ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ 19 ಲಸಿಕೆ: ಮಿಥ್ಯ ಮತ್ತು ವಾಸ್ತವಗಳು


ಸಾರ್ವತ್ರಿಕ ಲಸಿಕೀಕರಣ ಕಾರ್ಯಕ್ರಮ (ಯುಐಪಿ)ದಡಿ ಲಸಿಕೆ ನೀಡಿಕೆ ಸೇರಿದಂತೆ ಕೋವಿಡೇತರ ಅಗತ್ಯ ಆರೋಗ್ಯ ಆರೈಕೆ ನಿರ್ವಹಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ಬದ್ಧ

2021ರ ಪ್ರಥಮ ತ್ರೈಮಾಸಿಕದಲ್ಲಿ ಡಿಟಿಪಿ3 ವ್ಯಾಪ್ತಿಯಲ್ಲಿ ಶೇ.99ರ ಸಾಧನೆ ಮಾಡಿದ ಭಾರತ, ಇದು ಈದಿನಾಂಕದವರೆಗಿನ ಅತಿ ಹೆಚ್ಚಿನ ದಾಖಲೆ

Posted On: 16 JUL 2021 6:04PM by PIB Bengaluru

ಕೋವಿಡ್ 19ರಿಂದ ಉಂಟಾಗಿರುವ ತೊಡಕಿನಿಂದಾಗಿ ಲಕ್ಷಾಂತರ ಭಾರತೀಯ ಮಕ್ಕಳು ನಿಯಮಿತ ಲಸಿಕೆಗಳನ್ನು ಹಾಕಿಸಿಕೊಳ್ಳಲಾಗದಿರುವುದರಿಂದ ಭವಿಷ್ಯದಲ್ಲಿ ಏಕಾಏಕಿ ಕಾಯಿಲೆ ಉಲ್ಬಣ ಮತ್ತು ಸಾವಿನ ಅಪಾಯ ಹೆಚ್ಚಾಗಬಹುದೆಂದು ಕೆಲವು ಮಾಧ್ಯಮ ವರದಿಗಳು ಆರೋಪಿಸಿವೆ. ಈ ವರದಿಗಳು ವಾಸ್ತವದ ಆಧಾರದ ಮೇಲೆ ಇರುವುದಿಲ್ಲ ಮತ್ತು ನೈಜ ಚಿತ್ರಣವನ್ನು ಬಿಂಬಿಸುವುದಿಲ್ಲ. 

ಸಾಂಕ್ರಾಮಿಕ ಆರಂಭವಾದ ದಿನದಿಂದಲೂ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಾರ್ವತ್ರಿಕ ಲಸಿಕೀಕರಣ ಕಾರ್ಯಕ್ರಮ (ಯುಐಪಿ)ದಡಿಯಲ್ಲಿ ಲಸಿಕೆ ಹಾಕುವುದೂ ಸೇರಿದಂತೆ ಅಗತ್ಯ ಆರೋಗ್ಯ ಸೇವೆ ನಿರ್ವಹಣೆಯತ್ತ ಗಮನ ಹರಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ. ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಅಭಿವೃದ್ಧಿ ಪಾಲುದಾರರೊಂದಿಗೆ ಕೋವಿಡ್ -19ರ ನೇತ್ಯಾತ್ಮಕ ಪರಿಣಾಮಗಳನ್ನು ತಗ್ಗಿಸಲು ಶ್ರಮಿಸುತ್ತಿದೆ ಮತ್ತು ಯುಐಪಿ ಅಡಿಯಲ್ಲಿ ಮಕ್ಕಳು ಜೀವರಕ್ಷಕ ಲಸಿಕೆಗಳನ್ನು ಪಡೆಯುವುದನ್ನು ಖಾತ್ರಿ ಪಡಿಸಿಕೊಳ್ಳಲು ತುರ್ತು ಕ್ರಮ ಕೈಗೊಂಡಿದೆ.

ಮಿಗಿಲಾಗಿ, ಭಾರತ ಸರ್ಕಾರದ ಬದ್ಧತೆಯ ಫಲವಾಗಿ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಪಡೆಯಿಂದಾಗಿ ದೇಶವು ಡಿಟಿಪಿ3 ವ್ಯಾಪ್ತಿಯಲ್ಲಿ ಶೇ.99ರ ಸಾಧನೆಯನ್ನು 2021ರ ಪ್ರಥಮ ತ್ರೈಮಾಸಿಕ (ಜನವರಿಯಿಂದ ಮಾರ್ಚ್) ಮಾಡಿದೆ ಎಂದು ಎಚ್.ಎಂ.ಐ.ಎಸ್. ಮಾಪನ ಮಾಡಿದೆ. ಇದು ಈ ದಿನಾಂಕದವರೆಗಿನ ಮಾಪನ ಮಾಡಿರುವುದರಲ್ಲಿ ಅತಿ ಹೆಚ್ಚು ವ್ಯಾಪ್ತಿಯಾಗಿದೆ.

ಲಸಿಕೆಯ ಸೇವೆಗಳಲ್ಲಿ ಕೋವಿಡ್ 19 ನೇತ್ಯಾತ್ಮಕ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ, ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು ಅವು ಕೆಳಕಂಡಂತಿವೆ:

• ಪೋಲಿಯೊ ಪೂರಕ ರೋಗನಿರೋಧಕ ಚಟುವಟಿಕೆಗಳು (ಎಸ್‌.ಐ.ಎ) ಸೇರಿದಂತೆ ಕೋವಿಡ್ -19 ಸಾಂಕ್ರಾಮಿಕ ಕಾಲದಲ್ಲಿ ಲಸಿಕೆ ಸೇವೆಗಳನ್ನು ಸುರಕ್ಷಿತವಾಗಿ ಮುಂದುವರಿಸಲು ರಾಷ್ಟ್ರೀಯ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲಾಗಿದೆ.

• ಕೋವಿಡ್ -19 ಮಾರ್ಗಸೂಚಿಯ ಪ್ರಕಾರ ಮತ್ತು ಸಿಎಬಿಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಲಸಿಕೆ ನೀಡಿಕೆಯ ಖಾತ್ರಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹೊಸ ಮಾರ್ಗಸೂಚಿಯ ತರಬೇತಿ ನೀಡಲಾಗಿದೆ.

• ಪ್ರಾಮಾಣಿಕ ಸರಿಪಡಿಸುವ ಕ್ರಮವಾಗಿ, ಲಸಿಕೆ ಡೋಸ್ ತಪ್ಪಿರುವುದಕ್ಕೆ ಕಾರಣ ಹುಡುಕುವ ನಿಟ್ಟಿನಲ್ಲಿ, ನಿಗಾ ಮತ್ತು ಮೇಲ್ವಿಚಾರಣೆಯನ್ನು ರಾಜ್ಯ ಮತ್ತು ಜಿಲ್ಲಾ ಕಾರ್ಯ ಪಡೆಗಳಿಂದ ಮಾಡಲಾಗುತ್ತಿದೆ.

• ಅತಿ ಹೆಚ್ಚಿನ ಅಪಾಯ ಇರುವ ಗುಂಪುಗಳು/ಪ್ರದೇಶಗಳು (ಉದಾ. ಕೋವಿಡ್-19 ಕಾಣಿಸಿಕೊಂಡ ಸಮಯದಲ್ಲಿ ಲಸಿಕೆ ತಪ್ಪಿಸಿಕೊಂಡ ಮಕ್ಕಳು, ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳ (ವಿಪಿಡಿ) ಕುರಿತಂತೆ ಅತಿ ಹೆಚ್ಚು ಅಪಾಯವಿರುವ ಜಿಲ್ಲೆ, ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳು ಇತ್ಯಾದಿಗಳನ್ನು ಗುರುತಿಸಲಾಗಿದೆ.

• 250 ಅತಿ ಹೆಚ್ಚು ಅಪಾಯ ಇರುವ ಜಿಲ್ಲೆಗಳಲ್ಲಿ ಇಂದ್ರಧನುಷ್ ಅಭಿಯಾನವನ್ನು ವ್ಯಾಪಕಗೊಳಿಸಲಾಗಿದ್ದು (ವ್ಯಾಪಕ ಲಸಿಕಾ ಅಭಿಯಾನ) ಇದರಲ್ಲಿ 9.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮತ್ತು 2.24 ಲಕ್ಷ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ.

• ಪೋಲಿಯೊ ವಿರುದ್ಧ ಹೆಚ್ಚಿನ ಜನಸಂಖ್ಯೆಗೆ ಪ್ರತಿರಕ್ಷಣೆಯನ್ನು ನೀಡಲು ಒಂದು ರಾಷ್ಟ್ರೀಯ ಲಸಿಕೀಕರಣ ಸುತ್ತಿನ ಮತ್ತು ಎರಡು ಉಪ-ರಾಷ್ಟ್ರೀಯ ಸುತ್ತುಗಳನ್ನು ನಡೆಸಲಾಗಿದೆ.

• ಕೋವಿಡ್-19ಗಾಗಿ ಅಪಾಯ ಸಂವಹನ ಮತ್ತು ಸಮುದಾಯ ಕಾರ್ಯಕ್ರಮದ ಕಾರ್ಯತಂತ್ರವನ್ನು (ಆರ್.ಸಿ.ಸಿ.ಇ) ಅಭಿವೃದ್ಧಿಪಡಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ. ನಗರ ಪ್ರದೇಶ ಮತ್ತು ಆರ್‌.ಸಿ.ಸಿ.ಇ. ಸಾಮರ್ಥ್ಯ ವರ್ಧನೆ ವಿಧಾನಗಳನ್ನು ಒಳಗೊಂಡಿರುವ ಲಸಿಕೀಕರಣ ಸೇರಿದಂತೆ ಅಗತ್ಯ ಸೇವೆಗಳನ್ನು ಕೈಗೊಳ್ಳಲು ಸಮಗ್ರ ಸಂವಹನ ಸಂದೇಶ ರವಾನೆಯನ್ನು ಮುಂಚೂಣಿಯ ಕಾರ್ಯಕರ್ತರು ಮತ್ತು ಅನುಷ್ಠಾನ ವಿಭಾಗದ ಕಾರ್ಯಕರ್ತರಿಗಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ.

***


(Release ID: 1736328) Visitor Counter : 210


Read this release in: English , Marathi , Hindi , Telugu