ಉಪರಾಷ್ಟ್ರಪತಿಗಳ ಕಾರ್ಯಾಲಯ
ಮಾನವ ಕುಲ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ವಿನೂತನ ಪರಿಹಾರ ಒದಗಿಸಲು ಮುಂದಾಗುವಂತೆ ವಿಜ್ಞಾನಿಗಳಿಗೆ ಉಪ ರಾಷ್ಟ್ರಪತಿ ಕರೆ
ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಪ್ರಸ್ತುತವಾಗಿರಬೇಕು: ಉಪ ರಾಷ್ಟ್ರಪತಿ
ಕಾಂಪ್ಯೂಟೇಷನಲ್ ಜೀವಶಾಸ್ತ್ರ ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊರಹೊಮ್ಮುತ್ತಿರುವ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಉಪ ರಾಷ್ಟ್ರಪತಿ ಕರೆ
ಯುವ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವ ಹುಟ್ಟುಹಾಕುವಂತೆ ಉಪ ರಾಷ್ಟ್ರಪತಿ ಪ್ರತಿಪಾದನೆ
ಬೆಂಗಳೂರಿನಲ್ಲಿ ಜಲ ಕಾಯಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಕರೆ
‘ಭಾರತೀಯ ಕೃಷಿಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿ’-ವಿಜ್ಞಾನಿಗಳಿಗೆ ಉಪರಾಷ್ಟ್ರಪತಿ
ಬೆಂಗಳೂರಿನ ಜವಾಹರಲಾಲ್ ನೆಹರೂ ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆ.ಎನ್.ಸಿ.ಎ.ಎಸ್.ಆರ್.)ಕ್ಕೆ ಉಪ ರಾಷ್ಟ್ರಪತಿ ಭೇಟಿ
ಹೆಸರಾಂತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಗೆ ಸನ್ಮಾನ, ಅವರು ಯುವ ವಿಜ್ಞಾನಿಗಳಿಗೆ ಪ್ರೇರಣೆ ಎಂದು ಹೇಳಿಕೆ
Posted On:
16 AUG 2021 2:13PM by PIB Bengaluru
ಹವಾಮಾನ ಬದಲಾವಣೆಯಿಂದ ಕೃಷಿ, ಆರೋಗ್ಯ ಮತ್ತು ವೈದ್ಯಕೀಯದವರೆಗೆ ಮಾನವಕುಲ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು ವಿನೂತನ ಪರಿಹಾರಗಳನ್ನು ಶೋಧಿಸುವಂತೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕರೆ ನೀಡಿದ್ದಾರೆ.
ಬೆಂಗಳೂರಿನ ಜವಾಹರಲಾಲ್ ನೆಹರೂ ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್.ಸಿ.ಎ.ಎಸ್.ಆರ್) ದಲ್ಲಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಉತ್ಕೃಷ್ಟತೆಯನ್ನು ಸಾಧಿಸಲು ಮತ್ತು ಜನರ ಜೀವನವನ್ನು ಸುಧಾರಿಸಲು ಸಂಶೋಧನೆಗಾಗಿ ಶ್ರಮಿಸುವಂತೆ ವಿಜ್ಞಾನಿಗಳಿಗೆ ಒತ್ತಾಯಿಸಿದರು. "ವಿಜ್ಞಾನದ ಉದ್ದೇಶ ಜನರ ಜೀವನವನ್ನು ಸಂತೋಷ, ಆರೋಗ್ಯಕರ ಮತ್ತು ಆರಾಮದಾಯಕವಾಗಿ ಮಾಡುವುದಾಗಿದೆ", ಎಂದು ಅವರು ಪುನರುಚ್ಚರಿಸಿದರು.
ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಪ್ರಸ್ತುತವಾಗಬೇಕು ಎಂದು ಒತ್ತಿ ಹೇಳಿದ ಅವರು, ಈ ಸಂದರ್ಭದಲ್ಲಿ, ಟ್ರಾನ್ಸ್ ಲೆಷನಲ್ ಸಂಶೋಧನೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದರು. ಜೆ.ಎನ್.ಸಿ.ಎ.ಎಸ್.ಆರ್ 3೦೦ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಸೃಷ್ಟಿಸಿದೆ ಮತ್ತು ಸ್ಥಳೀಯ ಆವಿಷ್ಕಾರಗಳ ಆಧಾರದ ಮೇಲೆ ಕೆಲವು ನವೋದ್ಯಮಗಳ ಸ್ಥಾಪನೆಯನ್ನೂ ಉತ್ತೇಜಿಸಿದೆ ಎಂದು ಅವರು ಶ್ಲಾಘಿಸಿದರು.
ಜೆ.ಎನ್.ಸಿ.ಎ.ಎಸ್.ಆರ್ ವಿಸ್ತೃತ ಶ್ರೇಣಿಯ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಹೆಸರುವಾಸಿಯಾಗಿದೆ ಎಂದು ಹೇಳಿದ ಅವರು, ಸಂಶ್ಲೇಷಿತ ಜೀವಶಾಸ್ತ್ರ, ಕಂಪ್ಯೂಟೇಶನಲ್ ಜೀವಶಾಸ್ತ್ರ, ಉನ್ನತ ಕಾರ್ಯಕ್ಷಮತೆಯ ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವಂತೆ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಸಲಹೆ ನೀಡಿದರು. ಕೃಷಿಯನ್ನು 'ದೇಶದ ಮೂಲ ಸಂಸ್ಕೃತಿ' ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ವಿಜ್ಞಾನಿಗಳು ಕೃಷಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕೆಂದು ಬಯಸಿದರು.
ಯಾವುದೇ ದೇಶದ ಪ್ರಗತಿ ಮತ್ತು ತಾಂತ್ರಿಕ ಪ್ರಗತಿಗೆ ವಿಜ್ಞಾನವು ಬೆನ್ನೆಲುಬಾಗಿದೆ ಎಂಬುದನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು ಭಾರತದ ಬೃಹತ್ ಜನಸಂಖ್ಯಾ ಪ್ರಯೋಜನವನ್ನು ಉಲ್ಲೇಖಿಸಿ, ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ವಿಶ್ವದರ್ಜೆಯ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಜೆ.ಎನ್.ಸಿ.ಎ.ಎಸ್.ಆರ್. ತನ್ನ ಪರಿಣತಿಯ ಕ್ಷೇತ್ರಗಳಲ್ಲಿ ಉನ್ನತ ಸಂಸ್ಥೆಗಳಲ್ಲಿ ಸ್ಥಾನಗಳಿಸುವ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅತ್ಯುತ್ತಮ ಪ್ರಭಾವ ಬೀರಿದೆ ಎಂದು ಶ್ಲಾಘಿಸಿದ ಅವರು, ದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ಸಂಶೋಧನಾ ಫಲಶ್ರುತಿಗಳನ್ನು ಸುಧಾರಿಸಲು ಇದು ಅಪಾರ ಕೊಡುಗೆ ನೀಡಬಹುದು ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಹೊಸ ಬೋಧನೆ ಮತ್ತು ಕಲಿಕಾ ಕಾರ್ಯತಂತ್ರಗಳನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಿದರು. 'ಇದು ಸರಿಯಾದ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಅವರ ಜ್ಞಾನದ ನೆಲೆಯನ್ನು ಶ್ರೀಮಂತಗೊಳಿಸುತ್ತದೆ ಮತ್ತು ಅವರ ಕೌಶಲ್ಯವನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.
ತಮ್ಮ ಗುರಿಗಳನ್ನು ಸಾಧಿಸಲು ಯಾವುದೇ ಅವಕಾಶವನ್ನು ಕೈಚೆಲ್ಲಬೇಡಿ ಎಂದು ಉಪರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ತಿಳಿಸಿದರು. "ಕಠಿಣ ಪರಿಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ. ನೀವು ಯಾವಾಗಲೂ ಎಲ್ಲೆಗಳನ್ನು ದಾಟಿ ಸಾಧಿಸಲು ಪ್ರಯತ್ನಿಸಬೇಕು ಮತ್ತು ಯಥಾಸ್ಥಿತಿಯ ಬಗ್ಗೆ ತೃಪ್ತರಾಗಬಾರದು ಅಥವಾ ಸಂತೃಪ್ತರಾಗಬಾರದು", ಎಂದು ಅವರು ಸಲಹೆ ನೀಡಿದರು.
ಬೆಂಗಳೂರು ಹೆಚ್ಚಿನ ಸಂಖ್ಯೆಯ ಕೆರೆಗಳಿಂದ ಆಶೀರ್ವದಿಸಲ್ಪಟ್ಟಿದೆ ಎಂದು ಹೇಳಿದ ಶ್ರೀ ನಾಯ್ಡು, ಜನರ ನಿರ್ಲಕ್ಷ್ಯ ಅಥವಾ ಅಕ್ರಮ, ಅತಿಕ್ರಮಣಗಳಿಂದಾಗಿ ಈ ಜಲಕಾಯಗಳಲ್ಲಿ ಅನೇಕವು ಅವನತಿ ಹೊಂದುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ಮತ್ತು ಅದರಾಚೆಗಿನ ಕೆರೆಗಳ ಪುನರುತ್ಥಾನ ಮತ್ತು ಸಂರಕ್ಷಣೆಗೆ ಸಕಲ ಪ್ರಯತ್ನಗಳನ್ನು ಮಾಡಲು ಅವರು ಕರೆ ನೀಡಿದರು.
ಜೆ.ಎನ್.ಸಿ.ಎ.ಎಸ್.ಆರ್ ವಿದ್ಯಾರ್ಥಿಗಳಲ್ಲಿ ಶೇ.40ರಷ್ಟು ಬಾಲಕಿಯರು ಎಂಬ ಅಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, ಇತರ ವೈಜ್ಞಾನಿಕ ಸಂಸ್ಥೆಗಳಲ್ಲಿಯೂ ಇದೇ ರೀತಿಯ ಆರೋಗ್ಯಕರ ಪ್ರವೃತ್ತಿಯನ್ನು ಕಾಣಲು ಬಯಸುವುದಾಗಿ ಹೇಳಿದರು.
ಪ್ರತಿಷ್ಠಿತ ಅಂತಾರಾಷ್ಟ್ರೀಯ ಎನಿ ಪ್ರಶಸ್ತಿ 2020ಕ್ಕೆ ನಾಮನಿರ್ದೇಶನಗೊಂಡಿರುವ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಅಭಿನಂದಿಸಿದ ಅವರು, ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಯುವ ವಿಜ್ಞಾನಿಗಳಿಗೆ ಅವರು ಪ್ರೇರಣೆಯಾಗಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಉನ್ನತ ಶಿಕ್ಷಣ, ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶ್ರೀ ಸಿ.ಎನ್. ಅಶ್ವತ್ಥ ನಾರಾಯಣ, ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಜೆ.ಎನ್.ಸಿ.ಎ.ಎಸ್.ಆರ್ ಅಧ್ಯಕ್ಷ ಪ್ರೊ.ಜಿ.ಯು. ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅವರ ಪೂರ್ಣ ಭಾಷಣದ ಪಠ್ಯ ಈ ಕೆಳಗಿನಂತಿದೆ –
"ಇಂದು ಬೆಳಗ್ಗೆ ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ಮತ್ತು ದೇಶದ ಕೆಲವು ಪ್ರಸಿದ್ಧ ವಿಜ್ಞಾನಿಗಳು ಮತ್ತು ಯುವ ಸಂಶೋಧಕರೊಂದಿಗೆ ಸಂವಹನ ನಡೆಸುತ್ತಿರುವುದು ನನಗೆ ಅತೀವ ಸಂತೋಷತಂದಿದೆ. ಈ ಸಂಸ್ಥೆಯ ವೈಜ್ಞಾನಿಕ ಪ್ರಗತಿಗಳನ್ನು ಪ್ರದರ್ಶಿಸುವ "ನಾವಿನ್ಯತೆ ಮತ್ತು ಅಭಿವೃದ್ಧಿ ಕೇಂದ್ರ"ಕ್ಕೆ ಶಂಕುಸ್ಥಾಪನೆ ನೆರವೇರಿಸಲು ನನಗೆ ಹರ್ಷವೆನಿಸುತ್ತದೆ.
ಅಂತರ ಶಿಸ್ತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಕ್ಷೇತ್ರಗಳಲ್ಲಿ ಈ ಸಂಸ್ಥೆಯು ಮಾಡಿರುವ ಅಪಾರ ಪ್ರಭಾವಶಾಲಿ ಸಾಧನೆಗಳು ಮತ್ತು ಇಟ್ಟಿರುವ ದಾಪುಗಾಲನ್ನು ನೋಡಿ ನನಗೆ ಸಂತೋಷವಾಗಿದೆ. 30 ವರ್ಷಗಳ ಅವಧಿಯಲ್ಲಿ, ಇದು ಅತ್ಯುತ್ತಮ ಪ್ರಕಾಶನ ದಾಖಲೆಯೊಂದಿಗೆ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರವಾಗಿ ಸುಸ್ಥಾಪಿತವಾಗಿದೆ. ಈ ಸಂಸ್ಥೆಯ ಅನೇಕ ಹಿರಿಯ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ.
ಸ್ವಾಯತ್ತ ಸಂಸ್ಥೆ ಮತ್ತು ಸ್ವಾಯತ್ತ ವಿಶ್ವವಿದ್ಯಾಲಯವಾದ ಈ ಸಂಸ್ಥೆಯ ಮುಖ್ಯ ಗಮನವು ಪಿ.ಎಚ್.ಡಿ ಮತ್ತು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ರೂಪಿಸುವುದಾಗಿದೆ ಎಂದು ನನಗೆ ತಿಳಿದಿದೆ. ಇದು 2017ರ ಎನ್.ಐ.ಆರ್.ಎಫ್. ಶ್ರೇಣೀಕರಣದಲ್ಲಿ ವಿಶ್ವವಿದ್ಯಾಲಯಗಳ ಪೈಕಿ 4ನೇ ಸ್ಥಾನದಲ್ಲಿ ಒಟ್ಟಾರೆ ವಿಭಾಗದಲ್ಲಿ 11ನೇ ಸ್ಥಾನದಲ್ಲಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.
ಈ ಕೇಂದ್ರದ ಸಂಶೋಧನೆಯು ಜಾಗತಿಕ ಗಮನ ಸೆಳೆದಿದ್ದು, ದೇಶದ ಮತ್ತು ಸಾಗರೋತ್ತರ ಪ್ರತಿಷ್ಠಿತ ಸಂಸ್ಥೆಗಳಿಂದ ಪೇಟೆಂಟ್ ಮತ್ತು ಫೆಲೋಶಿಪ್ ಗಳನ್ನು ಪಡೆಯುವ ಮೂಲಕ ಗುರುತಿಸಲ್ಪಟ್ಟಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.
ಯಾವುದೇ ಸಂಸ್ಥೆ ನಡೆಸುವ ಸಂಶೋಧನೆಗಳು ಸಮಾಜಕ್ಕೆ ಪ್ರಸ್ತುತವಾಗಿರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ- ಅದು ಶೈಕ್ಷಣಿಕ ಅಥವಾ ಕೈಗಾರಿಕೆ ಆಗಿರಬಹುದು. ಈ ನಿಟ್ಟಿನಲ್ಲಿ, ಟ್ರಾನ್ಸ್ ಲೇಷನಲ್ ಸಂಶೋಧನೆಯು ಪ್ರಾಮುಖ್ಯ ಪಡೆಯುತ್ತದೆ ಮತ್ತು ಈ ಸಂಸ್ಥೆಯು 300 ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಸೃಷ್ಟಿಸಿದೆ ಮತ್ತು ಸ್ಥಳೀಯ ಆವಿಷ್ಕಾರಗಳ ಆಧಾರದ ಮೇಲೆ ಕೆಲವು ನವೋದ್ಯಮಗಳ ಸ್ಥಾಪನೆಯನ್ನು ಉತ್ತೇಜಿಸಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.
ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಸಂಗ್ರಹಣೆಯ ಸಂಶೋಧನೆಗಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಎನಿ ಪ್ರಶಸ್ತಿ, 2020ಕ್ಕೆ ಪ್ರೊ.ಸಿ.ಎನ್.ಆರ್. ರಾವ್ ಅವರು ನಾಮನಿರ್ದೇಶನಗೊಂಡಿದ್ದಾರೆ ಮತ್ತು ಈ ಕೇಂದ್ರದಲ್ಲಿ ಸಂಶೋಧನೆಯನ್ನು ಮುಂದುವರಿಸುತ್ತಿದ್ದಾರೆ ಎಂದು ತಿಳಿದು ಅತೀವ ಸಂತೋಷವಾಯಿತು. ಇನ್ನು ಕೆಲವೇ ತಿಂಗಳುಗಳಲ್ಲಿ ಅವರು ಇಟಲಿಯ ಅಧ್ಯಕ್ಷರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು ಪ್ರೊ. ರಾವ್ ! ನೀವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಯುವ ವಿಜ್ಞಾನಿಗಳಿಗೆ ಸದಾ ಪ್ರೇರಣೆ ನೀಡುತ್ತಿರುತ್ತೀರಿ.
ಈ ಕೇಂದ್ರವು ಇತರ ಸಂಸ್ಥೆಗಳೊಂದಿಗೆ ಒಂದು ಜಾಲವನ್ನು ನಿರ್ಮಿಸಿದೆ ಮತ್ತು ಪ್ರಪಂಚದಾದ್ಯಂತದ ವಿಜ್ಞಾನಿಗಳೊಂದಿಗೆ ಶೈಕ್ಷಣಿಕ ಸಂಪರ್ಕಗಳನ್ನು ಸ್ಥಾಪಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಪ್ರಪಂಚದಾದ್ಯಂತದ ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ ಮತ್ತು ಸಂವಹನಗಳಿಂದ ಬೌದ್ಧಿಕ ಪರಿಸರವು ಸ್ವಾಭಾವಿಕವಾಗಿ ಚೈತನ್ಯಗೊಳ್ಳುತ್ತದೆ. ಮೂರನೇ ವಿಶ್ವ ವಿಜ್ಞಾನ ಅಕಾಡೆಮಿಯ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವುದು ಸಹ ಈ ಕೇಂದ್ರದ ಮಕುಟಕ್ಕೆ ಮತ್ತೊಂದು ಗರಿಯಾಗಿದೆ.
ಈ ಸಂಸ್ಥೆಯು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆ ನಡೆಸಲು ಹೆಸರುವಾಸಿಯಾಗಿದ್ದರೂ, ಸಂಶ್ಲೇಷಿತ ಜೀವಶಾಸ್ತ್ರ, ಕಂಪ್ಯೂಟೇಶನಲ್ ಜೀವಶಾಸ್ತ್ರ, ಉನ್ನತ ಕಾರ್ಯಕ್ಷಮತೆಯ ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಂತಹ ವಿಜ್ಞಾನದ ಹೊಸ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುವಂತೆ ನಾನು ಇಲ್ಲಿನ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಸೂಚಿಸಲು ಬಯಸುತ್ತೇನೆ.
ನಾವು ಜಾಗತಿಕ ಸನ್ನಿವೇಶದ ಬಗ್ಗೆ ಮಾತನಾಡುವುದಾದರೆ, ಈ ಸಂಸ್ಥೆಯು ತನ್ನ ಪರಿಣತಿಯ ಕ್ಷೇತ್ರಗಳಲ್ಲಿ ಉನ್ನತ ಸಂಸ್ಥೆಗಳಲ್ಲಿ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅತ್ಯುತ್ತಮ ಪ್ರಭಾವ ಬೀರಿದೆ ಎಂದು ನಾನು ತಿಳಿದಿದ್ದೇನೆ. ಅದು ತನ್ನ ನಿಲುವನ್ನು ಮುಂದುವರಿಸುತ್ತದೆ ಮತ್ತು ಉತ್ಕೃಷ್ಟತೆಯ ಅನ್ವೇಷಣೆಯನ್ನು ಮುಂದುವರಿಸುತ್ತದೆ ಎಂದು ನಾನು ಭಾವಿಸುತ್ತೇನೆ, ಇದು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.
ಪ್ರತಿಯೊಬ್ಬ ವಿಜ್ಞಾನಿಯೂ ಜನರ ಜೀವನವನ್ನು ಸುಧಾರಿಸಲು ಔನ್ನತ್ಯ ಸಾಧಿಸಬೇಕು ಮತ್ತು ಸಂಶೋಧನೆ ಮಾಡಲು ಪ್ರಯತ್ನಿಸಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಹವಾಮಾನ ಬದಲಾವಣೆಯಿಂದ ಕೃಷಿಯಿಂದ ಹಿಡಿದು ಆರೋಗ್ಯ ಮತ್ತು ವೈದ್ಯಕೀಯದವರೆಗೆ ಮಾನವಕುಲ ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು ಹೊಸ ಹೊಸ ಪರಿಹಾರಗಳನ್ನು ಹುಡುಕಬೇಕು.
ಐ.ಐ.ಎಸ್.ಸಿ., ಐಐಟಿಗಳು ಮತ್ತು ಐ.ಐ.ಎಸ್.ಇ.ಆರ್.ಗಳಂತಹ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಲೀಗ್ ನಲ್ಲಿರುವ ಈ ಪ್ರಧಾನ ಸಂಸ್ಥೆ, ದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ಸಂಶೋಧನಾ ಫಲಶ್ರುತಿಗಳನ್ನು ಸುಧಾರಿಸಲು ಅಪಾರ ಕೊಡುಗೆ ನೀಡಬಹುದು.
ರಾಷ್ಟ್ರೀಯ ಶಿಕ್ಷಣ ನೀತಿ 2020 ವಿದ್ಯಾರ್ಥಿಗಳಿಗೆ ಎಲ್ಲಾ ವಿಭಾಗಗಳಲ್ಲಿ ಹೊಸ ಬೋಧನೆ ಮತ್ತು ಕಲಿಕೆಯ ತಂತ್ರಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಇದು ಸರಿಯಾದ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಅವರ ಜ್ಞಾನದ ನೆಲೆಯನ್ನು ಶ್ರೀಮಂತಗೊಳಿಸುತ್ತದೆ ಮತ್ತು ಅವರ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಈ ಉದ್ದೇಶವನ್ನು ಈಡೇರಿಸಲು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಹೊಸ ಐಐಟಿಗಳು, ಐಐಎಂಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ದೇಶದ ಉದ್ದಗಲಕ್ಕೂ ತಲೆಎತ್ತಿವೆ.
ಡಿ.ಎಸ್.ಟಿಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಇದರಡಿ ತರಲು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಭಾರತ ಸರ್ಕಾರ ಉದ್ದೇಶಿಸಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಈ ಸಂಸ್ಥೆ ಸಕ್ರಿಯ ಪಾತ್ರ ವಹಿಸುತ್ತಿದೆ ಎಂಬುದನ್ನು ಉಲ್ಲೇಖಿಸಲು ನನಗೆ ಸಂತೋಷವೆನಿಸುತ್ತದೆ.
ನನ್ನ ಪ್ರೀತಿಯ ವಿದ್ಯಾರ್ಥಿಗಳೇ,
ನೀವು ಇಲ್ಲಿ ಅಧ್ಯಯನ ಮಾಡಲು ಮತ್ತು ಪ್ರಸಿದ್ಧ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಆಧುನಿಕ ದಿನಮಾನದಲ್ಲಿ ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಲು ಸಾಕಷ್ಟು ಅದೃಷ್ಟಶಾಲಿಗಳಾಗಿದ್ದೀರಿ ಎಂದು ನಾನು ಹೇಳಲು ಇಚ್ಛಿಸುತ್ತೇನೆ. ಅಲ್ಲದೆ, ಈ ರೀತಿಯ ಪ್ರಶಾಂತ ಪರಿಸರವು ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮುಂದುವರಿಸಲು ಸೂಕ್ತ ವಾತಾವರಣವನ್ನು ಒದಗಿಸುತ್ತದೆ.
ಯಾವುದೇ ದೇಶದ ಪ್ರಗತಿ ಮತ್ತು ತಾಂತ್ರಿಕ ಪ್ರಗತಿಗೆ ವಿಜ್ಞಾನವು ಬೆನ್ನೆಲುಬಾಗಿದೆ. ಯುವ ಜನಸಂಖ್ಯೆಯೊಂದಿಗೆ ಭಾರತವು ಬೃಹತ್ ಜನಸಂಖ್ಯಾ ಪ್ರಯೋಜನದಿಂದ ಅನನ್ಯವಾಗಿ ಹರಸಲ್ಪಟ್ಟಿದೆ.
ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ವಿಶ್ವದರ್ಜೆಯ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ.
ಪ್ರೀತಿಯ ವಿದ್ಯಾರ್ಥಿಗಳೇ,
ನೀವು ರೋಮಾಂಚಕ ವೃತ್ತಿಜೀವನವನ್ನು ಪ್ರಾರಂಭಿಸಿದ್ದೀರಿ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ನೀವು ಯಾವುದೇ ಅವಕಾಶವನ್ನು ಕೈಚೆಲ್ಲಬಾರದು.
ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯ ಇಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ. ನೀವು ಯಾವಾಗಲೂ ಎಲ್ಲೆಗಳನ್ನು ಮೀರಿ ಸಾಗಲು ಪ್ರಯತ್ನಿಸಬೇಕು ಮತ್ತು ಯಥಾಸ್ಥಿತಿಗೆ ತೃಪ್ತರಾಗಬಾರದು ಅಥವಾ ಸಂತೃಪ್ತರಾಗಬಾರದು.
ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವ ಅದೃಷ್ಟವಂತ ವಿದ್ಯಾರ್ಥಿಗಳಲ್ಲಿ ನೀವೂ ಒಬ್ಬರಾಗಿದ್ದೀರಿ. ನೀವು ಪಡೆದ ಅವಕಾಶವನ್ನು ನೀವು ಗರಿಷ್ಠ ಬಳಸಿಕೊಳ್ಳಬೇಕು ಮತ್ತು ಧ್ರುವತಾರೆಯಂತೆ ಹೊಳೆಯಬೇಕು. ಈ ಕೇಂದ್ರದಿಂದ ಪಡೆದ ಜ್ಞಾನ ಮತ್ತು ಪ್ರತಿಷ್ಠೆಯೊಂದಿಗೆ, ನೀವು ರಾಷ್ಟ್ರೀಯ ಬೆಳವಣಿಗೆಗೆ ಗಮನಾರ್ಹ ರೀತಿಯಲ್ಲಿ ಕೊಡುಗೆ ನೀಡುತ್ತೀರಿ ಎಂಬ ಖಾತ್ರಿ ನನಗಿದೆ.
ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು, ಸಂಶೋಧನೆ ಮಾಡಲು ಮತ್ತು ಆವಿಷ್ಕಾರ ಮಾಡಲು ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ನಾನು ಬೋಧಕ ಸಿಬ್ಬಂದಿಯನ್ನು ಆಗ್ರಹಿಸುತ್ತೇನೆ.
ಈ ಕೇಂದ್ರವು ಕಳೆದ ಎರಡು ದಶಕಗಳಿಂದ ವಿಜ್ಞಾನ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಈ ಸಂಪರ್ಕವು ಕರ್ನಾಟಕದಲ್ಲಿ ಮಾತ್ರವಲ್ಲದೆ ಉತ್ತರಾಖಂಡದವರೆಗೆ ವಿವಿಧ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನನಗೆ ತಿಳಿಸಲಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ಕಾರ್ಯಕ್ರಮಗಳನ್ನು ಆನ್ ಲೈನ್ ವಿಧಾನದಲ್ಲಿ ನಡೆಸಲಾಯಿತು ಎಂದು ತಿಳಿದು ನನಗೆ ಸಂತೋಷವಾಗಿದೆ.
ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಮಾಡಿದ ಕಾರ್ಯಕ್ಕಾಗಿ ಮತ್ತು "ಮೇಕ್ ಇನ್ ಇಂಡಿಯಾ" ಕಾರ್ಯಕ್ರಮಕ್ಕೆ ಅನುಗುಣವಾಗಿ ದೇಶೀಯ ಚಟುವಟಿಕೆಗಳ ಬಗ್ಗೆ ಕೆಲವು ನವೋದ್ಯಮಗಳನ್ನು ಉತ್ತೇಜಿಸಲು ಪ್ರಾರಂಭಿಸಲಾದ ಉಪಕ್ರಮಗಳಿಗಾಗಿ ನಾನು ಸಂಸ್ಥೆಯನ್ನು ಅಭಿನಂದಿಸುತ್ತೇನೆ.
ಇನ್ ಕ್ಯುಬೇಶನ್ ಮತ್ತು ಟ್ರಾನ್ಸ್ ಲೆಷನಲ್ ಸಂಶೋಧನೆಯನ್ನು ಉತ್ತೇಜಿಸಲು "ನಾವಿನ್ಯತೆ ಮತ್ತು ಅಭಿವೃದ್ಧಿ" ಕೇಂದ್ರ (ಐಮತ್ತುಡಿ) ಆಂತರಿಕ ಸಂಶೋಧನೆಗಳೊಂದಿಗೆ ಪ್ರಾರಂಭಿಸಿದ ನವೋದ್ಯಮ ಕಂಪನಿಗಳಿಗೆ ಆತಿಥ್ಯ ವಹಿಸುತ್ತದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.
ಪ್ರೊ. ಸಿ.ಎನ್.ಆರ್. ರಾವ್ ಅವರು ತಮ್ಮ ಸಂಶೋಧನೆ ಮತ್ತು ಸ್ಫೂರ್ತಿದಾಯಕ ವೈಜ್ಞಾನಿಕ ಉಪನ್ಯಾಸಗಳ ಮೂಲಕ ದೇಶದ ಉದ್ದಗಲ ಯುವ ಮನಸ್ಸುಗಳನ್ನು ಪ್ರಚೋದಿಸುತ್ತಿರುವುದಕ್ಕಾಗಿ ನಾನು ಮತ್ತೊಮ್ಮೆ ಅವರನ್ನು ಅಭಿನಂದಿಸಲು ಬಯಸುತ್ತೇನೆ.
ಎಲ್ಲಾ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳು!
ಜೈ ಹಿಂದ್!"
***
(Release ID: 1746407)
Visitor Counter : 482