ಸಂಸ್ಕೃತಿ ಸಚಿವಾಲಯ
azadi ka amrit mahotsav

ಭಾರತ "ಧನ್ಯವಾದ ಸುಹಾಸ್" ಎಂದಾಗ

Posted On: 26 SEP 2021 4:58PM by PIB Bengaluru

1968ರಲ್ಲಿ ಬೇಸಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಪದಾರ್ಪಣೆ ಮಾಡಿದ ಬಳಿಕ ಇದುವರೆಗೂ ಸಾಧ್ಯವಾಗದ ಅಮೋಘ ಸಾಧನೆಯನ್ನು ಸುಹಾಸ್ ಎಲ್ ಯತಿರಾಜ್ ಮಾಡಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಸುಹಾಸ್ ಅವರಿಗೆ ಇಡೀ ದೇಶವೇ ಧನ್ಯವಾದ ಹೇಳಿದ್ದು ಸಹಜ ಮತ್ತು ಸರಿಯಷ್ಟೇ. ಈ ಸಾಧನೆಯನ್ನು ಇತರೆಲ್ಲಾ ಸಾಧನೆಗಳಿಗಿಂತ ವಿಶೇಷವಾಗಿಸಿದ ಒಂದು ಅಂಶವೆಂದರೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಆಡಳಿತ ಅಧಿಕಾರಿಯೊಬ್ಬರು ನೀಡಿದ ಅತ್ಯುತ್ತಮ ಪ್ರದರ್ಶನ ಇದಾಗಿರುವುದು. ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಪದಕ ಗೆದ್ದ ದೇಶದ ಮೊದಲ ಐಎಎಸ್ ಅಧಿಕಾರಿಯಾಗಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಸಿಂಗಲ್ ಎಸ್‌ಎಲ್-4 ವಿಭಾಗದ ಫೈನಲ್‌ನಲ್ಲಿ ಸುಹಾಸ್ ಎಲ್. ಯತಿರಾಜ್‌ ಅವರು ಫ್ರಾನ್ಸ್‌ನ ಲ್ಯೂಕಾಸ್ ಮಜುರ್ ಅವರನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ ಗೆಲ್ಲುವ ಮೂಲಕ ಸುಹಾಸ್ ಮಿಂಚಿನ ಆರಂಭವನ್ನು ಮಾಡಿದರು. ಆದರೆ ಮುಂದಿನ ಎರಡು ಸುತ್ತುಗಳಲ್ಲಿ ಸೋತು ಚಿನ್ನದ ಪದಕದಿಂದ ವಂಚಿತರಾದರು. ಆದರೆ ಪೋಡಿಯಂ ಮೇಲೆ ಬೆಳ್ಳಿ ಪದಕವನ್ನು ಕೈಯಲ್ಲಿ ಹಿಡಿಯುವ ಮೂಲಕ ಅವರು ಇಡೀ ಭಾರತ ಹೆಮ್ಮೆ ಪಡುವಂತೆ ಮಾಡಿದರು.

 

   

ಸುಹಾಸ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, "ಸೇವೆ ಮತ್ತು ಕ್ರೀಡೆಗಳ ಅದ್ಭುತ ಸಂಗಮ! ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್‌ ತಮ್ಮ ಅಸಾಧಾರಣ ಕ್ರೀಡಾ ಪ್ರದರ್ಶನದಿಂದ ನಮ್ಮ ಇಡೀ ದೇಶದ ಗಮನವನ್ನು ಸೆರೆಹಿಡಿದಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ!" ಎಂದಿದ್ದಾರೆ.

ಕರ್ನಾಟಕದ ಶಿವಮೊಗ್ಗದಲ್ಲಿ ಜನಿಸಿದ ವಿಕಲಾಂಗಚೇತನ ಸುಹಾಸ್  ಆರಂಭದಲ್ಲಿ ಐಎಎಸ್ ಅಧಿಕಾರಿಯಾಗಲು ಬಯಸಲಿಲ್ಲ. ಅವರು ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಇದಕ್ಕಾಗಿ  ಅವರ ಕುಟುಂಬದಿಂದ, ವಿಶೇಷವಾಗಿ ಅವರ ತಂದೆಯಿಂದ ಸಾಕಷ್ಟು ಬೆಂಬಲ ಮತ್ತು ಪ್ರೋತ್ಸಾಹವನ್ನು ಪಡೆದರು. ಅವರು 2007ರಲ್ಲಿ ಉತ್ತರ ಪ್ರದೇಶ ಕೇಡರ್‌ನಿಂದ ಐಎಎಸ್ ಅಧಿಕಾರಿಯಾದ ನಂತರ ಹಲವಾರು ವಿಶ್ವದರ್ಜೆಯ ಸ್ಪರ್ಧೆಗಳಲ್ಲಿ ದೇಶಕ್ಕೆ ಅನೇಕ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಮುನ್ನ ಪ್ರಯಾಗ್‌ರಾಜ್‌ ಜಿಲ್ಲಾಧಿಕಾರಿಯಾಗಿ ಮತ್ತು ಈಗ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ತಾವು ನೀಡಿದ ಕೊಡುಗೆಗಳಿಗಾಗಿ ಅವರು ಮೆಚ್ಚುಗೆ ಗಳಿಸಿದ್ದಾರೆ.

ಸುಹಾಸ್ ಅವರು ತಾವು ಇತಿಹಾಸ ನಿರ್ಮಿಸಿದ ತಮ್ಮ ಬ್ಯಾಡ್ಮಿಂಟನ್ ರಾಕೆಟ್ ಅನ್ನು ಅಭಿನಂದನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಕೊಡುಗೆಯಾಗಿ ನೀಡಿದರು. ಪ್ರಧಾನಿಗೆ ದೊರೆತ ಉಡುಗೊರೆಗಳ ಇ-ಹರಾಜು ಸೆಪ್ಟೆಂಬರ್‌ 17ರಿಂದ ಆರಂಭವಾಗಿದ್ದು, ಇದರಲ್ಲಿ ಹರಾಜಿಗಿಡಲಾದ ವಸ್ತುಗಳಲ್ಲಿ ಸುಹಾಸ್‌ ಅವರ ಬ್ಯಾಡ್ಮಿಂಟನ್ ರಾಕೆಟ್ ಸಹ ಇದೆ. ಅಕ್ಟೋಬರ್ 7 ರವರೆಗೆ ಈ ಇ-ಹರಾಜು ಮುಂದುವರಿಯಲಿದೆ.

ನೀವೂ ಸಹ ಸುಹಾಸ್ ಅವರ ಸಾಧನೆಯ ಭಾಗವಾಗಲು ಬಯಸಿದರೆ, ಅವರ ಬ್ಯಾಡ್ಮಿಂಟನ್ ರಾಕೆಟ್‌ಗಾಗಿ ಇ-ಹರಾಜಿನಲ್ಲಿ ನೀವು ಬಿಡ್ ಮಾಡಬಹುದು. ಇ-ಹರಾಜಿನ ವೇಳೆ ಸಂಗ್ರಹವಾದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು. ಸುಹಾಸ್ ಅವರ ರಾಕೆಟ್‌ಗೆ 50 ಲಕ್ಷ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ.

www.pmmementos.gov.inಗೆ ಲಾಗ್‌ ಇನ್‌ ಆಗಿ ಮತ್ತು ಜಿಲ್ಲಾಧಿಕಾರಿ ಸುಹಾಸ್ ಅವರ ಬ್ಯಾಡ್ಮಿಂಟನ್ ರಾಕೆಟ್ ಅನ್ನು ನಿಮ್ಮದಾಗಿಸಿಕೊಳ್ಳಿ.

***


(Release ID: 1758396) Visitor Counter : 269


Read this release in: English , Urdu , Hindi , Bengali