ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’- 80 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ (ದಿನಾಂಕ 29.08.2021)
Posted On:
29 AUG 2021 11:36AM by PIB Bengaluru
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇಂದು ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಲ್ಲದೆ ನಮ್ಮ ದೇಶ ಅವರ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿಯೂ ಆಚರಿಸುತ್ತದೆ. ಇಂದು ಮೇಜರ್ ಧ್ಯಾನ್ ಚಂದ್ ಅವರ ಆತ್ಮ ಎಲ್ಲಿಯೇ ಇರಲಿ ಬಹಳ ಪ್ರಸನ್ನವಾಗಿರಬಹುದು ಎಂದು ನಾನು ಆಲೋಚಿಸುತ್ತಿದ್ದೇನೆ. ಏಕೆಂದರೆ ವಿಶ್ವದಲ್ಲಿ ಭಾರತದ ಹಾಕಿಯ ಧ್ವಜವನ್ನು ಹಾರಿಸಿದ್ದು ಧ್ಯಾನ್ ಚಂದ್. ನಾಲ್ಕು ದಶಕಗಳ ನಂತರ ಸುಮಾರು 41 ವರ್ಷಗಳ ನಂತರ ಭಾರತದ ಯುವಜನತೆ ಮಹಿಳಾ ಮತ್ತು ಪುರುಷ ಕ್ರೀಡಾಳುಗಳು ಮತ್ತೆ ಹಾಕಿಗೆ ಜೀವ ತುಂಬಿದ್ದಾರೆ. ಎಷ್ಟೇ ಪದಕಗಳು ದೊರೆತರೂ ಹಾಕಿಯಲ್ಲಿ ಭಾರತಕ್ಕೆ ಪದಕ ದೊರೆಯದಿದ್ದರೆ ದೇಶದ ಜನತೆ ವಿಜಯದ ಆನಂದವನ್ನು ಅನುಭವಿಸಲಾರರು. ಈ ಬಾರಿ ಒಲಿಂಪಿಕ್ ನಲ್ಲಿ ಹಾಕಿಯಲ್ಲಿ ಪದಕ ಲಭಿಸಿದೆ. ನಾಲ್ಕು ದಶಕಗಳ ನಂತರ ಪದಕ ದೊರೆತಿದೆ. ಮೇಜರ್ ಧ್ಯಾನ್ ಚಂದ್ ಅವರ ಮನಸ್ಸಿಗೆ, ಅವರ ಆತ್ಮಕ್ಕೆ, ಅವರು ಎಲ್ಲಿಯೇ ಇರಲಿ ಅವರಿಗೆ ಎಷ್ಟು ಆನಂದವಾಗುತ್ತಿದೆಯೋ ಎಂದು ನೀವು ಊಹಿಸಬಹುದು. ಮೇಜರ್ ಧ್ಯಾನ್ ಚಂದ್ ಅವರ ಸಂಪೂರ್ಣ ಜೀವನ ಕ್ರೀಡೆಗೆ ಸಮರ್ಪಿತವಾಗಿತ್ತು. ಆದ್ದರಿಂದಲೇ ಇಂದು ದೇಶದ ಯುವಜನತೆಯಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡುತ್ತಿದೆ. ತಂದೆ ತಾಯಿಯರಲ್ಲೂ ಮಕ್ಕಳು ಕ್ರೀಡೆಯಲ್ಲಿ ಮುಂದುವರಿಯುತ್ತಿದ್ದಾರೆ ಎಂದರೆ ಸಂತೋಷವಾಗುತ್ತಿದೆ. ಈ ಉತ್ಸಾಹವೇ ಮೇಜರ್ ಧ್ಯಾನ್ ಚಂದ್ ಅವರಿಗೆ ಸಲ್ಲಿಸುವ ದೊಡ್ಡ ಶೃದ್ಧಾಂಜಲಿಯಾಗಿದೆ ಎಂದು ನನಗೆ ಅನ್ನಿಸುತ್ತದೆ.
ಸ್ನೇಹಿತರೆ, ಕ್ರೀಡೆಯ ಬಗ್ಗೆ ಮಾತನಾಡುವಾಗ ಕಣ್ಣ ಮುಂದೆ ಯುವಜನತೆ ಕಾಣಿಸುವುದು ಸಹಜ. ಯುವಜನತೆಯತ್ತ ಗಮನವಿಟ್ಟು ನೋಡಿದಾಗ ಎಂಥ ದೊಡ್ಡ ಬದಲಾವಣೆಯಾಗುತ್ತಿದೆ ಎಂಬುದು ಕಾಣಿಸುತ್ತದೆ. ಯುವಜನತೆಯ ಮನಸ್ಸು ಬದಲಾಗಿದೆ. ಇಂದಿನ ಯುವ ಮನಸ್ಸು ಹಳೆಯ ಅಳಿದು ಹೋಗುತ್ತಿರುವ ಪದ್ಧತಿಗಳನ್ನು ಬಿಟ್ಟು ಹೊಸದನ್ನು ಮಾಡುವ ಬಯಕೆ ಹೊಂದಿದ್ದಾರೆ, ವಿಭಿನ್ನತೆಯನ್ನು ಬಯಸುತ್ತಾರೆ. ಇಂದಿನ ಯುವಜನತೆ ಸಿದ್ಧ ಮಾರ್ಗದಲ್ಲಿ ನಡೆಯಲು ಬಯಸುವುದಿಲ್ಲ. ಅವರು ಹೊಸ ಮಾರ್ಗವನ್ನು ನಿರ್ಮಿಸಬಯಸುತ್ತಾರೆ. ತಿಳಿಯದ ವಿಶ್ವಕ್ಕೆ ಕಾಲಿರಿಸಬಯಸುತ್ತಾರೆ. ಹೊಸ ಲಕ್ಷ್ಯ, ಗುರಿಯೂ ಹೊಸದು, ಮಾರ್ಗವೂ ಹೊಸದು ಬಯಕೆಯೂ ಹೊಸದು. ಒಂದು ಬಾರಿ ಯುವಜನತೆ ಮನಸ್ಸು ಮಾಡಿದರೆ ಜೀವವನ್ನೇ ಮುಡಿಪಾಗಿರಿಸುತ್ತಾರೆ. ಹಗಲಿರುಳು ಶ್ರಮಿಸುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಭಾರತ ತನ್ನ ಬಾಹ್ಯಾಕಾಶ ವಲಯವನ್ನು ತೆರೆದಿಟ್ಟಿದೆ. ನೋಡ ನೋಡುತ್ತಿದ್ದಂತೆ ಈ ಪೀಳಿಗೆ ಆ ಅವಕಾಶವನ್ನು ಬಾಚಿಕೊಳ್ಳುತ್ತಿದೆ. ಇದರ ಲಾಭ ಪಡೆಯಲು ಕಾಲೇಜು ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು, ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕರು ಹುರುಪಿನಿಂದ ಮುಂದೆ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಉಪಗ್ರಹಗಳ ಸಂಖ್ಯೆ ಬಹಳ ಹೆಚ್ಚಲಿದೆ ಎಂದು ನನಗೆ ಖಂಡಿತ ವಿಶ್ವಾಸವಿದೆ. ಇದರಲ್ಲಿ ಕಾಲೇಜುಗಳು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಖಾಸಗಿ ವಿದ್ಯಾರ್ಥಿಗಳು ಕೆಲಸಮಾಡಿದ್ದಾರೆ
ಇದೇ ರೀತಿ ಇಂದು ಎಲ್ಲಿಯೇ ನೋಡಿದರೂ, ಯಾವುದೇ ಕುಟುಂಬವನ್ನು ಗಮನಿಸಿದರೂ, ಅದು ಎಷ್ಟೇ ಅನುಕೂಲಸ್ಥ ಕುಟುಂಬವಾಗಿರಲಿ, ಶಿಕ್ಷಿತ ಕುಟುಂಬವಾಗಿರಲಿ, ಅಲ್ಲಿ ಯುವಜನರೊಂದಿಗೆ ಮಾತಾಡಿದಲ್ಲಿ ಅವರು ಏನೆಂದು ಹೇಳುತ್ತಾರೆ? ನಾನು ಪಾರಂಪರಿಕ ಕುಟುಂಬದ ವೃತ್ತಿಯನ್ನು ಹೊರತುಪಡಿಸಿ ಸ್ಟಾರ್ಟ್ ಅಪ್ ಆರಂಭಿಸುವೆ, ಸ್ಟಾರ್ಟ್ ಅಪ್ ನಲ್ಲಿ ತೊಡಗುವೆ ಎಂದು ಹೇಳುತ್ತಾರೆ. ಅಂದರೆ ರಿಸ್ಕ್ ತೆಗೆದುಕೊಳ್ಳಲು ಅವರ ಮನಸ್ಸು ಹಾತೊರೆಯುತ್ತಿದೆ. ಇಂದು ಸಣ್ಣ ಪುಟ್ಟ ನಗರಗಳಲ್ಲಿ ಕೂಡ ಸ್ಟಾರ್ಟ್ ಅಪ್ ಸಂಸ್ಕೃತಿ ವಿಸ್ತೃತಗೊಳ್ಳುತ್ತಿದೆ. ಅದರಲ್ಲಿ ನಾನು ಉಜ್ವಲ ಭವಿಷ್ಯದ ಸಂಕೇತವನ್ನು ಕಾಣುತ್ತಿದ್ದೇನೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ನಮ್ಮ ದೇಶದಲ್ಲಿ ಆಟಿಕೆಗಳ ಚರ್ಚೆ ನಡೆದಿತ್ತು. ನೋಡ ನೋಡುತ್ತಿದ್ದಂತೆ ನಮ್ಮ ಯುವಕರ ಮನದಲ್ಲಿ ಈ ವಿಚಾರ ಬಂದಿತು, ಅವರು ವಿಶ್ವದಲ್ಲಿ ಭಾರತದ ಆಟಿಕೆಗಳನ್ನು ಹೇಗೆ ಪರಿಚಯಿಸುವುದು ಎಂಬ ಬಗ್ಗೆ ನಿರ್ಧಾರ ಕೈಗೊಂಡರು. ಹಾಗಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ವಿಶ್ವದಲ್ಲಿ ಆಟಿಕೆಗಳಿಗೆ ಬೃಹತ್ ಮಾರುಕಟ್ಟೆಯಿದೆ. 6-7 ಲಕ್ಷ ಕೋಟಿ ರೂಪಾಯಿ ವ್ಯಾಪಾರವಾಗುತ್ತದೆ. ಅದರಲ್ಲಿ ಭಾರತದ ಪಾಲು ಬಹಳ ಕಡಿಮೆ. ಆದರೆ, ಆಟಿಕೆಗಳಳನ್ನು ಹೇಗೆ ತಯಾರಿಸುವುದು, ಆಟಿಕೆಗಳ ವೈವಿಧ್ಯತೆ ಏನಿರಬೇಕು, ಆಟಿಕೆಗಳಲ್ಲಿ ಎಂಥ ತಂತ್ರಜ್ಞಾನವಿರಬೇಕು, ಮಕ್ಕಳ ಮನಃಶಾಸ್ತ್ರದ ಪ್ರಕಾರ ಆಟಿಕೆಗಳು ಹೇಗಿರಬೇಕು ಎಂದು ಆಲೋಚಿಸುತ್ತಿದ್ದಾರೆ. ಇಂದು ನಮ್ಮ ದೇಶದ ಯುವಜನತೆ ಇದರತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ. ಕೊಡುಗೆ ನೀಡಬಯಸುತ್ತಿದ್ದಾರೆ. ಸ್ನೇಹಿತರೆ ಮತ್ತೊಂದು ವಿಷಯ ಮನಸ್ಸಿಗೆ ಮುದವನ್ನು ನೀಡುತ್ತದೆ ಮತ್ತು ವಿಶ್ವಾಸವನ್ನು ಮತ್ತಷ್ಟು ಧೃಡಗೊಳಿಸುತ್ತದೆ. ಅದೇನೆಂದು ನೀವು ಗಮನಿಸಿದ್ದೀರಾ? ಸಾಮಾನ್ಯವಾಗಿ ನಮ್ಮಲ್ಲಿ ಇರಲಿ ಬಿಡು ಎಂಬುದು ಸ್ವಭಾವವಾಗಿತ್ತು, ಸ್ವಭಾವವಾಗಿದೆ. ಆದರೆ ನಮ್ಮ ದೇಶದ ಯುವಮನಸ್ಸು ಈಗ ಸರ್ವಶ್ರೇಷ್ಠತೆಯತ್ತ ತಮ್ಮನ್ನು ಕೇಂದ್ರೀಕರಿಸುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಸರ್ವೋತ್ತಮ ರೀತಿಯಲ್ಲಿ ಸರ್ವೋತ್ತಮ ಸಾಧನೆ ಮಾಡಬಯಸುತ್ತಾರೆ. ಇದು ಕೂಡಾ ರಾಷ್ಟ್ರದ ಬಹು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ.
ಸ್ನೇಹಿತರೆ ಈ ಬಾರಿ ಒಲಿಂಪಿಕ್ ಕೂಡಾ ಬಹುದೊಡ್ಡ ಪ್ರಭಾವವನ್ನು ಬೀರಿದೆ. ಒಲಿಂಪಿಕ್ ಕ್ರೀಡೆ ಮುಗಿದು ಈಗ ಪ್ಯಾರಾಲಿಂಪಿಕ್ ಮುಂದುವರಿದಿದೆ. ಈ ಕ್ರೀಡಾ ವಿಶ್ವದಲ್ಲಿ ದೇಶಕ್ಕೆ ದೊರೆತ ಸಾಧನೆಯ ಪಟ್ಟು ಕಡಿಮೆ ಇರಬಹುದು ಆದರೆ ಭರವಸೆ ತುಂಬುವಲ್ಲಿ ಬಹುದೊಡ್ಡ ಪಾಲಿದೆ. ಇಂದು ಯುವಜನತೆ ಕ್ರೀಡೆಯತ್ತ ಮುಖಮಾಡುವುದಲ್ಲದೆ ಅದರೊಟ್ಟಿಗಿರುವ ಸಂಭಾವ್ಯತೆಗಳತ್ತಲೂ ನೋಡುತ್ತಿದ್ದಾರೆ. ಅದರ ಸಂಪೂರ್ಣ eco system ನ್ನು ಬಹಳಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಅದರ ಸಾಮರ್ಥ್ಯವನ್ನು ಅರಿಯುತ್ತಿದ್ದಾನೆ. ಒಂದಲ್ಲ ಒಂದು ರೀತಿ ಅದರೊಂದಿಗೆ ತನ್ನನ್ನು ತೊಡಗಿಸಿಕೊಳ್ಳಬಯಸುತ್ತಿದ್ದಾರೆ. ಈಗ ಅವರು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ತೊರೆದು ಹೊಸ ಶಿಸ್ತುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನನ್ನ ದೇಶವಾಸಿಗಳೇ, ಎಂಥ Momentum ತಲುಪಿದ್ದೇವೆ ಎಂದರೆ, ಪ್ರತಿ ಕುಟುಂಬದಲ್ಲಿ ಕ್ರೀಡೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನೀವೇ ಹೇಳಿ, ಈ Momentum ತಡೆಯಬಹುದೆ, ಅದು ಉಚಿತವೇ. ಇಲ್ಲ ನೀವು ಕೂಡ ನನ್ನಂತೆಯೇ ಯೋಚಿಸುತ್ತಿರಬೇಕು. ಈಗ ದೇಶದಲ್ಲಿ ಕ್ರೀಡೆ, ಆಟಪಾಟ, ಕ್ರೀಡಾ ಮನೋಭಾವಕ್ಕೆ ತಡೆಯೇ ಇರಬಾರದು ಈ Momentum ಅನ್ನು ಕೌಟುಂಬಿಕ ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ, ರಾಷ್ಟ್ರದ ಜೀವನಶೈಲಿಯಲ್ಲಿ ಶಾಶ್ವತಗೊಳಿಸಬೇಕು - ಶಕ್ತಿಯನ್ನು ತುಂಬಬೇಕಿದೆ, ನಿರಂತರವಾಗಿ ಹೊಸ ಚೈತನ್ಯ ತುಂಬಬೇಕಿದೆ. ಮನೆಯಾಗಲಿ, ಹೊರಗಾಗಲಿ, ಹಳ್ಳಿಯಾಗಲಿ, ನಗರವಾಗಲಿ, ನಮ್ಮ ಆಟದ ಮೈದಾನಗಳು ತುಂಬಿ ತುಳುಕಬೇಕು, ಎಲ್ಲರೂ ಆಡೋಣ - ಎಲ್ಲರೂ ಸಾಧಿಸೋಣ ಮತ್ತು ಕೆಂಪು ಕೋಟೆಯ ವೇದಿಕೆಯಲ್ಲಿ ನಾನು ಹೇಳಿದ್ದು ನಿಮಗೆ ನೆನಪಿದೆಯೇ - "ಸಬ್ಕಾ ಪ್ರಯಾಸ್" - ಹೌದು, ಎಲ್ಲರ ಪ್ರಯತ್ನ. ಎಲ್ಲರ ಪ್ರಯತ್ನದಿಂದಲೇ, ಭಾರತ ಕ್ರೀಡೆಯಲ್ಲಿ ಅರ್ಹ ಎತ್ತರಕ್ಕೇರಲು ಸಾಧ್ಯವಿದೆದೆ. ಮೇಜರ್ ಧ್ಯಾನಚಂದ್ ಅವರಂತಹ ಮಹನೀಯರು ತೋರಿದ ಮಾರ್ಗದಲ್ಲಿ ಮುನ್ನಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ವರ್ಷಗಳ ನಂತರ, ಕುಟುಂಬವಾಗಲಿ, ಸಮಾಜವಾಗಲಿ, ರಾಜ್ಯವಾಗಲಿ, ರಾಷ್ಟ್ರವಾಗಲಿ, ಎಲ್ಲ ಜನತೆ ಒಂದೇ ಮನಸ್ಸಿನಿಂದ ಕ್ರೀಡೆಯತ್ತ ಸಾಗುವ ದೇಶದಲ್ಲಿ ಕಾಲ ಬಂದಿದೆ.
ನನ್ನ ಪ್ರಿಯ ಯುವಕರೇ, ನಾವು ವಿವಿಧ ರೀತಿಯ ಕ್ರೀಡೆಗಳನ್ನು ಕರಗತ ಮಾಡಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಹಳ್ಳಿ-ಹಳ್ಳಿಗಳಲ್ಲಿ ಕ್ರೀಡಾ ಸ್ಪರ್ಧೆಗಳು ನಿರಂತರವಾಗಿ ನಡೆಯಬೇಕು. ಸ್ಪರ್ಧೆಯಿಂದಲೇ ಕ್ರೀಡೆ ವಿಸ್ತರಿಸುತ್ತದೆ, ಅದು ಅಭಿವೃದ್ಧಿಗೊಳ್ಳುತ್ತದೆ, ಆಟಗಾರರು ಕೂಡ ಅದರಿಂದಲೇ ಹೊರಹೊಮ್ಮುತ್ತಾರೆ. ಬನ್ನಿ, ಈ Momentum ಹೆಚ್ಚಿಸಲು ನಾವೆಲ್ಲರೂ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡೋಣ, ಈ ಮೂಲಕ 'ಸಬ್ಕಾ ಪ್ರಯಾಸ್' ಎಂಬ ಮಂತ್ರವನ್ನು ಸಾಧಿಸಿ ತೋರಿಸೋಣ.
ನನ್ನ ಪ್ರಿಯ ದೇಶವಾಸಿಗಳೇ, ನಾಳೆ ಜನ್ಮಾಷ್ಟಮಿಯ ದೊಡ್ಡ ಹಬ್ಬವಿದೆ. ಜನ್ಮಾಷ್ಟಮಿಯ ಈ ಹಬ್ಬ ಭಗವಾನ್ ಶ್ರೀ ಕೃಷ್ಣನ ಜನ್ಮದಿನವಾಗಿದೆ. ತುಂಟ ಕೃಷ್ಣನಿಂದ ಹಿಡಿದು ವಿರಾಟ ರೂಪವನ್ನು ತಾಳುವ ಕೃಷ್ಣನವರೆಗೆ, ಶಾಸ್ತ್ರಗಳ ಜ್ಞಾನವುಳ್ಳ ಕೃಷ್ಣನಿಂದ ಶಸ್ತ್ರಾಸ್ತ್ರಗಳಿಂದ ಸಮರ್ಥನಾದ ಭಗವಂತನ ಎಲ್ಲ ರೂಪಗಳ ಪರಿಚಯ ನಮಗಿದೆ. ಕಲೆಯಿರಲಿ, ಸೌಂದರ್ಯವಿರಲಿ, ಮಾಧುರ್ಯವಾಗಲಿ, ಎಲ್ಲೆಲ್ಲಿಯೂ ಕೃಷ್ಣನಿದ್ದಾನೆ. ಆದರೆ ನಾನು ಏಕೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆಂದರೆ ಜನ್ಮಾಷ್ಟಮಿಗೆ ಕೆಲ ದಿನಗಳ ಹಿಂದೆ, ನಾನು ಅಂತಹ ಆಸಕ್ತಿಕರ ಅನುಭವವನ್ನು ಹೊಂದಿದ್ದೇನೆ, ಹಾಗಾಗಿ ನಾನು ನಿಮಗೆ ಈ ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಈ ತಿಂಗಳ 20 ರಂದು, ಸೋಮನಾಥ ದೇವಾಲಯದ ನಿರ್ಮಾಣ ಕಾರ್ಯವನ್ನು ಲೋಕಾರ್ಪಣೆಗೊಳಿಸಲಾಯಿತು ಎಂಬುದು ನಿಮಗೆ ನೆನಪಿರಬಹುದು,. ಸೋಮನಾಥ ದೇವಸ್ಥಾನದಿಂದ 3-4 ಕಿಲೋಮೀಟರ್ ದೂರದಲ್ಲಿಯೇ ಭಾಲ್ಕ ತೀರ್ಥವಿದೆ, ಈ ಭಾಲ್ಕ ತೀರ್ಥವು ಭೂಮಿಯ ಮೇಲೆ ಶ್ರೀಕೃಷ್ಣನು ಅಂತಿಮ ಕ್ಷಣಗಳನ್ನು ಕಳೆದ ಸ್ಥಳವಾಗಿದೆ. ಒಂದು ರೀತಿಯಲ್ಲಿ, ಈ ಪ್ರಪಂಚದಲ್ಲಿ ಭಗವಂತನ ಲೀಲೆಗಳು ಇಲ್ಲಿ ಮುಕ್ತಾಯಗೊಂಡಿದ್ದವು. ಸೋಮನಾಥ ಟ್ರಸ್ಟ್ ನಿಂದ ಈ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಭಾಲ್ಕ ತೀರ್ಥದ ಮತ್ತು ಅಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ನಾನು ಆಲೋಚಿಸುತ್ತಿರುವಾಗಲೇ ನನ್ನ ದೃಷ್ಟಿ ಒಂದು ಸುಂದರ ಕಲಾ-ಪುಸ್ತಕದತ್ತ ಹರಿಯಿತು. ನನ್ನ ನಿವಾಸದ ಹೊರಗೆ ಯಾರೋ ಈ ಪುಸ್ತಕವನ್ನು ಬಿಟ್ಟು ಹೋಗಿದ್ದರು.. ಅದರಲ್ಲಿ ಶ್ರೀಕೃಷ್ಣನ ಹಲವು ರೂಪಗಳು, ಅನೇಕ ಭವ್ಯ ಚಿತ್ರಗಳು ಇವೆ. ಮೋಹಕ ಮತ್ತು ಸಾಕಷ್ಟು ಅರ್ಥಪೂರ್ಣ ಚಿತ್ರಗಳಿದ್ದವು. ನಾನು ಪುಸ್ತಕದ ಪುಟಗಳನ್ನು ತಿರುಗಿಸಲಾರಂಭಿಸಿದೆ. ನನ್ನ ಕುತೂಹಲ ಮತ್ತಷ್ಟು ಹೆಚ್ಚಿತು. ನಾನು ಈ ಪುಸ್ತಕ ಮತ್ತು ಆ ಎಲ್ಲಾ ಚಿತ್ರಗಳನ್ನು ನೋಡಿದೆ ಮತ್ತು ಅದರ ಮೇಲೆ ನನಗಾಗಿ ಒಂದು ಸಂದೇಶವನ್ನು ಬರೆದಿತ್ತು. ಅಲ್ಲದೆ ನಾನು ಓದಿದಾಗ ಅವರನ್ನು ಭೇಟಿಯಾಗಲೇಬೇಕು ಎಂದು ನಿರ್ಧರಿಸಿದೆ ಈ ಪುಸ್ತಕವನ್ನು ನನ್ನ ನಿವಾಸದ ಹೊರಗೆ ಬಿಟ್ಟು ಹೋದವರನ್ನು ನಾನು ಭೇಟಿಯಾಗಲೇಬೇಕು ಎಂದುಕೊಂಡೆ. ಹಾಗಾಗಿ ನನ್ನ ಕಛೇರಿ ಸಿಬ್ಬಂದಿ ಅವರನ್ನು ಸಂಪರ್ಕಿಸಿತು. ಮರುದಿನವೇ ಅವರನ್ನು ಭೇಟಿಯಾಗಲು ಕರೆಯಲಾಯಿತು ಮತ್ತು ಆ ಕಲಾ ಪುಸ್ತಕವನ್ನು ನೋಡಿ ಶ್ರೀ ಕೃಷ್ಣನ ವಿಭಿನ್ನ ಅವತಾರಗಳನ್ನು ನೋಡಿ ನನ್ನ ಕುತೂಹಲ ಕೆರಳಿತ್ತು. ಇದೇ ಕುತೂಹಲದಿಂದಲೇ ನಾನು ಜದುರಾಣಿ ದಾಸಿ ಅವರೊಂದಿಗೆ ನನ್ನ ಭೇಟಿಯಾಯಿತು. ಅವರು ಅಮೇರಿಕನ್ನರು, ಜನನ ಅಮೇರಿಕದಲ್ಲಾಯಿತು, ಪಾಲನೆ ಪೋಷಣೆ ಅಮೇರಿಕದಲ್ಲಾಯಿತು. ಜದುರಾಣಿ ದಾಸಿ ಅವರು ಇಸ್ಕಾನ್ ನೊಂದಿಗೆ ಕೆಲಸ ಮಾಡುತ್ತಾರೆ. ಹರೆ ಕೃಷ್ಣ ಅಭಿಯಾನಕ್ಕೆ ಸೇರಿದವರಾಗಿದ್ದಾರೆ. ಅವರ ಒಂದು ದೊಡ್ಡ ವೈಶಿಷ್ಟ್ಯತೆಯೆಂದರೆ ಭಕ್ತಿ ಕಲೆಯಲ್ಲಿ ಅವರು ನಿಪುಣರು. ಕೇವಲ ಎರಡು ದಿನಗಳ ನಂತರ, ಸೆಪ್ಟೆಂಬರ್ 1 ರಂದು ಇಸ್ಕಾನ್ ಸಂಸ್ಥಾಪಕರಾದ ಶ್ರೀಲ ಪ್ರಭುಪಾದ ಸ್ವಾಮಿಯವರ 125 ನೇ ಜಯಂತಿಯಿದೆ ಎಂದು ನಿಮಗೆ ಗೊತ್ತೆ. ಜದುರಾಣಿ ದಾಸಿ ಅವರು ಇದೇ ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದರು. ಅಮೆರಿಕದಲ್ಲಿ ಜನಿಸಿದವರು, ಭಾರತೀಯ ಭಾವನೆಗಳಿಂದ ದೂರ ಇದ್ದವರು, ಶ್ರೀಕೃಷ್ಣನ ಸುಂದರ ಚಿತ್ರಗಳನ್ನು ಹೇಗೆ ಬಿಡಿಸುತ್ತಾರೆ ಎಂಬುದು ನನ್ನ ಮುಂದಿರುವ ದೊಡ್ಡ ಪ್ರಶ್ನೆ. ನಾನು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದೆ ಆದರೆ ಅದರ ಒಂದು ಭಾಗವನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ಪಿ.ಎಂ. ಜದುರಾಣಿ ಅವರೆ, ಹರೆ ಕೃಷ್ಣ! ನಾನು ಭಕ್ತಿ ಕಲೆಯ ಬಗ್ಗೆ ಓದಿದ್ದೇನೆ. ಆದರೆ ನಮ್ಮ ಕೇಳುಗರಿಗೆ ಮತ್ತಷ್ಟು ತಿಳಿಸಿಕೊಡಿ. ಇದರತ್ತ ನಿಮ್ಮ ಒಲವು ಮತ್ತು ಆಸಕ್ತಿ ಬಹಳ ಮಹತ್ತರವಾದುದು.
ಜದುರಾಣಿ ಜಿ: ಭಕ್ತಿ ಕಲೆಯಲ್ಲಿ ಒಂದು ವಿಭಾಗವಿದೆ. ಅದು ಮನಸ್ಸು ಅಥವಾ ಕಲ್ಪನೆಯಿಂದಲ್ಲದೇ ಬ್ರಹ್ಮ ಸಂಹಿತೆಯಂತಹ ಪ್ರಾಚೀನ ವೇದ ಗ್ರಂಥಗಳಿಂದ ಬಂದಿರುವುದಾಗಿದೆ ಎಂದು ತಿಳಿಸುತ್ತದೆ. ವೆಂ “ಓಂಕಾರಾಯ ಪತಿತಂ, ಸ್ಕಿಲತಂ ಸಿಕಂದ್”, ಬೃಂದಾವನದ ಗೋಸ್ವಾಮಿಯಾದ ಭಗವಾನ್ ಬ್ರಹ್ಮನಿಂದಲೇ ಉಲ್ಲೇಖಿಸಲ್ಪಟ್ಟಿದ್ದು. “ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನಂದ ವಿಗ್ರಃ” ಆತನು ಕೊಳಲನ್ನು ಹೇಗೆ ಧರಿಸಿದ್ದಾನೆ, ಅವನ ಎಲ್ಲ ಇಂದ್ರಿಯಗಳು ಬೇರೆ ಇಂದ್ರಿಯಕ್ಕೆ ಹೇಗೆ ಸ್ಪಂದಿಸುತ್ತವೆ ಎನ್ನುತ್ತದೆ ಶ್ರೀಮದ್ ಭಾಗವತಮ್ (TCR 9.09): “ಬರ್ಹಾಪಿಂಡ್ ನಟವರವಪುಃ ಕರ್ಣಯೋಃ ಕರ್ಣಿಕಾರಂ” ಅವನು ಕಿವಿಯಲ್ಲಿ ಧರಿಸುವುದು ಕರ್ಣಿಕ ಹೂವು, ವೃಂದಾವನದ ಉದ್ದಗಲಕ್ಕೂ ಅವನ ಪಾದಕಮಲಗಳ ಛಾಯೆಯನ್ನು ಮೂಡಿಸುವನು. ಹಸುವಿನ ಹಿಂಡು ಅವನ ವೈಭವವನ್ನು ಹಾಡಿಹೊಗಳುತ್ತವೆ, ಅವನ ಕೊಳಲನಾದ ಎಲ್ಲಾ ಅದೃಷ್ಟವಂತ ಜೀವಿಗಳ ಹೃದಯವನ್ನು ಮತ್ತು ಮನಸ್ಸನ್ನು ಆಕರ್ಷಿಸುತ್ತದೆ. ಹಾಗಾಗಿ ಎಲ್ಲವೂ ಪ್ರಾಚೀನ ಪುರಾತನ ವೇದ ಗ್ರಂಥಗಳದ್ದಾಗಿದೆ. ಈ ಗ್ರಂಥಗಳ ಶಕ್ತಿ ಅತೀಂದ್ರಿಯ ವ್ಯಕ್ತಿಗಳಿಂದ ಬಂದಿವೆ ಮತ್ತು ಪರಿಶುದ್ಧ ಭಕ್ತರು ಈ ಕಲೆಗಾಗಿ ತಮ್ಮ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ ಆದ್ದರಿಂದ ಇದು ಪರಿವರ್ತನಾರೂಪಿಯಾಗಿದೆ, ಇದು ನನ್ನ ಶಕ್ತಿಯಲ್ಲ.
ಪಿ ಎಂ. : ಜದುರಾಣಿಯವರೆ ನಿಮಗೆ ಕೆಲವು ವಿವಿಧ ಪ್ರಶ್ನೆಗಳನ್ನು ಕೇಳಬೇಕಿದೆ. 1966 ರಿಂದ ಒಂದು ರೀತಿಯಲ್ಲಿ ಮತ್ತು 1976 ರಿಂದ ಭೌತಿಕವಾಗಿ ನೀವು ಭಾರತದೊಂದಿಗೆ ಸುದೀರ್ಘ ನಂಟನ್ನು ಹೊಂದಿದ್ದೀರಿ. ನಿಮಗೆ ಭಾರತದ ಬಗ್ಗೆ ಏನನ್ನಿಸುತ್ತದೆ ಎಂದು ಹೇಳುತ್ತೀರಾ.
ಜದುರಾಣಿ: ಪ್ರಧಾನಮಂತ್ರಿಗಳೇ ಭಾರತವೇ ನನಗೆ ಸರ್ವಸ್ವ. ಭಾರತ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬಹಳ ಸಾಧನೆಗೈದಿದೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಗಳಲ್ಲಿ, ಐ ಫೋನ್ ಮತ್ತು ಬೃಹತ್ ಕಟ್ಟಡಗಳ ವಿಷಯದಲ್ಲಿ ಹಾಗೂ ಹಲವಾರು ಸೌಲಭ್ಯಗಳ ವಿಷಯಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಕೆಲ ದಿನಗಳ ಹಿಂದೆ ಬಹುಶಃ ಸನ್ಮಾನ್ಯ ರಾಷ್ಟ್ರಪತಿಗಳ ಬಳಿಯೂ ಪ್ರಸ್ತಾಪಿಸಿದ್ದೆ. ಆದರೆ ಇದೆಲ್ಲ ಭಾರತದ ನಿಜವಾದ ವೈಭವವಲ್ಲ. ಅವತಾರ ಪುರುಷ ಶ್ರೀಕೃಷ್ಣ ಈ ಭೂಮಿಯ ಮೇಲೆ ಜನಿಸಿದ್ದ ಎಂಬುದು ನಿಜವಾದ ವೈಭವದ ವಿಷಯ ಮತ್ತು ಎಲ್ಲ ಅವತಾರಗಳು ಇಲ್ಲಿಯೇ ಜನ್ಮತಾಳಿದ್ದವು. ಭಗವಂತ ಶಿವ, ಭಗವಂತ ರಾಮ ಇಲ್ಲಿಯೇ ಅವತರಿಸಿದ್ದು. ಎಲ್ಲ ಪವಿತ್ರ ನದಿಗಳೂ ಇಲ್ಲಿವೆ. ವೈಷ್ಣವ ಸಂಸ್ಕೃತಿಯ ಎಲ್ಲ ಪವಿತ್ರ ಕ್ಷೇತ್ರಗಳೂ ಇಲ್ಲಿಯೇ ಇವೆ. ಹಾಗಾಗಿ ಭಾರತ ಅದರಲ್ಲೂ ವಿಶೇಷವಾಗಿ ವೃಂದಾವನ ವಿಶ್ವದಲ್ಲೇ ಅತ್ಯಂತ ಪ್ರಮುಖ ತಾಣವಾಗಿದೆ. ವೈಕುಂಠದ ಗ್ರಹಗಳಿಗೆಲ್ಲ ವೃಂದಾವನ ಮೂಲವಾಗಿದೆ. ದ್ವಾರಕೆಯ ಮೂಲ, ಸಂಪೂರ್ಣ ಭೌತ ಜಗತ್ತಿಗೆ ಮೂಲವಾಗಿದೆ. ಆದ್ದರಿಂದ ನನಗೆ ಭಾರತ ಎಂದರೆ ಒಲವು.
ಪಿ ಎಂ: ಧನ್ಯವಾದ ಜದುರಾಣಿಯವರೆ. ಹರೇ ಕೃಷ್ಣ
ಸ್ನೇಹಿತರೆ, ಇಂದು ವಿಶ್ವಾದ್ಯಂತ ಜನರು ಭಾರತದ ಆಧ್ಯಾತ್ಮ ಮತ್ತು ಭಾರತ ದರ್ಶನದ ಬಗ್ಗೆ ಯೋಚಿಸುತ್ತಿರಬೇಕಾದರೆ ನಮ್ಮ ಮಹಾನ್ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಭೂತಕಾಲವನ್ನು ಬಿಡಬೇಕು ಆದರೆ ಕಾಲಾತೀತವಾದುದನ್ನು ಮುಂದಕ್ಕೆ ಕೊಂಡೊಯ್ಯಬೇಕಾಗುತ್ತದೆ. ನಾವು ಹಬ್ಬಗಳನ್ನು ಆಚರಿಸೋಣ ಆದರೆ ಅದರಲ್ಲಡಗಿದ ವೈಜ್ಞಾನಿಕ ಅಂಶವನ್ನು ತಿಳಿಯೋಣ. ಅದರಲ್ಲಡಗಿದ ಅರ್ಥವನ್ನೂ ಅರಿಯೋಣ. ಇಷ್ಟೇ ಅಲ್ಲದೆ ಪ್ರತಿ ಹಬ್ಬದಲ್ಲೂ ಒಂದಲ್ಲ ಒಂದು ಸಂದೇಶವಿರುತ್ತದೆ. ಒಂದಲ್ಲ ಒಂದು ಸಂಸ್ಕಾರವಿರುತ್ತದೆ. ಇದನ್ನು ಅರಿಯಬೇಕು, ಅನುಭವಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಂಪರೆ ರೂಪದಲ್ಲಿ ಕೊಂಡೊಯ್ಯಬೇಕು. ದೇಶಬಾಂಧವರಿಗೆ ಮತ್ತೊಮ್ಮೆ ಜನ್ಮಾಷ್ಟಮಿಯ ಅನಂತ ಶುಭಾಷಯಗಳನ್ನು ಕೋರುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ಈ ಕೊರೊನಾ ಕಾಲಘಟ್ಟದಲ್ಲಿ ನಾನು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದರಲ್ಲಿ ಬಹುಶಃ ಕೊರತೆಯಿದೆ ಎನ್ನಿಸುತ್ತದೆ. ಸ್ವಚ್ಛತಾ ಆಂದೋಲನವನ್ನು ಎಳ್ಳಷ್ಟೂ ಕಡೆಗಣಿಸಬಾರದು ಎಂದು ನನಗೂ ಅನ್ನಿಸುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರ ಪ್ರಯತ್ನದಿಂದ ಹೇಗೆ ಎಲ್ಲರ ಏಳ್ಗೆಯಾಗುತ್ತದೆ ಎಂಬ ಉದಾಹರಣೆಗಳು ನಮಗೆ ಪ್ರೇರಣೆಯನ್ನು ನೀಡುತ್ತವೆ. ಏನನ್ನಾದರೂ ಮಾಡುವ ಹೊಸ ಉತ್ಸಾಹವನ್ನು ತುಂಬುತ್ತದೆ. ಹೊಸ ವಿಶ್ವಾಸವನ್ನು ಹುಟ್ಟುಹಾಕುತ್ತದೆ. ನಮ್ಮ ಸಂಕಲ್ಪಕ್ಕೆ ಜೀವ ತುಂಬುತ್ತದೆ. ಸ್ವಚ್ಛ ಭಾರತದ ಬಗ್ಗೆ ಮಾತಾಡಿದಾಗಲೆಲ್ಲ ಇಂದೋರ್ ಹೆಸರು ಪ್ರಸ್ತಾಪವಾಗೇ ಆಗುತ್ತದೆ ಎಂಬುದು ನಮಗೆಲ್ಲರಿಗೂ ತಿಳದ ವಿಷಯ. ಏಕೆಂದರೆ ಇಂದೋರ್ ಸ್ವಚ್ಛತೆಗೆ ಸಂಬಂಧಿಸಿದಂತೆ ತನ್ನದೇ ಆದ ಹೆಗ್ಗುರುತನ್ನು ಹೊಂದಿದೆ ಮತ್ತು ಇಂದೋರ್ ನಾಗರಿಕರು ಅಭಿನಂದನೆಗೆ ಪಾತ್ರರಾಗಿದ್ದಾರೆ. ಇಂದೋರ್ ಹಲವು ವರ್ಷಗಳಿಂದ ‘ಸ್ವಚ್ಛ ಭಾರತ್ ರಾಂಕಿಂಗ್’ ನಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಈಗ ಇಂದೋರ್ ಜನತೆ ಸ್ವಚ್ಛ ಭಾರತ್ ರಾಂಕಿಂಗ್ ನಿಂದ ಸಂತೋಷಗೊಂಡು ಕೈಕಟ್ಟಿ ಕೂರಲು ಇಷ್ಟಪಡುತ್ತಿಲ್ಲ. ಅವರು ಮುಂದುವರಿಯಬಯಸುತ್ತಾರೆ. ಹೊಸತನ್ನು ಮಾಡಬಯಸುತ್ತಾರೆ. ಅವರು ತಮ್ಮ ಮನದಲ್ಲಿ ಏನನ್ನು ನಿರ್ಧರಿಸಿದ್ದಾರೋ ‘Water Plus City’ ನಿರ್ಮಾಣಕ್ಕೆ ತನುಮನಧನದಿಂದ ತೊಡಗಿಸಿಕೊಂಡಿದ್ದಾರೆ ‘Water Plus City’ ಅಂದರೆ ಸಂಸ್ಕರಿಸದ ಚರಂಡಿ ನೀರನ್ನು ಸಾರ್ವಜನಿಕ ಜಲಮೂಲಗಳಲ್ಲಿ ಸೇರಿಸಲಾಗುವುದಿಲ್ಲ. ಇಲ್ಲಿಯ ನಾಗರಿಕರು ಸ್ವತಃ ಮುಂದುವರಿದು ತಮ್ಮ ಮನೆಯ ನಾಲೆಯ ಸಂಪರ್ಕವನ್ನು ಒಳಚರಂಡಿ ಲೈನ್ ನೊಂದಿಗೆ ಜೋಡಿಸಿದ್ದಾರೆ. ಸ್ವಚ್ಛತಾ ಅಭಿಯಾನವನ್ನೂ ಕೈಗೊಂಡಿದ್ದಾರೆ. ಹಾಗಾಗಿ ಸರಸ್ವತಿ ಮತ್ತು ಕಾನ್ಹಾ ನದಿಯಲ್ಲಿ ಸೇರುವ ಗಲೀಜು ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಸುಧಾರಣೆ ಕಂಡುಬರುತ್ತಿದೆ. ಇಂದು ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಸ್ವಚ್ಛ ಭಾರತ ಅಭಿಯಾನ ಮಂಕಾಗದಂತೆ ನೋಡಿಕೊಳ್ಳಬೇಕು.ನಮ್ಮ ದೇಶದಲ್ಲಿ ಹೆಚ್ಚೆಚ್ಚು ನಗರಗಳು ‘Water Plus City’ ಆದಷ್ಟೂ ಸ್ವಚ್ಛತೆಯೂ ಹೆಚ್ಚುತ್ತದೆ. ನಮ್ಮ ನದಿಗಳು ಸ್ವಚ್ಛವಾಗಿರುತ್ತವೆ. ನೀರು ಉಳಿತಾಯ ಮಾಡುವ ಒಂದು ಮಾನವೀಯ ಜವಾಬ್ದಾರಿಯನ್ನು ನಿಭಾಯಿಸುವ ಸಂಸ್ಕೃತಿಯೂ ಹೆಚ್ಚುತ್ತದೆ.
ಸ್ನೇಹಿತರೇ, ನನ್ನ ಮುಂದೆ ಬಿಹಾರದ ಮಧುಬನಿಯಿಂದ ಉದಾಹರಣೆಯೊಂದಿದೆ. ಮಧುಬನಿಯಲ್ಲಿ ಡಾಕ್ಟರ್ ರಾಜೇಂದ್ರ ಪ್ರಸಾದ್ ಕೃಷಿ ವಿಶ್ವವಿದ್ಯಾಲಯ ಮತ್ತು ಅಲ್ಲಿನ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರ ಒಗ್ಗೂಡಿ ಒಂದು ಬಹಳ ಉತ್ತಮ ಪ್ರಯತ್ನ ಮಾಡಿದೆ. ರೈತರಿಗೆ ಇದರಿಂದ ಪ್ರಯೋಜನವಾಗುತ್ತಿರುವುದು ಮಾತ್ರವಲ್ಲ ಇದರಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಹೊಸ ಬಲ ಬರುತ್ತಿದೆ. ವಿಶ್ವ ವಿದ್ಯಾಲಯದ ಈ ಉಪಕ್ರಮದ ಹೆಸರು - “ಸುಖೇತ್ ಮಾದರಿ” ಎಂದು. ಹಳ್ಳಿಗಳಲ್ಲಿ ಮಾಲಿನ್ಯ ಕಡಿಮೆ ಮಾಡುವುದು ಸುಖೇತ್ ಮಾದರಿಯ ಉದ್ದೇಶವಾಗಿದೆ. ಈ ಮಾದರಿಯ ಅಡಿಯಲ್ಲಿ ಹಳ್ಳಿಗಳಲ್ಲಿ ರೈತರಿಂದ ಗೊಬ್ಬರ ಮತ್ತು ಹೊಲಗಳಿಂದ–ಮನೆಗಳಿಂದಹೊರಬರುವ ಇತರ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅವುಗಳ ಬದಲಿಗೆ ಗ್ರಾಮಸ್ಥರಿಗೆ ಅಡುಗೆ ಅನಿಲ ಸಿಲಿಂಡರ್ ಗಾಗಿ ಹಣ ನೀಡಲಾಗುತ್ತದೆ. ಹಳ್ಳಿಯಿಂದ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕಾಗಿ ವರ್ಮಿ ಕಂಪೋಸ್ಟ್ ತಯಾರಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಅಂದರೆ ಸುಖೇತ್ ಮಾದರಿಯ ನಾಲ್ಕು ಪ್ರಯೋಜನಗಳಂತೂ ಕಣ್ಣಿಗೆ ಗೋಚರಿಸುತ್ತಿವೆ. ಒಂದು ಹಳ್ಳಿ ಮಾಲಿನ್ಯ ಮುಕ್ತವಾಗುತ್ತದೆ, ಎರಡನೆಯದು ಹಳ್ಳಿ ಕೊಳಕಿನಿಂದ ಮುಕ್ತವಾಗುತ್ತದೆ, ಮೂರನೆಯದು ಗ್ರಾಮಸ್ಥರಿಗೆ ಅಡುಗೆ ಅನಿಲ ಸಿಲಿಂಡರ್ ಗಾಗಿ ಹಣ ದೊರೆಯುತ್ತದೆ ಮತ್ತು ನಾಲ್ಕನೆಯದು ಗ್ರಾಮದ ರೈತರಿಗೆ ಸಾವಯವ ಗೊಬ್ಬರ ದೊರೆಯುತ್ತದೆ. ಇಂತಹ ಪ್ರಯತ್ನ ನಮ್ಮ ಗ್ರಾಮಗಳ ಶಕ್ತಿಯನ್ನು ಎಷ್ಟು ಹೆಚ್ಚಿಸಬಹುದೆಂದು ಯೋಚಿಸಿ ನೋಡಿ. ಇದೇ ಸ್ವಾವಲಂಬನೆಯ ವಿಷಯ. ಈ ರೀತಿಯ ಪ್ರಯತ್ನವನ್ನು ನೀವಿರುವಲ್ಲಿ ಕೂಡಾ ಮಾಡುವ ಕುರಿತು ಖಂಡಿತವಾಗಿಯೂ ಚಿಂತನೆ ನಡೆಸಬೇಕೆಂದು ದೇಶದ ಪ್ರತಿಯೊಂದು ಪಂಚಾಯಿತ್ ಗೂ ನಾನು ಹೇಳಲು ಬಯಸುತ್ತೇನೆ. ಮತ್ತು ಸ್ನೇಹಿತರೇ, ನಾವು ಯಾವಾಗ ಒಂದು ಗುರಿಯೊಂದಿಗೆ ಸಾಗುತ್ತೇವೋ ಆಗ, ಗುರಿ ಮುಟ್ಟುವುದು ಖಚಿತವಿದ್ದೇ ಇರುತ್ತದೆ.
ನಮ್ಮ ತಮಿಳುನಾಡಿನಲ್ಲಿ ಶಿವಗಂಗಾ ಜಿಲ್ಲೆಯ ಕಾಂಜೀರಂಗಾಲ್ ಪಂಚಾಯಿತ್ ನೋಡಿ. ಈ ಚಿಕ್ಕ ಪಂಚಾಯಿತ್ ಏನು ಮಾಡಿದೆಯೆಂದು ನೋಡಿ, ಇಲ್ಲಿ ನಿಮಗೆ ಕಸದಿಂದ ರಸದ ಮತ್ತೊಂದು ಮಾದರಿ ನೋಡಲು ಸಿಗುತ್ತದೆ. ಇಲ್ಲಿ ಗ್ರಾಮ ಪಂಚಾಯಿತಿಯು ಸ್ಥಳೀಯ ಜನತೆಯೊಂದಿಗೆ ಒಗ್ಗೂಡಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಒಂದು ಸ್ಥಳೀಯ ಯೋಜನೆಯನ್ನು ತಮ್ಮ ಗ್ರಾಮದಲ್ಲಿ ಆರಂಭಿಸಿಬಿಟ್ಟಿದೆ. ಸಂಪೂರ್ಣ ಗ್ರಾಮದಿಂದ ಸಂಗ್ರಹವಾಗುವ ತ್ಯಾಜ್ಯದಿಂದ ವಿದ್ಯುತ್ ತಯಾರಾಗುತ್ತದೆ ಮತ್ತು ಬಾಕಿ ಉಳಿದಿರುವ ಉತ್ಪನ್ನಗಳನ್ನು ಕೀಟನಾಶಕದ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿ ದಿನ ಎರಡು ಟನ್ ತ್ಯಾಜ್ಯದ ವಿಲೇವಾರಿ ಮಾಡುವುದು ಗ್ರಾಮದ ಈ ವಿದ್ಯುತ್ ಸ್ಥಾವರದ ಸಾಮರ್ಥ್ಯವಾಗಿದೆ. ಇದರಿಂದ ಉತ್ಪಾದನೆಯಾಗುವ ವಿದ್ಯುತ್ ಗ್ರಾಮದ ಬೀದಿ ದೀಪಗಳು ಮತ್ತು ಇತರ ಅಗತ್ಯತೆಗಳಿಗೆ ವಿನಿಯೋಗವಾಗುತ್ತಿದೆ. ಇದರಿಂದಾಗಿ ಪಂಚಾಯಿತಿಯ ಹಣ ಉಳಿತಾಯವಾಗುತ್ತಿದ್ದು, ಈ ಹಣವು ಅಭಿವೃದ್ಧಿಯ ಇತರ ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಈಗ ಹೇಳಿ, ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಒಂದು ಚಿಕ್ಕ ಪಂಚಾಯಿತ್ ಎಲ್ಲಾ ದೇಶವಾಸಿಗಳಿಗೆ ಏನನ್ನಾದರೂ ಮಾಡುವ ಪ್ರೇರಣೆ ನೀಡುತ್ತದೆಯೋ ಇಲ್ಲವೋ? ಇವರುಗಳು ನಿಜಕ್ಕೂ ಅದ್ಭುತವನ್ನೇ ಮಾಡಿದ್ದಾರಲ್ಲವೇ?
ನನ್ನ ಪ್ರೀತಿಯ ದೇಶವಾಸಿಗಳೇ,
‘ಮನದ ಮಾತು’ ಈಗ ಭಾರತದ ಗಡಿಯೊಳಗೆ ಮಾತ್ರಾ ಸೀಮಿತವಾಗಿಲ್ಲ. ದೇಶದ ವಿವಿಧ ಮೂಲೆ ಮೂಲೆಗಳಲ್ಲಿ ಕೂಡಾ ‘ಮನದ ಮಾತಿನ’ ಚರ್ಚೆ ನಡೆಯುತ್ತದೆ. ಮತ್ತು ವಿದೇಶಗಳಲ್ಲಿ ನೆಲೆಸಿರುವ ನಮ್ಮ ಭಾರತೀಯ ಸಮುದಾಯದ ಜನರು ಕೂಡಾ ನನಗೆ ಹೊಸ ಹೊಸವಿಷಯಗಳ ಕುರಿತು ಮಾಹಿತಿಯನ್ನು ನೀಡುತ್ತಿರುತ್ತಾರೆ. ವಿದೇಶದಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮಗಳ ಬಗ್ಗೆ ‘ಮನದ ಮಾತಿನಲ್ಲಿ’ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೆ ಕೂಡಾ ಸಂತಸವೆನಿಸುತ್ತದೆ. ಇಂದು ಕೂಡಾ ನಾನು ನಿಮಗೆ ಅಂತಹ ಕೆಲವು ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಸುತ್ತೇನೆ ಆದರೆ ಅದಕ್ಕೂ ಮುನ್ನ ನಿಮಗೆ ಒಂದು ಆಡಿಯೋ ಕೇಳಿಸಲು ಬಯಸುತ್ತೇನೆ. ಗಮನವಿಟ್ಟುಆಲಿಸಿ.
##
[ರೇಡಿಯೋ ಯುನಿಟಿನೈಂಟಿಎಫ್.ಎಂ -2]
ನಮೋನಮಃಸರ್ವೇಭ್ಯಃ. ಮಮ ನಾಮ ಗಂಗಾ. ಭವಂತಃಶ್ರಣ್ವಂತು ರೇಡಿಯೋ - ಯುನಿಟಿ- ನವತಿ-ಎಫ್.ಎಂ. - ‘ಏಕ ಭಾರತಂ ಶ್ರೇಷ್ಠ ಭಾರತಂ. ಅಹಂ ಏಕತಾಮೂರ್ತೇಃ ಮಾರ್ಗದರ್ಶಿಕಾ ಏವಂ ರೇಡಿಯೋ-ಯುನಿಟಿ-ಮಾಧ್ಯಮೇ ಆರ್. ಜೆ. ಅಸ್ಮಿ. ಅದ್ಯ ಸಂಸ್ಕೃತ ದಿನಮ್ ಅಸ್ತಿ. ಸರ್ವೇಭ್ಯಃ ಬಹವ್ಯಃ ಶುಭಕಾಮನಃ ಸಂತಿ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಮಹೋದಯಃ‘ ಲೋಹಪುರುಷಃ’ ಇತ್ಯುಚ್ಯತೇ. 2013 –ತಮೇವರ್ಷೇ ಲೋಹಸಂಗ್ರಹಸ್ಯ ಅಭಿಯಾನಮ್ ಪ್ರಾರಂಭಮ್. 134 ಟನ್ ಪರಿಮಿತಸ್ಯ ಲೋಹಸ್ಯ ಗಲನಂ ಕೃತಮ್. ಜಾರ್ಖಂಡಸ್ಯ ಏಕಃ ಕೃಷಕಃ ಮುದ್ಗರಸ್ಯ ದಾನಂ ಕೃತವಾನ್. ಭವಂತಃ ಶೃಣ್ವಂತು ರೇಡಿಯೋ ಯುನಿಟೀ ನವತಿ ಎಫ್. ಎಂ. ‘ಏಕ ಭಾರತಂ ಶ್ರೇಷ್ಠ ಭಾರತಂ’.
[ರೇಡಿಯೋ ಯುನಿಟಿ ನೈಂಟಿ ಎಫ್.ಎಂ -2]
##
ಸ್ನೇಹಿತರೇ, ಭಾಷೆ ನಿಮಗೆ ಅರ್ಥವಾಗಿಯೇ ಇದೆ. ಇದು ರೇಡಿಯೋದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತನಾಡಲಾಗುತ್ತಿದೆ ಮತ್ತು ಮಾತನಾಡುತ್ತಿರುವವರು ಆರ್ ಜೆ ಗಂಗಾ. ಆರ್. ಜೆ. ಗಂಗಾ, ಗುಜರಾತಿನ ರೇಡಿಯೋ ಜಾಕಿಗಳ ಸಮೂಹದ ಓರ್ವ ಸದಸ್ಯೆಯಾಗಿದ್ದಾರೆ. ಅವರಿಗೆ ಇನ್ನೂ ಕೆಲವು ಸಹೋದ್ಯೋಗಿಗಳಿದ್ದಾರೆ, ಆರ್ ಜೆ ನೀಲಮ್, ಆರ್ ಜೆ ಗುರು ಮತ್ತು ಆರ್ ಜೆ ಹೇತಲ್. ಇವರೆಲ್ಲರೂ ಒಗ್ಗೂಡಿ ಗುಜರಾತ್ ನ ಕೇವಡಿಯಾದಲ್ಲಿ ಈಗ ಸಂಸ್ಕೃತ ಭಾಷೆಯ ಗೌರವ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತು ವಿಶ್ವದ ಅತಿ ಎತ್ತರದ ವಿಗ್ರಹ, ನಮ್ಮ ದೇಶದ ಗೌರವವಾದ, ಏಕತಾ ಪ್ರತಿಮೆ (Statue of Unity ) ಸ್ಥಾಪಿತವಾಗಿರುವ ಸ್ಥಳವೇ ಕೇವಡಿಯಾ ಎಂದು ನಿಮಗೆಲ್ಲಾ ತಿಳಿದಿದೆಯಲ್ಲವೇ, ನಾನು ಈಗ ಮಾತನಾಡುತ್ತಿರುವುದು ಆ ಕೇವಡಿಯಾಕುರಿತಾಗಿಯೇ. ಈ ಎಲ್ಲಾ ರೇಡಿಯೋ ಜಾಕಿಗಳು, ಅನೇಕ ಪಾತ್ರಗಳನ್ನು ಜೊತೆ ಜೊತೆಯಾಗಿ ನಿರ್ವಹಿಸುತ್ತಾರೆ. ಇವರು ಮಾರ್ಗದರ್ಶಿಗಳಾಗಿಯೂ ತಮ್ಮ ಸೇವೆ ಸಲ್ಲಿಸುತ್ತಾರೆ ಮತ್ತು ಜೊತೆಯಲ್ಲಿಯೇ Community Radio Initiative, Radio Unity 90 FM, ಇವುಗಳನ್ನು ಕೂಡಾ ನಡೆಸುತ್ತಾರೆ. ಈ ಆರ್ ಜೆ ಗಳು ತಮ್ಮ ಶ್ರೋತೃಗಳೊಂದಿಗೆ ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತಾರೆ, ಅವರುಗಳಿಗೆ ಸಂಸ್ಕೃತದಲ್ಲಿ ಮಾಹಿತಿಯನ್ನು ಒದಗಿಸುತ್ತಾರೆ.
ಸ್ನೇಹಿತರೇ, ನಮ್ಮಲ್ಲಿ ಸಂಸ್ಕೃತ ಕುರಿತು ಹೀಗೆಂದು ಹೇಳಿದ್ದಾರೆ –
ಅಮೃತಮ್ಸಂಸ್ಕೃತಮ್ ಮಿತ್ರ, ಸರಸಮ್ ಸರಳಮ್ ವಚಃ
ಏಕತಾ ಮೂಲಕಮ್ರಾಷ್ಟ್ರೇ, ಜ್ಞಾನ ವಿಜ್ಞಾನ ಪೋಷಕಮ್
ಅಂದರೆ, ನಮ್ಮ ಸಂಸ್ಕೃತ ಭಾಷೆ ಸರಸವೂ ಹೌದು ಸರಳವೂ ಹೌದು.
ಸಂಸ್ಕೃತ ತನ್ನ ವಿಚಾರ, ತನ್ನ ಸಾಹಿತ್ಯದ ಮೂಲಕ ಜ್ಞಾನ ವಿಜ್ಞಾನ ಮತ್ತು ರಾಷ್ಟ್ರದ ಏಕತೆಯನ್ನು ಕೂಡಾ ರಕ್ಷಿಸುತ್ತದೆ, ಅದನ್ನು ಬಲಿಷ್ಠಗೊಳಿಸುತ್ತದೆ. ಸಂಸ್ಕೃತ ಸಾಹಿತ್ಯದಲ್ಲಿ ಮಾನವೀಯತೆ ಮತ್ತು ಜ್ಞಾನದ ಒಂದು ದಿವ್ಯ ದರ್ಶನವಿದ್ದು, ಯಾರನ್ನೇ ಆಗಲಿ ಇದು ಆಕರ್ಷಿಸುತ್ತದೆ. ಇತ್ತೀಚೆಗೆ, ವಿದೇಶದಲ್ಲಿ ಸಂಸ್ಕೃತ ಬೋಧಿಸುವ ಪ್ರೇರಣಾತ್ಮಕ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ನನಗೆ ತಿಳಿಯುವ ಅವಕಾಶ ದೊರೆಯಿತು. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಐರ್ಲೆಂಡ್ ನಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರು ಹಾಗೂ ಶಿಕ್ಷಕರಾದ, ಮಕ್ಕಳಿಗೆ ಸಂಸ್ಕೃತ ಕಲಿಸುತ್ತಿರುವ ಶ್ರೀ ರಟಗರ್ ಕೋರ್ಟನ್ ಹಾಸ್ಟ್. ಇತ್ತ ನಮ್ಮ ಪೂರ್ವದಲ್ಲಿ ಭಾರತ ಮತ್ತು ಥೈಲ್ಯಾಂಡ್ ನಡುವೆ ಸಾಂಸ್ಕೃತಿಕ ಬಾಂಧವ್ಯಗಳ ಬಲವರ್ಧನೆಯಲ್ಲಿ ಸಂಸ್ಕೃತ ಭಾಷೆಯ ಪ್ರಮುಖ ಪಾತ್ರವಿದೆ. ಡಾ. ಚಿರಾಪತ್ ಪ್ರಪಂಡವಿದ್ಯಾ ಮತ್ತು ಡಾ. ಕುಸುಮಾ ರಕ್ಷಾಮಣಿ ಇವರಿಬ್ಬರೂ ಥೈಲ್ಯಾಂಡ್ ನಲ್ಲಿ ಸಂಸ್ಕೃತ ಭಾಷೆಯ ಪ್ರಚಾರ-ಪ್ರಸಾರ ಕಾರ್ಯದಲ್ಲಿ ಗಣನೀಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಥಾಯ್ ಮತ್ತು ಸಂಸ್ಕೃತ ಭಾಷೆಯಲ್ಲಿ ತುಲನಾತ್ಮಕ ಸಾಹಿತ್ಯ ರಚನೆಯನ್ನು ಕೂಡಾ ಮಾಡಿದ್ದಾರೆ. ಅಂತಹ ಮತ್ತೊಬ್ಬ ವ್ಯಕ್ತಿಯೆಂದರೆ ರಷ್ಯಾದ ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಂಸ್ಕೃತ ಬೋಧನೆ ಮಾಡುತ್ತಿರುವ ಪ್ರೊಫೆಸರ್ ಬೋರಿಸ್ ಖಾರಿನ್. ಅವರು ಅನೇಕ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಅನೇಕ ಸಂಸ್ಕೃತ ಭಾಷೆಯ ಪುಸ್ತಕಗಳನ್ನು ರಷ್ಯನ್ ಭಾಷೆಗೆ ಅನುವಾದ ಮಾಡಿದ್ದಾರೆ. ಇದೇ ರೀತಿ ಸಿಡ್ನಿ ಸಂಸ್ಕೃತ ಶಾಲೆಯು (Sydney Sanskrit School) ಆಸ್ಟ್ರೇಲಿಯಾದ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಒಂದೆನಿಸಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯನ್ನು ಕಲಿಸಲಾಗುತ್ತದೆ. ಇಲ್ಲಿ ಶಾಲೆ ಮಕ್ಕಳಿಗಾಗಿ ಸಂಸ್ಕೃತ ವ್ಯಾಕರಣ ಶಿಬಿರ (Sanskrit Grammar Camp), ಸಂಸ್ಕೃತ ನಾಟಕ ಮತ್ತು ಸಂಸ್ಕೃತ ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗುತ್ತದೆ.
ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಆಗಿರುವ ಪ್ರಯತ್ನಗಳಿಂದಾಗಿ, ಸಂಸ್ಕೃತ ಭಾಷೆಯ ಕುರಿತು ಹೊಸದೊಂದು ಅರಿವು ಮೂಡಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಬೇಕಾದ ಸಮಯ ಇದಾಗಿದೆ. ನಮ್ಮ ಪರಂಪರೆಯ ಪಾಲನೆ ಮಾಡುವುದು, ಅವುಗಳನ್ನು ನಿರ್ವಹಿಸುವುದು, ಹೊಸ ಪೀಳಿಗೆಗೆ ನೀಡುವುದು ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ಭಾವೀಪೀಳಿಗೆಗೂ ಇದರ ಮೇಲೆ ಹಕ್ಕಿದೆ. ಈ ಕೆಲಸಗಳಿಗಾಗಿ ಕೂಡಾ ಎಲ್ಲರೂ ಪ್ರಯತ್ನ ಹೆಚ್ಚಿಸಬೇಕಾದ ಸಮಯ ಇದಾಗಿದೆ.
ಸ್ನೇಹಿತರೇ, ಇಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿರುವ ಇಂತಹ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿದ್ದಲ್ಲಿ, ಅಂತಹ ಯಾವುದೇ ಮಾಹಿತಿ ತಮ್ಮ ಬಳಿ ಇದ್ದಲ್ಲಿ, ದಯವಿಟ್ಟು #CelebratingSanskrit ನೊಂದಿಗೆ social media ದಲ್ಲಿ ಅಂತಹ ಸಂಬಂಧಿತ ಮಾಹಿತಿಯನ್ನು ಖಂಡಿತವಾಗಿಯೂ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ‘ವಿಶ್ವಕರ್ಮ ಜಯಂತಿ’ ಕೂಡಾ ಬರಲಿದೆ. ವಿಶ್ವಕರ್ಮ ದೇವರನ್ನು ನಮ್ಮಲ್ಲಿ ವಿಶ್ವದ ಸೃಷ್ಟಿಯ ಶಕ್ತಿಯ ಸಂಕೇತವೆಂದು ಭಾವಿಸಲಾಗುತ್ತದೆ. ಹೊಲಿಗೆ-ಕಸೂತಿಯೇ ಆಗಿರಲಿ, ಸಾಫ್ಟ್ ವೇರ್ ಅಥವಾ ಉಪಗ್ರಹವೇ ಆಗಿರಲಿ, ತಮ್ಮ ನೈಪುಣ್ಯತೆಯಿಂದ ಯಾವುದೇ ವಸ್ತುವನ್ನು ರಚಿಸುತ್ತಾರೋಅವೆಲ್ಲವೂ ಭಗವಾನ್ ವಿಶ್ವಕರ್ಮನಅಭಿವ್ಯಕ್ತಿಯಾಗಿರುತ್ತದೆ. ಈಗ ವಿಶ್ವದಲ್ಲಿನೈಪುಣ್ಯವನ್ನು ಹೊಸದೊಂದು ರೀತಿಯಲ್ಲಿ ಗುರುತಿಸಲಾಗುತ್ತಿದ್ದರೂ, ನಮ್ಮ ಋಷಿಮುನಿಗಳು ಸಾವಿರಾರು ವರ್ಷಗಳಿಂದ ನೈಪುಣ್ಯ ಮತ್ತು ಪ್ರಮಾಣಕ್ಕೆ ಒತ್ತು ನೀಡಿದ್ದಾರೆ. ಅವರು ನೈಪುಣ್ಯವನ್ನು, ಪ್ರತಿಭೆಯನ್ನು, ಕೌಶಲ್ಯವನ್ನುನಂಬಿಕೆಯೊಂದಿಗೆ ಜೋಡಿಸಿ ನಮ್ಮ ಜೀವನದ ತತ್ವದಭಾಗವಾಗಿಸಿದ್ದಾರೆ. ನಮ್ಮ ವೇದಗಳು ಕೂಡಾ ಅನೇಕ ಸ್ತೋತ್ರಗಳನ್ನು ಭಗವಾನ್ ವಿಶ್ವಕರ್ಮನಿಗೆ ಸಮರ್ಪಣೆ ಮಾಡಿವೆ. ಬ್ರಹ್ಮಾಂಡದ ಎಲ್ಲಾ ಸೃಷ್ಟಿಗಳು, ಯಾವುದೇ ಹೊಸ ಮತ್ತು ಮಹಾನ್ ಕೆಲಸವಾಗಿರಲಿ, ನಮ್ಮ ಶಾಸ್ತ್ರಗಳಲ್ಲಿ ಅವುಗಳ ಶ್ರೇಯವನ್ನು ಭಗವಾನ್ ವಿಶ್ವಕರ್ಮನಿಗೆ ನೀಡಲಾಗಿದೆ. ವಿಶ್ವದಲ್ಲಿ ಯಾವುದೇ ಅಭಿವೃದ್ಧಿ ಮತ್ತು ಆವಿಷ್ಕಾರ ನಡೆದಾಗ, ಅದು ನೈಪುಣ್ಯಗಳ ಮೂಲಕವೇ ನಡೆಯುತ್ತದೆ ಎನ್ನುವುದು ಈ ಮಾತಿನ ಸಂಕೇತವಾಗಿದೆ. ಭಗವಾನ್ ವಿಶ್ವಕರ್ಮನ ಜಯಂತಿ ಮತ್ತು ಅವರ ಪೂಜೆಯ ಹಿಂದಿನ ಭಾವ ಇದೇ ಆಗಿದೆ. ಮತ್ತು ನಮ್ಮ ಶಾಸ್ತ್ರಗಳಲ್ಲಿ ಹೀಗೆಂದು ಕೂಡಾ ಹೇಳಲಾಗಿದೆ–
ವಿಶ್ವಸ್ಯ ಕೃತೇ ಯಸ್ಯ ಕರ್ಮವ್ಯಾಪಾರಃ ಸಃ ವಿಶ್ವಕರ್ಮಾ.
ಅಂದರೆ, ಸೃಷ್ಟಿ ಮತ್ತು ಸೃಷ್ಟಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡುವವನು ವಿಶ್ವಕರ್ಮ ಎಂದರ್ಥ. ನಮ್ಮ ಧರ್ಮಗ್ರಂಥಗಳ ದೃಷ್ಟಿಯಲ್ಲಿ ನಮ್ಮ ಸುತ್ತಮುತ್ತ ನಿರ್ಮಾಣ ಮತ್ತು ರಚನೆಯಲ್ಲಿ ತೊಡಗಿಕೊಂಡಿರುವ, ನೈಪುಣ್ಯತೆ ಹೊಂದಿರುವ ನುರಿತ ವ್ಯಕ್ತಿಗಳಿದ್ದಾರೋ, ಅವರೆಲ್ಲರೂ ವಿಶ್ವಕರ್ಮನ ಪರಂಪರೆಯವರು. ಇವರುಗಳಿಲ್ಲದ ಜೀವನವನ್ನು ನಾವು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಯೋಚಿಸಿ ನೋಡಿ, ನಿಮ್ಮ ಮನೆಯಲ್ಲಿ ಏನಾದರೂ ವಿದ್ಯುತ್ ಸಂಬಂಧಿತ ಸಮಸ್ಯೆ ಎದುರಾದರೆ ಮತ್ತು ನಿಮಗೆ ಯಾವೊಬ್ಬ ಎಲೆಕ್ಟ್ರಿಷಿಯನ್ ಕೂಡಾ ಸಿಗದೇ ಇದ್ದರೆ ಏನಾಗುತ್ತದೆ? ನೀವು ಎಷ್ಟು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ನಮ್ಮ ಜೀವನ ಇಂತಹ ಅದೆಷ್ಟೋ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳ ಕಾರಣದಿಂದಾಗಿ ನಡೆಯುತ್ತಿದೆ. ನೀವು ನಿಮ್ಮ ಸುತ್ತ ಮುತ್ತ ಒಮ್ಮೆ ನೋಡಿ, ಕಬ್ಬಿಣದ ಕೆಲಸ ಮಾಡುವವರಿರಲಿ, ಮಣ್ಣಿನಿಂದ ಪಾತ್ರೆ ತಯಾರಿಸುವವರಿರಲಿ, ಮರದ ಸಾಮಾನು ಮಾಡುವವರಿರಲಿ, ವಿದ್ಯುತ್ ಕೆಲಸ ಮಾಡುವವರೇ ಆಗಿರಲಿ, ಮನೆಗೆ ಬಣ್ಣ ಬಳಿಯುವವರೇ ಆಗಿರಲಿ, ಸ್ವಚ್ಛತಾ ಕೆಲಸ ಮಾಡುವವರೇ ಆಗಿರಲಿ, ಅಥವಾ ಮೊಬೈಲ್ –ಲ್ಯಾಪ್ಟಾಪ್ ದುರಸ್ತಿ ಮಾಡುವವರೇಆಗಿರಲಿಇವರೆಲ್ಲರೂ ತಮ್ಮ ನೈಪುಣ್ಯತೆಯಿಂದಲೇ ಜನರಲ್ಲಿ ಹೆಸರುವಾಸಿಯಾಗಿರುತ್ತಾರೆ. ಇವರೆಲ್ಲರೂ ಕೂಡಾ ಆಧುನಿಕ ರೂಪದ ವಿಶ್ವಕರ್ಮರೇ ಆಗಿದ್ದಾರೆ.
ಆದರೆ ಸ್ನೇಹಿತರೇ, ಇಲ್ಲಿ ಮತ್ತೊಂದು ಅಂಶವಿದೆ ಮತ್ತು ಇದರಿಂದ ಕೆಲವೊಮ್ಮೆ ಚಿಂತೆ ಮೂಡುತ್ತದೆ. ಯಾವ ದೇಶದಲ್ಲಿಯ ಯಾವ ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ, ಚಿಂತನೆಯಲ್ಲಿ, ಕೌಶಲ್ಯವನ್ನು, ನೈಪುಣ್ಯತೆ ಹೊಂದಿರುವ ಮಾನವಶಕ್ತಿಯನ್ನು ಭಗವಾನ್ ವಿಶ್ವಕರ್ಮನೊದಿಗೆಜೋಡಿಸಲಾಗುತ್ತದೆಯೋ, ಅಲ್ಲಿ ಪರಿಸ್ಥಿತಿಗಳು ಹೇಗೆ ಬದಲಾಗಿವೆ, ಒಂದು ಕಾಲದಲ್ಲಿ ನಮ್ಮ ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ರಾಷ್ಟ್ರ ಜೀವನದ ಮೇಲೆ ಕೌಶಲ್ಯದ ಅತಿ ಹೆಚ್ಚು ಪ್ರಭಾವವಿತ್ತು. ಆದರೆ, ಗುಲಾಮಗಿರಿಯ ಸುದೀರ್ಘ ಅವಧಿಯಲ್ಲಿ ಕೌಶಲ್ಯಕ್ಕೆ ಗೌರವ ನೀಡುವ ಇಂತಹ ಭಾವನೆ ಕ್ರಮೇಣ ಮರೆತೇ ಹೋಯಿತು. ಕೌಶಲ್ಯಾಧಾರಿತ ಕೆಲಸಗಳನ್ನು ಕಡೆಗಣಿಸಿನೋಡುವಂತಹ ಯೋಚನೆ ಮೂಡಿತು. ಈಗ ನೋಡಿ, ಸಂಪೂರ್ಣ ವಿಶ್ವ ಅತ್ಯಂತ ಕೌಶಲ್ಯ ಅಂದರೆ ನೈಪುಣ್ಯತೆಗೆ ಒತ್ತು ನೀಡುತ್ತಿದೆ. ಭಗವಾನ್ ವಿಶ್ವಕರ್ಮನ ಪೂಜೆ ಕೂಡಾ ಕೇವಲ ಔಪಚಾರಿಕತೆಯಿಂದ ಪೂರ್ಣವಾಗಿಲ್ಲ. ನಾವು ಕೌಶಲ್ಯಕ್ಕೆ ಗೌರವ ನೀಡಬೇಕು, ಕೌಶಲ್ಯ ಪಡೆದುಕೊಳ್ಳಲು ಕಷ್ಟ ಪಡಬೇಕಾಗುತ್ತದೆ. ಕುಶಲತೆ ಪಡೆದುಕೊಂಡಿದ್ದೇವೆಂದು ಹೆಮ್ಮೆ ಪಡಬೇಕು. ನಾವು ಹೊಸದೇನಾದರೂ ಮಾಡಿದರೆ, ಏನಾದರೂ ಆವಿಷ್ಕಾರ ಮಾಡಿದರೆ. ಸಮಾಜದ ಹಿತಕ್ಕಾಗಿ, ಜನರ ಜೀವನ ಸುಗಮಗೊಳಿಸುವುದಕ್ಕಾಗಿ, ಏನನ್ನಾದರೂ ಸೃಷ್ಟಿಸಿದರೆ, ಆಗ ವಿಶ್ವಕರ್ಮನಿಗೆ ನಾವು ಮಾಡುವ ಪೂಜೆ ಸಾರ್ಥಕವಾಗುತ್ತದೆ. ಈಗ ನೈಪುಣ್ಯತೆ ಹೊಂದಿರುವ ಜನರಿಗೆ ವಿಶ್ವದಲ್ಲಿ ಅವಕಾಶಗಳಿಗೆ ಯಾವುದೇ ಕೊರತೆಯಿಲ್ಲ. ಪ್ರಗತಿಯ ಎಷ್ಟೊಂದು ಹಾದಿಗಳು ಇಂದು ನೈಪುಣ್ಯದಿಂದಸಿದ್ಧವಾಗುತ್ತಿವೆ.
ಬನ್ನಿ, ಈ ಬಾರಿ ಭಗವಾನ್ ವಿಶ್ವಕರ್ಮನಪೂಜೆಯಲ್ಲಿಭರವಸೆಯೊಂದಿಗೆ ಆತನ ಸಂದೇಶವನ್ನು ಕೂಡಾ ನಮ್ಮದಾಗಿಸಿಕೊಳ್ಳುವ ಸಂಕಲ್ಪ ಮಾಡೋಣ. ನಾವು ನೈಪುಣ್ಯತೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳೋಣ, ಮತ್ತು ನೈಪುಣ್ಯತೆ ಹೊಂದಿರುವ ವ್ಯಕ್ತಿಗಳನ್ನು, ಅವರು ಯಾವುದೇ ಕೆಲಸ ಮಾಡುತ್ತಿರಲಿ, ನಾವು ಅವರಿಗೆ ಗೌರವ ಕೊಡೋಣ ಎನ್ನುವುದೇ ನಮ್ಮ ಪೂಜೆಯ ಹಿಂದಿನ ಭಾವನೆಯಾಗಿರಲಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇದು ದೇಶಕ್ಕೆ ಸ್ವಾತಂತ್ರ್ಯದ 75 ನೇವರ್ಷವಾಗಿದೆ. ಈ ವರ್ಷವಂತೂ ನಾವು ಪ್ರತಿದಿನವೂ ಒಂದು ಹೊಸ ಸಂಕಲ್ಪ ಮಾಡಬೇಕು, ಹೊಸ ಚಿಂತನೆ ನಮ್ಮಲ್ಲಿ ಮೂಡಬೇಕು ಮತ್ತು ಹೊಸದೇನನ್ನಾದರೂ ಮಾಡಬೇಕೆನ್ನುವ ನಮ್ಮ ಉತ್ಸಾಹವನ್ನು ಹೆಚ್ಚಿಸಬೇಕು. ನಮ್ಮ ಭಾರತ ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರ್ಣಗೊಳಿಸಿದಾಗ, ನಮ್ಮ ಈ ಸಂಕಲ್ಪವೇ ಅದರ ಸಫಲತೆಯ ಅಡಿಪಾಯದಲ್ಲಿ ಗೋಚರಿಸುತ್ತದೆ. ಆದ್ದರಿಂದ, ಈ ಅವಕಾಶ ಕೈಜಾರದಂತೆ ನಾವು ನೋಡಿಕೊಳ್ಳಬೇಕು. ನಾವು ಇದಕ್ಕಾಗಿ ಹೆಚ್ಚು ಹೆಚ್ಚು ಕೊಡುಗೆ ನೀಡಬೇಕು. ಮತ್ತು ಈ ಪ್ರಯತ್ನಗಳ ನಡುವೆ, ಮತ್ತೊಂದು ಅಂಶವನ್ನು ಕೂಡಾ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಔಷಧವೂ ಬೇಕು, ಕಟ್ಟುನಿಟ್ಟಿನ ಎಚ್ಚರವೂ ಬೇಕು. ದೇಶದಲ್ಲಿ 62 ಕೋಟಿಗಿಂತಲೂ ಅಧಿಕ ಮಂದಿಗೆ ಲಸಿಕೆ ಡೋಸ್ ಗಳನ್ನು ನೀಡಿಯಾಗಿದೆ ಆದರೂ ಕೂಡಾ ನಾವು ಜಾಗರೂಕರಾಗಿರಬೇಕು, ಎಚ್ಚರಿಕೆಯಿಂದ ಇರಬೇಕು.
ಅಲ್ಲದೇ, ಎಂದಿನಂತೆಯೇ, ನೀವು ಹೊಸದೇನಾದರೂ ಮಾಡಿದಾಗ, ಹೊಸ ವಿಷಯವೇನಾದರೂ ಯೋಚಿಸಿದಾಗ, ಅದರಲ್ಲಿ ನನ್ನನ್ನು ಕೂಡಾ ಖಂಡಿತವಾಗಿಯೂ ಸೇರಿಸಿಕೊಳ್ಳಿ. ನಾನು ನಿಮ್ಮ ಪತ್ರಗಳು ಮತ್ತು ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ನೀವೆಲ್ಲರೂ ಮುಂಬರುವ ಹಬ್ಬಗಳಿಗಾಗಿ ನಿಮಗೆಲ್ಲರಿಗೂ ಮತ್ತೊಮ್ಮೆ ಶುಭಕಾಮನೆಗಳನ್ನು ಹೇಳುತ್ತಿದ್ದೇನೆ. ಅನೇಕಾನೇಕ ಧನ್ಯವಾದ.
ನಮಸ್ಕಾರ!
***
(Release ID: 1750169)
Visitor Counter : 554
Read this release in:
Tamil
,
Malayalam
,
Telugu
,
Assamese
,
Manipuri
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia