ಶಿಕ್ಷಣ ಸಚಿವಾಲಯ

ಶಿಕ್ಷಣ ಸಚಿವಾಲಯದಿಂದ “ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣ ಕುರಿತ ರಾಷ್ಟ್ರೀಯ ವೆಬಿನಾರ್” ಆಯೋಜನೆ

ಪ್ರಕಟಣಾ ದಿನಾಂಕ: 02 AUG 2021 4:58PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಅಡಿಯಲ್ಲಿ ಪರಿವರ್ತನಾತ್ಮಕ ಸುಧಾರಣೆಗಳ ಒಂದನೇ ವರ್ಷಾಚರಣೆಯ ಅಂಗವಾಗಿ, ಭಾರತ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ,2020 ರ ವಿವಿಧ ಅಂಶಗಳ ಕುರಿತಂತೆ ವಿಷಯಾಧಾರಿತ ಸರಣಿ ವೆಬಿನಾರ್ ಗಳನ್ನು ಆಯೋಜಿಸುತ್ತಿದೆ. ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣವು ಎನ್.ಇ.ಪಿ.ಯ ಅತ್ಯಂತ ಹೆಚ್ಚು ಆದ್ಯತೆಯ ಕ್ಷೇತ್ರವಾಗಿದ್ದು, ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು ಇಂದು ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣ ಕುರಿತ ರಾಷ್ಟ್ರೀಯ ವೆಬಿನಾರ್ ನ್ನು ಆಯೋಜಿಸಿತ್ತು. ಶಿಕ್ಷಣ ಸಹಾಯಕ ಸಚಿವರಾದ ಡಾ. ಸುಭಾಶ್ ಸರ್ಕಾರ್ ಅವರು ಭಾಷಣ ಮಾಡಿದರು. ಶಿಕ್ಷಣ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಹಿರಿಯ ಅಧಿಕಾರಿಗಳು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಭಾಷಣ ಮಾಡಿದ ಶಿಕ್ಷಣ ಖಾತೆ ಸಹಾಯಕ ಸಚಿವರಾದ ಡಾ. ಸುಭಾಶ್ ಸರ್ಕಾರ್ ತಕ್ಷಶಿಲಾ ಮತ್ತು ನಲಂದಾ ಕಾಲದಿಂದಲೂ ಇರುವ ಸಮಗ್ರ ಮತ್ತು ಬಹುಶಿಸ್ತೀಯ ಕಲಿಕೆಯ ಸುಧೀರ್ಘ ಪರಂಪರೆಯ ಬಗ್ಗೆ ಒತ್ತಿ ಹೇಳಿದರು. ಪ್ರಾಚೀನ ಭಾರತದಲ್ಲಿ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ, ವಿಕಸನಕ್ಕೆ ಗಮನ ನೀಡಲಾಗುತ್ತಿತ್ತು ಎಂದೂ ಸಚಿವರು ಹೇಳಿದರು. ಜೀವನದ ಪ್ರತಿಯೊಂದು ಸಂಗತಿಯಲ್ಲಿಯೂ ವ್ಯಕ್ತಿಗಳು ಸಶಕ್ತರಾಗುವಂತಹ ಶಿಕ್ಷಣದ ಮಾದರಿಗಳನ್ನು ಮರು ನಿರ್ಮಾಣ ಮಾಡಬೇಕಾದ ಅಗತ್ಯವನ್ನು ಅವರು ಹೇಳಿದರು. ಬಹುಶಿಸ್ತೀಯ ಶಿಕ್ಷಣದ ಬಗ್ಗೆ ಇನ್ನಷ್ಟು ವಿವರಗಳನ್ನು ಒದಗಿಸಿದ ಸಚಿವರು ಈಗ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಮತ್ತು ಮಾನವಿಕಗಳ ಮಿತಿಯ ಗೆರೆಯಲ್ಲಿ ಬಂಧಿಯಾಗಿರುವುದಿಲ್ಲ ಎಂದರು. ಸಮಗ್ರ ಶಿಕ್ಷಣವು 21 ನೇ ಶತಮಾನದ ಕೌಶಲ್ಯಗಳಾದ ಸಕ್ರಿಯ ಕಲಿಕೆ, ಸಾಂಪ್ರದಾಯಿಕ ಚೌಕಟ್ಟಿನಾಚೆಗಿನ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಮರ್ಪಕ ಸಂವಹನ, ಸಮನ್ವಯ-ಸಹಯೋಗ, ತಾಂತ್ರಿಕ ಕೌಶಲ್ಯಗಳು ಮತ್ತು ಜೀವನ ಕೌಶಲ್ಯಗಳನ್ನು ನಮ್ಮ ಕಲಿಕಾದಾರರಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ ಎಂದೂ ಸಚಿವರು ಹೇಳಿದರು. ಹೊಸ ತಲೆಮಾರಿನವರ ಆಶೋತ್ತರಗಳಿಗೆ ರೆಕ್ಕೆಗಳನ್ನು ಕೊಡುವುದು ಅಕಾಡೆಮಿಕ್ ವಲಯದವರ ಜವಾಬ್ದಾರಿಯಾಗಿದೆ ಎಂಬುದನ್ನೂ ಅವರು ನೆನಪಿಸಿದರು. 

ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಅಮಿತ್ ಖರೆ ತಮ್ಮ ಆರಂಭಿಕ ಪ್ರಾಸ್ತಾವಿಕ ಮಾತುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಮೂಲಭೂತ ತತ್ವಗಳು ಮತ್ತು ಅದು ರೂಪುಗೊಂಡ ಬಗ್ಗೆ ಬೆಳಕು ಚೆಲ್ಲಿದರು. ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಎನ್.ಇ.ಪಿ.2020ರ ಪಾತ್ರವನ್ನು ವಿವೇಚಿಸಿದ ಶ್ರೀ ಖರೆ ಸಂಸ್ಥೆಗಳ ನಡುವೆ ಸಹಯೋಗದ ಪಾತ್ರ, ಪೂರಕ ಅನುದಾನ ಮತ್ತು ಬಹುಶಿಸ್ತೀಯ ಶಿಕ್ಷಣವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿವಿಧ ಶಿಸ್ತುಗಳ ನಡುವಿನ ಅಂತರ್ವಿಭಜನೆ, ಛೇದಕಗಳ ಬಗೆಗೂ ಪ್ರಸ್ತಾವಿಸಿದರು.

ಯು.ಜಿ.ಸಿ.ಯ ಅಧ್ಯಕ್ಷ ಪ್ರೊ. ಡಿ.ಪಿ.ಸಿಂಗ್ ಅವರು ಸಚಿವರನ್ನು ಮತ್ತು ಇತರ ಗಣ್ಯರನ್ನು ಸ್ವಾಗತಿಸಿದರು. ಶಿಕ್ಷಣದ ಸಮಗ್ರ ಧೋರಣೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಯನ್ನು ಪ್ರಸ್ತಾಪಿಸಿದ ಅವರು ಕಲಿಕೆದಾರರಿಗೆ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಕುರಿತೂ ವಿಶೇಷ ಉಲ್ಲೇಖ ಮಾಡಿದರು. ತಮ್ಮ ಸಮಾರೋಪ ಭಾಷಣದಲ್ಲಿ ಅವರು ಸಮಗ್ರ ಶಿಕ್ಷಣದ ವಿವಿಧ ಅಂಶಗಳನ್ನು, ಆಯಾಮಗಳನ್ನು ಮತ್ತು ಬಹು ಪ್ರವೇಶ ಹಾಗು ನಿರ್ಗಮನ ವ್ಯವಸ್ಥೆಯ ಮೂಲಕ ಇರುವ ನಮ್ಯತೆಯ ಅವಕಾಶಗಳ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪಿಸಿದರು. 

ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣ ಕುರಿತ ವೆಬಿನಾರ್, ಕರಡು ಎನ್.ಇ.ಪಿ.ಯ ಸಮಿತಿ ಸದಸ್ಯರು, ಶಿಕ್ಷಣವೇತ್ತರು, ವಿಜ್ಞಾನಿಗಳು, ಮತ್ತು ಶೈಕ್ಷಣಿಕ ಆಡಳಿತದಾರರನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಒಂದು ಅವಕಾಶವೊದಗಿಸಿತು. ವೆಬಿನಾರಿನ ಮೊದಲನೇ ಅಧಿವೇಶನ “ಸಮಗ್ರ ಶಿಕ್ಷಣ” ವಿಷಯವನ್ನು ಒಳಗೊಂಡಿತ್ತು ಮತ್ತು ಅದನ್ನುದ್ದೇಶಿಸಿ ಗುಜರಾತಿನ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಮಶಂಕರ ದುಬೆ ಅವರು ಮಾತನಾಡಿದರು. ಪ್ರೊ. ದುಬೆ ಅವರು ಸಾಮಾಜಿಕ ಮತ್ತು ಭಾವನಾತ್ಮಕ ಸಾಕ್ಷರತೆಯ ಬಗ್ಗೆ ಆದ್ಯತೆ ನೀಡಿ ಮಾತನಾಡಿದರು. ಉತ್ತಮ ಕಲಿಕಾ ಫಲಶ್ರುತಿಗಾಗಿ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ, ಪರಿಕಲ್ಪನೆಗಳ ಸ್ಪಷ್ಟತೆ ಇತ್ಯಾದಿಗಳ ಉನ್ನತ ಮಟ್ಟದ ಕೌಶಲ್ಯದ ಮೌಲ್ಯಮಾಪನದ ಅವಶ್ಯಕತೆಗಳನ್ನು ತಮ್ಮ ಭಾಷಣದಲ್ಲಿ ಅವರು ಹೆಚ್ಚಿನ ಒತ್ತು ನೀಡಿ ಉಲ್ಲೇಖಿಸಿದರು.

ಕರಡು ಎನ್.ಇ.ಪಿ. ಸಮಿತಿಯ ಸದಸ್ಯ ಮತ್ತು ಯು.ಜಿ.ಸಿ.ಯ ಸದಸ್ಯರೂ ಆಗಿರುವ ಪ್ರೊ. ಎಂ.ಕೆ. ಶ್ರೀಧರ ಅವರು ವೆಬಿನಾರಿನ ಎರಡನೆಯ ಅಧಿವೇಶನದಲ್ಲಿ “ಬಹುಶಿಸ್ತೀಯ ಶಿಕ್ಷಣ” ಕುರಿತಂತೆ ಮಾತನಾಡಿದರು. ಬಹುಶಿಸ್ತೀಯತೆ ಕುರಿತು ಪ್ರೊ. ಶ್ರೀಧರ ಅವರು ವಿಮರ್ಶಾತ್ಮಕ ಒಳನೋಟಗಳನ್ನು ನೀಡಿದರು. ಈಗಿರುವ ಶಿಸ್ತೀಯ ಮಹತ್ವವನ್ನು ಸ್ಥಳಾಂತರಿಸುವುದು ಬಹುಶಿಸ್ತೀಯ ಶಿಕ್ಷಣದ ಉದ್ದೇಶವಲ್ಲ ಎಂಬುದನ್ನವರು ಪ್ರತಿಪಾದಿಸಿದರು. ಇದು ನಮ್ಮ ವಿದ್ಯಾರ್ಥಿಗಳು ಒಂದು ಶಿಸ್ತಿನಲ್ಲಿ ಆಳವಾದ ಸಾಮರ್ಥ್ಯವನ್ನು ಗಳಿಸಿಕೊಳ್ಳುವುದರ ಜೊತೆಗೆ ಅದರ ಸೀಮಾ ರೇಖೆಗಳನ್ನು ದಾಟಿ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಅನುಕೂಲವಾಗುವ ಪೂರಕ ವ್ಯವಸ್ಥೆ ಎಂದವರು ಅಭಿಪ್ರಾಯಪಟ್ಟರು.

ಕೊನೆಯ ಅಧಿವೇಶನಕ್ಕೆ ಸಾಗುವ ವಿಷಯಾಧಾರಿತ ಸಮಾಲೋಚನೆಯಲ್ಲಿ “ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಮೂಲಕ ಬಹು ಪ್ರವೇಶ ಮತ್ತು ನಿರ್ಗಮನ” ಕುರಿತಂತೆ ಚರ್ಚೆ ನಡೆಯಿತು. ತೇಜ್ ಪುರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವಿ.ಕೆ.ಜೈನ್ ಭಾಷಣಕಾರರಾಗಿದ್ದರು. ಪ್ರೊ. ಜೈನ್ ಅವರು ಅರ್ಹತಾ ಮಟ್ಟಗಳು, ಕ್ರೆಡಿಟ್ ಅವಶ್ಯಕತೆಗಳು, ಮತ್ತು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎ.ಬಿ.ಸಿ.) ಗೆ ಸಂಬಂಧಿಸಿ ಯು.ಜಿ.ಸಿ. ನಿಯಮಾವಳಿಗಳ ಇತರ ಅಂಶಗಳ ಬಗ್ಗೆ, ಬಹು ಪ್ರವೇಶ-ನಿರ್ಗಮನ ವ್ಯವಸ್ಥೆ ಮಾರ್ಗದರ್ಶಿಗಳ ಕುರಿತು ಮಾತನಾಡಿದರು.

ಇಗ್ನೋ ಉಪಕುಲಪತಿ ಪ್ರೊ. ನಾಗೇಶ್ವರ ರಾವ್, ನಲಂದಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸುನೈನಾ ಸಿಂಗ್, ಜಿ.ಬಿ. ಪಂತ್ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಪ್ರೊ. ಬದ್ರಿ ನಾರಾಯಣ, ನಿರ್ಮಾ ವಿಶ್ವವಿದ್ಯಾಲಯದ ಮಹಾ ನಿರ್ದೇಶಕ ಪ್ರೊ. ಅನೂಪ್ ಕುಮಾರ್ ಸಿಂಗ್, ಐ.ಐ.ಎಂ. ನಾಗಪುರದ ನಿರ್ದೇಶಕ ಪ್ರೊ. ಭೀಮರಾಯ ಮೇಟ್ರಿ, ಐ.ಯು.ಎ.ಸಿ.ಯ ನಿರ್ದೇಶಕ ಪ್ರೊ. ಅವಿನಾಶ್ ಚಂದ್ರ ಪಾಂಡೇ ಅವರು ವಿವಿಧ ಅಧಿವೇಶನಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.

ವೆಬಿನಾರಿನಲ್ಲಿ ದೇಶಾದ್ಯಂತದಿಂದ ಅಕಾಡೆಮಿಕ್ ವಲಯದ ಪ್ರತಿನಿಧಿಗಳು, ಉದ್ಯಮ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವಿವಿಧ ಸಚಿವಾಲಯಗಳ ಅಧಿಕಾರಿಗಳು, ಯು.ಜಿ.ಸಿ, ಎ.ಐ.ಸಿ.ಟಿ.ಇ ಮತ್ತು ಎನ್.ಸಿ.ಟಿ.ಇ. ಅಧಿಕಾರಿಗಳು ವೆಬಿನಾರಿನಲ್ಲಿ ಹಾಜರಿದ್ದರು.

ಶಿಸ್ತೀಯ ಗಡಿಗಳನ್ನು ಮೀರಿದ ಸ್ಪರ್ಧಾತ್ಮಕತೆ, ಸಮಗ್ರ ಶಿಕ್ಷಣದ ನವೀನ ಮಧ್ಯಪ್ರವೇಶ ಮತ್ತು ಬಹು ಪ್ರವೇಶ ಹಾಗು ನಿರ್ಗಮನ ಅವಕಾಶಗಳು ಹಾಗು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವೆಬಿನಾರಿನಲ್ಲಿ ಮಾಹಿತಿಗಳು ಲಭ್ಯವಾದವು. ಎನ್.ಇ.ಪಿ. 2020ರ ಗುರಿಗಳನ್ನು ಸಾಧಿಸುವಲ್ಲಿ ಭಾಗೀದಾರರ ಕೊಡುಗೆ, ಸಮಗ್ರ ಮತ್ತು ಬಹುಶಿಸ್ತೀಯ ಶಿಕ್ಷಣ ಒದಗಣೆಯಲ್ಲಿ ಹಾಗು ಉನ್ನತ ಶಿಕ್ಷಣದಲ್ಲಿ ಬಹು ಅಗತ್ಯವಾದ ನಮ್ಯತೆಯನ್ನು (ವಿಷಯ ಆಯ್ಕೆಯಲ್ಲಿ ಉದಾರ ಅವಕಾಶಗಳು) ಸಾಕಾರ ಮಾಡುವಲ್ಲಿ ಅವರ ಪಾತ್ರದ ಬಗ್ಗೆಯೂ ಮಾಹಿತಿ ವಿನಿಮಯ ಮಾಡಲಾಯಿತು.

***


(ಪ್ರಕಟಣೆ ಐ.ಡಿ.: 1741696) ವಿಸಿಟರ್ ಕೌಂಟರ್ : 444
ಪ್ರಕಟಣೆಯನ್ನು ಇದರಲ್ಲಿ ಓದಿ: Punjabi , English , हिन्दी