ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಹೊಸ ಉದ್ಯಮಗಳು ಸಮಕಾಲೀನ ಭಾರತದಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿವೆ  : ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


ಇಂದು ನವದೆಹಲಿಯಲ್ಲಿ 7 ನೇ ಇಂಡಿಯಾ ಇಂಟರ್‌ನ್ಯಾಷನಲ್ ಎಂಎಸ್‌ಎಂಇ ಟ್ರೇಡ್ ಅಂಡ್ ಇನ್ವೆಸ್ಟ್‌ಮೆಂಟ್ ಎಕ್ಸ್‌ಪೋ ಶೃಂಗಸಭೆಯಲ್ಲಿ ಮುಖ್ಯ ಭಾಷಣವನ್ನು ಮಾಡಿದರು

ಭಾರತವು  5 ಟ್ರಿಲಿಯನ್ ಡಾಲರ್‌ ಆರ್ಥಿಕತೆಯಾಗಲಿರುವುದರಿಂದ ಸಚಿವಾಲಯವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಕ್ಕೆ ತನ್ನ ಕೊಡುಗೆಯನ್ನು 2025 ರ ವೇಳೆಗೆ 50% ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ

Posted On: 19 AUG 2021 5:18PM by PIB Bengaluru

ಕೇಂದ್ರ  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ (ಸ್ವತಂತ್ರ ಹೊಣೆಗಾರಿಕೆ), ಭೂ ವಿಜ್ಞಾನಗಳ ಖಾತೆ ಸಚಿವ (ಸ್ವತಂತ್ರ ಹೊಣೆಗಾರಿಕೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆಗಳು, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇಂದು ಹೊಸ ವ್ಯಾಪಾರ ಉದ್ಯಮಗಳು ವೈಜ್ಞಾನಿಕ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿವೆ ಮತ್ತು  ದೊಡ್ಡ ಮತ್ತು ಸಣ್ಣ ಉದ್ಯಮಗಳು ಸಮಕಾಲೀನ ಭಾರತದಲ್ಲಿ ತಮ್ಮ ಅತ್ಯುತ್ತಮ ಬಳಕೆಯನ್ನು ಅರಿತುಕೊಳ್ಳಲು, ಕೇವಲ ವೈಜ್ಞಾನಿಕ ಅನ್ವಯಗಳು ಮಾತ್ರವಲ್ಲದೆ ವೈಜ್ಞಾನಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವವು ಉದ್ಯಮಿಗಳು ಯಶಸ್ವಿಯಾಗಲು ಅಗತ್ಯವಾಗಿರುತ್ತದೆ ಎಂದು ಹೇಳಿದರು.

2021ರ 7ನೇ ಭಾರತ ಅಂತಾರಾಷ್ಟ್ರೀಯ ಎಂಎಸ್‌ಎಂಇ ಎಕ್ಸ್‌ಪೋ ಶೃಂಗಸಭೆಯಲ್ಲಿ ಮುಖ್ಯ ಭಾಷಣವನ್ನು ನೀಡಿದ ಸಚಿವರು, ಸ್ಪರ್ಧಾತ್ಮಕ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಬೆಂಬಲಿತವಾದ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಭಾರತದ ದೊಡ್ಡ ಕೈಗಾರಿಕೆಗಳಿಗೆ ಅಡಿಪಾಯವಾಗುತ್ತವೆ ಮತ್ತು ವೈಜ್ಞಾನಿಕ ಸಮುದಾಯವು ಯಶಸ್ವಿ ಆರ್ & ಡಿ ಫಲಿತಾಂಶಗಳನ್ನು ಕೈಗಾರಿಕೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವಂತೆ ಕೇಳಿಕೊಂಡರು. ಭವಿಷ್ಯದ ಎಲ್ಲಾ ಉದ್ಯಮಶೀಲತೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಡೆಸಲಾಗುವುದು ಮತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ಮಾರ್ಗಗಳು ಮತ್ತು ಉದ್ಯಮಗಳನ್ನು ಸೇರಿಸುವಂತೆ ಅವರು ಕರೆ ನೀಡಿದರು.

ಡಾ. ಜಿತೇಂದ್ರ ಸಿಂಗ್,  ಭಾರತವು  5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿರುವುದರಿಂದ ಸಚಿವಾಲಯವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಕ್ಕೆ ತನ್ನ ಕೊಡುಗೆಯನ್ನು 2025 ರ ವೇಳೆಗೆ 50% ಕ್ಕೆ ಹೆಚ್ಚಿಸುವ ಗುರಿಯನ್ನು  ಹೊಂದಿರುವುದು  ಅಪಾರ ಸಂತೋಷವನ್ನು ನೀಡುತ್ತಿದೆ ಎಂದು ಹೇಳಿದರು.  ಸುಮಾರು 36.1 ದಶಲಕ್ಷ ಘಟಕಗಳೊಂದಿಗೆ,  ಎಂಎಸ್ಎಂಇ  ಗಳು ಉತ್ಪಾದನಾ ಜಿಡಿಪಿ  ಯ 6.11% ಮತ್ತು ಸೇವಾ ಚಟುವಟಿಕೆಗಳ ಜಿಡಿಪಿಯ 24.63% ರಷ್ಟು ಕೊಡುಗೆ ನೀಡುತ್ತವೆ. ಇದಲ್ಲದೆ, ಇದು ಕೃಷಿಯ ನಂತರದ ಎರಡನೇ ಅತಿದೊಡ್ಡ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ ಏಕೆಂದರೆ ಇದು ಭಾರತದಲ್ಲಿ ಸುಮಾರು 120 ದಶಲಕ್ಷ  ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.

ಎಂಎಸ್‌ಎಂಇಗಳು ಹೆಚ್ಚಿನ ಆರ್ಥಿಕತೆಗಳಲ್ಲಿನ ಒಟ್ಟು ಉದ್ಯಮಗಳ 90% ಕ್ಕಿಂತ ಹೆಚ್ಚು ಇದ್ದು ಮತ್ತು ಹೆಚ್ಚಿನ ಉದ್ಯೋಗ ಬೆಳವಣಿಗೆಯ ದರವನ್ನು ಸೃಷ್ಟಿಸಿವೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.  ಕಡಿಮೆ ಹೂಡಿಕೆಯ ಅಗತ್ಯತೆ, ಕಾರ್ಯಾಚರಣೆಯ ಹೊಂದಾಣಿಕೆ ಮತ್ತು ಸೂಕ್ತವಾದ ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯದೊಂದಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ ಎಂದು ಅವರು ಹೇಳಿದರು.

ಬಿದಿರು ವಲಯದಲ್ಲಿನ ಅನ್ವೇಷಿಸದ  ಅಪಾರ ವ್ಯಾಪಾರದ ಅವಕಾಶಗಳನ್ನು ಉಲ್ಲೇಖಿಸಿ, ಡಾ. ಜಿತೇಂದ್ರ ಸಿಂಗ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನೆಯಲ್ಲಿ ಬೆಳೆದ ಬಿದಿರನ್ನು 100 ವರ್ಷ ಹಳೆಯದಾದ ಭಾರತೀಯ ಅರಣ್ಯ ಕಾಯಿದೆಯ ವ್ಯಾಪ್ತಿಯಿಂದ ವಿನಾಯಿತಿ ನೀಡುವ ಮಹತ್ವದ  ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಇದು ಯುವ ಉದ್ಯಮಿಗಳಿಗೆ ಬಿದಿರು ವಲಯದಲ್ಲಿ ವ್ಯಾಪಾರ ಮಾಡುವ ಅನುಕೂಲತೆಯನ್ನು ತಂದಿತು.  ಬಿದಿರು ಕಡ್ಡಿಗಳು ಮತ್ತು ಅಗರಬತ್ತಿಯ ಆಮದು ಸುಂಕವನ್ನು 10% ರಿಂದ 25% ಕ್ಕೆ ಹೆಚ್ಚಿಸುವ ಮೂಲಕ, ದೇಶೀಯ ಅಗರಬತ್ತಿ ಉತ್ಪಾದನೆಯು ಒಂದು ದೊಡ್ಡ ಉತ್ತೇಜನವನ್ನು ಪಡೆಯಿತು ಏಕೆಂದರೆ ಪ್ರತಿ ವರ್ಷ 5 ರಿಂದ 6 ಸಾವಿರ ಕೋಟಿ ಅಗರಬತ್ತಿಯನ್ನು ಕೊರಿಯಾ, ವಿಯೆಟ್ನಾಂ ಮತ್ತು ಚೀನಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು.  ಸೆಪ್ಟೆಂಬರ್ 2019 ರಿಂದ ಕಚ್ಚಾ ಬತ್ತಿಯ ಆಮದು ಇಲ್ಲವಾಗಿದ್ದು ಸ್ಥಳೀಯ ಬಿದಿರು ಉತ್ಪನ್ನಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

ಸ್ವಯಂ ಉದ್ಯೋಗದ ಹಲವು  ನವೋದ್ಯಮದ   ಮಾರ್ಗಗಳು ಸರ್ಕಾರಿ ಉದ್ಯೋಗಗಳಿಗಿಂತ ಹೆಚ್ಚು ಲಾಭದಾಯಕವಾಗಿದ್ದು, ಚಿಕ್ಕ ಸಂಬಳದ ಅಲ್ಪಾವದಿ ಸರ್ಕಾರಿ ಕೆಲಸಕ್ಕೆ ಬದಲಾಗಿ  ಒಂದು ಸ್ವಯಂ ಉದ್ಯೋಗಿ ನವೋದ್ಯಮದ ಉಪಕ್ರಮವು ತುಲನಾತ್ಮಕವಾಗಿ ಆರಂಭದಿಂದಲೇ ಬಹುಬಗೆಯ ಆದಾಯವನ್ನು ನೀಡುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಪುನರುಚ್ಚರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಸೂಕ್ತ ಬಳಕೆಯ ಮೂಲಕ ಅನೇಕ ಕೃಷಿ ನವೋದ್ಯಮಗಳು  ತಮಗೆ ಮಾತ್ರವಲ್ಲದೆ ತಮ್ಮ ಕ್ಷೇತ್ರದ ಇತರರಿಗೂ  ಲಾಭದಾಯಕ ಜೀವನೋಪಾಯವನ್ನು ಒದಗಿಸುತ್ತಿವೆ ಎಂದು ಸಚಿವರು ಹೇಳಿದರು.  2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಸ್ಪಷ್ಟವಾದ ಕರೆಯನ್ನು ಉಲ್ಲೇಖಿಸಿ, ಡಾ.ಜಿತೇಂದ್ರ ಸಿಂಗ್ ಅವರು ಕೃಷಿ ಮತ್ತು ಸಂಬಂಧಿತ ವಲಯಗಳು ಮತ್ತು ಸಂಶೋಧಕರು ಉತ್ಪಾದನೆಗಿಂತ ಉತ್ಪಾದಕತೆಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದರು.

***


(Release ID: 1747600) Visitor Counter : 227


Read this release in: English , Urdu , Hindi , Tamil