ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಂದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಭೇಟಿ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಆಡಳಿತ ವಿಚಾರಗಳ ಕುರಿತು ಚರ್ಚೆ


ತಮ್ಮ ಸರ್ಕಾರದ ಕಳೆದ ಆರು ತಿಂಗಳ ಸಾಧನೆಗಳು ಮತ್ತು ಭವಿಷ್ಯದ ಪರಿಣಾಮಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Posted On: 07 FEB 2022 4:27PM by PIB Bengaluru

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ದೆಹಯಲ್ಲಿ ಇಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ(ಸ್ವತಂತ್ರ ಹೊಣೆಗಾರಿಕೆ) ಸಚಿವ, ಭೂವಿಜ್ಞಾನಗಳ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಸಾಮಾನ್ಯ ಆಡಳಿತ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಕಲ್ಯಾಣ ಆಧಾರಿತ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಖಿಲ ಭಾರತ ಸೇವಾ ಅಧಿಕಾರಿಗಳನ್ನು ವಿಶೇಷವಾಗಿ ಐಎಎಸ್ ಅಧಿಕಾರಿಗಳನ್ನು ರಾಜ್ಯಕ್ಕೆ ನಿಯೋಜಿಸುವಂತೆ ಶ್ರೀ ಬೊಮ್ಮಾಯಿ ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖಾ ಸಚಿವರಾಗಿರುವ ಡಾ. ಜಿತೇಂದ್ರ ಸಿಂಗ್ ಅವರನ್ನು ಒತ್ತಾಯಿಸಿದರು.

ಸಿಪಿಜಿಆರ್ ಎಎಂಎಸ್ ಅನ್ನು ಉಲ್ಲೇಖಿಸಿದ ಕರ್ನಾಟಕದ ಮುಖ್ಯಮಂತ್ರಿ ಅವರು ಕುಂದುಕೊರತೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವುದೇ ಅಲ್ಲದೆ, ಕೋವಿಡ್-19 ವಿಭಾಗದಡಿ ಬರುತ್ತಿರುವ ಕುಂದುಕೊರತೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಗರಿಷ್ಠ ಮೂರು ದಿನಗಳಲ್ಲಿ ಪರಿಹರಿಸಲಾಗುತ್ತಿದೆ ಎಂದರು.

ಡಾ. ಜಿತೇಂದ್ರ ಸಿಂಗ್ ಅವರು ರಾಜ್ಯಗಳಲ್ಲಿನ ಉತ್ತಮ ಆಡಳಿತ ಪದ್ಧತಿಗಳನ್ನು ಪ್ರತಿಬಿಂಬಿಸುವ ವಿಚಾರವನ್ನು ಶ್ಲಾಘಿಸಿದರು ಮತ್ತು ಆಡಳಿತ ಮಾದರಿಯಾದ ಜನಸ್ನೇಹಿ ಆಡಳಿತ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹೃದಯದಲ್ಲಿದೆ ಎಂದು ಪ್ರತಿಪಾದಿಸಿದರು. ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತ ಒದಗಿಸುವ ಗುರಿ ಹೊಂದಿದೆ, ಆ ನಿಟ್ಟಿನಲ್ಲಿ ಭಾರತ ಸರ್ಕಾರದ ಆಡಳಿತದ ಗುಣಮಟ್ಟ ಸುಧಾರಣೆಗೆ ಕೈಗೊಂಡಿರುವ ಕ್ರಮಗಳು ರಾಜ್ಯಗಳಲ್ಲೂ ಮತ್ತು ಜಿಲ್ಲೆಗಳಲ್ಲೂ ಪ್ರತಿಫಲನಗೊಳ್ಳುತ್ತಿವೆ ಎಂದರು.

ಅಲ್ಲದೆ ಡಾ. ಜಿತೇಂದ್ರ ಸಿಂಗ್ ಅವರು ಬಾಹ್ಯಾಕಾಶ ವಲಯದ ಕೇಂದ್ರ ಕಚೇರಿ ಹೊಂದಿರುವ ಬೆಂಗಳೂರಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಕರ್ನಾಟಕದ ಮುಖ್ಯಮಂತ್ರಿಯೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಅವರು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ “ಗಗನಯಾನ”ದ ಪ್ರಗತಿ ಕುರಿತು ಮಾತನಾಡಿದರು.

ಇದೇ ವೇಳೆ ಶ್ರೀ ಬಸವರಾಜ ಬೊಮ್ಮಾಯಿ, ತಮ್ಮ ಸರ್ಕಾರದ ಆರು ತಿಂಗಳ ಸಾಧನೆಗಳನ್ನು ಮತ್ತು ಭವಿಷ್ಯದ ಪರಿಣಾಮಗಳನ್ನು ಬಿಂಬಿಸುವ ಕಿರು ಹೊತ್ತಿಗೆಯನ್ನು ಡಾ. ಜಿತೇಂದ್ರ ಸಿಂಗ್ ಅವರಿಗೆ ನೀಡಿದರು.

ಶ್ರೀ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳ ಅಧಿಕಾರಾವಧಿಯನ್ನು ಪೂರೈಸಿದ್ದಾರೆ ಮತ್ತು ಈ ಅತ್ಯಲ್ಪ ಅವಧಿಯಲ್ಲಿ ಅವರ ಸರ್ಕಾರ ರೈತರು, ವಿದ್ಯಾರ್ಥಿಗಳು, ನಗರದ ವಾಸಿಗಳು, ಅಸಂಘಟಿತ ವಲಯದ ಕಾರ್ಮಿಕರು, ವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ಅನುಕೂಲವಾಗುವ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

ಶ್ರೀ ಬಸವರಾಜ ಬೊಮ್ಮಾಯಿ ಅವರು, ಎರಡು ದಿನಗಳ ಪ್ರವಾಸದ ಅಂಗವಾಗಿ ರಾಜಧಾನಿಗೆ ಆಗಮಿಸಿದ್ದು, ಈ ವೇಳೆ ಅವರು, ಹಣಕಾಸು ಸಚಿವರು ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ ಮತ್ತು ಕೇಂದ್ರದ ಯೋಜನೆಗಳು ಹಾಗು ಮುಂದಿನ ತಿಂಗಳು ಮಂಡಿಸಲಿರುವ ರಾಜ್ಯ ಬಜೆಟ್ ಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ.

***

 

 



(Release ID: 1796327) Visitor Counter : 184