ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಮಂಗಳಮುಖಿಯರಿಗೆ ವಸತಿ ಸೌಕರ್ಯ
Posted On:
27 JUL 2021 1:50PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮಂಗಳಮುಖಿಯರ ಕಲ್ಯಾಣಕ್ಕಾಗಿ ಯೋಜನೆಯೊಂದನ್ನು ರೂಪಿಸುತ್ತಿದ್ದು, ನಿರ್ಗತಿಕ ಮತ್ತು ಅಗತ್ಯವಿರುವ ಮಂಗಳಮುಖಿಯರಿಗೆ ಆಶ್ರಯ ಮನೆಗಳನ್ನು ಒದಗಿಸುವುದು ಸಹ ಈ ಯೋಜನೆಯ ಭಾಗವಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 12 ಪ್ರಾಯೋಗಿಕ ಆಶ್ರಯ ಮನೆಗಳಿಗೆ ಚಾಲನೆ ನೀಡಿದ್ದು, ಮಂಗಳಮುಖಿಯರಿಗಾಗಿ ಈ 'ಗರಿಮಾ ಗೃಹ' ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲು ಸಮುದಾಯ ಆಧಾರಿತ ಸಂಸ್ಥೆಗಳಿಗೆ (ಸಿಬಿಒಗಳು) ಆರ್ಥಿಕ ನೆರವು ಒದಗಿಸಿದೆ. ಈ ಪ್ರಾಯೋಗಿಕ ಆಶ್ರಯ ಮನೆಗಳನ್ನು ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಛತ್ತೀಸ್‌ಗಢ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ನಿರ್ಮಿಸಲಾಗಿದೆ. ಅಗತ್ಯವಿರುವ ಮಂಗಳಮುಖಿಯರಿಗೆ ಸುರಕ್ಷಿತ ಮತ್ತು ಸುಭದ್ರ ಆಶ್ರಯವನ್ನು ಒದಗಿಸುವುದು ಈ ಆಶ್ರಯ ಮನೆಗಳ ಮುಖ್ಯ ಉದ್ದೇಶ. ಈ ಆಶ್ರಯ ಮನೆಗಳು ಆಹಾರ, ವೈದ್ಯಕೀಯ ಆರೈಕೆ, ಮನರಂಜನಾ ಸೌಲಭ್ಯಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತವೆ. ಮಂಗಳಮುಖಿಯರಿಗೆ ಸಾಮರ್ಥ್ಯ ವರ್ಧನೆ/ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ಇಲ್ಲಿ ನಡೆಸಲಾಗುತ್ತದೆ.
ಈ ಸಚಿವಾಲಯವು ಯಾವುದೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತಿಲ್ಲ. ಆದಾಗ್ಯೂ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು (ಎನ್‌ಎಸ್‌ಎಪಿ) ಜಾರಿಗೊಳಿಸಿದ್ದು, ಇದರಡಿ 3,384 ಮಂಗಳಮುಖಿಯರಿಗೆ ಮಾಸಿಕ ಪಿಂಚಣಿಯನ್ನು ಒದಗಿಸಲಾಗುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಶ್ರೀ ಎ. ನಾರಾಯಣಸ್ವಾಮಿ ಅವರು ಲೋಕಸಭೆಗೆ ಲಿಖಿತ ಉತ್ತರದ ಮೂಲಕ ಈ ಮಾಹಿತಿ ನೀಡಿದ್ದಾರೆ.
***
(Release ID: 1739449)
Visitor Counter : 388