ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

`ಡಿಬಿಟಿ-ಬಿಆರ್‌ಎಸಿʼ ಬೆಂಬಲಿತ ರಾಷ್ಟ್ರದ ಮೊದಲ ಎಂಆರ್‌ಎನ್‌ಎ (mRNA) ಆಧಾರಿತ ಲಸಿಕೆ ಸುರಕ್ಷಿತವೆಂದು ಕಂಡುಬಂದಿದೆ, 2/3ನೇ ಹಂತದ ಪ್ರಯೋಗಕ್ಕೆ ಭಾರತದ ಔಷಧ ಮಹಾನಿಯಂತ್ರಕರಿಂದ(ಡಿಸಿಜಿಐ) ಅನುಮೋದನೆ ಪಡೆದಿದೆ


ʻಮಿಷನ್ ಕೋವಿಡ್ ಸುರಕ್ಷಾʼ ಅಡಿಯಲ್ಲಿ ʻಡಿಬಿಟಿ-ಬಿಆರ್‌ಎಸಿʼ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಭಾರತದ ಮೊದಲ ಕೋವಿಡ್-19 ʻಎಂಆರ್‌ಎನ್ಎʼ ಲಸಿಕೆ ಇದಾಗಿದೆ

Posted On: 24 AUG 2021 3:07PM by PIB Bengaluru

ದೇಶದ ಮೊದಲ ʻಎಂಆರ್‌ಎನ್ಎʼ (mRNA) ಆಧರಿತ ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವ ಪುಣೆ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ʻಜೆನ್ನೋವಾ ಬಯೋಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ʼ, 1ನೇ ಹಂತದ ಅಧ್ಯಯನದ ಮಧ್ಯಂತರ ಚಿಕಿತ್ಸಾತ್ಮಕ ದತ್ತಾಂಶವನ್ನು ʻಕೇಂದ್ರ ಔಷಧ ಪ್ರಮಾಣಿಕರಣ ನಿಯಂತ್ರಣ ಸಂಸ್ಥೆʼ (ಸಿಡಿಎಸ್‌ಸಿಒ) ಹಾಗೂ ಭಾರತ ಸರಕಾರದ ʻರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರʼಕ್ಕೆ (ಎನ್‌ಆರ್‌ಎ) ಸಲ್ಲಿಸಿದೆ.

ʻಲಸಿಕೆ ವಿಷಯ ತಜ್ಞರ ಸಮಿತಿʼಯು (ಎಸ್ಇಸಿ) 1ನೇ ಹಂತದ ಮಧ್ಯಂತರ ದತ್ತಾಂಶವನ್ನು ಪರಿಶೀಲಿಸಿದ್ದು, ʻಎಚ್‌ಜಿಸಿಒ19ʼ(ಲಸಿಕೆ) ಸುರಕ್ಷಿತ, ಸಹಿಷ್ಣುಗುಣ ಮತ್ತು ರೋಗನಿರೋಧ ಶಕ್ತಿ ಸೃಷ್ಟಿಕಾರಿ ಪರಿಣಾಮವನ್ನು ಹೊಂದಿರುವುದನ್ನು ಗಮನಿಸಿದೆ.

ʻಜೆನ್ನೋವಾʼ, ಉದ್ದೇಶಿತ 2ನೇ ಹಂತದ ಮತ್ತು 3ನೇ ಹಂತದ ಅಧ್ಯಯನಕ್ಕೆ "ನಿರೀಕ್ಷಿತ, ಬಹುಕೇಂದ್ರದ, ಯಾದೃಚ್ಛಿಕಗೊಳಿಸಿದ, ಸಕ್ರಿಯ-ನಿಯಂತ್ರಿತ, ವೀಕ್ಷಕ-ಕುರುಡು(ಅಬ್ಸರ್ವರ್‌ ಬ್ಲೈಂಡ್‌)” ಎಂದು ಹೆಸರಿಸಲಾಗಿದೆ. ಎರಡನೇ ಹಂತದ ಅಧ್ಯಯನದ ಬೆನ್ನಲ್ಲೇ, 3ನೇ ಹಂತದ ಅಧ್ಯಯನವು ನಡೆಯಲಿದ್ದು, ಆರೋಗ್ಯದ ವಿಷಯಗಳಲ್ಲಿ ಅಧ್ಯಯನದಲ್ಲಿ ಆರೋಗ್ಯವಂತ ವ್ಯಕ್ತಿಗಳ ಮೇಲೆ ʻಎಚ್‌ಜಿಸಿಒ19ʼ (ಕೋವಿಡ್-19 ಲಸಿಕೆ) ಉಂಟು ಮಾಡಬಹುದಾದ ಸುರಕ್ಷತೆ, ಸಹಿಷ್ಣುತೆ ಮತ್ತು ರೋಗನಿರೋಧಕ ಶಕ್ತಿಯ ಪರಿಣಾಮವನ್ನು ಮೌಲ್ಯಮಾಪನ ಮಾಡಲಾಗುವುದು. ಈ ಅಧ್ಯಯನಕ್ಕೆ ಡಿಸಿಜಿಐ, ಸಿಡಿಎಸ್‌ಸಿಒ ಕಾರ್ಯಾಲಯ ಅನುಮೋದನೆ ನೀಡಿದೆ.

ಭಾರತದಲ್ಲಿ ಈ ಅಧ್ಯಯನವನ್ನು 2ನೇ ಹಂತದಲ್ಲಿ ಸುಮಾರು 10-15 ಸ್ಥಳಗಳಲ್ಲಿ ಮತ್ತು 3ನೇ ಹಂತದಲ್ಲಿ 22-27 ಸ್ಥಳಗಳಲ್ಲಿ ನಡೆಸಲಾಗುತ್ತದೆ. ಈ ಅಧ್ಯಯನಕ್ಕಾಗಿ ʻಡಿಬಿಟಿ-ಐಸಿಎಂಆರ್ʼನ ಚಿಕಿತ್ಸಾತ್ಮಕ ಪ್ರಯೋಗ ಜಾಲ ತಾಣಗಳನ್ನು ಬಳಸಿಕೊಳ್ಳಲು ʻಜೆನ್ನೋವಾʼ ಯೋಜಿಸಿದೆ.

ʻಜೆನ್ನೋವಾʼ ಸಂಸ್ಥೆಯ ʻಎಂಆರ್‌ಎನ್‌ಎʼ ಆಧರಿತ ಕೋವಿಡ್-19 ಲಸಿಕೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು (ಡಿಬಿಟಿ) ʻಐಎನ್‌ಡಿ ಸಿಇಪಿಇʼ ಅಡಿಯಲ್ಲಿ 2020ರ ಜೂನ್‌ನಲ್ಲೇ ಭಾಗಶಃ ಆರ್ಥಿಕ ನೆರವು ಒದಗಿಸಿದೆ. ನಂತರ, ಬಿ.ಐ.ಆರ್.ಎ.ಸಿ(ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ)ಯಿಂದ ಜಾರಿಗೆ ತರಲಾದ ʻಮಿಷನ್ ಕೋವಿಡ್ ಸುರಕ್ಷಾ- ಭಾರತೀಯ ಕೋವಿಡ್-19 ವ್ಯಾಕ್ಸಿನ್ ಅಭಿವೃದ್ಧಿ ಯೋಜನೆʼ ಅಡಿಯಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಬೆಂಬಲ ಒದಿಗಿಸಿದೆ.

ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮತ್ತು ಬಿ.ಐ.ಆರ್.ಎ.ಸಿ ಅಧ್ಯಕ್ಷ ಡಾ. ರೇಣು ಸ್ವರೂಪ್ ಅವರು, "ರಾಷ್ಟ್ರದ ಮೊದಲ ಎಂಆರ್‌ಎನ್ಎ ಆಧರಿತ ಲಸಿಕೆ ಸುರಕ್ಷಿತವಾಗಿದೆ ಮತ್ತು ಭಾರತದ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) 2ನೇ ಹಂತ/3ನೇ ಹಂತದ ಪ್ರಯೋಗಕ್ಕೆ ಅನುಮೋದನೆ ನೀಡಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಇದು ಭಾರತ ಮತ್ತು ಇಡೀ ವಿಶ್ವದ ಪಾಲಿಗೆ ಒಂದು ಪ್ರಮುಖ ಲಸಿಕೆಯಾಗಲಿದೆ ಎಂಬ ವಿಶ್ವಾಸ ನಮಗಿದೆ. ಇದು ನಮ್ಮ ದೇಶೀಯ ಲಸಿಕೆ ಅಭಿವೃದ್ಧಿ ಯೋಜನೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ʻನೋವಲ್‌ ಲಸಿಕೆ ಅಭಿವೃದ್ಧಿಯ ಜಾಗತಿಕ ನಕ್ಷೆʼಯಲ್ಲಿ ಭಾರತಕ್ಕೆ ಸ್ಥಾನ ತಂದು ಕೊಡಲಿದೆ,ʼʼ ಎಂದರು ಹೇಳಿದರು.

ʻಜೆನ್ನೋವಾ ಬಯೋಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ʼನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂಜಯ್ ಸಿಂಗ್ ಅವರು, "1ನೇ ಹಂತದ ಚಿಕಿತ್ಸಾತ್ಮಕ ಪ್ರಯೋಗದಲ್ಲಿ ನಮ್ಮ ʻಎಂಆರ್‌ಎನ್ಎʼ ಆಧರಿತ ಕೋವಿಡ್-19 ಲಸಿಕೆ - ʻಎಚ್ ಜಿಸಿಒ19ʼ ಸುರಕ್ಷತೆ ಖಚಿತಪಟ್ಟ ನಂತರ, 2ನೇ ಹಂತ/3ನೇ ಹಂತದ ಪ್ರಮುಖ ವೈದ್ಯಕೀಯ ಪ್ರಯೋಗವನ್ನು ಪ್ರಾರಂಭಿಸುವತ್ತ ಜೆನ್ನೋವಾ ಗಮನ ನೆಟ್ಟಿದೆ. ಮತ್ತೊಂದೆಡೆ, ಇದರ ಜೊತೆ ಜೊತೆಯಲ್ಲೇ ರಾಷ್ಟ್ರದ ಲಸಿಕೆಯ ಅಗತ್ಯವನ್ನು ಪೂರೈಸಲು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಜೆನ್ನೋವಾ ಹೂಡಿಕೆ ಮಾಡುತ್ತಿದೆ,ʼʼ ಎಂದು ಹೇಳಿದರು.

*********************

ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಬಗ್ಗೆ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಜೈವಿಕ ತಂತ್ರಜ್ಞಾನ ಇಲಾಖೆಯು (ಡಿಬಿಟಿ) ಕೃಷಿ, ಆರೋಗ್ಯ, ಪ್ರಾಣಿ ವಿಜ್ಞಾನ, ಪರಿಸರ ಮತ್ತು ಉದ್ಯಮದಲ್ಲಿ ತನ್ನ ಅಭಿವೃದ್ಧಿ ಮತ್ತು ಅನುಷ್ಠಾನದ ಮೂಲಕ ಭಾರತದಲ್ಲಿ ಜೈವಿಕ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಹಾಗೂ ಅದರ ಸುಧಾರಣೆಗೆ ಬೆಂಬಲಿಸುತ್ತದೆ.

ಬಿ.ಐ.ಆರ್.ಎ.ಸಿ. ಬಗ್ಗೆ

ಲಾಭದಾಯಕವಲ್ಲದ ಸಾರ್ವಜನಿಕ ವಲಯದ ಉದ್ಯಮವಾದ ʻಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿʼಯು (ಬಿ.ಐ.ಆರ್.ಎ.ಸಿ) ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ (ಡಿಬಿಟಿ) ಸ್ಥಾಪಿಸಲ್ಪಟ್ಟಿದೆ. ಇದು ರಾಷ್ಟ್ರದ ಉತ್ಪನ್ನ ಅಭಿವೃದ್ಧಿ ಅಗತ್ಯಗಳಿಗೆ ಸಂಬಂಧಿಸಿದಂತೆ ವ್ಯೂಹಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿಕಸನಶೀಲ ಜೈವಿಕ ತಂತ್ರಜ್ಞಾನ ಉದ್ಯಮವನ್ನು ಉತ್ತೇಜಿಸಲು ಮಧ್ಯಂತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಜೆನ್ನೋವಾ ಬಗ್ಗೆ

ಎಂಕ್ಯೂರ್ ಸಮೂಹ ಸಂಸ್ಥೆಗಳಿಗೆ ಸೇರಿದ ʻಜೆನ್ನೋವಾ ಬಯೋಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ʼ ಕಂಪನಿಯು ಭಾರತದ ಪುಣೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ವಿವಿಧ ಬಗೆಯ ಮಾರಣಾಂತಿಕ ರೋಗಗಳಿಗೆ ಚಿಕಿತ್ಸೆ ನಿಟ್ಟಿನಲ್ಲಿ ಜೈವಿಕ ಚಿಕಿತ್ಸಕಗಳ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ವಾಣಿಜ್ಯೀಕರಣದಲ್ಲಿ ತೊಡಗಿರುವ ಜೈವಿಕ ತಂತ್ರಜ್ಞಾನ ಕಂಪನಿ ಇದಾಗಿದೆ. ಸಂಸ್ಥೆಯ ಬಗ್ಗೆ ಮತ್ತಷ್ಟು ತಿಳಿಯಲು https://gennova.bio ಗೆ ಭೇಟಿ ನೀಡಿ.

***


(Release ID: 1748631) Visitor Counter : 298