ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಉತ್ತರಾಖಂಡದ ರಿಷಿಕೇಶ್ ನ ಏಮ್ಸ್ ನಿಂದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 35 ಪಿ.ಎಸ್.ಎ ಆಮ್ಲಜನಕ ಘಟಕಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಎಲ್ಲಾ ಜಿಲ್ಲೆಗಳು ಕನಿಷ್ಠ ಒಂದು ಪಿ.ಎಸ್.ಎ ಘಟಕಗಳನ್ನು ಹೊಂದಿವೆ : ಪ್ರಧಾನಮಂತ್ರಿ
ಭಾರತದ ದ್ರವೀಕೃತ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ 900 ಮೆಟ್ರಿಕ್ ಟನ್ ಗೆ ಅಂದರೆ 10 ಪಟ್ಟು ಏರಿಕೆ

ಎಲ್ಲಾ ರಾಜ್ಯಗಳಲ್ಲಿ “ಏಮ್ಸ್” ಮತ್ತು ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಸರ್ಕಾರದ ಗುರಿ

ಸಾಂಕ್ರಾಮಿಕ ಸಂದರ್ಭದಲ್ಲಿ ಸವಾಲುಗಳನ್ನು ಎದುರಿಸಿ. ಸಾಮರ್ಥ್ಯ ವೃದ‍್ಧಿಸುವ ಮೂಲಕ ಸ್ವಾವಲಂಬನೆ ಮತ್ತು ಆತ್ಮ ನಿರ್ಭರದತ್ತ ಸಾಗುವುದನ್ನು ಈ ಆಂದೋಲನ ಖಾತ್ರಿಪಡಿಸಿದೆ

ಕೇಂದ್ರ ಮತ್ತು ರಾಜ್ಯದ ಸಮನ್ವಯತೆಯಿಂದ “ವಿಕಾಸದ ಡಬಲ್ ಎಂಜಿನ್ “ ಆಡಳಿತದಿಂದ ಲಸಿಕಾ ಅಭಿಯಾನದಲ್ಲಿ ಸಾಧನೆ ಮಾಡಿರುವ ಉತ್ತರಾಖಂಡ ರಾಜ್ಯಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

ಎರಡು ದಶಕಗಳ ಸಾರ್ವಜನಿಕ ಸೇವೆ ಪೂರೈಸಿದ ಸಂದರ್ಭದಲ್ಲಿ ಜನಾರೋಗ್ಯ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರ ಸಾಧನೆಗಳನ್ನು ಅನಾವರಣಗೊಳಿಸಿದ ಶ್ರೀ ಮನ್ಸುಖ್ ಮಾಂಡವೀಯ

Posted On: 07 OCT 2021 3:51PM by PIB Bengaluru

ಉತ್ತರಾಖಂಡದ ರಿಷಿಕೇಶ್ ನ ಏಮ್ಸ್ ಆಸ್ಪತ್ರೆ ಮೂಲಕ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗಿರುವ 35 ಪಿ.ಎಸ್.ಎ ಆಮ್ಲಜನಕ ಘಟಕಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವೀಯ, ಉತ್ತರಾಖಂಡದ ರಾಜ್ಯಪಾಲರಾದ ಲೆಪ್ಟಿನೆಂಟ್ ಜನರಲ್  [ನಿವೃತ್ತ] ಗುರ್ಮಿತ್ ಸಿಂಗ್, ಉತ್ತರಾಖಂಡ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಮಿ, ಕೇಂದ್ರ ಪ್ರವಾಸೋದ್ಯಮ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ಟ್, ಉತ್ತರಾಖಂಡದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಧನ್ ಸಿಂಗ್ ರಾವುತ್, ಉತ್ತರಾಖಂಡದ ವಿಧಾನಸಭಾಧ್ಯಕ್ಷ ಶ್ರೀ ಪ್ರೇಮ್ ಚಂದ್ ಅಗರ್ವಾಲ್ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಕೋವಿಡ್ – 19 ಬಿಕ್ಕಟ್ಟಿನೊಂದಿಗೆ ಭಾರತದ ಪ್ರಯತ್ನದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಇದನ್ನು ಶತಮಾನದ ಬಿಕ್ಕಟ್ಟು ಎಂದು ಉಲ್ಲೇಖಿಸಿದರು.  ಭಾರತ ಈ ಬಿಕ್ಕಟ್ಟನ್ನು ಹುರುಪು ಮತ್ತು ಉತ್ಸಾಹದಿಂದ ಎದುರಿಸಿದ ಪರಿಯನ್ನು ಶ‍್ಲಾಘಿಸಿದರು. ಸಾಂಕ್ರಾಮಿಕದ ಆರಂಭದಲ್ಲಿ ಕೇವಲ ಒಂದು ಪ್ರಯೋಗಾಲಯ ಇತ್ತು, ನಾವು ಇದೀಗ ದೇಶದಲ್ಲಿ 3000 ಪ್ರಯೋಗಾಲಯಗಳನ್ನು ಹೊಂದಿದ್ದೇವೆ. ಅಗತ್ಯ ವಸ್ತುಗಳಾದ ಎನ್95 ಮುಖಗವಸು, ಪಿಪಿಇ ಕಿಟ್ ಗಳು, ವೆಂಟಿಲೇಟರ್ ಗಳ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಹಗಲು ರಾತ್ರಿ ಕೆಲಸ ಮಾಡಿತು.  ಈ ಆಂದೋಲನದಲ್ಲಿ ಆತ್ಮನಿರ್ಭರ ಆಗುವ ಎಲ್ಲಾ ಸಾಮರ್ಥ್ಯಗಳಲ್ಲಿ ದೇಶ ಸ್ವಾವಲಂಬನೆಯನ್ನು ಖಾತ್ರಿಪಡಿಸಿತು. ಭಾರತದಲ್ಲೇ ತಯಾರಿಸು ವಲಯದಲ್ಲಿ ವೆಂಟಿಲೇಟರ್ ಗಳು ಮತ್ತು ಕೋವಿಡ್ – 19 ವಿರುದ್ಧ ಹೋರಾಡಲು ವಿಶ್ವದಾದ್ಯಂತ ಕೈಗೊಂಡ ಅತಿದೊಡ್ಡ ಲಸಿಕಾ ಅಭಿಯಾನದ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಿದರು.

 

ಭಾರತದ ವೈದ್ಯಕೀಯ ಆಮ್ಲಜನಕದ ಯಾನವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಭಾರತದ ಆಮ್ಲಜನಕದ ಉತ್ಪಾದನೆ 900 ಮೆಟ್ರಿಕ್ ಟನ್ ಗೆ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದು, ನಂತರ ಈ ವಲಯದಲ್ಲಿ 10 ಪಟ್ಟು ಹೆಚ್ಚು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಆಮ್ಲಜನಕದ ಉತ್ಪಾದನೆ ಮತ್ತು ಸಾಗಣೆ ಕೂಡ ಸ್ವತಃ ಒಂದು ಉದಾಹರಣೆಯಾಗಿದೆ. ಆಮ್ಲಜನಕ ಟ್ಯಾಂಕರ್ ಗಳನ್ನು ಹೊರ ತೆಗೆಯಲಾಯಿತು, ವಿಶೇಷ ಆಕ್ಷಿಜನ್ ಎಕ್ಸ್ ಪ್ರೆಸ್ ಗಳನ್ನು ಓಡಿಸಲಾಯಿತು. ಡಿ.ಆರ್.ಡಿ.ಒ ದ ಮೊದಲ ಆಮ್ಲಜನಕ ಸ್ಥಾವರವನ್ನು ನಿಯೋಜಿಸಲು ತೇಜಸ್ ವಿಮಾನದ ಮೂಲಕ ಆಮ್ಲಜನಕ ಸಂಗ್ರಹ ಕುರಿತಾದ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಯಿತು. ನಂತರ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಯಿತು. ಇದೀಗ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಪಿ.ಎಸ್.ಎ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯಗಳೊಂದಿಗೆ ಸೇರಿ ಕೇಂದ್ರ ಸರ್ಕಾರ 4000 ಹೊಸ ಆಮ್ಲಜನಕ ಸ್ಥಾವರಗಳನ್ನು ನಿರ್ಮಿಸಿದೆ. ಬೌಗೋಳಿಕವಾಗಿ ದೂರವಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ ಒಂದು ಲಕ್ಷ ಆಮ್ಲಜನಕ ಸಾಂದ್ರಕಗಳನ್ನು ಅಳವಡಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.  

 

ಲಸಿಕಾ ಅಭಿಯಾನದಲ್ಲಿ ಸಹಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು. ಈ ಅಭಿಯಾನದಲ್ಲಿ 100 ಕೋಟಿ ಲಸಿಕಾ ಡೋಸ್ ಗಳನ್ನು ಇಷ್ಟರಲ್ಲೇ ತಲುಪುತ್ತೇವೆ. ಭೌಗೋಳಿಕವಾಗಿ ವೈವಿಧ್ಯಮಯವಾದ ದೇಶದಲ್ಲಿ ಪರ್ವತ, ಮರುಭೂಮಿಗಳು, ಕಾಡುಗಳು, ಬಯಲು ಪ್ರದೇಶಗಳನ್ನು ಸಹ ಒಳಗೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಡ್ರೋನ್ ಮೂಲಕ ಪ್ರದೇಶಗಳನ್ನು ತಲುಪಲು, ಲಸಿಕೆ ಸಾಗಿಸಲು ಇತ್ತೀಚಿನ ಪ್ರಯತ್ನಗಳನ್ನು ಉಲ್ಲೇಖಿಸಿದರು. ತೆರಾಯಿ ಪ್ರದೇಶದ ಜನರಿಗೆ ಲಸಿಕೆ ಹಾಕುವಲ್ಲಿ ಸರ್ಕಾರ ನಡೆಸಿದ ಪ್ರಯತ್ನದ ಬಗ್ಗೆ ಅವರು ಗಮನ ಸೆಳೆದರು.

 

“ ಪ್ರತಿಯೊಂದು ರಾಜ್ಯದಲ್ಲಿ ಏಮ್ಸ್ ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು” ಸ್ಥಾಪಿಸುವ ಸರ್ಕಾರದ ಗುರಿಯನ್ನು ಪ್ರಸ್ತಾಪಿಸಿದರು. 6-7 ರಾಜ್ಯಗಳಿಗೆ ಸೀಮಿತವಾಗಿದ್ದ ಏಮ್ಸ್ ಸಂಪರ್ಕ ಜಾಲದೊಂದಿಗೆ ಆರೋಗ್ಯ ರಕ್ಷಣೆಯ ಕೊನೆಯ ಮೈಲಿಗಲ್ಲು ತಲುಪಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಂದು ರಾಜ್ಯದಲ್ಲೂ ಏಮ್ಸ್ ಇರಬೇಕು ಎಂದು ಹೇಳಿದರು. ಆಯುಷ್ಮಾನ್ ಭಾರತ್ ಕಾರ್ಯಕ್ರಮ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು, ಚಿಕಿತ್ಸೆಗಾಗಿ ಕಾಯುವುದನ್ನು ತಪ್ಪಿಸಲು ಸಹಾಯ ಮಾಡಿದೆ ಮತ್ತು ಹೊಸದಾಗಿ ಪ್ರಾರಂಭಿಸಲಾದ ಡಿಜಿಟಲ್ ಅಭಿಯಾನ ಆರೋಗ್ಯ ಕ್ಷೇತ್ರದಲ್ಲಿನ ಐತಿಹಾಸಿಕ ಕೊರತೆಯನ್ನು ಪರಿಹರಿಸುತ್ತದೆ. “ ಪ್ರತಿಯೊಂದು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಗುರಿ ಹೊಂದಲಾಗಿದ್ದು, 170 ಜಿಲ್ಲೆಗಳಲ್ಲಿ ಈಗಾಗಲೇ ಕಾಲೇಜುಗಳನ್ನು ತೆರೆಯಲಾಗಿದೆ “ ಎಂದು ಹೇಳಿದರು.

 

ಕೇಂದ್ರ  ಮತ್ತು ರಾಜ್ಯದ ನಡುವಿನ ಸಮನ್ವಯತೆ ಕುರಿತು ವಿಶ್ಲೇಷಿಸಿದ ಅವರು, ಇದು “ವಿಕಾಸದ ಡಬಲ್ ಎಂಜಿನ್ ” ಸರ್ಕಾರವಾಗಿದೆ. ಲಸಿಕಾ ಅಭಿಯಾನ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮಪರ್ಕವಾಗಿ ಜಾರಿ ಮಾಡಿ ಸಾಧನೆಗಳ ಮೂಲಕ ಜನರ ಜೀವನದಲ್ಲಿ ಪರಿವರ್ತನೆ ತರುತ್ತಿದೆ ಎಂದು ಹೇಳಿದರು.

 

ಶ್ರೀ ಮನ್ಸುಖ್ ಮಾಂಡವಿಯ ಮಾತನಾಡಿ, ಪ್ರಧಾನಮಂತ್ರಿ ಅವರು ಜನಸೇವೆಯಲ್ಲಿ ಎರಡು ದಶಕ ಪೂರ್ಣಗೊಳಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. “ ಪ್ರಧಾನಮಂತ್ರಿ ಅವರು ಎರಡು ದಶಕಗಳ ಅನುಭವವನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿದ್ದು, ಪಾಶ್ಚಿಮಾತ್ಯ ದೇಶಗಳ ಪ್ರಯತ್ನಗಳು ಶೂನ್ಯವಾದ  ಸಂದರ್ಭದಲ್ಲಿ ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಅನುಭವ ಸಹಾಯ ಮಾಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಬಡವರನ್ನಷ್ಟೇ ಅಲ್ಲದೇ ಸಾರ್ವಜನಿಕ ವಲಯದಲ್ಲಿ ಲಾಕ್ ಡೌನ್ ನ ದುಷ್ಪರಿಣಾಮಗಳನ್ನು ತಪ್ಪಿಸಲು ಅನುವು ಮಾಡಿಕೊಟ್ಟಿತು. ಕೋವಿಡ್ – 19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತ ತನ್ನ ವಿಜ್ಞಾನಿಗಳ ಮೇಲೆ ನಂಬಿಕೆ ಇರಿಸಿತು. ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ ವಿಜ್ಞಾನಿಗಳ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿತು. ಆರೋಗ್ಯ ಕ್ಷೇತ್ರದಲ್ಲಿ ಈ ಸಂದರ್ಭದ ಸಾಧನೆ ಕುರಿತು ಕೇಂದ್ರ ಸಚಿವರು ಪ್ರಸ್ತಾಪಿಸಿ, “ರೋಟಾ ವೈರಸ್ ಲಸಿಕೆ 2006 ರಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಭಾರತಕ್ಕೆ 2014 ರಲ್ಲಿ ಬಂತು. ಹೆಪಟೈಟಿಸ್-ಬಿ ಲಸಿಕೆ ಬರಲು 11 ವರ್ಷಗಳು (1986; 1997) ಹಿಡಿದವು. ರೇಬಿಸ್ ಲಸಿಕೆ 1980 ರಲ್ಲಿ ಅಭಿವೃದ್ಧಿಪಡಿಸಿದ್ದು, ಇದು 1999 ರಲ್ಲಿ ಭಾರತಕ್ಕೆ ಬಂತು. ನಾವು ಕೋವಿಡ್ – 19 ಲಸಿಕೆಯನ್ನು ಅಭಿವೃದ್ಧಿಪಡಿಸುವ  ಜತೆಗೆ ವ್ಯಾಪಕ ಲಭ್ಯತೆಯನ್ನು ಸಹ ಖಾತ್ರಿಪಡಿಸಿದೆ” ಎಂದು ಹೇಳಿದರು.

 

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 35 ಪಿ.ಎಸ್.ಎ ಆಮ್ಲಜನಕ ಘಟಕಗಳ ಉದ್ಘಾಟನೆಯೊಂದಿಗೆ 108 ದಿನಗಳಲ್ಲಿ 1191 ಸ್ಥಾವರಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

 

ಈ ಕಾರ್ಯಕ್ರಮ ವೆಬ್ ಕಾಸ್ಟ್ ನಲ್ಲಿ ಪ್ರಸಾರವಾಯಿತು. https://youtu.be/YIDCPZDniNU

 

****

 



(Release ID: 1761878) Visitor Counter : 188


Read this release in: English , Urdu , Hindi