ಪ್ರಧಾನ ಮಂತ್ರಿಯವರ ಕಛೇರಿ
ಸುಪ್ರೀಂ ಕೋರ್ಟ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಭಾಷಣ
"ನಮಗೆಲ್ಲರಿಗೂ ವಿಭಿನ್ನ ಪಾತ್ರಗಳು, ವಿಭಿನ್ನ ಜವಾಬ್ದಾರಿಗಳು, ವಿಭಿನ್ನ ಕಾರ್ಯವಿಧಾನಗಳು ಇರಬಹುದು, ಆದರೆ ನಮ್ಮ ನಂಬಿಕೆ, ಸ್ಫೂರ್ತಿ ಮತ್ತು ಚೈತನ್ಯದ ಮೂಲ ಒಂದೇ ಆಗಿದೆ – ಅದು ನಮ್ಮ ಸಂವಿಧಾನ"
"ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ- ಎಲ್ಲರ ಪ್ರಯತ್ನ ಸಂವಿಧಾನದ ಸ್ಫೂರ್ತಿಯ ಅತ್ಯಂತ ಶಕ್ತಿಶಾಲಿ ಅಭಿವ್ಯಕ್ತಿಯಾಗಿದೆ. ಸಂವಿಧಾನಕ್ಕೆ ಸರ್ಕಾರ ಸಮರ್ಪಿತವಾಗಿದ್ದು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ"
"ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಅವಧಿಗೂ ಮೊದಲೆ ಸಾಧಿಸುತ್ತಿರುವ ಏಕೈಕ ದೇಶ ಭಾರತವಾಗಿದೆ. ಆದರೂ, ಪರಿಸರದ ಹೆಸರಿನಲ್ಲಿ, ಭಾರತದ ಮೇಲೆ ವಿವಿಧ ಒತ್ತಡಗಳನ್ನು ಹೇರಲಾಗಿದೆ. ಇದೆಲ್ಲವೂ ವಸಾಹತುಶಾಹಿ ಮನಸ್ಥಿತಿಯ ಫಲಿಶ್ರುತಿಯಾಗಿದೆ"
"ಅಧಿಕಾರದ ವಿಭಜನೆಯ ಬಲವಾದ ಅಡಿಪಾಯದ ಮೇಲೆ, ನಾವು ಸಾಮೂಹಿಕ ಜವಾಬ್ದಾರಿಯ ಹಾದಿಯನ್ನು ಸುಗಮಗೊಳಿಸಬೇಕಾಗಿದೆ, ಮಾರ್ಗಸೂಚಿಯನ್ನು ರಚಿಸಬೇಕಿದೆ, ಗುರಿಗಳನ್ನು ನಿರ್ಧರಿಸಬೇಕಿದೆ ಮತ್ತು ದೇಶವನ್ನು ಅದರ ಗಮ್ಯಸ್ಥಾನಕ್ಕೆ ತೆಗೆದುಕೊಂಡುಬೇಕಿದೆ"
Posted On:
26 NOV 2021 7:20PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಲ್ಲಿ ಸುಪ್ರೀಂ ಕೋರ್ಟ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು. ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀ ಎನ್.ವಿ.ರಮಣ, ಕೇಂದ್ರ ಸಚಿವ ಶ್ರೀ ಕಿರೆನ್ ರಿಜುಜು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳು, ಭಾರತದ ಅಟಾರ್ನಿ ಜನರಲ್ ಶ್ರೀ ಕೆ.ಕೆ.ವೇಣುಗೋಪಾಲ್ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಶ್ರೀ ವಿಕಾಸ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಬೆಳಗ್ಗೆ ತಾವು ಶಾಸಕಾಂಗ ಮತ್ತು ಕಾರ್ಯಾಂಗದ ಸಹೋದ್ಯೋಗಿಗಳ ನಡುವೆ ಇದ್ದೆ, ಈಗ ನ್ಯಾಯಾಂಗದ ಎಲ್ಲಾ ಶಿಕ್ಷಿತ ಸದಸ್ಯರ ಸಭೆಯಲ್ಲಿ ಒಬ್ಬನಾಗಿದ್ದೇನೆ ಎಂದರು. "ನಾಮಗೆಲ್ಲರಿಗೂ ವಿಭಿನ್ನ ಪಾತ್ರಗಳು, ವಿಭಿನ್ನ ಜವಾಬ್ದಾರಿಗಳು, ವಿಭಿನ್ನ ಕಾರ್ಯವಿಧಾನಗಳು ಇರಬಹುದು, ಆದರೆ ನಮ್ಮ ನಂಬಿಕೆ, ಸ್ಫೂರ್ತಿ ಮತ್ತು ಶಕ್ತಿಯ ಮೂಲ ಒಂದೇ ಆಗಿದೆ - ಅದು ನಮ್ಮ ಸಂವಿಧಾನ", ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ನಮ್ಮ ಸಂವಿಧಾನ ನಿರ್ಮಾತೃಗಳು ಸ್ವಾತಂತ್ರ್ಯಕ್ಕಾಗಿ ಬದುಕಿದ ಮತ್ತು ಬಲಿದಾನ ಮಾಡಿದ ಜನರ ಕನಸುಗಳ ನಿಟ್ಟಿನಲ್ಲಿ ಸಾವಿರಾರು ವರ್ಷಗಳ ಭಾರತದ ಮಹಾನ್ ಸಂಪ್ರದಾಯವನ್ನು ಪ್ರೀತಿಸುವ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಉರುಳಿದ್ದರೂ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮುಂತಾದ ಮೂಲಭೂತ ಅಗತ್ಯಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ವಂಚಿತರಾಗಿ, ಹೊರಗುಳಿದು ಪರಿತಪಿಸುತ್ತಿರುವುದು ಖಂಡನಾರ್ಹ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅವರ ಜೀವನವನ್ನು ಸುಗಮಗೊಳಿಸಲು ಶ್ರಮಿಸುವುದು ಸಂವಿಧಾನಕ್ಕೆ ನೀಡುವ ಅತ್ಯುತ್ತಮ ಗೌರವವಾಗಿದೆ ಎಂದ ಅವರು, ಈ ನಿರಾಕರಣೆಯಿಂದ ಪರಿಹಾರ ಒದಗಿಸುವ ಬೃಹತ್ ಅಭಿಯಾನ ದೇಶದಲ್ಲಿ ನಡೆಯುತ್ತಿದೆ ಎಂಬ ಸಂತೃಪ್ತಿಯನ್ನು ಅವರು ವ್ಯಕ್ತಪಡಿಸಿದರು.
ಕೊರೊನಾ ಅವಧಿಯಲ್ಲಿ ಕಳೆದ ಹಲವು ತಿಂಗಳುಗಳಿಂದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ 2 ಲಕ್ಷ 6೦ ಸಾವಿರ ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುವ ಮೂಲಕ ಸರ್ಕಾರ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಈ ಯೋಜನೆಯನ್ನು ನಿನ್ನೆಯಷ್ಟೇ ಮುಂದಿನ ವರ್ಷದ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಬಡವರು, ಮಹಿಳೆಯರು, ಮಂಗಳ ಮುಖಿಯರು, ಬೀದಿ ಬದಿ ವ್ಯಾಪಾರಿಗಳು, ದಿವ್ಯಾಂಗರು ಮತ್ತು ಇತರ ವಲಯಗಳ ಜನರ ಅಗತ್ಯಗಳನ್ನು ಪೂರೈಸಿದರೆ, ಅವರೂ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸೇರುತ್ತಾರೆ ಮತ್ತು ಸಂವಿಧಾನದ ಮೇಲಿನ ಅವರ ನಂಬಿಕೆ ಬಲಗೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ- ಎಲ್ಲರ ಪ್ರಯತ್ನವು ಸಂವಿಧಾನದ ಸ್ಫೂರ್ತಿಯ ಅತ್ಯಂತ ಶಕ್ತಿಶಾಲಿ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಂವಿಧಾನಕ್ಕೆ ಸಮರ್ಪಿತವಾದ ಸರ್ಕಾರ, ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಇದನ್ನು ಮಾಡಿದ್ದೇವೆ ಎಂದರು. ಒಂದು ಕಾಲದಲ್ಲಿ ಸಂಪದ್ಭರಿತ ಜನರಿಗೆ ಮಾತ್ರ ಸೀಮಿತವಾಗಿದ್ದ ಗುಣಮಟ್ಟದ ಮೂಲಸೌಕರ್ಯ ಇಂದು ಕಡು ಬಡವರಿಗೂ ಒಂದೇ ರೀತಿಯ ಸಿಗುತ್ತಿದೆ. ಇಂದು ದೇಶವು ಲಡಾಖ್, ಅಂಡಮಾನ್ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿಗೂ ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಿಗೆ ನೀಡುವಷ್ಟೇ ಗಮನ ನೀಡುತ್ತಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಫಲಿತಾಂಶಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಲಿಂಗ ಸಮಾನತೆಗೆ ಸಂಬಂಧಿಸಿದಂತೆ, ಪುರುಷರಿಗೆ ಹೋಲಿಸಿದರೆ ಈಗ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು. ಆಸ್ಪತ್ರೆ ಹೆರಿಗೆಗೆ ಹೆಚ್ಚಿನ ಅವಕಾಶಗಳು ಗರ್ಭಿಣಿಯರಿಗೆ ಲಭ್ಯವಾಗುತ್ತಿವೆ. ಇದರಿಂದಾಗಿ ತಾಯಂದಿರ ಮರಣ ಪ್ರಮಾಣ, ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ಇಂದು ಇಡೀ ಜಗತ್ತಿನಲ್ಲಿ ಬೇರೆ ದೇಶದ ವಸಾಹತುವಾಗಿ ಅಸ್ತಿತ್ವದಲ್ಲಿರುವ ಯಾವುದೇ ದೇಶವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಹಾಗೆಂದ ಮಾತ್ರಕ್ಕೆ ವಸಾಹತುಶಾಹಿ ಮನಸ್ಥಿತಿ ಮುಗಿದಿದೆ ಎಂದಲ್ಲ. "ಈ ಮನಸ್ಥಿತಿಯು ಅನೇಕ ವಿರೂಪಗಳಿಗೆ ಕಾರಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿ ಪ್ರಯಾಣದಲ್ಲಿ ನಾವು ಎದುರಿಸುತ್ತಿರುವ ಅಡೆತಡೆಗಳಲ್ಲಿ ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ಕಂಡುಬರುತ್ತದೆ. ಅಭಿವೃದ್ಧಿ ಹೊಂದಿದ ಜಗತ್ತು ಇಂದಿನ ಸ್ಥಿತಿಯನ್ನು ತಲುಪಲು ಯಾವ ಮಾರ್ಗ ಅನುಸರಿಸಿತೋ, ಆ ಮಾರ್ಗವನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಚ್ಚುವ ಪ್ರಯತ್ನ ನಡೆಯುತ್ತಿದೆ " ಎಂದು ಅವರು ಹೇಳಿದರು. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಅವಧಿಗೂ ಮೊದಲು ಸಾಧಿಸುವ ಪ್ರಕ್ರಿಯೆಯಲ್ಲಿ ಸಾಗಿರುವ ಏಕೈಕ ದೇಶ ಭಾರತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೂ, ಪರಿಸರದ ಹೆಸರಿನಲ್ಲಿ, ಭಾರತದ ಮೇಲೆ ವಿವಿಧ ಒತ್ತಡಗಳನ್ನು ಹೇರಲಾಗುತ್ತಿದೆ. ಇದೆಲ್ಲವೂ ವಸಾಹತುಶಾಹಿ ಮನಸ್ಥಿತಿಯ ಫಲಿತಾಂಶವಾಗಿದೆ. "ದುರದೃಷ್ಟವಶಾತ್ ಅಂತಹ ಮನಸ್ಥಿತಿಯಿಂದಾಗಿ, ನಮ್ಮದೇ ದೇಶದ ಅಭಿವೃದ್ಧಿಗೆ ಅಡೆತಡೆಗಳನ್ನು ಒಡ್ಡಲಾಗುತ್ತದೆ. ಕೆಲವೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮತ್ತು ಕೆಲವೊಮ್ಮೆ ಬೇರೆ ಯಾವುದಾದರೂ ವಿಷಯದ ಸಹಾಯದಿಂದ", ಅವರು ಪ್ರತಿಪಾದಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಸೃಷ್ಟಿಯಾದ ದೃಢನಿರ್ಧಾರವನ್ನು ಮತ್ತಷ್ಟು ಬಲಪಡಿಸಲು ಈ ವಸಾಹತುಶಾಹಿ ಮನಸ್ಥಿತಿ ದೊಡ್ಡ ಅಡ್ಡಿಯಾಗಿದೆ ಎಂದು ಅವರು ಹೇಳಿದರು. "ನಾವು ಅದನ್ನು ತೊಡೆದುಹಾಕಬೇಕಾಗಿದೆ. ಇದಕ್ಕಾಗಿ ನಮ್ಮ ಅತಿದೊಡ್ಡ ಶಕ್ತಿ, ನಮ್ಮ ಅತಿದೊಡ್ಡ ಸ್ಫೂರ್ತಿ ನಮ್ಮ ಸಂವಿಧಾನ", ಎಂದು ಅವರು ಹೇಳಿದರು.
ಸರ್ಕಾರ ಮತ್ತು ನ್ಯಾಯಾಂಗ ಎರಡೂ ಸಂವಿಧಾನದ ಗರ್ಭದಿಂದ ಜನ್ಮತಳೆದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ, ಎರಡೂ ಅವಳಿಗಳು. ಈ ಎರಡೂ ಅಸ್ತಿತ್ವಕ್ಕೆ ಬಂದಿರುವುದು ಸಂವಿಧಾನದಿಂದ ಮಾತ್ರ. ಆದ್ದರಿಂದ, ವಿಶಾಲ ದೃಷ್ಟಿಕೋನದಿಂದ, ಇವೆರಡೂ ವಿಭಿನ್ನವಾಗಿರುವಾಗಲೂ ಪರಸ್ಪರ ಪೂರಕವಾಗಿವೆ ಎಂದರು. ಅಧಿಕಾರ ವಿಭಜನೆಯ ಪರಿಕಲ್ಪನೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಅಮೃತಕಾಲದಲ್ಲಿ, ಸಾಮಾನ್ಯ ಜನರು ಪ್ರಸ್ತುತ ಹೊಂದಿರುವುದಕ್ಕಿಂತ ಹೆಚ್ಚಿನದಕ್ಕೆ ಅರ್ಹರಿರುವುದರಿಂದ ಸಂವಿಧಾನದ ಸ್ಫೂರ್ತಿಯೊಳಗೆ ಸಾಮೂಹಿಕ ಸಂಕಲ್ಪವನ್ನು ತೋರಿಸುವ ಅಗತ್ಯವಿದೆ ಎಂದು ಹೇಳಿದರು. "ಅಧಿಕಾರದ ವಿಭಜನೆಯ ಬಲವಾದ ಅಡಿಪಾಯದ ಮೇಲೆ, ನಾವು ಸಾಮೂಹಿಕ ಜವಾಬ್ದಾರಿಯ ಹಾದಿಯನ್ನು ಸುಗಮಗೊಳಿಸಬೇಕಾಗಿದೆ, ಮಾರ್ಗಸೂಚಿಯನ್ನು ರಚಿಸಬೇಕಿದೆ, ಗುರಿಗಳನ್ನು ನಿರ್ಧರಿಸಬೇಕಿದೆ ಮತ್ತು ದೇಶವನ್ನು ಅದರ ಗಮ್ಯಸ್ಥಾನಕ್ಕೆ ತೆಗೆದುಕೊಂಡು ಹೋಬಬೇಕಿದೆ" ಎಂದೂ ಅವರು ಹೇಳಿದರು.
***
(Release ID: 1775439)
Visitor Counter : 297
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam