ಸಂಸ್ಕೃತಿ ಸಚಿವಾಲಯ

ಭಾರತೀಯ ಹಾಕಿ; ಮರುಕಳಿಸಿದ ಗತವೈಭವ

Posted On: 29 SEP 2021 11:12AM by PIB Bengaluru

ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಬೇಕೆಂಬ ಕನಸು ನನಸಾಗಲು ಭಾರತೀಯ ಹಾಕಿ ತಂಡ ಸುದೀರ್ಘ 41 ವರ್ಷಗಳನ್ನೇ ತೆಗೆದುಕೊಂಡಿದೆ. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಸಿಹಿಯಾದ ಗೆಲುವು ಸಾಧಿಸಿದಾಗ ಭಾರತದ ಪುರುಷರ ಹಾಕಿ ತಂಡವು ಮತ್ತೆ ಇತಿಹಾಸ ಬರೆಯಿತು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದ ಕಂಚು ಕೇವಲ ಪದಕವಲ್ಲ, ಅದು ಕೋಟ್ಯಂತರ ಭಾರತೀಯರ ಆಶಾವಾದ, ಭರವಸೆ ಮತ್ತು ಕನಸುಗಳ ಸಾಕಾರವಾಗಿದೆ.

ಭಾರತ ವಿಶ್ವ ಹಾಕಿ ರಂಗವನ್ನೇ ಆಳಿದ ಕಾಲವೊಂದಿತ್ತು. ಒಲಿಂಪಿಕ್ಸ್ ನಲ್ಲಿ 8 ಬಾರಿ ಚಿನ್ನದ ಪದಕ ಗೆದ್ದುಕೊಂಡಿದೆ ಭಾರತೀಯ ಹಾಕಿ ತಂಡ. ಇಷ್ಟೆಲ್ಲಾ ಸಮೃದ್ಧ ಹಿನ್ನೆಲೆ ಬೆನ್ನಿಗಿದ್ದರೂ, ಭಾರತೀಯ ಹಾಕಿ ತಂಡ ಕಳೆದ 4 ದಶಕಗಳಲ್ಲಿ ಗೆಲುವಿನ ಖುಷಿ ಹೊಂದಲು ವಿಫಲವಾಗಿತ್ತು. ಧುನಿಕ ಹಾಕಿ ಕ್ರೀಡೆಯಲ್ಲಿ ತನ್ನತನ ಉಳಿಸಿಕೊಳ್ಳುವಲ್ಲಿ ಹಿಂದೆ ಸರಿಯಿತು. ಆಸ್ಟ್ರೋ ಟರ್ಫ್ ಮೈದಾನ ಮತ್ತು ಆಟದ ನಿಯಮಗಳಿಗೆ ತಂದ ಹಿಂದೆಂದೂ ಕಾಣದ ಅಭೂತಪೂರ್ವ ಬದಲಾವಣೆಗಳಿಂದಾಗಿ ಭಾರತೀಯ ಹಾಕಿ ತಂಡದ ಅದೃಷ್ಟ ಕುಸಿಯುವಂತೆ ಮಾಡಿತು. ವಿಶ್ವ ಹಾಕಿ ಸ್ಪರ್ಧೆಗಳಲ್ಲಿ ಹೋರಾಡಲು ಹೆಣಗಾಡುವಂತೆ ಮಾಡಿತು. ಆದರೂ ಭಾರತೀಯ ಹಾಕಿ ತಂಡ ದೂಳಿನಿಂದ  ಮೇಲೆದ್ದು ಪುನರುತ್ಥಾನದ ಹಾದಿಯಲ್ಲಿದೆ. ಮನ್ ಪ್ರೀತ್ ಸಿಂಗ್ ನಾಯಕತ್ವದಲ್ಲಿ, ಭಾರತ ಅಂತಿಮವಾಗಿ ಒಲಿಂಪಿಕ್ಸ್‌ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಐತಿಹಾಸಿಕ ಗೆಲವು ಸಾಧಿಸಿದ ಭಾರತೀಯ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, “ಇದು ನವ ಭಾರತ. ಸಂಪೂರ್ಣ ಆತ್ಮವಿಶ್ವಾಸ ತುಂಬಿರುವ ಭಾರತ. ಇದು ಐತಿಹಾಸಿಕ ದಿನ. ಪ್ರತಿ ಭಾರತೀಯನ ಮನಪಟಲದಲ್ಲಿ ನೆನಪಿನಲ್ಲಿ ಉಳಿಯುವ ದಿನ. ತಾಯ್ನಾಡಿಗೆ ಕಂಚಿನ ಪದಕ ತಂದಿರುವ ಟೀಂ ಇಂಡಿಯಾಕ್ಕೆ ಅಭಿನಂದನೆಗಳು. ನಮ್ಮ ದೇಶದ ಯುವ ಸಮುದಾಯಕ್ಕೆ ಅವರು ಹೊಸ ಆಶಾವಾದ, ಭರವಸೆಗಳನ್ನು ಮೂಡಿಸಿದ್ದಾರೆಎಂದು ಶ್ಲಾಘಿಸಿದರು.

ಹಾಕಿ ತಂಡದ ಎಲ್ಲ ಸದಸ್ಯರು ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರಿಗೆ ತಮ್ಮ ಹಸ್ತಾಕ್ಷರಗಳೊಂದಿಗೆ ಹಾಕಿ ಸ್ಟಿಕ್ ಅನ್ನು ಉಡುಗೊರೆಯಾಗಿ ನೀಡಿದರು.

ಹಾಕಿ ದಾಂಡು, ದೇಶದ ಲಕ್ಷಾಂತರ ಭರವಸೆಯ ಹಾಕಿ ಆಟಗಾರರಿಗೆ ರೆಕ್ಕೆಪುಕ್ಕ ನೀಡಿದ್ದು, ಇದನ್ನು ಪ್ರಧಾನಮಂತ್ರಿ ಸ್ವೀಕರಿಸಿದ ಉಡುಗೊರೆಗಳ ಆನ್‌ಲೈನ್ ಹರಾಜು ಪಟ್ಟಿಗೆ ಸೇರಿಸಲಾಗಿದೆ. ಹಾಕಿ ದಾಂಡನ್ನು ಖರೀದಿಸಲು ಬಯಸುವವರು ಆನ್ ಲೈನ್ ಹರಾಜು ವೆಬ್ ಸೈಟ್ pmmementos.gov.in/ ನಲ್ಲಿ ಭಾಗವಹಿಸಬಹುದು. ಆನ್ ಲೈನ್ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 17ರಿಂದ ಆರಂಭವಾಗಿದ್ದು, ಅಕ್ಟೋಬರ್ 7 ವರೆಗೆ ನಡೆಯಲಿದೆ.

ಹರಾಜು ಪ್ರಕ್ರಿಯೆಯಲ್ಲಿ ಬರುವ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುತ್ತದೆ. ಗಂಗಾ ನದಿ ಸ್ವಚ್ಛತೆ, ಶುದ್ಧೀಕರಣ, ಸಂರಕ್ಷಣೆ ಮತ್ತು ಪುನರುಜ್ಜೀವಕ್ಕಾಗಿ ಹಣವನ್ನು ಬಳಸಲಾಗುತ್ತದೆ.

***



(Release ID: 1759253) Visitor Counter : 205