ವಾರ್ತಾ ಮತ್ತು ಪ್ರಸಾರ ಸಚಿವಾಲಯ

ದೇಶದ ಸಮುದ್ರ ಕಳೆಯ ತಾಣವಾಗಿ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸಲು ಕೇಂದ್ರ ಎಲ್ಲ ಅಗತ್ಯ ನೆರವು ಮತ್ತು ಬೆಂಬಲ ನೀಡಲಿದೆ, ಕೇಂದ್ರ ಸಚಿವ ಡಾ. ಎಲ್. ಮುರುಗನ್

Posted On: 30 OCT 2021 4:25PM by PIB Bengaluru

ಕೊಚ್ಚಿ, ಅಕ್ಟೋಬರ್ 30, 2021
 ಮೂರು ದಿನಗಳ ಲಕ್ಷದ್ವೀಪ ಭೇಟಿಯಲ್ಲಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು, ತಮ್ಮ ಭೇಟಿಯ ಎರಡನೇ ದಿನವಾದ ಇಂದು ಕವರತ್ತಿ ದ್ವೀಪದಲ್ಲಿರುವ ಸಮುದ್ರ ಕಳೆ ಪ್ರಾತ್ಯಕ್ಷಿಕೆ ಯೋಜನೆಯ ತಾಣಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ವೇಳೆ, ಡಾ. ಮುರುಗನ್ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳು, ಸಂಶೋಧನಾ ವಿಜ್ಞಾನಿಗಳು, ಉದ್ಯಮಿಗಳು ಮತ್ತು ಲಕ್ಷದ್ವೀಪದಲ್ಲಿ ಸಮುದ್ರ ಕಳೆ ಕೃಷಿಯಲ್ಲಿ ತೊಡಗಿರುವ ಇತರ ಬಾಧ್ಯಸ್ಥರುಗಳೊಂದಿಗೆ ಸಂವಾದ ನಡೆಸಿದರು.  ಅವರೊಂದಿಗೆ ಆಡಳಿತಗಾರರ ಸಲಹೆಗಾರ ಶ್ರೀ ಎ. ಅನ್ಬರಸು ಮತ್ತು ಮೀನುಗಾರಿಕೆ ಕಾರ್ಯದರ್ಶಿ ಹಾಜರಿದ್ದರು.
ಸಮುದ್ರ ಕಳೆಯ ತಾಣದ ಕ್ಷೇತ್ರ ಭೇಟಿಯ ವೇಳೆ, ಸಚಿವರು ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ ಸಂವಾದ ನಡೆಸಿದ ಸಚಿವರು, ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಆಲಿಸಿದರು.   “ಲಕ್ಷದ್ವೀಪದ ಕರಾವಳಿಯಲ್ಲಿ ಸಮುದ್ರ ಕಳೆಯ ಕೃಷಿಗೆ ಅದ್ಭುತ ಸಾಮರ್ಥ್ಯವಿದ್ದು, ಇದು ಉದ್ಯೋಗವಾಕಾಶಗಳನ್ನೂ ಒದಗಿಸುತ್ತದೆ. ಜೊತೆಗೆ ಜನರ ಅದರಲ್ಲೂ ಇಲ್ಲಿನ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಕಾರಣವಾಗಲಿದೆ. ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿದೆ” ಎಂದು ಕೇಂದ್ರ ಸಚಿವರು ತಿಳಿಸಿದರು. 
ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಉನ್ನತಿ ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಲಕ್ಷದ್ವೀಪವನ್ನು ದೇಶದ ಸಮುದ್ರ ಕಳೆ ತಾಣವಾಗಿ ಅಭಿವೃದ್ಧಿ ಪಡಿಸಲು ಅಗತ್ಯವಿರುವ ಎಲ್ಲಾ ನೆರವು ಮತ್ತು ಬೆಂಬಲವನ್ನು ಎಂದು ಅವರು ಭರವಸೆ ನೀಡಿದರು. 
ಇದಕ್ಕೂ ಮುನ್ನ, ಬೆಳಗ್ಗೆ ಕವರತ್ತಿ ದ್ವೀಪದಲ್ಲಿರುವ ಸಾಗರ ಮತ್ಸ್ಯಾಲಯ, ವಸ್ತು ಸಂಗ್ರಹಾಲಯ, ಮೀನುಗಾರಿಕಾ ಜೆಟ್ಟಿಗೆ ಸಚಿವರು ಭೇಟಿ ನೀಡಿದ್ದರು. ಬಂಗಾರಂ ದ್ವೀಪಕ್ಕೆ ತೆರಳಿದ ಡಾ.ಮುರುಗನ್ ಅಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ದ್ವೀಪದ ಮೀನುಗಾರರೊಂದಿಗೆ ಸಂವಾದ ನಡೆಸಲಿದ್ದಾರೆ.

***



(Release ID: 1768018) Visitor Counter : 166


Read this release in: English , Tamil , Malayalam