ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ-ಕಿಸಾನ್ ಯೋಜನೆಯ 9ನೇ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಿ


9.75 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳ ಖಾತೆಗಳಿಗೆ ನೇರವಾಗಿ 19,500 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ವರ್ಗಾವಣೆ ಮಾಡಲಾಗಿದೆ

2047ರಲ್ಲಿ ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಭಾರತದ ಸ್ಥಿತಿಯನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ ಮತ್ತು ರೈತರ ಪಾತ್ರ ನಿರ್ಣಾಯಕವಾಗಿದೆ: ಪ್ರಧಾನಿ

ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಇದುವರೆಗಿನ ಅತಿದೊಡ್ಡ ಮಟ್ಟದಲ್ಲಿ ಖರೀದಿ ಮಾಡಲಾಗಿದ್ದು, 1,70,000 ಕೋಟಿ ರೂ.ಗಳು ಭತ್ತದ ಬೆಳೆಗಾರರ ಖಾತೆಗಳಿಗೆ ಮತ್ತು 85,000 ಕೋಟಿ ರೂ.ಗೋಧಿ ಬೆಳೆಯುವ ರೈತರ ಖಾತೆಗಳಿಗೆ ನೇರವಾಗಿ ತಲುಪಿದೆ: ಪ್ರಧಾನಿ

ತಮ್ಮ ಮನವಿಗೆ ಓಗುಟ್ಟಿದ್ದಕ್ಕಾಗಿ ಮತ್ತು ಕಳೆದ 50 ವರ್ಷಗಳಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿದ್ದಕ್ಕಾಗಿ ರೈತರಿಗೆ ಧನ್ಯವಾದ ತಿಳಿಸಿದ ಪ್ರಧಾನಿ

ʻರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ʼ (ಎನ್ಎಂಇಒ-ಒಪಿ) ಮೂಲಕ ದೇಶವು ಖಾದ್ಯ ತೈಲದಲ್ಲಿ ಸ್ವಾವಲಂಬನೆಗಾಗಿ ಸಂಕಲ್ಪ ತೊಟ್ಟಿದೆ. ಅಡುಗೆ ತೈಲ ಪರಿಸರ ವ್ಯವಸ್ಥೆಯಲ್ಲಿ 11,000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಾಗುವುದು: ಪ್ರಧಾನಿ

ಇದೇ ಮೊದಲ ಬಾರಿಗೆ ಭಾರತವು ಕೃಷಿ ರಫ್ತಿಗೆ ಸಂಬಂಧಿಸಿದಂತೆ ವಿಶ್ವದ ಅಗ್ರ-10 ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ: ಪ್ರಧಾನಿ

ದೇಶದ ಕೃಷಿ ನೀತಿಗಳಲ್ಲಿ ಸಣ್ಣ ರೈತರಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ: ಪ್ರಧಾನಿ

Posted On: 09 AUG 2021 2:27PM by PIB Bengaluru

ʻಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ (ಪಿಎಂ-ಕಿಸಾನ್) ಅಡಿಯಲ್ಲಿ ಮುಂದಿನ ಕಂತಿನ ಆರ್ಥಿಕ ನೆರವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರೈತ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಯೋಜನೆಯು 9.75 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ 19,500 ಕೋಟಿ ರೂ.ಗಿಂತಲೂ ಅಧಿಕ ಹಣ ವರ್ಗಾವಣೆಯನ್ನು ಸಾಧ್ಯವಾಗಿಸಿದೆ.  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ನೀಡಲಾದ ಆರ್ಥಿಕ ನೆರವಿನ 9ನೇ ಕಂತು ಇದಾಗಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ಬಿತ್ತನೆ ಋತುವಿನ ಬಗ್ಗೆ ಪ್ರಸ್ತಾಪಿಸಿದರು ಮತ್ತು ಇಂದು ರೈತರು ಪಡೆದ ಮೊತ್ತವು ಬಿತ್ತನೆ ಕಾರ್ಯಕ್ಕೆ ಸಹಾಯಕವಾಗುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು. 1 ಲಕ್ಷ ಕೋಟಿ ರೂಪಾಯಿ ಮೀಸಲು ಹಣವನ್ನು ಹೊಂದಿರುವ ʻಕಿಸಾನ್ ಮೂಲಸೌಕರ್ಯ ನಿಧಿ  ಯೋಜನೆʼಯೂ ಇಂದಿಗೆ ಒಂದು ವರ್ಷ ಪೂರ್ಣಗೊಳಿಸುತ್ತದೆ ಎಂದು ಅವರು ಉಲ್ಲೇಖಿಸಿದರು.  ʻಮಿಷನ್ ಹನಿ ಬೀʼ ಹಾಗೂ ʻನಫೆಡ್ʼ(NAFED) ಮಳಿಗೆಗಳಲ್ಲಿ ಜಮ್ಮು-ಕಾಶ್ಮೀರದ ಕೇಸರಿ ಲಭ್ಯತೆಯಂತಹ ಉಪಕ್ರಮಗಳ ಬಗ್ಗೆ ಅವರು ವಿವರಿಸಿದರು. ʻಮಿಷನ್‌ ಹನಿ ಬೀʼ ಯೋಜನೆಯು 700 ಸಾವಿರ ಕೋಟಿ ಜೇನು ತುಪ್ಪ  ರಫ್ತಿಗೆ ಕಾರಣವಾಗಿದೆ ಮತ್ತು ಆ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ದೊರೆತಿದೆ ಎಂದರು.

ಮುಂಬರುವ 75ನೇ ಸ್ವಾತಂತ್ರ್ಯೋತ್ಸವ ದಿನವನ್ನು ಉಲ್ಲೇಖಿಸಿದ ಅವರು, ಇದು ಕೇವಲ ಹೆಮ್ಮೆಯ ಸಂದರ್ಭ ಮಾತ್ರವಲ್ಲ, ಇದು ಹೊಸ ನಿರ್ಣಯಗಳಿಗೆ ಒಂದು ಅವಕಾಶವಾಗಿದೆ ಎಂದು ಹೇಳಿದರು. ಮುಂಬರುವ 25 ವರ್ಷಗಳಲ್ಲಿ ನಾವು ಭಾರತವನ್ನು ಎಲ್ಲಿ ನೋಡಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. 2047ರಲ್ಲಿ ದೇಶವು ಸ್ವಾತಂತ್ರ್ಯ ಬಂದು 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಭಾರತದ ಸ್ಥಿತಿಯನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ ಮತ್ತು ನಮ್ಮ ರೈತರ ಪಾತ್ರ ದೊಡ್ಡದು ಎಂದು ಪ್ರಧಾನಿ ಹೇಳಿದರು. ಹೊಸ ಸವಾಲುಗಳನ್ನು ಎದುರಿಸಲು, ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಭಾರತದ ಕೃಷಿಯ ದಿಕ್ಕನ್ನು ನಿರ್ಧರಿಸಲು ಇದು ಸಕಾಲ. ಕಾಲಕಾಲಕ್ಕೆ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಭಾರತೀಯ ಕೃಷಿಯಲ್ಲಿ ಬದಲಾವಣೆ ಅಗತ್ಯ ಎಂದು ಅವರು ಕರೆ ನೀಡಿದರು. ಸಾಂಕ್ರಾಮಿಕದ ಸಮಯದಲ್ಲಿ ದಾಖಲೆಯ ಕೃಷಿ ಉತ್ಪಾದನೆಗಾಗಿ ರೈತರನ್ನು ಶ್ಲಾಘಿಸಿದ ಅವರು, ಕಠಿಣ ಸಮಯದಲ್ಲಿ ರೈತರ ಸಂಕಷ್ಟಗಳನ್ನು ಕಡಿಮೆ ಮಾಡಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಸರಕಾರವು ಬೀಜ, ರಸಗೊಬ್ಬರ ಮತ್ತು ಮಾರುಕಟ್ಟೆಗಳ ಲಭ್ಯತೆಗೆ ಯಾವುದೇ ತೊಡಕಾಗದಂತೆ ನೋಡಿಕೊಂಡಿತು.  ಎಲ್ಲಾ ಸಮಯದಲ್ಲೂ ಯೂರಿಯಾ ಲಭ್ಯತೆ ಕಾಯ್ದುಕೊಳ್ಳಲಾಗಿತ್ತು. ಜೊತೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ʻಡಿಎಪಿʼ ಬೆಲೆ ಹಲವು ಪಟ್ಟು ಹೆಚ್ಚಾದಾಗಲೂ ಸರಕಾರ ತಕ್ಷಣವೇ 12000 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಹಳೆ ದರದಲ್ಲೇ ರೈತರಿಗೆ ಡಿಎಪಿ ಲಭ್ಯವಾಗುವಂತೆ ಹಾಗೂ ದರ ಹೆಚ್ಚಳದ ಹೊರೆ ರೈತರ ಮೇಲೆ ಬೀಳದಂತೆ ನೋಡಿಕೊಂಡಿತು ಎಂದರು.

ಅದು ಮುಂಗಾರು ಋತುವಾಗಿರಲಿ ಅಥವಾ ಹಿಂಗಾರು ಋತುವಾಗಿರಲಿ ಸರಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಇದುವರೆಗಿನ ಅತಿ ದೊಡ್ಡ ಮಟ್ಟದ ಖರೀದಿ ಮಾಡಿದೆ. ಇದರಿಂದಾಗಿ ಸುಮಾರು 1,70,000 ಕೋಟಿ ರೂ. ಭತ್ತದ ಬೆಳಗಾರರ ಖಾತೆಗಳಿಗೆ ಮತ್ತು ಸುಮಾರು 85,000 ಕೋಟಿ ರೂ. ಗೋಧಿ ರೈತರ ಖಾತೆಗಳಿಗೆ ನೇರವಾಗಿ ತಲುಪಿದೆ ಎಂದು ಪ್ರಧಾನಿ ಹೇಳಿದರು.

ಕೆಲವು ವರ್ಷಗಳ ಹಿಂದೆ ದೇಶದಲ್ಲಿ ದ್ವಿದಳ ಧಾನ್ಯಗಳ ಕೊರತೆ ಕಂಡು ಬಂದಾಗ, ಅವುಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ರೈತರನ್ನು ತಾವು ಒತ್ತಾಯಿಸಿದ್ದಾಗಿ ಪ್ರಧಾನಿ ಸ್ಮರಿಸಿದರು. ಇದರ ಪರಿಣಾಮವಾಗಿ, ಕಳೆದ 6 ವರ್ಷಗಳಲ್ಲಿ ದೇಶದಲ್ಲಿ ದ್ವಿದಳ ಧಾನ್ಯಗಳ ಅಥವಾ ಬೇಳೆ ಕಾಳುಗಳ ಉತ್ಪಾದನೆಯಲ್ಲಿ ಸುಮಾರು 50 ಪ್ರತಿಶತ ಹೆಚ್ಚಳವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರತಿಜ್ಞೆಯ ಭಾಗವಾಗಿ ಆರಂಭಿಸಲಾಗಿರುವ ʻರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ʼ (ಎನ್‌ಎಂಇಒ-ಒಪಿ) ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಇಂದು ʻಭಾರತ ಬಿಟ್ಟು ತೊಲಗಿʼ (ಕ್ವಿಟ್‌ ಇಂಡಿಯಾ) ಚಳವಳಿಯ ಸ್ಮರಣಾರ್ಥ ದಿನ. ಈ ಐತಿಹಾಸಿಕ ದಿನದಂದು, ಈ ಸಂಕಲ್ಪವು ನಮಗೆ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಅವರು ಹೇಳಿದರು. ʻರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ʼ ಯೋಜನೆ ಮೂಲಕ ಅಡುಗೆ ತೈಲ ಪರಿಸರ ವ್ಯವಸ್ಥೆಯಲ್ಲಿ 11,000 ಕೋಟಿ ರೂ.ಗಿಂತಲೂ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಗುಣಮಟ್ಟದ ಬೀಜಗಳಿಂದ ಹಿಡಿದು ತಂತ್ರಜ್ಞಾನದವರೆಗೆ ರೈತರಿಗೆ ಎಲ್ಲಾ ಸೌಲಭ್ಯಗಳ ಖಾತರಿಯನ್ನು ಸರಕಾರ ಒದಗಿಸಿದೆ. ಇಂದು ಮೊದಲ ಬಾರಿಗೆ ಭಾರತವು ಕೃಷಿ ರಫ್ತಿಗೆ ಸಂಬಂಧಿಸಿದಂತೆ ವಿಶ್ವದ ಅಗ್ರ-10 ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಪ್ರಧಾನಿ ಗಮನ ಸೆಳೆದರು. ಕೊರೊನಾ ಅವಧಿಯಲ್ಲಿ ದೇಶವು ಕೃಷಿ ರಫ್ತಿನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಇಂದು ಭಾರತವನ್ನು ಬೃಹತ್‌ ಕೃಷಿ ರಫ್ತು ದೇಶವನ್ನಾಗಿ ಗುರುತಿಸಲಾಗುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಖಾದ್ಯ ತೈಲದ ಅಗತ್ಯಗಳಿಗಾಗಿ ಆಮದನ್ನು ಅವಲಂಬಿಸುವುದು ಸರಿಯಲ್ಲ ಎಂದರು.

ದೇಶದ ಕೃಷಿ ನೀತಿಗಳಲ್ಲಿ ಸಣ್ಣ ರೈತರಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ, ಕಳೆದ ಕೆಲ ವರ್ಷಗಳಿಂದ ಈ ಸಣ್ಣ ರೈತರಿಗೆ ಅನುಕೂಲ ಹಾಗೂ ಭದ್ರತೆಯನ್ನು ಒದಗಿಸಲು ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಅಡಿಯಲ್ಲಿ, ಇಲ್ಲಿಯವರೆಗೆ ರೈತರಿಗೆ 1.60 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಪೈಕಿ ಸಾಂಕ್ರಾಮಿಕದ ಅವಧಿಯಲ್ಲಿ ಸಣ್ಣ ರೈತರಿಗೆ 1 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ 2 ಕೋಟಿಗೂ ಹೆಚ್ಚು ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸಣ್ಣ ರೈತರಿಗೆ ದೊರೆತಿವೆ. ಅಂತಹ ರೈತರು ಮುಂದೆ ವಿಸ್ತರಣೆಯಾಗಲಿರುವ ಕೃಷಿ ಮೂಲಸೌಕರ್ಯ ಮತ್ತು ಸಂಪರ್ಕ ಮೂಲಸೌಕರ್ಯಗಳ ಅನುಕೂಲ ಪಡೆಯಲಿದ್ದಾರೆ. ʻಆಹಾರ ಪಾರ್ಕ್‌ಗಳುʼ, ʻಕಿಸಾನ್ ರೈಲುಗಳುʼ ಮತ್ತು ʻಮೂಲಸೌಕರ್ಯ ನಿಧಿʼಯಂತಹ ಉಪಕ್ರಮಗಳು ಸಣ್ಣ ರೈತರಿಗೆ ಸಹಾಯಕವಾಗಲಿವೆ. ಕಳೆದ ವರ್ಷದಲ್ಲಿ, ಮೂಲಸೌಕರ್ಯ ನಿಧಿಯ ಅಡಿಯಲ್ಲಿ 6 ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಕ್ರಮಗಳು ಸಣ್ಣ ರೈತರ ಮಾರುಕಟ್ಟೆ ಸಂಪರ್ಕವನ್ನು ಮತ್ತು ʻಎಪ್‌ಪಿಒʼಗಳ ಮೂಲಕ ಅವರ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನಿ ಹೇಳಿದರು.

 

 

***



(Release ID: 1744121) Visitor Counter : 278