ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಸಂಸ್ಕರಿಸಿದ ಮತ್ತು ಸಾವಯವ ಪ್ರಮಾಣೀಕೃತ ಹಲಸಿನ ಹಣ್ಣು ಬೆಂಗಳೂರಿನಿಂದ ಜರ್ಮನಿಗೆ ರಫ್ತು

Posted On: 25 MAY 2021 5:44PM by PIB Bengaluru

ಸಾವಯವ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ಸಲುವಾಗಿ, 10.20 ಮೆ.ಟನ್ ಸಾವಯವ ಪ್ರಮಾಣೀಕೃತ ಅಂಟು ರಹಿತ ಹಲಸಿನ ಹಣ್ಣು ಪೌಡರ್ ಮತ್ತು ಹಲಸಿನ ಹಣ್ಣಿನ ಕ್ಯೂಬ್ಗಳನ್ನು ಇಂದು ಬೆಂಗಳೂರಿನಿಂದ ಸಮುದ್ರ ಮಾರ್ಗದ ಮೂಲಕ ಜರ್ಮನಿಗೆ ರಫ್ತು ಮಾಡಲಾಯಿತು. ಎಪಿಇಡಿಎ ನೆರವಿನ ಬೆಂಗಳೂರಿನ ಫಲದಾ ಆಗ್ರೋ ರಿಸರ್ಚ್ ಫೌಂಡೇಶನ್ಸ್ (ಪಿ ಆರ್ ಎಫ್) ಒಡೆತನದ ಪ್ಯಾಕ್ ಹೌಸ್ನಲ್ಲಿ ಇದನ್ನು ಸಂಸ್ಕರಿಸಲಾಗಿದೆ.

ಎಪಿಇಡಿಎ ನೋಂದಾಯಿತ ಫಲದಾ ಆಗ್ರೋ ರಿಸರ್ಚ್ ಫೌಂಡೇಶನ್ಸ್ (ಪಿ ಆರ್ ಎಫ್) ಸುಮಾರು 12,000 ಎಕರೆ ಜಮೀನು ಹೊಂದಿರುವ 1500 ರೈತರ ಗುಂಪನ್ನು ಪ್ರತಿನಿಧಿಸುತ್ತದೆ. ರೈತರು ಔಷಧೀಯ ಮತ್ತು ಸುಗಂಧ ಗಿಡಮೂಲಿಕೆಗಳು, ತೆಂಗಿನಕಾಯಿ, ಹಲಸಿನ ಹಣ್ಣು, ಮಾವು, ಮಸಾಲೆಗಳು ಮತ್ತು ಕಾಫಿಯನ್ನು ಬೆಳೆಯುತ್ತಾರೆ.

ಪಿ ಆರ್ ಎಫ್ ತನ್ನ ಸಣ್ಣ ರೈತ ಗುಂಪುಗಳಿಗೆ ಸಾವಯವ ಉತ್ಪಾದನೆಯ ರಾಷ್ಟ್ರೀಯ ಕಾರ್ಯಕ್ರಮ (ಎನ್ಪಿಒಪಿ), ಯುರೋಪಿಯನ್ ಒಕ್ಕೂಟ, ರಾಷ್ಟ್ರೀಯ ಸಾವಯವ ಕಾರ್ಯಕ್ರಮ (ಅಮೆರಿಕಾ) ಮಾನದಂಡಗಳ ಪ್ರಕಾರ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಪಿ ಆರ್ ಎಫ್ನ ಸಂಸ್ಕರಣಾ ಘಟಕಕ್ಕೆ ಎಪಿಇಡಿಎ ಸಾವಯವ ಪ್ರಮಾಣೀಕರಣದ ಮಾನ್ಯತೆ ನೀಡಿದೆ.

ಇತ್ತೀಚೆಗೆ ತ್ರಿಪುರಾದಿಂದ ಲಂಡನ್ಗೆ 1.2 ಮೆಟ್ರಿಕ್ ಟನ್ (ಎಂಟಿ) ತಾಜಾ ಹಲಸಿನ ಹಣ್ಣು ರಫ್ತು ಮಾಡಲಾಯಿತು. ಹಲಸಿನ ಹಣ್ಣನ್ನು ತ್ರಿಪುರ ಮೂಲದ ಕೃಷಿ ಸಂಯೋಗ ಆಗ್ರೊ ಉತ್ಪಾದನಾ ಕಂಪನಿ ಒದಗಿಸಿತು. ಸಾಲ್ಟ್ ರೇಂಜ್ ಸಪ್ಲೈ ಚೈನ್ ಸೊಲ್ಯೂಷನ್ ಲಿಮಿಟೆಡ್ ಎಪಿಇಡಿಎ ನೆರವಿನ ಪ್ಯಾಕ್-ಹೌಸ್ ಸೌಲಭ್ಯದಲ್ಲಿ ಇದನ್ನು ಪ್ಯಾಕ್ ಮಾಡಲಾಯಿತು ಮತ್ತು ಕೀಗಾ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ನಿಂದ ರಫ್ತು ಮಾಡಲಾಯಿತು. ಯುರೋಪಿಯನ್ ಯೂನಿಯನ್ ಗೆ ರಫ್ತು ಮಾಡಲು ಮೇ 2021 ರಲ್ಲಿ ಅಂಗೀಕಾರ ದೊರೆತ ಮೊದಲ ಪ್ಯಾಕ್ ಹೌಸ್ ಇದಾಗಿದೆ.

ಎನ್ಪಿಒಪಿ ಅಡಿಯಲ್ಲಿ, ಪರಿಸರ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೆ ಸಾವಯವ ಕೃಷಿ ವಿಧಾನದಲ್ಲಿ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಕೃಷಿಯ ವಿಧಾನವು ಮಣ್ಣಿನ ಫಲವತ್ತತೆ ಮತ್ತು ಪುನರುತ್ಪಾದಕ ಸಾಮರ್ಥ್ಯವನ್ನು ರಕ್ಷಿಸುತ್ತದೆ. ಉತ್ತಮ ಸಸ್ಯ ಪೋಷಣೆ ಮತ್ತು ಮಣ್ಣಿನ ನಿರ್ವಹಣೆಯನ್ನು ಕಾಪಾಡುತ್ತದೆ, ರೋಗಗಳಿಗೆ ಪ್ರತಿರೋಧವನ್ನು ಹೊಂದಿರುವ ಪೌಷ್ಟಿಕ ಆಹಾರವನ್ನು ಉತ್ಪಾದಿಸುತ್ತದೆ. ಎಪಿಇಡಿಎ ಪ್ರಸ್ತುತ ಎನ್ಪಿಒಪಿಯನ್ನು ಜಾರಿಗೊಳಿಸುತ್ತಿದೆ, ಇದು ಪ್ರಮಾಣೀಕರಣ ಸಂಸ್ಥೆಗಳ ಮಾನ್ಯತೆ, ಸಾವಯವ ಉತ್ಪಾದನೆಯ ಮಾನದಂಡಗಳು, ಸಾವಯವ ಕೃಷಿಯ ಪ್ರೋತ್ಸಾಹ ಮತ್ತು ಮಾರುಕಟ್ಟೆ ಇತ್ಯಾದಿಗಳನ್ನು ಒಳಗೊಂಡಿದೆ.

2020-21ರಲ್ಲಿ, ಭಾರತವು ಸುಮಾರು 3.49 ದಶಲಕ್ಷ ಟನ್ ಪ್ರಮಾಣೀಕೃತ ಸಾವಯವ ಉತ್ಪನ್ನಗಳನ್ನು ಉತ್ಪಾದಿಸಿತು, ಇದರಲ್ಲಿ ಎಣ್ಣೆ  ಬೀಜಗಳು, ಕಬ್ಬು, ಸಿರಿಧಾನ್ಯಗಳು, ರಾಗಿ, ಹತ್ತಿ, ದ್ವಿದಳ ಧಾನ್ಯಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಚಹಾ, ಕಾಫಿ, ಹಣ್ಣುಗಳು, ಮಸಾಲೆಗಳು, ಒಣ ಹಣ್ಣುಗಳು , ತರಕಾರಿಗಳು, ಸಂಸ್ಕರಿಸಿದ ಆಹಾರ ಇತ್ಯಾದಿ ಸೇರಿವೆ.

ಸಾವಯವ ಪ್ರಮಾಣೀಕರಣದ ಅಡಿಯಲ್ಲಿ ಮಧ್ಯಪ್ರದೇಶವು ಅತಿದೊಡ್ಡ ಭೂ ಪ್ರದೇಶವನ್ನು ಹೊಂದಿದೆ, ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಒಡಿಶಾ, ಸಿಕ್ಕಿಂ ಮತ್ತು ಉತ್ತರ ಪ್ರದೇಶ ರಾಜ್ಯಗಳಿವೆ. 2020-21ರಲ್ಲಿ ಸಾವಯವ ಉತ್ಪನ್ನಗಳ ಒಟ್ಟು ರಫ್ತು 8.88 ಲಕ್ಷ ಮೆಟ್ರಿಕ್ ಟನ್ ಮತ್ತು ರಫ್ತಿನ ಮೌಲ್ಯ ಸುಮಾರು 7,078 ಕೋಟಿ ರೂ. (1040 ಮಿಲಿಯನ್ ಡಾಲರ್) ಆಗಿತ್ತು.

***



(Release ID: 1721696) Visitor Counter : 243