ಪ್ರವಾಸೋದ್ಯಮ ಸಚಿವಾಲಯ
ಹಳೆಯ ಗೋವಾದಲ್ಲಿ ನವೀಕರಿಸಿದ ಹೆಲಿಪ್ಯಾಡ್ ಉದ್ಘಾಟನೆ
Posted On:
20 SEP 2021 5:17PM by PIB Bengaluru
ಹಳೆಯ ಗೋವಾದಲ್ಲಿ ನವೀಕರಿಸಿದ ಹೆಲಿಪ್ಯಾಡ್ ಅನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಈಶಾನ್ಯ ವಲಯದ ಅಭಿವೃದ್ಧಿ ಖಾತೆ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಹಾಗೂ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಇಂದು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಶ್ರೀ ಶ್ರೀಪಾದ್ ನಾಯಕ್ ಮತ್ತು ಗೋವಾದ ಉಪ ಮುಖ್ಯಮಂತ್ರಿ ಶ್ರೀ ಮನೋಹರ್ ಅಜ್‌ಗಾವೋಂಕರ್, ಶಾಸಕರು ಹಾಗೂ ಗೋವಾ ಮತ್ತು ಭಾರತ ಸರಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಅವರು, ಗೋವಾ ಕೇವಲ ರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾತ್ರವಲ್ಲದೆ, ಪ್ರಮುಖ ಅಂತಾರಾಷ್ಟ್ರೀಯ ತಾಣವಾಗಿಯೂ ಹೆಸರುವಾಸಿಯಾಗಿದೆ ಎಂದರು. ಇಸ್ರೇಲ್ ಮಿಲಿಟರಿಯೊಂದಿಗಿನ ತಮ್ಮ ಅನುಭವಗಳನ್ನು ಉಲ್ಲೇಖಿಸಿದ ಸಚಿವರು, ಕಡ್ಡಾಯ ಮಿಲಿಟರಿ ತರಬೇತಿಯ ನಂತರ ಇಸ್ರೇಲ್ ಸೈನಿಕರು ಗೋವಾವನ್ನು ತಮ್ಮ ನೆಚ್ಚಿನ ಪ್ರವಾಸಿ ತಾಣವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗೋವಾದ ನೈಸರ್ಗಿಕ ಸೌಂದರ್ಯ ಮತ್ತು ಇಲ್ಲಿನ ಕೈಗೆಟುಕುವ ದರಗಳಿಗೆ ಅವರು ಮಾರುಹೋಗಿದ್ದಾರೆ ಎಂದು ಉಲ್ಲೇಖಿಸಿದರು. ಪ್ರವಾಸೋದ್ಯಮ ವಲಯವು ಪ್ರಮುಖ ಉದ್ಯೋಗ ಸೃಷ್ಟಿ ಕ್ಷೇತ್ರವಾಗಿದ್ದು, ಗೋವಾದಲ್ಲಿ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸಲು ಮತ್ತು ಆ ಮೂಲಕ ಉದ್ಯೋಗ ಸೃಷ್ಟಿ ಹೆಚ್ಚಿಸಲು ಕೇಂದ್ರ ಸರಕಾರ ಎಲ್ಲಾ ಬೆಂಬಲವನ್ನು ನೀಡುತ್ತಿದೆ ಎಂದು ಸಚಿವರು ಹೇಳಿದರು. ಗೋವಾ ವಿಮೋಚನೆಯ ಅರವತ್ತನೇ ವರ್ಷದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು ಗೋವಾಕ್ಕೆ ಸಾಕಷ್ಟು ಧನಸಹಾಯವನ್ನು ನೀಡಲಿದೆ ಮತ್ತು ಗೋವಾವನ್ನು ಅಂತರರಾಷ್ಟ್ರೀಯ ನಕ್ಷೆಯಲ್ಲಿ ಅಗ್ರ ಪ್ರವಾಸಿ ತಾಣವನ್ನಾಗಿ ಮಾಡುತ್ತದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಕೇಂದ್ರ ಸರಕಾರವು ಸದಾ ಗೋವಾದ ನಾಗರಿಕರ ಬೆಂಬಲಕ್ಕೆ ಇದೆ ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂದೇಶವನ್ನೂ ಸಚಿವರು ಗೋವಾ ಜನತೆಗೆ ತಲುಪಿಸಿದರು. ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಮಾತನಾಡಿ, ಈ ಹೆಲಿಪ್ಯಾಡ್ ಅನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದೆ ಮತ್ತು ಇದನ್ನು ಸರಕಾರಿ ಮತ್ತು ಖಾಸಗಿ ವಲಯದಿಂದ ಉತ್ತಮವಾಗಿ ಬಳಕೆ ಮಾಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವತ್ತ ಸರಕಾರ ಗಮನ ಹರಿಸಿದೆ ಎಂದರು.
ʻಸ್ವದೇಶ್ ದರ್ಶನ ಕರಾವಳಿ ಸರ್ಕ್ಯೂಟ್ ಥೀಮ್ʼನ ಭಾಗವಾಗಿ ಈ ಹೆಲಿಪ್ಯಾಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ʻಸ್ವದೇಶ್ ದರ್ಶನ ಯೋಜನೆʼಯು ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯವು ಪ್ರಾರಂಭಿಸಿದ ಯೋಜನೆಯಾಗಿದೆ. ಈ ಯೋಜನೆಯು ದೇಶದಲ್ಲಿ ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ʻಸ್ವಚ್ಛ ಭಾರತ ಅಭಿಯಾನʼ, ʻಸ್ಕಿಲ್ ಇಂಡಿಯಾʼ, ʻಮೇಕ್ ಇನ್ ಇಂಡಿಯಾʼ ಮುಂತಾದ ಭಾರತ ಸರಕಾರದ ಇತರ ಕಾರ್ಯಕ್ರಮಗಳೊಂದಿಗೆ ಈ ಯೋಜನೆಯನ್ನು ಸಮನ್ವಯಗೊಳಿಸಿ, ಆ ಮೂಲಕ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪ್ರವಾಸೋದ್ಯಮ ವಲಯವನ್ನು ಪ್ರಮುಖ ಚಾಲಕಶಕ್ತಿಯಾಗಿ ಪರಿವರ್ತಿಸುವ ಆಲೋಚನೆಯೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಜೊತೆಗೆ ವಿವಿಧ ವಲಯಗಳೊಂದಿಗೆ ಪ್ರವಾಸೋದ್ಯಮ ವಲಯದ ಸಮನ್ವಯದ ಮೂಲಕ ಈ ವಲಯದ ಗರಿಷ್ಠ ಸಾಮರ್ಥ್ಯವನ್ನು ಸಾಬೀತುಪಡಿಸುವ ಗುರಿ ಹೊಂದಲಾಗಿದೆ.
***
(Release ID: 1756541)
Visitor Counter : 190