ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

2024ರ ವೇಳೆಗೆ ಶೇ.50ರಷ್ಟು ರಸ್ತೆ ಅಪಘಾತ ಸಾವುಗಳನ್ನು ತಗ್ಗಿಸಲು ಸರ್ಕಾರದಿಂದ ಗುರಿ ನಿಗದಿ

Posted On: 17 JUN 2021 9:08PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಸರ್ಕಾರ 2024ರವೇಳೆಗೆ ಶೇ.50ರಷ್ಟು ರಸ್ತೆ ಅಪಘಾತ ಸಾವುಗಳನ್ನು ತಗ್ಗಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಎಫ್ ಐಸಿಸಿಐ ಆಯೋಜಿಸಿದ್ದ ರಸ್ತೆ ಅಪಘಾತ ಸಾವುಗಳನ್ನು ತಗ್ಗಿಸುವಲ್ಲಿ ಕಾರ್ಪೋರೇಟ್ ಗಳ ಪಾತ್ರಕುರಿತಂತೆ ನಡೆದ ವರ್ಚುವಲ್ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ನಿತಿನ್ ಗಡ್ಕರಿ ಸುರಕ್ಷಿತ ವ್ಯವಸ್ಥೆಯ ಮನೋಭಾವ ಆಧರಿಸಿದ ರಸ್ತೆ ಸುರಕ್ಷತಾ ಒಕ್ಕೂಟ ಸಫರ್ಅನ್ನು ಪ್ರಕಟಿಸಿದ ಎಫ್ ಐಸಿಸಿಐ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕಾರ್ಪೋರೇಟ್ ಜಗತ್ತಿನ ಕುರಿತು ಶ್ವೇತ ಪತ್ರವನ್ನು ಬಿಡುಗಡೆ ಮಾಡಿದರು.

ಅಲ್ಲದೆ, ಸಚಿವರು ಪ್ರತಿಯೊಂದು ರಾಜ್ಯ, ಜಿಲ್ಲೆ ಮತ್ತು ನಗರಗಳಲ್ಲಿ ಬ್ಲಾಕ್ ಸ್ಪಾಟ್’ (ಅಪಘಾತ ಸ್ಥಳ) ಗಳನ್ನು ಗುರುತಿಸುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ವಿಶ್ವ ಬ್ಯಾಂಕ್ ಮತ್ತು ಎಡಿಬಿ ಈಗಾಗಲೇ ಯೋಜನೆಗೆ ಅನುಮೋದನೆ ನೀಡಿದ್ದು, ಅದರಡಿ ಕೇಂದ್ರ ಸರ್ಕಾರ ಬ್ಲಾಕ್ ಸ್ಪಾಟ್ (ಅಪಘಾತ ಸ್ಥಳ)ಗಳನ್ನು ದೂರ ಮಾಡಲು ರಾಜ್ಯಗಳು, ಎನ್ ಎಚ್ ಎಐ ಮತ್ತು ಇತರೆ ಭಾಗಿದಾರರಿಗೆ 14,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಿದೆ ಎಂದರು.

ರಸ್ತೆ ಸುರಕ್ಷತೆಗೆ ನಾಲ್ಕು ಗಳ ಬಲವರ್ಧನೆ ಮತ್ತು ಮರು ವಿನ್ಯಾಸದ ಮೂಲಕ ರಸ್ತೆ ಅಪಘಾತಗಳನ್ನು ತಗ್ಗಿಸಲು ತಮ್ಮ ಸಚಿವಾಲಯ ಕಠಿಣ ಶ್ರಮವಹಿಸುತ್ತಿದೆ ಎಂದು ಸಚಿವರು ಹೇಳಿದರು. ನಾಲ್ಕು ಗಳೆಂದರೆಎಂಜಿನಿಯರಿಂಗ್ (ರಸ್ತೆ ಮತ್ತು ಆಟೋಮೊಬೈಲ್ ), ಎಕಾನಮಿ (ಆರ್ಥಿಕತೆ), ಎನ್ಪೋರ್ಸ್ ಮೆಂಟ್ (ಜಾರಿ) ಮತ್ತು ಎಜುಕೇಷನ್ (ಶಿಕ್ಷಣ). ಕಾರ್ಪೋರೇಟ್ ಸಂಸ್ಥೆಗಳು ಸ್ವತಂತ್ರ ಸರ್ವೇಗಳನ್ನು ನಡೆಸಿ ರಸ್ತೆ ಅಪಘಾತಗಳ ಹಿಂದಿನ ಕಾರಣಗಳನ್ನು ಗುರುತಿಸಬೇಕು ಮತ್ತು  ವರದಿಗಳನ್ನು ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ಅವರು ಸಲಹೆ ಮಾಡಿದರು.

ಶೇ.50ರಷ್ಟು ರಸ್ತೆ ಅಪಘಾತಗಳಿಗೆ ರಸ್ತೆ ಎಂಜಿನಿಯರಿಂಗ್ ಸಮಸ್ಯೆಗಳೇ ಕಾರಣ ಎಂದು ಹೇಳಿದ ಸಚಿವರು, ಹಾಗಾಗಿ ಬ್ಲಾಕ್ ಸ್ಪಾಟ್ ಗಳ ಸುಧಾರಣೆಗೆ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದರು. ಇದರಿಂದಾಗಿ ಭಾರತದಲ್ಲಿ ಶೂನ್ಯ ರಸ್ತೆ ಅಪಘಾತದೂರದೃಷ್ಟಿಯ ಸಾಕಾರ ನಿಟ್ಟಿನಲ್ಲಿ ಹೆಚ್ಚಿನ ಸಹಕಾರಿಯಾಗಲಿದೆ.

ರಸ್ತೆ ಅಪಘಾತಗಳ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಲು ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಸಂಘಟಗಳು ಮತ್ತು ವಿಶ್ವವಿದ್ಯಾಲಯಗಳ ಸಹಕಾರ ಅಗತ್ಯವಿದೆ ಎಂದು ಶ್ರೀ ಗಡ್ಕರಿ ಹೇಳಿದರು. ಇನ್ನು 15 ದಿನಗಳಲ್ಲಿ ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಸ್ವತಂತ್ರ ರಸ್ತೆ ಸುರಕ್ಷತಾ ಮಂಡಳಿ ಅಸ್ಥಿತ್ವಕ್ಕೆ ಬರಲಿದೆ ಎಂದು ಸಚಿವರು ಪ್ರಕಟಿಸಿದರು.

***



(Release ID: 1728075) Visitor Counter : 180