತದ ದೇವಾಲಯಗಳು ಕಲೆ, ಸಂಸ್ಕೃತಿ ಮತ್ತು ವಾಣಿಜ್ಯ ಕೇಂದ್ರಗಳಾಗಿವೆ ಎಂದರು. ನಮ್ಮ ಜೀವನದಲ್ಲಿ ಎಲ್ಲವೂ ದೇವಾಲಯಗಳ ಸುತ್ತಲೇ ಸುತ್ತುತ್ತದೆ. ಆಧುನಿಕ ಯುಗದಲ್ಲಿ ಎಲ್ಲವೂ ಬದಲಾಗಿದೆ, ಆದರೆ ದೇವಸ್ಥಾನದೊಂದಿಗಿನ ನಮ್ಮ ಸಂಬಂಧ ಮಾತ್ರ ಬದಲಾಗಿಲ್ಲ ಎಂದರು.

ಎಎಸ್‌ಐ ಹೆಚ್ಚುವರಿ ಮಹಾನಿರ್ದೇಶಕ ಪ್ರೊ.ಅಲೋಕ್ ತ್ರಿಪಾಠಿ ಮಾತನಾಡಿ, ದೇವಾಲಯಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರಗಳಾಗಿದ್ದು, ಇತಿಹಾಸದ ಭಂಡಾರಗಳಾಗಿವೆ. ಆದರೆ ಅವುಗಳ ಅಧ್ಯಯನವು ವಿಶಾಲ ದೃಷ್ಟಿಕೋನದಲ್ಲಿ ನಡೆದಿಲ್ಲ ಎಂದರು.

ಸಮ್ಮೇಳನದ ಇಂದಿನ ಕಾರ್ಯಕ್ರಮದಲ್ಲಿ  ದೇವಾಲಯದ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ತಾಂತ್ರಿಕ, ವೈಜ್ಞಾನಿಕ, ಕಲೆ ಮತ್ತು ವಾಸ್ತುಶಿಲ್ಪದ ಅಂಶಗಳ ಕುರಿತು ಚರ್ಚೆ ನಡೆಯಿತು. ವಿದ್ವಾಂಸರು ಮತ್ತು ವಿದ್ಯಾರ್ಥಿಗಳಲ್ಲಿ ಸಮಾನವಾಗಿ ಆಸಕ್ತಿ ಮೂಡಿಸುವುದು, ನಮ್ಮ ಪರಂಪರೆಯನ್ನು ತಿಳಿಯುವುದು ಮತ್ತು ಗೌರವಿಸುವುದು ಸಮ್ಮೇಳನದ ಉದ್ದೇಶವಾಗಿದೆ.

***



(Release ID: 1801214) Visitor Counter : 463


Read this release in: English , Urdu , Hindi , Tamil