ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ತೈಲ ಮತ್ತು ಅನಿಲ ವಲಯದ ತಜ್ಞರು ಮತ್ತು ಸಿಇಒಗಳ ಜತೆ ಪ್ರಧಾನ ಮಂತ್ರಿ ವೀಡಿಯೊ ಕಾನ್ಫರೆನ್ಸ್ ಸಂವಾದ


ತೈಲ ಮತ್ತು ಅನಿಲ ವಲಯದಲ್ಲಿ ಆತ್ಮನಿರ್ಭರ್ ಭಾರತ ನಿರ್ಮಾಣವೇ ನಮ್ಮ ಗುರಿ: ಪ್ರಧಾನ ಮಂತ್ರಿ

ಭಾರತದ ತೈಲ ಮತ್ತು ಅನಿಲ ವಲಯದ ಪರಿಶೋಧನೆ(ಅನ್ವೇಷಣೆ) ಮತ್ತು ಅಭಿವೃದ್ಧಿಯಲ್ಲಿ ಪಾಲುದಾರರಾಗುವಂತೆ ಸಿಇಒಗಳಿಗೆ ಪ್ರಧಾನ ಮಂತ್ರಿ ಆಹ್ವಾನ

ಇಂಧನ ಲಭ್ಯತೆ, ಇಂಧನ ಭದ್ರತೆ ಮತ್ತು ಇಂಧನ ಕೈಗೆಟುಕುವಿಕೆಗೆ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳಿಗೆ ಉದ್ಯಮ ನಾಯಕರ ಪ್ರಶಂಸೆ

Posted On: 20 OCT 2021 9:14PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳು ಮತ್ತು ತಜ್ಞರ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಭಾರತದ ತೈಲ ಮತ್ತು ಅನಿಲ ವಲಯದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಕುರಿತು ಪ್ರಧಾನ ಮಂತ್ರಿ ಅವರು ವಿಸ್ತೃತ ಚರ್ಚೆ ನಡೆಸಿದರು. ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಪರವಾನಗಿ ನೀತಿ, ಅನಿಲ ಮಾರುಕಟ್ಟೆ, ಕಲ್ಲಿದ್ದಲು ಹಾಸು ಮೀಥೇನ್ ನೀತಿಗಳು, ಕಲ್ಲಿದ್ದಲು ಅನಿಲೀಕರಣ, ಭಾರತೀಯ ಅನಿಲ ವಿನಿಮಯ ಮಾರುಕಟ್ಟೆಗೆ ಇತ್ತೀಚೆಗೆ ಹಲವಾರು ಸುಧಾರಣೆಗಳನ್ನು ತರಲಾಗಿದೆ. ಭಾರತದ ತೈಲ ಮತ್ತು ಅನಿಲ ವಲಯದಲ್ಲಿ ಆತ್ಮನಿರ್ಭರ್ ಭಾರತ ನಿರ್ಮಾಣ ಮಾಡಲು ಎಲ್ಲಾ ಸುಧಾರಣಾ ಕ್ರಮಗಳು ಮುಂದುವರಿಯಲಿವೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಭಾರತದ ತೈಲ ವಲಯದ ಬೆಳವಣಿಗೆ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಸರ್ಕಾರ ಆದಾಯ ಹೆಚ್ಚಳಕ್ಕೆ ನೀಡಿದ್ದ ಗಮನವನ್ನು ಇದೀಗ ತೈಲ ಉತ್ಪಾದನೆ ಗರಿಷ್ಠಗೊಳಿಸಲು ಬದಲಿಸಿದೆ. ಕಚ್ಚಾ ತೈಲ ದಾಸ್ತಾನಿಗೆ ಶೇಖರಣಾ ಸೌಲಭ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ನರೇಂದ್ರ ಮೋದಿ ತಿಳಿಸಿದರು. ದೇಶದಲ್ಲಿ ನೈಸರ್ಗಿಕ ಅನಿಲಕ್ಕೆ ವೇಗವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ನಿಟ್ಟಿನಲ್ಲಿ ಅನಿಲ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ದೇಶದ ವಿವಿಧೆಡೆ ಅನಿಲ ಪೈಪ್ ಲೈನ್ ಯೋಜನೆಗಳು ಆರಂಭವಾಗಿವೆ. ನಗರ ಭಾಗಗಳಲ್ಲಿ ಅನಿಲ ವಿತರಣೆ ಯೋಜನೆಗಳು ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಮರುಅನಿಲೀಕರಣ ಟರ್ಮಿನಲ್ ಯೋಜನೆಗಳ ಕುರಿತು ಪ್ರಸ್ತಾಪಿಸಿದರು. ಅಲ್ಲದೆ, ಸಂಭಾವ್ಯ ಅನಿಲ ಮೂಕಸೌಕರ್ಯ ಯೋಜನೆಗಳನ್ನು ಸಹ ಪ್ರಸ್ತಾಪಿಸಿದರು.

ಭಾರತದ ತೈಲ ಮತ್ತು ಅನಿಲ ವಲಯವನ್ನು ಅಭಿವೃದ್ಧಿಪಡಿಸಲು, 2016ರಿಂದ ಪ್ರತಿವರ್ಷ ನಡೆಯುತ್ತಿರುವ ಸಂವಾದ ಕಾರ್ಯಕ್ರಮದಲ್ಲಿ ತಜ್ಞರು ಮತ್ತು ಸಿಇಒಗಳು ನೀಡುತ್ತಾ ಬಂದಿರುವ ಸಲಹೆ, ಸೂಚನೆಗಳು ಬಹಳಷ್ಟು ಉಪಯುಕ್ತವಾಗಿವೆ. ತೈಲ ಮತ್ತು ಅನಿಲ ವಲಯ ಎದುರಿಸುತ್ತಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ನಿಮ್ಮೆಲ್ಲರ ಸಲಹೆ, ಸೂಚನೆಗಳು ಉಪಯೋಗಕ್ಕೆ ಬರುತ್ತಿವೆ ಎಂದು ನರೇಂದ್ರ ಮೋದಿ ತಿಳಿಸಿದರು. ಭಾರತವು ಮುಕ್ತತೆ, ಆಶಾವಾದ ಮತ್ತು ಅವಕಾಶಗಳ ಕಣಜವಾಗಿದೆ. ಇದು ಹೊಸ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ನಾವೀನ್ಯತೆಗಳಿಂದ ತುಂಬಿದೆ. ಹಾಗಾಗಿ, ಭಾರತದ ತೈಲ ಮತ್ತು ಅನಿಲ ವಲಯದಲ್ಲಿರುವ ಅಪಾರ ಅವಕಾಶಗಳನ್ನು ಅನ್ವೇಷಿಸಲು, ಪರಿಶೋಧಿಸಲು ಮತ್ತು ಅಭಿವೃದ್ಧಿಪಡಿಸಲು ತಜ್ಞರು ಮತ್ತು ಸಿಇಒಗಳು ಪಾಲುದಾರರಾಗಬೇಕು ಎಂದು ಪ್ರಧಾನ ಮಂತ್ರಿ ಮುಕ್ತಾಹ್ವಾನ ನೀಡಿದರು.

ಭಾರತದ ತೈಲ ಮತ್ತು ಅನಿಲ ವಲಯದ ಅಭಿವೃದ್ಧಿಯ ಸಂವಾದ ಕಾರ್ಯಕ್ರಮದಲ್ಲಿ ಇಡೀ ವಿಶ್ವದ ಉದ್ಯಮ ನಾಯಕರು ಪಾಲ್ಗೊಂಡಿದ್ದರು. ರೋಸ್ ನೆಫ್ಟ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಡಾ. ಇಗೊರ್ ಸೆಚಿನ್, ಸೌದಿ ಅರಾಮ್|ಕೊ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಅಮಿನ್ ನಾಸೆರ್, ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯ ಸಿಇಒ ಬರ್ನಾರ್ಡ್ ಲೂನಿ, ಐಎಚ್ಎಸ್ ಮಾರ್ಕಿಟ್ ಕಂಪನಿಯ ಉಪಾಧ್ಯಕ್ಷ ಡಾ. ಡೇನಿಯಲ್ ಯೆರ್ಗಿನ್, ಶಂಬರ್ಗರ್ ಲಿಮಿಟೆಡ್ ಸಿಇಒ ಒಲಿವಿಯರ್ ಲಿ ಪೆಶ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಎಂಡಿ ಮುಕೇಶ್ ಅಂಬಾನಿ, ವೇದಾಂತ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಗರ್ ವಾಲ್ ಸೇರಿದಂತೆ ಹಲವು ಉದ್ಯಮ ನಾಯಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇಂಧನ ಭದ್ರತೆ, ಇಂಧನ ಲಭ್ಯತೆ ಮತ್ತು ಇಂಧನ ಕೈಗೆಟುಕಲು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಹಲವಾರು ಸುಧಾರಣಾ ಕ್ರಮಗಳನ್ನು ಉದ್ಯಮ ನಾಯಕರು ಪ್ರಶಂಸಿಸಿದರು. ಭಾರತದಲ್ಲಿ ಸ್ವಚ್ಛ ಇಂಧನ ಉತ್ಪಾದನೆ ಮತ್ತು ಬಳಕೆಗೆ ಪರಿವರ್ತನೆಯಾಗಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದ ಸರ್ಕಾರ ಮಹತ್ವಾಕಾಂಕ್ಷಿ ಮತ್ತು ಗೋಚರಿಸುವ ಗುರಿಗಳ ಸಾಧನೆಗೆ ಕೈಗೊಂಡ ಕ್ರಮಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ರೂಪದ ಸ್ವಚ್ಛ ಇಂಧನ ತಂತ್ರಜ್ಞಾನಗಳನ್ನು ಭಾರತವು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದೆ. ನಿಟ್ಟಿನಲ್ಲಿ ಅದು ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಹೊಸ ರೂಪ ನೀಡಲು ಮಹತ್ವದ ಪಾತ್ರ ವಹಿಸಬಹುದಾಗಿದೆ ಎಂದು ಉದ್ಯಮ ದಿಗ್ಗಜರು ಸಲಹೆ ನೀಡಿದರು. ಸುಸ್ಥಿರ ಮತ್ತು ನೀತಿಸಮ್ಮತವಾದ ಇಂಧನ ಪರಿವರ್ತನೆ ಖಾತ್ರಿಪಡಿಸುವ ಮತ್ತು ಸ್ವಚ್ಛ ಇಂಧನದ ಬೆಳವಣಿಗೆ ಮತ್ತು ಸುಸ್ಥಿರತೆಯ ಉತ್ತೇಜನ ಕುರಿತು ಅವರು ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

***



(Release ID: 1765332) Visitor Counter : 214