ಪ್ರಧಾನ ಮಂತ್ರಿಯವರ ಕಛೇರಿ

ದೇಶಾದ್ಯಂತ ಆಮ್ಲಜನಕ ಪೂರೈಕೆ ಹೆಚ್ಚಿಸಲು ಪ್ರಧಾನ ಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಪರಾಮರ್ಶೆ ಸಭೆ


ದೇಶಾದ್ಯಂತ ಸ್ಥಾಪನೆಯಾಗಲಿವೆ 1,500ಕ್ಕಿಂತ ಹೆಚ್ಚಿನ ಆಮ್ಲಜನಕ ಉತ್ಪಾದನೆ ಘಟಕಗಳು

ಪಿಎಂ ಕೇರ್ ನಿಧಿಯಿಂದ ತಲೆಎತ್ತಲಿರುವ ಈ ಘಟಕಗಳಿಂದ 4 ಲಕ್ಷಕ್ಕಿಂತ ಹೆಚ್ಚಿನ ಆಕ್ಸಿಜನೇಟೆಡ್ ಬೆಡ್ ಗಳಿಗೆ ಆಮ್ಲಜನಕ ಪೂರೈಕೆ

ಆಮ್ಲಜನಕ ಉತ್ಪಾದನೆ ಘಟಕಗಳು ಸಕಾಲದಲ್ಲಿ ಉತ್ಪಾದನೆ ಆರಂಭಿಸುವುದನ್ನು ಖಾತ್ರಿಪಡಿಸುವಂತೆ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಸೂಚನೆ

ಆಮ್ಲಜನಕ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಆಸ್ಪತ್ರೆ ಸಿಬ್ಬಂದಿಗೆ ಸಾಕಷ್ಟು ತರಬೇತಿ ನೀಡುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

ಆಮ್ಲಜನಕ ಉತ್ಪಾದನೆ ಘಟಕಗಳ ಕಾರ್ಯಕ್ಷಮತೆ ಮತ್ತು ಕಾರ್ಯ ನಿರ್ವಹಣೆಗೆ ಐಒಟಿಯಂತಹ ಸುಧಾರಿತ ತಂತ್ರಜ್ಞಾನ ಅಳವಡಿಸಿ: ನರೇಂದ್ರ ಮೋದಿ ಸಲಹೆ

Posted On: 09 JUL 2021 1:07PM by PIB Bengaluru

ದೇಶಾದ್ಯಂತ ಆಮ್ಲಜನಕ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆ ಮತ್ತು ಘಟಕಗಳ ಸ್ಥಾಪನೆಯ ಪ್ರಗತಿ ಕುರಿತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿಂದು ಉನ್ನತ  ಮಟ್ಟದ ಪರಾಮರ್ಶೆ ಸಭೆ ನಡೆಯಿತು.

ದೇಶಾದ್ಯಂತ ಸ್ಥಾಪನೆಯಾಗುತ್ತಿರುವ ಪಿಎಸ್ಎ (Pressure Swing Adsorption)  ಆಕ್ಸಿಜನ್ ಉತ್ಪಾದನಾ ಘಟಕಗಳ ನಿರ್ಮಾಣ ಪ್ರಗತಿ ಕುರಿತು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ವಿವರ ನೀಡಿದರು. ದೇಶಾದ್ಯಂತ 1,500ಕ್ಕಿಂತ ಹೆಚ್ಚಿನ ಪಿಎಸ್ಎ ಆಕ್ಸಿಜನ್ ಘಟಕಗಳು ತಲೆಎತ್ತಲಿದ್ದು, ಘಟಕಗಳ ನಿರ್ಮಾಣಕ್ಕೆ ಪಿಎಂ ಕೇರ್ ನಿಧಿ, ಸಾರ್ವಜನಿಕ ವಲಯದ ಘಟಕಗಳು ಮತ್ತು ವಿವಿಧ ಸಚಿವಾಲಯಗಳು ಅನುದಾನ ಒದಗಿಸುತ್ತಿವೆ.

ಪಿಎಂ ಕೇರ್ ನಿಧಿಯಿಂದ ಅನುದಾನ ಪಡಿದಿರುವ ಪಿಎಸ್ಎ ಆಕ್ಸಿಜನ್ ಘಟಕಗಳು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರಗಳಲ್ಲಿ ತಲೆಎತ್ತಲಿವೆ. ಪಿಎಂ ಕೇರ್ ನಿಧಿಯ ಅನುದಾನ ಪಡೆದ ಎಲ್ಲಾ ಘಟಕಗಳು ಕಾರ್ಯಾಚರಣೆ ಆರಂಭಿಸಿದರೆ 4 ಲಕ್ಷಕ್ಕಿಂತ ಹೆಚ್ಚಿನ ಆಕ್ಸಿಜನೇಟೆಡ್ ಬೆಡ್ ಗಳಿಗೆ ಆಮ್ಲಜನಕ ಪೂರೈಸಲಿವೆ ಎಂದು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ನೀಡಿದರು.

ಎಲ್ಲಾ ಘಟಕಗಳು ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸುವುದನ್ನು ಖಾತ್ರಿಪಡಿಸಬೇಕು. ಇವು ಆಯಾ ರಾಜ್ಯ ಸರ್ಕಾರಗಳ ಜತೆ ನಿಕಟ ಸಂಪರ್ಕ ಸಾಧಿಸಿ, ಕಾರ್ಯಾಚರಣೆ ನಡೆಸುವುದನ್ನು ಖಚಿತಪಡಿಸಬೇಕು ಎಂದು ಪ್ರಧಾನಿ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಆಕ್ಸಿಜನ್ ಘಟಕಗಳ ತ್ವರಿತ ನಿರ್ಮಾಣ ಪ್ರಗತಿ ಕುರಿತು ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳ ಜತೆ ನಿಕಟ ಮತ್ತು ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಿದರು.

.ಆಕ್ಸಿಜನ್ ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ಮತ್ತು ಕಾರ್ಯಾಚರಣೆ ನಿರ್ವಹಣೆ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಸಾಕಷ್ಟು ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ತರಬೇತಾದ ಸಿಬ್ಬಂದಿ ಲಭ್ಯವಾಗುವುದನ್ನು ಖಾತ್ರಿಪಡಿಸುವಂತೆ ಪ್ರಧಾನಿ ಅವರು, ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ತ್ಕ್ಷೇತ್ರದ ತಜ್ಞರು ಈಗಾಗಲೇ ತರಬೇತಿ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ದೇಶಾದ್ಯಂತ ಸುಮಾರು 8 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಪ್ರಧಾನಿ ಅವರಿಗೆ ತಿಳಿಸಿದರು.

ದೇಶಾದ್ಯಂತ ಆಕ್ಸಿಜನ್ ಘಟಕಗಳ ಕಾರ್ಯದಕ್ಷತೆ ಮತ್ತು ಕಾರ್ಯ ನಿರ್ವಹಣೆ ಮೇಲೆ ನಿಗಾ ಇಡಲು  ಐಒಟಿ (Internet of Things  - IoT) ತಂತ್ರಜ್ಞಾನ ಅಳವಡಿಸುವಂತೆ ಪ್ರಧಾನ ಮಂತ್ರಿ ಅವರು ಸಲಹೆ ನೀಡಿದರು. ಆಕ್ಸಿಜನ್ ಘಟಕಗಳ ಕಾರ್ಯ ನಿರ್ವಹಣೆಗಾಗಿ ಐಒಟಿ ತಂತ್ರಜ್ಞಾನ ಅಳವಡಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನಿ ಅವರ ಗಮನಕ್ಕೆ ತಂದರು.

ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1734175) Visitor Counter : 274