ಉಪರಾಷ್ಟ್ರಪತಿಗಳ ಕಾರ್ಯಾಲಯ

ದೇಶೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ನ್ಯಾವಿಕ್ ಜಾಗತಿಕ ಬಳಕೆಗೆ ಒತ್ತು ನೀಡಿ: ಇಸ್ರೋಗೆ ಉಪರಾಷ್ಟ್ರಪತಿ ಸೂಚನೆ


ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಭಾರತವು ಸಾಮರ್ಥ್ಯವನ್ನು ಹೊಂದಿದೆ: ಉಪರಾಷ್ಟ್ರಪತಿ

ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವಂತೆ ಭಾರತೀಯ ಬಾಹ್ಯಾಕಾಶ ಸಂಘಟನೆಗೆ ಉಪರಾಷ್ಟ್ರಪತಿ ಕರೆ

ದೂರ ಸಂವೇದಿ ಉಪಗ್ರಹ ಡೇಟಾ ಮತ್ತು ಚಿತ್ರಗಳು ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಅನಿವಾರ್ಯ ಸಾಧನಗಳಾಗಿವೆ: ಉಪರಾಷ್ಟ್ರಪತಿ

ಯು ಆರ್ ರಾವ್ ಉಪಗ್ರಹ ಕೇಂದ್ರಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿಯವರಿಂದ ವಿಜ್ಞಾನಿಗಳನ್ನು ಉದ್ದೇಶಿಸಿ ಭಾಷಣ

Posted On: 17 NOV 2021 2:59PM by PIB Bengaluru

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ನ್ಯಾವಿಕ್ (NaVIC) ನ ಜಾಗತಿಕ ಬಳಕೆಗೆ ಒತ್ತು ನೀಡುವಂತೆ ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಅವರು ಇಂದು ಇಸ್ರೋಗೆ ಸೂಚಿಸಿದ್ದಾರೆ.

ಯು ಆರ್ ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ನ್ಯಾವಿಕ್ ಅನ್ನು ಸ್ಥಾಪಿಸಿ, ಕಾರ್ಯಗತಗೊಳಿಸಿದ್ದಕ್ಕಾಗಿ ಇಸ್ರೋವನ್ನು ಶ್ಲಾಘಿಸಿದರು. ಇದೊಂದು ಗಮನಾರ್ಹ ಸಾಧನೆ ಎಂದು ಬಣ್ಣಿಸಿದರು. ವ್ಯಾಪ್ತಿಯ ಪ್ರದೇಶಗಳು, ಸೇವೆಗಳು ಮತ್ತು ರಾಷ್ಟ್ರೀಯ ಅವಶ್ಯಕತೆಗಳನ್ನು ಪೂರೈಸಲು ಅದರ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದಂತೆ ನ್ಯಾವಿಕ್ ವ್ಯವಸ್ಥೆಯ ವಿಸ್ತರಣೆಯನ್ನು ಇಸ್ರೋ ಸಕ್ರಿಯವಾಗಿ ಮುಂದುವರಿಸಬೇಕು ಎಂದು ಅವರು ಹೇಳಿದರು.

 


ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಭಾರತವು ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ ಶ್ರೀ ನಾಯ್ಡು, ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ದೊಡ್ಡ ರೀತಿಯಲ್ಲಿ ಕೊಡುಗೆ ನೀಡುವಂತೆ ಇತ್ತೀಚೆಗೆ ಪ್ರಾರಂಭಿಸಲಾದ ಭಾರತೀಯ ಬಾಹ್ಯಾಕಾಶ ಸಂಘಟನೆಗೆ ಅವರು ಕರೆಕೊಟ್ಟರು.

ಬಾಹ್ಯಾಕಾಶ ಸಂಬಂಧಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಮೂಲಕ ಭಾರತದ ಖಾಸಗಿ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಇಸ್ರೋ ವಹಿಸಿರುವ ನಾಯಕತ್ವದ ಪಾತ್ರವನ್ನು ಅವರು ಶ್ಲಾಘಿಸಿದರು. "ಅನೇಕ ವರ್ಷಗಳಿಂದ ಜ್ಞಾನದ ನೆಲೆ ಮತ್ತು ಬಾಹ್ಯಾಕಾಶ ಸ್ವತ್ತುಗಳನ್ನು ನಿರ್ಮಿಸುವಲ್ಲಿ ಇಸ್ರೋ ಹೊಂದಿರುವ ಅಭೂತಪೂರ್ವ ದಾಖಲೆಯನ್ನು ಖಾಸಗಿ ಪಾಲುದಾರರ ಭಾಗವಹಿಸುವಿಕೆಯೊಂದಿಗೆ ರಾಷ್ಟ್ರಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಬಳಸಿಕೊಳ್ಳುವ ಖಾತ್ರಿಯಿದೆ" ಎಂದು ಅವರು ಹೇಳಿದರು.

 


 

ಇಸ್ರೋವನ್ನು ರಾಷ್ಟ್ರದ ಹೆಮ್ಮೆ ಎಂದು ಬಣ್ಣಿಸಿದ ಉಪ ರಾಷ್ಟ್ರಪತಿಯವರು, ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ಸಂಸ್ಥೆಯು ಜಾಗತಿಕವಾಗಿ ಗೌರವ ಪಡೆದಿದೆ ಎಂದು ಹೇಳಿದರು. "ವಿವಿಧ ಉದ್ದೇಶಗಳಿಗಾಗಿ 100 ಕ್ಕೂ ಹೆಚ್ಚು ಅತ್ಯಾಧುನಿಕ ಉಪಗ್ರಹಗಳನ್ನು ನಿರ್ಮಿಸುವ ಮೂಲಕ ಮತ್ತು ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿಯಂತಹ ಉಡಾವಣಾ ವಾಹನ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ಇಸ್ರೋ ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದೆ" ಎಂದು ಅವರು ಹೇಳಿದರು.


 

 

ಕಾರ್ಯಾಚರಣೆಯ ಉಪಗ್ರಹಗಳು, ವೈಜ್ಞಾನಿಕ ಕಾರ್ಯಾಚರಣೆಗಳು, ಪರಿಶೋಧನಾ ಕಾರ್ಯಾಚರಣೆಗಳು ಮತ್ತು ತೀವ್ರ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಒದಗಿಸುವ ತನ್ನ ಧ್ಯೇಯವನ್ನು ಪಟ್ಟುಬಿಡದೆ ಅನುಸರಿಸುತ್ತಿರುವ ಯುಆರ್ ರಾವ್ ಉಪಗ್ರಹ ಕೇಂದ್ರವನ್ನು ಶ್ಲಾಘಿಸಿದ ಅವರು, ಇಸ್ರೋದ 53 ಕಾರ್ಯಾಚರಣಾ ಉಪಗ್ರಹಗಳು ವಿಶೇಷವಾಗಿ ದೂರಸಂಪರ್ಕ, ಪ್ರಸಾರ, ಹವಾಮಾನ, ದೂರ ಸಂವೇದಿ, ನ್ಯಾವಿಗೇಷನ್ ಮತ್ತು ಬಾಹ್ಯಾಕಾಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ಅಮೂಲ್ಯವಾದ ಸೇವೆಗಳನ್ನು ಒದಗಿಸುತ್ತಿವೆ ಎಂದರು.

 


 

ಉಪಗ್ರಹ ಆಧಾರಿತ ದೂರ ಸಂವೇದಿ ಸೇವೆಗಳ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಕೃಷಿ, ಅರಣ್ಯ, ಸಾಗರಶಾಸ್ತ್ರ, ಮೂಲಸೌಕರ್ಯ ಯೋಜನೆ, ಇಂಧನ ಮತ್ತು ಪರಿಸರ, ಜಲ ಸಂಪನ್ಮೂಲ ಮತ್ತು ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ದೂರ ಸಂವೇದಿ ಉಪಗ್ರಹ ಡೇಟಾ ಮತ್ತು ಚಿತ್ರಗಳು ಅನಿವಾರ್ಯ ಸಾಧನಗಳಾಗಿವೆ ಎಂದರು.

ವಿವಿಧ ಉಪಗ್ರಹಗಳ ಹವಾಮಾನ ಸಂಬಂಧಿ ದತ್ತಾಂಶವು ಅನಾವೃಷ್ಟಿ, ಅತಿವೃಷ್ಟಿ ಮತ್ತು ಚಂಡಮಾರುತಗಳು ಸೇರಿದಂತೆ ಹವಾಮಾನದ ಮುನ್ಸೂಚನೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದ ಉಪ ರಾಷ್ಟ್ರಪತಿಯವರು, ಇಸ್ರೋ ಅಗತ್ಯವಿರುವ ಡೇಟಾವನ್ನು ತಲುಪಿಸಲು ಸುಧಾರಿತ ಆನ್-ಬೋರ್ಡ್ ವ್ಯವಸ್ಥೆ ಕಲ್ಪಿಸುವುದನ್ನು ಮುಂದುವರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಇದು ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ಸುಧಾರಿಸುತ್ತದೆ, ಇದು ರೈತರಿಗೆ ಸಹಾಯ ಮಾಡುತ್ತದೆ ಮತ್ತು ಮತ್ತು ನೈಸರ್ಗಿಕ ವಿಕೋಪಗಳನ್ನು ಉತ್ತಮವಾಗಿ ನಿರ್ವಹಿಸಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಅವರು ಹೇಳಿದರು.

ಯು ಆರ್ ರಾವ್ ಉಪಗ್ರಹ ಕೇಂದ್ರವು ಮುಂದಿನ ಪೀಳಿಗೆಯ ಐಆರ್‌ಎನ್‌ಎಸ್‌ಎಸ್ ಉಪಗ್ರಹಗಳಾದ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಗಾಗಿ ಚಂದ್ರಯಾನ-3 ಮತ್ತು ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಆದಿತ್ಯ-ಎಲ್ 1 ಮಿಷನ್‌ ಕುರಿತು ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯು ಆರ್ ರಾವ್ ಉಪಗ್ರಹ ಕೇಂದ್ರಕ್ಕೆ ತಮ್ಮ ಭೇಟಿಯು "ನಿಜವಾಗಿಯೂ ಸ್ಮರಣೀಯವಾದುದು" ಎಂದು ಉಪ ರಾಷ್ಟ್ರಪತಿಯವರು, ಶುಕ್ರ ಆರ್ಬಿಟರ್ ಮಿಷನ್ ಮತ್ತು ಮಂಗಳ ಗ್ರಹದ ಫಾಲೋ-ಆನ್ ಮಿಷನ್ ಅನ್ನು ಒಳಗೊಂಡಿರುವ ಅದರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಭಾವಿತರಾಗಿರುವುದಾಗಿ ತಿಳಿಸಿದರು.

ಕರ್ನಾಟಕ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್, ಇಸ್ರೋ ಅಧ್ಯಕ್ಷ ಡಾ ಕೆ ಶಿವನ್, ಯುಆರ್ ರಾವ್ ಉಪಗ್ರಹ ಕೇಂದ್ರದ (ಯುಎಸ್‌ಆರ್‌ಸಿ) ನಿರ್ದೇಶಕ ಶ್ರೀ ಶಂಕರನ್, ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶ್ರೀ ಉಮಾಮಹೇಶ್ವರನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಪ ರಾಷ್ಟ್ರಪತಿಯವರ ಭಾಷಣದ ಪೂರ್ಣ ಪಠ್ಯ:

ಹೆಸರಾಂತ ವಿಜ್ಞಾನಿ ಪ್ರೊ. ಯು ಆರ್ ರಾವ್ ಅವರ ನೆನಪಿಗಾಗಿ ಹೆಸರಿಸಲಾದ ಯು ಆರ್ ರಾವ್ ಉಪಗ್ರಹ ಕೇಂದ್ರದ (ಯುಆರ್‌ಎಸ್‌ಸಿ) ದಲ್ಲಿ ನಿಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡಲು ನನಗೆ ಅಪಾರ ಸಂತೋಷವಾಗಿದೆ. ಇಸ್ರೋದ ಸ್ಥಾಪನೆಯ ವರ್ಷಗಳಲ್ಲಿ ಉಪಗ್ರಹ ತಂತ್ರಜ್ಞಾನದ ಮಹತ್ವವನ್ನು ಕಲ್ಪಿಸಿದ ಮತ್ತು ಅದರ ಅಧ್ಯಕ್ಷರಾಗಿ ಇಸ್ರೋಗೆ ಉತ್ತೇಜನವನ್ನು ನೀಡಿದ ಪ್ರೊ. ಯು ಆರ್ ರಾವ್ ಅವರ ಹೆಸರನ್ನು ಈ ಕೇಂದ್ರಕ್ಕೆ ಇಟ್ಟಿರುವುದು ನಿಜಕ್ಕೂ ಅವರಿಗೆ ಗೌರವ ಸಲ್ಲಿಸಿದಂತಾಗಿದೆ.

ಇಸ್ರೋ ರಾಷ್ಟ್ರದ ಹೆಮ್ಮೆ ಮತ್ತು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ಜಾಗತಿಕವಾಗಿ ಗೌರವ ಪಡೆದಿದೆ. ಇಸ್ರೋ ಅನೇಕ ವರ್ಷಗಳಲ್ಲಿ ವಿವಿಧ ಉದ್ದೇಶಗಳಿಗಾಗಿ 100 ಕ್ಕೂ ಹೆಚ್ಚು ಅತ್ಯಾಧುನಿಕ ಉಪಗ್ರಹಗಳನ್ನು ನಿರ್ಮಿಸುವ ಮೂಲಕ ಮತ್ತು ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿಯಂತಹ ಉಡಾವಣಾ ವಾಹನ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ಇಸ್ರೋ ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದೆ.

ಪ್ರೊ. ವಿಕ್ರಮ್ ಎ ಸಾರಾಭಾಯ್ ಮತ್ತು ಪ್ರೊ. ಸತೀಶ್ ಧವನ್ ಅವರು ಹಾಕಿದ ಬುನಾದಿಯ ತತ್ವಗಳು ಇಸ್ರೋ ಮತ್ತು ಅದರ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಇಂದು, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವು ಬಾಹ್ಯಾಕಾಶ ಸಾರಿಗೆ ವ್ಯವಸ್ಥೆ, ಬಾಹ್ಯಾಕಾಶ ಮೂಲಸೌಕರ್ಯ, ಬಾಹ್ಯಾಕಾಶ ಅಪ್ಲಿಕೇಶನ್‌ಗಳು, ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಬಾಹ್ಯಾಕಾಶ ಯಾನದಂತಹ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ.

ರಾಷ್ಟ್ರಕ್ಕಾಗಿ ಕಾರ್ಯಾಚರಣಾ ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಸ್ಥಾಪಿಸುವುದು ಬಾಹ್ಯಾಕಾಶ ಸಂಶೋಧನೆಯ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ. ಇಸ್ರೋದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಯುಆರ್‌ಎಸ್‌ಸಿ ರಾಷ್ಟ್ರೀಯ ಅವಶ್ಯಕತೆಗಳನ್ನು ಪೂರೈಸಲು ಉಪಗ್ರಹಗಳ ವಿನ್ಯಾಸ, ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ತೊಡಗಿಸಿಕೊಂಡಿದೆ. ಈ ಉಪಗ್ರಹ ಕೇಂದ್ರವು 1972 ರಲ್ಲಿ ಪ್ರಾರಂಭವಾದಾಗಿನಿಂದ ಪ್ರಬಲವಾಗಿ ಬೆಳೆದಿರುವುದು ನನಗೆ ಸಂತೋಷ ತಂದಿದೆ. ಇಂದು, ಅದರ ಅಸ್ತಿತ್ವದ 50 ನೇ ವರ್ಷದಲ್ಲಿ, ಯುಆರ್‌ಎಸ್‌ಸಿ ಕಾರ್ಯಾಚರಣೆಯ ಉಪಗ್ರಹಗಳು, ವೈಜ್ಞಾನಿಕ ಕಾರ್ಯಾಚರಣೆಗಳು, ಪರಿಶೋಧನಾ ಕಾರ್ಯಾಚರಣೆಗಳು ಮತ್ತು ತೀವ್ರ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಒದಗಿಸುವ ತನ್ನ ಧ್ಯೇಯವನ್ನು ಪಟ್ಟುಬಿಡದೆ ಅನುಸರಿಸುತ್ತಿದೆ.

ಕಕ್ಷೆಯಲ್ಲಿರುವ ಇಸ್ರೋದ 53 ಕಾರ್ಯಾಚರಣಾ ಉಪಗ್ರಹಗಳು, ವಿಶೇಷವಾಗಿ ದೂರಸಂಪರ್ಕ, ಪ್ರಸಾರ, ಹವಾಮಾನ, ದೂರಸಂವೇದಿ, ನ್ಯಾವಿಗೇಷನ್ ಮತ್ತು ಬಾಹ್ಯಾಕಾಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ಅಮೂಲ್ಯವಾದ ಸೇವೆಗಳನ್ನು ಒದಗಿಸುತ್ತಿರುವುದು ಸಂತಸದ ವಿಷಯವಾಗಿದೆ.

1988 ರಲ್ಲಿ IRS-1A ಉಡಾವಣೆಯೊಂದಿಗೆ ಪ್ರಾರಂಭವಾದ ಉಪಗ್ರಹ ಆಧಾರಿತ ದೂರಸಂವೇದಿ ಸೇವೆಗಳ ಕ್ಷೇತ್ರದಲ್ಲಿ ಭಾರತವು ವಿಶ್ವ ನಾಯಕನಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ.

ನಿಸ್ಸಂದೇಹವಾಗಿ, ಕೃಷಿ, ಅರಣ್ಯ, ಸಾಗರಶಾಸ್ತ್ರ, ಮೂಲಸೌಕರ್ಯ ಯೋಜನೆ, ಇಂಧನ ಮತ್ತು ಪರಿಸರ, ಜಲ ಸಂಪನ್ಮೂಲ ಮತ್ತು ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವಲ್ಲಿ ದೂರಸಂವೇದಿ ಉಪಗ್ರಹ ಡೇಟಾ ಮತ್ತು ಚಿತ್ರಗಳು ಅನಿವಾರ್ಯ ಸಾಧನಗಳಾಗಿವೆ. ಇಸ್ರೋ ತನ್ನ ಸೇವೆಗಳ ನಿರಂತರತೆಯನ್ನು ಒದಗಿಸಲು ಮತ್ತು ಬಳಕೆದಾರ ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ಸೂಕ್ತವಾದ ಫಾಲೋ-ಆನ್ ಉಪಗ್ರಹಗಳನ್ನು ಯೋಜಿಸಲು ಕೆಲಸ ಮಾಡುತ್ತಿದೆ.

ಆತ್ಮೀಯ ಸಹೋದರ ಸಹೋದರಿಯರೇ,

ನೀವು ಮಾಡುತ್ತಿರುವ ಕೆಲಸವು ಜನರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ವಿವಿಧ ಉಪಗ್ರಹಗಳ ಹವಾಮಾನ ದತ್ತಾಂಶವು ಬರ, ಅತಿವೃಷ್ಟಿ ಮತ್ತು ಚಂಡಮಾರುತಗಳು ಸೇರಿದಂತೆ ಹವಾಮಾನದ ಮುನ್ಸೂಚನೆಯನ್ನು ಸುಗಮಗೊಳಿಸುತ್ತದೆ. ಅಗತ್ಯವಿರುವ ಡೇಟಾವನ್ನು ತಲುಪಿಸಲು ಇಸ್ರೋ ಸುಧಾರಿತ ಆನ್-ಬೋರ್ಡ್ ಸಿಸ್ಟಮ್‌ಗಳನ್ನು ಕಲ್ಪಿಸುವುದನ್ನು ಮತ್ತು ನಿರ್ಮಿಸುವುದನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಇದು ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ಸುಧಾರಿಸುತ್ತದೆ, ಇದು ರೈತರಿಗೆ ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕ ವಿಕೋಪಗಳನ್ನು ಉತ್ತಮವಾಗಿ ನಿರ್ವಹಿಸಲು ನಮಗೆ ಅನುವು ಮಾಡಿಕೊಡುತ್ತದೆ.

ಇನ್’ಸ್ಯಾಟ್ /ಜಿಸ್ಯಾಟ್ ಸಂವಹನ ಉಪಗ್ರಹಗಳ ಕಾರ್ಯಾಚರಣೆಯು ನಮ್ಮ ರಾಷ್ಟ್ರದ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಉಪಗ್ರಹ ಆಧಾರಿತ ಸಂವಹನವು ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮಾನವಾಗಿ ಸಂಪರ್ಕವನ್ನು ಒದಗಿಸುತ್ತದೆ, ರಾಷ್ಟ್ರದ ಆರ್ಥಿಕ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತದೆ. ಇತ್ತೀಚೆಗೆ ಉಡಾವಣೆಯಾದ ಹೈ ಥ್ರೋಪುಟ್ ಉಪಗ್ರಹಗಳು (ಹೆಚ್ ಟಿ ಎಸ್) ಸೇರಿದಂತೆ ಈ ಸಂವಹನ ಉಪಗ್ರಹಗಳು ದೇಶದ ಆರ್ಥಿಕ ಭದ್ರತೆಯ ಮೂಲಸೌಕರ್ಯದ ಭಾಗವಾಗಿವೆ.

ದೇಶೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯಾದ ನ್ಯಾವಿಕ್ (NaVIC) ಅನ್ನು ಸ್ಥಾಪಿಸಿ ಕಾರ್ಯಾಚರಣೆಗೊಳಿಸಿದ್ದಕ್ಕಾಗಿ ನಾನು ಇಸ್ರೋ ಮತ್ತು ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ.  ಇದು ಗಮನಾರ್ಹ ಸಾಧನೆಯಾಗಿದೆ. ಸ್ಥಾನ, ವೇಗ ಮತ್ತು ಸಮಯದ ಸೇವೆಗಳನ್ನು ಒದಗಿಸುವ ನ್ಯಾವಿಕ್ ವ್ಯವಸ್ಥೆಯು ಅಪ್ಲಿಕೇಶನ್ ಡೆವಲಪರ್‌ಗಳಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ,

ವ್ಯಾಪ್ತಿಯ ಪ್ರದೇಶಗಳು, ಸೇವೆಗಳು ಮತ್ತು ರಾಷ್ಟ್ರೀಯ ಅವಶ್ಯಕತೆಗಳನ್ನು ಪೂರೈಸಲು ಅದರ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದಂತೆ ನ್ಯಾವಿಕ್ ವ್ಯವಸ್ಥೆಯ ವಿಸ್ತರಣೆಯನ್ನು ಇಸ್ರೋ ಸಕ್ರಿಯವಾಗಿ ಅನುಸರಿಸಬೇಕು. ಅದೇ ಸಮಯದಲ್ಲಿ, ನ್ಯಾವಿಕ್ ನ ಜಾಗತಿಕ ಬಳಕೆಗೆ ನಾವು ಒತ್ತು ನೀಡಬೇಕು.

ಈ ಕೇಂದ್ರವು ಮುಂದಿನ ಪೀಳಿಗೆಯ ಐಆರ್‌ಎನ್‌ಎಸ್‌ಎಸ್ ಉಪಗ್ರಹಗಳನ್ನು ದೇಶೀಯ ಪರಮಾಣು ಗಡಿಯಾರ ಮತ್ತು ನ್ಯಾವಿಗೇಷನ್ ಸೇವೆಗಳಿಗೆ ನಿರ್ಮಿಸಲು ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಜಿಸ್ಯಾಟ್ ಉಪಗ್ರಹಗಳಿಂದ GPS ನೆರವಿನ ಜಿಯೋ ಆಗ್ಮೆಂಟೆಡ್ ನ್ಯಾವಿಗೇಶನ್ (ಗಗನ್) ಸೇವೆಗಳು ಏರ್ ಟ್ರಾಫಿಕ್ ನ್ಯಾವಿಗೇಶನ್‌ಗೆ ಲಭ್ಯವಿರುವುದನ್ನು ತಿಳಿದು ನನಗೆ ಸಂತೋಷವಾಗಿದೆ.

ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಚಂದ್ರ ಮತ್ತು ಮಂಗಳದ ಸುತ್ತ ಸುತ್ತುವ ತಮ್ಮ ಉದ್ದೇಶಗಳನ್ನು ಸಾಧಿಸುವ ಮೂಲಕ, ಚಂದ್ರಯಾನ-1 ಮತ್ತು ಮಾರ್ಸ್ ಆರ್ಬಿಟರ್ ಮಿಷನ್ (MOM) ರಾಷ್ಟ್ರದ ಮತ್ತು ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಪಡೆದಿವೆ. ಹಾಗೆಯೇ, ಭಾರತದ ಮೊದಲ ಬಹು-ತರಂಗಾಂತರ ಬಾಹ್ಯಾಕಾಶ ವೀಕ್ಷಣಾಲಯ ಮಿಷನ್ ಆಸ್ಟ್ರೋಸ್ಯಾಟ್, ಅದರ ವೈಜ್ಞಾನಿಕ ಸಂಶೋಧನೆಗಳಿಗಾಗಿ ಅಂತರಾಷ್ಟ್ರೀಯ ಖಗೋಳ ಸಮುದಾಯದಿಂದ ಪ್ರಶಂಸೆಗಳನ್ನು ಪಡೆದಿದೆ.

ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಗಾಗಿ ಚಂದ್ರಯಾನ-3 ಮತ್ತು ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಆದಿತ್ಯ-ಎಲ್ 1 ಮಿಷನ್‌ ಕುರಿತು ಯುಆರ್‌ಎಸ್‌ಸಿ ಕೆಲಸ ಮಾಡುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.

ಇನಾರ್ಬಿಟ್ ಡಾಕಿಂಗ್ ಮಿಷನ್ ಸ್ಪೆಡೆಕ್ಸ್, ವೀನಸ್ ಆರ್ಬಿಟರ್ ಮಿಷನ್, ಮಂಗಳ ಗ್ರಹಕ್ಕೆ ಫಾಲೋ-ಆನ್ ಮಿಷನ್ ಮತ್ತು ಇತರ ಬಾಹ್ಯಾಕಾಶ ಏಜೆನ್ಸಿಗಳೊಂದಿಗೆ ಸಹಯೋಗದ ಪ್ರಯತ್ನಗಳ ನಿಮ್ಮ ಭವಿಷ್ಯದ ಯೋಜನೆಗಳನ್ನು ಬಗ್ಗೆ ವಿವರಣೆ ನೀಡುವ ನಿಮ್ಮ ಪ್ರಸ್ತುತಿಯಿಂದ ನಾನು ಸಂತಸಗೊಂಡಿದ್ದೇನೆ.

ಕೇಂದ್ರವು ಕಾರ್ಯನಿರ್ವಹಿಸುತ್ತಿರುವ 30 ಉಪಗ್ರಹಗಳ ಪೈಕಿ ಕೆಲವನ್ನು ನಾನು ಇಂದು ನೋಡಿದ್ದೇನೆ. ಕಳೆದ ಐದು ದಶಕಗಳಲ್ಲಿ ಯುಆರ್‌ಎಸ್‌ಸಿಯಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ-ಸೌಲಭ್ಯಗಳು ತಂಡದ ವೃತ್ತಿಪರತೆಗೆ ಸಾಕ್ಷಿಯಾಗಿವೆ. ಯುಆರ್‌ಎಸ್‌ಸಿಯ ಉಪಗ್ರಹಗಳು ಮತ್ತು ಸೌಲಭ್ಯಗಳು ತಂಡದ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಫಲಿತಾಂಶಗಳಾಗಿವೆ ಮತ್ತು ನಿಮ್ಮ ಕೆಲಸದಿಂದ ನಾನು ನಿಜವಾಗಿಯೂ ಸಂತಸಗೊಂಡಿದ್ದೇನೆ. ಈ ಕೇಂದ್ರವು ಭಾರತದ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮದ ಆರ್ಬಿಟಲ್ ಮಾಡ್ಯೂಲ್ - ಗಗನ್‌ಯಾನ್ ಮಿಷನ್‌ನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ತಿಳಿದು ನನಗೆ ಅಷ್ಟೇ ಸಂತೋಷವಾಗಿದೆ.

ಆತ್ಮೀಯ ಸಹೋದರ ಸಹೋದರಿಯರೇ,

ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ದೊಡ್ಡ ಸಾಮರ್ಥ್ಯವನ್ನು ಭಾರತ ಹೊಂದಿದೆ. ಜಾಗತಿಕವಾಗಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಬಾಹ್ಯಾಕಾಶ ರಂಗದಲ್ಲಿರುವ ಪ್ರತಿಯೊಂದು ಭಾರತೀಯ ಸಂಸ್ಥೆಯು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ನಮ್ಮ ಜಾಗತಿಕ ಪಾಲನ್ನು ಹೆಚ್ಚಿಸಲು ಶ್ರಮಿಸಬೇಕು. ಪ್ರಧಾನಮಂತ್ರಿ ಶ್ರೀ ನರೇಂದ್ರಭಾಯಿ ಮೋದಿಯವರು ಇತ್ತೀಚೆಗೆ ಆರಂಭಿಸಿದ ಭಾರತೀಯ ಬಾಹ್ಯಾಕಾಶ ಸಂಘಟನೆಯು ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ದೊಡ್ಡ ರೀತಿಯಲ್ಲಿ ಕೊಡುಗೆ ನೀಡುವಂತೆ ನಾನು ಒತ್ತಾಯಿಸುತ್ತೇನೆ.

ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸಲು ಖಾಗಿಯವರಿಗೆ ಅನುವು ಮಾಡಿಕೊಡುವ ಇತ್ತೀಚಿನ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಗೆ ಅನುಗುಣವಾಗಿ ಭಾರತದ ಖಾಸಗಿ ಘಟಕಗಳಿಗೆ ಉತ್ತೇಜನ ನೀಡುವಲ್ಲಿ ಇಸ್ರೋ ನಾಯಕತ್ವದ ಪಾತ್ರವನ್ನು ವಹಿಸುವುದು ತುಂಬಾ ಸೂಕ್ತವಾಗಿದೆ.

ಅನೇಕ ವರ್ಷಗಳ ಕಾಲ ಜ್ಞಾನ ನೆಲೆ ಮತ್ತು ಬಾಹ್ಯಾಕಾಶ ಸ್ವತ್ತುಗಳನ್ನು ನಿರ್ಮಿಸುವಲ್ಲಿ ಇಸ್ರೋದ ಅಭೂತಪೂರ್ವ ದಾಖಲೆಯನ್ನು ಖಾಸಗಿ ಪಾಲುದಾರರ ಭಾಗವಹಿಸುವಿಕೆಯೊಂದಿಗೆ ರಾಷ್ಟ್ರಕ್ಕೆ ಪ್ರಯೋಜನಗಳನ್ನು ಹೆಚ್ಚಿಸಲು ಬಳಸಿಕೊಳ್ಳಲಾಗುವುಇದು ಎಂದು ನನಗೆ ಖಾತ್ರಿಯಿದೆ.

ಯುಆರ್‌ಎಸ್‌ಸಿಗೆ ನನ್ನ ಭೇಟಿಯು ನಿಜವಾಗಿಯೂ ಸ್ಮರಣೀಯವಾಗಿದೆ ಮತ್ತು ಬಾಹ್ಯಾಕಾಶ ವಿಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅದರ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಇಸ್ರೋ ಮತ್ತು ಈ ಕೇಂದ್ರದ ಮಹೋನ್ನತ ಕೊಡುಗೆಗೆ ನನ್ನ ಅಪಾರ ಮೆಚ್ಚುಗೆ ಇದೆ.

ಡಾ. ಶಿವನ್ ಮತ್ತು ಅವರ ಅದ್ಭುತ ತಂಡಕ್ಕೆ ನನ್ನ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಇಲ್ಲಿರುವ ಪ್ರತಿಯೊಬ್ಬರಿಗೂ ಇಲ್ಲಿಯವರೆಗಿನ ನಿಮ್ಮ ಸಾಧನೆ ಮತ್ತು ಮುಂಬರುವ ವರ್ಷಗಳ ನಿಮ್ಮ ಸಾಧನೆಗೆ ಶುಭಾಕಾಂಕ್ಷೆಗಳು!

ಜೈ ಹಿಂದ್!

***



(Release ID: 1772663) Visitor Counter : 315